ಏನಿರದಿದ್ದರೂ ಸೂಕ್ಷ್ಮಮನಸ್ಸಿರ ಬೇಕು

ಲೇಖನ

ಏನಿರದಿದ್ದರೂ ಸೂಕ್ಷ್ಮಮನಸ್ಸಿರ ಬೇಕು

ನೂತನ ದೋಶೆಟ್ಟಿ

ಅವಳು ಸ್ವೇಹಿತೆಯರ ಸಹಾಯದಿಂದ ಡಿಗ್ರಿ ಮುಗಿಸಿದಳು. ತರಗತಿಯ ಸಮಯದಲ್ಲಿ ಲಕ್ಷ್ಯ ಕೊಟ್ಟು ಕೇಳುತ್ತಿದ್ದರೂ ಬರೆದುಕೊಳ್ಳಲು ಅವರ ನೆರವು ಬೇಕಾಗುತ್ತಿತ್ತು. ಪರೀಕ್ಷೆಯ ಸಮಯದಲ್ಲಿ ಅವರು ಅವಳಿಗೆ ಇಡಿಯ ಪುಸ್ತಕವನ್ನು, ನೋಟ್ಸುಗಳನ್ನು ಓದಿ ಹೇಳುತ್ತಿದ್ದರು. ತಮ್ಮ ಪರೀಕ್ಷೆಯ ಸಿದ್ಧತೆಯ ಜೊತೆಗೆ ಅವಳ ಪರೀಕ್ಷೆಯ ಸಿದ್ಧತೆಯನ್ನು ಮಾಡುವ/ಮಾಡಿಸುವ ಜವಾಬ್ದಾರಿ ಅವಳ ಸ್ನೇಹಿತೆಯರದು. ಅದನ್ನು ಅವರೆಲ್ಲ ಮನಃಪೂರ್ವಕವಾಗಿ ಮಾಡುತ್ತಿದ್ದರು.


ಪರಿಕ್ಷೆ ಮುಗಿದ ಮೇಲೆ ಸ್ನೇಹಿತೆಯರೆಲ್ಲ ಸೇರಿ ಪಿಕ್ಚರ್ ಪ್ರೋಗ್ರ‍್ರಾಂ ಹಾಕುತ್ತಿದ್ದರು. ಅದಕ್ಕೆ ಅವಳು ನಾನು ಹೇಗೆ ನಿಮ್ಮೊಡನೆ ಬರಲಿ? ನೀವೆಲ್ಲ ಹೋಗಿ ನೋಡಿಕೊಂಡು ಬನ್ನಿ ಎಂದರೆ ಅವಳಂತೆ ತಾವೂ ಸಿನಿಮಾವನ್ನು ಕೇಳಿಸಿಕೊಂಡೇ ಸಂತಸ ಪಡುತ್ತಿದ್ದರು. ಅದಕ್ಕಾಗಿ ಅವರು ತಮ್ಮ ಮನೆಯ ಹತ್ತಿರದಲ್ಲಿದ್ದ ಟಾಕೀಸಿನ ಹಿಂಭಾಗದ ವಿಸ್ತಾರವಾದ ಕಟ್ಟೆಯ ಮೇಲೆ ಕುಳಿತು ಮೈಯೆಲ್ಲ ಕಿವಿಯಾಗಿ ಸಿನಿಮಾವನ್ನು ಕೇಳಿಸಿಕೊಂಡು ಆನಂದಿಸುತ್ತಿದ್ದರು. ಇದು ಅವರ ಸ್ನೇಹ. ಅವರು ಅಂಜುಂಗೆ ಗೆಳತಿಯರಷ್ಟೇ ಅಲ್ಲ. ಆಕೆಯ ಕಣ್ಣಾಗಿದ್ದರು. ಆಕೆ ತಮ್ಮಂತೆಯೇ ಕಾಲೇಜಿನ ದಿನಗಳನ್ನು ಆನಂದಿಸಬೇಕೆಂದು ತಾವು ನೋಡುತ್ತಿದ್ದುದನ್ನು ಕೆಲವು ಬಾರಿ ಆಕೆಗೆ ಹೇಳುತ್ತ, ಕೆಲವು ಬಾರಿ ಅವಳಂತೆಯೇ ಕಿವಿಗಳಲ್ಲಿ ಆಸ್ವಾದಿಸುತ್ತ, ಜಾತಿ ಧರ್ಮಗಳ ಗಡಿ ಮೀರಿದ ನಿಸ್ಪೃಹ ಸ್ನೇಹಕ್ಕೆ ಮಾದರಿಯಂತಿದ್ದರು.


ಸದಾ ಉತ್ಸಾಹದ ಚಿಲುಮೆಯಾದ ಅಂಜುಂ ಓದು ಮುಗಿದ ಕೂಡಲೇ ಉದ್ಯೋಗದ ಸಂದರ್ಶನಕ್ಕೆ ಸಿದ್ಧಳಾದಳು. ಅದಕ್ಕಾಗಿ ಮಾತಿನ ಮೂಲಕ ಅರಿಯಬಹುದಾದ ಮೊಬೈಲನ್ನು ಬಳಸಿ ಉಳಿದ ಆಪ್‌ಗಳನ್ನು ಅದರಲ್ಲಿ ಅಳವಡಿಸಿಕೊಂಡಳು. ಸಂದರ್ಶನದಲ್ಲಿ ಅವಳಿಗೆ ತನ್ನ ಕಾರ್ಯ ವಿಧಾನವನ್ನು ವಿವರಿಸಲು ಕೇಳಿದಾಗ ಅವಳು ನೀಡಿದ ಪ್ರಾತ್ಯಕ್ಷಿಕೆಗೆ ಉದ್ಯೋಗದಾತರು ದಂಗಾಗಿ ಉದ್ಯೋಗ ಅವಳಿಗೆ ಒಲಿದು ಬಂತು. ಆ ಪ್ರತಿಷ್ಠಿತ ಕಂಪನಿ ಅವಳಿಗೆ ಒಬ್ಬ ಸಹಾಯಕನನ್ನು ನೀಡಿ ಅವಳಿಗೆ ಗೌರವ ಸಲ್ಲಿಸಿತು. ಅಂಜುಂ ಇದನ್ನೆಲ್ಲ ಛಲದಿಂದ, ಸ್ವಾಭಿಮಾನದಿಂದ, ಆತ್ಮಬಲದಿಂದ ಸಾಧಿಸಿದಳು.
ಅವಳ ಮುಂದಿನ ಬಾಳಿನ ಬಗ್ಗೆ ಯೋಚಿಸಬೇಕಾದ ಹಿರಿಯರು ಹೆದರಿದರು. ಆಗ ಆಕೆಯ ಬಾಳಿಗೆ ಬೆಳಕು ತಂದವರು ಮಧ್ಯಮ ದೃಷ್ಟಿ ಹೊಂದಿದ್ದ ಚಂದ್ರಶೇಖರ. ಇದನ್ನು ಒಪ್ಪದ ಆಕೆಯ ಹಿರಿಯರು ಆಕೆಯನ್ನು ತಮ್ಮ ಮನೆ, ಮನಗಳಿಂದ ದೂರ ಮಾಡಿದರು. ಒಂದು ರೀತಿಯಲ್ಲಿ ಅದು ಆಕೆಯ ಸುದೈವವೇ. ಈಗ ಒಲಿದು ಬಂದ ಪತಿಯೊಂದಿಗೆ ಸುಖದ ಸಂಸಾರ ನಡೆಸುತ್ತಿದ್ದಾಳೆ ಅಂಜುಂ. ಅವಳಿಗೆ ಎರಡು ಗಂಡು ಮಕ್ಕಳು. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾರೆ.

ಅವತ್ತು ರಾತ್ರಿ ಪ್ರಯಾಣದಲ್ಲಿ ಒಂದು ಕಡೆ ಬಸ್ಸು ನಿಂತಾಗ ಇಳಿದ ನಾನು ಉಳಿದ ಹೆಂಗಸರನ್ನು ಸೇರಿಕೊಂಡು ‘ಹೆಂಗಸರಿಗೆ’ ಬೋರ್ಡಿನ ಕಡೆಗೆ ಹೊರಟೆ. ಸರತಿ ಸಾಲಿನಲ್ಲಿ ನನ್ನ ಹಿಂದೆ ಗಂಡ-ಹೆಂಡತಿ ಇಬ್ಬರು ಬರುತ್ತಿದ್ದರು. ನಾನು ಅವರನ್ನು ನಿದ್ದೆಗಣ್ಣಿನಲ್ಲಿ ಸರಿಯಾಗಿ ಗಮನಿಸಿರಲಿಲ್ಲ. ಟಾಯ್ಲೆಟ್ಟಿನ ಮುಂಬಾಗದವರೆಗೂ ಆಕೆಯ ಕೈಹಿಡಿದು ಬಂದ ಆ ಗಂಡ ಅವಳನ್ನು ಬಿಟ್ಟು, ನನ್ನನ್ನು ಉದ್ದೇಶಿಸಿ ‘ಮೇಡಂ, ಇವರನ್ನು ಸ್ವಲ್ಪ ಒಳಗೆ ಕರೆದುಕೊಂಡು ಹೋಗಿ’ ಎಂದರು. ಆಗಲೇ ನಾನು ಅವರಿಬ್ಬರನ್ನು ಸರಿಯಾಗಿ ಗಮನಿಸಿದ್ದು. ತಕ್ಷಣವೇ ಅವರ ಗುರುತು ಹತ್ತಿದ ನಾನು ‘ನೀವು ಚಂದ್ರಶೇಖರ ಅಲ್ವೆ? ‘ ಎಂದೆ. ಹೌದು ಎಂದ ಅವರಿಗೆ ನನ್ನ ಪರಿಚಯವನ್ನು ನಾನು ಹೇಳುತ್ತಿದ್ದಂತೆ ಅವರಿಗಾದ ಆನಂದ ಅಷ್ಟಿಷ್ಟಲ್ಲ. ನಗುನಗುತ್ತಲೇ ಮಾತಾಡುವ ಅಂಜುಂ ಈಗ ಕಿಲಕಿಲ ಎಂದಳು. ಸರಿಸುಮಾರು ಒಂದು ದಶಕದ ನಂತರ ಭೇಟಿಯಾದರೂ ಗುರುತು ಪರಿಚಯವನ್ನು ನಾವಿಬ್ಬರೂ ಮರೆತಿರಲಿಲ್ಲ. ಅವರಿಬ್ಬರನ್ನು ಮರೆಯುವುದಾದರೂ ಹೇಗೆ ಸಾಧ್ಯ? ಹಿಂತಿರುಗಿ ನಾವು ಮೂವರೂ ಬರುವಾಗ ಅವರ ಮಕ್ಕಳನ್ನು ಬೋರ್ಡಿಂಗ್ ಸ್ಕೂಲಿನಲ್ಲಿ ಬಿಟ್ಟಿದ್ದು ಅವರನ್ನು ತಾವು ನೋಡಲು ಹೋಗುತ್ತಿರುವುದಾಗಿ ಹೇಳಿದರು.
ನೋಡುವುದೆಂದರೆ ಅವರಿಗೆ ಭಾವಿಸುವುದು, ಊಹಿಸುವುದು, ಸ್ಪರ್ಶಿಸುವುದು. ಇಂದ್ರಿಯಗಳನ್ನು ಮೀರಿದ ಭಾವಬಂಧದಲ್ಲಿ ಎಲ್ಲ ಸುಖವನ್ನೂ ಸೂರೆಗೊಳ್ಳುವ ಈ ಜೋಡಿಯನ್ನು ಕಂಡು ಮನ ತುಂಬಿ ಬಂದಿತು. ಅವರ ಸಂತೋಷಕ್ಕೆ , ತುಂಬು ಜೀವನಕ್ಕೆ ಅವರ ಮುಖದಲ್ಲಿ ಸದಾ ಇರುತ್ತಿದ್ದ ನಗು, ಮಂದಹಾಸ, ಹೊಳಪುಗಳೇ ಸಾಕ್ಷಿಯಾಗಿದ್ದವು. ಜಾತಿವಾದಗಳನ್ನು ಮುಂದಿಟ್ಟುಕೊಂಡಿದ್ದರೆ ಇವರ ಮುಖಗಳಲ್ಲಿ ಇವನ್ನು ಕಾಣುತ್ತಿದ್ದೆವೋ ಇಲ್ಲವೊ. ಅದೆಲ್ಲವನ್ನೂ ಮೀರಿದ ಮಾನವತಾವಾದ, ಮಾನವೀಯತೆಯ ನೆಲೆಯಲ್ಲಿ ಅವರಿಟ್ಟ ಹೆಜ್ಜೆಗಳು, ಅದಕ್ಕೆ ಸಹಾಯ ಮಾಡಿದ ಎಲ್ಲರೂ ಆ ಕ್ಷಣಕ್ಕೆ ನನಗೆ ಮಹಾತ್ಮರೆನಿಸಿದರು.
ಒಲವು ನಲಿವುಗಳ ಭಾಷೆಯನ್ನು ಆಡುವ ಅರ್ಹತೆಯನ್ನು ಹೊಂದಿರುವ ಏಕಮಾತ್ರ ಜಾತಿ ಮಾನವಜಾತಿ. ನಮ್ಮ ನಡುವೆ ಇಂತಹ ಜಾತಿಯನ್ನು ಸದ್ದಿಲ್ಲದೇ ಸಲಹುತ್ತಿರುವ ಅಂಜುಂ, ಚಂದ್ರಶೇಖರ್ ರ ಸಂತತಿ ಸಾವಿರವಾಗಲಿ.

                        *****

Leave a Reply

Back To Top