“ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು

“ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು

ಫೇಸ್ಬುಕ್ಕಿನ ತುಂಬ ಹರಡುವ ಪದ್ಯದ ಘಮಲಿಗೆ ತಮ್ಮ ದನಿಯನ್ನೂ ಸೇರಿಸಲು ಹಾತೊರೆಯುತ್ತಿರುವ ಅಸಂಖ್ಯ ಕವಿ ಮನಸ್ಸುಗಳ ನಡುವೆ ಕೊಟ್ರೇಶ್ ತಂಬ್ರಳ್ಳಿ ಅಮರಗೋಳಮಠ ಅವರದು ಗಮನಿಸಲೇಬೇಕಾದ ಹೆಸರು. ಸ್ವಲ್ಪ ಹದವೆನ್ನಿಸುವ ಯಾರದೇ ಕವಿತೆಗಳಿಗೆ ತಕ್ಷಣದ ಪ್ರತಿಕ್ರಿಯೆ ನೀಡುವ ಕೊಟ್ರೇಶ್ ಆಗೀಗ ತಮ್ಮ ರಚನೆಗಳನ್ನೂ ಈ ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟು ಪ್ರತಿಕ್ರಿಯೆಗೆ ಕಾಯುತ್ತಾರೆ. ನಿಜಕ್ಕೂ ಚಂದ ಇರುವ ಅವರ ನಿಜದ ರಚನೆಗಳಿಗಿಂತ ತಕ್ಷಣಕ್ಕೆ ಕೋಪ ತರಿಸುವ, ಸ್ವಲ್ಪ ಒರಟೇ ಎನ್ನಿಸುವ ಅವರ ಪ್ರತಿಕ್ರಿಯೆ ಹೆಚ್ಚು ಸ್ಪೇಸ್ ಪಡೆಯುವದನ್ನು ಗಮನಿಸುತ್ತಲೇ ಇದ್ದೇನೆ. ಮೂಲತಃ ಲಂಕೇಶರ ಅಪ್ಪಟ ಅನುಯಾಯಿಯಾದ ಅವರು ಮಾತು ಮಾತಿಗೆ ಲಂಕೇಶರನ್ನು ಅವರು ಈಗ ಇದ್ದಿದ್ದರೆ ಹೇಗೆ ಪ್ರತಿಕ್ರಯಿಸುತ್ತಿದ್ದರು ಎಂದೆಲ್ಲ ಹೇಳುವಾಗ ಹೆಚ್ಚು ವಿದ್ಯಾಭ್ಯಾಸ ಮಾಡದೆಯೂ ಸಾಹಿತ್ಯದ ನಮ್ರ ವಿದ್ಯಾರ್ಥಿಯಾದ ಅವರ ಬಗ್ಗೆ ಹೆಮ್ಮೆ ಮತ್ತು ಪ್ರೀತಿ ಹುಟ್ಟುತ್ತದೆ.

ನಿಜಕ್ಕೂ ಕವಿತೆ ಎಂದರೇನು? ಇದು ಯಾವತ್ತಿಗೂ ಸ್ಪಷ್ಟ ಉತ್ತರ ಸಿಕ್ಕದ ಮತ್ತು ನಿಯಮಿತ ಡೆಫಿನಿಶನ್ ಮೀರಿದ ಸಾರ್ಥಕ ಸಾಲುಗಳು ಎನ್ನುವುದೇ ನನ್ನ ನಮ್ರ ಉತ್ತರ. ಏಕೆಂದರೆ ಕವಿತೆಯನ್ನೂ ಮತ್ತು ಕವಿತೆ ಕಟ್ಟಿ ಕೊಡುವ ಹಿತವನ್ನೂ ಬರೆದ ಕವಿಗಿಂತಲೂ ಆ ಕವಿತೆಯನ್ನು ಓದಿದ ಓದುಗ ಅನುಭವಿಸಬೇಕು. ಕವಿ ತನ್ನ ಕವಿತೆಯಲ್ಲಿ ಹೇಳ ಹೊರಟ ಸಂಗತಿಗಿಂತಲೂ ಮುಖ್ಯವಾದದ್ದು ಓದುಗನಿಗೆ ಹೊಳೆಯಬೇಕು ಮತ್ತು ಆ ಅನ್ನಿಸಿಕೆಯೇ ಆ ಕವಿಯನ್ನೂ ಆ ಕವಿತೆಯನ್ನೂ ಸಾಹಿತ್ಯ ಚರಿತ್ರೆಯ ಮುಂದಣ ಪಯಣದ ಹೆಜ್ಜೆಯಾಗಿ ಕಾಣಬೇಕು. ಆದರೆ ಇವತ್ತು ಧಂಡಿ ಧಂಡಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿರುವ     ಕವಿತೆಗಳ ರೂಪದಲ್ಲಿರುವ ಗದ್ಯದ ಸಾಲುಗಳು ಆ ಅಂಥ ನಿಕಷಕ್ಕೆ ಒಳಗೊಳ್ಳುತ್ತಿವೆಯೇ? ಓದುಗ ಅವನ್ನು ಸೀರಿಯಸ್ ಆಗಿ ಓದಿದ್ದಾನೆಯೇ? ಎಂದು ಪರಿಶೀಲಿಸ ಹೋದರೆ ನಿರಾಸೆ ಕಾಡುತ್ತದೆ. ಏಕೆಂದರೆ ಸ್ವಂತಿಯ ಪಟಗಳಲ್ಲಿ, ಅನಿಷ್ಟದ ರಾಜಕೀಯ ನಿಲುವುಗಳಲ್ಲಿ, ಎಡಬಲದ ಹೊಯ್ ಕೈಗಳಲ್ಲಿ ನಿಜಕ್ಕೂ ನಿಲ್ಲಬಲ್ಲ ಕವಿತೆಗಳು ಕೇವಲ ಲೈಕುಗಳಲ್ಲಿ ಹೆಚ್ಚೆಂದರೆ ನಗುವ/ ಅಳುವ/ ಲವ್ ಸಿಂಬಲಿನ ಈಮೋಜಿಗಳಲ್ಲೇ ತಮ್ಮ ಆಯಸ್ಸು ಮುಗಿಸುತ್ತಿವೆ. ಅಲ್ಲದೇ ದಿನಕ್ಕೆ/ಗಂಟೆಗೆ ಹೊಳೆದ ಸಾಲನ್ನೇ ಕವಿತೆಯೆಂದು ತೇಲಿಬಿಡುವ ಉಮೇದಿನಲ್ಲಿ ಆ ಸಾಲುಗಳು ಪಕ್ವವಾಗಿ ಹದಗೊಂಡು ಸುಖ ಪ್ರಸವ ಕಾಣದೇ ಸಮಯ ನೋಡಿಕೊಂಡು ಹೆರಿಗೆ ಮಾಡಿಸಿದ ಸಿಸೇರಿಯನ್ ಶಿಶುಗಳಂತೆ ಕಾಣುವ ಪ್ರಮೇಯಗಳೇ ಹೆಚ್ಚು.

ಕವಿಯಾದವನು ಸಾಹಿತ್ಯ ಚರಿತ್ರೆಯನ್ನು ಅರಿತಿರಬೇಕು, ಪೂರ್ವ ಸೂರಿಗಳನ್ನು ಓದಿರಲೇಬೇಕು, ಕವಿತೆಯ ರಚನೆಗೆ ಸಾಹಿತ್ಯ ವಿಭಾಗೀಕರಣದ ಹಿನ್ನೆಲೆ ಮುನ್ನೆಲೆ ಗೊತ್ತಿರಬೇಕು,ಸಾಹಿತ್ಯ ಕೃಷಿಯಲ್ಲಿ ಈಗಾಗಲೇ ತೊಡಗಿ ಕೊಂಡವರ ನಡುವೆ ಗುರ್ತಿಸಿಕೊಂಡಿರಬೇಕು …..

ಇತ್ಯಾದಿ ಇತ್ಯಾದಿಗಳೆ ಮಾನದಂಡಗಳಾದರೆ, ಪಾಪ ಕೊಟ್ರೇಶ್ ಯಾವತ್ತಿಗೂ ಕವಿ ಎನ್ನಿಸಿಕೊಳ್ಳಲಾರರು. ತಮ್ಮ ಬದುಕಿಗೆ ಸಣ್ಣದೊಂದು ಹೋಟೆಲ್ ನಡೆಸುತ್ತಿರುವ ಅವರ ಸಾಹಿತ್ಯದ ಪ್ರೀತಿ ಮತ್ತು ಪುಸ್ತಕದ ಹುಚ್ಚು ಎಂಥೆಂಥ ಶ್ರೀಮಂತರಲ್ಲೂ ವಿದ್ಯಾವಂತರಲ್ಲೂ ಇರದುದು ನನಗೆ ಗೊತ್ತಿರುವ ಅಪ್ಪಟ ಸತ್ಯ. ಆಗೀಗ ನನ್ನಂಥವರ  ಬಲವಂತಕ್ಕೆ ಕನ್ನಡದ ಪೂರ್ವ ಸೂರಿಗಳನ್ನು ಓದುವ ಸಂಕಲ್ಪ ಮಾಡುತ್ತಾರಾದರೂ ಅವರ ನಿತ್ಯದ ಜಂಜಡದಲ್ಲಿ ಅದು ಸಾಧ್ಯವಿಲ್ಲದ ಸಂಗತಿ. ಆದರೂ ಅವರ ಛಲ ಮತ್ತು ತಿಳಿಯಲೇ ಬೇಕೆನ್ನುವ ಉಮೇದು ಅವರು ನಿತ್ಯ ಸ್ತುತಿಸುವ ಲಂಕೇಶರ ಓದಿನಿಂದ ಅವರು ಪಡೆದಿದ್ದಾರೆ. ಲಂಕೇಶ್ ಯೂನಿವರ್ಸಿಟಿ ಸೃಷ್ಟಿಸಿದ ಅಸಂಖ್ಯಾತ ಪದವೀಧರರಲ್ಲಿ ಕೊಟ್ರೇಶ್ ರ್ಯಾಂಕ್ ಪಡೆದ ಮೇಧಾವಿ. ಜೊತೆಗೇ ಗೆಳೆಯ ಸ್ವಭಾವ ಕೋಳಗುಂದ ಅವರ ಜೊತೆಯಲ್ಲಿ ಬಿಡುವಾದಾಗಲೆಲ್ಲ “ಕುರಿತೋದದೆಯುಂ” ಎನ್ನುವ ಸಾಹಿತ್ಯ ಸಂಬಂಧೀ ಚಟುವಟಿಕೆ, ಕನ್ನಡದ ಪೂರ್ವ ಸೂರಿಗಳನ್ನೂ ಸಮಕಾಲೀನ ಕೃತಿಗಳ ಪರಾಮರ್ಶೆಯ ತರಗತಿಗಳನ್ನೂ ಆಯೋಜನೆ ಮಾಡುವ ಅವರ ಗುಣ ಗ್ರಾಹೀ ಚಿಂತನೆಯ ದ್ಯೋತಕ.

ಕೊಟ್ರೇಶರ ಕವಿತೆಗಳನ್ನು ಕುರಿತು ಹೇಳಬೇಕಾದ ಈ ಮಾತುಗಳಲ್ಲಿ ಅವರ ವೈಯುಕ್ತಿಕ ವಿವರ ಕುರಿತ ಪರಿಚಯದ ಮಾತುಗಳ ಅವಶ್ಯಕತೆ ಏಕೆಂದರೆ ಇವತ್ತು ಬರೆಯುತ್ತಿರುವ ಹಲವು ಖ್ಯಾತ ನಾಮರ ಹಿಂದೆ ಅವರ ವಿದ್ಯಾಭ್ಯಾಸ, ಅವರ ಕೆಲಸ, ಮಾಧ್ಯಮ ಮತ್ತು ಮಾಧ್ಯಮ ಮಿತ್ರರುಗಳ ಜೊತೆಗಿನ ಒಡನಾಟವೇ ಕವಿಯ ರಚನೆಗಳಿಗಿಂತ ಮುಖ್ಯವಾಗುತ್ತಿರುವ ಕಾಲ ಘಟ್ಟದಲ್ಲಿ ಈ ಯಾವುದರ ಸಂಪರ್ಕವೂ ಸಾಧ್ಯತೆಗಳೂ ಇಲ್ಲದ ನಿರ್ವಾತದಲ್ಲಿ ತನಗನಿಸಿದ್ದನ್ನು ನಿರ್ಭಿಡೆಯಿಂದ ಬರೆಯುವ ಕೊಟ್ರೇಶ್ ಮುಖ್ಯರಾಗುತ್ತಾರೆ.

ಇಲ್ಲಿನ ಪದ್ಯಗಳಿಗೂ ಫೇಸ್ಬುಕ್ ಎಂಬ ಸಾಮಾಜಿಕ ಜಾಲತಾಣ ಜಾಗ ಕೊಟ್ಟು ಸಲಹಿದೆ. ಆದರೆ ಸಾಮಾನ್ಯವಾಗಿ ಫೇಸ್ಬುಕ್ ಸಲಹುತ್ತಿರುವ ಲೈಕುಗಳಿಂದಲೂ ಮತ್ತು ಓದುವ ಮೊದಲೇ ಒತ್ತಿಬಿಡುವ ಇಮೋಜಿಯ ಸಿದ್ಧ ಚಿತ್ರಗಳಿಂದಲೂ ಈ ಪದ್ಯಗಳು ಪಾರಾಗಿವೆ. ಅಂದರೆ ಬಲವಂತ ಬಸಿರು ಮತ್ತು ಅನಿವಾರ್ಯ ಹೆರಿಗೆಗಳಿಂದ ಈ ಪದ್ಯಗಳು ಬಚಾವಾಗಿವೆ. ಸಹಜತೆ ಮತ್ತು ಕವಿಸಮಯ ಇಲ್ಲಿನ ಬಹುತೇಕ ಕವಿತೆಗಳ ಹಿಂದೆ ಇರುವುದು ಶೃತವಾಗುವ ಅಂಶ. ಅದಕ್ಕಾಗಿ ಕೊಟ್ರೇಶ್ ಅವರನ್ನು ಅಭಿನಂದಿಸುತ್ತೇನೆ. ಬಹುತೇಕ ಪದ್ಯಗಳ ಮೊದಲ ಸಾಲು ಅಥವ ಶೀರ್ಷಿಕೆಗಳು ಈ ಕವಿಯ ವಿಸ್ತಾರವಲ್ಲದಿದ್ದರೂ ಮೇಲ್ನೋಟದ ಪೂರ್ವ ಸೂರಿಗಳ ಓದನ್ನು ದಾಖಲಿಸಿವೆ. ಯಾರನ್ನೂ ಓದದೆ ತಮಗೆ ತೋಚಿದ್ದೇ ಪ್ರಪಂಚ ಅನ್ನುವವರ ನಡುವೆ ಈ ಕವಿ ಭರವಸೆ ಹುಟ್ಟಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಕವಿತೆಗಳಲ್ಲಿ ದೌರ್ಬಲ್ಯ ಇಲ್ಲವೇ ಇಲ್ಲ ಎಂದು ಅರ್ಥವಲ್ಲ. ಭವಸಾರ ಅನ್ನುವ ಪದ್ಯ ಹೀಗೆ ಮೊದಲಾಗುತ್ತೆ.

” ನಕ್ಷತ್ರಗಳ ಮೋಹದಲ್ಲಿ

ಹಗಲನ್ನು ಮರೆತು ಬಿಟ್ಟೆ..”

ಆರಂಭವೇನೋ ಕುತೂಹಲ ಹುಟ್ಟಿಸುತ್ತದೆ, ನಿಜ. ಆದರೆ ಅದನ್ನು ಪದ್ಯದುದ್ದಕ್ಕೂ ವಿಸ್ತರಿಸುವುದರಲ್ಲಿ ಏನ್ನೆಲ್ಲ ಪುರಾಣ ಇತಿಹಾಸದ ಪ್ರತಿಮೆಗಳ ಮೆರವಣಿಗೆ ಇದ್ದೂ ಒಂದರ್ಥದಲ್ಲಿ ಬದುಕಿನ ಮಿತಿಯನ್ನು ಇದು ಹೇಳುತ್ತಿದ್ದರೂ ಒಟ್ಟೂ ರಚನೆ ಸಮಗ್ರೀಕರಣದ ಹಂತದಲ್ಲಿ ಇನ್ನೂ ಪಕ್ವವಾಗಬೇಕೆನ್ನಿಸುತ್ತದೆ.

“ಹಣತೆ ಮತ್ತು ನನ್ನ ದಾರಿ” ಎನ್ನುವ ಕವಿತೆ ಮೇಲ್ನೋಟಕ್ಕೆ ಜಿ.ಎಸ್.ಎಸ್ ಅವರ ಬಹು ಚರ್ಚಿತ ಹಣತೆ ಹಚ್ಚುತ್ತೇನೆ ನಾನು…ಕವಿತೆಯ ನೆರಳಲ್ಲಿ ನಡೆದರೂ ಕವಿ ತನ್ನ ಮೇಲೆ ತಾನೇ ಇಟ್ಟುಕೊಂಡಿರುವ ಭರವಸೆಯ ಬೆಳಕು.

” ಮಗಳು ಮತ್ತು ಮಳೆ” ಆಕಾರದಲ್ಲಿ ಸಣ್ಣದಿದ್ದರೂ ಆಶಯದಲ್ಲಿ ದೊಡ್ಡದು. ಮಳೆಯ ಮುದದಿಂದ ಪ್ರೇರಿತ ಕವಿ ಕವಿತೆಯ ಹುನ್ನಾರದಲ್ಲಿ ಇರುವಾಗ ಕವಿಯ ಮಗಳು ಅವನ ತೊಡೆಯೇರಿ ಕೂರುತ್ತಾಳೆ.

“ಬರೆಯುವ ಹಾಳೆ ಬೋರಲಾಯಿತು

ಆದರೆ ಕವಿತೆಗೆ ಮಳೆಯಂತಹ

ಜೀವ ತಂದಳು” ಎಂದು ಮುಕ್ತಾಯವಾಗುವ ಈ ರಚನೆ ನನಗೆ ತುಂಬ ಇಷ್ಟವಾಯಿತು.

ಆದರೆ ಇಂಥದೇ ನಿರೀಕ್ಷೆಯಲ್ಲೇ “ಮಳೆಯ ಮಾರನೆ ದಿನ” ಶೀರ್ಷಿಕೆಯ ಪದ್ಯವನ್ನು ಸೀರಿಯಸ್ ಆಗಿ ಓದಿದರೆ ತಲೆ ಬರಹದಿಂದ ಆಕರ್ಷಿಸಿದರೂ ಸುಮ್ಮ ಸುಮ್ಮನೇ ತುರುಕಿದ ಪ್ರತಿಮೆಗಳ ಭಾರದಲ್ಲಿ ಕುಸಿದಿದೆ.

“ಕೂಡಲ ಸಂಗಮದಲ್ಲಿ

ಕೃಷ್ಣ ಮಲಪ್ರಭೆಯರು

ಹರಿಯುತ್ತಿಲ್ಲ ಅಳುತ್ತಿದ್ದಾರೆ”

ಎಂದು ಆರಂಭವಾಗುವ “ಅಣ್ಣಾ” ಎನ್ನುವ ರಚನೆ ಮೇಲ್ನೋಟಕ್ಕೆ ಹೊಸ ಆಶಯ ಮತ್ತು ಬಂಡಾಯದ ಚಿಂತನೆಯ ಹೊಳಹು ಅನ್ನಿಸುತ್ತದೆಯಾದರೂ ಒಟ್ಟೂ ಕವಿತೆ ಇನ್ನೂ ಮಾಗಿಸಿದ್ದಿದ್ದರೆ……ಅನ್ನಿಸುವುದು ಸತ್ಯ.

ಸುಮ್ಮನೇ ಮೂಡಿಸಿದ ಆದರೆ ಬೇಕೆಂತಲೇ ತಂದು ಹೇರಿದ ಸಂಗತಿಗಳ “ರಾತ್ರಿ ಮೂರರ ಮಳೆ” ಟ್ಯಾಬ್ಲಾಯಿಡ್ ಪತ್ರಿಕೆಗಳು ಪ್ರಕಟಿಸುವ ಕಾವ್ಯ ಎಂದು ಅವು ಬಿಂಬಿಸುವ ಲಕ್ಷಣವುಳ್ಳ ರಚನೆ.

ಕೃಷ್ಣನನ್ನು ನೆಪವಾಗಿಸಿಕೊಂಡು ರಾಧೆಯ ಅಳಲೆಂದು ಬಿಂಬಿಸಿದ ರಚನೆಗಳ ನಡುವೆ ಈ ಕವಿಯ “ಪ್ರಿಯೇ” ಎನ್ನುವ ಕವಿತೆ ಕುತೂಹಲ ಹುಟ್ಟಿಸುತ್ತದೆ. ನೀಲಾಕಾಶದ ಸಾಕ್ಷಿಯಲ್ಲಿ ಕೃಷ್ಣನ ಮುಗಿಯದ ಪ್ರೇಮದ ಪುಟಗಳಲ್ಲಿ ಒಂದಾಗೋಣ ಅನ್ನುವ ಕವಿಯ ನಿಲುವು ಒಪ್ಪಿತವೇ!

ಅಯ್ಯಪ್ಪನ ದೇಗುಲಕ್ಕೆ ಹೆಣ್ಣು ಮಕ್ಕಳ ಪ್ರವೇಶ ನಿರಾಕರಣೆಯನ್ನು ಬಲವಾಗಿ ವಿರೋಧಿಸುವ ಶಕ್ತಿ          ” ಇರುಮುಡಿಯ ಸಹಜತೆ” ಕವಿತೆಯದು. ಆದರೆ ಬರಿಯ ಘೋಷಣೆ ಕವಿತೆಯಾಗದು ಎನ್ನುವ ಲೋಕೋತ್ತರದ ವಿಮರ್ಶೆ ಕೂಡ ಈ ರಚನೆಯ ಸಮಗ್ರತೆಯ ದೃಷ್ಟಿಯಿಂದ ಪರಿಶೀಲಿಸಿದರೆ ಉಳಿಯುವುದು ಮತ್ತದೇ ಗಿರಿಗೆ ಕೇಳಿಸದ ನರಿಯ ಕೂಗು.

“ನೀಲಿ” ಶೀರ್ಷಿಕೆಯ ಪದ್ಯ ಕೃಷ್ಣನನ್ನು ಕುರಿತ ಚಿಂತನೆಯ ಜೊತೆಜೊತೆಗೇ ಕವಿ ಸ್ವಂತದ ಬದುಕಿನ ರಿಂಗಣಗಳನ್ನು ತುಲನೆ ಮಾಡಿಕೊಳ್ಳುತ್ತಲೇ ಮತ್ತೊಂದು ಹೊರಳಿಗೆ ತಯಾರಾಗುವ ಪರಿ ಆಕರ್ಷಣೀಯ.

“ರಂಗ” ಎನ್ನುವ ಕವಿತೆಯಲ್ಲಿ ಕವಿ ಧ್ಯಾನಿಸುವುದು ದೇವರನ್ನೋ ಅವನ ಅಸ್ತಿತ್ವವನ್ನೋ ಅಥವ ಬದುಕಿನ ರಂಗ ಸ್ಥಳದ ಪರಿಕರವಾಗಿಯೇ ಬಳಸಲಾಗುವ ದೇವರ ಅಥವ ಸೃಷ್ಟಿಯ ಮಾಯಾ ಲೋಕವನ್ನೋ? ಅದು ಆ ಕ್ಷಣ ಓದುಗನಿಗೆ ನಿಲುಕುವ ಬೌದ್ಧಿಕತೆಯ ಮಟ್ಟದ್ದು. ನಿಜಕ್ಕೂ ಇಂಥ ರಚನೆಗಳೇ ಕಡಿಮೆಯಾಗುತ್ತಿರುವ ಹೊತ್ತಲ್ಲಿ ಈ ಕವಿಯ ಈ ರಚನೆ ನನಗಂತೂ ಹೆಚ್ಚು ಆಪ್ತವಾಗಿಸಿದ ಕವಿತೆಗಳಲ್ಲೊಂದು.

ಮುಂದುವರೆದ ಕವಿ “ಓಂಕಾರ” ಪದ್ಯದಲ್ಲಿ ಹೇಳ ಹೊರಟದ್ದು ಏನು ಅನ್ನುವುದಕ್ಕೆ ಪದ್ಯದ ಕಡೆಯ ಸಾಲು “ಓಂಕಾರ…. ಓಂಕಾರ/ ಶ್ರೀಕಾರಕೆ ಜಯಕಾರ” ಓದಿದರೆ ಅವರ ನಿಲುವು ಸ್ಪಷ್ಟವಾಗುತ್ತದೆ.

“ಹತ್ತನೇ ಕ್ಲಾಸಿನ ಹುಡುಗ” ವರ್ತಮಾನದ ವಿದ್ಯಾಭ್ಯಾಸ ಕ್ರಮವನ್ನು ಲೇವಡಿ ಮಾಡುತ್ತಿದ್ದರೂ ಅದಕ್ಕೆ ಪರ್ಯಾಯ ವ್ಯವಸ್ಥೆಯೇ ಇಲ್ಲದ ಕಾಲದಲ್ಲಿ ಬರಿಯ ಹೇಳಿಕೆಯೇ ಆಗಿ ಉಳಿಯುವುದು ವಿಷಾದಕರ.

ಇವರ ಪದ್ಯಗಳಲ್ಲಿ ನನ್ನನ್ನು  ಹೆಚ್ಚು ಕಾಡಿದ್ದು ಮತ್ತು ನಿಜದ ಪದ್ಯದ ಗಂಧ ಪೂಸಿದ್ದು “ಹಕ್ಕಿ-ಹಿಕ್ಕೆ”. ಈ ಕವಿ ಉಪನಿಷತ್ತುಗಳನ್ನು ಓದಿದ್ದಾರೋ ಇಲ್ಲವೋ ಅರಿಯೆ. ಆದರೆ ಉಪನಿಷತ್ತುಗಳ ರೀತಿಯಲ್ಲಿ ಸಣ್ಣದೊಂದು ವಿಚಾರದ ಮೂಲಕ ಮಹತ್ತಾದುದನ್ನು ಕಾಣಿಸುವ ಪ್ರಯತ್ನ ಈ ಕವಿತೆಯಲ್ಲಿದೆ. ಅಲ್ಲಿರುವ ಯಾವುದೋ ಸಾಲನ್ನು ಇಲ್ಲಿ ಉದ್ಧರಿಸಿ ಭೇಷ್ ಅನ್ನುವುದಕ್ಕಿಂತ ಇಡೀ ಪದ್ಯವನ್ನು ಮತ್ತೊಮ್ಮೆ ಮಗದೊಮ್ಮೆ ಓದುವುದು ಸೂಕ್ತ ಎನ್ನಿಸುತ್ತದೆ. ಆದರೂ ಪದ್ಯದ ನಡುವೆ ಹೇಗೋ ನುಸುಳಿರುವ ” ಉಗಿ ಮುಖಕ್ಕೆ” ಅನ್ನುವ ಥರದ ಪ್ರಯೋಗಗಳು ಕಾವ್ಯ ರಚನೆಯ ಅಲಂಕೃತ ಕರ್ಮಕ್ಕೆ ಲಕ್ಷಣವೆನ್ನಿಸುವುದಿಲ್ಲ. ಅದೊಂದು ಸಾಲು ಇಲ್ಲದಿದ್ದರೂ ಕವಿತೆ ಬದುಕ ಭಂಗುರತೆಯ ಮುಖಕ್ಕೆ ಉಗಿಯುತ್ತದೆ!

 “ನಗ್ನ” ಪದ್ಯ ಕೂಡ ಈ ಕವಿಯು ಪ್ರಾಯಶಃ ನಿತ್ಯ ಅಲೋಚನೆಯ ಆವಿರ್ಭಾವ.

“ನಿನ್ನ ಧ್ಯಾನದ ಯೋಗದಲಿ

ನನ್ನಿರವನ್ನು ನಾನೇ ಮರೆ

ತು ಹಟ ಮುನಿಯಂತೆ ಇಲ್ಲಿ

ನಗ್ನನಾಗಿದ್ದೇನೆ” ಎಂದು ಆರಂಭವಾಗುವ ಕವಿತೆ,

“ತೀಡಿದಂತೆಲ್ಲ ಘಮ

ಘಮಿಸುವ ಗಂಧದ

ಕೊರಡು ನಾನು” ಅನ್ನುವ ಸ್ವ ವಿಮರ್ಶೆಗೆ ಒಡ್ಡಿಕೊಳ್ಳುತ್ತ

ಕಡೆಗೆ “ಇಲ್ಲಿ ನಿನ್ನದೇ ಗಂಧ, ಅಂದ

ಆನಂದ ಪ್ರೇಮಾನಂದವು

ನಿನ್ನ ಕಾಯುತ್ತ ಕುಳಿತಿದೆ” ಎಂದು ಕೊನೆಯಾಗುವಾಗ ಈ ಕವಿ ಇಷ್ಟೂ ಹೊತ್ತು ಧ್ಯಾನಿಸಿದ್ದು ಏನು? ಯಾಕಾಗಿ ಈ ಕನಲಿಕೆ ಎನ್ನುವುದರ ಸ್ಪಷ್ಟತೆ ದಕ್ಕುತ್ತದೆ.

“ಪ್ರಾರ್ಥನೆ” ಹೆಸರಿನ ಈ ಕವಿಯ ಪದ್ಯಕ್ಕೂ ಅಡಿಗರ ಇದೇ ಹೆಸರಿನ ಬಹು ಖ್ಯಾತಿಯಾದ ಪದ್ಯಕ್ಕೂ ಹೆಸರಿನ ಕಾರಣದಿಂದ ಸಾಮ್ಯತೆ ಇದೆ. ಎರಡೂ ಪದ್ಯಗಳಲ್ಲಿ ಕವಿ ತನ್ನ ಮಿತಿಯನ್ನು ಹೇಳಿಕೊಳ್ಳುತ್ತಲೇ ಮಹತ್ತಾದುದನ್ನು ದಕ್ಕಿಸಿಕೊಳ್ಳುವ ಆರ್ತತೆಯನ್ನು ಯಶಸ್ವಿಯಾಗಿ ಹೇಳಿವೆ ಅನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೂ ಈ ಕವಿ ನಮ್ಮ ಪೂರ್ವ ಸೂರಿಗಳನ್ನು ಮತ್ತೆ ಮತ್ತೆ ಅಭ್ಯಾಸ ಮಾಡಿದರೆ ಇನ್ನೂ ನಿಕಷಕ್ಕೆ ಒಡ್ಡಿ

ಕೊಳ್ಳಬಹುದು ಅನ್ನುವುದು ಸಹಜ ಆಶಯ.

“ರಾತ್ರಿ ತುಂಬಾ ನೆನಪುಗಳು

ಬಣ್ಣ ಬಣ್ಣ ತುಂಬಿದ ಸಿನಿಮಾ

ಕಪ್ಪು ರಾತ್ರಿ, ಕೆಂಪು ಲೈಟು” (ಬಾರೆ ಕಟ್ಟು) ಪದ್ಯದಲ್ಲಿ ಇವರು ಧ್ಯಾನಿಸುವ ವಸ್ತು ವಿಶೇಷಗಳ, ವ್ಯಕ್ತಿ ಸಂಬಂಧಗಳ ತುಲನೆ ಬಹುತೇಕ ಇವರ ಇತರ ರಚನೆಗಳಲ್ಲೂ ಹಾಸು ಹೊಕ್ಕಾಗಿ ಬರುವ ಸಾಮಾನ್ಯ ಪರಿಕರಗಳು. ಸಾಮಾನ್ಯ ಸಂಗತಿಗಳ ಮೂಲಕವೇ ಅಸಾಮಾನ್ಯವಾದುದನ್ನು ಕಲ್ಪಿಸುವ ರಮಿಸುವ ಮತ್ತು ತನ್ನ ಆಲೋಚನಾ ಕ್ರಮದ ಮುನ್ನಡೆ. ಪ್ರಾಯಶಃ ಈ ಇದೇ ಕಾರಣಕ್ಕೇ ಇಂಥ ಅಸಾಮಾನ್ಯ ಚಿಂತನೆಯ ಮಾರ್ಗಕ್ಕೆ ಈ ಕವಿ ಹೆಚ್ಚು ಇಷ್ಟವಾಗುತ್ತಾರೆ. ಪ್ರಸ್ತುತ ಪದ್ಯ ಕೊನೆಯಾಗುವ ರೀತಿಯನ್ನು ಗಮನಿಸಿ;

“ದನ ಕಾಯುವ ಹುಡುಗನೊಬ್ಬ ದಿನವೂ

ಗೂಳಿ ಹತ್ತುವುದನ್ನು ನೋಡುತ್ತಾನೆ ಅಲ್ಲಿ;

ಅವನಿಗೆ ಅದು ಬದುಕು: ಮಿಕ್ಕಿದ್ದೆಲ್ಲಾ ತಲೆಹರಟೆ’.

ಪ್ರಾಯಶಃ ಕೊಟ್ರೇಶ್ ತಮ್ಮ ಕವಿತೆಗಳ ರೀತಿಯನ್ನು ಪ್ರಶ್ನಿಸಿದರೆ ಅವುಗಳು ಹೊರಳಿ ಅರಳುವ ಕ್ರಮವನ್ನೂ ಇದೇ ರೀತಿಯಲ್ಲಿ ಧೇನಿಸಿದರೆ ಅವರ ಕವಿತೆಗಳ ರೀತಿಗೆ ಸ್ಪಷ್ಟವೂ ಅಳಿಸಲಾಗದೇ ಉಳಿಯುವ ಮಾರ್ಗವೂ ಆಗಿ ಕಾಡುತ್ತಿರುವುದು ಈ ಕವಿಯ ಹೆಚ್ಚುಗಾರಿಕೆ.

” ಮುಕ್ತಿ” ಹೆಸರಿನ ಕೇವಲ ಎಂಟು ಸಾಲಿನ ರಚನೆಯಲ್ಲಿ ಈ ಕವಿ ತಾನು ಏನಾಗಬೇಕೆಂದು ಬಯಸುತ್ತಿದ್ದಾರೆ ಎಂದು ತಿಳಿಯುವುದಕ್ಕೆ= ನಿದರ್ಶನವಾಗಿ ಒದಗಿದೆ. ನಿಜಕ್ಕೂ ಈ ಸ್ವಾರ್ಥದ ಹೊಂಚುಗಳಲ್ಲೇ ಪ್ರಪಂಚದಲ್ಲಿ ಇಂಥ ಆಶಯ ಇರುವ ಜನ ಇನ್ನೂ ಇದ್ದಾರಲ್ಲ ಅನ್ನುವ ಸಮಾಧಾನವೇ ಸಾಕಷ್ಟು ಪಾಸಿಟೀವ್ ಸಂಗತಿ. ಬಂಡಾಯ ಅನ್ನುವ ತಲೆಬರಹದ ಕವಿತೆ ಕೂಡ ಕವಿ ಸ್ವತಃ ತನಗೆ ತಾನೇ ಹೇಳಿಕೊಂಡ ಸಾಲುಗಳಂತೆ ಕಂಡರೂ ಅವೂ ಕೂಡ ವರ್ತಮಾನದ ಸಂಗತಿಗಳಿಗೆ ಕೊಟ್ಟ ಭಾಷ್ಯವೇ ಆಗಿರುವುದು ಗುಟ್ಟೇನಲ್ಲ.”ದೇವರಿಗೆ” ಅನ್ನುವ ಪದ್ಯ ಪ್ರಾರ್ಥನೆಯ ಮುಂದುವರಿಕೆ.

“ಬದುಕಿನ ಧ್ಯಾನ” ಪದ್ಯ ಬದುಕನ್ನು ವಿಶ್ಲೇಷಿಸುವ ರೀತಿಯಿಂದ ಓದುಗನಿಗೆ ಇಷ್ಟವಾಗುತ್ತದೆ. ಮಳೆ, ಮಂಜು ಮತ್ತು ಚಳಿಯ ಪ್ರತಿಮೆಗಳಿಂದ ಈ ಪದ್ಯ ಪಡೆದ ನಯ ನಾಜೂಕು ಮತ್ತು ಸ್ಪಷ್ಟತೆ ನನ್ನನ್ನು ಬಹುವಾಗಿ ಕಾಡಿದವು. ಸಂಭೋಗದಲಿ ಪ್ರೇಮ ಸಾಯುವಾಗ ಥಟ್ಟನೆ ಮಳೆ ಮಂಜು ಚಳಿ ಮಾಯ ಎನ್ನುವ ಅವರ ನಿರ್ಧಾರ ಬರಿಯ ಸ್ವಂತದ ಅನುಭವದಿಂದ ಬಂದಿರುವ ಸಾಮಗ್ರಿಯಲ್ಲ, ಪರಂತು ಅದು ರಜನೀಷ್ ಮತ್ತು ಲಂಕೇಶ್ ಓದಿನ ಪ್ರಭಾವದಿಂದ ಒಡೆದು ಮೂಡಿದ ಅನುಭಾವ. ನಿಜ.

ಮಳೆಯನ್ನು ಚಲುವ ಅನ್ನುವ ಈ ಕವಿ ಚಳಿಯನ್ನೂ ಭೂಮಿಯನ್ನೂ ಚಲುವೆ ಅನ್ನುತ್ತಾರೆ. ಇದು ಕೂಡ ಪ್ರಾಚೀನ ಸಂಗತಿಯೇ! ಆದರೆ ಸೂರ್ಯ ಚಂದ್ರರು ಇಲ್ಲಿ ಹಣಕಿ ಬಾನು ತುಂಬಾ ಗರ್ಭ ಧರಿಸಿ ತಾರೆಗಳಿಗೆ ಜನ್ಮವಿಟ್ಟರೋ ( ಯೌವ್ವನದ ಚಳಿ) ಅನ್ನುವಾಗ ಭೇಷ್ ಅನ್ನಲೇ ಬೇಕಾಗುತ್ತದೆ!

“ಗಾಳಿ ಗೋಪುರ” ಲಿಂಗ ದೀಕ್ಷೆ ಪಡೆದೂ ಲೌಕಿಕದ ಆಸೆ ಆಮಿಷಗಳಿಗೆ ಬಲಿಯಾದ ಸಾಮಾನ್ಯರ ಚಿತ್ರಣ. ಆದರೂ ಇದರಿಂದ ಮುಕ್ತಿ ಕೊಡು ಅನ್ನುವುದು ನಿಜದ ಆಶಯ. “ನಿಶೆ” (ಈ ಪದ್ಯದ ತಲೆ ಬರಹ ನಶೆ ಅಂತ ಆಗಬೇಕಿತ್ತು) ಗಾಳಿಗೋಪುರದ ಮುಂದುವರೆದ ರೋದನೆ. ಬರಿಯ ರಗಳೆಗಳೇ ಬದುಕ ತುಂಬಾ ಇರುವಾಗ ಅವನ್ನು ಮೀರುವ ಅಥವ ಅವುಗಳೊಂದಿಗೇ ರಾಜಿಯಾಗುವುದು ಅನಿವಾರ್ಯದ ಉಪಾಯ. ಆದರೆ ಪದೇ ಪದೇ ಅಲವತ್ತುಕೊಳ್ಳುತ್ತ ಕೂತರೆ ಸಾಗುವ ಮಾರ್ಗವಾದರೂ ಯಾವುದು? ಆದರೂ ಈ ಪದ್ಯದಲ್ಲಿ ಪ್ರತಿಮೆಗಳಾಗಿ ಪೇರಿಸಿರುವ ಮಹಾ ಮಹಿಮರು ಇನ್ನಾದರೂ ಈ ಕವಿಗೆ ದಾರಿ ತೋರಿಸಲಿ ಅನ್ನುವುದು ಆಶಯ.

“ಮಗಳಿರುವ ಅಪ್ಪನೊಬ್ಬನ ಕವನ” ಈ ಸಂಕಲನದ ಪ್ರೇರಿತ ಆಶಯಗಳಿಗೆ ವಿರುದ್ಧವಾದ ಆದರೆ ನಿಜ ಬದುಕಿನ ಅನುಭವ ಮತ್ತು ಅನಿವಾರ್ಯಗಳಿಂದ ಹುಟ್ಟಿದ ನಿಜದ ಪದ್ಯ. “ಕಾಡುವಳು, ಓಡುವಳು/ ಎದ್ದು ಬಿದ್ದು ನಗಿಸುವಳು/ಯಶೋದೆಯೂ ಮೂಕಳು/ ನನ್ನ ಮಗಳ ಆಟಕೆ” ಅನ್ನುವಾಗ ಕವಿ ತಂದೆಯಾಗಿ ತನ್ನ ಮಗಳ ಆಟದಿಂದ ಸ್ವರ್ಗ ಸುಖ ಪಡೆದ ಸಂಗತಿಯನ್ನು ವಿವರಿಸುತ್ತಾರೆ. ಪ್ರಾಯಶಃ ಎಲ್ಲ ಕವಿಗಳೂ ತಮ್ಮದೇ ಕವಿತೆಗಳನ್ನೂ ಮಗಳ ಸ್ಥಾನದಲ್ಲೇ ಇಟ್ಟು ತೂಕ ಮಾಡಿದರೆ ಅವರಿಗೇ ತಮ್ಮ ಕವಿತೆಗಳ ಸೋಲು ಗೆಲುವು ಮತ್ತು ಅವುಗಳ ಬೆಳವಣಿಗೆ ಅರ್ಥವಾಗುತ್ತದೆ.

ಯಾರು ಏನೇ ಹೇಳಿಕೊಳ್ಳಲಿ ನನಗೆ ಅನ್ನಿಸಿದ್ದು ಇದು ಮತ್ತು ಇದೇ ನನ್ನ ದಾರಿ ಎಂದು ಅವರು ಈ ಕವಿತೆಗಳ ಮೂಲಕ ಮತ್ತೆ ಮತ್ತೆ ಸ್ಪಷ್ಟವಾದ ಮತ್ತು ಉತ್ತಮವಾದ ಮಾರ್ಗವನ್ನು ಈಗಾಗಲೇ ಸಂಶೋಧಿಸಿ ಆ ದಾರಿಯಲ್ಲಿ ತಮ್ಮ ಪಯಣ ಆರಂಭಿಸಿದ್ದಾರೆ

.

ಈ ಕವಿ ಹಿಡಿದ ದಾರಿ ಈಗಾಗಲೇ ನಮ್ಮ ಶರಣರು ಅನುಭಾವಿಗಳು ಮತ್ತು ದಾಸ ಪರಂಪರೆ ಅನುಸರಿಸಿದ ಲೌಕಿಕದ ಸಂಗತಿಗಳಾಚೆಗಿನ ಆದರೆ ಬದುಕಿನ ಎಲ್ಲ ಬಣ್ಣಗಳಲ್ಲಿ ಮೀಯುತ್ತಲೇ ಮತ್ತೆಲ್ಲೋ ಹೊರಳುವ ನಿಜದ ಮಾರ್ಗ.

ನನ್ನ ಈ ಟಿಪ್ಪಣಿ ಇಲ್ಲದೆಯೂ ಕೊಟ್ರೇಶರ ಪದ್ಯಗಳು ಸರಾಗ ಓದಿಸಿಕೊಳ್ಳುವ ಗುಣ ಇರಿಸಿಕೊಂಡಿವೆ. ಆಕಾಶ ನೋಡಲು ನೂಕು ನುಗ್ಗಲೇ? ಅವರ ಪದ್ಯಗಳನ್ನು ಓದುವಾಗ ನಾನು ಕೂಡ ಅವರಂಥದೇ ವಿಚಿತ್ರ ತಳಮಳಗಳನ್ನೂ, ಲೌಕಿಕವು ಒಡ್ಡುವ ಆಕರ್ಷಣೆಗಳ ಹಿಂದಣ ವಿಕರ್ಷಣೆಗಳ ಮುಖವನ್ನೂ ಕಂಡಿದ್ದೇನೆ. ಹಾಗೆ ಕಾಣಿಸಲು ಅನುವು ಮಾಡಿಕೊಟ್ಟ ಕೊಟ್ರೇಶರನ್ನು ಅಭಿನಂದಿಸಿ ನನ್ನೀ ಟಿಪ್ಪಣಿಯನ್ನು ಮುಗಿಸುತ್ತಿದ್ದೇನೆ. ನಮಸ್ಕಾರ.


ಕೊಟ್ರೇಶ್ ತಂಬ್ರಳ್ಳಿ ಅಮರಗೋಳಮಠ.

ಕವಿತೆಗಳು

ಮಗಳು ಮತ್ತು ಮಳೆ

ಹೊರಗೆ ಮಳೆ

ಬಾನಲ್ಲಿ ಗುಡು ಗುಡು

ಗುಡುಗು…!!

ರಾತ್ರಿಯ ಮಳೆಗೆ

ಮಳೆಯಂತಹ ಕವಿತೆ

ಬರೆಯಲು ಕುಳಿತೆ!! 

ಬರೆಯುವ ಹಾಳೆ

ಪೆನ್ನು, ಟೇಬಲ್ಲು-ಕುರ್ಚಿ

ರೆಡಿಯಾಯಿತು;ಕವಿತೆಯೊಂದನ್ನು ಬಿಟ್ಟು!!

ಅಷ್ಟರಲ್ಲೀ. …  .,

ಮಲಗಿದ್ದ ಮಗಳು

ಎದ್ದಳು. ..ಕಣ್ಣಲ್ಲಿ

ಮಿಂಚು ತಂದಳು,

ನನ್ನ ತೊಡೆಯೇರಿ

ಎದೆಯೊರಗಿ ಕುಳಿತಳು!!

ಬರೆಯುವ ಹಾಳೆ

ಬೋರಲಾಯಿತು;

ಆದರೆ ಕವಿತೆಗೆ ಮಳೆಯಂತಹ

ಜೀವ ತಂದಳು!!

====

ಪ್ರಾರ್ಥನೆ

ತಂದೆಯೇ,

          ಜೀವನಕೆ ತುಸು ಅರ್ಥ ನೀಡು

          ಎಲ್ಲದಕೂ ಕಾರಣ ನೀನಾಗಿರು

          ವಾಗ ನಮೆಗೇನಿಲ್ಲ ಚಿಂತೆಯೆಣಿ

          ಸಿದರೂ ಹಸಿದ ಒಡಲ ನೀಡಿದೆ!

         ಎಲ್ಲಾ ದಿಕ್ಕುಗಳ ನೀನೇ ತೋರಿಸಿ

         ಸುಕ್ಕುಗಳ ಬ್ರಹ್ಮಾಂಡದಲ್ಲಿ ಕೂಡಿ

         ಸಿದೆ!

  ಪ್ರಭುವೇ,

       ಮತಿಹೀನ ಭಕ್ತರಿಗೆ ಭಕುತಿ ಕೊಟ್ಟ

       ನಿನ್ನ ಇಕ್ಕಟ್ಟಿನ ಮಸ್ತಕವ ಸವರುವ

       ಆಸೆ ಇದಿಯೋ ಜನಾರ್ದನ ಬಂಧು!

      ಒಪ್ಪಿಸಿಕೊಂಡು ಬಿಡು ಒಡಲ ಬಡವನ

      ರೂಪಿಸಿರುವ ವಿಶ್ವಕರ್ಮಿಯೇ ನೀನು

      ಅಸಾಧ್ಯ ನಿನ್ನ ಪಾದರಸ ಗುಣವಿಶೇಷ!

  ಬಂಧುವೇ,

   ಅಡಿಗಡಿಗೆ ತಡಬಡಾಯಿಸುವ

   ನನ್ನ ಮಸ್ತಕ,ಯುಕ್ತಿ ಶಕ್ತಿಯನು

   ಕೊಂಚ ಮರ್ಪಾಡಿಸಲಾರೆಯಾ?

  ಅರಿಷಡ್ವರ್ಗಗಳ ಹಿಡಿತವಿಲ್ಲದವ

  ನಾನು!!

  ಎಲ್ಲವನ್ನೂ ಗೆಲ್ಲಲೇಬೇಕೆಂಬ ಪಾಪಿ

  ನಾನಲ್ಲ!

  ನಿನ್ನೆತ್ತರಕೆ ಬರುವ ಆಸೆ ಎನಗಿಲ್ಲವೋ!

 ಪರಿಗಣಿಸು ಬಿಡು ನನ್ನ ನರಜನ್ಮವನು

 ಲೌಕಿಕತೆಗೆ!

 ಸಹಜತೆಯ ಪ್ರಕೃತಿ ಪುರುಷನನ್ನಾಗಿಸು!

ದೊರೆಯೇ,

               ಜೀವನಕೆ ತುಸು ಅರ್ಥ ನೀಡು

               ಎಲ್ಲದಕೂ ಕಾರಣ ನಾನಾಗುವಂತೆ!

               ತೊರೆದು ಬಿಡು ನಿನ್ನಾತ್ಮವ ನನ್ನೊಳಗಿಂದ!

======

ಮಗಳಿರುವ ಅಪ್ಪನೊಬ್ಬನ ಕವನ.

ನನ್ನ ಅವಳ ನಡುವೆ ಆತ್ಮಸಂವಹನ;

 ನನ್ನ ಪಾಡೆಲ್ಲಾ ಆವಳಿಗೊತ್ತು

ಅವಳಿಗರಿವಿಲ್ಲದೇ…..!!

ಅವಳಾಡುವ ಆಟಗಳೆನಿಗೊತ್ತು

ಮುದ್ದು ಮಗಳ ಅನುಬಂಧದಲಿ! !

ನೆತ್ತಿ ಮೇಲೆ ಹೊತ್ತ ಭಾರ

ಅವಳ ಮುತ್ತು ಇಳಿಸಿದೆ!!

ಸುತ್ತ  ಲೋಕಕೆ ನಾನೇ ರಾಜ

ನನ್ನ ಮಗಳೇ ರಾಜ ಕುವರಿಯು! ! 

ಮೂರ್ತಿ ರಾಯ ನಿಜವ

ಬರೆದ ;ನಾನೇ ಸಾಲಗಾರನು

ಪಡೆದ ಪ್ರೀತಿಯ ಹೇಗೆ

ಮರಳಿಸಲಿ ;ನಾನೇ ..

ನಾನೇ ಸ್ವಾರ್ಥಿ ..!!

ಕಣ್ಣರೆಪ್ಪೆ ಮಿಟುಕಿಸೊದೊಡನೆ

ಮನೆಯ ಸುತ್ತಿ ಬರುವಳು;

ನಾನು ಹೆಳವನು ಅವಳ

ಆಟದಲಿ ;ಜೇನ ತಿಂದ ಅಪ್ಪನು! !

ಮಲ್ಲಿಗೆಯ ಸುಮದ

ಹಾಗೆ ಅವಳ  ಘಮವು

ಎಲ್ಲೆಡೆ:,ಹಬೆಯಾಡುವ

ಹೋಳಿಗೆಯಾಗೆ ಮನೆ

ಮನದ ತುಂಬ ಸಲಿಗೆ!!

ಕಾಡುವಳು, ಓಡುವಳು:

ಎದ್ದು ಬಿದ್ದು ನಗಿಸುವಳು

ಯಶೋದೆಯೂ ಮೂಕಳು

ನನ್ನ ಮಗಳ ಆಟಕೆ! !

ದಶಾವಾತಾರಕೂ ಸೆಡ್ಡು

ಹೊಡೆವ ಜಾಣೆಯೂ! ! 

ಎನಗಿಂತ ಸುಖಿಗಳುಂಟೇ

ಸದರಿ ಈ ಜಗದಲಿ!       

ಅಮೃತ ಪಾನದ

ಸವಿಯು ಗೊತ್ತೇ…?

ನಿವಾಳಿಸಿ ಎಸೆಯಿರಿ ಸ್ವರ್ಗವ! !  

ಗಕ್ಕನೆ ನಿಲ್ಲಲು ಇದು

ಬಂಡಿಯಲ್ಲ!!

ನನ್ನ ಮಗಳ ಬಂಧವು! !

(ಮೂರ್ತಿ ರಾಯ=A.N.ಮೂರ್ತಿ  ರಾವ್)

======

ಹಣತೆ ಮತ್ತು ನನ್ನ ದಾರಿ

ಹಣತೆ ಇಲ್ಲದೆ ಬಹುದೂರ

ಸಾಗಿಬಂದಿದ್ದೇನೆ;ಆದರೂ…

ಯಾರೋ ತಮಗಾಗಿ ಹಚ್ಚಿದ್ದ

ಹಣತೆಯ ನೆರಳ ಜಾಡು ಹಿಡಿದು

ಎದ್ದು-ಬಿದ್ದು ಬಂದಿದ್ದೇನೆ ಇಲ್ಲೀತನಕ

ಥೇಟ್ ಏಕಲವ್ಯನಂತೆ!!

ಯಾರೋ ತಮಗಾಗಿ ಹಚ್ಚಿದ್ದ

ಹಣತೆಗೆ ಇಂದಿಗೂ ಕೃತಜ್ಞನಾಗಿದ್ದೇನೆ!!

ನನಗೆ ಬಾಳ ದಾರಿ ತೋರಿಸಿದೆ….

ಎಡವಿದ್ದು ಯಾಕೆಂದು ಗೊತ್ತು ಮಾಡಿದೆ;ಹೆಜ್ಜೆ ಇಡುವಾಗ ನನ್ನ

ನಂಬಿದವರಿಗೆ ಬೆಳಕ ಕೊಡುವುದನ್ನು ಕಲಿತಿದ್ದೇನೆ!!

ಎದೆ ಮುಟ್ಟಿಕೊಂಡು ಹೇಳುತ್ತೇನೆ

ನಾನು ನಡೆದ ದಾರಿ ಪ್ರಾಮಾಣಿಕತನದ್ದು!!

ಆದರೇನು ಮಾಡಲಿ?

ಅದನ್ನು ಗುರುತಿಸಲು

ಅಲ್ಲಿ ಬೆಳಕಿರಲಿಲ್ಲ!!

ಅದು ಯಾರದೋ ಹಣತೆಯ

ಬೆಳಕಿನ ಹುಸಿ ನೆರಳು!!

ಈಗ ಆ ಹಣತೆಯ ನೆರಳಿನಿಂದ

ಬಹು ದೂರ ಸಾಗಿ ಬಂದಿದ್ದೇನೆ;

ನನ್ನದೇ ಆದ ಹಣತೆ ಇದೆ ಈಗ

ಆದರೆ ಅದರಲ್ಲಿ ಎಣ್ಣೆ ಇಲ್ಲ!!

ಆದರೂ,ಮನದಲ್ಲಿ ಛಲವಿದೆ

ಮುಂದೆ ಈ ಹಣತೆಗೆ ಎಣ್ಣೆ ಹಾಕುವೆನೆಂಬ ಹುಮ್ಮಸ್ಸು!!

ಆದರೆ ಯಾರದ್ದೋ ಹವಿಸ್ಸಿನಿಂದಲ್ಲ!

ಮುಂದೆ ನಡೆಯುವ ದಾರಿ ನನ್ನದೇ

ಹಣತೆಯ ಪ್ರಕಾಶಮಾನ ಬೆಳಕು!!

*****************************************************

ಲೇಖಕರ ಬಗ್ಗೆ:

ತರೀಕೆರೆ ಮೂಲದವರಾದ ಡಿ.ಎಸ್.ರಾಮಸ್ವಾಮಿಯವರು ಜೀವವಿಮಾ ನಿಗಮದ ಅಧಿಕಾರಿಯಾಗಿ ಅರಸೀಕೆರೆಯಲ್ಲಿ ನೆಲೆಸಿದ್ದಾರೆ.ಇವರ ‘ಉಳಿದ ಪ್ರತಿಮೆಗಳು’ ಕವನಸಂಕಲನಕ್ಕೆಮುದ್ದಣ ಕಾವ್ಯ ಪ್ರಶಸ್ತಿದೊರೆತಿದೆ.

4 thoughts on ““ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು

  1. ಪರಿಚಯಿಸಿದಕ್ಕೆ ಧನ್ಯವಾದಗಳು ರಾಮಸ್ವಾಮಿ ಸರ್.
    ಸಂಗಾತಿಗೆ ಧನ್ಯವಾದಗಳು.

  2. ಈ ಲೇಖನವನ್ನು ಓದಿ ಕೊಟ್ರೇಶ್ ತಂಬ್ರಳ್ಳಿಯವರ ಕವನಗಳನ್ನು ಓದಬೇಕು ಎನ್ನಿಸುತ್ತಿದೆ. ಬರೀ ಲೈಕುಗಳಿಗಾಗಿ ಜಾಳು ಸಾಹಿತ್ಯವನ್ನು ಎದುರಿಡುವವರ ಮಧ್ಯೆ ಬೆಳ್ಳಿ ತಾರೆಯನ್ನು ಹುಡುಕುವುದು ಕಷ್ಟ. ಅಂತಹ ಸುಂದರ ಕೆಲಸವನ್ನು ಈ ಲೇಖನ ಮಾಡಿದೆ..

  3. ಕವಿಯೊಬ್ಬರನ್ನು ಹೀಗೆ ಸವಿಸ್ತಾರವಾಗಿ ಪರಿಚಯಿಸುವ ಸಹೃದಯತೆ ತೋರಿದ . ಡಿ. ಎಸ್. ರಾಮಸ್ವಾಮಿಯವರಿಗೂ ಹಾಗೆಯೇ ತಮ್ಮ ಕವಿತ್ವ ಪ್ರತಿಭೆಯ ಮೂಲಕವೇ ಪರಿಚಯಿಸಲ್ಪಟ್ಟ ಕೊಟ್ರೇಶ್ ತಂಬಳಿಯವರಿಗೆ ಅಭಿನಂದನೆಗಳು. ಕವಿತೆಗಳು ಬಹಳ ಚೆನ್ನಾಗಿವೆ.

Leave a Reply

Back To Top