ನನ್ನ ಇಷ್ಟದ ಕವಿತೆ

ನನ್ನ ಇಷ್ಟದ ಕವಿತೆ

ಡಾ.ಎಂ.ಗೋಪಾಲಕೃಷ್ಣ ಅಡಿಗ

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗಣ
ಒಲಿದ ಮಿದುವೆದೆ , ರಕ್ತ ಮಾಂಸದ ಬಿಸಿದು ಸೋಂಕಿನ ಪಂಜರ
ಇಷ್ಟೇ ಸಾಕೆಂದಿದ್ದೆಯಲ್ಲೋ ? ಇಂದು ಏನಿದು ಬೇಸರ?
ಸಪ್ತ ಸಾಗರದಾಚೆಯೆಲ್ಲೊ
ಸುಪ್ತ ಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ?
ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ?
ಯಾವ ದಿವ್ಯ ಯಾಚನೆ?
ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದ ಬೇಸರ
ಏನೋ ತೀಡಲು ಏನೋ ತಾಗಲು ಹೊತ್ತಿ ಉರಿವುದು ಕಾತರ.
ವಿವಶವಾಯಿತು ಪ್ರಾಣ ಹಾ! ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ

ಯಾವ ಮೋಹನ ಮುರಳಿ ಕರೆಯಿತು ಇದ್ದಕಿದ್ದಲೆ ನಿನ್ನನು
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು.


ನವೋದಯ ಕಾಲದ ಕಾವ್ಯಗಳ ಸಾಲಿನಲ್ಲಿ ಪ್ರಾತಿನಿಧಿಕ ಕವನಗಳನ್ನು ಒಳಗೊಂಡ “ಕಟ್ಟುವೆವು ನಾವು” ಕವನ ಸಂಗ್ರಹದಲ್ಲಿ ” ಯಾವ ಮೋಹನ ಮುರಳಿ ಕರೆಯಿತು” ಕವಿತೆಯೂ ಒಂದು.೧೬ ಸಾಲುಗಳ ಈ ಕವನ ಪ್ರಸಿದ್ಧ ಭಾವಗೀತೆಯೂ , ಚಿತ್ರಗೀತೆಯೂ ಹೌದು.

   ಜೋಡಿ ಸಾಲುಗಳಲ್ಲಿ ಅಂತ್ಯಪ್ರಾಸ ತ್ರಾಸವಿಲ್ಲದೇ ಸರಳವಾಗಿ , ಲಯ, ಗೇಯತೆ, ಮಾಧುರ್ಯತೆಯಿಂದ ಕೂಡಿದ ಹೃದ್ಯವೆನಿಸುವ ಸುಂದರ ಪದ್ಯ. ಕೆಲವು ಸಾಲುಗಳಂತೂ ಹಾಗೆಯೇ ನಾಲಿಗೆಯ ಮೇಲೆ ನರ್ತಿಸುವಂತೆ ಭಾಸವಾಗುತ್ತವೆ.

   ಭಕ್ತಿ ಭಾವದೊಂದಿಗೆ ಕೃಷ್ಣ ಹಾಗೂ ಬೃಂದಾವನ ಗಳ ಉದಾಹರಣೆಯೊಂದಿಗೆ ನಮ್ಮ ಜೀವನ ಹಾಗೂ ನಶ್ವರವಾದ ಲೌಕಿಕ ಸುಖದಿಂದ ದೂರ ಸರಿಯುವ ಸಂದೇಶವನ್ನು ಈ ಸಾಲುಗಳು ನೀಡುತ್ತವೆ.

ಅದೂ ಯಾರೋ ಕಿವಿಯಲ್ಲಿ ಮಧುರ ಕಂಠದಿಂದ ಜೇನ್ಮಳೆಯನ್ನು ಸುರಿಸಿದಂತೆ ಪದಗಳು ಲೀಲಾಜಾಲವಾಗಿ ಮನಸ್ಸಿಗೆ ನಾಟುವಂತೆ ಮೂಡಿಬಂದಿದೆ.ಪದಗಳ ಬಳಕೆಯಲ್ಲಿ ಪರ್ಯಾಯ ಪದಗಳಿಗೆ ಅವಕಾಶವೇ ಇಲ್ಲವೆಂಬಂತೆ ಪ್ರಯೋಗವಾಗಿದೆ.

ಯಾವ ಮೋಹನನ ಕರೆಗೆ ಮನಸ್ಸು ಕರಗಿದೆಯೋ ಅಲ್ಲಿಗೇ ಸೆಳೆತ ಹೆಚ್ಚಾಗಿ ದೂರಕ್ಕೆ ಸಾಗುವಂತೆ ಮಾಡುವ ಅದಮ್ಯ ಶಕ್ತಿಯಿಂದಾಗಿ ಇಲ್ಲಿವರೆಗೂ ದೊರೆತದ್ದೆಲ್ಲವೂ ಬೇಡವೆನಿಸಿದೆ.

“ಒಲಿದ ಮಿದುವೆದೆ , ರಕ್ತ ಮಾಂಸದ ಬಿಸಿದು ಸೋಂಕಿನ ಪಂಜರ

ಇಷ್ಟೇ ಸಾಕೆಂದಿದ್ದೆಯಲ್ಲೋ!

ಇಂದು ಏನಿದು ಬೇಸರ?”

    ಮಾನವ ಶರೀರದ ರಚನೆಯಲ್ಲಿ ರಕ್ತ- ಮಾಂಸ, ಚರ್ಮದ ಹೊದಿಕೆಯಿಂದ ಕೂಡಿದ್ದು ಕ್ಷಣಿಕ ಆಸೆಗಳೆಡೆಗೆ ಬಹುಬೇಗ ಮರುಳಾಗಿಬಿಡುತ್ತದೆ. ಪ್ರೀತಿ, ಪ್ರೇಮಗಳೆಂಬ ಮೋಹವು ಕಾಮದ ಜಾಡು ಹಿಡಿದು ಇದಿಷ್ಟೇ ಸಾಕೆಂಬ ನಿರ್ಧಾರ ಮಾಡಿದಂತಿತ್ತು.ಹಾಗೆಯೇ ತನ್ನನ್ನು ಲೌಕಿಕ ಜಗತ್ತಿನ ಗೊಡವೆಗಳ ,ಆಕರ್ಷಣೆಯ ಗುಲಾಮನಾಗಿಸಿತ್ತು.

ಆದರೇಕೋ ಬಯಸಿದ, ಅನುಭವಿಸಿದ ಎಲ್ಲಾ ಸುಖ ಲೋಲುಪತೆಗಳು ಬೇಡವೆನಿಸಿ ಏಕತಾನತೆಗೆ ಮನಸ್ಸು ಹಪಹಪಿಸುತ್ತಿದೆ ಎಂಬುದು ಇದರ ಮೂಲಕ ಕಂಡುಬರುತ್ತದೆ.

  ಬೇಸರಿಕೆಯೊಂದು ಮನದ ಮೂಲೆಯಲ್ಲಿ ಮೊಳೆತು ಜೀವನವೆಂದರೆ ಕೇವಲ ಪ್ರಾಪಂಚಿಕ ಸುಖದಲ್ಲಿ ಮುಳುಗಿ ಸದಾಕಾಲವೂ ಖಿನ್ನತೆ, ಮಾನಸಿಕ ವೇದನೆ ಅನುಭವಿಸುತ್ತಾ ತೊಳಲಾಡುತ್ತಿರುವುದಲ್ಲ ,

ಬದಲಾಗಿ ಇದೆಲ್ಲವನ್ನೂ ಮೀರಿದ ದಿವ್ಯ ಅನುಭವವೊಂದು ನಮಗಾಗಿ ಕಾದಿದೆ. ಅದನ್ನು ನಾವು ಪಡೆಯಲು ಸಜ್ಜಾಗಬೇಕಿದೆ.

  ” ಯಾವ ಸುಮಧುರ ಯಾತನೆ? ಯಾವ ದಿವ್ಯ ಯಾಚನೆ?”

ಈ ಅದ್ಭುತ ಸಾಲುಗಳು ನೀಡುವ ಅರ್ಥ.

” ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ”

ಈ ಸಾಲಿನಲ್ಲಿ ಎಲ್ಲಿಯೋ ಅಗೋಚರವಾದ ಸಪ್ತ ಸಾಗರದ ತೀರಕೆ ಸೆಳೆಯುವ ಕವಿಯ ಮನಸ್ಸಿಗೆ ಮೂಕವಾದ ಮರ್ಮರವೊಂದು ತಲುಪಿರುವಂತೆ ಭಾಸವಾಗುತ್ತಿದೆ. ನನ್ನ ಮನಸ್ಸನ್ನು ಮೆಚ್ಚಿದ ಸಾಲು ಹಾಗೂ ಸದಾ ಕಾಡುವ ಭಾವ.

ಯಾವುದೋ ಅಲೌಕಿಕ ಶಕ್ತಿಯೊಂದು ಈ ಲೋಕದ ಜನರನ್ನು ಮೃದುವಾಗಿ ಎಚ್ಚರಿಸಿ ಇಹವನ್ನು ಬಿಡಲಾಗದೇ ಅಸಹಾಯಕ ಮನಸ್ಥಿತಿಯಲ್ಲಿರುವ ಯಾತನಾಮಯ ಜೀವಗಳನ್ನು ಚೈತನ್ಯಯುಕ್ತ ಜಗತ್ತಿಗೆ ಸೇರಿಸುತ್ತಿದೆ.

ಹಾಗೆಯೇ ” ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ”ಈ ಸಾಲೂ ಕೂಡ ನಮ್ಮ ಸಾರ್ವಕಾಲಿಕ ಬದುಕಿಗೆ ಹಿಡಿದ ಕನ್ನಡಿಯೇ ಸರಿ.

ಬದುಕೆಂದಿಗೂ ಗೊಂದಲಗಳ ಗೂಡಾಗದೇ ನೆಮ್ಮದಿಯ ತಾಣವಾಗಿರಬೇಕು.”ಇಲ್ಲ” ಗಳ ಕಡೆ ಮನಸ್ಸು ವಾಲಿರುವುದರಿಂದ ನಿಜವಾದ ಆನಂದವನ್ನು ಕೈಚೆಲ್ಲಿ ಮತ್ತೆಲ್ಲೋ ವ್ಯರ್ಥ ಪ್ರಯತ್ನ ಮಾಡುವುದೆಷ್ಟು ಸರಿ ಅಲ್ಲವೇ?

ಇದ್ದುದರಲ್ಲಿ ನೆಮ್ಮದಿಯ ಕಂಡಾಗ ದೊರೆಯಬಹುದಾದ ಸಂತಸ ಪರರಿಂದ ಕಿತ್ತುಕೊಳ್ಳುವುದರಿಂದ ಸಿಗಲಾರದು, ಸಿಕ್ಕರೂ ಕ್ಷಣಿಕ.ತಮ್ಮ ಹತ್ತಿರ ಏನೋ ಇರುವುದಿಲ್ಲ ತಮಗೆ ಅದು ಬೇಕಾಗಿರುತ್ತದೆ.ಅದಕ್ಕಾಗಿ ಜಗತ್ತು ಸದಾ ಪ್ರಯತ್ನಿಸುತ್ತಲೇ ಇರುವುದನ್ನು ಕಾಣುತ್ತೇವೆ. ಪಡೆದಾಗ ಸಂತಸ ಪಡುವ ಮನಸ್ಸು ಕ್ರಮೇಣ ಮತ್ತೇನೋ ಬಯಸುತ್ತದೆ ಅಥವಾ ಇರುವುದು ಕಡಿಮೆ ಯೂ ಎನಿಸಬಹುದು. ಪುನಃ ಮನಸ್ಸು ಹಾತೊರೆಯುತ್ತದೆ.ಹೀಗೆ ಜೀವ ಇರುವ ತನಕ ಕೊರತೆಗಳಿಗೂ ಬರವಿಲ್ಲ.ಆಸೆಗಳಿರಲಿ ದುರಾಸೆಗಳು ನಿಷಿದ್ಧ. ಹೀಗೆ ಪ್ರಶ್ನೋತ್ತರಗಳ ಮೂಲಕವೇ ಸಹೃದಯ ಓದುಗರ ಅಭಿರುಚಿಗೆ ತಕ್ಕಂತೆ ಮನಮುಟ್ಟುವ , ಭಾವಗಳನ್ನು ತನ್ನೆಡೆಗೆ ಸೆಳೆಯುವ ಮೋಹಕ ಶಕ್ತಿಯಿರುವ ಪದ್ಯ.

ಮರದೊಳಡಗಿದ ಬೆಂಕಿ ಕಣ್ಣಿಗೆ ಅಗೋಚರ.ಹಾಗೆಯೇ ಮನದೊಳಡಗಿರುವ ಬೇಸರವೂ. ಮನದ ಬೇಸರವು ಹೊತ್ತಿ ಉರಿದು ಕಾತರದ ರೂಪವಾಗಿದೆ.

ಏನು- ಏಕೆ ಎಂಬ ಅತೀವ ಉತ್ಸುಕತೆಯ ಮನಸ್ಸಿಗೆ ಬಹಳಷ್ಟು ಕಾಡುತ್ತದೆ.

ಜೀವಾಂಶವೇ ನನ್ನ ಬಿಟ್ಟು ದೂರ ಹೋದಂತೆ ಇರುವುದೆಲ್ಲವನ್ನು ಬಿಟ್ಟು ಮತ್ತೆಲ್ಲೊ ಮನಸ್ಸು ಏನನ್ನೊ ಅರಸುತ್ತಾ ಹೊರಡುತ್ತದೆ. ನಾ ಮೆಚ್ಚುವ ಈ ಕವಿತೆಯು ಸದಾ ಗುಯ್ಗುಡುತ್ತದೆ ನನ್ನ ಕಿವಿಯಲ್ಲಿ.

******************************

ಸರಿತಾ ಮಧು

4 thoughts on “ನನ್ನ ಇಷ್ಟದ ಕವಿತೆ

  1. ತುಂಬಾ ಚೆನ್ನಾಗಿ ಬರೆದಿದ್ದೀರಿ. ನನ್ನ ವಿಮರ್ಶೆಯನ್ನು ಓದಿ.
    ವಿ ಗಣೇಶ್, ಸಾಗರ ೯೪೪೮೬೨೭೮೪೫

  2. ಕವಿತೆಯನ್ನು ಬಹಳ ಅನುಭವಿಸಿ ಬರೆದಿದ್ದೀರಿ.

  3. ಒಲಿದ ಮಿದುವೆದೆ , ರಕ್ತ ಮಾಂಸದ ಬಿಸಿದು ಸೋಂಕಿನ ಪಂಜರ
    ಎನಿದೇನಿದು?
    ಬಯಕೆ ಮಾಟವೋ?
    ಪ್ರೇಮ ಪಾಠವೋ?
    ಯಾವ ಸುಮಧುರ ಯಾತನೆ?
    ಯಾವ ದಿವ್ಯ ಯಾಚನೆ?
    ತಿಳಿಯುತಿರೆ ತಿಳಿಯದಾಗಿದೆ
    ಇದ್ದುಬಿಡಲೇ ಸುಮ್ಮನೆ
    ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
    ಹೊಯ್ದು ಬಿಡಲೇ ಈ ಪ್ರೇಮ ಪ್ರೀತಿಯ ಯಾತನೆ?
    ವಿವಶವಾಯಿತು ಪ್ರಾಣ ಹಾ! ಪರವಶವು ನಿನ್ನೀ ಚೇತನ
    ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ

Leave a Reply

Back To Top