ಅಂಕಣ ಬರಹ
ಸಾಮಾನ್ಯ ಸಂಗತಿಗಳಲ್ಲೇ
ಅಸಾಮಾನ್ಯ ಬೆರಗನ್ನು ಹಿಡಿದಿಡುವ
ಉಮಾ ಮುಕುಂದರ ಕವಿತೆಗಳು
.
ಸಂಗಾತಿಗಾಗಿ ಈ ಅಂಕಣವನ್ನು ಆರಂಭಿಸಿದಾಗ ಫೇಸ್ಬುಕ್ಕಿನ ಕವಿತೆಗಳ ವಿಶ್ಲೇಷಣೆ ಅಷ್ಟೇನೂ ಕಷ್ಟವಾಗದು ಮತ್ತು ನನ್ನ ಇಷ್ಟೂ ದಿನದ ಕಾವ್ಯದ ಓದು ಅದನ್ನು ಪೊರೆಯುತ್ತದೆಂದೇ ಅಂದುಕೊಂಡಿದ್ದೆ. ಆದರೆ ಫೇಸ್ಬುಕ್ಕಿನಲ್ಲಷ್ಟೇ ಮೊದಲು ಪ್ರಕಟಿಸಿ ಆ ಮಾಧ್ಯಮದ ಮೂಲಕವೇ ಬೇರೆಡೆಯೂ ಖ್ಯಾತರಾದ ಅನೇಕ ಹೆಸರುಗಳು ಆನಂದ ಮತ್ತು ಆಶ್ಚರ್ಯವನ್ನು ಉಂಟು ಮಾಡುವುದರ ಜೊತೆಗೇ
ಈವರೆವಿಗೂ ಪತ್ರಿಕೆಗಳಲ್ಲಿ ಪ್ರಕಟಿಸದೆಯೂ ತಮ್ಮ ಆಳದನುಭವಗಳಿಗೆ ಕವಿತೆಯ ರೂಪ ಕೊಡುವುದಕ್ಕಷ್ಟೇ ಸೀಮಿತವಾಗದೇ ಇಷ್ಟೂ ದಿನದ ಕಾವ್ಯ ಪರಂಪರೆಯ ಮೂಲಕ ಅರಿತ ಕಾವ್ಯದ ನಡಿಗೆಗೆ ಹೊಸದೇ ದಿಕ್ಕು ತೋರುತ್ತಿರುವ ಮತ್ತು ಫೇಸ್ಬುಕ್ ಕವಿಗಳನ್ನು ಲಘುವಾಗಿ ಕಾಣದೆ ಅವರನ್ನೂ ಮುಖ್ಯ ವಾಹಿನಿಯ ಜೊತೆಗೇ ಪರಿ ಗಣಿಸಲೇಬೇಕೆಂಬ ಎಚ್ಚರವನ್ನೂ ಆ ಅಂಥ ಹೆಸರುಗಳು ಎಚ್ಚರಿಸಿವೆ.
ಆ ಅಂಥ ಹೆಸರುಗಳ ಪೈಕಿ ಶ್ರೀಮತಿ ಉಮಾ ಮುಕುಂದರ ಹೆಸರು ಅತಿ ಮುಖ್ಯವಾದುದು. ಓದಿನ ಮೂಲಕ ಅರಿತು ಕವಿತೆಗಳೆಂದು ಯಾವುದನ್ನು ನಾವು ಸಾಮಾನ್ಯವಾಗಿ ಅಂದುಕೊಂಡಿದ್ದೇವೋ ಹಾಗಿರದೆ ಮೇಲ್ನೋಟಕ್ಕೆ ಸಾಮಾನ್ಯ ಸಾಲುಗಳಂತೆ ಕಂಡರೂ ಆಳದಾಳದಲ್ಲಿ ಬೆಡಗು ಬೆರಗು ಮತ್ತು ಹೊಳಹನ್ನು ಉಮಾ ಮುಕುಂದರು ಈತನಕ ಪ್ರಕಟಿಸಿರುವ ಫೇಸ್ಬುಕ್ ಕವಿತೆಗಳು ಇಟ್ಟುಕೊಂಡಿವೆ.
ಉಮಾ ಮುಕುಂದ ಈವರೆಗೂ ಫೇಸ್ಬುಕ್ಕಿನಲ್ಲಿ ಪ್ರಕಟಿಸಿದ ೩೬ ಕವಿತೆಗಳನ್ನು ಅವಧಿಯ ಜಿ.ಎನ್.ಮೋಹನರ “ಬಹುರೂಪಿ” ಪ್ರಕಾಶನವು “ಕಡೇ ನಾಲ್ಕು ಸಾಲು” ಹೆಸರಿನಲ್ಲಿ ಪ್ರಕಟಿಸಿದೆ. ಸಂಕಲನದ ನಾಡಿಮಿಡಿತವನ್ನು ಅದ್ಭುತವಾಗಿ ಹಿಡಿದ ಹೆಚ್. ಎಸ್. ರಾಘವೇಂದ್ರರಾವ್ ಅವರ ಮುನ್ನುಡಿ ಮತ್ತು ಇಲ್ಲಿನೆಲ್ಲ ಪದ್ಯಗಳ ಉಸಿರಲ್ಲೂ ಇರುವ ಬಗೆಬಗೆಯ ಏರಿಳಿತಗಳನ್ನು ವೈದೇಹಿಯವರ ಬೆನ್ನುಡಿ ದಾಖಲಿಸಿ ಉಳಿದವರು ಇನ್ನು ಈ ಕುರಿತು ಬರೆಯಲು ಸಾಧ್ಯವೇ ಇಲ್ಲದಂಥ ಅದ್ಭುತ ನೋಟವನ್ನು ಈ ಇಬ್ಬರೂ ಕೊಟ್ಟಿದ್ದಾರೆ. ಈ ಪುಸ್ತಕಕ್ಕೆ ಹಾಸನದ ಮಾಣಿಕ್ಯ ಪ್ರಕಾಶನದ “ಕಾವ್ಯ ಮಾಣಿಕ್ಯ” ಪ್ರಶಸ್ತಿಯೂ ಲಭಿಸಿದೆ.
ನಿತ್ಯ ದಂದುಗದ ಸಂತೆಯಲ್ಲಿ ಯಾವ ಕಾರಣಕ್ಕೂ ಕಳೆದು ಹೋಗ(ಲೇ)ಬಾರದೆಂಬ ಅತಿ ಎಚ್ಚರದ ಸೂಕ್ಷ್ಮತೆಯ ಜೊತೆಗೇ ಎಂಥ ರಿಕ್ತತೆಯಲ್ಲೂ ಸಂವೇದನಾಶೀಲತೆಯನ್ನು ಬಿಟ್ಟುಕೊಡದೆ ಕಾಪಿಟ್ಟುಕೊಳ್ಳಲೇ ಬೇಕೆಂಬ ಹೆಬ್ಬಯಕೆಯ ಈ ಕವಿಯ ಕವಿತೆಗಳು ಸ್ವಗತದಂತೆ ಮತ್ತು ಮನುಷ್ಯತ್ವದ ಮೇರು ಯಾಚ(ತ)ನೆಗಳಂತೆ ಸರಳವಾದ ಕವಿತೆಗಳಾಗಿ ಅರಳಿವೆ ಮತ್ತು ಮೇಲ್ನೋಟದ ಯಾವ ಸಂಕೀರ್ಣತೆಯನ್ನು ತೋರದೆಯೂ ಆ ಸಂಕೀರ್ಣತೆಯನ್ನೇ ಆಭರಣವನ್ನಾಗಿ ಹೊದ್ದ ಅನುಪಮ ಅನುಭವದ ಸಾರ ಸರ್ವಸ್ವವೇ ಆಗಿ ಬದಲಾಗಿವೆ. ಬದುಕ ಪಯಣದ ನಿರಂತರದ ಹಾದಿಯಲ್ಲೂ ನಿತ್ಯ ಹೊಸತನ್ನೇ ಕಾಣುವ ಬಯಸುವ ಈ ಕವಿ ಮನಸ್ಸು ಅನುಭವದಿಂದ ಮಾಗಿದ ನಿಜದ ಅನುಭಾವವೇ ಆಗಿ ಬದಲಾಗಿದೆ.
ಉದಾಹರಣೆಗಾಗಿ “ದೈನಿಕ” ಪದ್ಯದ ಪೂರ್ಣ ಪಾಠವನ್ನು ಗಮನಿಸಿ;
ದೈನಿಕ
ಅದೇ ಸೂರ್ಯ ಅದೇ ಹಗಲು
ಬೆಳಕಿನಾಟ ಬೇರೆ ಬೇರೆ
ಅದೇ ಗಿಡ ಅದೇ ಮರ
ಎಲೆ ಎಲೆಯ ನವಿರು ಬೇರೆ
ಅದೇ ಹಕ್ಕಿ ಅದೇ ಹಾಡು
ಪಾಡು ಮಾತ್ರ ಬೇರೆ ಬೇರೆ
ಅದೇ ನಡಿಗೆ ಅದೇ ಜನ
ಉಸಿರ ಭಾರ ಬೇರೆ ಬೇರೆ
ಅದೇ ಅಡುಗೆ ಅದೇ ಸಾರು
ಅಂದಂದಿನ ರುಚಿ ಬೇರೆ
ಅದೇ ಉಡುಗೆ ಅದೇ ತೊಡುಗೆ
ತನುಭಾವ ಬೇರೆ ಬೇರೆ
ಅದೇ ನಾನು ಅದೇ ಅವನು
ಅನುದಿನದ ಸಾಂಗತ್ಯ
ಬೇರೆ ಬೇರೆ ಬೇರೆ.
ಪದ್ಯದ ಬಗ್ಗೆ ಬರೆಯುವಾಗ ಅಥವ ಮಾತನಾಡುವಾಗ ಕವಿಯೊಬ್ಬನ ಕವಿತೆಯ ಯಾವುದೋ ಒಂದು ಸಾಲನ್ನು ಕೋಟ್ ಮಾಡುತ್ತ ತನ್ನ ಹೇಳಿಕೆಗಳನ್ನು ಆ ವಿಮರ್ಶಕ/ ಬರಹಗಾರ ಸಮರ್ಥಿಸಿಕೊಳ್ಳುವುದುಂಟು. ಆದರೆ ಈಗ ಮೇಲೆ ಕಂಡಿರಿಸಿದ ಪದ್ಯದ ಯಾವ ಸಾಲನ್ನು ಹೇಳಿದರೂ ಇಡೀ ಪದ್ಯ ಹೇಳಲು ತವಕಿಸುತ್ತಿರುವ ಸಂಗತಿ “ಬೇರೆ ಬೇರೆ ಬೇರೆ” (different, root & totally inter depending) ಅನ್ನುವುದನ್ನು ಮುಟ್ಟಿಸಲಾಗುವುದೇ ಇಲ್ಲ ಮತ್ತು ಅನಿವಾರ್ಯವಾಗಿ ಇಡೀ ಪದ್ಯವನ್ನು ಓದದೇ ಇದ್ದರೆ ಕವಿ ಹೇಳ ಹೊರಟ ಅನುಭೂತಿ ಓದುಗನನ್ನು ತಟ್ಟುವುದೇ ಇಲ್ಲ.
ಈ ಇಂಥ ಕಸುಬುದಾರಿಕೆ, ಹೇಳಿಕೆ ಅಥವ ಘೋಷಣೆಗಳ ಮೂಲಕವೇ ಮೊರೆಯುವ ಸಾಮಾನ್ಯ ಕವಿಗೆ ಸಾಧ್ಯವಿಲ್ಲದ ಸಂಗತಿ. ಈ “ತಿಳಿ”ವಳಿಕೆ ಅಗಾಧ ಓದು ಮತ್ತು ಬದುಕಿನ ಆಳ ಅನುಭವಗಳಿಂದ ದಕ್ಕಿದ ಮತ್ತು ಸಾಮಾನ್ಯ ಸಂಗತಿಗಳಿಂದಲೂ “ಅರಿವ”ರೀತಿಯಿಂದ ಮಾಗಿದ ಪದ್ಯಗಳೇ ಆಗಿವೆ. ಹಾಗೆಂದು ಇವು ಮುಕ್ತಕಗಳೂ ಅಲ್ಲ. ಉಪನಿಷತ್ತುಗಳ ಪರಿಚಯ ಇರುವವರಿಗೆ ಅಲ್ಲಿ ಬರುವ ಪ್ರಶ್ನೋತ್ತರಗಳ ಪರಿ ಅರಿತವರಿಗೆ ಇಲ್ಲಿನ ಎಲ್ಲ ಕವಿತೆಗಳೂ ಕವಿತೆಯ ವೇಷ ಧರಿಸಿದ ಅನುಭವ ಪಾರಮ್ಯದ ಬಿಕ್ಕುಗಳು ಎಂದು ಹೇಳಿದರೆ ಈ ಕವಿಗೆ ಸಮಾಧಾನವಾದೀತು. ಏಕೆಂದರೆ ಈ ಕವಿತೆಗಳಲ್ಲಿ ಕೃತ್ರಿಮತೆಯಾಗಲೀ, ಜಿದ್ದಿಗೆ ಬಿದ್ದು ಕವಿತೆ ಬರೆಯಲೇಬೇಕೆಂಬ ಆವುಟವಾಗಲೀ ಅಥವ ಬೇರೆ ಯಾರೂ ಹೇಳದ ಸಂಗತಿಯನ್ನು ತಾನು ಹೇಳಿದ್ದೇನೆ ಎಂಬ ಬಿಂಕವಾಗಲೀ ಎಳ್ಳಷ್ಟೂ ಇಲ್ಲವೇ ಇಲ್ಲ.
” ದಾರಿ” ಹೆಸರಿನ ಪದ್ಯದ ಕಡೆಯ ಸಾಲುಗಳನ್ನು ಗಮನಿಸಿ.
ಬಾಗಿ ನೆಲದ ಮೇಲೆ
ಚೆಲ್ಲಾಡಿದ್ದ ಕಾಸ
ಒಂದೊಂದನ್ನೇ ಹೆಕ್ಕಿ
ಮೆಲ್ಲನೆ ಅವಳ ಹೆಗಲು ಬಳಸಿ
ಅಂಗೈಯಲ್ಲಿಟ್ಟಾಗ
ಥಟ್ಟನೆ ನನ್ನ ಕೈಯನ್ನು
ಗಟ್ಟಿ ಹಿಡಿಯುತ್ತಾಳೆ
ಇಬ್ಬರ ಉಸಿರೂ ಬೆರೆತು
ನಿಟ್ಟುಸಿರಾಗುತ್ತದೆ
ಮೆಲ್ಲನೆ ಕೈ ಸಡಿಲಿಸಿ
ಮನೆ ದಾರಿ ಹಿಡಿದಾಗ
ಹೆಜ್ಜೆಗಳು ವಜ್ಜೆಯಾಗುತ್ತವೆ
ಮನುಷ್ಯ ಮನುಷ್ಯರ ಸಾಂಗತ್ಯದ ದ್ವೈತ ಅದ್ವೈತಗಳ ಮತ್ತು ಅಸ್ಮಿತೆ- ಅನುಸಂಧಾನದ ತಾಕಲಾಟಗಳು ‘ಬಯಕೆ’, ‘ಹೀಗೊಂದು ಬೆಳಗು’ ‘ನೆನಪು’ ‘ನಾನೂ ನೀನೂ’ ‘ನಡೆ’ ಇತ್ಯಾದಿ ಪದ್ಯಗಳಲ್ಲಿವೆ.
ಇಷ್ಟು ಹೇಳಿದ ಮಾತ್ರಕ್ಕೆ ಸಹಿಸದೇ ಈ ಕವಿಯ ಮೂಲ ಆಶಯವೇನು ಅವರು ಬದುಕಿನ ಬಗೆಗೆ ಕೊಡುವ ವ್ಯಾಖ್ಯೆಯೇನು ಎಂದೂ ರಿಪಿರಿಪಿ ಮಾಡುವವರು ಖಂಡಿತ “ಆ ದಿನ ಈ ದಿನ” ಕವಿತೆಯ ಈ ಸಾಲನ್ನು ಗಮನಿಸಬೇಕು;
ಆ ದಿನ.. ಈ ದಿನ..
ಒಬ್ಬೊಬ್ಬರಿಗೂ ಒಂದೇ ದಿನ!!!!
ಎಲ್ಲ ದಿನ ಎಲ್ಲರ ದಿನವಾದ ದಿನ..
ಸುದಿನ.
ಇದಕ್ಕಿಂತ ಉತ್ತಮವಾದ ಸರ್ವರನ್ನೂ ಒಳಗೊಳ್ಳುವ ಸುದಿನವನ್ನು ಬಯಸುವ ಕವಿ ಮನಸ್ಸು ಇನ್ನು ಹೇಗೆ ತಾನೇ ಲೌಕಿಕದ ತರ ತಮಗಳನ್ನು ಸಹಿಸೀತು? ಹಾಗಾಗಿಯೇ ತೀರ ಸಾಮಾನ್ಯರಲ್ಲೂ ಇರುವ ಅಸಾಮಾನ್ಯ ಸಂಗತಿಗಳ ಶೋಧ ಇವರ ಕಾವ್ಯ ಕಸುಬಿನ ಮೂಲ ಸ್ರೋತ. ಹಾಗೆಂದು ಸ್ವಂತದ ಶೋಧವೂ ಕೂಡ ಬಲು ಮುಖ್ಯವಾದ ಸಂಗತಿಯೇ. ಅದನ್ನು ಈ ಪದ್ಯದಲ್ಲಿ ಗಮನಿಸಿ;
ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬವೇ ನಾನಲ್ಲ
ಎನಿಸುತ್ತಿದೆ ನನಗೆ
ಇನ್ನು ಫೋಟೋದಲ್ಲಿರುವ ನಾನು
ನಾನಾಗಲು ಹೇಗೆ ಸಾಧ್ಯ?
ಈ ಇಂಥ “ತಿಳಿ”(ಳು ಅಲ್ಲವೇ ಅಲ್ಲ)ವಳಿಕೆ ಬರುವುದು ನಿರಂತರವಾಗಿ ಕವಿ ಸಾಮಾಜಿಕನಾದಾಗ ಮಾತ್ರ ಸಾಧ್ಯ ಆಗುವ ಮಾತು. ಎಲ್ಲರಿಗೂ ತಿಳಿದಂತೆ ಶ್ರೀಮತಿ ಉಮಾ ಬಾಳ ಸಂಗಾತಿ ಮುಕುಂದ್ ಪ್ರಖ್ಯಾತ ಫೋಟೋಗ್ರಾಫರ್. ಅವರ ಕಪ್ಪು ಬಿಳುಪಿನ ಛಾಯಾಚಿತ್ರಗಳಿಗೆ ಸೆರೆ ಸಿಕ್ಕದ ಖ್ಯಾತನಾಮರು ವಿರಳಾತಿವಿರಳ. ” ಮುಖ ಮುದ್ರೆ” ಅವರ ಛಾಯಾಚಿತ್ರಗಳ ವಿಶೇಷ ಆಲ್ಬಂ. ಛಾಯಾ ಚಿತ್ರ ತೆಗೆಯುವುದು ಕೂಡ ಸವಾಲಿನ ಕೆಲಸವೇ ಹೌದು.
ಒಂದು ಮಿಂಚಿನ ಕ್ಷಣದಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನೇ ಇಡಿಕರಿಸಿದಂಥ ಫೋಸು ಸಿಕ್ಕಬಹುದು. ಆ ಕ್ಷಣವನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯುವುದೇ ಛಾಯಾಗ್ರಾಹಕನ ಸಾಹಸ. ಆದರೆ ಈ ಕ್ಷಣ ತನ್ನದು ಎಂದು ಅವನಿಗೆ ಗೊತ್ತಿರಬೇಕಿದ್ದರೆ ತಾನು ಫೋಟೋ ತೆಗೆಯುವ ವ್ಯಕ್ತಿಯ ಗುಣ, ಸ್ವಭಾವ, ಚಿಂತನಾ ವೈಶಿಷ್ಟ್ಯಗಳ ಬಗ್ಗೆ ಆತ ವಿಶೇಷವಾಗಿ ತಿಳಿದುಕೊಂಡಿರಬೇಕಾಗುತ್ತದೆ. ಮಾತ್ರವಲ್ಲದೆ ತನ್ನ ಗುರಿಯ ಬಗ್ಗೆ ಖಚಿತತೆ ಆತನಲ್ಲಿ ಇರಬೇಕಾಗುತ್ತದೆ. ಇದೆಲ್ಲದರಲ್ಲೂ ಮುಕುಂದರಲ್ಲಿ ತಜ್ಞತೆ ಇರುವುದರಿಂದಲೇ “ಮುಖ ಮುದ್ರೆ”ಯಲ್ಲಿರುವ 50 ಮಂದಿ ಸಾಹಿತಿಗಳ, ರಂಗಕರ್ಮಿಗಳ ಮತ್ತು ಚಿತ್ರ ರಂಗಗಳಲ್ಲಿ ದುಡಿದ ಮಹನೀಯರ ಚಿತ್ರಗಳ ಜೊತೆಗೆ ಅವರ ಕುರಿತ ಟಿಪ್ಪಣಿ ಕೂಡ ಈ ಪುಸ್ತಕದಲ್ಲಿ ಇರುವುದು ವಿಶೇಷ.
ಸೂಕ್ಷ್ಮತೆ ಮತ್ತು ವ್ಯಕ್ತಿಯೊಬ್ಬರ ಸಹಜತೆಯನ್ನು ಚಿತ್ರಕ್ಕಿಳಿಸುವ ವ್ಯವಧಾನ ಮುಕುಂದರಿಂದ ಉಮಾ ಕಲಿತರೋ ಅಥವಾ ಮುಕುಂದರ ಜೊತೆಗೇ ಇರುತ್ತಾ ಇರುತ್ತಾ ಅವರ ಪಟಗಳಿಗೆ ಆಹ್ವಾನಿತ ಗಣ್ಯರನ್ನು ರೂಪದರ್ಶಿಯಾಗಿಸುವ ಕಾಯಕದಲ್ಲಿ ಉಮಾ ಕಂಡುಕೊಂಡ ಅನುಭವವೆ ಹೀಗೆ ಬದಲಾಯಿತೋ ಈ ದಂಪತಿಗಳೇ ಹೇಳಬೇಕು. ಹೆಗ್ಗೋಡಿನ ನೀನಾಸಂ ಶಿಬಿರ, ಬೆಂಗಳೂರಿನ ಬಹುತೇಕ ಸಾಹಿತ್ಯಕ ಕಾರ್ಯಕ್ರಮಗಳು, ಡಾ.ಎಚ್ಚೆಸ್ವಿ ನಡೆಸಿ ಕೊಡುತ್ತಿದ್ದ ” ಅಭ್ಯಾಸ” ತರಗತಿಗಳಲ್ಲಿ ಈ ದಂಪತಿಗಳನ್ನು ಕಾಣದೇ ಉಳಿದವರಿಲ್ಲ. ಹಾಗೆಂದ ಮಾತ್ರಕ್ಕೆ ದಾಂಪತ್ಯದ ಏಳು ಬೀಳುಗಳು, ಸರಸ ವಿರಸಗಳು ಇವರನ್ನು ಬಾಧಿಸದೇ ಬಿಡದು. ಅದನ್ನು ಕವಿ “ನಡೆ” ಅನ್ನುವ ಹೆಸರಿನ ಪದ್ಯದಲ್ಲಿ ಹೀಗೆ ಹೇಳುತ್ತಾರೆ;
ನಡೆ
ಎಲ್ಲೋ ಹುಟ್ಟಿದ ಅವನು
ಮತ್ತೆಲ್ಲೋ ಹುಟ್ಟಿದ ನಾನು
ಹೇಗೋ ಬೆಸೆದು ಬಂಧ
ಶುರುವಾದ ಪಯಣ
ಸಾಗಿದೆ ಮೂರು ದಶಕಗಳಿಂದ
ಅಂದ ಮಾತ್ರಕ್ಕೆ ನಾವೇನು ಅಪರೂಪವಲ್ಲ
ಸಿಟ್ಟು ಸೆಡವು, ಸಣ್ಣತನ ಎಲ್ಲವೂ ಇದ್ದು
ಶರಂಪರ ಜಗಳವಾಡಿ ಮುಖ ತಿರುಗಿಸಿ
ಮಾತು ಬಿಟ್ಟು ವಾರ ಕಳೆವಷ್ಟರಲ್ಲಿ ಸಾಕೆನಿಸಿ,
‘ಟೋಕಿಯೋ ಸ್ಟೋರಿ’ ಸಿನೆಮಾ ನೋಡೋಣವೇ
ಇಂದು ಮತ್ತೆ? ಎಂದು ಕರೆದಾಗ ಅವನು,
ಸೊರಗಿ ಸುಕ್ಕಿಟ್ಟ ಶುಂಠಿ ಕೊಂಬೊಂದು ಕೊನರಿದೆ
ಕಾಣು ಬಾ.. ಎಂದು ಕರೆದಾಗ ನಾನು
ಮರೆತು ಬಿಡುತ್ತೇವೆ ಮಾತು ಬಿಟ್ಟದ್ದನ್ನು
ಮುಂದಾಗಿರಬಹುದೊಮ್ಮೆ ಅವನು
ಮತ್ತೊಮ್ಮೆ ನಾನು.
ಸಾಲ, ಸೋಲುಗಳಲ್ಲಿ
ರೋಗ ರುಜಿನಗಳಲ್ಲಿ
ದುಃಖ ದುಮ್ಮಾನದಲಿ
ಹಮ್ಮು ಬಿಮ್ಮುಗಳಳಿದು
ಮುಂದುವರಿದಿದೆ ನಡಿಗೆ
ಹೊರಳಿ ನೋಡುತ್ತೇವೆ
ಕಂಡ ಕನಸುಗಳನ್ನು
ನೆನೆನೆನೆದು ನಗುತ್ತೇವೆ
ಹಾರುಗುದುರೆಯನೇರಿ
ಹಾರಾಡಿ ಬಿದ್ದದ್ದನ್ನು.
ವಸಂತಗಳುರುಳಿ..
ಕೂದಲು ನೆರೆತು
ಮಂಡಿ ಸವೆದರೂ
ನಡೆಯುತ್ತಿದ್ದೇವೆ
ನಿಂತರೂ ಆಗಾಗ
ಜೊತೆಗೇ.
ರಾಮಾನುಜನ್ ತಮ್ಮ ಯಾವುದೋ ಸಂಕಲನದ ಬಗ್ಗೆ ಮಾತನಾಡುತ್ತ ಆಡುತ್ತ “ಇದು ಯಾಕೋ ಮಾತು ಅತಿಯಾಯಿತು” ಎನ್ನುತ್ತಾರೆ. ಹಾಗೆ ನೀವು ಹೇಳುವ ಮೊದಲು ಮತ್ತು ಸೀಮಿತ ಚೌಕಟ್ಟಿನ ಈ ಅಂಕಣದ ಬರಹವನ್ನು ಎಂದಿನ ಹಾಗೆ ಕವಿಯ ನಾಲ್ಕೋ ಐದೊ ಕವಿತೆಗಳನ್ನು ಆಯ್ದು ಓದಿ ಎಂದು ಹೇಳುವ ಬದಲು ಉಮಾ ಮುಕುಂದರ ಫೇಸ್ಬುಕ್ ಅಕೌಂಟನ್ನು ತೆರೆದು ಅವರ ಎಲ್ಲ ಕವಿತೆಗಳನ್ನು ಓದಿಕೊಂಡರೆ ಸಿಕ್ಕುವ ಅನುಭೂತಿ ನಿಮ್ಮದೂ ಆಗಲಿ ಎಂದು ಹೇಳುತ್ತಲೇ ಹಾಗೆ ಪುರುಸೊತ್ತು ಇಲ್ಲದವರು ಓದಲೇ ಬೇಕಾದ ಐದು ಕವಿತೆಗಳನ್ನು ಇಲ್ಲಿ ಕೊಟ್ಟಿದ್ದೇನೆ. ಮತ್ತು “ಕಡೇ ನಾಲ್ಕು ಸಾಲು” ಸಂಕಲನವು ಬಹುರೂಪಿ ಅಂತರ್ಜಾಲ ಮಳಿಗೆಯಲ್ಲಿ ಮಾರಾಟಕ್ಕೆ ಇದೆ ಎಂದೂ ಸೂಚಿಸಬಯಸುತ್ತೇನೆ
———————————————————————–
.
ಉಮಾ ಮುಕುಂದ್ ಅವರ ಕವಿತೆಗಳು
೧. ಅಲ್ಲೂ.. ಇಲ್ಲೂ..
ಅಂದೊಂದು ದಿನ ಅವಳು
ಜೀನ್ಸು, ಸ್ಲೀವ್ ಲೆಸ್ ಟಾಪು ತೊಟ್ಟು
ಕೂದಲಿಳಿಬಿಟ್ಟು ಬೀಸಿ ನಡೆದವಳು
ಥಟ್ಟನೆ ಹಿಂತಿರುಗಿ ತುರುಬುಕಟ್ಟಿ
ಸೀರೆಯುಟ್ಟು ದೊಡ್ಡ ಕುಂಕುಮ ತೊಟ್ಟಳು
ಇನ್ನೊಂದು ದಿನ ಅವರು
ಇದ್ದಕ್ಕಿದ್ದಂತೆ ಬಂದಿಳಿದಾಗ
ನೀರುಳ್ಳಿ, ಬೆಳ್ಳುಳ್ಳಿ, ಮಸಾಲೆ ಬೆರೆಸಿ
ಖಮ್ಮನೆ ಮಾಡಿಟ್ಟ ಖಾದ್ಯವ ಮುಚ್ಚಿಟ್ಟು
ಮೆಣಸು ಜೀರಿಗೆ ಸಾರು ಮಾಡುಣಿಸಿದಳು
ಮತ್ತೊಂದು ದಿನ ಇವರು ಹಾಡು
ಹಾಡೆಂದು ಕಾಡಿದಾಗ ಒತ್ತರಿಸಿ ಬಂದ
‘ನಾನು ಬಳ್ಳಿಯ ಮಿಂಚ’
ಕತ್ತಲ್ಲೆ ಕತ್ತರಿಸಿ
‘ರಾಮ ಮಂತ್ರವ..’ ಹಾಡಿ ಮುಗಿಸಿದಳು
ಕೊನೆಗೊಂದು ದಿನ
ಸೋನೆ ಮಳೆ ಸಂಜೆ.. ಬಿಸಿಬಿಸಿ ಚಳಿ
ಕೋಣೆ ಬಾಗಿಲು ಜಡಿದು, ತೆರೆದಿಟ್ಟು ಕಿಟಕಿ
ಸಿಪ್ಪು ಸಿಪ್ಪಾಗಿ ಬಿಯರು ಚಪ್ಪರಿಸುವಾಗ
ಈಗಿಂದೀಗಲೆ ನಿಂತೇಹೋದರೆ ಉಸಿರು
ಏನೆಂದುಕೊಳ್ಳುವರೊ ಜನರು
ಎಂದೆಣಿಸಿ.. ಎಣಿಸಿ..
ಧಡಕ್ಕನೆದ್ದು ಬಾಗಿಲು ತೆರೆದಿಟ್ಟು
‘ಜ಼ಿಂದಗಿ ಭರ್ ಭೂಲೇಂಗಿ ನಹಿ..’
ಎಂದು ದೊಡ್ಡಕೆ ಹಾಡತೊಡಗಿದಳು.
೨. ಸೊಪ್ಪಿನವಳು
ನಟ್ಟ ನಡು ಹಗಲು
ಹೊತ್ತು ಮಾರುವ ಸೊಪ್ಪಿನವಳು
ಎದೆಯ ನೋವೆಲ್ಲ ಗಂಟಲಿಗೆ ಬಂದಂತೆ
ಕೂಗೇ ಕೂಗುವಳು ‘ಸೊಪ್ಪಮ್ಮೋ ಸೊಪ್ಪು…’
ಶಬ್ದಗಳ ನಡುವೊಂದು ನಿಶ್ಯಬ್ದ
ಮತ್ತೆ ಒತ್ತರಿಸಿ ಬರುವ ಕೂಗು
‘ಸೊಪ್ಪಮ್ಮೋ.. ಸೊಪ್ಪು….’
ನನ್ನೇ ಕರೆದಂತಾಗಿ ಹೊರಬಂದು ನೋಡಿದೆ
ಬೆವರಿದ ಮೈ, ಕೆದರಿದ ಕೂದಲು
ಹಣೆಯ ಮೇಲೊಂದು ಹಸಿ ಗಾಯ
ಕೈಕೊಟ್ಟು ಬುಟ್ಟಿ ಇಳಿಸುವಾಗ
ಕೇಳಿದ್ದು ಬಳೆಯ ಒಡಕು ನಾದ
ಅಂಗಳದ ನೆರಳಲ್ಲಿ
ಅರೆ ಗಳಿಗೆ ಕುಳಿತು
ತಂಬಿಗೆಯಷ್ಟೂ ನೀರ ಕುಡಿದು
ಸೊಂಟದ ಸಂಚಿ ಬಿಡಿಸಿ
ಕಟುಮ್ಮನೆ ಅಡಿಕೆ ಜಗಿದು
ಸೊರಗಿ ಸೊಪ್ಪಾದ ಎಲೆಗೆ
ಸುಣ್ಣ ಸವರಿ ಮೆಲ್ಲುತ್ತಿದ್ದವಳ
‘ಏನದು ಗಾಯ’ ಕೇಳಿದ್ದಕ್ಕೆ
ಕೆಂಪು ತುಟಿಯರಳಿಸಿ
ಸುಮ್ಮನೆ ನಕ್ಕು
ಸೊಪ್ಪಿನ ಕಟ್ಟು ಮಡಿಲಲಿಟ್ಟು
ಕೊಟ್ಟ ಕಾಸು ಪಡೆದು
ಪ್ರಶ್ನೆಗಳ ಉಳಿಸಿ ಹಾಗೆಯೇ
ನಡೆದೇ ಬಿಟ್ಟಳು ಬುಟ್ಟಿ ಹೊತ್ತು
ಪೆಚ್ಚಾಗಿ ನಿಂತವಳು ಎಚ್ಚರಾಗಿ
ಒಳಗೆ ಬಂದು ಬಾಗಿಲು ಹಾಕಿದರೆ
ಅವಳ ನಗೆಯ ಘಮಲು ಹೊದ್ದ ಸೊಪ್ಪಿಗೆ
ದಟ್ಟ ನೋವಿನ ವಾಸನೆ.
೩. ಪುಟ್ಟಕ್ಕನ ಓಲೆ
ಅಕ್ಕಾ..ಈ ಓಲೆ ನೋಡಿ..
ಸೇಟೂ ಅಂಗಡಿಯಲ್ಲಿ
ಚೀಟಿ ಹಾಕಿ ಕೊಂಡೆ, ಎಂದು
ಮುಖ ಓರೆ ಮಾಡಿದಾಗ, ನಾನು
ಓ..ಎಷ್ಟು ಚಂದ..ಎಂದದ್ದು
ಹೊಳೆಯುವ ಅವಳ ಕಣ್ಣನ್ನು
ಎಂದವಳಿಗೆ ತಿಳಿಯಲಿಲ್ಲ.
ಬಿಟ್ಟು ಹೋದ ಗಂಡನ ಬಗ್ಗೆ
ಕೆಟ್ಟ ಮಾತಾಡದೆ
ಹುಟ್ಟಿದೆರಡು ಮಕ್ಕಳಿಗಾಗಿ
ಎಂಟು ಮನೆ ಕೆಲಸಮಾಡಿ
ಕೊಟ್ಟ ತಿನಿಸ ಕಟ್ಟಿಕೊಂಡು
ಮುಚ್ಚಟೆಯಾಗಿ ಬದುಕುವ
ಮೂವತ್ತರ ಕಪ್ಪು ಚೆಲುವೆ
ಪುಟ್ಟಕ್ಕನೆಂಬೋ ಈ ವಿಶ್ವ ಸುಂದರಿ
ನನಗೊಂದು ಅಚ್ಚರಿ.
ಮಾರನೆ ದಿನವೇ ಖಾಲಿ ಕಿವಿ..
ಕಂಡು ತಳಮಳಿಸಿ ಕೇಳಿದರೆ
ಮುಚ್ಚಿಟ್ಟಿದ್ದೀನಿ ಪೆಟ್ಟಿಗೆಯಲ್ಲಿ
ಮಗಳ ಮದುವೆಗೆ ಎಂದವಳ
ಕಣ್ಣಲ್ಲಿ ಮತ್ತದೇ ಹೊಳಪು.
೪. ಅಡುಗೆಮನೆ ಜಗತ್ತು
ಕಬ್ಬಿಣದ ತವದ ಮೇಲೆರೆದ
ದೋಸೆಯ ರುಚಿ ಮತ್ತು ಗರಿ
ನಾನ್ ಸ್ಟಿಕ್ ತವದ ದೋಸೆಗೆ ಬಂದೀತು ಹೇಗೆ?
ಅಂಟಿಸಿಕೊಳ್ಳದ್ದು ಆಪ್ತವಾದೀತು ಹೇಗೆ?
ಉಪ್ಪಿನಕಾಯಿ ಜಾಡಿಗೆ ತುಂಬಿಸಿ
ಮುಚ್ವಿಟ್ಟರೆ ಮುಗಿಯಲಿಲ್ಲ
ಆಗಾಗ್ಗೆ ಕೈಯಾಡಿಸಬೇಕು ತೆಗೆದು
ಕೆಡದಂತಿರಿಸಿಕೊಳ್ಳಲು.
ಅಡುಗೆಮನೆ ಕೈಒರೆಸು
ಅನಿವಾರ್ಯವಾದರೂ
ಮನೆಯವರಿಗೆ ಸಸಾರ
ಕೆಲಕೆಲವು ಜನರ ಹಾಗೆ.
ಬೇಕಾದ್ದು, ಬೇಡದ್ದು ತುಂಬಿ
ಮುಚ್ಚಿಬಿಡುವ ಕಪಾಟಿನಡುಗೆಮನೆಗಿಂತಾ
ಇಟ್ಟಿದ್ದು, ಕೆಟ್ಟದ್ದು ಕಾಣುವ ಅಡುಗೆಮನೆಯಾದರೆ
ಆಗಾಗ ಶುಚಿಗೊಳಿಸಿಕೊಂಡೇವು.
ತರಕಾರಿ ಸಹಜ ಬಣ್ಣ ಉಳಿಸಿಕೊಳ್ಳಲು
ಬೇಯುವಾಗಿಷ್ಟು ಉಪ್ಪು ಉದುರಿಸಿದರಾಯ್ತು
ಮನುಷ್ಯರ ನಿಜಬಣ್ಣ ತಿಳಿಯಲು
ಉಪಾಯವೇನಾದರೂ ಇದ್ದಿದ್ದರೆ…
ಮೊಂಡಾದ ಚಾಕು, ಈಳಿಗೆಗೆ
ಸಾಣೆ ಹಿಡಿಯಬೇಕು ಆಗಾಗ್ಗೆ
ಮೊನಚು ಕಳಕೊಂಡ ಸಂಬಂಧಗಳಿಗೂ ಹಾಗೇ…
ಕೊನೆ ಗುಟುಕಿನವರೆಗೂ ಬಿಸಿ
ಆರದಹಾಗೆ ಕಾಫಿ ಬೆರೆಸುವುದೂ
ಕೊನೆವರೆಗೂ ಬಿಸುಪು ಕಾಯ್ದುಕೊಂಡು
ಬದುಕುವುದೂ ಎಲ್ಲರಿಗೂ ಸಿದ್ಧಿಸುವುದಲ್ಲ.
ಸಿಟ್ಟು, ಅಸಹನೆ, ಅತೃಪ್ತಿ ಎಲ್ಲವನ್ನೂ
ಹಿಟ್ಟಿನೊಂದಿಗೆ ಮಿದ್ದು ಮಿದ್ದು
ಲಟ್ಟಿಸಿ ಬೇಯಿಸಿದ ಚಪಾತಿ
ತಿನ್ನಲು ಬಲು ಮೃದು, ಮಧುರ.
ಜ಼ೊರೋ ಎಂದು ನಲ್ಲಿ ತಿರುಗಿಸಿ
ಇನ್ನೆರಡು ತೊಳೆದರೆ ಮುಗಿಯಿತು
ಎನ್ನುವಷ್ಟರಲ್ಲೇ ನಿಂತ ನೀರು!
ಇದ್ದಾಗ ತಿಳಿಯದ ಬೆಲೆ, ಹೋದಾಗ ಹಳಹಳಿಕೆ.
*****************************
ತರೀಕೆರೆ ಮೂಲದವರಾದ ಡಿ.ಎಸ್.ರಾಮಸ್ವಾಮಿಯವರು ಜೀವವಿಮಾ ನಿಗಮದ ಅಧಿಕಾರಿಯಾಗಿ ಅರಸೀಕೆರೆಯಲ್ಲಿ ನೆಲೆಸಿದ್ದಾರೆ.ಇವರ ‘ಉಳಿದ ಪ್ರತಿಮೆಗಳು’ ಕವನಸಂಕಲನಕ್ಕೆಮುದ್ದಣ ಕಾವ್ಯ ಪ್ರಶಸ್ತಿದೊರೆತಿದೆ
ಚಂದದ ಬರಹ…. ಉಮಾ ಮೇಡಂ ರವರ ಆಯ್ದ ಕವಿತೆಗಳಲ್ಲಿ ವಿಭಿನ್ನತೆ ವಿಶಿಷ್ಟತೆ ಇದೆ… ಮೌಲ್ಯಾಧಾರಿತ ಬರಹ.. ಉಮಾ ಮೇಡಂ ರವರ ಚಿಂತನೆ..ಇನ್ನೂ ಎತ್ತರದ ಸಾಧನೆ ಆಗಲಿ…
ತುಂಬ ಚಂದಗೆ ಬರೆದಿರಿ ಸರ್..ಸರಳವಾಗಿಯೇ ಸತ್ವವನ್ನು ಹಂಚಬಲ್ಲ ಉಮಾ ಮುಕುಂದರ ‘ಕಡೇ ನಾಲ್ಕು ಸಾಲು’…ಕಾಡುವ ಪದ್ಯಗಳನ್ನು ಒಳಗೊಂಡಿದೆ.
ಉಮಾ ಮುಕುಂದ ರ ದೈನಿಕ ಎನ್ನಬಹುದಾದ ಕಾವ್ಯದಲ್ಲಿ ಇರುವ ಅನ್ಯಾನ್ಯ ಹೊಳಹುಗಳ ಅನಾವರಣ ಈ ಟಿಪ್ಪಣಿಗಳ ಮೂಲಕ ಸಂಭವಿಸಿದೆ.ಏಕಕಾಲದಲ್ಲಿ ವ್ಯಕ್ತಿ ಮತ್ತು ಸಮಾಜ ಗಳನ್ನು ಅವರ ಕವಿತೆ ಗಳು ಒಳಗೊಂಡಿರುವ ಬಗಗೆ ದಿಕ್ಸೂಚಿಯಾಗಿದೆ. ಇಬ್ಬರಿಗೂ ಅಭಿನಂದನೆ.