ಪ್ರತಿಮೆಗಳ ಭಾರಕ್ಕೆ ಹೊಯ್ದಾಡುವ ರೂಪ(ಕ)ಗಳು

ಪ್ರತಿಮೆಗಳ ಭಾರಕ್ಕೆ ಹೊಯ್ದಾಡುವ ರೂಪ(ಕ)ಗಳು

80ರ ದಶಕದ ಆಚೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಫಿಲಾಸಫಿಗಳ ಗುಂಗು ಶುರುವಾಯಿತು. ಇದ್ದಕ್ಕಿದ್ದ ಹಾಗೆ ರಜನೀಶ್, ಬುದ್ಧ, ಜಿಡ್ಡು ಕೃಷ್ಣಮೂರ್ತಿ, ಯೂಜಿ ಮುಂತಾದವರು ಪ್ರಚಾರಕ್ಕೆ ಬಂದರು. ಇವರೆಲ್ಲ ಹೇಳಿದ್ದನ್ನು ಕತೆಗಳಲ್ಲೂ ಕವನಗಳಲ್ಲೂ ಲೇಖನಗಳಲ್ಲೂ ತಂದು ಕೊನೆಗೆ ಆ ಹೆಸರುಗಳನ್ನು ಕೇಳಿದರೆ ಕಿರಿಕಿರಿಯಾಗುವಂತೆ ಮಾಡುವಲ್ಲಿ ನಮ್ಮ ಲೇಖಕರೂ ಸಾಹಿತಿಗಳೂ ಯಶಸ್ವಿಯಾದರು.ಈಗಲೂ ಕೆಲವರು ಲೋಹಿಯಾವಾದವನ್ನು ಮತ್ತೆ ಕೆಲವರು ಅಂಬೇಡ್ಕರರನ್ನೂ ಕೆಲವರು ಗಾಂಧಿಯನ್ನೂ ಹೀಗೇ ಬಳಸುತ್ತ, ಬೆದಕುತ್ತ ತಮ್ಮ ಬರವಣಿಗೆಗೆ ಬಳಸುತ್ತ ಆ ಅಂಥವರ ಹೆಸರನ್ನೇ ಮತ್ತೆ ಮತ್ತೆ ಹೇಳುತ್ತ ನಿಜಕ್ಕೂ ಬೆನ್ನೆಲುಬಾಗಿಟ್ಟುಕೊಳ್ಳಬೇಕಿದ್ದ ಆ ಹಿರೀಕರ ಆದರ್ಶಗಳು ಕನಸುಗಳೂ ಮರೆಯಾಗಿ ಕೇವಲ ಹೆಸರೇ ಮೆರೆಯತೊಡಗಿದ್ದನ್ನೂ ನಾವು ಬಲ್ಲೆವು. ಈ  ಇಂಥ ಕಾರಣಕ್ಕೇ  ಅಂಥ ಸಾಹಿತಿಗಳೂ ಅವರು ಬರೆದ ಸಾಹಿತ್ಯವೂ ಶಾಶ್ವತವಾಗಿ ನಿಲ್ಲಲಿಲ್ಲ. ಬರಿಯ ಸಿದ್ಧಾಂತಗಳನ್ನು ನಂಬಿದ ಸಾಹಿತ್ಯಕೃತಿಗಳು ಕಣ್ಮರೆಯಾಗುವುದು ಸಹಜ ಮತ್ತು ಸ್ವಾಭಾವಿಕ.

ಇಂಥದೇ ಪ್ರಯೋಗಗಳು ನವೋದಯದ ಕಾಲದಲ್ಲೂ ನಡೆದದ್ದಕ್ಕೆ ಪುರಾವೆಗಳಿವೆ. ನವ್ಯದಲ್ಲಂತೂ ಪದ್ಯ ಎಂದರೆ ಪ್ರಾಸದ ಹಂಗಿಲ್ಲದ, ಅಲಂಕಾರದ ಕಷ್ಟ ಬೇಕಿಲ್ಲದ ಗದ್ಯದ ಗಟ್ಟಿ ಸಾಲು ಎಂಬ ಹುಂಬ ವ್ಯಾಖ್ಯೆಯನ್ನು ಯಾರೋ ಕೆಲವರು ಹೇಳಿದ್ದನ್ನೇ ನಂಬಿ ಗದ್ಯದ ಸಾಲನ್ನು ತುಂಡು ತುಂಡಾಗಿಸಿ ಬೇಕಾದಂತೆ ತಿರುಚಿದ ಉದಾಹರಣೆಗಳೂ ಇವೆ. ಈ ಇಂಥದೇ ಕಳೆಯನ್ನು ಬಂಡಾಯದ ಅದ್ಭುತ ಬೆಳೆಯಲ್ಲೂ, ದಲಿತ ಧ್ವನಿಯ ಸ್ಪಷ್ಟತೆಯ ನಡುವೆ ರೂಕ್ಷತೆಯನ್ನೂ ಕಂಡಿದ್ದೇವೆ. ಇದು ಕಾಲದಿಂದ ಕಾಲಕ್ಕೆ ಕವಿತೆಯ ರೀತಿ ಬದಲಾಗುವುದರ ಮತ್ತು ಕಾವ್ಯದ ರಸಗ್ರಹಣದ ಸ್ವರೂಪದ ಬದಲಾವಣೆ.

ಸದ್ಯದ ಕಾವ್ಯದ ಹರಿಯುವಿಕೆಯಲ್ಲಿ ತೀವ್ರತೆ ಇದೆಯೇ? ಬದುಕನ್ನು ಸಾಹಿತ್ಯ ಬಿಂಬಿಸುತ್ತದೆ ಎನ್ನುವ ವ್ಯಾಖ್ಯೆಯ ಪುನರ್ಮನನ ಹೇಗೆ ಸಾಧ್ಯವಿದೆ? ಎನ್ನುವ ಪ್ರಶ್ನೆಗಳನ್ನು ಇಟ್ಟುಕೊಂಡಿರುವ ಈ ಅಂಕಣದ ಮೂಲ ಉದ್ದೇಶವೇ ವರ್ತಮಾನದ ಕಾವ್ಯ ಕ್ರಿಯೆಯ ಸಂಕೀರ್ಣತೆಗಳನ್ನು ಸಾಮಾನ್ಯ ಓದುಗನ ದೃಷ್ಟಿಯಿಂದ ನೋಡುವುದಾಗಿದೆ. ಬರಿಯ ಹೇಳಿಕೆಗಳು ಕಾವ್ಯವಾಗುವುದಿಲ್ಲ ಮತ್ತು ಕನಿಷ್ಠ ರೂಪಕವೊಂದನ್ನು ಟಂಕಿಸದ ಯಾರೂ ಕವಿಯಾಗಲು ಸಾಧ್ಯವೇ ಇಲ್ಲ ಎನ್ನುವುದನ್ನು ಕನ್ನಡದ ಮನಸ್ಸುಗಳು ಈಗಾಗಲೇ ಸ್ಪಷ್ಟಪಡಿಸಿವೆ. ರಸಗ್ರಹಣದ ಮೂಲ ಉದ್ದೇಶವೇ ತನಗಿರುವ ಅರಿವನ್ನು ಪರಿಷ್ಕೃತಗೊಳಿಸಿ ತಾಜಾ ಪ್ರತಿಮೆಗಳ ಮೂಲಕ ಹೇಳುವ ಪ್ರಯತ್ನ.

ಫೇಸ್ಬುಕ್ ಎಂಬ ಸಾಮಾಜಿಕ ಮಾಧ್ಯಮದ ಮೂಲಕವೆ ತಮ್ಮ ಕವಿತೆಗಳನ್ನು ಪ್ರಕಟಿಸುತ್ತಿರುವ ಹಲವರು ನಮ್ಮ ನಡುವೆ ಇದ್ದಾರೆ. ಬಹಳ ವರ್ಷಗಳಿಂದ ಕವಿತೆಯನ್ನು ಬರೆಯುವ ಅಭ್ಯಾಸವಿದ್ದವರೂ ಪತ್ರಿಕೆಗಳಲ್ಲಿ ಅವನ್ನು ಪ್ರಕಟಿಸುವ “ಜಾಣ್ಮೆ” ಮತ್ತು “ಕಲೆ”ಗಳ ಅರಿವು ಇಲ್ಲದೆ ಡೈರಿಗಳ ಪುಟಗಳಲ್ಲೇ ತಮ್ಮ ಕವಿತೆಯನ್ನು ಅಡಗಿಸಿ ಇಟ್ಟುಕೊಂಡಿದ್ದವರು ಫೇಸ್ಬುಕ್ಕಿನಲ್ಲಿ ಪ್ರಕಟಿಸಿ “ಭಾರ” ಕಳೆದುಕೊಳ್ಳುತ್ತಿದ್ದಾರೆ. ಅಂಥ ಹಲವರ ರಚನೆಗಳು ನಿಜಕ್ಕೂ ಚೆನ್ನಾಗಿರುತ್ತವೆ. ಆದರೆ ಫೇಸ್ಬುಕ್ ಪುಟಗಳು ಕ್ಷಣಕ್ಷಣಕ್ಕೂ ಹೊಸ ಹೊಸ ಬರಹ, ಫೋಟೋ, ಕವಿತೆ, ಸ್ಟೇಟಸ್ಸುಗಳ ಮೆರವಣಿಗೆ ಆಗಿರುವುದರಿಂದ ನಿಜಕ್ಕೂ ಅದ್ಭುತ ಎಂದೆನಿಸುವ ಸಾಲುಗಳು ಕೂಡ ಭರಪೂರ ಪೇಜುಗಳ ನಡುವೆ ಮಾಯವಾಗುವುದೂ ಸಹಜ.

ಶ್ರೀ ಎನ್.ಡಿ.ರಾಮಸ್ವಾಮಿ ಮೇಲೆ ಹೇಳಿದ ಆ ಅಂಥ ಹಲವರ ಪೈಕಿ ಒಬ್ಬರು. ವೃತ್ತಿಯಿಂದ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರಾಗಿರುವುದರಿಂದ ಸಹಜವಾಗಿ ಛಾಸರಿನಿಂದ ಶೇಕ್ಸ್ ಪಿಯರನವರೆಗೆ, ಡಾಂಟೆಯಿಂದ ಆಫ್ರಿಕದ ಕಪ್ಪು ಹಾಡಿನವರೆಗೂ ಅವರ ಓದು ತೆರೆದೇ ಇರುತ್ತದೆ. ಆದರೆ ಎಲ್ಲ ಉಪನ್ಯಾಸಕರೂ ಕವಿಗಳಾಗುವುದಿಲ್ಲ. ಕವಿತೆಯನ್ನು ಪಾಠ ಮಾಡುವಾಗ ಮಾತ್ರ ಕವಿತೆಯನ್ನು ಬ್ರೌಸು ಮಾಡುವ ಶಿಕ್ಷಕರೂ ಇದ್ದಾರೆ. ಆದರೆ ಎನ್.ಡಿ.ಆರ್ ಅಪವಾದ. ಇನ್ನೇನು ಮೂರು ವರ್ಷಗಳಷ್ಟೇ ನಿವೃತ್ತಿಗೆ ಬಾಕಿ ಇರುವ ಅವರು ಅದೆಷ್ಟು ವರ್ಷಗಳಿಂದ ಪದ್ಯದ ಮೊರೆ ಹೋಗಿದ್ದರೋ ಏನೋ ಫೇಸ್ಬುಕ್ಕಿನಲ್ಲಿ ನಿತ್ಯವೂ ಅವರ ಪದ್ಯ ಪ್ರಕಟ ಆಗುತ್ತಲೇ ಇರುತ್ತದೆ. ಮೊನ್ನೆ ಫೇಸ್ಬುಕ್ ಪುಟದಲ್ಲಷ್ಟೇ ಬರೆಯುವ ಮತ್ತೊಬ್ಬ ಅನುವಾದಕರು ಇವರ ಪದ್ಯವನ್ನು ತೆಲುಗು ಭಾಷೆಗೆ ಅನುವಾದಿಸಿದ್ದರು ಎಂದರೆ ಇವರ ಪದ್ಯಗಳ ಝಳ ಕಡಿಮೆಯದೇನೂ ಅಲ್ಲ.

ಸಾಹಿತ್ಯದಲ್ಲಿ ಆಸಕ್ತಿ ಇರುವ ಇಂಗ್ಲಿಷ್ ಉಪನ್ಯಾಸಕರಿಗೆ ಇರುವ ಮತ್ತೊಂದು ಲಾಭವೆಂದರೆ ಅವರು ಕನ್ನಡದ ಮಹತ್ವದ ಲೇಖಕರನ್ನು ಸುಲಭವಾಗಿ ಒಳಗೊಳ್ಳುವ ಸೌಲಭ್ಯ. ಏಕೆಂದರೆ ಹೈಸ್ಕೂಲ್ ಮತ್ತು ಪಿಯು ಕಾಲೇಜುಗಳು ಬಹುತೇಕ ಒಟ್ಟಿಗೇ ಇರುವುದರಿಂದ ಭಾಷಾ ಶಿಕ್ಷಕರುಗಳ ಮಾತಿನ ನಡುವೆ text ಬಗ್ಗೆ ಮಾತು ಸಹಜವೇ ಆಗಿರುವುದರಿಂದ ಗ್ರಹಿಕೆ ಸೂಕ್ಷ್ಮತೆ ಇದ್ದವರು ಗೆದ್ದಿರುತ್ತಾರೆ.

ಎನ್.ಡಿ.ಆರ್ ಪದ್ಯಗಳ ಮೂಲ ಪುರಾತನ ನವ್ಯದ ಶಾಲೆ. ಪ್ರತಿಮೆಗಳೂ ರೂಪಕಗಳೂ ಇಲ್ಲದ ಬರಿಯ ಕನಸುಗಳು ಅವರ ಪದ್ಯಗಳಲ್ಲಿ ವಿರಳಾತಿ ವಿರಳ. ಏನನ್ನು ಹೇಳುವುದಕ್ಕೂ ಪ್ರತಿಮೆ ಮತ್ತು ರೂಪಕಗಳ ಮೊರೆ ಹೋಗುವ ಅವರ ಕವಿತೆಗಳಿಗೆ ಒಮ್ಮೊಮ್ಮೆ ಈ ಭಾರವೇ ಜಾಸ್ತಿಯಾಗಿ ಮೂಲದಲ್ಲಿ ಅವರೇನು ಹೇಳ ಹೊರಟಿದ್ದರೋ ಆ ಅಂಶವೇ ಮರೆಯಾಗುವುದೂ ಉಂಟು. ಉದಾಹರಣೆಗೆ;

ಅಕ್ಷಿ ನಕ್ಷತ್ರವಾದದ್ದು ಏಕೆ?

ಎದೆಯೊಳಗೆ ಪುಟ್ಟ ಕಾರಂಜಿ

ಶಬ್ದ,ಶಬ್ದಕ್ಕೂ ಪುಳಕ

ಜೀವ ಸೆಲೆ ಕಡಲಾಗಿ,!

ಇಲ್ಲಿ ಶಬ್ದಾಡಂಬರದ ನಡುವೆ ಅಕ್ಷಿ ಅಂದರೆ “ಕಣ್ಣು” ಪುಳಕ ಹುಟ್ಟಿಸುವ ಜೀವಸೆಲೆಯಾಗಿದೆ ಎನ್ನುವುದನ್ನು ಹೇಳುತ್ತಲೇ, “ಮೀಟುತ್ತಿದೆ ಕನಸುಗಳ ಉಡವನ್ನ” ಅನ್ನುವಾಗ ಈ ಪದ್ಯ ಮತ್ತೆಲ್ಲಿಗೋ ತುಯ್ಯುತ್ತಿದೆ ಅಂತ ಭಾವಿಸಿದರೆ, “ಆಕಾಶದ ನಕ್ಷತ್ರಗಳೂ ನಕ್ಕು ವಿಷಾದದ ಅಮಲಲಿ” ಎಂದು ಮುಕ್ತಾಯ ಆಗುವಾಗ ಈ ಕವಿತೆ ಹೇಳಿದ್ದಾದರೂ ಏನನ್ನು ಎನ್ನುವ ಗೊಂದಲ ಸಹಜ.

“ಇಲ್ಲಿ ಜೇನಿದೆ,ಹಾಲಿದೆ,ಹಣ್ಣಿದೆ

ಅದು ಇದೆ ಇದು ಇದೆ ಎಲ್ಲ ಇದೆ” ಎಂದು ಆರಂಭವಾಗುವ ಪದ್ಯ ಈ ನೆಲದ ಘಮವನ್ನೋ ಅಥವ ಭಾಷೆಯ ಬೆಡಗನ್ನೋ ಹೊಗಳುತ್ತಿದೆ ಅಂದುಕೊಂಡರೆ

” ಏಕಲವ್ಯ ಜಗದೇಕ ವೀರನಾಗಿದ್ದು

ಇಳಿದ ಹೊಳೆಯ ದಂಡೆಯಾಚೆಯೂ ಈಜಿದ್ದು!” ಎಂದು ರೂಪುಗೊಂಡರೆ ಮತ್ತೊಂದು ಜಿಗಿತಕ್ಕೆ ತುಯ್ದು

“ಲಕ್ಷ್ಮಣ ಹಣ್ಣ ಬಿಟ್ಟು ಓಡಿದ್ದು

ಕೋದಂಡ ಹಣ್ಣ ಜತಯೇ ಓಡಿದ್ದು” ಎಂದು ಹೇಳುತ್ತ ಕಡೆಗೆ ಪದ್ಯ “ಮುಗಿಲ ಅಟ್ಟದಲ್ಲೇ ಇರಲಿ

ಕೈ ಚಾಚಿದರಷ್ಟೇ ಹಣ್ಣು!” ಎಂದು ಕೊನೆ ಮುಟ್ಟಿದಾಗ ಓಹ್ ಈ ಕವಿ ಹೆಣ್ಣನ್ನು ಕುರಿತು ಹೇಳಲು ಏನೆಲ್ಲ ಪದ ಭಂಡಾರವನ್ನೇ ಸೂರೆಗೊಂಡರಲ್ಲ ಎನ್ನಿಸುತ್ತದೆ. ರಾಮಾಯಣ, ಭಾರತದ ಪಾತ್ರಗಳೆಲ್ಲ ಕಣ್ಣ ಮುಂದೆ ಸರಿದು ಹೋಗುತ್ತವೆ, ಸವೆದ ದಾರಿಯ ಕುರುಹಾಗುತ್ತವೆ

“ಬುದ್ಧ ಗುರುವಿನ

ಕಣ್ಣಿಗೆ ಧೂಳು ಬಿದ್ದು

ಧಾರಾಕಾರ ಕಣ್ಣೀರು

ನೋವು,ನವೆ” ಎಂದು ಸುರುವಾಗುವ ಕವಿತೆ ಬುದ್ಧನೂ ಅನುಭವಿಸಿದ ಸಾಮಾನ್ಯ ನೋವನ್ನು ತೆರೆದಿಡುತ್ತಲೇ

” ಓಡಿದ,ಓಡಿದ

ಧೂಳುಗಳು ಬಿಡದೆ

ಹಿಂಬಾಲಿಸಿದ್ದು

ಕಣ್ಣ ಮುಚ್ಚಿ ಓಡಿದ!” ಎಂದು ಹೇಳುವಾಗ ಕಣ್ಣಿಗೆ ಬಿದ್ದದ್ದು  ಧೂಳಲ್ಲ,  ಬದುಕಿನ ಸತ್ಯಗಳು ಎಂದು ಗೊತ್ತಾಗುತ್ತದೆ. ಮುಂದುವರೆದಂತೆ,

 “ಈಗ ಬುದ್ದನ ಕಣ್ಣು

ಸ್ಪಷ್ಟ, ಎಲ್ಲವೂ

ನಿಖರವಾಗಿ

ಕಂಡು ಬೆರಗು!” ಎನ್ನುವಾಗ ಬುದ್ಧನ ಜ್ಞಾನೋದಯವನ್ನು ಬೆರಗಿನಿಂದ ಕಂಡಿರಿಸಿದ ಕವಿತೆ ಆಗಿ ಮಾರ್ಪಾಡಾಗುತ್ತದೆ.

ಶಬ್ದಗಳು ಚಿನ್ನದ ಅದಿರಾದಾಗ

ಬದುಕ ಹೊಲ ಬಂಗಾರವಾಗಿತ್ತ

ಶಬ್ದಗಳು ಪ್ರೀತಿಯ ಮೊಗ್ಗಾದಾಗ

ಬದುಕು ಮಲ್ಲಿಗೆ ತೋಟವಾಗಿತ್ತ! ಎಂದೂ ಹೇಳಬಲ್ಲ ಈ ಕವಿಯ ಬಳಿ ಶಬ್ದ ಭಂಡಾರದ ಸಂದೂಕ ಇದ್ದೇ ಇದೆ

ಈ ಕವಿ ಬದುಕಿನ ನಶ್ವರತೆಯನ್ನು ಕೂಡ ಬಿಡುಬೀಸಾಗಿ ಹೇಳಬಲ್ಲರೆಂಬುದಕ್ಕೆ ನೋಡಿ;

“ಸಂತೆಯಲಿ ಮೀನು ಮಾರುವ

ಸೊಪ್ಪು,ಸದೆ ಮಾರುವ ಜಾಗದಲಿ

ಮಾತುಗಳದೇ ಕಾರುಬಾರು

ಗಟ್ಟಿಯಾಗಿ,ಕರ್ಕಶವಾಗಿ

ಕಂಚಿನ ಕಂಠದಲಿ ಕೂಗಾಟ!” ಯೆಸ್, ಮುಂದಕ್ಕೆ ಇಣುಕಿದರೆ,

“ಮೌನಕ್ಕೆ ಜಳಕ ಮಾಡಿಸಿ

ಹೊಸ ಅಂಗಿ ತೊಡಿಸಿ

ಕಥೆ,ಕವನ,ಹೇಳುತ್ತಾ

ಹೋದರೆ ಸಿಡಿ ಮಿಡಿ ಗೊಂಡು

ಉಗಿಯುತ್ತಿತ್ತು!” ಎಂದು ಕುತೂಹಲ ಹುಟ್ಟಿಸುತ್ತಾರೆ. ಆದರೆ ಪದ್ಯ ಕೊನೆಯಾಗುವುದು ಹೀಗೆ;

“ಮೌನದ ಗೆಳೆತನ ದುಬಾರಿ

ಖಿನ್ನತೆ, ಸಿಡುಕು,

ಕೋಪ,ಕುದಿತ,ಮಿದಿತದ

ಹೊಂಡವಾದದ್ದು!”. ಈಗ ಹೇಳಿ, ಈ ಪದ್ಯ ಬದುಕಿನ ನಶ್ವರತೆಯನ್ನು ಹೇಳುತ್ತಿದೆಯೋ ಅಥವ ಶಬ್ದದ ಆಡಂಬರದಲ್ಲಿ ಮೌನದ ಮಹತ್ತನ್ನು ಹುಡುಕುವ ಯತ್ನ ಮಾಡುತ್ತಿದೆಯೋ? ಈ ಪರಿಗೆ ಒಯ್ಯವ ಪದ್ಯಕ್ಕೆ ಆಗಾಗ ಲಿಫ್ಟ್ ಕೊಡುವುದರಲ್ಲಿ ಇವರು ಸಿದ್ದ ಹಸ್ತರೇ!

“ಈ ಕನ್ನಡಿಯಲಿ ಅದೆಷ್ಟು ಮುಖ

ಯುಧಿಷ್ಟರನೂ  ನಿಂತಿದ್ದ

ಕಿಮ್ ಮಹಾಶಯನೂ ನಿಂತಿದ್ದ

ರಂಗದಲಿ ವೇಷ ಕಟ್ಟಿ”. ಎಂದು ಆರಂಭಗೊಂಡ ಪದ್ಯ ದಾಟುತ್ತ ದಾಟುತ್ತ

“ಇವನೂ ಬಿಳಿ ಬಟ್ಟೆಯಲಿ ಚಿತ್ರ

ಬಿಡಿಸಿದ್ದು ನೆತ್ತರ ಬಣ್ಣದಲಿ” ಎಂದು ಮತ್ತೊಂದು ಲಿಫ್ಟ್ ಪಡೆದಾಗ ಗೊಂದಲ. ಪದ್ಯ ಹೆಚ್ಚಿಸಿದ ಗೊಂದಲದಲ್ಲಿ

” ಇವನು ಶಿಶುಪಾಲನ ಕೊನೆ ತಮ್ಮ

ನಂದನನಿಗೂ ಬೆಂಕಿ ಇಟ್ಟೇ ತೀರುವೆನೆಂದ!” ಎಂದು ಕೊನೆಯಾಗುವಾಗ ಈ ಕವಿ ಕಾಣಿಸಿದ ಬೆಳಕ ಝಳಕ್ಕೆ ಕಣ್ಣು ಕುಕ್ಕುವ ಶಕ್ತಿ ಇದ್ದೇ ಇದೆ ಎನ್ನುವುದಕ್ಕೆ ಸಾಕ್ಷಿ.

ಆದರೆ ಪುರಾಣ ಪ್ರತಿಮೆಗಳ ಮೂಲಕವೇ ಏನೆಲ್ಲವನ್ನೂ ಕಟ್ಟುವ ಈ ಕವಿಯ ರಚನೆಗಳು ಆಧುನಿಕ ಮನಸ್ಥಿತಿಯ ಮತ್ತು ಪುರಾಣ ಪ್ರತಿಮೆಗಳ ಮೂಲ ಆಶಯವೇ ತಿಳಿಯದವರಿಗೆ ಗೊಂದಲ ಮತ್ತು ಶಬ್ದಾಡಂಬರದ ಹಾಗೆ ಕಂಡರೆ ತಪ್ಪೇನಲ್ಲ.

“ತಳ ಇರದ ದೋಣಿಯಲಿ ಮಹಾ ಯಾನ

ಆಸೆ ಎಂಬು ಹುಟ್ಟು ಒಂದರಗಳಿಗೆಯೂ ಬಿಡದೆ”

ಈ ಸಾಲುಗಳು ಹುಟ್ಟಿಸುವ ತಳಮಳಗಳ ಲೆಕ್ಕ ಸುಲಭಕ್ಕೆ ಸಿಕ್ಕದ್ದು. ಮುಂದುವರೆದಂತೆ

” ಯುದ್ದದ ದಿರಸು ಕವಚ,ಕತ್ತಿ

ತಿವಿದಲ್ಲದೇ ಮುಂದೆ ಹಾದಿ,ಹೆಜ್ಜೆ!” ಎಂದು ಆಕ್ಷೇಪಿಸುವ ಈ ಕವಿ ನಿಜಕ್ಕೂ ಏನನ್ನು ಹೇಳಲು ಹವಣಿಸುತ್ತಿದ್ದಾರೆ ಎನ್ನುವುದೇ ಕುತೂಹಲಕ್ಕೆ ದಾರಿ ಮಾಡುತ್ತದೆ.

ಇನ್ನೂ ಏನೆಲ್ಲವನ್ನೂ ಹೇಳುತ್ತ ಈ ಕವಿಯ ಕವಿತೆಗಳನ್ನು ಡಿಸೆಕ್ಟ್ ಮಾಡುತ್ತ ಹೋಗಬಹುದು. ಆದರೆ ಪುರಾಣ ಪ್ರತಿಮೆಗಳ ಭಾರದಲ್ಲಿ ಇವರ ನಿಜದ ಆಶಯಗಳೇ ಸುಸ್ತು ಪಡುತ್ತಿವೆ ಎನ್ನುವದಂತೂ ನಿಜ.

“ಇಲ್ಲಿ ಗಂಗೆಯಿದೆ

ಗಾಂಗೇಯನ ಶರಶಯ್ಯೆ ಇದೆ

ಅರ್ಜುನ ದಾಹಕ್ಕೆ

ತಳಾ ತಳ ಸೀಳಿ

ಗಂಗೆ ತರಬೇಕು!” ಎಂಬ ಭರವಸೆಯ ಕ್ಷೀಣ ದನಿಯೂ ಇವರಿಗೆ ದಕ್ಕಿರುವುದರಿಂದಲೇ ಇವರು ಪದ್ಯ ಪೋಸ್ಟ್ ಮಾಡುತ್ತಿದ್ದಂತೆಯೇ ಬೀಳುವ ಲೈಕುಗಳು ಈ ಕವಿಯು ಮತ್ತಷ್ಟು ಮಗದಷ್ಟು ಪುರಾಣ ಪ್ರತಿಮೆಗಳನ್ನು ಉಜ್ಜುಜ್ಜಿ ಹೊಳಪು ಪೇರಿಸುವಂತೆ ಮಾಡಿವೆ.

ಶ್ರೀ ಎನ್. ಡಿ. ರಾಮಸ್ವಾಮಿ ಯಾವತ್ತೋ ತಮ್ಮ ಸಂಕಲನ ತರಬಹುದಿತ್ತು. ಪ್ರತಿಮೆ ರೂಪಕಗಳ ಅರಿವೇ ಇಲ್ಲದ ಸ್ವ ಮರುಕಗಳನ್ನೇ ಕಾವ್ಯವೆಂದು ಬಿತ್ತುತ್ತಿರುವರ ನಡುವೆ ಎನ್ ಡಿ ಆರ್ ಪುರಾಣದ ಪಾತ್ರಗಳ ಮೂಲಕವೇ ಬದುಕನ್ನು ಅರಿಯುವ ರೀತಿಯಿಂದ ಬಹು ಭಿನ್ನಾವಾಗಿ ಕಾಣುತ್ತಾರೆ ಮತ್ತು ವಿಭಿನ್ನವಾಗಿಯೇ ಉಳಿಯುತ್ತಾರೆ

ಅವರ ೧೫ ಪದ್ಯಗಳನ್ನು ಒಟ್ಟು ಮಾಡಿ ಇಲ್ಲಿ ಪೋಣಿಸಿದ್ದೇನೆ. ಸುಮ್ಮನೇ ಕಣ್ಣಾಡಿಸುತ್ತ ಹೋದಂತೆ ಮತ್ತೆಲ್ಲಿಗೋ ಮತ್ಯಾವುದೋ ಪರಿಜಿಗೆ ಒಯ್ಯುವ ಈ ಪದ್ಯಗಳ ಝಳ ನಿಮಗೂ ಮುಟ್ಟಲಿ.


ಎನ್.ಡಿ.ಆರ್. ಕವಿತೆಗಳು

1.

ಅಕ್ಷಿ ನಕ್ಷತ್ರವಾದದ್ದು ಏಕೆ?

ಎದೆಯೊಳಗೆ ಪುಟ್ಟ ಕಾರಂಜಿ

 ಶಬ್ದ,ಶಬ್ದಕ್ಕೂ ಪುಳಕ

ಜೀವ ಸೆಲೆ ಕಡಲಾಗಿ,!

 ಹರಿಯುತ್ತಿದೆ ಝರಿ

ಜುಳು,ಜುಳು ನಿನಾದವೆಲ್ಲ

ಅಲೌಕಿಕದ ಹುನ್ನಾರವೆ?

ಮೀಟುತ್ತಿದೆ ಕನಸುಗಳ ಉಡವನ್ನ!

 ತಳ ಕಂಡ ಬದುಕ ಸೆಲೆ

ಉನ್ಮತ್ತ,ಉನ್ಮೀಲನದ ಗಾಳಿಪಟ

ಇಲ್ಲಿಲ್ಲ ಭಾವಗಳ ಹಕ್ಕಿ

 ಪರಿಧಿಯ ಸೀಳಿ !

 ಹಂಚಿ ಕೊಂಡ ಕನಸುಗಳು

ಆಯಾತ ನಿರ್ಯಾತವಾಗುತ್ತಿವೆ

ಈ ಸೇತುವೆಗೆ  ಬದುಕ

ಎರಡೂ ಹೊಳೆ ಕಾಯುತ್ತಲೇ!

 ಆಕಾಶದ ನಕ್ಷತ್ರಗಳೂ

ನಕ್ಕು ವಿಷಾದದ ಅಮಲಲಿ

ಈ ಸೇತುವೆ ಎಂದಿಗಾದರೂ

ಒಮ್ಮೆ ದಕ್ಕಿದರೆ?

2.

ಇಲ್ಲಿ ಜೇನಿದೆ,ಹಾಲಿದೆ,ಹಣ್ಣಿದೆ

ಅದು ಇದೆ ಇದು ಇದೆ ಎಲ್ಲ ಇದೆ

ಹೂವು,ಹಾಸಿಗೆ,ಚಂದ್ರ,ಚಂದನ

ನಗು,ಉತ್ಸಾಹ ,ಹುರುಪು,ಕನಸು

ಹೊಳೆಯಂತೆ ಕಾದಿದೆ !

ಇಳಿಯ ಬೇಕು ಕನಸುಗಳ ಹೊಳೆಗೆ

ಜಿಗಿ,ಜಿಗಿದು ಬಾಚಲು ಬೇಕು

ಹಣ್ಣ ಗೊಂಚಲಿನ ಪರಿ ಹರಡಿದ್ದು

ಬೇಕಾದ ಮಾಗಿದ ಹಣ್ಣೇ ಕಿತ್ತು!

ಏಕಲವ್ಯ ಜಗದೇಕ ವೀರನಾಗಿದ್ದು

ಇಳಿದ ಹೊಳೆಯ ದಂಡೆಯಾಚೆಯೂ ಈಜಿದ್ದು!

ಬಾಚಿದ್ದು ಯಾವನೂ ಮುಟ್ಟದ ಹಣ್ಣು!

ಸುಧಾಮ ಯಾವ ಹಣ್ಣು ಕಂಡಿತ್ತಿಲ್ಲ

ಮಾಗಿದ ಕೆಂಪು ಹಣ್ಣೇ ಕೈಗೆ

  ಸೂತ ಪುತ್ರನಿಗೆ ಬುಟ್ಟಿ,ಬುಟ್ಟಿ

ತುಂಬಾ ಹಣ್ಣು ಬಾಯಿ ನೀರೂರಿಸುವ ಹಾಗೆ!

ದ್ರೌಪದಿಗೆ ಸಾಕು ಸಾಕು ಎಂದರೂ

ಐದು ಹಣ್ಣು!

ಅರ್ಜುನಿಗೆ ಯಾವ ರಸ್ತೆಗೆ ತಿರುಗಿದರೂ ಹಣ್ಣು!

 ಹಣ್ಣು ಕಂಡಿಲ್ಲದವ ವಿದುರ

ಹಣ್ಣ ಹಿಂದೆ ಓಡಿ,ಓಡಿ ದಶಕಂಠ

ಕೊಳೆತ ಹಣ್ಣಾದ!

 ಹಣ್ಣು,ಹಣ್ಣುಗಳ ತೋಟವಾದ ಹನುಮದ್ವಿಕಾಸ!

 ಲಕ್ಷ್ಮಣ ಹಣ್ಣ ಬಿಟ್ಟು ಓಡಿದ್ದು

ಕೋದಂಡ ಹಣ್ಣ ಜತಯೇ ಓಡಿದ್ದು

ಮಂಥರೆ ಹಣ್ಣಿಗೆ ಕುರ್ಚಿ ಕಾಲು ಏಳೆದದ್ದು!

ಇಲ್ಲಿ ರಸಭರಿತ ಹಣ್ಣಗಳ ರಾಶಿ,ರಾಶಿ

ಬೇಕಾದವರು ಬೇಕಾದ ಹಣ್ಣ ಬಾಚಿ

ಕೈ ಚಾಚ ಬೇಕು ಎಟುಕುವ ತನಕ

ಮುಗಿಲ ಅಟ್ಟದಲ್ಲೇ ಇರಲಿ

ಕೈ ಚಾಚಿದರಷ್ಟೇ ಹಣ್ಣು!

3.

ನಿಯಮಗಳ ಪಾಲಿಸುತ್ತಾಳೆ ಅವಳು

ಗೆರೆ ದಾಟದೆ ,ಅದರೊಳಗೆ

ಉಸಿರು ಬಿಗಿ ಹಿಡಿದು

ಮೆಲು ದನಿಯಲೆ

ನಡೆಯುತ್ತ ರಸ್ತೆಯ ಮಂದಿಗೆ

ನೋವಾಗದ ಪರಿ!

ಕನಸುಗಳ ಹೆಣೆಯುತ್ತಾಳೆ

ಚಪ್ಪರ ನೆಡುತ್ತ

ಕನಸುಗಳಿಗೆ ಬಣ್ಣ ಅಂಟಿಸುತ

ಕಾಮನ ಬಿಲ್ಲನ್ನೇ ಕೈಗಿಡುವ ಪರಿ!

ಬದುಕ ರಸ್ತೆ ಇದು

ಘೋರ

ನೆಮ್ಮದಿ ಕಲಕುವ ಹೊಂಡಗಳೇ

ಒಂದೊಂದಾಗಿ ಸಪಾಟಾಗಿಸುತ್ತಾಳೆ!

ಈ ಬದುಕ ಬಾವಿಯಲಿ

ಅದೆಷ್ಟು ಗೊತ್ತಿಲ್ಲದ ಮೆಟ್ಟಿಲುಗಳು

ಕಡಿದಾದ ,ಬಹು ಎತ್ತರದವು

ಸುಲಭದಲಿ ಹೆಜ್ಜೆ ಇಡಿಸುತ್ತಾಳೆ

ಮುಗ್ಗರಿಸದ ಹಾಗೆ!

ಈ ಬದುಕಿನ ಗುಡ್ಡ

ಅದರ ಕೋಡುಗಲ್ಲು

ಬಂಡೆ,ಹೆಬ್ಬಂಡೆ

ಬಿಡದೆ ನೊಕುವಳು ತುತ್ತ ತುದಿಗೆ

ಅವನು ಮುರಿ,ಮುರಿದು

ಗೆರೆ ದಾಟುತ್ತಾನೆ

ಕನಸುಗಳ ಬೀದಿಗೆ ಚೆಲ್ಲಿ

ನಶೆ ಅಪ್ಪಿ

ನಿದಿರೆಗೆ ಜಾರುತ್ತಾನೆ!

4.

ಬುದ್ಧ ಗುರುವಿನ

ಕಣ್ಣಿಗೆ ಧೂಳು ಬಿದ್ದು

ಧಾರಾಕಾರ ಕಣ್ಣೀರು

ನೋವು,ನವೆ!

ಧೂಳುಗಳ ಭಾರ

ಸಹಿಸದೆ ಕಂಗಾಲು

ದಿಕ್ಕೆಟ್ಟ ಗುರು

ಈ ಧೂಳುಗಳ ನಿವಾರಿಸದೆ

ಸ್ಪಷ್ಟ ಕಣ್ಣು ಹೇಗೆ?

ಓಡಿದ,ಓಡಿದ

ಧೂಳುಗಳು ಬಿಡದೆ

ಹಿಂಬಾಲಿಸಿದ್ದು

ಕಣ್ಣ ಮುಚ್ಚಿ ಓಡಿದ!

ದಣಿವಾರಿಸಲು

ಮರದ ಬಳಿ ಕುಂತಾಗ

ಮಳೆಯೋ ಮಳೆ

ಕಣ್ಣ ಧೂಳೆಲ್ಲ ಮಾಯ!

ಈಗ ಬುದ್ದನ ಕಣ್ಣು

ಸ್ಪಷ್ಟ, ಎಲ್ಲವೂ

ನಿಖರವಾಗಿ

ಕಂಡು ಬೆರಗು!

*************************************

ಲೇಖಕರ ಬಗ್ಗೆ:

ತರೀಕೆರೆ ಮೂಲದವರಾದ ಡಿ.ಎಸ್.ರಾಮಸ್ವಾಮಿಯವರು ಜೀವವಿಮಾ ನಿಗಮದ ಅಧಿಕಾರಿಯಾಗಿ ಅರಸೀಕೆರೆಯಲ್ಲಿ ನೆಲೆಸಿದ್ದಾರೆ.ಇವರ ‘ಉಳಿದ ಪ್ರತಿಮೆಗಳು’ ಕವನಸಂಕಲನಕ್ಕೆಮುದ್ದಣ ಕಾವ್ಯ ಪ್ರಶಸ್ತಿದೊರೆತಿದೆ.

One thought on “ಪ್ರತಿಮೆಗಳ ಭಾರಕ್ಕೆ ಹೊಯ್ದಾಡುವ ರೂಪ(ಕ)ಗಳು

  1. ಅತ್ಯುತ್ತಮ ಗ್ರಹಿಕೆ.
    ಎನ್.ಡಿ.ಆರ್ ಸರ್ ದು ಒಂದು ಸಂಕಲನ ಬರಬೇಕು.

Leave a Reply

Back To Top