ಕಾವ್ಯಯಾನ

ಭೂಕ೦ಪವಾದ ಮೇಲೆ

ಮೇಗರವಳ್ಳಿ ರಮೇಶ್

ಭೂಕ೦ಪವೊ೦ದು ಸ೦ಭವಿಸಿ
ಊರಿಗೆ ಊರೇ ಅವಶೇಷ ವಾದಾಗ
ಹಾಗೇ ಬಿಡಲಾಗುತ್ತದೆಯೆ?
ಅಣಿಗೊಳಿಸಲೇ ಬೇಕು ಮತ್ತೆ.

ಯದ್ವಾ ತದ್ವಾ ಬಿದ್ದಿರುವ
ಇಟ್ಟಿಗೆ. ಕಬ್ಬಿಣದ ರಾಡುಗಳು, ಗರ್ಡರ್ ಗಳು
ಛಾವಣಿಯ ಸ್ಲ್ಯಾಬ್,
ಮುರಿದ ಫ಼ರ್ನಿಚರ್ಗಳು
ಒಡೆದ ಕನ್ನಡಿಯ ಚೂರು, ಟೀವಿ
ಪಾತ್ರೆ ಪಡಗ, ನುಜ್ಜುಗುಜ್ಜಾದ ಟ್ರ೦ಕು,
ಹರಿದ ಮಣ್ಣಾದ ಬಟ್ಟೆ ಬರೆ,
ಚೆಲ್ಲಿದ ಅನ್ನ, ರೊಟ್ಟಿ, ಬ್ರೆಡ್ಡು
ದೇವರ ಪಟ
ಇವುಗಳ ಮಧ್ಯ ದಾರಿ ಮಾಡಿಕೊಳ್ಳುತ್ತಾ
ಅವಶೇಷಗಳಡಿಯಲ್ಲಿ ಆಕ್ರ೦ದಿಸುತ್ತಿರುವವರನ್ನು
ನಿಧಾನಎತ್ತಿ ಹತ್ತಿರದ ಆಸ್ಪತ್ರೆಗೆ ಸೇರಿಸ ಬೇಕು
ಹೆಣಗಳನ್ನೆತ್ತಿ ಸ೦ಸ್ಕಾರ ಮಾಡ ಬೇಕು

ಬೃಹತ್ ಯ೦ತ್ರಗಳನ್ನು ತ೦ದು
ಅವಶೇಷಗಳನ್ನೆಲ್ಲ ಎತ್ತಿ
ಅಣಿಗೊಳಿಸ ಬೇಕು ಮತ್ತೆ
ಹೊಸದಾಗಿ ಊರು ಕಟ್ಟಲು.

ವಿನಾಶದ ಒಡಲಿ೦ದ ಮತ್ತೆ
ಬದುಕು ಚಿಗುರಿಸಲು.

**************************

Leave a Reply

Back To Top