ಅಂಕಣ ಬರಹ
ಘೋಷಣೆಗಳ ನಡುವೆ ರೂಪಕಗಳಿಗೂ ಕಾತರಿಸುವ ಕಲ್ಮೇಶ ತೋಟದ್ ಕವಿತೆಗಳು
ಕಲ್ಮೇಶ ತೋಟದ್
.
ಮೂರು ಗೇಣಿನಷ್ಟೇ ಅಂತರ
ಭಾಸವಾಗುತ್ತಿದ್ದ ಬಾನಹಂದರ
ನೋಡಲದೆಷ್ಟು ಸುಂದರ
ಆಕಾಶ ಭೂಮಿ ಮಂದಾರ
ಅಪ್ಪನ ಹೆಗಲದು ಸುಂದರ
ಇಂಥ ಭಾವುಕ ಸಾಲುಗಳಲ್ಲಿ ಅಪ್ಪನ ಹೆಗಲನ್ನು ವರ್ಣಿಸಿ ಅಪ್ಪನನ್ನು ಕುರಿತಂತೆ ಈವರೆಗೂ ಇದ್ದ ಇಮೇಜುಗಳಿಗೆ ಮತ್ತೊಂದು ಹೊಸ ರೂಪಕವನ್ನು ಕೊಡಮಾಡಿರುವ ೨೬ರ ಹರಯದ ಯುವ ಕವಿ ಕಲ್ಮೇಶ ತೋಟದ ಅವರ ಕವಿತೆಗಳನ್ನು ಪರಿಚಯಿಸುವುದಕ್ಕೆ ಸಂತೋಷ ಮತ್ತು ಸಂಭ್ರಮಗಳು ಮೇಳೈಸುತ್ತವೆ. “ಕೌದಿ” ಶೀರ್ಷಿಕೆಯಲ್ಲಿ ಈಗಾಗಲೇ ಒಂದು ಸಂಕಲನ ಪ್ರಕಟಿಸಿರುವ ಈ ಕವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದ ಸ್ನಾತಕೋತ್ತರ ಪದವಿ ಪಡೆದು ಸದ್ಯ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ.
ಕಲ್ಮೇಶ ತೋಟದ ತಮ್ಮ ಕವನ ಸಂಕಲನಕ್ಕೆ ಕವಿಯ ಮಾತು ಬರೆಯುವಾಗ ಹೀಗೆ ಟಿಪ್ಪಣಿಸುತ್ತಾರೆ;
“ಅವ್ವ ಹಸಿದ ಬೆಕ್ಕಿನ ಮರಿಯೊಂದು ಕಂಡರೆ ಹಿಂದೆ ಮುಂದೆ ನೋಡದೆ ಒಂದಷ್ಟು ಹಾಲು ಹಾಕುತ್ತಾಳೆ. ನಾಯಿ ಕಂಡರೆ ಅನ್ನ ಹಾಕುತ್ತಾಳೆ. ಹಸು ಕಂಡರೆ ಒಂದು ರೊಟ್ಟಿ ಕೊಟ್ಟು ಬೆನ್ನು ಸವರುತ್ತಾಳೆ. ಪಕ್ಷಿಗಳಿಗೆ ಕಂಪೌಂಡ್ ಮೇಲೆ ಹಸನು ಮಾಡಿ ಉಳಿದ ಕಾಳು ಕಡ್ಡಿ ಚಲ್ಲುತ್ತಾಳೆ. ತುಳಸಿ ಗಿಡದ ಕುಂಡಲಿ ಪಕ್ಕ ಇರುವೆಗಳಿಗೆ ಸಕ್ಕರೆ ಹರವುತ್ತಾಳೆ. ಕೂದಲು, ಪಿನ್ನು ಮಾರಲು ಬರುವ ಮಹಿಳೆಯರಿಗೆ ತಾನಾಗಿಯೇ ಕುಡಿಯಲು ನೀರು ಬೇಕೆ ಎಂದು ಕೇಳಿ ನೀರು ಕೊಡುತ್ತಾಳೆ. ಇಷ್ಟೆಲ್ಲ ಮಾಡಿದ್ದಕ್ಕೆ ಆಕೆ ಫೋಟೋ ಕ್ಲಿಕ್ಕಿಸಿಕೊಂಡೋ, ಸೆಲ್ಫಿ ತೆಗೆದುಕೊಂಡು ಸಾಕ್ಷಿ ನೀಡುವುದಿಲ್ಲ. ಏನೂ ಮಾಡಿಯೇ ಇಲ್ಲವೆಂಬಂತೆ ಎಲ್ಲವನ್ನು ಮರೆತು ಮತ್ತೆ ನಾಳೆಗೆ ಸಿದ್ಧಳಾಗುತ್ತಾಳೆ”.
ಫೇಸ್ಬುಕ್ ಪುಟ ತೆರೆದರೆ ಸಾಕು, ಸುಮ್ಮ ಸುಮ್ಮನೇ ಪಟ ಬದಲಿಸುವ, ಸಣ್ಣ ಪುಟ್ಟ ಸಂಗತಿಗಳನ್ನೂ ಎಂಥದೋ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುವ ಸೆಲ್ಫಿ ಹುಚ್ಚಿನವರು ಗಮನಿಸಲೇ ಬೇಕಾದ ಮತ್ತು ಅನುಸರಿಸಲೇ ಬೇಕಾದ ಸಾಲುಗಳು ಇವು. ತಮ್ಮ ಪಾಡಿಗೆ ತಾವು ಮಾನವೀಯ ಕೆಲಸಗಳನ್ನು ಮಾಡುತ್ತಿದ್ದರೂ ತೋರಿಸಿಕೊಳ್ಳದೇ ಹೇಳಿಕೊಳ್ಳದೇ ತಮ್ಮಲ್ಲೇ ಸುಖ ಕಾಣುತ್ತಿರುವವರನ್ನು ನಮ್ಮ ಫೇಸ್ಬುಕ್ಕಿಗರು ಗಮನಿಸದೇ ಇರುವುದು ಇದಕ್ಕೆ ಕಾರಣ. ಕವಿಯೆಂದು ಬೀಗುತ್ತಿರುವ ಹಲವರು ಮೊದಲು ತಮ್ಮ ಸುತ್ತ ಇರುವ ಜನ ಹೇಗೆ ಯಾವುದಕ್ಕೆ ಪ್ರತಿಕ್ರಯಿಸುತ್ತಾರೆ ಎನ್ನುವುದನ್ನು ಕಂಡುಕೊಳ್ಳದೇ ಅಂದು ಕೊಂಡದ್ದನ್ನೇ ಕಾವ್ಯ ಎಂದು ಬರೆಯುವಾಗ ಈ ಕವಿಯ ಈ “ನೋಟ” ಅವರ ಕವಿತೆಗಳಲ್ಲೂ ಚಾಚಿವೆ.
“ಸರ್ಕಾರಿ ಬಸ್ಸಿನ ಕೊನೆಯ ಗಿರಾಕಿ” ಕವಿತೆ ಕೂಡ ಇಂಥದೇ ಬೆರಗಿನ ನೋಟದಲ್ಲೇ ಅರಳುತ್ತದೆ ಮತ್ತು ನಾವೆಲ್ಲರೂ ನೋಡಿ ಗಮನಿಸದೇ, ಗಮನಿಸಿದ್ದರೂ ತುಲನೆ ಮಾಡದ ಸಂಗತಿಗಳನ್ನು ಚಿತ್ರಿಸುತ್ತದೆ. ಕಣ್ಣಿಗೆ ಕಂಡದ್ದನ್ನು ಕಂಡಹಾಗೆ ಬರೆಯುತ್ತಿದ್ದ ಕವಿ ಒಮ್ಮೆಲೇ
“ಅಜ್ಜನ ದೋತ್ರಕ್ಕೆ ಎಷ್ಟೊಂದು ನೆರಿಗೆಗಳು
ಥೇಟ್ ಅವನ ಮುಖದ ಮೇಲಿನಂತೆ”
ಎಂದು ಹೇಳುತ್ತ ರೂಪಕದ ಸಾಧ್ಯತೆಯನ್ನು ತೋರುತ್ತಾರಲ್ಲ, ಈ ಇಂಥ ಯತ್ನಗಳೇ ನಾಳೆಯ ಇವರ ಕವಿತೆಗಳನ್ನು ಎದುರು ನೋಡಲು ಪ್ರೇರೇಪಿಸುತ್ತದೆ.
“ರಾಮನಾದರೂ ದಕ್ಕಲಿ, ರಹೀಮನಾದರೂ ದಕ್ಕಲಿ
ಬಿಕ್ಕಿ ಅಳುವ ಕಂದನ , ಕಣ್ಣೀರು ಕೊಂಚ ಒರೆಸಲಿ”
“ದೇವರು ತುಂಬ ದೊಡ್ಡವನು” ಹೆಸರಿನ ಕವಿತೆಯ ಆಶಯ ಮಾನವೀಯ ಗುಣ ಇಲ್ಲದವರಿಗೆ ಸುಲಭಕ್ಕೆ ದಕ್ಕದ್ದು ಮತ್ತು ಸಿದ್ಧಿಸದ್ದು ಕೂಡ. ಏಕೆಂದರೆ ತಮ್ಮ ತಮ್ಮ ದೇವರು ಧರ್ಮ ಜಾತಿಗಳನ್ನೇ ದೊಡ್ಡದೆಂದು ಭಾವಿಸುವವರ ನಡುವೆ ಇಂಥ ಔದಾರ್ಯ ಮತ್ತು ಆತ್ಮ ನಿರ್ಭರತೆ ಇಲ್ಲದ ಯಾರೂ ಕವಿಯೆಂದು ಹೇಳಿಕೊಂಡ ಮಾತ್ರಕ್ಕೇ ಕವಿಯಾಗುವುದಿಲ್ಲ, ಅನ್ಯರ ಕಷ್ಟವನ್ನೂ ತನ್ನದೆಂದು ಭಾವಿಸದವನು ಕವಿಯಾಗುವುದು ಆಗದ ಮಾತು. ಆದರೆ ಇಷ್ಟು ಚಂದದ ದಾರಿಯಲ್ಲಿ ನಡೆದಿದ್ದ ಈ ಕವಿತೆ ಅಂತ್ಯದಲ್ಲಿ ಹೇಳಿಕೆಯಾಗಿ ಬದಲಾಗುತ್ತದೆ;
“ಕಟ್ಟುವುದೇ ಆದರೆ ಒಂದು ಶಾಲೆಯನ್ನೊ,
ಶೌಚಗೃಹವನ್ನೊ ಕಟ್ಟೋಣ
ಹಸಿವು, ಅಜ್ಞಾನ, ಮಾನದ ಮುಂದೆ
ಯಾವ ದೇವರೂ ದೊಡ್ಡವನಲ್ಲ ಅಲ್ಲವೆ…”
ಇಂಥ ಹೇಳಿಕೆಗಳು ಮತ್ತು ಘೋಷಣೆಗಳು ಒಂದು ವರ್ಗದ ಮನಸ್ಥಿತಿ ಇದ್ದವರಿಗೆ “ಹಿತ” ಅನ್ನಿಸುವದರಿಂದ ಮತ್ತು ಫೇಸ್ಬುಕ್ ಪುಟಗಳ ತುಂಬ ಅಂಥವರದೇ ಲೈಕು ಕಮೆಂಟುಗಳು ತುಂಬಿಕೊಳ್ಳುವುದರಿಂದ ಯುವ ಕವಿಗಳು ಕ್ಷಣದ ಹೊಗಳಿಕೆಗಾಗಿ ಹೇಳಿಕೆಗಳಲ್ಲೋ ಘೋಷಣೆಗಳಲ್ಲೋ ಕವಿತೆಯನ್ನು ಧ್ವನಿಸದೇ ಪ್ರತಿಮೆ ರೂಪಕಗಳ ಮೂಲಕವೇ ತಮ್ಮ ಅಭಿವ್ಯಕ್ತಿಯನ್ನು ಪ್ರಚುರಗೊಳಿಸುವ ಅಗತ್ಯತೆ ಇದೆ. “ಒಂದರೆಘಳಿಗೆಯ ನಿದ್ದೆ” ಕವಿತೆ ಕೂಡ ಮೇಲ್ನೋಟಕ್ಕೆ ರಿಯಲ್ ಮತ್ತು ವರ್ಚ್ಯುಯಲ್ ಪ್ರಪಂಚಗಳ ಡಿಸೆಕ್ಷನ್ ಥರ ಕಂಡರೂ ಆ ಡಿಸೆಕ್ಷನ್ನಿಗೆ ಬೇಕಾದ ಪರಿಕರಗಳನ್ನು ಇಟ್ಟುಕೊಳ್ಳದೇ ಥಟ್ಟನೇ ಹೊಳೆದ ಜನ ಮನ್ನಣೆಗೆ ಬರೆದ ಸಾಲುಗಳಾಗಿ ಬದಲಾಗಿವೆ. ಈ ಎರಡೂ ಕವಿತೆಗಳ ಆತ್ಮವನ್ನು ಬೆಳಗಿ ದೈಹಿಕ ನ್ಯೂನತೆಗಳನ್ನು ಸರಿಪಡಿಸಿದರೆ ಎರಡೂ ಕೂಡ ಉತ್ತಮ ರಚನೆಗಳಾಗುವ ವಸ್ತು ಹೊಂದಿವೆ.
“ಸಾವು ಅಂತಿಮ ಎನಿಸಿದಾಗ ನೀನೊಮ್ಮೆ” ಎಂಬ ಸಾಲುಗಳನ್ನು ಪ್ರತಿ ಅನುಪಲ್ಲವಿಯಲ್ಲಿ ಮತ್ತೆ ಮತ್ತೆ ಧೇನಿಸುವ ಕವಿತೆ ಅದ್ಭುತ ಚಿತ್ರಗಳನ್ನು ಚಿತ್ರಿಸುತ್ತಲೇ ನಿಜಕ್ಕೂ ಬದುಕಿಗೆ ಬೇಕಾದ ಪರಿಕರಗಳನ್ನು, ಜರೂರು ಬೇಕಿರುವ ಆತ್ಮ ಸಾಂಗತ್ಯದ ಅನಿವಾರ್ಯಗಳನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತಲೇ ಬದುಕಿದ್ದಷ್ಟೂ ದಿನ ಅರ್ಥ ಪೂರ್ಣವಾಗಿ ಬದುಕಬೇಕಿರುವ ಹೃದಯವಂತಿಕೆಯ ಚಿತ್ರಣವಾಗಿದೆ. ಆದರೆ ಈ ಕವಿ ಏಕೋ ಘೋಷಣೆಗೋ ಅಥವ ಹೇಳಿಕೆಗೋ ಹೆಚ್ಚು ಮಹತ್ವ ಕೊಟ್ಟ ಕಾರಣಕ್ಕೆ ಕಡೆಯ ಸಾಲುಗಳಲ್ಲಿ ಕವಿತೆ ತಟಸ್ಥವಾಗಿ ಬಿಡುತ್ತದೆ.
“ಜಿನುಗುವ ಮಳೆಯಲ್ಲಿ
ಬಿಕ್ಕುವ ಹಳೆ ನೆನಪುಗಳ ಕೆಣಕಬೇಡ ಸಖಿ” ಎಂದು ಆರಂಭವಾಗುವ ತಲೆ ಬರಹವಿಲ್ಲದ ಪದ್ಯದ ಆಶಯ ಮಹತ್ವದ್ದು. ಘೋಷಣೆ ಅಥವ ಹೇಳಿಕೆಗಳಿಲ್ಲದ ನಿಜದ ಮಾತುಗಳೇ ತುಂಬಿರುವ ಪದ್ಯ ಹರೆಯದ ಹುಡುಗರು ಸಾಮಾನ್ಯ ಸೃಷ್ಟಿಸುವ ಪ್ರೀತಿ, ಪ್ರೇಮಗಳ ಕುರಿತಾದ ಅಂಶಗಳಿದ್ದರೂ ಭೋರ್ಗರೆತ ಮತ್ತು ಸುಳಿ ತಿರುವುಗಳ ಚಿತ್ರಣವಿಲ್ಲದೆಯೂ ಸರಾಗ ಹರಿದು ಕಡಲು ಸೇರುವ ನದಿಯ ಹರಿವಂತೆ ಭಾಸವಾಗುತ್ತದೆ.
“ಹುಡುಕುತ್ತಲೇ ಇದ್ದಾಳೆ ಅವ್ವ
ಕುಂಕುಮದ ಬಟ್ಟಲಲ್ಲಿ,
ಅರಿಶಿಣದ ಬೇರಿನಲ್ಲಿ
ಮಲ್ಲಿಗೆ ಹೂ ದಾರದಲ್ಲಿ
ಬಳೆಯ ಸದ್ದಿನ ಗುಂಗಿನಲ್ಲಿ
ಗೆಜ್ಜೆನಾದದ ಸದ್ದಿನಲ್ಲಿ…..”
ಇಲ್ಲವಾದ ಅಪ್ಪನನ್ನು ಸಾರ್ಥಕವಾಗಿ ಚಿತ್ರಿಸಿದ ಸಾಲು ಇಷ್ಟವಾಗುತ್ತದೆ. ಆದರೆ ಇನ್ನೂ ಬೆಳಸಬಹುದಾಗಿದ್ದ ಈ ಪದ್ಯ ಅವಸರದಲ್ಲಿ ಬರೆದಂತೆ ಕಾಣುತ್ತದೆ.
“ಎರೆಮಣ್ಣ ನೆಲದಲ್ಲಿ ತರತರದ ಸೊಬಗಲ್ಲಿ
ಮೂಡಗಾಳಿಯ ಎದುರು, ಮಸಡಿ ಬಿರಿತರು ಕೂಡ
ಬನ್ನಿಗಿಡದಡಿಯ ಕಲ್ಲು ಪಾಂಡವರಿಗೆ ಕೈ ಮುಗಿದು
ದೆವ್ವದ ಗಾಳಿಗೆ ಎದೆಯೊಡ್ಡಿ ನಿಂತ
ಭೂತಾಯಿ ಇವಳು ಜನಕರಾಜನ ಮಗಳು..” ಎನ್ನುವ ಸಾಲುಗಳನ್ನು ಓದುತ್ತಿದ್ದಾಗ ಯಾಕೋ ಲಂಕೇಶರ ಅವ್ವ ಪದ್ಯ ಬೇಡ ಬೇಡ ಎಂದರೂ ನೆನಪಾಗುತ್ತದೆ. ಕನ್ನಡದ ಕವಿತೆಗಳೇ ಹಾಗೆ, ಒಂದರ ನೆರಳು ಮತ್ತೊಂದರ ತಲೆಗೆ ತಾಕುತ್ತದೆ, ಮಗದೊಂದು ತೋರಿದ ಝಳಕ್ಕೆ ಎಗ್ಗು ಸಿಗ್ಗಿಲ್ಲದೇ ಅರಳಿಕೊಳ್ಳುತ್ತದೆ, ಹೊರಳಿಕೊಳ್ಳುತ್ತದೆ.
ಶ್ರೀ ಕಲ್ಮೇಶ ತೋಟದ ಈಗಿನ್ನೂ ೨೬ರ ಹರಯದ ಯುವಕ. ಅವರು ಸಾಗಬೇಕಿರುವ ದಾರಿ ಮತ್ತು ಮುಟ್ಟ ಬೇಕಿರುವ ಗುರಿ ಬಹಳ ದೊಡ್ಡದಿದೆ. ಆತ್ಮ ಸಂಗಾತಕ್ಕೆ ಅನುಭವದ ಹಾದಿಯ ಎಡರು ತೊಡರುಗಳನ್ನು ಬಳಸುತ್ತಲೇ ಅವನ್ನೇ ಕವಿತೆಯ ರೂಪಕಗಳನ್ನಾಗಿ ಬಳಸುವ ಜಾಣ್ಮೆ ಮತ್ತು ಕಲೆ ಅವರು ಸಿದ್ಧಿಸಿಕೊಳ್ಳುತ್ತ ಇದ್ದಾರೆ ಎನ್ನುವುದು ಅವರ ರಚನೆಗಳ ಮೇಲ್ನೋಟದ ಓದಿನ ಫಲಶೃತಿ. ಇಂಥ ಕವಿಗಳು ಅವರಿವರು ಬೆನ್ನು ತಟ್ಟಿದರೆಂಬ ಖುಷಿಯಲ್ಲಿ, ಮೈ ಮರೆಯದೇ ತಮ್ಮ ಅನುಭವಕ್ಕೆ ಬಂದ ಸಂಗತಿಗಳತ್ತಲೇ ಕಿವಿ ಮೂಗು ಕಣ್ಣುಗಳನ್ನು ಕೀಲಿಸಿದರೆ ಮಾತ್ರ ಹೇಳಿಕೆಗಳಿಂದಲೂ ಘೋಷಣೆಗಳಿಂದಲೂ ಮುಕ್ತರಾಗಬಲ್ಲರು. ಆ ಅಂಥ ಶಕ್ತಿ ಇರುವ ಈ ಯುವಕವಿ ತಕ್ಷಣಕ್ಕಲ್ಲವಾದರೂ ನಿಧಾನದ ಓದಿನಿಂದ, ಪೂರ್ವ ಸೂರಿಗಳ ಒಡನಾಟದಿಂದ ಪಡೆಯಲಿ, ಪಡೆಯುತ್ತಾರೆ ಎನ್ನುವ ಹಾರೈಕೆಯ ಜೊತೆಗೇ ಅವರ ಆಯ್ದ ಐದು ಕವಿತೆಗಳನ್ನು ಕಾವ್ಯಾಸಕ್ತರ ಓದಿಗೆ ಶಿಫಾರಸು ಮಾಡುತ್ತಿದ್ದೇನೆ;
ಕಲ್ಮೇಶ ತೋಟದ್ ಕವಿತೆಗಳು
1.ಸರ್ಕಾರಿ ಬಸ್ಸಿನ ಕೊನೆಯ ಗಿರಾಕಿ
ಕಿಕ್ಕಿರಿದು ತುಂಬಿದ ವಾ.ಕ.ರ.ಸಾ.ಸಂ ಬಸ್ಸಿನಲ್ಲಿ
ಎಷ್ಟೊಂದು ಮುದ್ರಣಗೊಳ್ಳದ ಬದುಕುಗಳಿವೆ
ಬಸ್ಸು ತನ್ನ ಪಾಡಿಗೆ ತಾ ಹೊರಟಿರುತ್ತದಷ್ಟೆ
ಒಳಗೆ ಅಲ್ಲಲ್ಲಿ ಒಂದಿಷ್ಟು ಗುಂಪುಗಳು ಮಾತಿಗಿಳಿದಿರುತ್ತವೆ
ಎಷ್ಟೊಂದು ರಾದ್ಧಾಂತದ ಬದುಕು ಪ್ರತಿಯೊಬ್ಬರು
ಇನ್ನೊಬ್ಬರನ್ನು ದೂಷಿಸುವುದರಲ್ಲಿಯೇ ಮಗ್ನರಾಗಿದ್ದಾರೆ
ಅಲ್ಲೊಂದು ಹಿರಿಯ ನಾಗರಿಕರಿಗೆ ಮೀಸಲಿಟ್ಟ ಆಸನದಲ್ಲಿ
ಕುಳಿತ ಹುಡುಗರಿಗೆ ಕಾಲೇಜಿನ ಗೌಜು ಗದ್ದಲದ ಚಿಂತೆ
ಅಲ್ಲೆ ಮುಂದೆ ಸೀಟು ಸಿಗದೆ ನಿಂತ ಮುದುಕನೊಬ್ಬ
ಎಡಗಾಲನ್ನೊಮ್ಮೆ, ಬಲಗಾಲನ್ನೊಮ್ಮೆ ಬದಲಿಸುತ್ತ
ದೇಹದ ಭಾರ ನಿಭಾಯಿಸುತ್ತಾನೆ
ಅಜ್ಜನ ದೋತ್ರಕ್ಕೆ ಎಷ್ಟೊಂದು ನೆರಿಗೆಗಳು
ಥೇಟ್ ಅವನ ಮುಖದ ಮೇಲಿನಂತೆ
ಹಿಂದೆ ಯಾರದ್ದೊ ಮೊಬೈಲಿನಲಿ ಹಳೆ ಟ್ಯಾಕ್ಟರ್
ಜಾನಪದದ ಹಾಡು ಎಗ್ಗಿಲ್ಲದೆ ಬಡಿದುಕೊಳ್ಳುತ್ತಲೆ ಇದೆ
ಚಿಲ್ಲರೆ ಕೇಳಿ ಕೇಳಿ ಸುಸ್ತಾದ ಕಂಡಕ್ಟರ್ ಕೂಡಾ
ಸಾರ್ವಜನಿಕರಿಗೆ ಮನದಲ್ಲೆ ಬೈಯುತ್ತ ಟಿಕೆಟ್ ಹರಿಯುತ್ತಿದ್ದಾನೆ
ಬಸ್ಸು ತಗ್ಗು ದಿಬ್ಬಿನ ರಸ್ತೆಯೊಡನೆ ಎಷ್ಟೊಂದು ಆತ್ಮೀಯವಾಗಿದೆ
ಎದ್ದರೂ, ಬಿದ್ದರೂ ಮುಗ್ಗರಿಸದೆ ಮುನ್ನಡೆಯುತ್ತದೆ
ಬಸ್ಸಿನ ಕಂಬಗಳೆಲ್ಲವೂ ಈಗ ಅನಾಥ
ಎಲ್ಲರೂ ಮೊಬೈಲ್ ಹಿಡಿದು ಕುಳಿತವರೆ
ನಾನು ಬಸ್ಸಿಗೆ ಹೊಸಬನೊ ಅಥವಾ ಬಸ್ಸು ನನಗೆ
ಹೊಸದೊ, ಥೋ… ಗೊತ್ತಿಲ್ಲ
ಒಂದೊಂದೆ ನಿಲ್ದಾಣ ಬಂದಂತೆಲ್ಲಾ ಬಸ್ಸು ಬರಿದಾಗತ್ತಲೆ ಇದೆ
ಈಗೋ ಕಂಡಕ್ಟರ್ ನ ಅಂತಿಮ ಪ್ರಕಟಣೆ
‘ಲಾಸ್ಟ್ ಸ್ಟಾಪ್ ಯಾರ ನೋಡ್ರಿ ಇಳಕೊಳ್ಳೊರು ಇಳಕೊಳ್ರಿ’
2. ದೇವರು ತುಂಬ ದೊಡ್ಡವನು
ರಾಮನಾದರೂ ದಕ್ಕಲಿ, ರಹೀಮನಾದರೂ ದಕ್ಕಲಿ
ಬಿಕ್ಕಿ ಅಳುವ ಕಂದನ , ಕಣ್ಣೀರು ಕೊಂಚ ಒರೆಸಲಿ
ಬಣ್ಣದ ಬಾವುಟಗಳು ಒಂದಿಷ್ಟು ಶಾಂತವಾಗಲಿ
ಬದುಕೆ ಇಲ್ಲದೆ ಕೊರಗುವವರಿಗೆ
ಒಂದಿಷ್ಟು ರಂಗು ದೊರೆಯಲಿ
ಧರ್ಮ ಶ್ರೇಷ್ಠತೆಯ ಬೊಬ್ಬೆಯಿಡು ನೀನು
ನಾನು ಮಾತ್ರ ಹಸಿದವರಿಗೆ
ಒಂದು ತುತ್ತು ಅಣ್ಣ ಕಲಸಿ, ಕೈತುತ್ತನ್ನಷ್ಟೆ ನೀಡಬಲ್ಲೆ
ಅಲಿಸಾಬ್ ಕಾಕಾನೊಂದಿಗೆ
ವ್ಯವಹಾರ ನಡೆಸುತ್ತಿದ್ದ ದೊಡ್ಡಪ್ಪ
ಎಂದಿಗೂ ಧರ್ಮ-ಜಾತಿಗಳ ಲೆಕ್ಕ ಹಾಕಿದ್ದು ಕಂಡಿಲ್ಲ
ಇಷ್ಟ್ಯಾಕೆ ಕಚ್ಚಾಡಿ, ಕಷ್ಟಪಡುತ್ತೀರಿ
ದೇವರು ತುಂಬ ದೊಡ್ಡವನು
ನಿವ್ಯಾಕೆ ಬೀದಿಗಿಳಿದು ಚಿಕ್ಕವರಾಗುತ್ತೀರಿ
ಗೋಡೆಯಾದರೂ ಉರುಳಲಿ,
ಗುಮ್ಮಟವಾದರೂ ಉರುಳಲಿ
ಹಸಿವಿನ ಕಟ್ಟೆ ಒಡೆಯದಿರಲಿ
ಕಟ್ಟುವುದೇ ಆದರೆ ಒಂದು ಶಾಲೆಯನ್ನೊ,
ಶೌಚಗೃಹವನ್ನೊ ಕಟ್ಟೋಣ
ಹಸಿವು, ಅಜ್ಞಾನ, ಮಾನದ ಮುಂದೆ
ಯಾವ ದೇವರೂ ದೊಡ್ಡವನಲ್ಲ ಅಲ್ಲವೆ…
3.
ಸಾವು ಅಂತಿಮ ಎನಿಸಿದಾಗ ನೀನೊಮ್ಮೆ
ಪಾರಿಜಾತದ ಹೂ ನೋಡಬೇಕಿತ್ತು
ಕೊಂಡಿ ಕಳಚಿದಾಗಲೂ ಅದು
ನಗುತ್ತಲೆ ನೆಲಕ್ಕುದುರುವ ಪರಿ ಹೇಳುತ್ತಿತ್ತು
ಸಾವು ಅಂತಿಮ ಎನಿಸಿದಾಗ ನೀನೊಮ್ಮೆ
ನವಿಲು ಗರಿಯನ್ನ ಮಾತಿಗೆಳೆಯಬೇಕಿತ್ತು
ಮೈ ಕೊಡವಿದಾಗ ದೇಹದಿಂದ ಬೇರ್ಪಟ್ಟರು
ಅದು ನಗುವ ಪರಿ ಹೇಳುತ್ತಿತ್ತು
ಸಾವು ಅಂತಿಮ ಎನಿಸಿದಾಗ ನೀನೊಮ್ಮೆ
ಕಡಲ ಚಿಪ್ಪನ್ನು ಕಂಡು ಬರಬೇಕಿತ್ತು
ತಲೆ ಒಡೆಸಿಕೊಂಡಾಗ ಮುತ್ತು ನೀಡಿದ ಘಳಿಗೆಯ
ನೆನದು ಅದು ಸಾಂತ್ವನ ಹೇಳುತ್ತಿತ್ತು
ಸಾವು ಅಂತಿಮ ಎನಿಸಿದಾಗ ನೀನೊಮ್ಮೆ
ಹೆತ್ತವ್ವನ ಒಡಲಲ್ಲಿ ಸುಮ್ಮನೆ ತಲೆಯಿಟ್ಟು ಮಲಗಬೇಕಿತ್ತು
ಕರುಳಬಳ್ಳಿ ಕತ್ತರಿಸಿ, ಕೋಡಿ ನೆತ್ತರ ಹರಿಸಿದಾಗಲೇ
ನೀ ಹುಟ್ಟಿದ್ದನ್ನು ಕಿವಿ ಹಿಂಡಿ ಹೇಳುತ್ತಿತ್ತು
ಸಾವೇ ಅಂತಿಮ ಎನಿಸಿದಾಗ ನೀನೊಮ್ಮೆ
ನಿನ್ನಾತ್ಮದೊಂದಿಗೆ ಸಂವಾದಕ್ಕಿಳಿಯಬೇಕಿತ್ತು
ಕೊನೆ ಪಕ್ಷ ಇದ್ದು ಮಾಡಬೇಕಾದ ಜರೂರತ್ತುಗಳನ್ನ ನೆನಪಿಸುತ್ತಿತ್ತು
ಸಾವು ಅಂತಿಮ ಎನಿಸಿದಾಗ ನೀನೊಮ್ಮೆ
ಮೌನ ಮುರಿದು ಮಾತಾಗಬೇಕಿತ್ತು
ನಾನು ಹೆಗಲುಕೊಟ್ಟು ದುಃಖಕ್ಕೆ ಜೊತೆಯಾಗುತ್ತಿದ್ದೆ
ನೀ ಇದ್ದರೂ, ಇಲ್ಲದಿದ್ದರೂ ಇಲ್ಲಿ ಯಾವುದು ನಿಲ್ಲುವುದಿಲ್ಲ
ಈಗ ಎಲ್ಲವೂ ಮೀರಿ ಹೋಗಿದೆ ಅಷ್ಟೆ
ನಿನ್ನ ಬಿತ್ತಿದ ನೆಲವೂ ಉಬ್ಬಿ ನಿಂತಿದೆ
ಹೂಗಳ ಹೊತ್ತು ಸನ್ಮಾನವೆಂದು ಭ್ರಮಿಸಿ
ನೀನಷ್ಟೆ ಕುಗ್ಗಿ ಮಣ್ಣಾಗಿ ಹೋದವ ಮೂರ್ಖ
4.
ಜಿನುಗುವ ಮಳೆಯಲ್ಲಿ
ಬಿಕ್ಕುವ ಹಳೆ ನೆನಪುಗಳ ಕೆಣಕಬೇಡ ಸಖಿ
ಸುಕ್ಕುಗಟ್ಟಿದ ಮನಸ್ಸಲ್ಲಿ ಮತ್ತೆ
ಮುಂಗಾರು ಮಳೆ ಸುರಿದು
ಒಲವ ಹೂ ಅರಳಿದರೆ
ಯಾರ ಮುಡಿಗೆ ಮುಡಿಸಲಿ,
ಕೊನೆಗೆ ಯಾವ ಪಾದವ ಹುಡುಕಲಿ
ಹೂ ಮುಡಿದ ಅಗಾಧ ನೆನಪುಗಳಿಗೆ
ಗೋರಿ ಕಟ್ಟಿರುವ ಮನಸ್ಸಲಿ
ಅಕಾಲಿಕ ಪ್ರವೇಶ ನಿಶಿದ್ಧ ಸಖಿ
ಇಲ್ಲಿ ಅರಳಿದ ಹೂವೆಲ್ಲ ಅರ್ಪಣೆಗೋ,
ಸಮರ್ಪಣೆಗೋ ಅರಳುತ್ತವೆ
ಮತ್ತೆ ಅವು ನಮ್ಮನ್ನೆ ಅಣಕಿಸಿ ನಗುತ್ತವೆ
ನಾನೋ ಬರಿಗಾಲ ಫಕೀರ
ಹೂವಿಗು, ಹಾರಕ್ಕೂ ಕಾಯದೇ
ಹೊರಟಿರುವೆ ತಿರುಗಿ ನೋಡದೆ
ಫಕೀರನ ಕರೆದು ಒಲವ ನೀಡಿರುವೆ
ಆಗಲಿ ಬಿಡು ನನಗೂ ಒಂದಿಷ್ಟು ಮೊಹಬ್ಬತ್
ಹೊನ್ನ ರಾತ್ರಿಯಲ್ಲಿ ಮೆಲ್ಲನೆ
ಉದುರುವ ನಕ್ಷತ್ರಗಳ ನಡುವೆ
ಬೆಳ್ಳಿ ಸೂರ್ಯನ ಕಾಲುಂಗುರ
ತೊಡಿಸಿ ನಡೆವೆ ನಿನ್ನೊಟ್ಟಿಗೆ ಹೆಜ್ಜೆ ಸೇರಿಸಿ
ಅನಂತದೆಡೆಗೆ ಕೈಗೆ ಕೈಯ ತಾಕಿಸಿ
ನಾನೂ ಒಲವಿನಲ್ಲೂ, ವೈರಾಗ್ಯದಲ್ಲೂ
ಕೊನೆವರೆಗೆ ನಡೆವ ಭೈರಾಗಿ
ಆರಾಧನೆ ಬೇಡ, ಅರ್ಥವಾದರೆ ಸಾಕು
ದಾಖಲಾಗುವ ಒಲವು ಇಹಕ್ಕಷ್ಟೆ
ನಾವೂ ಇಹ-ಪರವ ತೊರೆದು
ಪ್ರೇಮದ ಬಲೆಯಲ್ಲಿ ಬೀಳುವುದಾದರೆ
ಅಲ್ಲಿ ಯಾರ ಹಂಗೂ ಇಲ್ಲ ಸಖಿ…
5. ಅವ್ವ
ಮಾಸಿದ ಸೀರೆಯಲ್ಲಿ ಏಸೊಂದು ಕನಸುಗಳು
ಹಬ್ಬಿದಾ ಬಳ್ಳಿ, ಹರವಿಗೊಂದು ಹೂವು
ಎಲೆಮೊಗ್ಗು ಚಿತ್ತಾರ ಬಳ್ಳಿಯಾ ಮೈಯಿ
ಹರಿದ ನೆತ್ತರೊಡಲಿನ ಗಾನ ಯಾರೂ ಲೆಕ್ಕವಿಟ್ಟಿಲ್ಲ
ಚಿತ್ತ-ಚಂಚಲೆಯೂ ಹೌದು, ಗಟ್ಟಿಗಿತ್ತಿಯೂ ಹೌದು
ನೆಲಕೆ ನಂಟಿನ ಸೊಬಗ ಬೆಸುಗೆ ಹಾಕಿಸಿದವಳು
ಒಳಗೊಳಗೆ ಕುದಿವ ಮೌನದುರಿಯ ಮಗಳು
ಜ್ವಾಲಾಗ್ನಿ ನುಂಗಿ ನಗುತಲಿಹ ಮರುಳು
ಮಾಸಿದ ಸೀರೆಯಲಿ ಏಸೊಂದು ಕನಸು
ಅಂಬೆಯ ಅಂಬೆ, ಗಿಣಿ ಕುಳಿತ ರೆಂಬೆ
ಹೆಸರಿಡದ ಹೂ ಇವಳು ಪಾರಿಜಾತದ ತಾಯಿ
ಉದುರಿದಷ್ಟು ಮೆರಗು ನೆಲಹಾಸು ಈಕೆ
ಹಚ್ಚೆಯಾ ಕೈಯವಳು ತುಸುಹೆಚ್ಚೆ ವಿಸ್ತಾರ
ಎರೆಮಣ್ಣ ನೆಲದಲ್ಲಿ ತರತರದ ಸೊಬಗಲ್ಲಿ
ಮೂಡಗಾಳಿಯ ಎದುರು, ಮಸಡಿ ಬಿರಿತರು ಕೂಡ
ಬನ್ನಿಗಿಡದಡಿಯ ಕಲ್ಲು ಪಾಂಡವರಿಗೆ ಕೈ ಮುಗಿದು
ದೆವ್ವದ ಗಾಳಿಗೆ ಎದೆಯೊಡ್ಡಿ ನಿಂತ
ಭೂತಾಯಿ ಇವಳು ಜನಕರಾಜನ ಮಗಳು
ನೊಗಕ್ಕೆ ಹೆಗಲ ಕೊಟ್ಟು ಮೊಗಕೆ ಕಾಡಿಗೆ ತೀಡಿ
ಬಿಸಿಲ ಹಂಡೆಯಲಿ ಬೆವರ ಮಜ್ಜನ ಮಾಡಿ
ಒಳಗೊಳಗೆ ತವರ ಹರಸುವಳು ಸಿರಿದೇವಿ ಇವಳು
ಮರುಭೂಮಿಯಲ್ಲಿ ಚಿಗುರೊಡೆದ ಗರಿಕೆ ನನ್ನವ್ವ
************************************************************
ತರೀಕೆರೆ ಮೂಲದವರಾದ ಡಿ.ಎಸ್.ರಾಮಸ್ವಾಮಿಯವರು ಜೀವವಿಮಾ ನಿಗಮದ ಅಧಿಕಾರಿಯಾಗಿ ಅರಸೀಕೆರೆಯಲ್ಲಿ ನೆಲೆಸಿದ್ದಾರೆ.ಇವರ ‘ಉಳಿದ ಪ್ರತಿಮೆಗಳು’ ಕವನಸಂಕಲನಕ್ಕೆಮುದ್ದಣ ಕಾವ್ಯ ಪ್ರಶಸ್ತಿದೊರೆತಿದೆ.
ತುಂಬಾ ಧನ್ಯವಾದ ಸರ್… ನಿಮ್ಮ ಸಲಹೆಗಳು ಸ್ವೀಕೃತ ಸರ್…
ಎಂಥ ಸುಂದರ ರೂಪಕಗಳು…
ಕೊಲ್ಮಿಂಚಿನ ಸಾಲುಗಳು.
ಉರ್ದುವಿನಲ್ಲಿ ಟೆಹೆರಾವ್ ಎಂಬ ಶಬ್ದ ಇದೆ. ಅಂಥ ಪದಗಳು ಇಲ್ಲಿವೆ.
ಒಳಿತಾಗಲಿ.