ಅಂಕಣ ಸಂಗಾತಿ=92
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಟೈಪಿಂಗ್ ಕಲಿಯಲು ಹೊರಟ ಎರಡನೆ ಮಗಳು

ಅಮ್ಮನ ಈ ಮಾತನ್ನು ಕೇಳಿದ ಸುಮತಿ ಹೇಳಿದಳು….” ನನಗೂ ಅವಳನ್ನು ಓದಿಸಬೇಕು ಅವಳ ಇಚ್ಛೆಯಂತೆ ಟೈಪಿಂಗ್ ಗೆ ಕಳುಹಿಸಬೇಕು ಎನ್ನುವ ಬಯಕೆ ಇದೆ…. ಆದರೆ ನನಗೆ ಬರುವ ಸಂಬಳದಲ್ಲಿ ಮೂವರು ಮಕ್ಕಳನ್ನು ಸಾಕುವುದು ಹಾಗೂ ವಿದ್ಯಾಭ್ಯಾಸ ಮಾಡಿಸುವುದು ಕನಸಿನ ಮಾತು…. ಇನ್ನು ಬಸ್ ಚಾರ್ಜ್ ಕೊಟ್ಟು ಟೈಪಿಂಗ್ ಗೆ ಇವಳನ್ನು ನಾನು ಹೇಗೆ ಕಳುಹಿಸಲಿ ಅಮ್ಮ”….ಎಂದಳು. ಸುಮತಿಯ ಮಾತನ್ನು ಕೇಳಿದ ಅಮ್ಮ ಒಂದು ನಿಮಿಷ ಸುಮ್ಮನೆ ನಿಂತರು. ನಂತರ ಸಮತಿಯ ಎರಡನೇ ಮಗಳನ್ನು ನೋಡಿ ಟೈಪಿಂಗ್ ಕಲಿಯಲು ತಿಂಗಳಿಗೆ ಎಷ್ಟು ಶುಲ್ಕ ಆಗುತ್ತದೆ ಹಾಗೂ ಒಂದು ತಿಂಗಳಿಗೆ ಬಸ್ ಚಾರ್ಜ್ ಎಷ್ಟು ಆಗಬಹುದು ಎನ್ನುವುದನ್ನು ನನಗೆ ತಿಳಿಸು. ಆ ಹಣವನ್ನು ಪ್ರತಿ ತಿಂಗಳು ಇಲ್ಲಿ ಬಂದು ನನ್ನಿಂದ ಪಡೆದುಕೋ ಎಂದರು. ಅಮ್ಮನ ಈ ಮಾತನ್ನು ಕೇಳಿದ ಸುಮತಿಯ ಮಗಳ ಕಣ್ಣುಗಳು ಅರಳಿದವು. ಖುಷಿಯಿಂದ ತನ್ನ ತಾಯಿಯ ಹೆಗಲನ್ನು ಗಟ್ಟಿಯಾಗಿ ಹಿಡಿದುಕೊಂಡಳು. ಅಮ್ಮನನ್ನು ನೋಡಿ ಸುಮತಿ ಕೈಮುಗಿದು…. “ನಿಮ್ಮಿಂದ ನನ್ನ ಮಗಳು ಟೈಪಿಂಗ್ ಕಲಿಯುವ ಭಾಗ್ಯ ದೊರೆಯಿತು…. ನಿಮ್ಮ ಈ ಉಪಕಾರವನ್ನು ನಾನು ಹಾಗೂ ನನ್ನ ಮಗಳು ಎಂದಿಗೂ ಮರೆಯುವುದಿಲ್ಲ…. ಧನ್ಯವಾದಗಳು ಅಮ್ಮ”…. ಎಂದಳು. ಅವಳ ಮಾತನ್ನು ಕೇಳಿದ ಅಮ್ಮ ನಸು ನಗುತ್ತಾ, ….”ಅಯ್ಯೋ ಹಾಗೇನು ಇಲ್ಲ ಸುಮತಿ… ನಿನ್ನ ಮಗಳು ಓದಬೇಕೆಂದು ಬಯಸಿದಳು…. ಚುರುಕು ಹಾಗೂ ಬುದ್ಧಿವಂತ ಮಕ್ಕಳು ವಿದ್ಯಾಭ್ಯಾಸವಿಲ್ಲದೆ ಹಾಗೆ ಉಳಿಯುವುದು ಸರಿಯಲ್ಲ…. ಆದಷ್ಟು ಬೇಗ ವಿಚಾರಿಸಿ ನನಗೆ ತಿಳಿಸಿದರೆ ಅದಕ್ಕೆ ಬೇಕಾದ ಹಣವನ್ನು ಕೊಡಲು ನನಗೆ ಸಾಧ್ಯವಾಗುತ್ತದೆ”… ಎಂದರು. ಹಾಗೆಯೇ ಆಗಲಿ ಅಮ್ಮ…. ಆದಷ್ಟು ಬೇಗ ವಿಚಾರಿಸಿ ಮಗಳನ್ನು ಇಲ್ಲಿಗೆ ಕಳುಹಿಸುತ್ತೇನೆ”…. ಎಂದು ಹೇಳಿ ಅಮ್ಮನಿಗೆ ಕೈ ಮುಗಿದು, ಸರ್ವೇಶ್ವರನನ್ನು ಮನದಲ್ಲಿ ಧ್ಯಾನಿಸುತ್ತಾ, ತಾಯಿ ಮಗಳು ಇಬ್ಬರೂ ಸಂತೋಷದಿಂದ ಅಲ್ಲಿಂದ ಮನೆಯ ಕಡೆಗೆ ನಡೆದರು.
ಅದರಂತೆ ಮಗಳು ಜೋರಾಗಿ ಮಳೆ ಬರುತ್ತಿದ್ದರೂ ಲೆಕ್ಕಿಸದೆ ಬೆಳಗ್ಗೆ ತನ್ನ ತಂಗಿಯ ಜೊತೆ ಹೊರಟಳು. ಬಸ್ಸು ತನ್ನ ತಂಗಿಯ ಶಾಲೆಯ ಬಳಿ ನಿಂತಾಗ ತಂಗಿಯ ಜೊತೆ ತಾನೂ ಇಳಿದಳು. ಟೈಪಿಂಗ್ ಇನ್ಸ್ಟಿಟ್ಯೂಟ್ ತಂಗಿಯ ಶಾಲೆಯಿಂದ ಇನ್ನೂ ಸ್ವಲ್ಪ ದೂರವಿತ್ತು. ಹಾಗಾಗಿ ತಂಗಿಯನ್ನು ಶಾಲೆಯ ಬಳಿ ಬಿಟ್ಟು ಇನ್ಸ್ಟಿಟ್ಯೂಟ್ ಕಡೆಗೆ ನಡೆದಳು. ಅಲ್ಲಿ ಹೋಗಿ ಶಿಕ್ಷಕರಲ್ಲಿ ವಿಚಾರಿಸಿದಳು. ಶಿಕ್ಷಕರು ತಿಂಗಳಿಗೆ ಇಂತಿಷ್ಟು ಶುಲ್ಕವಾಗುತ್ತದೆ ಎಂದು ಒಂದು ಕಾಗದದಲ್ಲಿ ಬರೆದುಕೊಟ್ಟರು. ಶಿಕ್ಷಕರಿಗೆ ಧನ್ಯವಾದ ತಿಳಿಸಿ ಅಲ್ಲಿಂದ ನೇರವಾಗಿ ಸಕಲೇಶಪುರದ ಬಸ್ ನಿಲ್ದಾಣಕ್ಕೆ ಬಂದಳು. ಅಲ್ಲಿನ ಟಿಸಿಯನ್ನು ಕಂಡು ತಿಂಗಳಿಗೆ ಅಂದಾಜಿಗೆ ಬಸ್ ಚಾರ್ಜ್ ಎಷ್ಟು ಆಗಬಹುದು ಎಂಬುದನ್ನು ವಿಚಾರಿಸಿ ಅರಿತುಕೊಂಡಳು. ಅದಾಗಲೇ ಅಕ್ಕಬಾವ ಮಗುವಿನೊಂದಿಗೆ ದೂರದ ಊರಿನಿಂದ ಸಕಲೇಶಪುರಕ್ಕೆ ಬಂದು ಒಂದು ಬಾಡಿಗೆ ಮನೆಯನ್ನು ಪಡೆದು ವಾಸ್ತವ್ಯ ಹೂಡಿದ್ದರು. ಅವರ ಮನೆಯ ಕಡೆಗೆ ಹೊರಟಳು. ಅಕ್ಕನ ಮನೆಗೆ ಬಂದು ಎಲ್ಲಾ ವಿವರವನ್ನು ತಿಳಿಸಿದರು. ಇದನ್ನೆಲ್ಲಾ ಕೇಳಿದ ಬಾವ ಬಸ್ ಪಾಸ್ ಮಾಡಿಸಲು ಏನಾದರೂ ವ್ಯವಸ್ಥೆ ಆಗಬಹುದೇ ಎಂದು ಸ್ನೇಹಿತರನ್ನು ವಿಚಾರಿಸುವುದಾಗಿ ತಿಳಿಸಿದರು. ಬಸ್ ಪಾಸ್ ಮಾಡಿಸಿದರೆ ಬಸ್ ಚಾರ್ಜ್ ನ ಹಣವನ್ನು ಉಳಿಸಬಹುದಾಗಿತ್ತು ಹಾಗಾಗಿ ವಿಚಾರಿಸಿ ತಿಳಿಸುವುದಾಗಿ ಬಾವ ಹೇಳಿದರು. ಮಧ್ಯಾಹ್ನದ ಊಟ ಮುಗಿಸಿ ಅಕ್ಕ ಬಾವನಿಗೆ ತಿಳಿಸಿ,ಅಕ್ಕನ ಮಗುವನ್ನು ಎತ್ತಿಕೊಂಡು ಮುದ್ದಾಡಿ, ಸಾಯಂಕಾಲ ಮತ್ತೆ ಸಕಲೇಶಪುರದ ಕಡೆಗೆ ಪಯಣ ಬೆಳೆಸಿದಳು. ಸಾಯಂಕಾಲ 4:30ರ ಹೊತ್ತಿಗೆ ತಂಗಿ ಶಾಲೆ ಮುಗಿಸಿ ಬಸ್ ನಿಲ್ದಾಣಕ್ಕೆ ಬರುತ್ತಾಳೆ. ಇಬ್ಬರೂ ಜೊತೆಯಾಗಿ ಮನೆಗೆ ಹೋಗಬಹುದು ಎಂದು ಅಕ್ಕ ಬಾವನಿಗೆ ತಿಳಿಸಿ, ಅಲ್ಲಿಂದ ಹೊರಟಳು.
ಅಲ್ಲಿಂದ ಬಸ್ ನಿಲ್ದಾಣಕ್ಕೆ ಬಂದು ತಂಗಿಗಾಗಿ ಕಾಯುತ್ತಿದ್ದಳು ಸ್ವಲ್ಪ ಹೊತ್ತಿನಲ್ಲೇ ತಂಗಿಯೂ ಬಂದಳು. 5:00ಗೆ ಬರುತ್ತಿದ್ದ ಬಸ್ ಅಂದು ಸ್ವಲ್ಪ ತಡವಾಯಿತು. ಮಳೆಗಾಲವಾದ್ದರಿಂದ ಇದು ಅಲ್ಲಿ ಸಹಜವಾಗಿತ್ತು. ಬಸ್ ಬಂದ ಕೂಡಲೇ ಜನರ ನೂಕುನುಗ್ಗಲಿನ ನಡುವೆ ಹರಸಾಹಸ ಪಟ್ಟು ಅಕ್ಕ-ತಂಗಿ ಇಬ್ಬರೂ ಬಸ್ ಹತ್ತಿ ಹೇಗೋ ಸೀಟ್ ಗಿಟ್ಟಿಸಿ ಕುಳಿತುಕೊಂಡರು. ದುರ್ಗಮವಾದ ರಸ್ತೆಯಲ್ಲಿ ಬಸ್ಸು ಹಾದು ಹೋಗುವಾಗ ತಿರುವುಗಳಲ್ಲಿ ವಾಲುತ್ತಾ ಕುಲುಕುತ್ತಾ ಸಾಗುವ ಬಸ್ನಲ್ಲಿ ಕುಳಿತುಕೊಳ್ಳುವುದು ಎಂದರೆ ಇಬ್ಬರಿಗೂ ಮೋಜಿನ ಸಂಗತಿ. ಹಾಗೂ ಹೀಗೂ ಬಸ್ ತಮ್ಮ ನಿಲ್ದಾಣಕ್ಕೆ ಬಂದ ಕೂಡಲೇ ಇಬ್ಬರೂ ಬಸ್ಸಿನಿಂದ ಇಳಿದು ಮಳೆಯಲ್ಲಿ ಕೊಡೆಯನ್ನು ಹಿಡಿದು ಮಣ್ಣಿನ ಕಚ್ಚಾ ರಸ್ತೆಯಲ್ಲಿ ನಡೆದರು. ಅಲ್ಲಲ್ಲಿ ಜಾರಿ ಬೀಳುವ ಪರಿಸ್ಥಿತಿ ಇದ್ದುದರಿಂದ ಒಬ್ಬರನ್ನು ಒಬ್ಬರು ಬಿಗಿಯಾಗಿ ಹಿಡಿದುಕೊಂಡು ನಡೆದರು. ದಾರಿಯ ಬದಿಯಲ್ಲಿ ಹರಿಯುವ ನೀರಿನಲ್ಲಿ ಹೆಜ್ಜೆ ಹಾಕಿ ನಡೆಯುವುದಿದ್ದರೆ ಇಬ್ಬರಿಗೂ ಸಂತಸದ ಸಂಗತಿ. ಆಟವಾಡುತ್ತಾ ಮಳೆಯಲ್ಲಿ ನೆನೆಯುತ್ತಾ ಮನೆ ತಲುಪಿದರು. ನೆನೆದು ಬಂದ ಮಕ್ಕಳಿಬ್ಬರನ್ನೂ ಕಂಡು ಸುಮತಿ ತರಾಟೆಗೆ ತೆಗೆದುಕೊಂಡಳು….”ಇಬ್ಬರಿಗೂ ಮಳೆಯಲ್ಲಿ ನೆನೆದು ಬರುವುದೆಂದರೆ ಮೋಜಿನ ಸಂಗತಿಯಲ್ಲವೇ? ಶೀತ ನೆಗಡಿ
ಜ್ವರ ಬಂದು ಕೊನೆಗೆ ತೊಂದರೆ ಪಡುವುದು ನೀವೇ ಅಲ್ಲವೇ?… ಸ್ವಲ್ಪವಾದರೂ ಬುದ್ಧಿ ಇಲ್ಲ ಇಬ್ಬರಿಗೂ”…. ಎಂದು ಹೇಳುತ್ತಾ ಇಬ್ಬರ ತಲೆಯ ಮೇಲು ಒಂದೊಂದು ಮೊಟಕಿ, ಟವೆಲ್ ತೆಗೆದುಕೊಂಡು ಇಬ್ಬರ ತಲೆಯನ್ನು ಒರೆಸಿದಳು. ಎರಡನೇ ಮಗಳನ್ನು ನೋಡಿ…” ಹೋದ ವಿಷಯ ಏನಾಯ್ತು?….ಎಂದು ಕೇಳಿದಾಗ ತಂಗಿಯ ಬ್ಯಾಗ್ ತೆರೆದು ಅದರಲ್ಲಿ ಇಟ್ಟಿದ್ದ ಕಾಗದವನ್ನು ಅಮ್ಮನ ಕೈಗೆ ಕೊಟ್ಟಳು. ಸುಮತಿ ಅದನ್ನು ನೋಡಿ…._ನಾಳೆ ಬೆಳಗ್ಗೆ ಹೋಗಿ ಅಮ್ಮನನ್ನು ಕಂಡು ಇದನ್ನು ತೋರಿಸು”… ಎಂದಳು. ಸರಿ ಎನ್ನುವಂತೆ ತಲೆ ಆಡಿಸಿ ಅಮ್ಮ ಕೊಟ್ಟ ಬಿಸಿ ಬಿಸಿ ಫಲಹಾರವನ್ನು ಅಕ್ಕ-ತಂಗಿಯರು ಮೂವರೂ ತಿಂದರು.
ಮಾರನೇ ದಿನ ಎರಡನೇ ಮಗಳು ಇಬ್ಬರೂ ತಂಗಿಯರ ಜೊತೆಗೆ ಹೊರಟಳು. ಕೊನೆಯ ತಂಗಿಯನ್ನು ಶಾಲೆಯಲ್ಲಿ ಬಿಟ್ಟು, ಇನ್ನೊಬ್ಬ ತಂಗಿಯನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಬಂಗಲೆಯ ಕಡೆಗೆ ನಡೆದಳು. ಅಲ್ಲಿ ಹೋಗಿ ಸ್ವಲ್ಪ ಹೊತ್ತು ಕಾಯ್ದು ನಿಂತ ನಂತರ ಅಮ್ಮ ಹೊರಗೆ ಬಂದಾಗ ಅಮ್ಮನನ್ನು ಕಂಡು ತಾನು ತಂದಿದ್ದ ಕಾಗದವನ್ನು ಅವರಿಗೆ ತೋರಿಸಿದಳು. ಅವರು ಖುಷಿಯಿಂದ ಆ ಹುಡುಗಿಯ ತಲೆ ಸವರಿ…” ಒಂದು ನಿಮಿಷ ಇಲ್ಲೇ ಇರು”… ಎಂದು ಹೇಳಿ ಒಳಗೆ ಹೋಗಿ ತಕ್ಷಣವೇ ಹೊರಗೆ ಬಂದರು. ಒಂದು ಹಿಡಿ ನೋಟನ್ನು ಅವಳ ಕೈಗಿತ್ತು,…” ನೀನು ಈ ಹಣದಿಂದ ನಿನ್ನ ಇಚ್ಛೆಯಂತೆ ಟೈಪಿಂಗ್ ಕಲಿಯಬಹುದು…. ಹಾಗೂ ನಿನ್ನ ಬಸ್ ಪ್ರಯಾಣಕ್ಕೆ ಬೇಕಾದ ಹಣವೂ ಇದರಲ್ಲಿದೆ”….ಎಂದರು. ತನ್ನ ಟೈಪಿಂಗ್ ಅಭ್ಯಾಸ ಮಾಡುವ ಇಚ್ಚೆಗೆ ನೀರರೆದು ಪೋಷಿಸುತ್ತಿರುವ ಅಮ್ಮನ ಗುಣವನ್ನು ಕಂಡು ಆ ಹುಡುಗಿಯ ಬಾಯಿಂದ ಮಾತೇ ಹೊರಡಲಿಲ್ಲ. ಕಣ್ಣುಗಳು ತುಂಬಿಕೊಂಡವು. ಗದ್ಗದಿತಳಾದಳು. ಅಮ್ಮನಿಗೆ ಕೈಮುಗಿದಳು. ಅವಳ ಭಾವಾವೇಶವನ್ನು ಅರಿತ ಅಮ್ಮ ಅವಳ ತಲೆ ಸವರಿ…” ಮಗ….ಚೆನ್ನಾಗಿ ಅಭ್ಯಾಸ ಮಾಡು… ನಾಳಿನ ದಿನ ಅಮ್ಮನಿಗೆ ನೆರಳಾಗು… ನಿನ್ನ ಅಮ್ಮ ಸುಮತಿ ಬಹಳ ಒಳ್ಳೆಯವಳು ಹಾಗೂ ನಿಮ್ಮನ್ನು ಕಷ್ಟಪಟ್ಟು ಸಾಕಿ ಸಲಹಿದ್ದಾಳೆ…. ನಿನ್ನ ವ್ಯಾಸಂಗ ಮುಗಿಸಿ ಒಂದು ಒಳ್ಳೆಯ ಕೆಲಸವನ್ನು ಪಡೆದು ಮುಂದಿನ ವರ್ಷಗಳಲ್ಲಿ ಅಮ್ಮನಿಗೆ ನೆರವಾಗು”…. ಎಂದು ಆಶೀರ್ವದಿಸಿ ಅವಳನ್ನು ಕಳುಹಿಸಿದರು. ಬಂಗಲೆಯಿಂದ ಹೊರಟ ಆ ಹುಡುಗಿಯ ಸಂತೋಷಕ್ಕೆ ಎಣೆಯೇ ಇರಲಿಲ್ಲ. ತನ್ನ ವಿದ್ಯಾಭ್ಯಾಸ ಎಲ್ಲಿ ಅರ್ಧದಲ್ಲಿಯೇ ನಿಲ್ಲುತ್ತದೆಯೋ ಎನ್ನುವ ಆತಂಕ ಇಂದು ಅವಳಿಂದ ದೂರವಾಗಿತ್ತು. ತಾನು ಓದಲು ಅಮ್ಮ ಖಂಡಿತ ನೆರವಾಗುತ್ತಾರೆ ಎನ್ನುವ ಭರವಸೆ ಆ ಪುಟ್ಟ ಮನಸ್ಸಿನಲ್ಲಿ ನೆಲೆಯೂರಿತು. ಖುಷಿಯಿಂದ ದಾರಿಯುದ್ದಕ್ಕೂ ಹಾಡನ್ನು ಗುನುಗುತ್ತಾ ಅಕ್ಕಪಕ್ಕದಲ್ಲಿ ಕಂಡ ಕಾಡುಗಿಡಗಳೊಂದಿಗೆ ಮಾತನಾಡುತ್ತಾ, ರಸ್ತೆಯ ಇಕ್ಕೆಲಗಳ ಗಿಡಮರಗಳ ಸೌಂದರ್ಯವನ್ನು ಆಸ್ವಾದಿಸುತ್ತಾ, ಹಕ್ಕಿಗಳ ಕಲರವವನ್ನು ಆಲಿಸುತ್ತಾ ಮನೆ ತಲುಪಿದ್ದೇ ಅವಳಿಗೆ ತಿಳಿಯಲಿಲ್ಲ.




