ಕವಿತೆ
ಬೀಜಕ್ಕೊಂದು ಮಾತು
ರಜಿಯಾ ಬಳಬಟ್ಟಿ
ಎಲೆ ಬೀಜವೇ
ನೀ ಹೆಣ್ಣೋ ಗಂಡೋ
ಹೀಗೇಕೆ ಕೇಳುವಳೀ ಅಮ್ಮ
ಎಂದು ಆಶ್ಚರ್ಯ ವೇನು ಕಂದಾ ,
ಹೌದು ಕೇಳುವ ಸ್ಧಿತಿ ಈಗ.
ಒಂದು ಕಾಲವಿತ್ತು
ಸುತ್ತೆಲ್ಲ ಗುಲಾಬಿ ತೋಟ
ನಡುವೆ ಕೆಂಗುಲಾಬಿ
ನನ್ನ ಮಗಳೆಂದು
ಖುಷಿ ಪಡುವದು.
ಈಗಿಲ್ಲವಮ್ಮ.
ಗುಲಾಬಿಯ ತೋಟದಲ್ಲೆಲ್ಲ
ಹೊಂಚು ಹಾಕಿದ ಕಾಮದ ಕಂಗಳು
ಕ್ಷಣ ಕ್ಷಣವೂ ಅಭದ್ರತೆ
ಕೀಚಕ – ದುಶ್ಯಾಸನರ
ವಂಶಾವಳಿಯಲ್ಲಿ
ಅದೆಂತು ರಕ್ಷಿಸಲಿ ಮಗಳೆ,
ಭೀತಿಯ ಬಾಹುಗಳಲಿ
ನನ್ನನ್ನೇ ನಾ ಉಳಿಸಿಕೊಂಡು
ಗೂಡು ಸೇರುವದೇ
ದುಸ್ಸಾಹಸವಾಗಿರುವಾಗ,
ನೀ ಮೊಳಕೆಯೊಡೆಯಬೇಡ
ತಿಳಿ, ಈ ಅಸಹಾಯಕತೆಯ.
ಅಪ್ಪಾ ಮಗಾ ರಾಜಕುಮಾರಾ
ವಂಶಕ್ಕೆ ಹೆಸರು ತಂದು
ದೃಷ್ಟಿ ತುಂಬ ಸಹಾಯ ಭಾವದಿ
ಆದರ್ಶದಿ ಬದುಕುವದಿದ್ದರೆ ಬಾ.
ಇಲ್ಲದಿರೆ ಚಿಗುರೊಡೆಯಬೇಡ.
ಬಂಜೆ ಎಂದು ಸಹಿಸಬಹುದು.
ಆ ಕಾಮುಕನ,ಪಾಪಿಯ ತಾಯಿ
ಇವಳೆಂದು ಜನ ದಿಟ್ಟಿಸಿದಾಗ,
ಆ ಕೆಂಗಣ್ಣಿನಲ್ಲಿಯೇ ನಾ
ಕರಕಾಗುವೆ ಕಂದಾ
ತಿಳಿ ನೀ ಜವಾಬ್ದಾರಿಯ.
***************************************
ರಜಿಯಾ ಬಳಬಟ್ಟಿ