ಕಲ್ಯಾಣ ಕರ್ನಾಟಕವೆಂಬ ಬಹುತ್ವದ ಮಹಾ ಬಯಲಲಿ

ಲೇಖನ

ಕಲ್ಯಾಣ ಕರ್ನಾಟಕವೆಂಬ

ಬಹುತ್ವದ ಮಹಾ ಬಯಲಲಿ ನಿಂತು

Kalyan Karnataka Horata Samiti Workers Detained For Hoisting New Karnataka  Flag, Seeking Separate Statehood | India.com

ಮಲ್ಲಿಕಾರ್ಜುನ ಕಡಕೋಳ 

ಕಳೆದವರ್ಷದವರೆಗೆ ಹೈದ್ರಾಬಾದ್ ಕರ್ನಾಟಕವೆಂದು ಕರೆಯಲಾಗುತ್ತಿದ್ದ  ಕಲಬುರಗಿ ನಾಡನ್ನು ೧೭.೦೯.೨೦೧೯ ರಂದು ಮುಖ್ಯಮಂತ್ರಿ ಯಡಿಯೂರಪ್ಪ  “ಕಲ್ಯಾಣ ಕರ್ನಾಟಕ” ಎಂದು ನಾಮಕರಣ ಮಾಡಿದರು. ಆ ಮೂಲಕ  ಹೈದ್ರಾಬಾದ್ ಕರ್ನಾಟಕ ಕನ್ನಡನಾಡ ಪ್ರಜ್ಞೆಗೆ ಹೊಸವಿನ್ಯಾಸದ ತಾಜಾ ತಾಜಾ ಖುಷಿ ದೊರಕಿದಂತಾಗಿದೆ. ಇದು ಸಾಂಸ್ಕೃತಿಕವಾಗಿ ವಿನೂತನ ಉಮೇದು. ಅಂದು ಕಳಚೂರಿ ಬಿಜ್ಜಳನ ಕಲ್ಯಾಣ ರಾಜ್ಯದ ಮಂತ್ರಿಯಾಗಿದ್ದ ಬಸವಣ್ಣ, ಪ್ರಭುತ್ವದ ಎಲ್ಲೆಮೀರಿ ವಚನಗಳ ಮೂಲಕ ಜನಚಳವಳಿ ರೂಪಿಸಿದ್ದು ಜನಕಲ್ಯಾಣದ ಕಳಕಳಿಯ ದ್ಯೋತಕ. ಜನರಿಗೆ ಮತ್ತೆ ಅಂದಿನ ಕಲ್ಯಾಣದ  ಕನಸುಗಳನ್ನು ಇಂದು ಕಾಣುವ ತವಕ.

೧೫.೦೮.೧೯೪೭ ರಂದು ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಕನ್ನಡ ನೆಲದ ಅಂದಿನ ಕಲಬುರ್ಗಿ, ಬೀದರ, ರಾಯಚೂರು ಈ ಮೂರು ಜಿಲ್ಲೆಗಳು, ಮರಾಠಿಯ ಐದು, ತೆಲಂಗಾಣದ ಎಂಟು ಜಿಲ್ಲೆಗಳು ಅಂದಿನ ಮುಸ್ಲಿಂ ದೊರೆ ಮೀರ್ ಉಸ್ಮಾನ್ ಅಲಿಖಾನ್ ಬಹದ್ದೂರ್  (ಇದು ನಿಜಾಮನ ಪೂರ್ಣ ಹೆಸರು)  ಆಡಳಿತದಲ್ಲೇ ಇದ್ದವು. ಹತ್ತು ಹಲವು ಹೋರಾಟಗಳ ಫಲವಾಗಿ ೧೭.೦೯.೧೯೪೮ ರಂದು ಭಾರತದ ಒಕ್ಕೂಟಕ್ಕೆ ಇವು ಸೇರಿದವು. ಒಂದಲ್ಲ, ಎರಡಲ್ಲ ಅಜಮಾಸು ಆರುನೂರು ವರ್ಷಗಳ ಸುದೀರ್ಘ ಕಾಲದ ದೇಶಿಯ ಪರಕೀಯತೆಯಲ್ಲಿದ್ದುದು ಹೈದ್ರಾಬಾದ ಕರ್ನಾಟಕ. ಸಹಜವಾಗಿ ಉರ್ದು, ದಖನಿ, ಮೋಡಿ, ಮರಾಠಿ, ತೆಲುಗು, ಕನ್ನಡಗಳ ಬಹುಭಾಷಾ ಸೌಹಾರ್ದತೆ, ಸಾಮಾಜಿಕ ಸೌಂದರ್ಯ ಸಂಸ್ಕೃತಿಯ ಚಾರಿತ್ರಿಕ ನೆಲ ಇದು.

Kalyan Karnataka - Photos | Facebook

ಇವತ್ತಿಗೂ ದಖನಿ ಛಾಯೆಯ ಉರ್ದು, ಮರಾಠಿ ಮೋಡಿಯ ಹಿಂದಿ ಭಾಷಾ ಸಂಸ್ಕೃತಿಗಳು  ಇಲ್ಲಿನ ಕನ್ನಡದ ಬದುಕಿನ ತುಂಬೆಲ್ಲ ಹಾಸು ಹೊಕ್ಕಾಗಿವೆ.  ಘಮ ಘಮಿಸುವ ಸೂಜಿಮಲ್ಲಿಗೆಯ ಹೂವರಳಿದಂತಹ ಖಮ್ಮನೆಯ ಉರ್ದು ಮಾತಾಡುವ ಮುಸ್ಲಿಮೇತರ ಅನೇಕರು ಇಲ್ಲಿರುವುದು ಸರ್ವೇಸಾಮಾನ್ಯ. ಅದೇ ನಮ್ಮ ಬೀದರ ಕನ್ನಡದ ರಾಗಮಾಧುರ್ಯವೇ ತುಸು ಭಿನ್ನ. ಅದನ್ನವರು ಎನ್ಕಿ, ತ್ವಾಡೇ ಫರಕ್ ಅಂದಾರು… ” ಯಾನ ಮಾಡ್ಲತ್ತರಿ… ಹೊಂಟೀರಿ… ನೀ ಹೋರಿ… ನಾ.. ಬರ್ತಾ…”  ಹೀಗೆ ಅದರ ದೇಸಿಯತೆಯ ಜೀವಧ್ವನಿ. ಕಲಬುರ್ಗಿಯದು ಹಾಂಗಲ್ಲ… ಯವ್ವಾ, ಯಪ್ಪಾ, ಯಣ್ಣಾ, ಯಕ್ಕಾ ಎನ್ನುವ ಮೊಗಲಾಯಿಯ ಜವಾರಿ ಬನಿ. 

ನಿಜಾಮನ ಕಾಲದಲ್ಲಿ ಭಾಳ ಸಂಖ್ಯೆಯ ಸೂಫಿ – ಸಂತರು, ತತ್ವಪದಗಳ ಅನುಭಾವಿಗಳು ಮೈ ಮನಸು ಬಿಚ್ಚಿ ಕನ್ನಡದಲ್ಲಿ ಮಹಾಕಾವ್ಯಗಳನ್ನೇ ರಚಿಸಿದ್ದಾರೆ. ಹಾಗೆಂದು  ಆಳರಸ ನಿಜಾಮ ಇವರಿಗೆ ಪ್ರೇರಕ, ಪ್ರೋತ್ಸಾಹಕನೇನು ಆಗಿರಲಿಲ್ಲ.‌ ಆದರೆ  ಸೂಫಿ, ಅವಧೂತ, ಆರೂಢ ಕವಿಗಳಿಗೆ ಯಾವುದೇ ಘೋಷಿತ ಇಲ್ಲವೇ ಅಘೋಷಿತ ನಿರ್ಬಂಧಗಳನ್ನು ಆತ ವಿಧಿಸಿರಲಿಲ್ಲ ಎಂಬುದು ಮುಖ್ಯ.

ಜಂಗಮನಾಗಬೇಕಾದರೆ /

ಮನಲಿಂಗ ಮಾಡಿಕೊಂಡಿರಬೇಕು//

ಅಂತ ಚನ್ನೂರ ಜಲಾಲ ಸಾಹೇಬ ಹಾಡಿದರೆ

ಫಕೀರನಾಗಬೇಕಾದರೆ/

ಮನಃ ಧಿಕ್ಕಾರ ಮಾಡಿಕೊಂಡಿರಬೇಕು//

ಇದು ಕಡಕೋಳ ಮಡಿವಾಳಪ್ಪನವರು ಜಲಾಲ ಸಾಹೇಬರಿಗೆ ಕೊಡುವ ಉತ್ತರ. ಹೀಗೆ ಇಬ್ಬರದು ಬೇರೆ ಬೇರೆ ಮತ ಧರ್ಮಗಳ ಒಂದೇ ಗುರುಮಾರ್ಗ ಪಂಥದ ಸೌಹಾರ್ದಯುತ, ಸಾಂಸ್ಕೃತಿಕ ಸಂವಾದದ ಸಣ್ಣದೊಂದು ಝಲಕ್. ಇಂಥ ನೂರಾರು ನಿದರ್ಶನಗಳು ಇಲ್ಲಿವೆ. 

ಸಬ್  ಕಹತೆ ಹೈ ಈಶ್ವರ ಅಲ್ಲಾ ಅಲ್ಲಾ/

ಇದರ ಒಳಮರ್ಮ ಯಾರಿಗೂ ತಿಳಿದಿಲ್ಲಾ//

ಹೀಗೆ ಉರ್ದು ಕನ್ನಡ ಮಿಶ್ರಿತ ಸಂಕರ ಪ್ರಜ್ಞೆಯಿಂದ ರೂಪುಗೊಂಡ ಅನೇಕ ತತ್ವಪದಗಳ ಭಾವ ಮತ್ತು ಭಾಷೆಯಲ್ಲಿ ಸಹೃದಯ ಸಮನ್ವಯತೆ ಸಾಧಿಸಿರುವುದನ್ನು ಗುರುತಿಸಬಹುದು .

ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರ ಧರ್ಮಮುಮಂ/

ಪರ ವಿಚಾರಮುಮಂ//

ಒಂದೂವರೆ ಸಾವಿರ ವರ್ಷಗಳ ಹಿಂದೆಯೇ ಕವಿರಾಜಮಾರ್ಗಕಾರನು ಹೇಳಿದ ಪರರ ಧರ್ಮ ಮತ್ತು ಪರರ ವಿಚಾರಗಳನ್ನು ಗೌರವಿಸುವುದೇ, ಮನುಷ್ಯ ಪ್ರೀತಿಯ ನಿಜದ ನೆಲೆಯ ಸಂಪತ್ತು. ನೃಪತುಂಗ ನೆಲದ ಇಂತಹ ಬೀಜದಮಾತುಗಳು ಇಡೀ ದೇಶಕ್ಕೇ ಇವತ್ತು ಹೆಚ್ಚು ಹೆಚ್ಚು ಅನ್ವಯಿಸಿ ಅನುಷ್ಠಾನಕ್ಕೆ ಬರಬೇಕಾಗಿದೆ. ಆಗ ಅದನ್ನು ದುರಿತ ನಿವಾರಕ ಕಾಲವೆಂದು ಕರೆಯಬಹುದು.

ಬುದ್ಧಧರ್ಮದ ‘ಸಾರ’ ಸಾರುವ ಅಶೋಕ ಚಕ್ರವರ್ತಿಯ ‘ದೇವನಾಂಪ್ರಿಯ’ ಕುರುಹು ದೊರಕಿದ ಸನ್ನತಿ, ಘಟಿಕಾಲಯಗಳ ನಾಗಾವಿ, ಬಸವ ಅಲ್ಲಮರ ವಚನ ಚಳವಳಿಯ ಶಕ್ತಿಕೇಂದ್ರ,  ಸಂತ ಕಥನದ ಗೇಸುದರಾಜ್ ಬಂದೇನವಾಜ್, ಗಾಣಗಾಪುರದ ದತ್ತಾವಧೂತ,  ಮಹಾದಾಸೋಹಿ ಶರಣಬಸವೇಶ್ವರ,  ತತ್ವಪದಗಳ ಹರಿಕಾರ ಕಡಕೋಳ ಮಡಿವಾಳಪ್ಪ ಮತ್ತು ಅವರ ಅನೇಕ ಮಂದಿ ತತ್ವಪದಕಾರ ಶಿಸುಮಕ್ಕಳು, ಊರೂರಿಗೂ ದೊರಕುವರು.  

ಇಂತಹ ನೂರಾರು ಮಂದಿ ಹಿಂದೂ ಮುಸ್ಲಿಂ ಸೂಫಿ ಸಂತರು ಬಾಳಿ ಬದುಕಿದ ಕಲ್ಯಾಣ ಕರ್ನಾಟಕವು ಕನ್ನಡ ಸಂಸ್ಕೃತಿ ಮತ್ತು  ಸೌಹಾರ್ದತೆಯ ಸಾಕ್ಷಿಪ್ರಜ್ಞೆಯೇ ಆಗಿದೆ. ಇವತ್ತಿಗೂ ಸಾವಳಗಿಯ ಶಿವಲಿಂಗೇಶ್ವರ ಜಾತ್ರೆಯಲ್ಲಿ ಗದ್ದುಗೆಗೆ ಮುಸ್ಲಿಂ ಧರ್ಮದ ಹಸಿರು ಗಲ್ಲೀಫದ ಗೌರವ ಸಲ್ಲುತ್ತದೆ. ಅಲ್ಲಿನ ಸ್ವಾಮೀಜಿಯವರು ಸುತ್ತುವ ರುಮಾಲು ಹಸಿರು. ಲಾಂಛನಕ್ಕೆ ಶರಣೆಂಬೆನೆಂಬ ಅಂತಃಕರಣದ ಅನುಭಾವ ಪರಂಪರೆ ಅದು.

ಇಂದಿಗೂ ಕಲಬುರ್ಗಿಯ ಬಂದೇನವಾಜ ಉರುಸಿನಲ್ಲಿ, ನಿತ್ಯದ ದರ್ಗಾದ  ದರುಶನದಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ಹಿಂದೂಗಳ ಸಕ್ಕರೆ ಲೋಬಾನದ ಅಕ್ಕರೆ. ಇದು ನಿಸರ್ಗ ಸುಭಗ ಕೋಮು ಸೌಹಾರ್ದತೆಯ ಕುರುಹು. ಆದರೆ ಇತ್ತೀಚೆಗೆ  ಕೆಲವು ಮತಾಂಧರಿಂದ ಚುನಾವಣಾ ರಾಜಕಾರಣದ ಕೊಳಕು ಹುನ್ನಾರಗಳು ಸೈತಾನ ನೃತ್ಯದ ದೆವ್ವಗಾಳಿಗಳಾಗಿ ರಕ್ಕಸತನದಿಂದ ಬೀಸುತ್ತಿರುತ್ತವೆ.

ಶತಮಾನಗಳಿಂದ ಕೃಷ್ಣೆಯ ಒಂದು ದಡ ಹರಿದಾಸ ಸಾಹಿತ್ಯ, ಮತ್ತೊಂದು ದಡ ತತ್ವಪದ ಮತ್ತು ವಚನಗಳ  ಬಹುತ್ವದ ಜೀವತುಂಬಿ ಹರಿದಿದೆ. ” ಓಂ ಏಕ್ ಲಾಖ್ ಅಸ್ಸೀ ಹಜಾರ ಪಾಚೋಪೀರ್ ಮೌನ್ಧೀನ್ ” ತಿಂಥಣಿ ಮೋನಪ್ಪಯ್ಯನ  ಇಂಥ ನುಡಿಗಟ್ಟುಗಳು  ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹಿಡಿದ ನಿಲುಗನ್ನಡಿ. ಎಡ – ಬಲ ಪಂಥಗಳೆರಡರ ಅತಿರೇಕಗಳನ್ನು ಮೀರಿದ ಲೋಕಪಂಥದ ಬೆರಗಿನ ಬಯಲು ನಮ್ಮ ಕಲ್ಯಾಣ ಕರ್ನಾಟಕದ ನೆಲ. ಅಫಜಲಪುರ, ಆಳಂದ, ಜೇವರ್ಗಿ, ಶಹಾಪುರ ಹೀಗೆ ಕಲ್ಯಾಣ ಕರ್ನಾಟಕದ ಅನೇಕ ಭಾಗಗಳಲ್ಲಿ ಹಿಂದೂಗಳ ಮನೆದೇವರುಗಳೆಂದರೆ ಸೂಫಿ ಸಂತರು.

ಕರ್ಜಗಿಯ ಸೈಫುಲ್ಲಾ ಮುಲ್ಕ ದರ್ಗಾ, ನೀಲೂರು ಮಹಬೂಬ ಸುಬಾನಿ ದರ್ಗಾ, ಹೈದ್ರಾ ದರ್ಗಾಗಳ ಸೂಫಿ ದೈವಗಳು ಬಹುಪಾಲು ಹಿಂದೂ ವೀರಶೈವ, ಲಿಂಗಾಯತರ ಪಾಲಿನ ಉಪಾಸನ ದೇವರುಗಳು. ಹಾಗೇನೇ ಅನೇಕ ಮಂದಿ ಮುಸಲ್ಮಾನರು ಎಲ್ಲ ಹಿಂದೂ ಹಬ್ಬಗಳನ್ನು ಆಚರಿಸುತ್ತಾರೆ. ಭಸ್ಮವಿಭೂತಿ ಧರಿಸುತ್ತಾರೆ. ಮೊಹರಮ್ ಹಬ್ಬಗಳಲ್ಲಿ ಫಕೀರರಾಗಿ ಬಹುಪಾಲು ಮುಸ್ಲಿಮೇತರರು ಅಲಾಯಿ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ಹೀಗೆ ಭಾವೈಕ್ಯತೆಗೆ ಕಲ್ಯಾಣ ಕರ್ನಾಟಕ ಹೇಳಿ ಮಾಡಿಸಿದ ಹೆಸರು.

ಒಂದೆರಡು ಜಿಲ್ಲೆಯಲ್ಲಿ ಹರಿದಾಡುವ ಕಾವೇರಿ ಸಮಗ್ರ ಕನ್ನಡನಾಡಿನ ಜೀವನದಿಯಾಗಿ ಅಲ್ಲಿನ ಸಿನೆಮಾಗಳಿಗೆ, ಸಾಹಿತಿಗಳಿಗೆ ಗೋಚರಿಸುತ್ತಾಳೆ. ಆದರೆ ನಮ್ಮಭಾಗದ ಆರೇಳು ಜಿಲ್ಲೆಗಳ ತುಂಬೆಲ್ಲ ತುಂಬಿ ತುಳುಕುವ, ಇಲ್ಲಿನ ಜನಜೀವನದ ಸಮಗ್ರ ಬದುಕನ್ನು ಸಮೃದ್ಧಗೊಳಿಸುವ ಕೃಷ್ಣೆ, ಭೀಮೆಯರು ಬೆಂಗಳೂರು ಕೇಂದ್ರಿತ ಸಾಂಸ್ಕೃತಿಕ ಲೋಕಕ್ಕೆ, ಸಿನೆಮಾ ಜಗತ್ತಿಗೆ ಇವು ಬರೀ ನದಿಗಳಾಗಿಯೇ ಗೋಚರ. ಈ ಬಗೆಯ ಸಾಂಸ್ಕೃತಿಕ ರಾಜಕಾರಣ ಕುರಿತು ತಲೆ ಕೆಡಿಸಿಕೊಳ್ಳದ ಮುಗ್ಧ ಮೊಗಲಾಯಿ ಮಂದಿ ನಮ್ಮವರು.

ನಿಜವಾದ ರಾಜಕೀಯಪ್ರಜ್ಞೆ ಎಂಬುದರ ಅರಿವಿರದೇ ಥೇಟ್ ರಾಜಕೀಯ ಪಕ್ಷಗಳ ಕಾರ್ಯಕರ್ತರಂತೆ ಮಾತಾಡುವುದನ್ನೇ ರಾಜಕೀಯಪ್ರಜ್ಞೆ ಎಂದು ನಂಬಿರುವ ಹುಂಬತನ ನಮ್ಮವರದು. ಅತಿಯಾದ ಸಿಹಿ, ಅತಿಯಾದ ಖಾರಪ್ರಿಯರು ಇವರು. ಹೀಗೆ ಎರಡರಲ್ಲೂ  ಅತಿರೇಕಗಳು.  ಕೃಷ್ಣೆ ಮೈತುಂಬಿ ಹರಿದರೂ ಕಷ್ಟಗಳು ಬಗೆ ಹರಿಯಲಿಲ್ಲ. ಅಷ್ಟಕ್ಕೂ ಕೃಷ್ಣೆ ರೈತರ ಹೊಲಗಳಿಗಿಂತ ಕೆಲಸಗೇಡಿ ಹಳ್ಳ್ಳ ಕೊಳ್ಳಗಳಲ್ಲೇ ಹೆಚ್ಚು ಹರಿಯುತ್ತಿರುವಳು. CADA  ಎಂಬುದು ಈ ಭಾಗದಲ್ಲಿ ಕಿಲುಬು ಕಾಸಿನಷ್ಟು ಕೆಲಸ ಮಾಡಿಲ್ಲ.   ೩೭೧ ಜೆ ‘ಲಾಗೂ’ ಆದರೂ ನಮ್ಮ ಎಲ್ಲ ಸಂಕಟಗಳು ಹಾಗೇ ಇವೆ.

ನಾವು ಹಕ್ಕಿನೊಡೆಯರಾಗಿ ಮೂಲ ಸೌಲಭ್ಯಗಳನ್ನು ಪಡೆಯದೇ ಬಡವಾದವರು. ಕನ್ನಡನಾಡಿಗೆ ಇಬ್ಬರು ಮುಖ್ಯಮಂತ್ರಿಗಳನ್ನು ಕೊಟ್ಟ ನಾವು ಹಿಂದುಳಿದವರಲ್ಲ, ಹಿಂದುಳಿಸಲ್ಪಟ್ಟವರು. ಎಲ್ಲಕ್ಕೂ ” ಜಾಂದೇ ಚೋಡೋ ” ಎಂದು ಉದಾಸೀನ ತೋರುವ ಅಸಡ್ಡೆ ಜಾಯಮಾನ ನಮ್ಮದು. ಜವಾರಿ ಮುಗ್ದತೆ ಉಳಿಸಿಕೊಂಡುದೇ ನಮ್ಮ ಹೆಗ್ಗಳಿಕೆ.

ಕಲಬುರ್ಗಿ ಹೆಸರಿನೊಂದಿಗೆ ಅಂಟಿಕೊಂಡಿರುವುದು ಕೆಂಡದ ಬಿಸಿಲು ಮತ್ತು ತೊಗರಿ.  ಕಲಬುರ್ಗಿಯಲ್ಲಿ ಸರ್ಕಾರದ ಖರೀದಿಗಿಂತಲೂ ಭರ್ಜರಿಯಾಗಿ ಖಾಸಗಿ ಖರೀದಿದಾರರ  ಕಿಗ್ಗಳದ ರೇಟುಗಳಿಗೆ ರೈತರು ತೊಗರಿ ಮತ್ತು ಹತ್ತಿ ಮಾರುವಂತಾಗಿದೆ. ಸರಕಾರ ಎಂಬುದರ ದರಕಾರವಿಲ್ಲದೇ ಹೆದ್ದಾರಿಗಳ  ಬಾಜೂಕೆ ರಾಜಾರೋಷವಾಗಿ ಖಾಸಗಿ ಸಾಹುಕಾರರು  ತಕ್ಕಡಿ ಕಲ್ಲುಗಳನ್ನಿಟ್ಟುಕೊಂಡು ಮುಗ್ದರೈತರು ಬೆಳೆದ ಹತ್ತಿ, ತೊಗರಿ, ಇತರೆ ಫಸಲುಗಳನ್ನು ಕಾಟಾ ಖರೀದಿ ಮಾಡುವ ಕಾಳದಂಧೆ ಯಾವೊಂದು ಎಗ್ಗಿಲ್ಲದೇ ಜಗ್ಗಿ ಪ್ರಮಾಣದಲ್ಲೇ ಜರುಗುತ್ತಲಿರುತ್ತವೆ.

ಅದೇ ರಸ್ತೆಗಳಲ್ಲಿ ಮಂತ್ರಿ, ಎಮ್ಮೆಲ್ಲೆ, ಎಂಪಿ, ಇತರೆ ರಾಜಕಾರಣಿಗಳು ಅದನ್ನು ನೋಡುತ್ತಲೇ ಓಡಾಡುತ್ತಾರೆ. ರೈತರನ್ನು ಲೂಟಿ ಮಾಡುವ ಈ ಹಗಲು ದರೋಡೆಕೋರ ದಂಡನ್ನು ಇದುವರೆಗೂ ಯಾವೊಬ್ಬ ತೀಸ್ಮರ್ಕ ರಾಜಕಾರಣಿ ತಡವಿಕೊಂಡ ನಿದರ್ಶನವಿಲ್ಲ. ಇಂತಹ ಹತ್ತು ಹಲವು ಶೋಷಣೆಗಳ ಬಲಿಪಶುಗಳಾಗಿರುವ ನಮ್ಮವರನ್ನು ಹೆಸರಲ್ಲಿ ಮಾತ್ರ ಕಲ್ಯಾಣ ಗೊಳಿಸಿದ್ದಾಗಿದೆ.  ಹೈದ್ರಾಬಾದ್ ಕರ್ನಾಟಕ ಹೆಸರಲ್ಲಷ್ಟೇ ಬದಲಾದರೆ ಸಾಕೇ.? ಖರೇ ಖರೇ ಕಲ್ಯಾಣ ಕರ್ನಾಟಕ ಆಗೋದು ಯಾವಾಗ

***********************************************

  

Leave a Reply

Back To Top