ಲಲಿತ ಪ್ರಬಂಧ

ಹಲಸಿನ ಕಡುಬು.

ಶೀಲಾ ಭಂಡಾರ್ಕರ್

ನಮ್ಮೂರ ಕಡೆ ಹಲಸಿನ ಹಣ್ಣಿನ ಕಾಲದಲ್ಲಿ ಹಲಸಿನ ಹಣ್ಣಿನಿಂದ ಬಗೆ ಬಗೆಯ ಖಾದ್ಯಗಳನ್ನು ಮಾಡುತ್ತಾರೆ. ಹಪ್ಪಳ, ಚಿಪ್ಸ್, ದೋಸೆ, ಕಡುಬು, ಮುಳಕ, ಪಾಯಸ.. ಇನ್ನೂ ಎಷ್ಟೋ ಬಗೆ. ಅದರಲ್ಲಿ ಹಲಸಿನ ಕಡುಬು ನನಗೆ ಪಂಚಪ್ರಾಣ.
ಅಕ್ಕಿಯನ್ನು ನೆನೆಸಿ, ತೆಂಗಿನ ತುರಿ, ಬೆಲ್ಲ, ಬಿಡಿಸಿದ ಹಲಸಿನ ತೊಳೆಯ ಜತೆ ತರಿ ತರಿಯಾಗಿ ರುಬ್ಬಿ ತೇಗದ ಎಲೆಯಲ್ಲಿ, ಕೆಂಡ ಸಂಪಿಗೆ ಎಲೆಯಲ್ಲಿ, ಅಥವಾ ತಟ್ಟೆಯಲ್ಲಿಟ್ಟು, ಹಬೆಯಲ್ಲಿ ಬೇಯಿಸಿ ಮಾಡುವ ಕಡುಬು.. ಆಹಾ..!!! ಘಮ್ ಅಂತ ನಾಲ್ಕೂ ದಿಕ್ಕಿಗೆ ಪರಿಮಳ ಸೂಸಿ ಎಲ್ಲರ ಮೂಗು ಅರಳಿಸುತ್ತದೆ.
ಬಿಸಿ ಬಿಸಿ ಹಲಸಿನ ಕಡುಬನ್ನು ತಾಜಾ ಬೆಣ್ಣೆ, ಅಥವಾ ತುಪ್ಪದ ಜತೆ ತಿಂದರೆ.. ಆಹ್… ಬಿಡಿ.. ಬಲ್ಲವರೇ ಬಲ್ಲರು ಅದರ ರುಚಿಯ.


ನಾನು ಆಗ ಆರನೇ ಕ್ಲಾಸಿನಲ್ಲಿದ್ದೆ. ಆಗ ನಾವೊಂದು ಚಿಕ್ಕ ಹಳ್ಳಿಯಲ್ಲಿದ್ದೆವು ಒಂದು ವರ್ಷದ ಮಟ್ಟಿಗೆ. ಅಲ್ಲಿ ನಾವು ಇದ್ದ ಕಡೆ ಹತ್ತಿರದಲ್ಲೇ ಒಂದು ಅಂಗಡಿ, ಅದರ ಮಾಲೀಕ ಶೇಷಪ್ಪ ಅಂತ. ಅವನೊಂದು ದಿನ ಒಂದು ಹಲಸಿನ ಹಣ್ಣು ತಂದು ಕೊಟ್ಟ. ಅವನು ತಂದಿಟ್ಟ ತಕ್ಷಣ ನಮಗೆಲ್ಲ ಕಡುಬು ತಿನ್ನುವ ಆಸೆಯಾಯ್ತು. ಸರಿ ಆವತ್ತು ರಾತ್ರಿ ಯಾರಿಗೂ ಊಟ ಬೇಡ, ಕಡುಬೇ ಸಾಕು ಅಂತ ನಿರ್ಧಾರವಾಯಿತು. ಆಗ ಈಗಿನ ಹಾಗೆ ಮಿಕ್ಸಿ, ಗ್ರೈಂಡರ್ ಇರಲಿಲ್ಲ ನಮ್ಮ ಮನೆಯಲ್ಲಿ. ರುಬ್ಬುವ ಕಲ್ಲಿನಲ್ಲಿ ಕಡುಬಿನ ಹಿಟ್ಟನ್ನು ತಯಾರು ಮಾಡಿ ಎರಡು ದೊಡ್ಡ ದೊಡ್ಡ ತಟ್ಟೆಗಳಲ್ಲಿ ಅಮ್ಮ ಬೇಯಿಸಲಿಕ್ಕಿಟ್ಟರು.. ಇನ್ನು ಸರಿಯಾಗಿ ಅರ್ಧ ಘಂಟೆಯಾದರೂ ಬೇಯಬೇಕು ಅಂತ ಮನಸ್ಸಿನಲ್ಲೇ ಅಂದುಕೊಂಡು ಕಾಯುತ್ತ ಕೂತಿದ್ದೆವು. ಅಜ್ಜಿ ಬೆಣ್ಣೆಯನ್ನು 2-3 ಸಲ ನೀರಿನಿಂದ ತೊಳೆದು ಇಟ್ಟರು.
ಅಮ್ಮ ಮುಚ್ಚಳ ತೆಗೆದು ಬೆಂದಿದೆ ಅಂತ ಖಾತ್ರಿ ಮಾಡಿಕೊಂಡು ತಟ್ಟೆಗಳನ್ನು ಹಬೆ ಪಾತ್ರೆಯಿಂದ ತೆಗೆದು ನೆಲದಲ್ಲಿ ಆರಲು ಇಟ್ಟರು.
ಅಜ್ಜಿ ಬಂದು ನೋಡಿ.. “ಎಷ್ಟು ಚಂದ ಬಂದಿದೆ ರಂಗು. ಪರಿಮಳ ಕೂಡ ವಿಶೇಷವಾಗಿದೆ “
ಅದಕ್ಕೆ ಅಮ್ಮ “ಹೌದು ಶೇಷಪ್ಪ ತಂದುಕೊಟ್ಟ ಹಣ್ಣಲ್ವಾ ಅದಕ್ಕೆ ವಿಶೇಷವಾಗೇ ಪರಿಮಳ” ಅಂತ ಹೇಳುತ್ತ.. ಅಜ್ಜಿಗೆ ಒಂದು ಚಿಕ್ಕ ತುಂಡು ಕಡುಬನ್ನು ತಟ್ಟೆಯಲ್ಲಿಟ್ಟು ಬೆಣ್ಣೆ ಹಾಕಿ ಕೊಟ್ಟರು “ರುಚಿ ನೋಡಿ” ಅಂತ.
“ಎಲ್ಲರೂ ಒಟ್ಟಿಗೆ ತಿನ್ನೋಣ” ಎಂದು ಹೇಳಿದರೂ ಕೂಡ ಅಜ್ಜಿ ಕಡುಬು ತಿಂದು “ಭಾಳ ರುಚಿಯಾಗಿದೆ” ಅಂತ ಸರ್ಟಿಫಿಕೇಟ್ ಕೊಟ್ಟಾಯಿತು.
ಹಾಗೆ ತಮ್ಮನನ್ನು ಕರೆದು ಅಜ್ಜಿ “ಏ.. ಹೌದಾ.. ಆ ಶೇಷಪ್ಪ ಅಂಗಡಿ ಮುಚ್ಚಿ ಮನೆಗೆ ಹೋಗುವಾಗ ಬಂದು ಹೋಗಬೇಕಂತೆ ಅಂತ ಹೇಳಿ ಬಾ ಹೋಗು” ಅಂತ ಕಳುಹಿಸಿದರು.
ಅವನು ಕಡುಬು ತಿನ್ನುವ ಆತುರದಲ್ಲಿ ಒಂದೇ ಏಟಿಗೆ ಓಡಿ ಹೋಗಿ ಶೇಷಪ್ಪನಿಗೆ ವಿಷಯ ಮುಟ್ಟಿಸಿ ಮನೆಗೆ ಬರುವುದರೊಳಗೆ ಹಿಂದೆಯೇ ಶೇಷಪ್ಪನೂ ಬಂದಾಯಿತು. ಅಲ್ಲೇ ಮೆಟ್ಟಲಲ್ಲಿ ಕೂತ ಅವನಿಗೆ ತಟ್ಟೆಯಲ್ಲಿ ಸಾಕಷ್ಟು ಕಡುಬು ಒಂದು ದೊಡ್ಡ ಬೆಣ್ಣೆ ಮುದ್ದೆ ಕೊಟ್ಟಾಯಿತು. ಅವನು ತಿಂದು ಹೋಗಲಿ ಆಮೇಲೆ ನಾವೆಲ್ಲ ತಿಂದ್ರಾಯ್ತು ಅಂತ ಅಮ್ಮ ಹೇಳಿದರು. ಹೂಂ … ಅಂತ ತಲೆ ಅಲ್ಲಾಡಿಸಿ ಕೂತೆವು. ಅಷ್ಟು ಒಳ್ಳೆಯ ಮಕ್ಕಳು ಆಗಿನವು. ಈಗಿನವಕ್ಕೆ ಫಿಜ್ಹಾ, ಬರ್ಗರ್, ಮುಂದೆ ಕಡುಬು ಎಲ್ಲಿ ಗಂಟಲಿಗಿಳಿಯುತ್ತದೆ.?

“ಎಷ್ಟು ಒಳ್ಳೆಯ ಹಣ್ಣು..! ನಿಮ್ಮ ಮರದ್ದೇಯಾ? ತುಂಬಾ ಬಿಡ್ತದಾ ಹಣ್ಣು ? ಎಷ್ಟು ಮರ ಇವೆ..? ಎಂದೆಲ್ಲ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿ ಅಜ್ಜಿ “ಇನ್ನೊಂದು ಹಣ್ಣು ಬೇಕು , ಮಗಳ ಮನೆಗೆ ಹೋಗ್ತಾ ಇದ್ದೇನೆ ಬರುವ ವಾರ ” ಅಂತ ಬುಕ್ ಮಾಡಿಸಿಟ್ಟರು. ಅವನೂ ಮಾತಾಡುತ್ತ .. ಕಡುಬನ್ನು ಚಪ್ಪರಿಸಿ ತಿನ್ನುವಾಗ, ಕಾದು ಕೂತ ನಮಗೆ ಇವನು ಬೇಗ ಬೇಗ ತಿಂದು ಹೋಗಬಾರದಾ..? ಎಷ್ಟು ಪಂಚಾದಿಕೆ ಈ ಅಜ್ಜಿಗೂ ಅಂತ ಮನಸ್ಸಿನಲ್ಲೇ ಗೊಣಗಾಟ.


ತಿಂದಾಯ್ತು.. ಅವನಿಗೆ ಕೈ ತೊಳೆಯಲು ನೀರು ಅಲ್ಲೇ ತಂದು ಕೊಟ್ಟರೆ.. ತಟ್ಟೆ ತೊಳೆದಿಟ್ಟು ಹೋಗುತ್ತೇನೆ ಈ ನೀರು ಸಾಲದು. ಅಂತ ಬೇಡ ಬೇಡ ಎಂದರೂ ಕೇಳದೆ , ನನ್ನನ್ನು ಕರೆದು ಹಿಂದಿನ ಬಾಗಿಲು ತೆಗೆದು ಸ್ವಲ್ಪ ನೀರು ಹಾಕಿ ಅಮ್ಮ ಅಂತ ಹೇಳಿದ. ನಾನು ಹೋಗಿ ಹಿಂದಿನ ಬಾಗಿಲು ತೆಗೆದು ಅವನಿಗೆ ನೀರು ಕೊಟ್ಟು ಬಂದೆ. ಆಯ, ಆಕಾರವಿಲ್ಲದ ದೊಡ್ಡ ಹಳ್ಳಿ ಮನೆ.. ಬಂದು ಕೂತರೆ.. ಶೇಷಪ್ಪ.. ಕಡುಬನ್ನು ವರ್ಣಿಸಲು ತೊಡಗಿದ. ಹಾಗೆ ಇನ್ನೂ ಸ್ವಲ್ಪ ಹೊತ್ತು ಅಪ್ಪ, ಅಜ್ಜಿ , ಅಮ್ಮ ಅಂತ ಒಬ್ಬೊಬ್ಬರದೂ ಅವನ ಜೊತೆ ಮಾತಾಗುತಿತ್ತು. ಒಳಗೆ ಏನೋ “ಢಂಯ್ ” ಎಂದು ಸದ್ದಾಯಿತು. ಹಾರಿ ಹೋಗಿ ಒಳಗೆ ನೋಡಿದರೆ ನಾಯಿಯೊಂದು ತೆರೆದಿಟ್ಟ ಹಿಂದಿನ ಬಾಗಿಲಿನಿಂದ ಒಳಗೆ ಬಂದು ಆರಲು ಇಟ್ಟಿದ್ದ ಕಡುಬಿನ ತಟ್ಟೆಗಳಲ್ಲಿ ಒಂದನ್ನು ಖಾಲಿ ಮಾಡಿ ಇನ್ನೊಂದಕ್ಕೆ ಬಾಯಿ ಹಾಕಿ ಚಪ್ಪರಿಸುತಿತ್ತು. ತಿಂದು ಮುಗಿಸಿದ ತಟ್ಟೆಯಲ್ಲಿ ನಾಯಿ ಕಾಲಿಟ್ಟಿದ್ದರಿಂದ ಆ ಸದ್ದು ಕೇಳಿಸಿದ್ದು ಹೊರಗೆ.

ಬಂದ ಕೋಪಕ್ಕೆ ಅಮ್ಮ ಕೈಗೆ ಸಿಕ್ಕಿದ ದೊಣ್ಣೆಯಿಂದ ಒಂದು ಕೊಟ್ಟರು ನಾಯಿಯ ಬೆನ್ನಿಗೆ. ಅದು ಕೊಂಯ್ ಅಂತ ಒಂದೇ ಉಸಿರಿಗೆ ಮಾಯವಾಯ್ತು.
ಇನ್ನೊಂದು ನನಗೆ ಗ್ಯಾರಂಟಿ ಎಂದು ನಾನು ಹೆದರಿ ಯಾವುದೋ ಒಂದು ಸಂಧಿಯಲ್ಲಿ ಅಡಗಿ ಕೂತುಕೊಂಡೆ.


ಅಮ್ಮನಿಗೆ ಪಾಪ.. ಅಷ್ಟು ಕಷ್ಟ ಪಟ್ಟು ಮಾಡಿದ ಕಡುಬು ಎಲ್ಲಾ ನಾಯಿ ತಿಂದು ಹೋಯಿತು.. ಈಗ ಪುನಹ ಇವರಿಗೆಲ್ಲ ಏನು ಮಾಡಿ ಬಡಿಸಲಿ ಅನ್ನೋ ಯೋಚನೆ,
ನನಗೆ.. ಛೆ!! ನಾನು ಮರೆತು ಬಾಗಿಲು ಹಾಕದಿದ್ದರಿಂದಲೇ ಇವತ್ತು ಕಡುಬು ನಾಯಿ ಪಾಲಾಯಿತು.. ಎಂಥ ಕೆಲಸವಾಯಿತು. ಅಂತ ಮನಸ್ಸಲ್ಲೇ ದುಃಖ.
ಅಜ್ಜಿಗೆ ತಿಂದ ಆ ಚಿಕ್ಕ ಕಡುಬಿನ ತುಂಡಿನ ರುಚಿ ಇನ್ನೂ ಬಾಯಲ್ಲೇ ಇದೆ.. ಏನಾಗಿ ಹೋಯಿತು ಇದು ಅಂತ ಮನಸ್ಸೆಲ್ಲ ಚುರುಚುರು.
ಅಪ್ಪ ಎಂದಿನಂತೆ ಸ್ಥಿತಪ್ರಜ್ಞ.. ತಮ್ಮ-ತಂಗಿ ಇಬ್ಬರೂ ಯಾವುದೋ ಆಟದಲ್ಲಿ ಮಗ್ನರಾಗಿದ್ದರು.


ಈಗ ಶೇಷಪ್ಪನ ಗೋಳಾಟ ಶುರುವಾಯಿತು., “ನೀವು ಬೇಡ ಬೇಡ ಅಂದರೂ ನಾನು ಮಾಡಿದ ತಪ್ಪಿನಿಂದಲೇ ಹೀಗಾಯಿತು.. ನೀವು ಇಷ್ಟು ಕಷ್ಟ ಪಟ್ಟು ಮಾಡಿದ್ದು ನಿಮಗೆ ತಿನ್ನಲಿಕ್ಕಾಗದೇ ಹೋಯಿತು” ಅಂತ.

Jack fruit on tree. Four jack fruit on tree in garden royalty free stock photography


ನಮ್ಮ ದುಃಖದ ನಡುವೆ ಅವನನ್ನು ಸಮಾಧಾನ ಮಾಡಿ ಕಳಿಸಿದರು ಅಮ್ಮ ಮತ್ತು ಅಜ್ಜಿ.
ಆಮೇಲೆ ಅಮ್ಮನಿಗೆ ನನ್ನನ್ನು ಹೊಡೆಯದೆ ಬಿಟ್ಟದ್ದು ನೆನಪಾಗಿ.. ನನ್ನನ್ನು ಹುಡುಕುವುದಕ್ಕೆ ಶುರು ಮಾಡಿದರು. ಹೊರಗೆ ಬಂದರೆ ನನಗೆ ಸರಿಯಾದ ಪೂಜೆಯಾಗುತ್ತದೆ ಅಂತ ಗೊತ್ತಿತ್ತು ನನಗೆ. ಸುಮ್ಮನೆ ಉಸಿರು ಕೂಡ ಆಡದೆ ಕೂತೆ. ಅಮ್ಮನ ಕೋಪ ನೋಡಿ ಅಜ್ಜಿ.. ಅವಳನ್ನು ಹೊಡೆಯುವುದಿಲ್ಲ ಅಂತ ಭಾಷೆ ಕೊಡು ಅಂತ ಒಪ್ಪಿಸಿ ನನ್ನನ್ನು ಕರೆದರು.. “ಬಾ.. ನಿನಗೆ ಹೊಡೆಯುವುದಿಲ್ಲ” .. ನಾನು ಮೆತ್ತಗೆ ಹೊರಗೆ ಬಂದೆ.
ಆಮೇಲೆ ಅದೇನು ತಿಂದು ಮಲಗಿದೆವೋ ಅದು ನೆನಪಿಲ್ಲ.


ಮಾರನೆ ದಿನ ಶೇಷಪ್ಪ ಇನ್ನೂ ದೊಡ್ಡದಾದ ಹಣ್ಣನ್ನು ತಂದಿಟ್ಟರೂ ಯಾರಿಗೂ ಅಷ್ಟೊಂದು ಉತ್ಸಾಹವಿಲ್ಲ. ಕಡುಬನ್ನು ಮಾಡಿದರೂ ಶೇಷಪ್ಪನನ್ನು ಕರೆಯಲಿಲ್ಲ ಈ ಸಾರಿ. ಅಜ್ಜಿ ತಿಂದು ನೋಡಿ ನಿನ್ನೆಯಷ್ಟು ರುಚಿಯಾಗಿಲ್ಲ ಅಂದಾಗ ಇನ್ನೂ ಮನಸ್ಸು ಮುದುಡಿ ಹೋಯಿತು.


ಅದಾದ ಮೇಲೆ ಏಷ್ಟೋ ಸಲ ಹಲಸಿನ ಹಣ್ಣಿನ ಕಡುಬು ಮಾಡಿ ತಿಂದರೂ ಆ ದಿನದ ನಾವು ತಿನ್ನದಿದ್ದ ಕಡುಬಿನಷ್ಟು ರುಚಿ ಅನ್ನಿಸಿದ್ದಿಲ್ಲ. ಮತ್ತು ಪ್ರತೀ ಸಲ ಕಡುಬು ಮಾಡಿದಾಗಲೂ ಶೇಷಪ್ಪನನ್ನು ಮತ್ತು ಆ ನಾಯಿಯನ್ನು ಇಂದಿಗೂ ನೆನಸುತ್ತೇನೆ.

**********************************************

3 thoughts on “ಲಲಿತ ಪ್ರಬಂಧ

  1. ಲೇಖನ ಸ್ವಾರಸ್ಯವಾಗಿದೆ.
    ಲಲಿತ ಪ್ರಬಂಧಧ ಮಾದರಿ ಅಲ್ಲ.

  2. ನನಗೂ ಸಹ ಆ ತಿನ್ನದೆ ಇದ್ದ ಕಡಬು ಬಹಳ ರುಚಿಯಾಗಿದೆ ಅನಿಸಿತು!

Leave a Reply

Back To Top