ಲೇಖನ
ಯಾಕೆ ನೆಗೆಟಿವಿಟಿ?
ಮಾಲಾ.ಮ. ಅಕ್ಕಿಶೆಟ್ಟಿ.
“ಆಕೆ ಯಾವಾಗಲೂ ಹಾಗೆಯೇ ಬಿಡಿ. ಏನ್ ಹೇಳಿದ್ರು ನೆಗೆಟಿವ್ ಆಗಿ ಯೋಚಿಸಿ, ಅದರಲ್ಲೇ ಮುಳುಗಿರುತ್ತಾಳೆ. ಇದ್ದ ಗಳಿಗೆಯನ್ನು ಆನಂದಿಸಲು ಬರಲ್ಲ. ಬರೀ ನೆಗೆಟಿವ್. ಜೀವನವನ್ನು ಆನಂದಿಸುವುದೂ ಒಂದು ಕಲೆ. ಅದು ಆಕೆಗೆ ಗೊತ್ತಿಲ್ಲ. ಎಲ್ಲರದೂ ಒಂದೊಂದು ಸಮಸ್ಯೆ ಇದ್ದೇ ಇರುತ್ತೆ. ಯಾರಿಗೂ ಸಮಸ್ಯೆ ತಪ್ಪಿದ್ದಿಲ್ಲ. ಜೀವನ ಇದ್ದ ಹಾಗೆ ನಡೆದುಕೊಂಡು ಹೋಗಬೇಕು. ಅದು ಬಿಟ್ಟು ಸತತ ಇಪ್ಪತ್ತನಾಲ್ಕು ಗಂಟೆಯೂ ನಕಾರಾತ್ಮಕವಾಗಿ ಯೋಚಿಸಿದರೆ ಹೇಗೆ? ಅದೇನೊ ಅಂತಾರಲ್ಲ ಪ್ರತಿ ಪರಿಹಾರಕ್ಕೂ ಇಂಥವರು ಸಮಸ್ಯೆಯನ್ನು ಹುಟ್ಟಿಸಿಬಿಡತಾರೆ ಅನ್ನೊ ಗುಂಪಿನಲ್ಲಿ ಇವಳೂ ಒಬ್ಬಳು” ಎಂದು ನಾವು, ನೀವು ಹೀಗಿರುವವರನ್ನು ಭಾರಿ ಬಾರಿ ಟೀಕಿಸಿ ಮಾತನಾಡಿರಬಹುದು.ಕೊರೊನಾ ರೋಗದ ಬೆನ್ನಲ್ಲೇ ಎಲ್ಲಾ ವಯಸ್ಸಿನವರನ್ನೂ ಈ ನಕಾರಾತ್ಮಕತೆ ಕಾಡುತ್ತಿದೆ.ಆದರೆ ಎಲ್ಲರೂ ಮಾಡುವ ತಪ್ಪು ಇಲ್ಲೇ ಇದೆ. ಹೌದು ಸಕಾರಾತ್ಮಕವಾಗಿ ಇರಬೇಕು, ಯೋಚಿಸಬೇಕು… ಎಲ್ಲಾ ಸರಿ. ಆದರೆ ಯಾಕೆ ವ್ಯಕ್ತಿ ಇಷ್ಟೊಂದು ನಕಾರಾತ್ಮಕವಾಗಿ ಯೋಚಿಸುತ್ತಾನೆ ಅನ್ನುವುದನ್ನು ನಾವು, ಅಂದರೆ ಅಂತ ಅಂಥ ವ್ಯಕ್ತಿಗಳಿಗೆ ಉಪದೇಶ ಮಾಡುವಾಗ ಯೋಚಿಸಬೇಕಾಗುತ್ತದೆ.ಪೊಜಿಟಿವ್ ಥಿಂಕ್ ಮಾಡಿ, ಮಾಡಿ, ಎಂದು ಒತ್ತಾಯಿಸಿದಾಗ ಅತೀವ ದುಃಖದಲ್ಲಿದ್ದ ವ್ಯಕ್ತಿ ಹೇಗೆ ತಾನೇ ಪೊಜಿಟಿವ್ ಆಗಿ ಯೋಚಿಸಬಲ್ಲ! ಆದ್ದರಿಂದ ನೆಗೆಟಿವ್ ವ್ಯಕ್ತಿಗಳ ಹಿಂದಿರುವ ಕಾರಣಗಳನ್ನು ವಿಶ್ಲೇಷಿಸಬೇಕಾಗುತ್ತದೆ. ತಾನು ಅತಿಯಾಗಿ ಪ್ರೀತಿಸಿದ ವ್ಯಕ್ತಿ ಮರಣ ಹೊಂದಿದಾಗ, ಆತ್ಮೀಯರಿಂದ ಬೇರ್ಪಟ್ಟ ನೋವು ಅಪಾರ.ಈ ಆತ್ಮೀಯರು.. ತಂದೆ ,ತಾಯಿ, ಅಕ್ಕ, ಅಣ್ಣ, ತಂಗಿ, ತಮ್ಮ, ತಂಗಿ, ಗೆಳೆಯ,ಗೆಳತಿ ಅಥವಾ ತನ್ನದು ಅಂದುಕೊಂಡ ಯಾವುದೇ ಜೀವ, ಇತ್ಯಾದಿಗಳ ಯಾದಿಯನ್ನು ಹೊಂದಿರುತ್ತದೆ. ಜೀವನವೇ ಅವರು ಎಂದಾಗ ಅವರಿಲ್ಲದ ಜೀವನಕ್ಕೆ ಅರ್ಥವೇ ಇಲ್ಲ ಎನ್ನಿಸುವುದು ತೀರ ಸ್ವಾಭಾವಿಕ. ಅನುಭವಗಳು ಜೀವನಕ್ಕೆ ಪಾಠ ಕಲಿಸುತ್ತಾ ಎನ್ನುವುದೇನೋ ಸರಿ. ಆದರೆ ಆದ ಕೆಟ್ಟ ಅನುಭವಗಳು ಮನುಷ್ಯನನ್ನು ನೆಗೆಟಿವ್ ಕೂಪಕ್ಕೆ ತಳ್ಳುವುದೂ ಅಷ್ಟೇ ಸತ್ಯವಾಗಿದೆ. ಕೆಟ್ಟ ಅನುಭವಗಳು ಒಬ್ಬನನ್ನು ಮೇಲೆತ್ತುವಂತೆ ಮಾಡಿದರೆ, ಇನ್ನುಳಿದವರಿಗೆ ಅಂಥ ಘಟನೆಗಳಿಂದ ಹೊರಬಾರದಂತೆ ಮಾಡಿರುತ್ತವೆ. ಪೆಟ್ಟು ತಿಂದ ವ್ಯಕ್ತಿ ಪೆಟ್ಟನ್ನು ಚಾಲೆಂಜ್ ಆಗಿ ತೆಗೆದುಕೊಂಡು ನಾಗಾಲೋಟದಲ್ಲಿ ಮುಂದುವರಿದು ಪ್ರಗತಿಯನ್ನು ಸಾಧಿಸಬಹುದು… ಆದರೆ ಅದು ಎಲ್ಲರ ಜೀವನದಲ್ಲೂ ಸಾಧ್ಯವಿಲ್ಲ.
ಎಷ್ಟೇ ಪೊಜಿಟಿವ್ ಆಗಿ ಇರಲು ಬಯಸಿದರೂ ಬರುವ ಸಂದರ್ಭಗಳು ಮನುಷ್ಯನನ್ನು ಕುಗ್ಗಿಸಿ ನೆಲಕಚ್ಚುತ್ತವೆ. ಅಂಥ ಸಂದರ್ಭ ಎಂದರೆ ಭಯ ಪೀಡಿತರಾಗುವ ಅನುಭವಗಳು ಅವರಲ್ಲಿ ಬೇರೂರಿ ಬಿಡುತ್ತವೆ.ಇನ್ನೊಂದೆಡೆ, ಮರಳಿ ಪ್ರಯತ್ನ ಮಾಡು ಎನ್ನುವ ಸಿದ್ಧಾಂತವನ್ನು ಕಟ್ಟಾ ನಿರ್ವಹಿಸಿದಾಗಲೂ ಮಾಡಿದ ಪ್ರಯತ್ನಗಳಿಗೆ ಬೆಲೆಯೇ ಇರಲ್ಲ; ಎಲ್ಲ ವಿಫಲವಾಗುತ್ತವೆ ಅಥವಾ ಪ್ರಯತ್ನಕ್ಕೆ ಫಲವೇ ಇರೋದಿಲ್ಲ. ಇನ್ನಷ್ಟು ಸಂದರ್ಭಗಳಲ್ಲಿ ಒಳ್ಳೆಯದೇ ಆಗುತ್ತೆ ಎಂದು ಕಾದು ಕಾದು ಕುಳಿತಿರುತ್ತಾರೆ. ಆದರೆ ಕಾಯುವಿಕೆಗೆ ಸಫಲತೆ ಸಿಕ್ಕಿರಲ್ಲ. ಒಳ್ಳೆಯ ಗಳಿಗೆ ನಿರೀಕ್ಷೆಯಲ್ಲಿ ದಿನ, ತಿಂಗಳು ವರ್ಷಗಳನ್ನು ಸವೆಸಿದರೂ ಸಾಧನೆ ಆಗಿರಲ್ಲ.ಕಾದು ಬರೀ ಸುಣ್ಣವಾಗುತ್ತಾರೆ ಅಷ್ಟೇ. ಕೆಲವು ಸಲ ಮನೆಯವರಿಂದ ಅಥವಾ ಸ್ನೇಹಿತರಿಂದ ನಿರೀಕ್ಷಿಸಿದ ಮಟ್ಟದ ಸಹಾಯ, ಸಹಕಾರಗಳು, ವ್ಯಕ್ತಿಗೆ ಸಿಕ್ಕಿರಲ್ಲ. ಒಂದು ಕಿರುಬೆರಳಷ್ಟೇ ಸಹಾಯ, ಸಹಕಾರ, ಉತ್ತೇಜನದ ಲಾಲಸೆಯನ್ನು ಇಟ್ಟುಕೊಂಡ ವ್ಯಕ್ತಿ ಒಮ್ಮೆಲೇ ಮೇಲಿಂದ ಕೆಳಗೆ ಬಿದ್ದಿರುತ್ತಾನೆ. ಇದಕ್ಕೆ ವಿರುದ್ಧವಾದ ಸಂದರ್ಭಗಳಲ್ಲಿ ವ್ಯಕ್ತಿಯ ಸಹಾಯ, ಪ್ರೋತ್ಸಾಹ, ಕೆಲಸಕ್ಕೆ ಬಂದಿರಲ್ಲ. ಕಾರಣ ಅವರಲ್ಲಿ ಆತ್ಮವಿಶ್ವಾಸದ ಕೊರತೆ ಚಿಮ್ಮುತ್ತಿರುತ್ತದೆ. ತಮ್ಮ ಮೇಲೆ ತಮಗೆ ವಿಶ್ವಾಸವಿಲ್ಲ. ಈ ಕೆಲಸದಲ್ಲಿ ನಾನು ಸೋತರೆ ಹೇಗೆ? ಜನ ಏನೆಂದಾರು? ಎಂಬುದರಲ್ಲಿ ಕಾಲಹರಣವಾಗುತ್ತದೆ. ಇಂಥದ್ದೇ ಸಂದರ್ಭಗಳು ವ್ಯಕ್ತಿಯನ್ನು ಜಿಗುಪ್ಸೆ ಹೊಂದುವಂತೆ ಮಾಡುತ್ತವೆ. ಈ ಜಿಗುಪ್ಸೆ ಜೀವನದುದ್ದಕ್ಕೂ ಮುಂದುವರಿದು ಜನ ಎಲ್ಲ ಆತ ಬರೀ ನೆಗೆಟಿವ್ ಬಿಡು ಎಂಬ ನೇಮಪ್ಲೇಟ್ ತಯಾರಿಸಿ, ಹಾಕುವುದರಲ್ಲಿ ಉತ್ಸುಕರಾಗಿರುತ್ತಾರೆ.
ಆದರೆ ನಿಜಸಂಗತಿ ಇರೋದೇ ಇಲ್ಲಿ. ಒಬ್ಬ ವ್ಯಕ್ತಿ ಯಾವ ಕಾರಣಗಳಿಂದ ನೆಗೆಟಿವ್ ಆಗಿ ಯೋಚಿಸುತ್ತಾನೆ ಎಂಬುದನ್ನು ಅರಿಯಬೇಕಾಗಿದೆ. ಮೂಲ ಸಮಸ್ಯೆಗಳಿಗೆ ಪರಿಹಾರಗಳು ಸೃಷ್ಟಿಯಾದಾಗ ಸ್ವಾಭಾವಿಕವಾಗಿ ಪೊಜಿಟಿವ್ ಎಡೆಗೆ ಮನುಷ್ಯ ವಾಲಬಹುದು. ಇಲ್ಲಾದರೆ ಎಂದೂ ಆಗಲ್ಲ. ಪಾಸಿಟಿವ್ ಆಗಿ ಆಗಿ ಎಂದರೆ ನಾಟಕೀಯ ನಗುವನ್ನು ಹೊದ್ದು ಹೃದಯದಲ್ಲಿ ನೋವು ತುಂಬಿಕೊಂಡು ಸಾಗಬೇಕಾಗುತ್ತದೆ. ಇಂಥವರಿಗೆ ನಿಜವಾಗಿಯೂ ಸಹಾಯ ಮಾಡುವ ಮನಸ್ಸಿದ್ದರೆ ಅವರೊಂದಿಗೆ ಒಂದು ಆಪ್ತ ಸಮಾಲೋಚನೆಯ ಅಗತ್ಯವಿದೆ.ಸಮಸ್ಯೆಯ ಆಳ ಅರಿತು, ಪರಿಹಾರ ಒದಗಿಸಿ.ಇಲ್ಲಾ ಅವರಿಗೆ ಸಾಂತ್ವನ ನೀಡುವ ವ್ಯಕ್ತಿಗಳ ಹತ್ತಿರವಾದರೂ ಕರೆದುಕೊಂಡು ಹೋಗಿ. ಅವರಂಥದ್ದೇ ಸಮಸ್ಯೆಯಿಂದ ಬಳಲಿ, ಅವುಗಳನ್ನು ಮೆಟ್ಟಿನಿಂತ ವ್ಯಕ್ತಿಗಳ ಪರಿಚಯ ಮಾಡಿರಿ.ಅತೀಯಾದ negativity ಯಿಂದ ದೇಹಾರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡಿ.ನೀವು ಕೊಡುವ ಸಲಹೆಗಳು ಅಥವಾ ಕ್ರಮಗಳು ನೈಜವಾದಲ್ಲಿ, ಖಂಡಿತ ವ್ಯಕ್ತಿ ತನ್ನ ನೆಗೆಟಿವಿಟಿಯಿಂದ ಹೊರಬರಬಹುದು.ಹೀಗೆ ಮಾಡಿದಾಗ ಒಳ್ಳೆಯ ಮಾರ್ಗದರ್ಶನ ಹಾಗೂ ಸಹಾಯ ಮಾಡಿದ ಆತ್ಮ ಸಂತೋಷ ನಿಮಗೂ ಇರುತ್ತದೆ.
**************************************