ಮುಖಾಮುಖಿ

ಈ ಜಗತ್ತಿನೊಂದಿಗೆ ನನ್ನ ಜಗತ್ತನ್ನ

ಬೆಸೆಯುವ ತಂತು ಕವಿತೆ

ಪರಿಚಯ ;
ಚೈತ್ರಾ ಶಿವಯೋಗಿಮಠ
ಮೂಲತಃ ಬಿಜಾಪುರದವರು. ಬೆಂಗಳೂರಿನ ನಿವಾಸಿ.
ಎಂಟೆಕ್ ಪದವಿಯನ್ನು ವಿಟಿಯು ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್. ಕಾರ್ಯಕ್ರಮದ ನಿರೂಪಣೆ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ಕವಿತೆಗಳನ್ನು ಯಾಕೆ ಬರೆಯುತ್ತೀರಿ ?

ನನ್ನೊಂದಿಗೆ ನಾನು ಈ ಜಗತ್ತಿನೊಂದಿಗೆ ನನ್ನ ಜಗತ್ತನ್ನ ಬೆಸೆಯುವ ತಂತು ಕವಿತೆ. ತೀವ್ರವಾಗಿ ನನ್ನ ಮನಸ್ಸಿಗೆ ಅರ್ಥೈಸಬೇಕಾದರೆ ಅದನ್ನ ಪದಗಳಾಗಿಸಿ ನನ್ನ ಮನದಾಳಕಿಳಿಸಿಕೊಳ್ಳುತ್ತೇನೆ. ಮನೆಯನ್ನ ನಾವು ದಿನವೂ ಗುಡಿಸಿ ಶುಚಿ ಮಾಡಿದರೂ ಅದು ಮತ್ತೆ ಕಸ, ಧೂಳುಗಳಿಂದ ತುಂಬಿಕೊಳ್ಳುವುದು. ಅಂತೆಯೇ ನಮ್ಮ ಮನಸ್ಸು. ಸದ್ವಿಚಾರಗಳನ್ನ ಅದೆಷ್ಟು ಬಾರಿ ಮನಸ್ಸಿಗೆ ತಿಳಿಹೇಳಿದರೂ ಅರಿಷಡ್ವರ್ಗಗಳ ಪ್ರಭಾವ ವಲಯದಲ್ಲಿ ಸಿಲುಕಿ ಮತ್ತೆ ಕೆಡುಕಿಗೇ ತುಡಿಯುವುದು. ಕವಿತೆ, ನನ್ನ ಮನಸ್ಸಿಗೆ ನಾನೇ ಬುದ್ಧಿ ಹೇಳುವ ಮಾತುಗಳು. ಬಹುಶಃ ಇದೇ ತೊಳಲಾಟಗಳನ್ನ ಬಹುತೇಕ ಎಲ್ಲರೂ ಅನುಭವಿಸುತ್ತಾರೆ ಹಾಗಾಗಿ ನನ್ನ ಕವಿತೆಗಳು ಅವರನ್ನೂ ತಟ್ಟಿ ತಮ್ಮೊಂದಿಗೆ ತಾವು ಆಡಲಾರದ ಮಾತುಗಳನ್ನ ನನ್ನ ಕವಿತೆಗಳಲ್ಲಿ ಕಂಡರೆ ಸಾರ್ಥಕ ಭಾವ. ಕಾಣದ, ಅರಿಯದ ಯಾರಿಗೋ ಈ ಕವಿತೆಗಳು ಸಾಂತ್ವಾನವಾಗುವುವೇನೋ ಅನ್ನುವ ಆಶಾಭಾವ. ಓದಿದ ಮನಸ್ಸಿಗೆ ಅರೆಕ್ಷಣದ ಸಂತಸ, ನಿರಾಳತೆ ನೀಡಲಿ ಎನ್ನುವ ಸದುದ್ದೇಶ. ಈ ಜಗತ್ತಿನೊಂದಿಗೆ ನನ್ನ ಜಗತ್ತನ್ನ ಬೆಸೆಯುವ ತಂತು ಕವಿತೆ.

  ಕವಿತೆ ಹುಟ್ಟುವ ಕ್ಷಣ ಯಾವುದು ?

ನಾನು ಸ್ವಭಾವತಃ ಬಹಿರ್ಮುಖಿ ಆದರೂ ನನ್ನೊಳಗೆ ಒಬ್ಬಳು ಸೂಕ್ಷ್ಮ ಅಂತರ್ಮುಖಿ ಅಡಗಿ ಕುಳಿತ್ತಿದ್ದಾಳೆ. ಅದೆಷ್ಟೋ ಸಲ ನನಗೆ ಉಮ್ಮಳಿಸಿ ಬರುವ ಅಳು, ಆಕ್ರೋಶ,  ತಡೆಯಲಾರದಷ್ಟಾಗುವ ಖುಷಿ, ನನ್ನ ಸುತ್ತ ನಡೆಯುವ ಕೆಲವು ಘಟನೆಗಳಿಂದಾಗಿ ನನ್ನೊಳಗೇ ಹೇಳಿಕೊಳ್ಳಲಾಗದಂತಹ ತಳಮಳ. ಯಾರಿಗೆ ಹೇಳಲಿ ಎಂದು ಪರದಾಡುವಾಗಲೇ ಕವಿತೆ ಹುಟ್ಟುತ್ತದೆ. ಕೇವಲ ನನ್ನೊಳಗಿನ ನೋವು-ನಲಿವುಗಳಷ್ಟೇ ಅಲ್ಲದೆ ಸುತ್ತ ಮುತ್ತಲಿನವರ ನೋವು ನಲಿವುಗಳಿಗೆ ನನ್ನ ಸ್ಪಂದನೆಯಾದಾಗ ಹುಟ್ಟುವುದು ಕವಿತೆ. ಒಂದು ಘಟನೆ, ಒಬ್ಬ ವ್ಯಕ್ತಿ, ಒಂದು ಸಂಬಂಧ ತೀವ್ರವಾಗಿ ಕಾಡಿದಾಗ ಹುಟ್ಟುವುದು ಕವಿತೆ.

ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ  ಯಾವುದು  ? ಪದೇ ಪದೇ ಕಾಡುವ ವಿಷಯ ಯಾವುದು ?

ನಾನು ಹೆಚ್ಚಾಗಿ ಪ್ರಕೃತಿಯ ಕುರಿತಾಗೇ ಬರೆಯುವುದು. ಕಾಂಕ್ರೀಟ್ ಕಾಡಿನ ಏಕತಾನತೆ ಬೇಸರ ತರಿಸಿದಾಗೆಲ್ಲ ಒಂದು ಕಾಡಿಗಾದರೂ ಹೋಗಿ ಕುಳಿತುಬಿಡಬೇಕೆನ್ನುವ ಹಂಬಲ. ಹಸಿರು ನನ್ನನ್ನು ಹೆಚ್ಚು ಸೆಳೆಯುತ್ತದೆ. ಅಷ್ಟೇ ಅಲ್ಲದೆ ಪ್ರಸ್ತುತ ಕಾಲಮಾನದ ಕೆಲವು ಅಕ್ರಮಗಳು, ಮನುಷ್ಯರೇ ಮನುಷ್ಯರನ್ನ ಲೂಟಿ ಮಾಡುವುದು, ಈಗಿನ ವಿಷಮ ಸ್ಥಿತಿಯಲ್ಲಿನ ಮನಸ್ಥಿತಿಗಳು. ಮತ್ತು ಪದೆ ಪದೆ ಕಾಡುವುದು ಅಪ್ಪನ ನೆನಪುಗಳು.

 ಕವಿತೆಗಳಲ್ಲಿ ಬಾಲ್ಯ,  ಹರೆಯ  ಇಣುಕಿದೆಯೇ ?

ಬಾಲ್ಯ ಪ್ರತಿಯೊಬ್ಬರ ಜೀವನದಲ್ಲೂ ಬಹಳ ಅಪ್ಯಾಯಮಾನ. ಹಾಗೇ ನನಗೂ ಸಹ. ನನ್ನ ಬಾಲ್ಯವೆಂದರೆ ನನ್ನ ಅಪ್ಪಾಜಿ. ಅಪ್ಪನ ಕುರಿತು ಕೆಲವು ಕವನಗಳು ಬರೆದಿರುವೆ‌‌. ನನಗೆ ಭಾಷಾಭಿಮಾನ, ಓದು-ಬರಹದ ಬಗೆಗೆ ಒಲವು ಮೂಡಿಸಿದವರೇ ಅಪ್ಪಾಜಿ. ಇನ್ನು ಸಹಜವಾಗಿ ಪ್ರೀತಿ-ಪ್ರೇಮದ ಬಗೆಗೆಯೂ ಕವನಗಳನ್ನ ಬರೆದಿರುವೆ . ನೂರು ಭಾವಗಳಲ್ಲಿ ಒಲವಿನ ರಂಗು ತುಸು ಹೆಚ್ಚೇ ಆಗಿ ಕಾಣುವ ಹರೆಯದ ಪ್ರೀತಿಯ ನವಿರು ಭಾವನೆ ಮನಸ್ಸಿನಲ್ಲಿ ಪುಳಕ ಉಂಟುಮಾಡೋದರಲ್ಲಿ ಸಂದೇಹವೇ ಇಲ್ಲ!

ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ?

ಆಳುವವರು ನಿಜವಾಗಿಯೂ ಆಳುವವರಲ್ಲದೆ ಅವರು ನಮ್ಮ ಪ್ರತಿನಿಧಿಗಳಾಗಿ ಸಂವಿಧಾನ ಬದ್ಧರಾಗಿ ನಡೆದುಕೊಳ್ಳುವುದು ಅತ್ಯವಶ್ಯಕ. ಆದರೆ ಈಗ? ಬರಿ ಪಕ್ಷ, ಅವರವರ ಸ್ವಂತ ಸಿದ್ಧಾಂತಗಳು, ಜಾತಿ ರಾಜಕಾರಣ, ಧರ್ಮದ ಹೆಸರಲ್ಲಿ ರಾಜಕೀಯ, ಹಣ, ಹೆಂಡ , ವಾಮ ಮಾರ್ಗಗಳೇ ಈಗಿನ ರಾಜಕೀಯದ ಸರಕುಗಳಾಗಿವೆ. ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಾದ ಭಾರತ ಕೇವಲ ಧರ್ಮದ ಹೆಸರಲ್ಲಿ ಗಲಭೆಗಳೇ, ಮತ್ತು ಅದರಿಂದ ಲಾಭ ಪಡೆಯುವ ರಾಜಕಾರಣಿಗಳೇ ಹೆಚ್ಚಾಗಿ ಹೋಗಿದ್ದಾರೆ. ಇವೆಲ್ಲ ಕಾರಣಗಳಿಂದಾಗಿ ರಾಜಕೀಯದ ಬಗ್ಗೆ ಬಹಳಷ್ಟು ಜಿಗುಪ್ಸೆ ಮತ್ತು ನೀರಸ ಮನೋಭಾವನೆ! ಆದರೂ ಸಣ್ಣ ಆಶಾಭಾವನೆ ಇನ್ನೂ ಇದೆ, ಈ ರಾಜಕೀಯ ಪರಿಸ್ಥಿತಿ ಸುಧಾರಣೆ ಆಗಲಿ ಅಂತ.

ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ?

ದಯವಿಲ್ಲದ ಧರ್ಮ ಅವುದಯ್ಯ? ಎಲ್ಲ ಧರ್ಮಗಳೂ ಹೇಳುವುದೂ ಇದನ್ನೇ. ನನಗೆ ಪ್ರತಿಯೊಂದು ಧರ್ಮದ ಬಗ್ಗೆಯೂ ಗೌರವವಿದೆ. ಒಂದು ಅಗೋಚರ ಶಕ್ತಿ ನಮ್ಮನ್ನೆಲ್ಲ ಕಾಯುತ್ತದೆಂಬ ಅಗಾಧ ನಂಬಿಕೆ ಇದೆ. ಆತ್ಮನೊಳಗೆ, ಪರಮಾತ್ಮ ಇದ್ದಾನೆ, ನಾವು ಮನಸಾರೆ ಪ್ರಬಲ ಇಚ್ಛೆಯಿಂದ ಒಳ್ಳೆಯದನ್ನು ಬೇಡಿಕೊಂಡರೆ ಖಂಡಿತವಾಗಿಯೂ ಜಗತ್ತಿನೆಲ್ಲ ಶಕ್ತಿ ಅದರೆಡೆಗೆ ಕೆಲಸ ಮಾಡಲು ಶುರುಮಾಡುತ್ತವೆ. ಅಂತೆಯೇ ಮೂಢನಂಬಿಕೆಗಳಲ್ಲಿ ಎಳ್ಳಷ್ಟು ಆಸಕ್ತಿ ಇಲ್ಲ. ದೇವರು ಖಂಡಿತವಾಗಿಯೂ ಇದ್ದಾಳೆ. ಅದು ನಮ್ಮ ತಂದೆ, ತಾಯಿ ರೂಪದಲ್ಲಿ, ಪ್ರಕೃತಿಯಲ್ಲಿ, ನಾವು ಮಾಡುವ ಒಳ್ಳೆಯ ಕೆಲಸಗಳಲ್ಲಿ, ಪ್ರೀತಿಯಲ್ಲಿ! ಈ ಜಗದ ಚೈತನ್ಯವೇ ದೇವರು ಎಂದರೆ ತಪ್ಪಾಗಲಾರದು.

ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ?

ಕೃತಕತೆ, ಅಸಹಜತೆ ಮತ್ತು ಅತಿಯಾದ ಸ್ವೇಚ್ಛೆಯೇ ಹೆಚ್ಚಾಗುತ್ತಿರುವುವೆಂಬ ಭಾವ. ಮಾತು, ಕೃತಿಗಳಲ್ಲಿನ ಅತಿಯಾದ ಸ್ವೇಚ್ಛೆಯೇ ಆಧುನಿಕತೆ ಎನ್ನುವಂತಾಗಿದೆ. ಹೊಸ ವಿಚಾರಗಳನ್ನ ಹುಟ್ಟು ಹಾಕುತ್ತ, ಹಳೆಯ ಒಳಿತುಗಳನ್ನ ಉಳಿಸಿಕೊಳ್ಳುತ್ತಾ ಸಾಗಬೇಕಾಗಿದೆ. ತೆರೆದ ಮನಸ್ಸು ಮತ್ತು ಹೃದಯವೈಶಾಲ್ಯತೆಗಳು ಬಹಳ ಕಡಿಮೆಯಾಗುತ್ತಿವೆಯೇನೋ.   ನಮ್ಮ ನಿಲುವನ್ನ ಸ್ಪಷ್ಟವಾಗಿ ಹೇಳಲೂ ಹಿಂಜರಿಕೆ, ಕಾರಣ ನಮ್ಮನ್ನ ಒಂದು ಪಂಥಕ್ಕೆ ಸೀಮಿತ ಮಾಡಿಬಿಡುತ್ತಾರೆ. ಹಂಸ ಪಕ್ಷಿಯ ಹಾಗೆ ಎಲ್ಲದರಲ್ಲೂ ಒಳಿತನ್ನ ಮಾತ್ರ ತೆಗೆದುಕೊಂಡು ಕೆಡುಕನ್ನ ಬಿಡಬೇಕು. ಹಾಗೆಯೇ ಎಲ್ಲದಕ್ಕೂ ಈಗ ಹೋರಾಡಬೇಕಾದ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ.

ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?

ಇದರಲ್ಲಿ ನನಗೆ ಅನುಭವವೂ ಕಡಿಮೆ. ಕಾರಣ ನಾನು ಯಾವುದೇ ಒಂದೇ ಗುಂಪಿಗೆ ಸೇರದೆ, ಒಳ್ಳೆಯ ಮತ್ತು ಹೊಸ ಹೊಳಹುಗಳು ಎಲ್ಲಿರಿತ್ತವೋ ಅಲ್ಲಿ ನನ್ನ ಒಲವಿರುತ್ತದೆ. ಆದರೂ ಒಟ್ಟಾರೆಯಾಗಿ ನೋಡಿದಾಗ ಎಡ-ಬಲಗಳೆಂದು ಒಬ್ಬರ ಮೇಲೊಬ್ಬರು ಕೆಸರೆರಚಾಡುವುದು ಬಿಟ್ಟು ಕನ್ನಡ ಭಾಷಾ ಪರಂಪರೆಯನ್ನ ಮುಂದುವರಿಸಿಕೊಂಡು ಹೋಗಲು ಒಗ್ಗೂಡುವುದು ಅತ್ಯವಶ್ಯಕ.

 ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ?

ಬಹಳಷ್ಟು ಕೆಟ್ಟ ವಿಷಯಗಳನ್ನೇ ನಾವು ಕೇಳುತ್ತಿದ್ದರೂ, ನನ್ನ ಸುತ್ತಲು ಅಥವಾ ನನ್ನ ಸಂಪರ್ಕಕ್ಕೆ ಬಂದಿರುವ ಬಹಳಷ್ಟು ಯುವಮನಸ್ಸುಗಳು ಕನ್ನಡ ಭಾಷೆಯ ಒಲವು, ಬರಹ, ಸಂಚಾರ, ಸಹೃದಯಿತನವನ್ನ ತೋರುತ್ತಿದ್ದಾರೆ. ಇದು ಬಹಳಷ್ಟು ಆಶಾದಯಕ ಸಂಗತಿ ಮತ್ತು ಸಂತಸ, ಸಂತೃಪ್ತಿಯ ವಿಷಯ. ಈ ಯುವ ಚಿಗುರುಗಳಿಗೆ, ಹಿರಿಯ ಬೇರುಗಳು ತಮ್ಮ ಪ್ರೀತಿ, ಜ್ಞಾನವನ್ನ ಧಾರೆ ಎರೆದು ಕೈ ಹಿಡಿದು ನಡೆಸೋದು ಮತ್ತೊಂದು ಖುಷಿಯ ವಿಚಾರ. ಇಂತಹವರ ಸಂತತಿ ಹೆಚ್ಚಲಿ ಅನ್ನೋ ಆಶಯ.

ತಾಂತ್ರಿಕ ಪ್ರಗತಿ, ಹೊಸ ಆವಿಷ್ಕಾರಗಳು ಕ್ಷಿಪ್ರಗತಿಯಲ್ಲಿದ್ದರೂ ಬಹಳಷ್ಟು ಸಾಮಾಜಿಕ ಸಮಸ್ಯೆಗಳು ಇನ್ನೂ ಉಳಿದುಕೊಂಡಿವೆ. ಅತ್ಯಾಚಾರ, ಕೊಲೆಗಳ ಸಂಖ್ಯೆ ಕಡಿಮೆಯೇ ಆಗುತ್ತಿಲ್ಲ. ಇವೆಲ್ಲ ಸಮಸ್ಯೆಗಳು ಬಗೆಹರೆಯಬೇಕೆಂದರೆ ಪ್ರತಿ ಒಬ್ಬ ವ್ಯಕ್ತಿ ಮೊದಲು ತಾನು ಸರಿಯಾಗಿ ಇರಬೇಕು. ಬಸವಣ್ಣ ಹೇಳಿದಂತೆ – “ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ”.

 ಅತೀ ವೇಗದ ಮುಮ್ಮುಖದ ಚಲನೆಯೊಂದಿಗೆ, ಪ್ರೀತಿ, ಪ್ರೇಮ ಅಂತಃಕರಣದ ಗುರುತ್ವಾಕರ್ಷಣೆ ನಮ್ಮನ್ನ ಹಿಡಿದಿಡಲಿ.

ಸಾಹಿತ್ಯದ  ಬಗ್ಗೆ ನಿಮ್ಮ ಕನಸುಗಳೇನು ?

ನನಗೆ ಎಷ್ಟು ಸಾಧ್ಯವೋ ಅಷ್ಟೂ ಓದಬೇಕೆಂಬ ಆಸೆ. “known is drop unknown is ocean” ಎನ್ನುವಂತೆ, ಓದುವ ಪುಸ್ತಕಗಳು ಇನ್ನೂ ಬಹಳಷ್ಟಿವೆ. ಜೊತೆಗೆ ಬಹಳಷ್ಟು ಬರೆಯುವ ಕನಸಿದೆ. ನಾನು ಬರೆದದ್ದೆಲ್ಲವೂ ಅತೀ ಸುಂದರ ಅನ್ನುವಂತೆ ಇರದಿರಬಹುದು, ಆದರೆ ಮೋನಚುಗೊಳಿಸುವ ಪ್ರಯತ್ನ ಸದಾ ಜಾರಿಯಲ್ಲಿರುವುದು.

ಇತ್ತೀಚೆಗೆ ಆಂಗ್ಲ ಪದ್ಯಗಳನ್ನ ಕನ್ನಡಕ್ಕೆ ತರುವ ಗೀಳು ಹತ್ತಿದೆ.  ಇದನ್ನ ಜಾರಿಯಲ್ಲಿಡುವ ಆಸೆ ಮತ್ತು ಪ್ರಯತ್ನ. ಹಾಗೆಯೇ ಕಥೆಗಳನ್ನು ಸಹ ಬರೆಯುವ ಹಂಬಲವಿದೆ. ಇಷ್ಟೇ ಸಾಹಿತ್ಯದ ಬಗ್ಗೆ ನನ್ನ ಸಧ್ಯದ ಕನಸುಗಳು.

ಕನ್ನಡ  ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ  ಯಾರು ?

ನಾನು ಬೆಳೆದ ಪರಿಸರ ಹೆಚ್ಚಾಗಿ ಶರಣರ ಸಂಸ್ಕೃತಿ ಮತ್ತು ವೈಚಾರಿಕತೆಯ ಪ್ರಭಾವದಲ್ಲಾದ್ದರಿಂದ ಸಹಜವಾಗಿ ಅಕ್ಕನ, ಅಣ್ಣನ ವಚನಗಳು ನನ್ನನ್ನು ಚಿಂತನೆಗೆ ಹಚ್ಚುವವು ಹಾಗೂ ಹೆಚ್ಚು ಆಪ್ತ ಎನಿಸುವಂತಹವು.

ನನಗೆ ಕನ್ನಡದಲ್ಲಿ ಕಾಡುವ ಕವಿ ಕುವೆಂಪು.ಬೇಂದ್ರೆಯವರ ಪದ್ಯಗಳು . ಕಾರಂತರು, ಪೂರ್ಣಚಂದ್ರ ತೇಜಸ್ವಿ. ಆಂಗ್ಲದಲ್ಲಿ ಖಲೀಲ್ ಗಿಬ್ರಾನ್ ನ ಪದ್ಯಗಳು .

ಈಚೆಗೆ ಓದಿದ ಕೃತಿಗಳಾವವು?

ಇತ್ತೀಚೆಗೆ ಓದಿದ ಕೃತಿಗಳೆಂದರೆ: ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ,  ಇನ್ನೂ ಕವನ ಸಂಕಲನಗಳನ್ನ ಇಡಿಯಾಗಿ ಓದುವುದಕ್ಕಿಂತ ಬಿಡಿ ಬಿಡಿಯಾಗಿ ಓದುವುದೇ ಬಹಳ ಇಷ್ಟ. ಎಂ.ಆರ್ ಕಮಲ ಅವರ ನೆತ್ತರಲ್ಲಿ ನೆಂದ ಚಂದ್ರ, ಕುವೆಂಪುರವರ ಕೊಳಲು ಈ ಕವನ ಸಂಕಲನಗಳಿಂದ ಒಂದಷ್ಟು ಕವಿತೆಗಳನ್ನ ಆಗಾಗ ಓದುತ್ತಿದ್ದೇನೆ. ಓದುವ ಪಟ್ಟಿಯಲ್ಲಿ ಇನ್ನೂ ಬಹಳಷ್ಟು ಪುಸ್ತಕಗಳ ದೊಡ್ಡ ಪಟ್ಟಿಯೇ ಇದೆ.

ನಿಮಗೆ ಇಷ್ಟವಾದ ಕೆಲಸ ಯಾವುದು?

ಓದು ಬರಹಗಳೊಂದಿಗೆ, ನನಗೆ ಪತಿಯೊಂದಿಗೆ ಹೊಸ ಸ್ಥಳಗಳಿಗೆ ಭೇಟಿ ಕೊಡುವುದು, ಹಳೆಯ ವಾಸ್ತುಶಿಲ್ಪದ ಕಲಾಗುಡಿಗಳಿಗೆ ಹೋಗುವುದು, ಹಸಿರು, ಕಾಡು, ಬೆಟ್ಟ, ಝರಿಗಳಿಗೆ ಹೋಗಿ ಸುತ್ತಾಡಿ ಪ್ರಕೃತಿಯನ್ನ ಮನಸಾರೆ ಸವಿಯುವುದು. ಹಾಗೆಯೇ ನನ್ನ ಪುಟಾಣಿ ಮಗಳಿಗೆ ಪದ್ಯಗಳನ್ನ ಹೇಳಿಸುವುದು ಇಷ್ಟದ ಕೆಲಸದಲ್ಲೊಂದು!

 ನಿಮಗೆ ಇಷ್ಟವಾದ ಸ್ಥಳ ಯಾವುದು ?

ಇಂತಹದೇ ಎಂದು ಕಡ್ಡಿ ಕೊರೆದು ಹೇಳುವುದು ಕಷ್ಟ. ಎಲ್ಲಿ ಪ್ರೀತಿ ಅಂತಃಕರಣ ತುಂಬಿರುವುದೋ, ಎಲ್ಲಿ ಅಮ್ಮ ಇರುವಳೋ, ಎಲ್ಲಿ ಹಸಿರಿರುವುದೋ ಆ ಸ್ಥಳಗಳೆಲ್ಲವೂ ಇಷ್ಟವೇ!

ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ  ಸಿನಿಮಾ ಯಾವುದು?

ನನಗೆ ಬಹಳ ಇಷ್ಟವಾಗುವ ಸಿನಿಮಾಗಳು ಬಹಳಷ್ಟಿವೆ. ಡಾ.ರಾಜ್ ಕುಮಾರ್ ಅವರ ಎಲ್ಲ ಸಿನಿಮಾಗಳೂ ಇಷ್ಟವಾಗುತ್ತವೆ. ಅವರ ಸಿನಿಮಾಗಳಲ್ಲಿ ಮಾನವೀಯ ಮೌಲ್ಯಗಳು, ಪ್ರೀತಿ ಇಂತಹ ಅನೇಕ ಭಾವನಾತ್ಮಕ ಅಂಶಗಳೇ ಹೆಚ್ಚು. ಇತ್ತೀಚೆಗೆ ರಮೇಶ್ ಅರವಿಂದ್ ಅವರ ಶಿವಾಜಿ ಸುರತ್ಕಲ್ ಬಹಳಷ್ಟು ರೋಮಾಂಚನಕಾರಿ ತಿರುವುಗಳ ಚಿತ್ರ ಇಷ್ಟವಾಯ್ತು.

ನೀವು ಮರೆಯಲಾರದ‌ ಘಟನೆ‌ ಯಾವುದು?

ನನ್ನ ತಂದೆ ಅಕಾಲದಲ್ಲಿ ಇಹವನ್ನ ತ್ಯಜಿಸಿದ ಘಟನೆ ನಾನೆಂದಿಗೂ ಮರೆಯಲಾಗದ ಅತ್ಯಂತ ನೋವಿನ ಘಟನೆ. ಹಾಗೇ ನನ್ನ ಮಗಳು ಹುಟ್ಟಿದ ದಿನ ನಾನೆಂದಿಗೂ ಮರೆಯಲಾಗದ ಅತೀ ಸಂತಸದ ಕ್ಷಣ. ಹಾಗೆಯೇ ಶಾಲಾ ಕಾಲೇಜು ದಿನಗಳಲ್ಲಿ ಕ್ಲಾಸ್ ಬಿಟ್ಟು ಹೆಚ್ಚಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ಬಹಳಷ್ಟು ನೆನಪನಲ್ಲಿರುತ್ತದೆ.

******************************************************

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

8 thoughts on “

  1. ಚೈತ್ರಾ ಶಿವಯೋಗಿಮಠರವರ ಸಂದರ್ಶನ ಓದಿ ತುಂಬಾ ಖುಷಿ ಆಯ್ತು…..

    ಪ್ರಸ್ತುತ ಸಾಹಿತ್ಯ ಮತ್ತು ಸಮಾಜಕ್ಕೆ ಇಂತಹ ಮನಸುಗಳು ಬೇಕು…..

    ನೈಜ ಹಾಗೂ ಆಪ್ತವಾದ ಅಂತರಾಳ

    ಅವರು ಸಾಹಿತ್ಯದೊಂದಿಗೆ ಹಾಗೂ ಬದುಕಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದಾರೆ.‌…

    ಅದು ಎಲ್ಲರಿಗೂ ಸಾಧ್ಯವಾಗದು…

    ಸಂದರ್ಶನ ನೀಡಿದ ಹಾಗೂ ಸಂದರ್ಶನಕ್ಕೆ ಸೂಕ್ತ‌ ಪ್ರತಿಭೆಯನ್ನು ಆಯ್ದು ಪರಿಚಯಿಸಿದ ಲೇಖಕರಿಗೂ ಅಭಿನಂದನೆಗಳು…

    @ ಮೋಹನ್ ಗೌಡ ಹೆಗ್ರೆ

    1. ತಮ್ಮ ನುಡಿಗಳಿಗೆ ಅನಂತ ಧನ್ಯವಾದಗಳು ಸರ್

  2. ಸಂದರ್ಶನ ಚನ್ನಾಗಿ ಬಂದಿದೆ.ಇಬ್ಬರಿಗೂ ಅಭಿನಂದನೆಗಳು.

  3. ಸಂದರ್ಶನ. ಚೆನ್ನಾಗಿದೆ…ಅವರ ಸಮಾಜಮುಖಿ ಚಿಂತನೆ, ಯಾವುದೇ ಹಪಹಪಿಯಿಲ್ಲದ ಮನಸ್ಸು ಇಂದು ಅವಶ್ಯವಾಗಿದೆ. ಅವರ ಕವನಗಳಲ್ಲಿ ಯುವ ಫ್ರೆಶ್ನೆಸ್ ಇರುವುದನ್ನು ಗಮನಿಸಿದ್ದೇನೆ.
    ಅಭಿನಂದನೆಗಳು ಇಬ್ಬರಿಗೂ.

  4. ನಿನ್ನ ಒಳ ಮನದ ಮಾತುಗಳು ಸಹಜವಾಗಿ ಮೂಡಿಬಂದಿದೆ. ವಿದ್ಯಾರ್ಥಿ ದೆಸೆಯಿಂದಲೇ ನಿನ್ನಲ್ಲಿ ಸಾಹಿತ್ಯಾಭಿರುಚಿ ಇತ್ತು. ನೀನು ಒಂಭತ್ತನೇ ತರಗತಿಯಲ್ಲಿದ್ದಾಗ ನನ್ನ ಬಳಿ ಬಂದು, ನಗರ ಕೇಂದ್ರ ಗ್ರಂಥಾಲಯದಲ್ಲಿ ಸದಸ್ಯಳಾಗಲು ಏನು ಮಾಡಬೇಕು ಎಂದು ಕೇಳಿದ ನೆನಪು ನನಗೆ ಈಗಲೂ ಹಸಿರಾಗಿದೆ.

    1. ಧನ್ಯವಾದಗಳು ಮ್ಯಾಮ್ ಎಲ್ಲಕ್ಕೂ ನಿಮ್ಮಂತಹ ಶಿಕ್ಷಕರೆ ಪ್ರೇರಣೆ

Leave a Reply

Back To Top