ಕವಿತೆ
ಉಕ್ಕುವ ನೀರಿಗೆ ಲಕ್ಷ್ಮಣ ರೇಖೆ ಇಲ್ಲ
ಪೂರ್ಣಿಮಾ ಸುರೇಶ್
ನದಿ ಕಡಲ ದಂಡೆಯಲಿ ಮನೆ
ಉಬ್ಬರ, ಇಳಿತ ,ರಮ್ಯ ಹರಿದಾಟ
ಒಂದಿಷ್ಟು ಮೊರೆತ ಮತ್ತಷ್ಟು
ಆಲಾಪ ರಾಗ ವಿರಾಗ
ಆಗಾಗ ರಾಡಿ ಮತ್ತಷ್ಟು ಸೆಳೆತದ ಮೋಡಿ
ಕಚಕುಳಿ ಇಡುವ ಪುಟ್ಟ ಭಾವಗಳ
ಹರಿವಿನ ಹರಿದಾಟ ಪುಲಕ ಹಸಿರು
ಮತ್ತೀಗ ಉಪ್ಪು ಜಲ
ಕಟ್ಟದಿರಿ ಮನೆ
ನದಿ ಕಡಲ ದಂಡೆಯಲಿ
ನೆರೆಯೀಗ ಉಕ್ಕೀತು ಹೊಳೆಯೀಗ ಬಿಕ್ಕೀತು
ಸಮುದ್ರದ ಒಡಲಲ್ಲೂ ಆರದ ಅಲೆಅಲೆ
ನಿಮಗೆ ತಿಳಿಯದು ಪ್ರವಾಹದ ಉರಿ
ಕಾದ ಕಾಯುವ ವಿಧವಿಧ ಪರಿ
ಹರಿದು ಉಕ್ಕುವ ನೀರಿಗೆ ಲಕ್ಷಣರೇಖೆ ಇಲ್ಲ
ಅಂಗಳ, ಪಡಸಾಲೆ ದೇವರಮನೆ
ಪಾಕದ ತಾಣದಲ್ಲೂ ಇದೀಗ ನೆರೆ
ಕೊಚ್ಚಿಕೊಂಡು ಹೋಗುತ್ತಿದೆ
ಅದನ್ನು ಇದನ್ನು ಮತ್ತು
ನನ್ನ- ನನ್ನೊಳಗನ್ನೂ
***************************