ಕವಿತೆ
ಅಬಲೆಯ ಹಂಬಲ
ಅಶೋಕ ಬಾಬು ಟೇಕಲ್
ರಾಮನ ನೆಲವಾದರೂ ಅಷ್ಟೇ
ರಹೀಮನ ನೆಲವಾದರೂ ಅಷ್ಟೇ
ಕಾಮುಕನೆಂಬ ಕೆಂಡದ
ಕಣ್ಣುಗಳ ಅಮಲಿಗರಿಗೆ
ಅಬಲೆಯರ ಹಸಿ ಬಿಸಿ ರಕ್ತ
ಹೀರ ಬೇಕಷ್ಟೇ…
ಮನಿಶಾ, ಆಸೀಫಾ ಆದರೇನು
ನಿರ್ಭಯಾ ರಕ್ಷಿತ, ದಿಶಾ
ಆದರೂ ಸರಿಯೇ ಇವರಿಗೆ
ನಡು ರಸ್ತೆಯಲಿ
ಹಾಡ ಹಗಲೇ ಹದ್ದು ಮೀರಿದ
ಗೂಳಿಗಳಂತೆ ಬಂದೆರಗಿ
ಹಾಲುಗಲ್ಲ ಹಸುಳೆಯ
ಎದೆಯ ನಾಯಿಯಂತೆ
ನೆಕ್ಕಿ ಬೆತ್ತಲಾಗಿಸಿ
ಕಾಮ ತೃಷೆ ಮುಗಿಸಿ
ಕಣ್ಣಿಲ್ಲದ ಕಾನೂನಿನ
ಸಾಕ್ಷಿಯ ಕಟಕಟೆ ಒಳಗೂ
ಕಥೆ ಹನಿಸಿ ಕಾಂಚಾಣದ
ಬಿಸಿ ಮುಟ್ಟಿಸಿ ಕ್ಷಮಾ
ದಾನದ ಅರ್ಜಿಯಲಿ
ನಿರ್ದೋಷಿ ಪಟ್ಟ..!
ಇನ್ನೆಷ್ಟು ದಿನ ಧರ್ಮ
ಮತ ಪಂಥಗಳ ಕಡೆ
ಬೊಟ್ಟು ಮಾಡಿ ಬೀಗುವಿರಿ
ರಾಮ ರಹೀಮ ಜೀಸಸ್
ಏನಾದರೂ ಹೇಳಿಯಾರೆ
ಅತ್ಯಾಚಾರ ಎಸಗಿರೆಂದು !!
ಭ್ರಷ್ಟ ದುರುಳ ಗೋಮುಖ
ವ್ಯಾಘ್ರರ ಕೈಯಲ್ಲಿನ
ಅಧಿಕಾರದ ಅಂಕುಶ
ಕಿತ್ತೊಗೆಯ ಬನ್ನಿರಿ
ಕಾನೂನಿನ ಕುಣಿಕೆಗೆ
ಕಾಮುಕರ ಕೊರಳೊಡ್ಡಿರಿ
ನಾನಂದು ನಿರುಮ್ಮಳಳಾಗಿ
ನಡು ಬೀದಿಯಲಿ
ನೆತ್ತರಿಲ್ಲದ ಓಕುಳಿಯಲಿ
ಗೆಜ್ಜೆಯ ಸದ್ದಿನೊಂದಿಗೆ
ನಲಿದಾಡುತಾ ನಡೆದಾಡುವೆ
ನಿಮ್ಮಗಳ ಕಾಯಕಕೆ
ಜೈಯ್ ಘೋಷವ
ಮೊಳಗಿಸುವೆ…!!
***********************************************************************
ಅತ್ಯಾಚಾರ ಅನಾಚಾರಗಳಿಗೆ ಇಂಥದೇ ಕ್ಷೇತ್ರ, ಜಾತಿ, ಧರ್ಮ, ಪಕ್ಷ ಎನ್ನುವುದಿಲ್ಲ. ನಿಜ. ಹೊಲಸು ಮನಸಿನ ಕ್ರೂರಿಗಳು- ಇದು ರಾಮನ ನಾಡು : ಇದು ರಹೀಮನ ಅಥವಾ ಏಸುವಿನ ನಾಡು ಎಂದು ಮೊದಲೇ ಯೋಚಿಸಿ ಅತ್ಯಾಚಾರವೆಸಗಲು ಮುಂದಾಗುತ್ತಾರಾ? ಉ.ಪ್ರ ದ ಗ್ಯಾಂಗ್ ರೇಪ್ ಗೆ ಸಂಬಂಧಿಸಿದಂತೆ ಹಲವರ ಬರಹದಲ್ಲಿ ರಾಮನ ನಾಡು; ರಾಮನ ನಾಡು ಎಂಬುದೇ ದೊಡ್ಡ ಕಥೆಯಾಗಿ ಹೋಗಿದೆ. ಅಲ್ಲಿ ರಾಮ ಜನಿಸಿದ್ದೇ ತಪ್ಪೇನೋ ಎಂಬಂತೆ!! ಕ್ರೂರಿಗಳ ವರ್ತನೆಗೆ ಯಾವ ದೇವರು ಏನು ಮಾಡಬಲ್ಲ? ತಮ್ಮ ತಮ್ಮ ಮನೆಯ ಗಂಡು ಮಕ್ಕಳಿಗೆ ಸುಸಂಸ್ಕೃತ ಸಭ್ಯ ಸಂಸ್ಕಾರ, ನಡವಳಿಕೆ ಕಲಿಸಿ, ಬೆಳೆಸುವುದು ಪ್ರತಿ ತಂದೆ ತಾಯಿಯ ಕರ್ತವ್ಯ. ಹೆಣ್ಣು ರಾಮನ ನಾಡಿನಲ್ಲಿ ಓಡಾಡಲಿ, ಏಸು, ರಹೀಮನ ನಾಡಿನಲ್ಲೇ ತಿರುಗಲಿ. ಆಕೆಯನ್ನು ಗೌರವಪೂರ್ವಕವಾಗಿ ನೋಡಬೇಕಾದುದು ಪ್ರತಿ ಗಂಡಿನ ಕರ್ತವ್ಯ.
ನಿಮ್ಮ ಈ ಕವನ ಹಿಡಿಸಿತು. ಮಾರ್ಮಿಕವಾಗಿದೆ. ಸಕಾಲಿಕವಾಗಿದೆ. ನಿಷ್ಪಕ್ಷಪಾತವಾಗಿದೆ ಆಶಯ. ಕವನದ ವಸ್ತು, ಸಾಗಿದ ದಿಕ್ಕು ಚಂದ..
ತಮ್ಮ ಈ ವಿಮರ್ಶೆ ನನ್ನ ಸಮಾಜಮುಖಿ , ಶೋಷಿತರ , ಸ್ರ್ರೀ ಪರ ಧ್ವನಿ ಎತ್ತಲು ಇನ್ನಷ್ಟು ಶಕ್ತಿ ನೀಡಿತು. ಈ ವಿಮರ್ಶೆಯಿಂದ ನನ್ನ ಕವನಕ್ಕೆ ಗೆಲುವಾಗಿದೆ. ತಮಗೆ ಆತ್ಮೀಯ ಧನ್ಯವಾದಗಳು ಮೇಡಂ..
Nice