ಅಂಕಣಬರಹ

                            ಬದುಕಿನ ಏರಿಳಿತಗಳನು ಒಪ್ಪಿಕೊಳ್ಳುವುದು

ಹೇಗೆ?

ಬದುಕಿನ ರೀತಿಯೇ ಅಂಥದ್ದು. ಪ್ರತಿ ಕ್ಷಣವೂ ಹೊಸತನದಿಂದಲೇ ಕೂಡಿಕೊಂಡಿರುತ್ತದೆ.ಅದೆಷ್ಟೇ ಬೇಸರಗೊಂಡಿದ್ದರೂ ಮತ್ತೆ ಕುತೂಹಲದಿಂದ ಸೆಳೆದು ನಿಲ್ಲಿಸಬಲ್ಲ ಮಾಯಾಶಕ್ತಿ ಅದಕ್ಕಿದೆ. ರಾಶಿ ರಾಶಿ ಹೊಸ ಅನುಭವಗಳು ಮುಂದೆ ಕಾದಿವೆ ಎಂದು ಗೊತ್ತಿದ್ದರೂ ಕೆಲವೊಂದು ಸಲ ಕಷ್ಟದ ಸಾಲುಗಳು ಇನ್ನಿಲ್ಲದಂತೆ ಆವರಿಸಿ ಹಿಂಡಿ ಹಿಪ್ಪಿ ಮಾಡಿಬಿಡುತ್ತವೆ. ಪ್ರತಿ ಕಷ್ಟವೂ ವಿಶಿಷ್ಟತೆಯಿಂದ ಕಾಡುತ್ತದೆ. ಅನುಭವದ ಪಾಠವನ್ನು ಕಲಿಸಿಯೇ ಮುನ್ನಡೆಯುತ್ತದೆ. ಒಮ್ಮೊಮ್ಮೆ ದಡದಡನೆ ಓಡುವವರನ್ನು ಗಕ್ಕನೇ ನಿಲ್ಲಿಸಿ ಬಿಡುತ್ತದೆ. ಅಟ್ಟದ ಮೇಲೇರಿ ಕುಳಿತವರನ್ನು ಕೆಳಕ್ಕೆ ತಳ್ಳಿ ಬಿಡುತ್ತದೆ. ಇನ್ನು ಕೆಲವು ಸಲ ಕೌತುಕತೆಯಿಂದ ಅದರ ಮುಂದೆ ನಿಂತು ಬಿಟ್ಟ ಕಣ್ಣು ಬಿಟ್ಟಂತೆ ಪರವಶತೆಯಿಂದ ನೋಡುವಂತೆ ಮಾಡುತ್ತದೆ. ಲಗು ಬಗೆಯಿಂದ ಮೆಟ್ಟಿಲೇರಿ ಹೋಗುವವರನ್ನು ಮುಂದಕ್ಕೆ ಅಡಿ ಇಡದಂತೆ ಮಾಡುತ್ತದೆ. ಒಟ್ಟಾರೆ ಸರಳ ಮಾತಿನಲ್ಲಿ ಹೇಳುವುದಾದರೆ ಜೀವನ ಆಡಿಸಿ ನೋಡು ಬೀಳಿಸಿ ನೋಡು ಆಟ ಇದ್ದಂತೆ ಅನಿಸುವದಂತೂ ಖಚಿತ. ಜೀವನ ಎರಡು ಮುಖವುಳ್ಳ ನಾಣ್ಯವಿದ್ದಂತೆ. ಒಮ್ಮೆಲೇ ಎರಡು ಮುಖಗಳೂ ಬೀಳುವ ಸಾಧ್ಯತೆ ಇಲ್ಲ. ಆದರೆ ಎರಡೂ ಮುಖಗಳು ಬೀಳುವ ಸಾಧ್ಯತೆ ಸಮವಾಗಿರುತ್ತದೆ. ಇಲ್ಲವೇ ಕಡಿಮೆ ವ್ಯತ್ಯಾಸವಿರುತ್ತದೆ. ಒಮ್ಮೆ ಏರು ಮತ್ತೊಮ್ಮೆ ಇಳುವು.ಒಮ್ಮೆ ಗೆಲುವು ಒಮ್ಮೆ ಸೋಲು. ಒಮ್ಮೆ ಕಷ್ಟ ಮತ್ತೊಮ್ಮೆ ಸುಖ. ಮನಸ್ಸು ವಿಚಿತ್ರವಾದ ತಳಮಳಗಳಿಗೆ ಒಳಗಾದಾಗ ಬದುಕು ಭಾರವೆನಿಸುತ್ತದೆ. ಹೀಗೆ ಆದರೆ ಮುಂದೆ ಹೇಗೆ ಎನ್ನುವ ಚಿಂತೆಯ ಪ್ರಶ್ನಾರ್ಥಕ ಚಿನ್ಹೆ ನಮ್ಮ ಮುಖಕ್ಕೆ ಮುಖ ಮಾಡಿಕೊಂಡು ನಿಲ್ಲುತ್ತದೆ ಅದಕ್ಕೆ ಉತ್ತರ ನೀಡುವುದು ಹೇಗೆ? ಚೆಂದದ ಗಳಿಗೆಗಳು ಜೊತೆಗಿರುವಾಗ ಹೀಗೇ ನೂರ್ಕಾಲ ಬದುಕಬೇಕು ಅನ್ನಿಸುವುದೂ ಖಚಿತ.


ಸ್ವಾರಸ್ಯಕರ ಕಥೆ


ಬದುಕಿನ ಏರಿಳಿತಗಳನ್ನು ಒಪ್ಪಿಕೊಳ್ಳುವ ಕುರಿತಂತೆ ಓದಿದ ಕತೆಯೊಂದು ತುಂಬಾ ಸ್ವಾರಸ್ಯಕರವಾಗಿದೆ. ನೀವೂ ಓದಿ: ಒಮ್ಮೆ ಒಬ್ಬ ರಾಜನು ಕಮ್ಮಾರನಿಗೆ ಹೀಗೆಂದು ಆದೇಶಿಸಿದನು. “ನಾನು ಮೇಲೇರುವಾಗ ನನ್ನ ಸಂತೋಷವನ್ನು ಕೂಡಿಡುವಂತೆ ಮತ್ತು ನಾನು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಾಗ ಉತ್ಸಾಹ ಚಿಮ್ಮುವಂತೆ ಒಂದು ಸೂಕ್ತಿಯಳ್ಳ ಒಂದು ಮೊಹರನ್ನು ತಯಾರಿಸಿ ಕೊಡು.”ಎಂದ. ಕಮ್ಮಾರಿನಿಗೆ ಮೊಹರು ತಯಾರಿಸುವುದೇನು ಕಷ್ಟದ ಕೆಲಸವಲ್ಲ ಆದರೆ ಕಷ್ಟ ಮತ್ತು ಸುಖದ ಕ್ಷಣಗಳಲ್ಲಿ ಎಚ್ಚರಿಕೆಯ ಸಂದೇಶವನ್ನು ನೀಡುವ ಸೂಕ್ತಿಯನ್ನು ತಯಾರಿಸುವುದು ಕಷ್ಟವೆನಿಸಿತು. ಆದ್ದರಿಂದ ಆತ ಒಬ್ಬ ಋಷಿಯ ಬಳಿ ಹೋದ. ಋಷಿಯ ಬಳಿ ನಡೆದ ಪ್ರಸಂಗವನ್ನೆಲ್ಲ ವಿವರಿಸಿದ. ರಾಜ ಸುಖದ ಕ್ಷಣಗಳಲ್ಲಿರುವಾಗ ಸಂತಸವನ್ನು ಸಮೀಕರಿಸುವಂತೆ, ದುಃಖದ ಮಡುವಿನಲ್ಲಿರುವಾಗ ಉತ್ಸಾಹದಿಂದ ಪುಟಿದೇಳುವಂತೆ ಮಾಡುವ ಯಾವ ಸಂದೇಶವನ್ನು ಮೊಹರಿನ ಮೇಲೆ ಬರೆಯಬೇಕು? ಎಂದು ಭಿನ್ನವಿಸಿಕೊಂಡ.
ಋಷಿಯು ಹೀಗೆ ಹೇಳಿದನು. ಮೊಹರಿನ ಮೇಲೆ ಹೀಗೆಂದು ಬರೆ “ಇದನ್ನೂ ದಾಟಬೇಕು” ಗೆದ್ದಾಗ ಈ ಮೊಹರನ್ನು ನೋಡಿ ವಿನೀತನಾಗುತ್ತಾನೆ. ಮತ್ತು ನಿರುತ್ಸಾಹದಲ್ಲಿ ಎದೆಗುಂದಿದಾಗ ಭರವಸೆಯ ಬೆಳಕಿನ ಕಿರಣವನ್ನು ಮೂಡಿಸುತ್ತದೆ.
ಹಾವು ಏಣಿಯ ಆಟದಂತಿರುವ ಬದುಕನ್ನು ಹೇಗೆ ಒಪ್ಪಿ ಅಪ್ಪಿಕೊಳ್ಳುವುದು. ಉತ್ಸಾಹದ ಚಿಲುಮೆ ಚಿಮ್ಮಿಸುವುದು ಹೇಗೆ ನೋಡೋಣ ಬನ್ನಿ.


ಮನಸ್ಥಿತಿ


ಅನೇಕ ಸಲ ನಮ್ಮ ಪರದಾಟಗಳಿಗೆ ಏರಿಳಿತಗಳಿಗೆ ನಮ್ಮ ಮನಸ್ಥಿತಿ ಮುಖ್ಯ ಕಾರಣವಾಗಿ ಪರಿಣಮಿಸುತ್ತದೆ. ನಾವು ಸುಖವಾಗಿ ಇರಬೇಕೆಂದರೆ ನಮ್ಮೆದುರಿಗಿನವರನ್ನು ಸುಖವಾಗಿ ಇಡುವುದು ಮುಖ್ಯ “ನಾವು ಇತರರಿಂದ ಏನನ್ನು ಬಯಸುತ್ತೇವೆಯೋ ಅದನ್ನು ಅವರಿಗೆ ಮೊದಲು ನೀಡಬೇಕು.” ಆದರೆ ನಾವು ಇvರÀರಿಂದ ಸಹಕಾರ ಪ್ರೀತಿ ಬಯಸುತ್ತೇವೆ ಆದರೆ ನೀಡುವುದಿಲ್ಲ. ಬಹುತೇಕರು ಸ್ವಾರ್ಥ ಕೇಂದ್ರಿತರಾಗಿರುತ್ತಾರೆ ಯಾವಾಗಲೂ ತಮ್ಮ ಮೂಗಿನ ನೇರಕ್ಕೆ ಯೋಚಿಸುತ್ತಾರೆ. ಮುಂದಿನ ಹರುಷದ ಮನಗಳು ನಮಗೆ ಪ್ರಸನ್ನತೆಯನ್ನು ಮೂಡಿಸುತ್ತವೆ ಎನ್ನುವ ಪರಿಕಲ್ಪನೆಯನ್ನು ತಲೆಯಲ್ಲಿ ಇರಿಸಿಕೊಳ್ಳುವುದಿಲ್ಲ. ಅಂಥ ಮನಸ್ಥಿತಿಯಿಂದ ಬಿಡುಗಡೆ ಹೊಂದುವಂತೆ ಯಾರೂದರೂ ಉಪದೇಶಿಸಿದರೆ ಅವರ ಮುಂದೆ ಕೌಲೆತ್ತಿನಂತೆ ಗೋಣು ಹಾಕಿ ಮತ್ತೆ ಅದೇ ತಾಳ ಅದೇ ರಾಗ ಎನ್ನುವಂತೆ ಇರುತ್ತಾರೆ. ಎಂಥ ಕೆಟ್ಟವನಲ್ಲೂ ಒಂದು ಒಳ್ಳೆಯ ಗುಣ ಇದ್ದೇ ಇರುತ್ತದೆ ಎಂದು ನಂಬಬೇಕು. ಇದು ವಾಸ್ತವ ಕೂಡ. ಪ್ರತಿಯೊಂದಕ್ಕೂ ಇತರರನ್ನು ಅವಲಂಬಿಸುವ ಮನೋಭಾವವೂ ನೋವನ್ನು ತರುವುದು. ಮನಸ್ಥಿತಿ ಎನ್ನುವುದು ಫಲವತ್ತಾದ ಮಣ್ಣು ಇದ್ದಂತೆ ಅದರಲ್ಲಿ ಏನು ಬಿತ್ತುತ್ತೇವೆಯೋ ಅದನ್ನೇ ಬೆಳೆಯುತ್ತೇವೆ. ಕೋಪ ಅಸಹನೆ ಸೇಡು ತಿರಸ್ಕಾರ ಭಯದ ಬೀಜಗಳನ್ನು ಬಿತ್ತಿದರೆ ಅದೇ ಬೆಳೆಯುವುದು. ಪರಿಸ್ಥಿತಿಯನ್ನು ನಿಭಾಯಿಸುವ ಗುಣಗಳಾದ ತಾಳ್ಮೆ ಪ್ರೀತಿ ಒಲವು ಉದಾರತೆಯನ್ನು ಬಿತ್ತಿದರೆ ಬದುಕಿನಲ್ಲಿ ಕಹಿ ಪಾಲು ಕಡಿಮೆಯಾಗಿ ಸಿಹಿ ಪಾಲು ಹೆಚ್ಚುವುದು.


ವಿವೇಕ ವಿವೇಚನೆ


“ವಿಶ್ವ ವಿದ್ಯಾಲಯಗಳ ಆದ್ಯ ಕರ್ತವ್ಯವೆಂದರೆ ವಿವೇಕ ವಿವೇಚನೆಯನ್ನು ಕಲಿಸುವುದು. ವ್ಯಾಪಾರವನ್ನಲ್ಲ. ಯೋಗ್ಯತೆ ಸಂಪನ್ನಶೀಲತೆಯನ್ನೇ ಹೊರತು ವಿಧಿ ವಿಧಾನವನ್ನಲ್ಲ.” ಎಂದಿದ್ದಾನೆ ವಿನ್ಸ್ಟನ್ ಚರ್ಚಿಲ್ ಯಾರು ಪ್ರತಿದಿನ ಎದುರಾಗುವ ಸನ್ನಿವೇಶಗಳನ್ನು ನಿಭಾಯಿಸುತ್ತಾರೋ ಪರಿಸ್ಥಿತಿಗಳನ್ನು ಅರ್ಥೈಸಿಕೊಂಡು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೋ ಸಾಧ್ಯವಿದ್ದಷ್ಟು ತಾಳ್ಮೆಯಿಂದ ವರ್ತಿಸುತ್ತಾರೋ ಅವರನ್ನು ವಿವೇಕಿಗಳು ಎನ್ನುತ್ತಾರೆ.ಸಂಕ್ಷಿಪ್ತವಾಗಿ ಹೇಳುವುದಾದರೆ, ಬದುಕಿನ ಎಂಥ ಜಟಿಲ ಸವಾಲುಗಳಲ್ಲೇ ಆಗಲಿ ವಿವೇಕದಿಂದ ಆಯ್ಕೆ ಮಾಡುವವರು. ಯಾರು ಮೂರ್ಖತನ ಕೆಟ್ಟದ್ದು ಎಂದು ಚೆನ್ನಾಗಿ ಅರಿಯಬಲ್ಲರೋ ಅವರು ವಿವೇಕಿಗಳು. ಅತ್ಯಂತ ನಿರುತ್ಸಾಹಗೊಂಡಾಗಲೂ ಸಹನೆ ಕಳೆದುಕೊಳ್ಳದೇ ವರ್ತಿಸಬೇಕು. ಸಮಸ್ಯೆಗಳನ್ನು ಹೊಸ ದೃಷ್ಟಿಯಿಂದ ಆಲೋಚಿಸಿ ಒಳ್ಳೆಯ ಪರಿಹಾರ ಸೂಸುವುದಷ್ಟೇ ಜಾಣತನವಲ್ಲ. ಓದಿನಲ್ಲಿ ಹಿಂದೆ ಬಿದ್ದರೂ ಲೋಕಾನುಭವದಿಂದ ಚಾಕು ಚಕ್ಯತೆಯಿಂದ ಬದುಕು ನಿರ್ವಹಿಸುವುದೂ ಜಾಣತನವೇ. ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಅಂತ ಎಲ್ಲೆಲ್ಲೋ ಬಿದ್ದು ಸಾಯುವುದಲ್ಲ. ಜೀವನದಲ್ಲಿ ನೊಂದು ಸಾಯಲು ನಿರ್ಧರಿಸುವವನು ವಿವೇಕೆ ಅಲ್ಲವೇ ಅಲ್ಲ. ಆಸಕ್ತಿ ಹುಮ್ಮಸ್ಸು ಇರಿಸಿಕೊಂಡರೇ ಜಗತ್ತೇ ನಮ್ಮದು. ಇವೆರಡನ್ನು ಸದಾ ಹೋದಲೆಲ್ಲ ಹೊತ್ತೊಯ್ಯದರೆ ಏರಿಳಿತಗಳನ್ನು ಉತ್ತಮವಾಗಿ ನಿರ್ವಹಿಸಬಲ್ಲೆವು. ಸಂತಸದಿಂದ ಇರಬಲ್ಲೆವು.


ಶ್ರದ್ಧೆ


ಜೀವನದಲ್ಲಿ ಏನೇನು ಒಳ್ಳೆಯದು ಆಗಿದೆಯೋ ಅದರ ಹಿಂದೆ ಶ್ರದ್ಧೆಯ ಸಿಂಹಪಾಲಿದೆ. ಇಳಿಕೆಗಳನ್ನು ಏರುಗಳನ್ನಾಗಿ ಬದಲಿಸುವ ಮರದ ತಾಯಿಬೇರು ಶ್ರದ್ಧೆ ಆಗಿದೆ. “ಶ್ರದ್ಧೆ ಎಲ್ಲಿದೆಯೋ ಅಲ್ಲಿ ಧೈರ್ಯವಿದೆ.”ಶ್ರದ್ಧೆ ಇಲ್ಲದ ಬಲವಂತನೂ ಸೋಲುತ್ತಾನೆ. ಶ್ರದ್ಧೆ ಇರುವ ಕಡಿಮೆ ಬಲ ಇರುವವನು ಗೆಲ್ಲುತ್ತಾನೆ. ಬದುಕಿನ ಬಾಗಿಲಿನಾಚೆ ಏನಿದೆ ಯಾರಿಗೂ ಗೊತ್ತಿಲ್ಲ ಆದರೆ ಕೆಟ್ಟದ್ದನ್ನು ಬದಲಿಸುವ ತಾಕತ್ತು ಶ್ರದ್ಧೆಗಿದೆ. ಬೆವರ್ಲ ಸೀಲ್ಸ್ ಹೇಳಿದ ಮಾತು ಇಲ್ಲಿ ಸೂಕ್ತವೆನಿಸುತ್ತದೆ. “ನೀವು ವಿಫಲರಾದಲ್ಲಿ ನಿರಾಶರಾಗಬಹುದು.ಆದರೆ ಪ್ರಯತ್ನವನ್ನೇ ಮಾಡದಿದ್ದರೆ ವಿನಾಶ ನಿಶ್ಚಿತ.”ಶ್ರದ್ಧೆ ಇಲ್ಲದವನು ಏನಾದರೂ ಆಗಲಿ ಎಂದುಕೊಳ್ಳುತ್ತಾನೆ ಶ್ರದ್ಧೆ ಇರುವವನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುತ್ತಾನೆ. ಅಂದರೆ ಶ್ರದ್ಧೆ ಜೀವರಸಾಯನವಿದ್ದಂತೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಗಟ್ಟಿಯಾಗಿ ನಿಲ್ಲುವಂತೆ ಮಾಡುತ್ತದೆ. ಬದುಕಬೇಕೆನ್ನುವ ಬೆಳೆಯಬೇಕೆನ್ನುವ ಆಸೆ ಚಮತ್ಕಾರಗಳನ್ನು ಸೃಷ್ಟಿಸಬಲ್ಲದು. ಅದೃಷ್ಟವಚಿತರೆಂದು ಗುರುತಿಸಲ್ಪಡುವವರೆಲ್ಲರೂ ಜೀವನದ ಸುಳಿಗಳಲ್ಲಿ ವೈಫಲ್ಯಗಳಲ್ಲಿ ಗಂಡಾಂತರಗಳಲ್ಲಿ ಶ್ರದ್ಧೆಯಿಂದ ಮುಂದೆ ಸಾಗಿದ್ದಕ್ಕೆ ಶ್ರದ್ಧೆ ಅವರ ಕೈ ಹಿಡಿದು ಮುನ್ನಡೆಸಿತು. ಕೋಲಂಬಸ್ ಗೆ ಹೊಸ ಜಗತ್ತನ್ನು ಕಂಡು ಹಿಡಿಯುವ ದಾರಿ ಗೊತ್ತಿರಲಿಲ್ಲ. ಆದರೆ ಅವನಲ್ಲಿದ್ದ ಬಲವಾದ ಶ್ರದ್ದೆಯೇ ಅದನ್ನು ಹುಡುಕಿಕೊಟ್ಟಿತು. ಸ್ಥಿರವಿಲ್ಲದ ಹೊಯ್ದಾಟದ ಸ್ಥಿತಿಯಲ್ಲಿ ಮುನ್ನಡೆಸುವುದು ಶ್ರದ್ಧೆ ಆದ್ದರಿಂದ ಶ್ರದ್ಧಾವಂತರಾಗುವುದು ಮುಖ್ಯ.


ಸಂಕೋಚ – ಬೇಸರ


ಸಂಕೋಚ ಬಹುತೇಕ ಸನ್ನಿವೇಶಗಳಲ್ಲಿ ಅಡೆತಡೆಯಾಗಿ ಪರಿಣಮಿಸುತ್ತದೆ. ಬೇರೆಯವರನ್ನು ತೃಪ್ತಿ ಪಡಿಸಲು ನಮಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡಬಾರದು ನಮ್ಮ ಬಗ್ಗೆ ನಮಗಿರುವ ಕೆಟ್ಟ ಅಭಿಪ್ರಾಯಗಳಲ್ಲಿ ಬೇರೆಯವರು ಆಪಾದಿಸಿದ್ದೇ ಹೆಚ್ಚು.ಅವುಗಳನ್ನು ನಿಜವಾಗಿಸಬಾರದು. ಬೇರೆಯವರಿಗೆ ಸಲಹೆ ನೀಡಿದಾಗ ಅವರು ಪಾಲಿಸದಿದ್ದರೆ ಬೇಸರ ಪಟ್ಟುಕೊಳ್ಳಬಾರದು.ನಾವು ಹೇಳಿದ್ದನ್ನೆಲ್ಲ ಜನ ಸ್ವೀಕರಿಸಬೇಕೆಂದು ಯೋಚಿಸುವುದು ತಪ್ಪು. ನಾವು ಹೇಳಿದ್ದರಲ್ಲಿ ವಿಷಯ ಇಲ್ಲದಿರಬಹುದು, ಇಷ್ಟವಾಗದೇ ಇರಬಹುದು. ಇಲ್ಲವೇ ಅವರಿಗೆ ಅರ್ಥವಾಗುವ ಹಾಗೆ ನಾವು ಹೇಳದೇ ಇರಬಹುದು.


ತಪ್ಪು ಒಪ್ಪು


ತಪ್ಪು ಮಾಡಿದಾಗ ಒಪ್ಪಿಕೊಂಡು ಬಿಡಬೇಕು. ತಪ್ಪುಗಳೇ ನಚಿತರ ಒಪ್ಪುಗಳನ್ನು ಮಾಡಲು ದಾರಿ ತೋರಿಸುತ್ತವೆ.ತಪ್ಪು ಮಾಡಿದಾಗ ನಮಗೆ ನಾವೇ ಭಯಂಕರ ಶಿಕ್ಷೆ ವಿಧಿಸಿಕೊಂಡು ಮೂಲೆಯಲ್ಲಿ ಕೂರಬಾರದು. ತಪ್ಪನ್ನು ತಿಳಿದುಕೊಂಡು ಒಳ್ಳೆಯ ದೃಷ್ಟಿಯಲ್ಲಿ ಒಳ್ಳೆಯ ಕೆಲಸ ಮಾಡಬೇಕು. ಚಾರ್ಲಿ ಚಾಪ್ಲಿನ್ ಚಿತ್ರಗಳಲ್ಲಿ ಆತ ಎಷ್ಟೋ ಸಲ ಬೀಳುತ್ತಿರುತ್ತಾನೆ. ಏಳುತ್ತಿರುತ್ತಾನೆ ಪೈಪು ಹಿಡಿದು ಮೇಲಕ್ಕೆ ಹತ್ತಿ ಧೊಪ್ಪೆಂದು ಕೆಳಕ್ಕೆ ಬೀಳುತ್ತಾನೆ. ಅದನ್ನು ಕಂಡು ನಾವು ಬಿದ್ದು ಬಿದ್ದು ನಗುತ್ತೇವೆ. ಯಾರೋ ಬಾಳೇ ಹಣ್ಣಿನ ಸಿಪ್ಪೆಯ ಮೇಲೆ ಕಾಲಿಟ್ಟು ಜಾರಿ ಬಿದ್ದಾಗ ಗೊಳ್ಳೆಂದು ನಗುತ್ತೇವೆ. ಅಂದರೆ ಇತರರ ಕಷ್ಟಗಳು ತೊಂದರೆಗಳು ನಮಗೆ ತಮಾಷೆ ಎನಿಸುತ್ತವೆ. ಆದರೆ ನಮ್ಮ ಬುಡಕ್ಕೆ ಬಂದಾಗ ನೋವು ತರುತ್ತವೆ. ಈ ಮನೋಭಾವವನ್ನು ಬದಲಿಸಿಕೊಳ್ಳಬೇಕು. ಕಷ್ಟಗಳಿಗೆ ಹೆದರಿ ನಮ್ಮನ್ನು ನಾವು ಶಿಕ್ಷಿಸಿಕೊಳ್ಳುವುದು ಬೇರೆಯಲ್ಲ ಇಲಿಯನ್ನು ಓಡಿಸಲು ಮನೆಗೆ ಬೆಂಕಿ ಹಚ್ಚುವುದು ಬೇರೆಯಲ್ಲ. ಎಲ್ಲ ಏರಿಳಿತಗಳಲ್ಲೂ ಗೆದ್ದು ಬದುಕಬೇಕೆನ್ನುವ ತೀವ್ರ ಆಕಾಂಕ್ಷೆ ನಮ್ಮನ್ನು ಸಂತಸದಿ ನಗೆ ಚೆಲ್ಲಿ ಬರಮಾಡಿಕೊಳ್ಳುತ್ತದೆ. ಹಾಗಾದರೆ ಆ ತೀವ್ರ ಆಕಾಂಕ್ಷೆ ನಮ್ಮದಾಗಿಸಿಕೊಳ್ಳೋಣ ಅಲ್ಲವೇ?

*********************************************

ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

Leave a Reply

Back To Top