ಸಹಜ ನಡಿಗೆಯ ರುದ್ರ ನರ್ತನದ
ಭಾವಗಳಂತೆ
ಕುಮಾರ್ ಹೊನ್ನೇನಹಳ್ಳಿ ಪದ್ಯಗಳು
.
ಕುಮಾರ್ ಹೊನ್ನೇನಹಳ್ಳಿ ವೃತ್ತಿಯಿಂದ ಶಿಕ್ಷಕ ಮತ್ತು ಶಿಕ್ಷಕರ ತರಬೇತುದಾರ ಅಂದರೆ ರಿಸೋರ್ಸ್ ಪರ್ಸನ್. ಅವರ ವೃತ್ತಿಯ ಕಾರಣ ಅಂದರೆ ಸಂಪನ್ಮೂಲ ವ್ಯಕ್ತಿಯಾಗಿರುವ ಕಾರಣ ಜಗತ್ತಿನ ಸಮಸ್ತ ಆಗು ಹೋಗುಗಳ ಅರಿವು ಮತ್ತು ಅಂಥ ಸಂಗತಿಗಳು ಒಟ್ಟೂ ಸಮಾಜದ ಮೇಲೆ ಬೀರುವ ಪರಿಣಾಮಗಳನ್ನೂ ಪ್ರಮಾಣಗಳನ್ನೂ ಆನುಷಂಗಿಕವಾಗಿ ಅವರು ಪ್ರಸ್ತಾಪಿಸದೇ ಅನ್ಯ ಮಾರ್ಗಗಳು ಇರುವುದಿಲ್ಲ. ಹಾಗಾಗಿಯೇ ಏನೋ ಇವರ ಕವಿತೆಗಳಲ್ಲಿ ಐತಿಹಾಸಿಕ ವ್ಯಕ್ತಿಗಳೂ ವರ್ತಮಾನದ ಸಂಗತಿಗಳೂ ಆಗೀಗ ಬೇರೆ ಬೇರೆಯದೇ ರೂಪದಲ್ಲಿ ಭೇಟಿಯಾಗುತ್ತಲೇ ಇರುತ್ತವೆ.
ಇವರ ಎಫ್ಬಿ ಖಾತೆಯಲ್ಲಿ Kumara h c holenarsipur ಎಂದಿದೆ. ಎಫ್ಬಿಯ ಅಸಂಖ್ಯಾತ ಪೋಸ್ಟುಗಳ ನಡುವೆ ದಿನಕ್ಕೊಮ್ಮೆಯಾದರೂ ಹಣಕುವ ಲೈಕೋ ಕಮೇಂಟೋ ಅಥವ ತಮ್ಮದೇ ಪಟಗಳನ್ನೇ ತೇಲಿ ಬಿಡುವವರ ನಡುವೆ ಸ್ವಲ್ಪ ಸೀರಿಯಸ್ ಆಗಿಯೇ ಪ್ರತಿಕ್ರಯಿಸುವ ಕುಮಾರ್ ತಮ್ಮ ಕವಿತೆಗಳಿಂದಲೂ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.
ಕಳೆದ ಆರೇಳು ವರ್ಷಗಳಿಂದ ಕವನ ಕೃಷಿಗೆ ಕೈ ಹಾಕಿರುವ ಕುಮಾರ್ ಸದ್ಯ ಹುಣಸೂರಿನ ವಾಸಿ. “ಬೆಳಕಿನೆಡೆಗೆ” ಸಂಘಟನೆಯ ಮೂಲಕ ಹುಣಸೂರಿನಲ್ಲಿ ಸಾಹಿತ್ಯಾಸಕ್ತರ ಗುಂಪಿನ ಜೊತೆ ಒಡನಾಟ ಇಟ್ಟುಕೊಂಡಿರುವ ಇವರು ಶ್ರೀ ಅರವಿಂದ ಚೊಕ್ಕಾಡಿಯವರ ಮಧ್ಯಮಪಂಥದ ಬೆಂಬಲಿಗ.
ಶಿಕ್ಷಣಕ್ಕೆ ಸಂಬಂಧಿಸಿದ ಹಲವು ಲೇಖನಗಳನ್ನು ಡಯಟ್ ಮೈಸೂರಿನ ಮೂಲಕ ಪ್ರಕಟಿಸಿರುವ ಇವರುಯಾವುದೇ ಲೇಖನ ಕವನಗಳನ್ನು ಉಳಿದಂತೆ ಯಾವುದೇ ಪತ್ರಿಕೆಗೂ ಕಳುಹಿಸಿಲ್ಲ ಎಂದು ಹೇಳಿದಾಗ ಆಶ್ಚರ್ಯವಾಗದೇ ಇರದು. ಆದರೂ ಕವನ ಸಂಕಲನ “ಪ್ರಳಯವಾಗುತ್ತಿರಲಿ..” ಪ್ರಕಟಿಸಿದ್ದಾರೆ. ಯಾವ ಪತ್ರಿಕೆಗೂ ಬರೆಯದೆ ಬರಿಯ ಫೇಸ್ಬುಕ್ಕಿನ ಮೂಲಕವೇ ಕವಿತೆ ಪ್ರಕಟಿಸುವ ಶ್ರೀಯುತರ ಸಂಕಲನ ನಾನು ನೋಡದೇ ಇದ್ದರೂ ಅವರ ಫೇಸ್ಬುಕ್ ಕವಿತೆಗಳ ಮೂಲಕವೇ ಅವರೊಳಗಿನ ಕವಿಯ ಭಾವವನ್ನು ಆ ಕವಿಯು ಸಮಾಜದ ನಡವಳಿಕೆಗಳ ಮೇಲೆ ಇರಿಸಿ ಕೊಂಡಿರುವ ನೈತಿಕ ಸಿಟ್ಟನ್ನೂ ಅರಿಯಬಹುದು.
ಶ್ರೀ ಕುಮಾರ್ ಅರವಿಂದ ಚೊಕ್ಕಾಡಿಯವರ ಮಧ್ಯಮ ಪಂಥದ ಸಹವರ್ತಿಯೂ ಆಗಿರುವ ಕಾರಣ ಅವರ ನಿಲುವು ಎಡವೂ ಅಲ್ಲದ ಬಲಕ್ಕೂ ವಾಲದ ಆದರೆ ಸಾಮಾಜಿಕ ಸನ್ನಿವೇಶಗಳಿಗೆ ಆಯಾ ಸಂದರ್ಭಗಳ ಅಗತ್ಯತೆಗೆ ತಕ್ಕಂತೆ ಬಾಗುವುದನ್ನೂ ಬಳುಕುವುದನ್ನೂ ಹಾಗೆಯೇ ಬಗ್ಗದೇ ಸೆಟೆಯುವದನ್ನೂ ಈ ಕವಿತೆಗಳ ಅಧ್ಯಯನದಿಂದಲೇ ಅರಿಯಬಹುದು. ನಿಜದ ಕವಿಯು ನಿಜಕ್ಕೂ ಇಟ್ಟುಕೊಳ್ಳಲೇ ಬೇಕಾದ ನೈತಿಕತೆ ಇದುವೇ ಆಗಿದೆ. ಏಕೆಂದರೆ ಕವಿಯೂ ಮೂಲತಃ ಒಬ್ಬ ಮನುಷ್ಯ. ಅವನಿಗೂ ಎಲ್ಲರ ಹಾಗೆ ಬದುಕಿನ ಸವಾಲುಗಳು, ಸಾಲ ಸೋಲಗಳು, ಸೋಲು ಗೆಲವುಗಳು, ನೈತಿಕತೆಯನ್ನು ಪ್ರಶ್ನಿಸುತ್ತಲೇ ಅನೈತಿಕತೆಗೆ ಎಳೆಸುವ ಪ್ರಲೋಭನೆಗಳು ಈ ಎಲ್ಲವನ್ನೂ ಕವಿಯೂ ಅನುಭವಿಸುತ್ತಲೇ ಇರುತ್ತಾನೆ ಮತ್ತು ಆ ಅಂಥ ಸಂದರ್ಭಗಳಲ್ಲಿ ಎಲ್ಲ ಸಾಮಾನ್ಯರೂ ವರ್ತಿಸುವಂತೆಯೇ ವರ್ತಿಸಿರುತ್ತಾನೆ. ಆದರೆ ಕವಿಯಾದವನು ಆ ಅಂಥ ಅನುಭವವನ್ನು ತನ್ನದೇ ರೀತಿಯಲ್ಲಿ ಅಭಿವ್ಯಕ್ತಿಸಲು ಕವಿತೆಗೆ ಮೊರೆ ಹೋಗುತ್ತಾನೆ. ಮತ್ತು ತನ್ನ ಮುಂದಣ ಸವಾಲುಗಳಿಗೆ ಕವಿತೆಯ ಮೂಲಕವೇ ಉತ್ತರ ಕಂಡು ಕೊಳ್ಳುತ್ತಾನೆ. ಇದನ್ನು ಅವರ “ಸರದಿ” ಅನ್ನುವ ಕವಿತೆಯಲ್ಲಿ
ನೀವೇನೋ ಬಿಡಿ
ಆ ಕಡೆ ಆದರೂ ಸರಿ
ಈ ಕಡೆ ಆದರೂ ಸರಿ
ನಿಂತು ಬಿಡುವಿರಿ
ಏನೂ ಮಾಡಲಾಗದ ಆ ಒಂದು ಗಳಿಗೆ
ನೀವೂ ದಾಟಲೇಬೇಕು
ಆಳ ಎಷ್ಟಿದ್ದರೂ
ಹರವು ಹರವಿದ್ದರೂ
ಕತ್ತಲಲಿ ಹೊರಟರೂ
ಬೆಳಕಿನಲಿ ಹೊರಟರೂ
ಒಪ್ಪಿ ನಡೆದರೂ
ಒಪ್ಪದೆ ಇದ್ದರೂ…… (ಸರದಿ)
ಈ ದ್ವಂದ್ವಗಳ ನಡುವೆಯೂ ಪಯಣವನು ಮುಂದಕ್ಕೆ ಸಾಗಿಸಬೇಕಲ್ಲ ಅನ್ನುವ ವ್ಯಥೆಯ ನಡುವೆಯೇ ಸರದಿಯಲ್ಲಿರುವ ನಾವು ನಮ್ಮಾಚೆ ಇನ್ನೂ ಯಾರೋ ಕಾಯುತ್ತಲೇ ಇದ್ದಾರೆ ಅನ್ನುವ ಅರಿವು ಇಲ್ಲಿ ಮುಖ್ಯ. ಮತ್ತು ಆ ಅದೇ ಭಾವವೇ ಈ ಕವಿತೆಯು ದ್ವಂದ್ವವನ್ನು ಗೆಲ್ಲುವ ಉಪಾಯ ಕಂಡುಕೊಂಡದ್ದು!
ಈ ಕವಿ ವೃತ್ತಿಯಿಂದ ಶಿಕ್ಷಕ. ಹಾಗಾಗಿ ಪ್ರತಿ ವರ್ಷ ಫಲಿತಾಂಶದತ್ತಲೇ ದಿಟ್ಟಿ. ಅವರು ಹೇಳುತ್ತಾರೆ;
ಉದುರಿದ ಎಲೆಗಳ ಗುಡಿಸದೆ
ಕಳಿಯಲು ಬಿಟ್ಟಿದ್ದರೆ
ತನ್ನದೇ ಬುಡದಲಿ? (ಉದುರಿದ ಎಲೆಗಳ ಗುಡಿಸಿ)
ವರ್ತಮಾನದ ಶಿಕ್ಷಣ ವ್ಯವಸ್ಥೆಯನ್ನೂ ಅದು ಅಮೂಲಾಗ್ರವಾಗಿ ಬದಲಾಗಬೇಕಾದ ಅನಿವಾರ್ಯವನ್ನೂ ಹೇಳುತ್ತಿದ್ದಾರೆ ಅನ್ನಿಸಿತು. ಉದುರಿದ ಎಲೆಗಳನ್ನು ಗುಡಿಸಿ ಬಿಸಾಕುವ ಅಂದರೆ ಈಗಾಗಲೇ ಘಟಿಸಿದ ಐತಿಹಾಸಿಕ ಸಾಮಾಜಿಕ ಸನ್ನಿವೇಶಗಳನ್ನು ಕಲಿಕೆಯಲ್ಲಿ ಅಳವಡಿಸಿಕೊಳ್ಳದೇ ಕಡ ತಂದ ರಸ ಗೊಬ್ಬರ ಚಲ್ಲಿದರೆ ಅಂದರೆ ಆಧುನಿಕ ವಿದ್ಯಾಭ್ಯಾಸ ಕ್ರಮ(?) ನೆಲವನ್ನು ಬಂಜರು ಮಾಡುತ್ತಿದೆ ಅನ್ನುವ ಅರಿವು ಸ್ವತಃ ಅನುಭವದಿಂದಲೇ ಕಂಡು ಕೊಂಡ ಕಾಣ್ಕೆ.
” ಕಳೆದ ಆ ನನ್ನ ಮೊಗ” ಕವಿತೆಯು ಧೇನಿಸುವುದು ಸಾಮಾನ್ಯ ಸಂಗತಿಯನ್ನೇ ಆದರೂ ಅದು ಪಡೆಯುವ ನಿಲುವು ಸಾರ್ವತ್ರಿಕವಾಗಿ ಸತ್ಯವಾದುದೂ ಸತ್ವವಾಗಿಯೂ ಇರುವಂಥದು. ಮುಖವಾಡಗಳೊಳಗೇ ಏಗಬೇಕಿರುವ ನಮ್ಮೆಲ್ಲರ ಬದುಕನ್ನೂ ಈ ಕವಿ ಅತ್ಯಂತ ಯಶಸ್ವಿಯಾಗಿ ಹೀಗೆ ಅಭಿವ್ಯಕ್ತಿಸುತ್ತಾರೆ;
ಅದೆಷ್ಟು ವರುಷಗಳಾದವು
ಕನ್ನಡಿಯಲಿ ಅದೆಷ್ಟು ಮುಖಗಳು ಕಂಡವು
ಅದು ನನ್ನದು ಅನ್ನುವ ಯಾವುದೋ ಏನೋ
ಎಲ್ಲಾ ಅಯೋಮಯ
ಮುಂದುವರೆದ ಪದ್ಯ ಕಡೆಯಲ್ಲಿ ಕಂಡುಕೊಳ್ಳುವ ಸತ್ಯ ಹೀಗೆ;
ಅಲ್ಲಿಯವರೆಗೆ ಹೀಗೆ ಅನಿವಾರ್ಯ
ಕನ್ನಡಿಯೊಳಗೆ ಕಾಣುವ
ಸಾವಿರಾರು ಮುಖಗಳಲಿ
ಸಿಕ್ಕ ಒಂದನು ಕಿತ್ತು
ಭುಜಗಳ ಮೇಲೆ ಸಿಕ್ಕಿಸಿಕೊಂಡು …
ಅಂದ ಮಾತ್ರಕ್ಕೆ ಇವರ ಎಲ್ಲ ಕವಿತೆಗಳೂ ಹೀಗೆ ಅನೂಹ್ಯಕ್ಕೆ ಸಲ್ಲುತ್ತವೆ ಎಂದೇನಲ್ಲ. ನಿಜಕ್ಕೂ ಅದ್ಭುತವಾಗಬಹುದಾಗಿದ್ದ “ನಾನು ಮತ್ತು ನನ್ನಂಥವರು” ಕವಿತೆ ಆರಂಭದಲ್ಲಿ ಹುಟ್ಟಿಸಿದ ಭರವಸೆಯನ್ನೂ (ಶೀರ್ಷಿಕೆ ಗಮನಿಸಿ) ಸಾಮಾನ್ಯ ಸಂಗತಿಯನ್ನೂ ಕವಿತೆಯ ವಸ್ತುವನಾಗಿಸುವ ಕ್ರಮವನ್ನೂ ಉದ್ದೀಪಿಸುತ್ತಲೇ ಅಂತ್ಯವಾಗುವ ವೇಳೆಗೆ ತೀರ ಸಾಮಾನ್ಯ ಹೇಳಿಕೆಯಾಗಿಬಿಡುವುದು ನಿರಾಶೆಯ ಸಂಗತಿ. ಇಂಥ ಹಲವು ಪಲಕುಗಳ ನಡುವೆಯೂ ಕವಿ ಅರಳಿ ಮತ್ತೆ ಹೊರಳುವುದು, ಅನೂಹ್ಯಕ್ಕೆ ತಡಕುವುದು ಕಾವ್ಯ ಕೃಷಿಯ ಪರಂಪರೆಯನ್ನು ಅರಿತವರಿಗೆ ತಿಳಿದ ಸಾಮಾನ್ಯ ಅಂಶ. ಏಕೆಂದರೆ ಇಂಥ ಪದ್ಯಗಳ ನಡುವೆ ಅಬ್ಬ ಎನ್ನುವ ಪ್ರತಿಮೆ ರೂಪಕಗಳನ್ನೂ ಈ ಕವಿ ನೀಡಬಲ್ಲರು. ಉದಾಹರಣೆಗೆ “ಪ್ರಶ್ನೆಗಳು” ಕವಿತೆಯ ಈ ಸಾಲು ನೋಡಿ;
ಬಲಹೀನ ನಿಜ
ಬಲಹೀನ ಸುಳ್ಳು ಎರಡನ್ನೂ
ಹೇಳುವುದಿಲ್ಲ ನಿನ್ನೆದುರು
ಹೇಳು ಗೆಳೆಯ ‘ನಿಜ’ವೆಂದರೆ ಏನು?
‘ಸುಳ್ಳು’ ಅದರ ವಿರುದ್ಧ ಪದವೆ?
ಓಡುವ ಕಾಲದ ಜತೆಜತೆಗೆ ಓಡುವಾಗ
ಯಾವುದು ನಿನ್ನ
ಮುಂದಿನ ಕಾಲು
ಹಿಂದಿನ ಕಾಲು?
ಹೀಗೆ ಪ್ರಶ್ನೆಗಳಿಗೆ ಉತ್ತರವನ್ನು ತಡಕದೆಯೇ ಇದ್ದರೆ ಆ ಕವಿ ಬರಿಯ ಹೇಳಿಕೆ ಕೊಟ್ಟಾನು. ಹೇಳಿಕೆ ಮತ್ತು ಘೋಷಣೆಗಳನ್ನು ಬಿಟ್ಟುಕೊಟ್ಟ ಅನುಭವಗಳ ಸಹಜ ಅಭಿವ್ಯಕ್ತಿ ಮಾತ್ರ ಕವಿತೆಯಾಗಿ ಅರಳುತ್ತದೆ ಮತ್ತು ಬಹುಕಾಲ ಓದುಗನ ಮನಸ್ಸಿನಲ್ಲಿ ನಿಲ್ಲುತ್ತದೆ.
ಈಗ ಈವರೆಗೂ ಈ ಕವಿ ಪ್ರಕಟಿಸಿರುವ ಕವಿತೆಗಳಲ್ಲೆಲ್ಲ ಬಹುವಾಗಿ ನನ್ನನ್ನು ಕಾಡಿದ ಮತ್ತು ಎಲ್ಲ ಸಹೃದಯರ ಮನಸ್ಸಿನಲ್ಲೂ ಉಳಿಯಬಹುದಾದ ರಚನೆಯೆಂದರೆ ಸದ್ಯದ ರಿಯಲ್ ವರ್ಲ್ದ್ ಮತ್ತು ವರ್ಚುಯಲ್ ವರ್ಲ್ದ್ ಗಳ ನಡುವಣ ಅಘೋಷಿತ ಯುದ್ಧದ ಪರಿಣಾಮ. ಆ ಪದ್ಯದ ಶೀರ್ಷಿಕೆ “ಹುಚ್ಚು ಹುಚ್ಚಾಗಿ”.
ಸರಕು ಇರದ ಸಂತೆಯಲಿ
ಬರೀ ಮಾತು ಮಾಹಿತಿ…..
ಎಂಥ ವಿಪರ್ಯಾಸದ ಮಾತಿದು? ಸರಕೇ ಇಲ್ಲದ ಸಂತೆಯಲಿ ಮಾರಲೇನಿದೆ? ಕೊಳ್ಳಲೇನಿದೆ? ಇಂಥ ಅದ್ಭುತ ರೂಪಕಗಳನ್ನು ನಿಜ ಕವಿಯು ಮಾತ್ರ ಸೃಷ್ಟಿಸಬಲ್ಲ. ಈ ಮೊದಲೇ ಹೇಳಿದಂತೆ ಫೇಸ್ಬುಕ್ ಕವಿಗಳು ತಮ್ಮ ಪಟಗಳ ಲೈಕು ಕಮೆಂಟುಗಳಲ್ಲಿ ಕಳೆದು ಹೋಗುತ್ತಿರುವಾಗ ನಿಜಕ್ಕೂ ಹೌದೆನ್ನಿಸುವ ಈ ರೂಪಕ ಸೃಷ್ಟಿಸಿದ ಕುಮಾರ್ ಕವಿತೆಯನ್ನು ಮೆಚ್ಚದೇ ಇರುವುದು ಅಸಾಧ್ಯ. ಪದ್ಯದ ಕೊನೆ ಹೀಗಿದೆ;
ಸುಮ್ಮನಿರಬೇಕು ಎಂದುಕೊಂಡರೂ
ಹೆಂಡತಿ ಬಿಡುವುದಿಲ್ಲ
ಮಗ ಕೇಳುತ್ತಾನೆ
“ಅಪ್ಪಾ, ಕುಪ್ಪಳಿಸಿದರೆ ತಪ್ಪೇನು?”
ಕುಪ್ಪಳಿಸುವುದ ನೋಡುತ್ತ
ನಾನೂ ಕುಪ್ಪಳಿಸುತ್ತ
ಅವಳ ಕರೆಗೆ ಓಗೊಟ್ಟು…
ಹಿಮಾಲಯಕ್ಕೆ ಹೋಗುವುದು
ಕನಸು ಬಿಡಿ.
ವಾಹ್, ವಾಸ್ತವದ ಉರುಳಲ್ಲಿ ನರಳುತ್ತಿರುವ ಮತ್ತು ಮತ್ತೇನೋ ಕನಸುವ ಎಲ್ಲರಲ್ಲೂ ಈ ಭಾವನೆ ಇರದೇ ಉಂಟೇ?
ಕುಮಾರ್ ಅವರ “ಪ್ರಳಯವಾಗಲಿ” ಸಂಕಲನ ನಾನು ಓದಿಲ್ಲ. ಪ್ರಾಯಶಃ ಅವರ ಇಂಥ ಪದ್ಯಗಳು ಆ ಸಂಕಲನದಲ್ಲಿ ಇರಲಾರವು. ಹತ್ತು ಹೆರುವುದಕ್ಕಿಂತ ಮುತ್ತ ಹೆರಬೇಕು ಎನ್ನುವುದು ಆಡುಮಾತು. ಅಂತೆಯೇ ಈ ಕವಿ ಹತ್ತು ಜಾಳು ಪದ್ಯ ಹಿಸೆಯುವ ಬದಲು ಒಂದು ರೂಪಕ ಸೃಷ್ಟಿಸುವ ಕೆಲಸಕ್ಕೆ ಕೈ ಹಾಕಲಿ ಎರಡನೆಯ ಸಂಕಲನ ತರುವ ಮನಸ್ಸು ಮಾಡಲಿ ಎನ್ನುವ ಹಾರೈಕೆಯೊಂದಿಗೆ ಅವರ ಐದು ಕವಿತೆಗಳನ್ನು ನಿಮ್ಮೆಲ್ಲರ ಓದಿಗಾಗಿ ಶಿಫಾರಸು ಮಾಡುತ್ತಿದ್ದೇನೆ.
ಕುಮಾರ್ ಹೊನ್ನೇನಹಳ್ಳಿಯವರ ಕವಿತೆಗಳು
೧. ಸರದಿ
ನೀವೇನೋ ಬಿಡಿ
ಆ ಕಡೆ ಆದರೂ ಸರಿ
ಈ ಕಡೆ ಆದರೂ ಸರಿ
ನಿಂತು ಬಿಡುವಿರಿ
ಏನೂ ಮಾಡಲಾಗದ ಆ ಒಂದು ಗಳಿಗೆ
ನೀವೂ ದಾಟಲೇಬೇಕು
ಆಳ ಎಷ್ಟಿದ್ದರೂ
ಹರವು ಹರವಿದ್ದರೂ
ಕತ್ತಲಲಿ ಹೊರಟರೂ
ಬೆಳಕಿನಲಿ ಹೊರಟರೂ
ಒಪ್ಪಿ ನಡೆದರೂ
ಒಪ್ಪದೆ ಇದ್ದರೂ
ಇವೆ ಕೆಲವು ನಿಮ್ಮಾತಿನ ವ್ಯಂಗ್ಯದಂತೆ
ದಾಟುವ ಹೆಜ್ಜೆಗಳಿಗೆ ತಮ್ಮೆದೆಯನೇ ಹಾಸುವ
ಕಡುಮೂರ್ಖ ಶಿಖಾಮಣಿಗಳು
ಗೊತ್ತಿದೆ
ಮಾತು ಮತ್ತು ಹೆಜ್ಜೆಗಳು
ಸಿಗವು ಗಳಿಗೆ ದಾಟಿದ
ಯಾವ ನಿಯಮಗಳಿಗೂ
ಆದರೂ
ನಿಮ್ಮಗಳ ವಜ್ಜೆ ಪಾದಗಳಿಗೆ ತಮ್ಮೆದೆಯನೇ
ಹಾಸಿರುವ ಇವರುಗಳು ಹಾಗೆಯೆ, ತಡಮಾಡಬೇಡಿ
ಯಾರಾದರೇನು ನೀವು, ದಾಟಿರಿ.
ನಡೆದು ಬಂದ ಹಾದಿಯ
ನೋಡಿದರೆ ಹಿಂದಿರುಗಿ
ದಾಟಿರುವೆವು ನಾವೂ
ನಮ್ಮ ಕನಸ ನನಸಿಗೆ ತಮ್ಮ ಕನಸುಗಳ
ನಮ್ಮ ಕಾಲಡಿಗೆ ಹಾಸಿದ್ದವರ
ಎದೆಗಳ ತುಳಿದು
ಮುಗಿಯದ ಹಾದಿಯಲಿ
ಮುಗಿಯಬಾರದು ಪಯಣವೂ
ಬೇಕಾಗಿವೆ ಇನ್ನೂ ಸೇತುವೆಗಳು
ಇದ್ದಾರೆ ಪಯಣಿಗರೂ
ಈಗಲಾದರೂ ನುಡಿಯಬೇಕಲ್ಲವೆ
ಮುಂಚೂಣಿಯಲಿ ನಿಂತಿರುವ ನಿಮ್ಮೆದೆ, ನಮ್ಮೆದೆ
‘ ಇನ್ನಾದರೋ ಸರದಿ ನಮ್ಮದೆ ‘.
೨. ಉದುರಿದ ಎಲೆಗಳ ಗುಡಿಸಿ
ಮಾಗಿ ಕಾಲದಲ್ಲಿ ಮರ
ಎಲೆ ಉದುರಿಸುವಂತೆ ಮಾತು,
ಈ ಮಕ್ಕಳದ್ದು.
ತಾಕೀತು ಮಾಡಿದ್ದೆ
” ಕೈ ಕಟ್ ಬಾಯ್ ಮುಚ್ “
ಮರದ ಬುಡದ ಸುತ್ತ ಉದುರಿದ್ದ
ಎಲೆಗಳ ಗುಡಿಸಿ ಎಸೆದು
ಪಾತಿ ಮತ್ತೊಮ್ಮೆ ಅಗೆದು
ಸುರಿದೆ ರಸಗೊಬ್ಬರ, ಇನ್ನೇನಿದ್ದರೂ
ಕೈತುಂಬಾ ಹಣ ಎಣಿಸುವ ಕನಸು.
ಕೂಡಿ ಕೂರಿಸಿದ ಕೋಣೆಯೊಳಗೆ
ಪಿಳಿಪಿಳಿ ನೋಡುವ ಮಕ್ಕಳು
ಎಲ್ಲವ ನಾನೇ ಹೇಳುತ್ತಿರುವೆ
ಸುಮ್ಮನೆ ಕೇಳುತ್ತಾ ಕಲಿಯಲು ಏನು ದಾಡಿ?
ಯಾರು ಕೊಡುತ್ತಾರೆ ಇಷ್ಟು ಚನ್ನಾಗಿ ರಸಗೊಬ್ಬರ?
ಕೇಳಿದಾಗ,
ಹೇಳಿಕೊಟ್ಟಂತೆ ಉಲಿದಿದ್ದ ಈ ಗಿಳಿಗಳು
‘ ಹಾರಿ ತೋರಿ ‘ ಎಂದಾಗ
ನಿಂತಿವೆ ಹಾಗೆ ಗೊಂದಲದಲಿ.
ಸಾಕಲ್ಲವೆ ಕಾಲುಗಳು ಎಂದೇ
ಕಟ್ಟಿ ಹಾಕಿದ್ದೆ ರೆಕ್ಕೆಗಳ.
ರಸಗೊಬ್ಬರ ಉಂಡುಂಡ ಮಣ್ಣು
ಈಗೀಗ ಬಂಜರು
ಇಳುವರಿ ಇರಲಿ
ಫಲ ಕಚ್ಚಿದರೆ ಸಾಕಾಗಿದೆ.
ಉದುರಿದ ಎಲೆಗಳ ಗುಡಿಸದೆ
ಕಳಿಯಲು ಬಿಟ್ಟಿದ್ದರೆ
ತನ್ನದೇ ಬುಡದಲಿ?
೩. ಹೂವು ಮತ್ತು ಕಲ್ಲು
ಹೂವಿಗೂ ಕಲ್ಲಿಗೂ ಮದುವೆ
ಕರಗಿಸಿ ಮೃದು ಮಾಡಲು ಒದ್ದಾಡಿತು ಹೂವು
ಕಲ್ಲು ಕಲ್ಲೇ ಮಿಸುಕಲಿಲ್ಲ
ದಿನ ಕಳೆದ ಹಾಗೆ
ಹೊಂದಿಕೊಂಡರೂ
ನಲುಗಿ ನಲುಗಿ
ಬಾಡಿ
ಮಣ್ಣಾಯಿತು
ಕಲ್ಲಿಗೇನು, ಗುಂಡಗೆ
ನಿಂತಲ್ಲಿ ನಿಂತು ಕುಂತಲ್ಲಿ ಕುಂತು
ಚಳಿ ಬಿಸಿಲಿಗೇ ಅಲುಗದವನು
ಇನ್ನು ಈ ಹುಲು ಹೂವಿಗೆ
ನಿಮಗೂ ಗೊತ್ತಿದೆ
ನಮ್ಮಲ್ಲಿ ವಿಧುರನ ಲಗ್ನ ಸುಲಭ
ಉಳಿಗೂ ಕಲ್ಲಿಗೂ ಮದುವೆ
ಉಳಿಯ ಮುಂದೆ ಕಲ್ಲೇ ಮಿದು!
ಉಳಿಯ ಒಂದೊಂದು ಪೆಟ್ಟಿಗೂ
ನೋವಾದರೂ ಕಲ್ಲು ಕಲ್ಲೇ.
ಈಗೇನೋ ಅದು ವಿಗ್ರಹವಂತೆ
ನೀಡಿ ಉಳಿಗೆ ವಿಚ್ಛೇದನ
ಪಡೆದು ದೀಕ್ಷೆ
ನೆಲೆಸಿದೆಯಂತೆ ಗುಡಿಯೊಳಗೆ
ಈ ಜನ ನೋಡಿ ಮತ್ತೆ ಮತ್ತೆ
ಗುಡಿಗೆ ಹೂವುಗಳ ಹೊರುವುದು
“ಕಲ್ಲಿಗೂ ಹೂವಿಗೂ”… ಕ್ಷಮಿಸಿ
“ವಿಗ್ರಹಕೂ ಹೂವಿಗೂ”… ಅಲ್ಲಲ್ಲ
“ದೇವರಿಗೂ ಹೂವಿಗೂ” ಬಿಡದೆ
ಮದುವೆ ಮಾಡುವುದು.
ಉಳಿ ಮಾತ್ರ
ಹಟ ತೊಟ್ಟ ಪರಶುರಾಮನಂತೆ
ಕೆತ್ತುತ್ತಲೇ ಇದೆ ಕಲ್ಲುಗಳ
ಹೂಗಳ ಮುತ್ತುವ ಪತಂಗಗಳು
ಮುತ್ತುತ್ತವೆ ದೀಪಗಳನೂ
“ಕಲ್ಲುಗಳ ಮದುವೆಯಾದ ಹೂಗಳಂತೆ…” ಕ್ಷಮಿಸಿ
ದೇವರ ಮದುವೆಯಾದ.
೪. ಕಳೆದ ಆ ನನ್ನ ಮೊಗ”.
ತಲೆಯ ಬಾಚಲು
ನಿಂತಾಗ ಕನ್ನಡಿಯ ಮುಂದೆ
ಕಂಡಂತಾಯಿತು
ಸಾವಿರಾರು ನನ್ನವೇ ಮುಖಗಳು
ಯಾವುದೋ ಕೋನದಲಿ
“ಹೇ ಇದು ಚಂದ” ಅನಿಸಿದ
ಒಂದನು ಕಿತ್ತು
ಸಿಗಿಸಿಕೊಂಡೆ ಭುಜಗಳ ಮೇಲೆ
ಅದರ ತಲೆ ಬಾಚಿ
ಒಪ್ಪ ಓರಣಗೊಳಸಿಯೇ
ಹೊರ ಹೊರಡುವುದು
ಎಂತ ಅಸಂಬದ್ಧ ಗೊತ್ತೆ
ಯಾವಾಗಲೋ ಕೆಲಸದ ಮಧ್ಯದಲಿ
ಕನ್ನಡಿಯಲಿ ಇಣುಕಿದರೆ
ಕುಳಿತಿರುವುದು ಭುಜಗಳ ಮೇಲೆ
ಬದಲಾದ ಬೇರೊಂದು
ಕೆಲಸ ಮುಗಿಸಿ ಮನೆಗೆ ಬಂದು
ಕನ್ನಡಿಯಲಿ ಇಣುಕಿದರೆ
ಮತ್ತಾವುದೋ
ಮಗಳು
ಓಡಿ ಬಂದು ತೊಡೆಯ ಮೇಲೇರಿದರೆ
ಮಂದಹಾಸದ ಆದೇ ಬೇರೆ
ಹೀಗೆ
ಪ್ರತೀ ಸಲವೂ
ಒಂದೊಂದು
ಬದಲಾಗಿ ಬಿಡುವುದು
ಹೆಂಡತಿ ಹೇಳುವಳು
ಗೆಳೆಯನೂ ಹೇಳುವನು
ಒಮ್ಮೊಮ್ಮೆ ಅಮ್ಮನೂ
ಅಪರೂಪಕೆ ಸಿಕ್ಕವರು
ದಿನವೂ ಸಿಗುವವರು
ಎಲ್ಲರೂ
“ಇದು ನೀನಲ್ಲ
ನೀ ಹೀಗಿರಲಿಲ್ಲ”
ಅದೆಷ್ಟು ವರುಷಗಳಾದವು
ಕನ್ನಡಿಯಲಿ ಅದೆಷ್ಟು ಮುಖಗಳು ಕಂಡವು
ಅದು ನನ್ನದು ಅನ್ನುವ ಯಾವುದೋ ಏನೋ
ಎಲ್ಲಾ ಅಯೋಮಯ
ಇರಲಿ,
ದಯಮಾಡಿ
ಬಲ್ಲವರು
ಹುಡಿಕಿಕೊಡುವಿರಾ
ಆ ನನ್ನ ಮೊಗವ
ಅಲ್ಲಿಯವರೆಗೆ ಹೀಗೆ ಅನಿವಾರ್ಯ
ಕನ್ನಡಿಯೊಳಗೆ ಕಾಣುವ
ಸಾವಿರಾರು ಮುಖಗಳಲಿ
ಸಿಕ್ಕ ಒಂದನು ಕಿತ್ತು
ಭುಜಗಳ ಮೇಲೆ ಸಿಕ್ಕಿಸಿಕೊಂಡು ..
೫. ಹುಚ್ಚುಹುಚ್ಚಾಗಿ
ಸತ್ಯಹರಿಶ್ಚಂದ್ರನೆ ಆದರೂ
ಆಧಾರ್ ಕಾರ್ಡ ನೋಡದೆ
ಒಪ್ಪುವುದು ಹೇಗೆ ? ಅದೂ ಈ ಕಾಲದಲ್ಲಿ!
ಫೋಟೊದಲ್ಲಿ ಸುಂದರಿ ನಿಜ
ಎದುರಿಗೆ ನಿಂತಾಗಲೇ ಅಲ್ಲವೆ
ನಿಜ ಬಣ್ಣ
ಫೇಸ್ಬುಕ್ಕು , ವಾಟ್ಸಪ್ಪಿನ ಗೆಳೆಯರು
ಆಫ್ ಲೈನಿನಲ್ಲಿ ಗೊತ್ತಿದ್ದರೆ,
ಇಲ್ಲವಾದರೆ
ಹೆಣ್ಣು ಹೆಸರಿನ ಗಂಡು
ಗಂಡು ಹೆಸರಿನ ಹೆಣ್ಣು
ಅಥವ ಅವೆರಡೂ ಇರಬಹುದು
PROFILE ಫೋಟೋನ ಹಿಂದೆ
“ಮುಖ ಮರೆಸಿಕೊಳ್ಳಲು ಈಗ
ಫೋನ್ ನಂಬರ್ ಬದಲಿಸಿದರೆ ಸಾಕಂತೆ”
ಭೂಮಿ ಇನ್ನೂ ಚಪ್ಪಟೆ ಆಗಿಲ್ಲ
ಕಣ್ಣು ಮುಚ್ಚಿ ಹಾಲು ಕುಡಿವ ಬೆಕ್ಕೆ
ಯೌವನ ಹೊತ್ತವರ ಹಿಡಿಯಲು
ಹಿರಿ ಕಿರಿ ಕಂಪನಿಗಳ ಪೈಪೋಟಿ
ಒಂದಿಷ್ಟು ಹುಮ್ಮಸ್ಸಿನ
ಉಪ್ಪು- ಖಾರ ಸವರಿದರೆ ಸಾಕು ಅವರೆದೆಗೆ
ನೆಲದ ಆಳಕ್ಕೆ ಆಕಾಶದ ಎತ್ತರಕೆ
ನಡದೇ ಬಿಡುವರು ಹಿಂದು ಮುಂದು
ಏನೂ ನೋಡದೆ.
ಪದಾತಿ ದಳ ಇರುವುದು ಏಕೆ?
ಸುಮ್ಮನೆ ಮುಂದೆ ನಡೆಸಿದರೆ ಸಾಕು
ಚದುರಂಗದ ಕಾಲಾಳು ಕಾಯಿಯಂತೆ
ಸಿಡಿದಿದ್ದು ಪೆಲೆಟ್ ಗುಂಡೋ ಕಬ್ಬಿಣದ್ದೋ
ಕೂಡಲೆ ತಿಳಿವುದು ,
ಸಂಧಾನ ಅಥವ ಧಾಳಿ
ನಿರ್ಧರಿಸುವುದು ಸುಲಭ ಇನ್ನು ಮುಂದೆ.
ಪ್ರಶ್ನೆ ಮೇಲೆ ಪ್ರಶ್ನೆ ಮಾಡಿ
ಕಾಟ ಕೊಡುವ
ಈ ತರಲೆ ಶಿಷ್ಯನ
BLOCK ಮಾಡಿದರೆ
ನನ್ನ ದ್ರೋಣಾಚಾರ್ಯರ ನಡುವೆ
ಉಳಿದ ವ್ಯತ್ಯಾಸವಾದರೂ ಏನು?
ಹಾಡುವುದೆಂದರೆ…
ಹೊಗಳಿ ಹೊಗಳಿ ತೇಗುವುದೆ?
ಬೇಡಿ ಬೇಡಿ ಕುಸಿಯುವುದೆ?
ಹಳಿದುಕೊಂಡು ನರಳುವುದೆ?
ಸರಕು ಇರದ ಸಂತೆಯಲಿ
ಬರೀ ಮಾತು ಮಾಹಿತಿ
ನೋಡಿ ನೋಡಿ ಕನ್ನಡಕ ಬಂದಿದೆ
ಡಾಕ್ಟರು ಕೊಟ್ಟ ಗುಳಿಗೆಗಳಿಗೆ
ಹಣ ಕೊಟ್ಟಾಗಿದೆ ನುಂಗಲಾಗುತ್ತಿಲ್ಲ
ಮತ್ತದೇ ಹಳಹಳಿಕೆ
ಬೆಳಗ್ಗೆ ಬೆಳಗ್ಗೆ ಏಳಲಾಗುತ್ತಿಲ್ಲ
ಅಪ್ಪ ಹಾಕಿದ ಆಲದ ಮರಕ್ಕೆ
ಹಲವು ರೆಂಬೆಗಳು
ಬಿಳಲಿಗೆ ನೇತು ನಿಲ್ಲಬಾರದೆಂದೇ
ರೆಂಬೆಗೆ ಹತ್ತಿದ್ದು
ಈಗ ಅದೂ ಬಾಗುತ್ತಿದೆ
ಸುಮ್ಮನಿರಬೇಕು ಎಂದುಕೊಂಡರೂ
ಹೆಂಡತಿ ಬಿಡುವುದಿಲ್ಲ
ಮಗ ಕೇಳುತ್ತಾನೆ
” ಅಪ್ಪಾ , ಕುಪ್ಪಳಿಸಿದರೆ ತಪ್ಪೇನು?”
ಕುಪ್ಪಳಿಸುವುದ ನೋಡುತ್ತ
ನಾನೂ ಕುಪ್ಪಳಿಸುತ್ತ
ಅವಳ ಕರೆಗೆ ಓಗೊಟ್ಟು…
ಹಿಮಾಲಯಕ್ಕೆ ಹೋಗುವುದು ಕನಸು ಬಿಡಿ.
***********************************************