ಕಾವ್ಯಯಾನ

ಅಳುತ್ತಿರಬೇಕು ಅವನು!

ಪುರುಷೋತ್ತಮ ಭಟ್ ಕೆ

ನಿಯಾಮಕನೆಲ್ಲಿದ್ದಾನೆ,
ತಿರುಗಿನಿಂತಿದ್ದಾನೆ
ಬೆನ್ನು ತೋರಿಸಿದ್ದಾನೆ
ತನ್ನದೇ ಸೃಷ್ಟಿಯ ದುರಂತ ಕಾಣಲಾಗದೆ
ಅಳುತ್ತಿರಬೇಕು ಪಾಪ ತುಂಬಿದ ಕೊಡವ ಏನುಮಾಡೋಣವೆಂದು/

ಆಲಯಗಳ ಕಲ್ಲು-ಸಂದುಗಳಲ್ಲಿ
ಕೆತ್ತಿದ ಕೆಡವಿದ ಹೆಸರುಗಳೆಷ್ಟು
ಹಾಸಿಗೆಗೆಳೆದು ಚೀರಾಡಿಸಿ ಗೋಳಾಡಿಸಿದ ಕಥೆಗಳೆಷ್ಟು
ಪರರ ಕಿಸೆಯೊಳಗಿನ ದ್ರವ್ಯದಾಸೆಗೆ ಧಮನಿಯ ಕೊಯ್ದವರೆಷ್ಟು
ಅಳುತ್ತಿರಬೇಕು ಬೆನ್ನು ಕಾಣಿಸುತ್ತಿದೆ ಬೆಣ್ಣೆಯಲಾಡಿದವನ/

ಕವಾಟುಗಳೊಳಗೆ ಪೇರಿಸಿಟ್ಟ ಹೊತ್ತಗೆಗಳಿಗೆ ತುಂಬಿದೆ ಧೂಳು
ತುಳುಕುವ ಮಾನಪತ್ರಗಳನ್ನು ಆಪೋಶನಗೈಯ್ಯುತ್ತಿವೆ ಗೆದ್ದಲು
ವಿದ್ಯಯಾಚೆಯ ಬುದ್ದಿ, ವಿವೇಕ ಪಾತಾಳಕೆ
ಹೆಣ್ಣು-ಹೆಸರುಗಳ ಬಾಂಡಲೆಯ ಹೊತ್ತು ಸಾಗುತ್ತೇವೆ
ಅಳುತ್ತಿರಬೇಕು ಬೆನ್ನಷ್ಟೇ ಕಾಣಿಸುತ್ತಿದೆ
ನವಿಲಗರಿ ಮುರಿದು ಮುಪ್ಪಾಗಿದೆ/

ಪೂಜೆ-ಪ್ರಾರ್ಥನೆ ಆಡಂಬರ
ಒಳಗೆಲ್ಲ ಕೊಳಕು-ದಿಗಂಬರ
ಪ್ರಚಾರದ ಪ್ರವಚನ
ಹುಡುಕುತ್ತಿದ್ದಾನೆ ತನ್ನಸೃಷ್ಟಿಯ
ಊನ ಕಳೆಯಲು ದಾರಿ ಮಹಾಮಳೆ, ಕೇಳರಿದ ವ್ಯಾದಿ, ಲೋಹದ ಹಕ್ಕಿ ಇನ್ನೇನೋ/

****************************

Leave a Reply

Back To Top