ವಿಮರ್ಶಾ ಲೋಕದ ದಿಗ್ಗಜ, ಜಿ.ಎಸ್. ಆಮೂರ..!

ಲೇಖನ

ವಿಮರ್ಶಾ ಲೋಕದ ದಿಗ್ಗಜ

ಜಿ.ಎಸ್. ಆಮೂರ..!

ಜಿ.ಎಸ್. ಅಮೂರರು ನಮನಗಲಿದ್ದಾರೆ ಈಗ. ಆದರೆ ಅವರ ಸಾಹಿತ್ಯ ಕೃತಿಗಳು ಮತ್ತು ಮಾಡಿದ ಪಿ.ಎಚ್.ಡಿಯ ಸಾಹಿತ್ಯ ಸೌರಭ ನಮ್ಮ ಜೊತೆಯಲ್ಲಿ ಇದೆ. ಆಗಲಿ, ಜಿ.ಎಸ್.ಅಮೂರರಿಗೆ ಅನಂತಾನಂತ ನಮನಗಳು…

೦೮.೦೫.೧೯೨೫ ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‌ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ೪-೫ ದಶಕಗಳಿಂದಲೂ ಕನ್ನಡ-ಇಂಗ್ಲಿಷ್‌ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ೧೯೨೫ ರ ಮೇ ೮ ರಂದು.

ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಮನೆಗೆ ತರುತ್ತಿದ್ದ ಸದ್ಭೋಧ ಚಂದ್ರಿಕಾ, ಕರ್ಮವೀರ ಮುಂತಾದ ಪತ್ರಿಕೆಗಳ ಸಂಗ್ರಹವೇ ಇದ್ದು ಇದನ್ನೂ ಓದುತ್ತಾ ಬಂದಂತೆಲ್ಲಾ ಆಮೂರರಿಗೆ ಸಾಹಿತ್ಯದಲ್ಲಿ ಆಸ್ಥೆ ಬೆಳೆಯ ತೊಡಗಿತು. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ ಆಯಿತು.

ಶಿಕ್ಷಕರಾಗಿ ದೊರೆತ ಹುಚ್ಚೂರಾವ್‌ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್‌.ಜಿ. ಗುತ್ತಲ ಮಾಸ್ತರು ಇಂಗ್ಲಿಷ್‌ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ಕರ್ನಾಟಕ ಕಾಲೇಜಿನಿಂದ ಪಡೆದ ಬಿ.ಎ.ಆನರ್ಸ್ ಪದವಿ (೧೯೪೭) ಮತ್ತು ಮುಂಬಯಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಎಂ.ಎ. ಪದವಿ (೧೯೪೯) ಪ್ರತಿ ವರ್ಷವೂ ರ‍್ಯಾಂಕ್‌ ಪಡೆದ ವಿದ್ಯಾರ್ಥಿ ಜಿ.ಎಸ್‌ ಅಮೂರರು.

೧೯೬೧ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ `THE CONCEPT OF COMEDY’ ಮಹಾ ಪ್ರಬಂಧ ಮಂಡಿಸಿ ಪಡೆದ ಪಿ.ಹೆಚ್‌.ಡಿ. ಪದವಿ ಪಡೆದರು. ಗದುಗಿನ ತೋಂಟದಾರ್ಯ ಕಾಲೇಜಿನಲ್ಲಿ ಇಂಗ್ಲಿಷ್‌ ಅಧ್ಯಾಪಕರಾಗಿ (೧೮೬೪-೬೮) ಸೇರಿ ನಂತರ ೧೯೬೮ರಲ್ಲಿ ಔರಂಗಾಬಾದ್‌ನ ಮರಾಠವಾಡ ವಿದ್ಯಾಪೀಠದಲ್ಲಿ ಇಂಗ್ಲಿಷ್‌ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಮುಖ್ಯಸ್ಥರಾಗಿಯೂ ನಿವೃತ್ತರಾಗುವವರೆವಿಗೂ (೧೯೮೫) ಕಾರ್ಯ ನಿರ್ವಹಿಸಿದರು..!

ಮುರಾಡವಾಡ ವಿದ್ಯಾಪೀಠದಲ್ಲಿದ್ದಾಗಲೇ ೧೯೭೨-೭೩ರಲ್ಲಿ ಫುಲ್‌ಬ್ರೈಟ್‌ ಫೆಲಿಶಿಪ್‌ ಪಡೆದು ಅಮೆರಿಕದ ಕೆಲಫೋರ್ನಿಯಾ (ಸಾಂಟಾಬಾರ್ಬರ) ಹಾಗೂ ಯೇಲ್ಸ್‌ ವಿಶ್ವವಿದ್ಯಾಲಯಗಳಲ್ಲಿ ಮತ್ತು ೧೯೭೩ರಲ್ಲಿ ಬ್ರಿಟಿಷ್‌ ಕೌನ್ಸಿಲ್‌ ಸಹಾಯದಿಂದ ಇಂಗ್ಲೆಂಡ್‌ನಲ್ಲಿ – ಹೀಗೆ ಎರಡುಬಾರಿ ಸಂಶೋಧನೆಯಲ್ಲಿ ನಿರತರಾಗಿದ್ದರು. ಇವರು ಪ್ರಾಧ್ಯಾಪಕರಾಗಿದ್ದಾಗ ೧೪ ವಿದ್ಯಾರ್ಥಿಗಳು ಪಿ.ಹೆಚ್‌.ಡಿ. ಹಾಗೂ ೩ ಎಂ.ಫಿಲ್‌. ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಿಂದ ಪದವಿ ಪಡೆದಿದ್ದಾರೆ. ಇವರ ಕನ್ನಡದ ಮೊದಲ ಕೃತಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟವಾದುದು ಮಿಲ್ಟನ್‌ ಕವಿಯ ಮೇಲೆ ಬರೆದ ‘ಮಹಾಕವಿ ಮಿಲ್ಟನ್‌’ (೧೯೬೬). ನಂತರ ಮೊದಲ ವಿಮರ್ಶಾ ಪ್ರಬಂದಗಳ ಕೃತಿ ‘ಕೃತಿ ಪರೀಕ್ಷೆ’ಯಲ್ಲಿ ಕನ್ನಡದ ಪ್ರಮುಖ ಕಾದಂಬರಿಗಳಾದ ರಾವಬಹದ್ದೂರರ ‘ಗ್ರಾಮಾಯಣ’. ಅನಂತಮೂರ್ತಿಯವರ ಸಂಸ್ಕಾರ, ಶೌರಿ; ರಾಮಾನುಜನ್‌ರವರ ‘ಹಳದಿಮೀನು’, ಶಿವರಾಮ ಕಾರಂತರರ ಬೆಟ್ಟದ ಜೀವ ಮತ್ತು ಮರಳಿಮಣ್ಣಿಗೆ ಮುಂತಾದವುಗಳ ವಿಶ್ಲೇಶಣಾತ್ಮಾಕ ಲೇಖನಗಳಿಂದ ಕೂಡಿದೆ.

ಇದಲ್ಲದೆ ಹಾಸನ ರಾಜಾರಾಯರು, ಶ್ರೀರಂಗರ ಕೃತಿಗಳ ಬಗ್ಗೆ, ಕೈಲಾಸಂರವರ ಇಂಗ್ಲಿಷ್‌ ನಾಟಕಗಳ ಬಗ್ಗೆಯೂ ಇದರಲ್ಲಿ ಲೇಖನಗಳಿವೆ. ಸಮಕಾಲೀನ ಕಥೆ-ಕಾದಂಬರಿ, ಕನ್ನಡ ಕಾದಂಬರಿಯ ಬೆಳವಣಿಗೆ, ಅ.ನ. ಕೃಷ್ಣರಾಯ, ಅರ್ಥಲೋಕ ಮುಂತಾದ ಕೃತಿಗಳಲ್ಲದೇ ಬೇಂದ್ರೆಯವರ ಗಂಗಾವತರಣವನ್ನೂ ಮಧ್ಯಬಿಂದುವಾಗಿಟ್ಟುಕೊಂಡು ಕಾವ್ಯ ಹಾಗೂ ಕಾವ್ಯೇತರ ಬರಹಗಳನ್ನೂ ವಿವೇಜಿಸುವ ‘ಭುವನದ ಭಾಗ್ಯ’ ಕೃತಿ, ವ್ಯವಸಾಯ, ಕನ್ನಡ ಕಥನ ಸಾಹಿತ್ಯ: ಕಾದಂಬರಿ, ವಿರಾಟಪುರುಷ, ಸಾತ್ವಿಕ ಪಥ, ಕಾದಂಬರಿ ಸ್ವರೂಪ, ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಮುಂತಾದ ೩೯ ಕೃತಿಗಳಲ್ಲದೇ ಚಿತ್ತಾಲರ ಆಯ್ದ ಕಥೆಗಳು, ಕೆ ಸದಾಶಿವ ಅವರ ಕಥಾ ಸಾಹಿತ್ಯ, ಅವಳ ಕಥೆಗಳು, ಬೇಂದ್ರೆ ಕಾವ್ಯ, ಕನ್ನಡ ಕಥಾಲೋಕ, ಶ್ರೀರಂಗ ಸಾರಸ್ವತ, ಹುಯಿಲಗೋಳ ನಾರಾಯಣರಾಯರ ಸಮಗ್ರ ಸಾಹಿತ್ಯ ಮುಂತಾದವುಗಳನ್ನು ಸಂಪಾದಿಸಿದ್ದಾರೆ.

ಇಂಗ್ಲಿಷ್‌ನಲ್ಲಿ ರಚಿಸಿರುವ ಕೃತಿಗಳು– ದಿ ಕಾನ್ಸೆಪ್ಟ್‌ ಆಫ್‌ ಕಾಮಿಡಿ, ಮನೋಹರ ಮಳಗಾಂವ್‌ಕರ್, ಆದ್ಯರಂಗಾಚಾಯ್, ದಿ ಕ್ರಿಟಿಕಲ್‌ ಸ್ಪೆಕ್ಟ್ರಮ್‌, ಇಮೇಜಸ್‌ ಅಂಡ್‌ ಇಂಪ್ರೆಷನ್ಸ್‌, ಎ.ಎನ್‌. ಕೃಷ್ಣರಾವ್‌, ಕ್ರಿಯೇಷನ್ಸ್‌ ಅಂಡ್‌ ಟ್ರಾನ್ಸ್‌ ಕ್ರಿಯೇಷನ್ಸ್‌, ದತ್ತಾತ್ರೇಯ ರಾಮಚಂದ್ರಬೇಂದ್ರೆ, ಪರ್ಸೆಷನ್ಸ್‌ ಆಫ್‌ ಮಾಡರ್ನ್ ಲಿಟರೇಚರ್, ಮೊದಲಾದ ೧೪ ಕೃತಿಗಳ ಜೊತೆಗೇ ಕ್ರಿಟಿಕಲ್‌ ಎಸ್ಸೆಸ್‌ ಹ್ಯಾನ್‌ ಇಂಡಿಯನ್‌ ರೈಟಿಂಗ್‌ ಇನ್‌ ಇಂಗ್ಲಿಷ್‌, ಕಾಲೊನಿಯಲ್‌ ಕೌನ್ಷಿಯಸ್ ನೆಸ್‌ ಇನ್‌ ಕಾಮನ್‌ವೆಲ್ತ್ ಲಿಟರೇಚರ್ ಮುಂತಾದ ಆರು ಕೃತಿಗಳನ್ನೂ ಸಂಪಾದಿಸಿದ್ದಾರೆ.

ಹೀಗೆ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರ ಸಂಕರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿರುವುದಲ್ಲದೇ ಬೆಂಗಳೂರು, ಕರ್ನಾಟಕ ವಿಶ್ವವಿದ್ಯಾಲಯ, ಬೆನಾರಸ್‌ ಹಿಂದೂ ವಿಶ್ವವಿದ್ಯಾಲಯ, ಮೈಸೂರಿನ ಧ್ವನ್ಯಾಲೋಕ ಮುಂತಾದೆಡೆಗಳಲ್ಲಿ ಉಪನ್ಯಾಸಗಳನ್ನೂ ನೀಡಿದ್ದಾರೆ..!

ಗದಗ ಜಿಲ್ಲಾ ಸಾಹಿತ್ಯ ಸಮ್ಮೇಳನ, ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿಯೂ ಗೌರವಗಳಿಸಿದ್ದಾರೆ. ಇವರ ‘ಅರ್ಥಲೋಕ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಮತ್ತು ಸ.ಸ.ಮಾಳವಾಡ ಪ್ರಶಸ್ತಿ; ಭುವನದ ಭಾಗ್ಯ ಕೃತಿಗೆ ಭಾರತೀಯ ಭಾಷಾ ಪರಿಷತ್‌-ಕೊಲ್ಕತ್ತಾ, ಪ್ರೊ.ವಿ.ಎಂ. ಇನಾಂದಾರ್ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ; ಕನ್ನಡ ಕಥನ ಸಾಹಿತ್ಯ: ಕಾದಂಬರಿ ಕೃತಿಗೆ ಬಿ.ಎಚ್‌. ಶ್ರೀಧರ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಇವರಿಗೆ ಸಂದಿವೆ.

ಇವಲ್ಲದೆ ರಾಜ್ಯೋತ್ಸವ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ವಿಮರ್ಶಕ ರತ್ನ ಪ್ರಶಸ್ತಿ, ಅಖಿಲ ಭಾರತ ಮಾಧ್ವ ಮಹಾ ಮಂಡಲದಿಂದ ಕನ್ನಡ ಭಾಷಾ ಭೂಷಣ ಪ್ರಶಸ್ತಿ, ದ.ರಾ. ಬೇಂದ್ರೆ ಪ್ರಶಸ್ತಿ, ಸಂದೇಶ್‌ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ, ಪಂಪ್ರಶಸ್ತಿ, ಮಾಸ್ತಿ ಪ್ರಶಸ್ತಿಗಳು ದೊರೆತಿವೆ. ಒಂದು ಕೃತಿಯನ್ನೂ ವಿಮರ್ಶಿಸುವಾಗ ಕೃತಿಯಲ್ಲಿ ಏನಿದೆ? ಏಕಿದೆ? ಎಂದು ವಿಮರ್ಶಿಸಬೇಕೇ ವಿನಃ ಏನಿಲ್ಲ, ಏನಿರಬೇಕಿತ್ತು ಎಂದು ಹುಡುಕುವುದು ವಿಮರ್ಶಕನ  ಕೆಲಸವಾಗಬಾರದು ಮತ್ತು ವಿಮರ್ಶಕನಾದವನು ಅಂತಃ ಚಕ್ಷುಗಳನ್ನೂ ತೆರೆದು ಪೂರ್ವಾಗ್ರಹ ಪೀಡಿತನಾಗದೇ ಕೃತಿಯೊಡನೆ ಅನುಸಂಧಾನ ಮಾಡಬೇಕೆನ್ನುವುದೇ ಇವರ ಖಚಿತ ಅಭಿಪ್ರಾಯವಾಗಿದ್ದು, ವಿಮರ್ಶೆಯ ಕ್ಷೇತ್ರದಲ್ಲಿ ಹೊಸಹೊಸ ಅನ್ವೇಷಣೆಗಳನ್ನು ಮಾಡಿ ಹೊಸಹೊಸ ವಿಸ್ತೃತ ವಿಮರ್ಶಾ ವಿಧಾನಗಳನ್ನೂ ರೂಪಿಸತೊಡಗಿದ್ದರು..!

ಇಂತಹ ಜಿ.ಎಸ್. ಅಮೂರ ಈಗ ನಮ್ಮನ್ನು ಅಗಲಿದ್ದಾರೆ. ಅವರಿಗಿದೋ

‘ನಮನ’ಗಳು

*************************************

ಕೆ.ಶಿವು.ಲಕ್ಕಣ್ಣವರ

***************************************************

One thought on “ವಿಮರ್ಶಾ ಲೋಕದ ದಿಗ್ಗಜ, ಜಿ.ಎಸ್. ಆಮೂರ..!

  1. ಸಮಗ್ರ ಮತ್ತು ಆಪ್ತ ಬರವಣಿಗೆ ಸರ್.ಅಭಿನಂದನೆಗಳು.

Leave a Reply

Back To Top