ಕಸಾಪಗೆ ಮಹಿಳಾ ಅಧ್ಯಕ್ಷರು

ಚರ್ಚೆ

ಕಸಾಪಗೆ ಮಹಿಳಾ ಅಧ್ಯಕ್ಷರು

ಒಂದು ಚರ್ಚೆ

ಮೆಲ್ಕಂಡವಿಷಯವಾಗಿ ಸಂಗಾತಿ ಪತ್ರಿಕೆ ಕನ್ನಡದ ಬರಹಗಾರರಿಗೆ ಕೆಲವು ಪ್ರಶ್ನೆಗಳನ್ನು ಹಾಕಿತ್ತು ಅದಕ್ಕೆ ಬಂದ ಉತ್ತರಗಳನ್ನು ಇಲ್ಲಿ ಒಂದೊಂದಾಗಿಪ್ರಕಟಿಸಲಾಗುತ್ತಿದೆ.

ಸಂಗಾತಿ ಕೇಳಿದ ಪ್ರಶ್ನೆಗಳು

ಪ್ರಶ್ನೆ ಒಂದು,ಇದಕ್ಕಿರುವ ಕಾರಣಗಳೇನು?ಇದನ್ನು ಹೇಗೆ ವಿಶ್ಲೇಷಿಸುತ್ತೀರಿ?

ಪ್ರಶ್ನೆ ಎರಡು,ಸಮಾನತೆಯ ಈ ಯುಗದಲ್ಲಿ ಮಹಿಳೆಯೊಬ್ಬರು ಅಧ್ಯಕ್ಷರಾಗುವುದು ಸಾದ್ಯವೆಂದು ನಂಬುವಿರಾ?ಸಾದ್ಯವೆಂದಾದರೆ ಹೇಗೆ?

ಪ್ರಶ್ನೆ ಮೂರು,ಮಹಿಳೆಯೊಬ್ಬರು ಅಧ್ಯಕ್ಷರಾಗದಂತೆ ತಡೆಯುವ ಶಕ್ತಿಗಳನ್ನು ಹೇಗೆ ಎದುರಿಸಬಹುದು?

ಪ್ರಶ್ನೆ ನಾಲ್ಕು, ಮಹಿಳೆಗೆ ಈ ಅಧ್ಯಕ್ಷಸ್ಥಾನ ಮೀಸಲಾತಿ ರೂಪದಲ್ಲಿ ಸಿಗಬೇಕೆಂದು ಬಯಸುವಿರಾ ಇಲ್ಲ ಚುನಾವಣೆಯ ಮೂಲಕವೇ ದೊರೆಯಬೇಕೆಂದು ಬಯಸುವಿರಾ?

ಪ್ರಶ್ನೆ ಐದು, ಈ ನಿಟ್ಟಿನಲ್ಲಿ ಮಹಿಳಾ ಅಧ್ಯಕ್ಷರ ಪರ ಒಲವಿರುವ ಪುರುಷ ಮತ್ತು ಮಹಿಳೆಯರು ಯಾವ ರೀತಿಯ ಹೆಜ್ಜೆಗಳನ್ನು ಇಡಬೇಕು

ಡಾ.ಪಾರ್ವತಿ ಜಿ.ಐತಾಳ್

ಮಹಿಳಾ ಅಧ್ಯಕ್ಷರು ಖಂಡಿತಾ ಬೇಕು

………………………………………….

ಮಹಿಳೆಯರ ಸ್ಥಿತಿಗತಿಗಳು ಮೊದಲಿನಂತಿಲ್ಲ, ಅವರಿಗೆ ಬೇಕಾದಷ್ಟು ಸ್ವಾತಂತ್ರ್ಯ ಸಿಕ್ಕಿದೆ, ಶಿಕ್ಷಣ-ಉದ್ಯೋಗಾವಕಾಶಗಳು ಸಿಕ್ಕಿವೆ ಅನ್ನುತ್ತಾರೆ. ಸಾವಿರಾರು ವರ್ಷಗಳಿಂದ ಶೋಷಣೆ-ದಬ್ಬಾಳಿಕೆ, ಹಿಂಸೆ-ದೌರ್ಜನ್ಯಗಳಿಂದ ನಲುಗುತ್ತಲೇ ಬಂದಿರುವ ಹಿಂದಿನ ಕಾಲದ ಸ್ತ್ರೀಯರ ದುಸ್ಥಿತಿಗೆ ಹೋಲಿಸಿ ನೋಡಿದರೆ ಈ ಮಾತುಗಳು ನಿಜವೇ ಆದರೂ ಇವೆಲ್ಲವೂ ಹೊರನೋಟಕ್ಕೆ ಕಾಣುವ ಬದಲಾವಣೆಗಳು ಅಷ್ಟೆ. ಸ್ತ್ರೀಯರ ಇಂದಿನ ನಿಜಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿ ನೋಡಿ ತಿಳಿಯ ಬೇಕಾದುದು ಬಹಳಷ್ಟಿದೆ.

         ಸದಾ ಸಾಮಾಜಿಕ ಸಮಾನತೆಯ ಬಗ್ಗೆ ಏರುಧ್ವನಿಯಲ್ಲಿ ಭಾಷಣ ಬಿಗಿಯುವ  ಅನೇಕರು ಸ್ತ್ರೀಯರಿಗೆ ಸಮಾನ ಸ್ಥಾನ ಕೊಡುವ ವಿಚಾರದಲ್ಲಿ ತೆರೆಯ ಹಿಂದೆ ಸರಿಯುತ್ತಾರೆ. ಯಾಕೆಂದರೆ ಅವರು ತಮ್ಮ ತಮ್ಮ ಮನೆಗಳಲ್ಲೇ ತಾಯಿ, ಹೆಂಡತಿ, ಮಗಳಂದಿರು ಅಕ್ಕ ತಂಗಿಯರನ್ನು  ಅಡುಗೆ ಕೆಲಸ, ಮನೆಗೆಲಸ ಮತ್ತು ಇನ್ನಿತರ ಹಲವಾರು ವಿಚಾರಗಳಲ್ಲಿ ಅಸಮಾನತೆಯ ನೆಲೆಯಲ್ಲೇ ನಡೆಸಿಕೊಳ್ಳುವವರಾಗಿರುತ್ತಾರೆ. ಇವೆಲ್ಲವೂ ಸಂಪ್ರದಾಯ-ಪದ್ಧತಿಗಳ ಹೆಸರಿನಲ್ಲೇ ನಡೆಯುತ್ತವೆ. ಹೆಂಗಸರು ಮಾಡುವ ಕೆಲಸಗಳನ್ನು ತಾವು ಮಾಡುವುದು ತಮ್ಮ ಘನತೆಗೆ ಕಡಿಮೆ ಎಂದು ತಿಳಿದುಕೊಳ್ಳುವ ಪುರುಷರು ಇಂದಿಗೂ ನಮ್ಮ ಸುತ್ತು ಮುತ್ತ ಇದ್ದಾರೆ. ವೇದಿಕೆಯ ಮೇಲೆ ಸಮಾನತೆಯ ಮಾತುಗಳನ್ನಾಡಿ ಮನೆಗೆ ಹೋದ ಕೂಡಲೇ ಹೆಂಗಸರ ಕೈಯಲ್ಲಿ ಸೇವೆ ಮಾಡಿಸಿಕೊಳ್ಳುವವರಿದ್ದಾರೆ. ಬೆರಳೆಙಿಕೆಯ ಮಂದಿ ಸ್ತ್ರೀಯರ ಬಗ್ಗೆ ಸಹಾನುಭೂತಿ ತೋರಿಸುವವರಿದ್ದರೂ ಅವರು ಸಮಾನ ಜವಾಬ್ದಾರಿಯನ್ನು ಹೊರಲು ಎಂದೂ ಸಿದ್ಧರಾಗುವುದಿಲ್ಲ. ಮನೆಯಲ್ಲೇ ಗಾಣದೆತ್ತಿನಂತೆ ದುಡಿಯುವ ಪೂರ್ಣಕಾಲಿಕ ಗೃಹಿಣಿಯಾದರೂ ಉದ್ಯೋಗದಲ್ಲಿದ್ದು ಇಮ್ಮಡಿ ಜವಾಬ್ದಾರಿಗಳನ್ನು ಹೊರುವ ಸ್ತ್ರಿಯಾದರೂ ಅವರನ್ನು ಪುರುಷರು ನಡೆಸಿಕೊಳ್ಳುವ ರೀತಿಯಲ್ಲಿ ಇನ್ನೂ ಬದಲಾವಣೆಯಾಗಿಲ್ಲ.

  ರಾಜಕೀಯದಲ್ಲೂ ಅಷ್ಟೆ. ಸ್ತ್ರೀಯರಿಗೆ ೩೩% ಮೀಸಲಾತಿಯ ಪ್ರಶ್ನೆ ಇನ್ನೂ ಬಗೆಹರಿದಿಲ್ಲ.ಪಂಚಾಯತ್-ನಗರಸಭೆಗಳಲ್ಲಿ ಮಹಿಳೆಯರು ಸ್ಪರ್ಧಿಸಿ ಆಯ್ಕೆಗೊಳ್ಳುತ್ತಾರಾದರೂ ಆಡಳಿತ ಸೂತ್ರವನ್ನು ಪೂರ್ತಿಯಾಗಿ ಕೈಯೊಳಗಿಟ್ಟುಕೊಳ್ಳುವವರು ಬಹಳ ಕಡಿಮೆ. ಎಷ್ಟೋ ಸಲ ಅವರು ಪುರುಷರ ಕೈಗೊಂಬೆಗಳಾಗಿರುತ್ತಾರೆ.ಹೆಣ್ಣಿನ ಸ್ಥಾನಮಾನಗಳ ಸುತ್ತ ಸುತ್ತಿಕೊಂಡಿರುವ ಸಾಂಪ್ರದಾಯಿಕ ಕಟ್ಟುಪಾಡುಗಳೇ ಇದಕ್ಕೆ ಕಾರಣ. ತನ್ನ ದೈನಂದಿನ ಬದುಕಿನ ಜಂಜಾಟಗಳಿಂದ ದಣಿಯುವ ಆಕೆಗೆ    ಯಾವುದರಲ್ಲಿಯೂ ಆಸಕ್ತಿ ಉಳಿಯುವುದಿಲ್ಲ.

   ವಿವಾಹ ಮತ್ತು ಕುಟುಂಬ ವ್ಯವಸ್ಥೆಗಳು ಭಾರತೀಯ ಸಂಸ್ಕೃತಿಯ ಜೀವಾಳ. ಅದು ಇವತ್ತಿನ ವರೆಗೆ ಜೀವಂತವಾಗಿದ್ದರೆ  ಮಹಿಳೆಯರ ಸಹನೆ, ತ್ಯಾಗ ಹಾಗೂ ಶರಣಾಗತಿಯ ಮನೋಭಾವಗಳೇ ಕಾರಣ. ಇಂದಿನ ಬದಲಾದ ವಾತಾವರಣದಲ್ಲಿ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸುವಲ್ಲಿ ಹೆಣ್ಣಿನ ಪಾಲಿಗೆ ಅಡ್ಡಿಯಾಗುವುದು ಇವೇ ವಿಷಯಗಳು. ಮನೆಗೆ ಬೇಕಾದ ಹಣ ಸಂಪಾದನೆ ಮಾಡುವವನೆಂದು ಎದೆಯುಬ್ಬಿಸಿ ಹೇಳುವ ಗಂಡಸರಿಗಿಂತ ದುಪ್ಪಟ್ಟು ಕೆಲಸಗಳನ್ನು ಮನೆಯಲ್ಲಿ ಮಾಡುವ ಮಹಿಳೆಯರು ಮನೆ-ಗಂಡ-ಮಕ್ಕಳಿಗಾಗಿ ತಮ್ಮ ಸಮಯ ಮತ್ತು ಶಕ್ತಿಗಳನ್ನು ಪೂರ್ತಿಯಾಗಿ ವ್ಯಯಿಸಬೇಕಾಗುತ್ತದೆ. ಕೌಟುಮಬಿಕ ಬದುಕಿನಿಂದ ದೂರ ಉಳಿಯುವ ಮಹಿಳೆಯರಿಗಷ್ಟೇ ಹೊರಗಿನ ಕೆಲಸಗಳಲ್ಲಿ ಭಾಗವಹಿಸುವುದು ಸುಲಭವಾಗುತ್ತದೆ.

  ಸಾಹಿತ್ಯ ಕ್ಷೇತ್ರದಲ್ಲೂ ಅಷ್ಟೆ.ಮಹಿಳೆಯರು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸುಮಾರು ಒಂದು-ಒಂದೂವರೆ ಶತಮಾನಗಳಷ್ಟೇ ಆಗಿವೆ. ಅದರಲ್ಲೂ ಇಂದು ಪುರುಷ ಸಾಹಿತಿಗಳಿಗೆ ಸಮನಾಗಿ ನಿಲ್ಲುವವರು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ. ಇನ್ನು ಸಭೆ-ಸಮ್ಮೇಳನಗಳನ್ನು ನೋಡಿದರೆ ವೇದಿಕೆಯಲ್ಲಿ ಹತ್ತರಲ್ಲಿ ಒಂಬತ್ತು ಮಂದಿಯೂ ಪುರುಷರೇ ಆಗಿರುತ್ತಾರೆ. ವೆದಿಕೆಯ ಒಂದು ಬದಿಯಲ್ಲಿ ನಿಂತು ಪ್ರಾರ್ಥನೆ ಹಾಡುವುದೋ ಸ್ವಾಗತಿಸುವುದೋ ಕಾರ್ಯಕ್ರಮ ನಿರೂಪಿಸುವುದೋ ಮುಂತಾದ ಚಿಲ್ಲರೆ ಕೆಲಸಗಳಿಗೆ ಮಹಿಳೆಯರ ಪಾತ್ರ ಸೀಮಿತವಾಗಿರುತ್ಯದೆ. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ ನೂರು ವರ್ಷಗಳು ಕಳೆದರೂ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟ ಸಿಕ್ಕಿದ ಮಹಿಳೆಯರು ಒಬ್ಬರೋ ಇಬ್ಬರೋ ಮಾತ್ರವೆಂದರೆ ಏನರ್ಥ?  ಸಿಕ್ಕುವ ಎಲ್ಲಾ ಅಧಿಕಾರ-ಅವಕಾಶಗಳನ್ನು ಬಾಚಿಕೊಳ್ಳಲು ಪುರುಷ ವರ್ಗವೇ ಹೊಂಚು ಹಾಕುತ್ತಿರುವಾಗ ಮೊದಲೇ ಬಸವಳಿದು ತನಗೇನೂ ಬೇಡವೆಂದು ದೂರ ನಿಲ್ಲುವ ಮಹಿಳೆಯರಿಗೆ ಸ್ಥಾನಮಾನಗಳು ಸಿಗುವುದಾದರೂ ಹೇಗೆ?

  ಹೌದು. ನಮ್ಮಲ್ಲಿ ಪ್ರತಿಭಾವಂತ ಮಹಿಳೆಯರು, ಪ್ರಾಮಾಣಿಕವಾಗಿ ಕೆಲಸ ಮಾಡಬಲ್ಲವರು ಸಾಕಷ್ಟು ಮಂದಿ ಇದ್ದಾರೆ. ಅಂಥವರು ಕನ್ನಡ ಸಾಹಿತ್ಯ ಪರಿಷತ್ತಿನಂಥ ಸಂಸ್ಥೆಗಳ ಅಧ್ಯಕ್ಷ ಪದವಿಗೆ ಏರಬೇಕು. ಮನೆಯಲ್ಲಿ ತನ್ನ ದುಡಿಮೆಯನ್ನು ಗುರುತಿಸುವವರಿಲ್ಲದಿದ್ದರೂ ನಿಸ್ವಾ ರ್ಥವಾಗಿ ಕರ್ಮಯೋಗಿಯಂತೆ ದುಡಿಯುವ ಮಹಿಳೆ ಒಂದು ಸಾರ್ವಜನಿಕ ಸಂಸ್ಥೆಯಲ್ಲೂ ಹಣದಾಸೆ-ಅಧಿಕಾರದಾಸೆಗೆ ಬಲಿಯಾಗದೆ ಸಮರ್ಪಕವಾಗಿ ಸೇವೆ ಮಾಡಬಲ್ಲಳು. ಬಹುಶಃ  ಮಹಿಳೆಯರ ಸಮಸ್ಯೆಯ ನಿವಾರಣೆಗಾಗಿಯೂ ಆಕೆ ಪ್ರಯತ್ನಿಸಬಲ್ಲಳು.

ಅದರೆ ಮಹಿಳೆ ಅಧ್ಯಕ್ಷಳಾಗಬೇಕಿದ್ದರೆ ಚುನಾವಣಾ ಪ್ರಚಾರದಿಂದ ಹಿಡಿದು ಅಧಿಕಾರಾವಧಿಯ ಕೊನೆಯ ತನಕವೂ ಪುರುಷರ ಸಹಕಾರ-ಬೆಂಬಲಗಳು ಆಕೆಗೆ ಅಗತ್ಯವಿದೆ. ಹಾಗೆಂದು ಮೀಸಲಾತಿಯ ಅಗತ್ಯವಿಲ್ಲ.   ಸರಕಾರವೇ ಒಂದು ಬಾರಿ ಕೇವಲ ಪುರುಷರು ಮಾತ್ರ ಚುನಾವಣೆಗೆ ಸ್ಪರ್ಧಿಸುವುದು, ಇನ್ನೊಮ್ಮೆ ಮಹಿಳೆಯರು ಮಾತ್ರ ಸ್ಪರ್ಧಿಸುವುದು ಎಂಬ ನಿಯಮವನ್ನು ಮಾಡುವುದು  ಸೂಕ್ತ. ಇದರಿಂದ ಮಹಿಳೆಯರಿಗೆ ಸಮಾನ ಅವಕಾಶಗಳು ಸಿಕ್ಕುವುದು ಖಾತ್ರಿಯಾಗುತ್ತದೆ.

***********************************************

Leave a Reply

Back To Top