ವಿದ್ಯಾರ್ಥಿ ಪ್ರತಿಭೆ

ಭರವಸೆಯ ವಿದ್ಯಾರ್ಥಿ ಕವಿ

ಪೂಜಾ ನಾಯಕ್

ಪೂಜಾ ನಾಯಕ್ ಮೂಲತ:  ಕುಮಟಾ ತಾಲ್ಲೂಕಿನ ನಾಡುಮಾಸ್ಕೇರಿಯವರಾಗಿದ್ದು ಸದ್ಯ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿಹೊಂದಿರುವ ಇವರು ತಮ್ಮ ಆರಂಭದ ಕೆಲ ಕವಿತೆಗಳಿಂದಲೇ ಭರವಸೆ ಮೂಡಿಸಿದ್ದಾರೆ.

 ‘ಸದಾಶಯದೊಡನೆ ಮೂಡಿಬಂದ ಕವಿತೆಗಳು’

              ಸಾಹಿತ್ಯ ರಚನೆಗೂ ಓದಿಗೂ ಏನಾದರೂ ಸಂಬಂಧವಿದೆಯೇ? ಸಾಹಿತ್ಯದ ವಿದ್ಯಾರ್ಥಿಗಳಿಗೆ ಮಾತ್ರವೇ ಕಾವ್ಯ ರಚನೆ ಸಿದ್ಧಿಸಿರುತ್ತದೆಯೇ? ಈ ಪ್ರಶ್ನೆಯಲ್ಲೇ ಹುರುಳಿಲ್ಲ. ಏಕೆಂದರೆ ಸಾಹಿತ್ಯೇತರ ಅಭ್ಯಾಸಗಳಲ್ಲಿ ತೊಡಗಿರುವವರಿಂದಲೂ ಹಲವಾರು ಶ್ರೇಷ್ಠ ಕೃತಿಗಳು ರಚನೆಯಾಗಿವೆ. 

      ಪೂಜಾ ನಾಯಕ್ ಕಾವ್ಯ ಕೃಷಿಯಲ್ಲಿ ತೊಡಗಿರುವ ವಿಜ್ಞಾನದ ವಿದ್ಯಾರ್ಥಿನಿ. ಅವರ ನಾಲ್ಕು ಕವನಗಳನ್ನು ನಾನು ಇತ್ತೀಚೆಗೆ ಓದಿದೆ. ಕಾವ್ಯದ ನಾಡಿಮಿಡಿತ  ಇವರಿಗೆ ಚೆನ್ನಾಗಿ ತಿಳಿದಿದೆ. 

   ಕರುಣಾಮಯಿ, ಮೂಡಿಬರಲಿ, ಜಂಜಾಟದ ಬದುಕು, ಕಾವ್ಯವಾಗಿ ಕರಗುತ್ತೇನೆ. ಇವೇ ಆ ನಾಲ್ಕು ಕವಿತೆಗಳು. ಕೇವಲ ನಾಲ್ಕು ಕವಿತೆಗಳಿಂದ ಒಬ್ಬ ಕವಿಯ ಸಮಗ್ರ ಸಾಹಿತ್ಯದ ಕುಸುರಿಯನ್ನು ಕುರಿತು ಮಾತನಾಡಲಾಗದು. ಹಾಗೆ ಮಾತನಾಡಲೂ ಬಾರದು. 

  ಹಾಗೆಂದು ಪೂಜಾ ಅವರ ನಾಲ್ಕು ಕವನಗಳು ನಿರ್ಲಕ್ಷಿಸಿ ಬಿಡುವಂತಹ ಕವನಗಳಲ್ಲ. ಕವಿಯ ಪ್ರಬುದ್ಧ ಮನಸ್ಸು ಹಾಗೂ ಕಾವ್ಯ ರಚನೆಯ ಹುಮ್ಮಸ್ಸನ್ನು ಈ ಕವನಗಳ ಮೂಲಕವೇ ಗುರುತಿಸಬಹುದು.

 ‘ಕರುಣಾಮಯಿ’ ಕವನದ ‘ಹರಿದಿರುವ ಹರಕು ಅಂಗಿಯ ತುಂಡಿಗೂ ಮೊಂಡಾದ ಸೂಜಿಗೂ ಮಧುರವಾದ ಬಾಂಧವ್ಯ ಬೆಸೆದವಳು…’ ಎನ್ನುವ ಸಾಲುಗಳು ಲಂಕೇಶರ ‘ಅವ್ವ’ನನ್ನು ನೆನಪಿಗೆ ತಟ್ಟನೆ ತರಿಸುವಂತಿವೆ! ಆದರೆ ತಾಯೊಲುಮೆಯ ಹಿರಿಮೆ ಸಾರುವ ಈ ಕವಿತೆ ಆರಂಭಿಕ ಸಾಲುಗಳನ್ನು ಹೊರತುಪಡಿಸಿ ಉಳಿದಂತೆ ತೀರಾ ವಾಚ್ಯವಾಗಿ ಗದ್ಯದಲ್ಲಿ ನಿಂತುಬಿಡುತ್ತವೆ. ಕವಿ ಮತ್ತೊಮ್ಮೆ  ಸಾವಕಾಶ ಈ ಕವಿತೆಯನ್ನು ತಿದ್ದಿದರೆ ಉತ್ತಮ ಕವಿತೆ ಓದುಗರಿಗೆ ದಕ್ಕುತ್ತದೆ.

     ‘ಕಾವ್ಯವಾಗಿ ಕರಗುತ್ತೇನೆ’ ಇದೊಂದು ಪ್ರಬುದ್ಧ ಕವಿತೆ.  ಕವಿ ಧ್ಯಾನಸ್ಥ ಮನಸ್ಥಿತಿಯಲ್ಲಿ ಈ ಕಾವ್ಯ ರಚಿಸಿದಂತಿದೆ. ನೋವು- ನಿರಾಸಗಳನ್ನು ಕಾಣುತ್ತಿರುವಾಗಲೇ ಬದುಕಿನ ಕುರಿತಂತೆ ಚಿಂತಿಸುತ್ತಾ, ತಾನು ಅದಮ್ಯ ಚೇತನವಾಗಿ ಉಳಿಯಬೇಕೆನ್ನುವ ತುಡಿತವನ್ನು ಈ  ಕಾವ್ಯದಲ್ಲಿ ಕಾಣಬಹುದು. ಎಷ್ಟೇ ವೈಫಲ್ಯ ಎದುರಾದರೂ ತನ್ನೊಳಗೆ ಗಟ್ಟಿಗೊಳ್ಳುವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆನ್ನುವ ಛಲ ಕವಿಯದ್ದು. 

    ‘ಮತ್ತೆ ಮತ್ತೆ ಪ್ರವಾಹ ಬಂದೆರಗಿದಾಗ

      ನನಗನಿಸುತ್ತದೆ ನಾನು ಹೀಗೆಯೇ 

      ಕಾವ್ಯನಾಗಿ ಮಂಜುಗಡ್ಡೆಯಂತೆ 

      ಕರಗಿಬಿಡಬೇಕು!’ 

   ಇಡೀ ಕವಿತೆ ಜ್ವಾಲಾಮುಖಿ, ಅಗ್ನಿಪರ್ವತ, ಶಿವಮ ರುದ್ರ ಮೂರ್ತಿ, ಮಂಜುಗಡ್ಡೆಗಳ ರೂಪಕಗಳಲ್ಲಿ ಕುದಿಯುವ ಕವಿಮನಸ್ಸನ್ನು ಕಟ್ಟಿಕೊಡುತ್ತದೆ. 

    ‘ಜಂಜಾಟದ ಬದುಕು’ ಇದೂ ಸಹ ಹದಿಹರಯದ ಮಹಾತ್ವಾಕಾಂಕ್ಷೆಯುಳ್ಳ ಮನಸ್ಸಿನ ಪ್ರತಿಫಲನದಂತಹ ಕವಿತೆ. ಆಸೆಗಳು ಹಕ್ಕುಗಳಾಗಿ, ಹಕ್ಕುಗಳನ್ನು ಈಡೇರಿಸಿಕೊಳ್ಳಲು ಬಯಸುವ ಕವಿಯ ಚಿತ್ತವೃತ್ತಿ ಇಡೀ ಕವಿತೆಯಲ್ಲಿ ಎದ್ದು ಕಾಣುವ ಮುಖ್ಯಾಂಶ. 

      ‘ ನಿಬಿಡ ಹಗಲುಗನಸುಗಳು

      ದಿಬ್ಬಣದಂತೆ ಸಾಗುತ್ತಿವೆ…’

           ‘ ಕಂಡ ಕನಸುಗಳು 

             ದೀಪ ನಂದಿದಂತೆ

             ನಂದಿಹೋಗುತಿವೆ…’

        ‘ ನಿತ್ಯವೂ ದಿನಪೂರ್ತಿ ಜಂಜಾಡುತ್ತಾ

                     ಮತ್ತದೇ ವಿಫಲ ಯತ್ನದತ್ತ

           ಚಿತ್ತ ಹರಿಸುತ್ತ…’

      ಕವಿತೆ ಹೋರಾಟ- ನಿರಾಸೆಗಳನ್ನು ಹೇಳುವುದಾದರೂ ‘ಮರಳಿ ಯತ್ನವ ಮಾಡು’ ಎಂಬ ನಾಣ್ಣುಡಿಯನ್ನು ಅಂತರಾಳದಲ್ಲಿ ಪ್ರತಿಪಾದಿಸುತ್ತದೆ. 

     ಕವಿತೆಯೊಳಗೆ ಕೆಲವು ಭಾವಗಳು ಹಾಗೂ ಸಾಲುಗಳು ಪುನರಪಿ ಎನಿಸುವುದರಿಂದ ಕವಿ ಮತ್ತೊಮ್ಮೆ ಕಾವ್ಯವನ್ನು ಸಮಗ್ರವಾಗಿ ಪುನರಚಿಸುವುದು ಸೂಕ್ತವಾಗಬಹುದು ಎನ್ನುವುದು ನನಿನ ಅಭಿಪ್ರಾಯ. 

    ‘ಮೂಡಿ ಬರಲಿ’ ಎಂಬ ಮೂರು ಮೂರು ಸಾಲುಗಳಲ್ಲಿ ರಚಿತವಾಗಿರುವ ಈ ತ್ರಿಪದಿ ಪದ್ಯ ಕವಿಯ ಕವಿತ್ವಕ್ಕೆ ಸಾಕ್ಷಿ. ಇದೊಂದು ಸದಾಶಯದ ಕವಿತೆ. ಒಳಿತನ್ನು ಕಾಣುವ, ಒಳಿತನ್ನೇ ಬಯಸುವ ಪರಿಶುದ್ಧ ಕವಿ ಮನಸ್ಸನ್ನು ನಾವಿಲ್ಲಿ ಕಾಣಬಹುದು.

 

 ‘ಒಳ್ಳೆ ಬುದ್ಧಿಯಿಂದ 

    ಕಾಂತಿ ಹೊಂದಿ 

   ಕತ್ತಲೋಡಿ ಹೋಗಲಿ’

  ‘ದವಸ-ಧಾನ್ಯ

ಬೆಳೆದ ರೈತ 

ನಾಡಲೆಲ್ಲಾ ಮೆರೆಯಲಿ’

‘ ಮೇಲು – ಕೀಳು 

ಕೊಳಕು ಕೊಚ್ಚಿ

ಮನವು ಸ್ವಚ್ಛವಾಗಲಿ’

    ಹೀಗೆ ಪುಟ್ಟ ಪುಟ್ಟ ಸಾಲುಗಳಲ್ಲಿಯೇ ಉದಾತ್ತ ಭಾವವನ್ನು ಸಾರುವ ಈ ಕವಿತೆಯನ್ನು ಓದುಯಾದ ಮೇಲೆ ಮನಸ್ಸು ಹರ್ಷಗೊಳ್ಳದೇ ಇರಲಾರದು. 

       ವಿಸ್ತಾರ ಓದಿನೊಡನೆ ಬುದ್ಧಿ- ಭಾವಗಳ ಸಮನ್ವಯದೊಂದಿಗೆ ಈ ಕವಿ ಮತ್ತಷ್ಟು ಉತ್ತಮ ಕವನಗಳನ್ನು ರಚಿಸಲಿ ಎನ್ನುವ ಸದಾಶಯ ಪ್ರೀತಿಯೊಡನೆ 

ಶುಭಹಾರೈಸುವೆನು. 


ಪೂಜಾ ನಾಯಕ್ ಕವಿತೆಗಳು

ಕರುಣಾಮಯಿ

ಆಸುಪಾಸಲ್ಲಿ ಬಿದ್ದಿದ್ದ

ಕಟ್ಟಿಗೆಯ ತುಂಡಾಯ್ದು

ಕಲಬೆರಕೆ ಅಕ್ಕಿಯಲಿ ಬೆರೆತಿದ್ದ ಕಲ್ಲಾಯ್ದು

ಹೊಲದಲ್ಲಿ ಬೆಳೆದಿದ್ದ ಕಾಯಿಪಲ್ಲೆಯ ಕೊಯ್ದು

ಹೊತ್ತಿಗೆ ಸರಿಯಾಗಿ ಕೈತುತ್ತು ಉಣಿಸಿದವಳು

ಕರುಣಾಮಯಿ ನನ್ನಮ್ಮ…

ಕಡು ಬಡತನದ ಸಂಕಟದಲ್ಲೂ

ಆಶಾ-ಭರವಸೆಯ ನುಡಿಯಾಡಿ

ಸಾವಿರ ಕಷ್ಟ – ಕಾರ್ಪಣ್ಯಗಳ ನಡುವೆ

ತಾನೊಬ್ಬಳೇ ಹೋರಾಡಿ

ಹರಿದಿರುವ ಹರುಕು ಅಂಗಿಯ ತುಂಡಿಗೂ

ಮೊಂಡಾದ ಸೂಜಿಗೂ

ಮಧುರವಾದ ಬಾಂಧವ್ಯ ಬೆಸೆದವಳು

ಕರುಣಾಮಯಿ ನನ್ನಮ್ಮ..

ನಾ ಸೋತು ಕೂತಾಗ

ಕರುಳಬಳ್ಳಿಯ ಅಳಲು ತಾ ಮನದಲ್ಲೇ ಅರಿತು

ನನ್ನಲ್ಲಿ ಕೂಡ ಛಲದ ಬೀಜವನು ಬಿತ್ತಿ

ನನ್ನ ಸಾವಿರ ಕನಸುಗಳನು

ನನಸು ಮಾಡಲು ಹೊರಟು ನಿಂತವಳು

ಕರುಣಾಮಯಿ ನನ್ನಮ್ಮ..

ಕೂಡಿಟ್ಟ ಕಾಸಿನಲಿ

ಶಾಲೆಗೆ ಪೀಜು ತುಂಬಿ

ತನ್ನ ಹರುಕು ಸೀರೆಯ ಲೆಕ್ಕಿಸದೆ

ನನಗೊಂದು ಹೊಸ ಅಂಗಿಯ ಕೊಡಿಸಿ

ದೊಡ್ಡ ಅಧಿಕಾರಿಯ ಸ್ಥಾನದಲಿ

ತಾ ಕೂಸ ನೋಡಬೇಕೆಂದು

ಆಸೆಯಿಂದ ಕಾಯುತ್ತ ಕುಳಿತವಳು

ಕರುಣಾಮಯಿ ನನ್ನಮ್ಮ….

ತನ್ನ ಜೀವದ ಕೊನೆಯ ಉಸಿರಿನ ತನಕ

ತನ್ನ ಮಗುವಿನ ಸುಖಕ್ಕಾಗಿ, ಉದ್ಧಾರಕ್ಕಾಗಿ ದುಡಿಯುವ

ಆ ತಾಯಿಯ ಪ್ರೀತಿಗೆ ಎಣೆ ಎಂಬುದಿಹುದೇನು?….

ಅವಳ ಋಣ ತೀರಿಸಲು ಸಾಧ್ಯವಿಹುದೇನು?…

ಅವಳ ಸ್ಥಾನವನ್ನು ಬೇರೆಯವರು ತುಂಬಲು

ಅರ್ಹರೇನು?…

ಅವಳಿಲ್ಲದ ಒಂದು ಕ್ಷಣ ಈ ಭೂವಿಯು ಬರೀ ಶೂನ್ಯವಲ್ಲವೇನು?.


ಕಾವ್ಯವಾಗಿ ಕರಗುತ್ತೇನೆ

ನಾನರಿಯಲಾಗದ  ಶೂಲೆಗಳೇ

ಆಪ್ತವಾಗಿ ನನ್ನನ್ನು

ಬಿಗಿದಪ್ಪಿಕೊಂಡಾಗ

ಬದುಕು ಬರಡಾಗಿ

ಬೆಂಬಿಡದೆ ಕಾಡಿದಾಗ

ನನಗನಿಸುತ್ತದೆ,

ನಾನೊಮ್ಮೆ ಜ್ವಾಲಾಮುಖಿಯಂತೆ ಭುಗಿಲೇಳಬೇಕು!

ಕಳೆದುಕೊಂಡ ಮಧುರವಾದ ಪ್ರೇಮ

ನೆನಪಿನಾಳದಲಿ ಪುಟಿದೆದ್ದು ಕೂತಾಗ

ನನ್ನ ನಿಟ್ಟುಸಿರಿನಲೂ ಮಿಣುಕು ಹುಳುವಂತೆ ಮಿನುಗ ತೊಡಗಿದಾಗ

ನನಗನಿಸುತ್ತದೆ,

ನಾನೊಮ್ಮೆ ಅಗ್ನಿ ಪರ್ವತದಂತೆ ಧಗಧಗಿಸಿ ಉರಿಯಬೇಕು!

ಕಗ್ಗತ್ತಲ ವೇಳೆಯಲಿ

ನಿಶ್ಯಬ್ದ ನೂರಾರು ಬಯಕೆಗಳ ಹೊತ್ತ

ದೂರ ದೂರ ನೇರ ಹಾದಿಗಳಲಿ ನೀರವತೆಯೇ ಮುಗುಳ್ನಕ್ಕಾಗ

ನನಗನಿಸುತ್ತದೆ,

ನಾನೊಮ್ಮೆ ಶಿವನಂತೆ ರುದ್ರವಾಗಿ ನರ್ತಿಸಬೇಕು!

ಏಕಾಂತದಲಿ

ಮರೀಚಿಕೆಯಂತ ಕನಸುಗಳು ಎಡಬಿಡದೆ ತಿವಿದಾಗ

ಹಿಂದಿನ ಕಹಿ ನೆನಪೇ ತುಡಿದಾಗ

ಕಂಬನಿಯೇ ಬೇರೂರಿದಾಗ

ನನ್ನೆದೆಯ ಶರಧಿಯಲಿ

ಮತ್ತೆ ಮತ್ತೆ ಪ್ರವಾಹ ಬಂದೆರಗಿದಾಗ

ನನಗನಿಸುತ್ತದೆ,

ನಾನು ಹೀಗೆಯೆ ಕಾವ್ಯವಾಗಿ   ಮಂಜುಗಡ್ಡೆಯಂತೆ ಕರಗಿಬಿಡಬೇಕು!.


ಜಂಜಾಟದ ಬದುಕು

ಬೆಳಗೆದ್ದು ಎತ್ತೆತ್ತ ನೋಡಿದರೂ ಕಾಣದಾ ದಿಕ್ಕು

ಕಂಡರೇನಂತೆ, ಅತ್ತ ಹೋದರೆ ಸಿಗದಿರುವ ಹಕ್ಕು

ಕಡಿವಾಣವಿಲ್ಲದೇ ಕಡಲಂತೆ ಬೋರ್ಗರೆವ ಆಸೆಗಳ ಈಡೇರಿಕೆಗೋಸುಗ

ನಿತ್ಯವೂ ದಿನಪೂರ್ತಿ ಜಂಜಾಟ

ಮತ್ತದೇ ವಿಫಲ ಯತ್ನ.

ತಲೆಪೂರ್ತಿ ತುಂಬಿದಾ ನಿಬಿಡ ಹಗಲುಗನಸುಗಳು

ದಿಬ್ಬಣದಂತೆ ಸಾಗುತಿವೆ

ಕಂಡೆಲ್ಲ ಕನಸುಗಳು ದೀಪ ನಂದಿದಂತೆ ನಂದಿಹೋಗುತಿವೆ

ಸಹಿಸಲಾಗದ ಸಂಕಟ

ಎತ್ತೆತ್ತಲಿಂದಲೋ ಕುಠಾರದ ಮೊನಚಂತೆ,

ಕುಹಕ ಮಾತುಗಳೇಳುತಿವೆ

ಸುಡುತಿಹುದು ನನ್ನೆದೆಯ ವಾರಿಧಿಯು ಬೆಂಕಿಯಾಜ್ವಾಲೆಯಂತೆ.

ತಪ್ತ ಹೃದಯಕೆ ತಿರಸ್ಕಾರ

ಎಲ್ಲೆಲ್ಲೂ, ಮತ್ತೆಲ್ಲ ಯತ್ನ ನೆಲಕಚ್ಚಿಹೋದಾಗ

ಕೊನೆಗೇಗೋ ಹೋಗುವುದು ಮುಂದಕ್ಕೆ ಬದುಕು ಹುರುಪು-ಗಿರುಪುಗಳಿಲ್ಲ ಬದುಕಲ್ಲಿ

ನಶ್ವರವೇ ಕೊನೆಗೂ ಎಂಬ ಸಾರಕ್ಕೆ ಶಿರಬಾಗಿ

ದಿಕ್ಕು-ಹಕ್ಕುಗಳಿಲ್ಲದೇ

ಕಡಿವಾಣ-ಗಿಡಿವಾಣಗಳಿಲ್ಲದೇ ಬೋರ್ಗರೆವ ಆಸೆಗಳ ಈಡೇರಿಕೆಗೆ

ನಿತ್ಯವೂ ದಿನಪೂರ್ತಿ ಜಂಜಾಡುತ್ತಾ

ಮತ್ತದೇ ವಿಫಲ ಯತ್ನದತ್ತ ಚಿತ್ತ ಹರಿಸುತ್ತ.


ಮೂಡಿ ಬರಲಿ ( ಕವನ)

ಮೂಡಿ ಬರಲಿ

ಮೂಡಿ ಬರಲಿ

ದೇಶಪ್ರೇಮ ನಮ್ಮಲಿ..

      ಕೂಡಿ ಬರುವ             

      ಭಾವವೆಲ್ಲ

      ಜಗದಲಿಂದು ಚಿಮ್ಮಲಿ.

ಮೇಲು-ಕೀಳು

ಕೊಳಕು ಕೊಚ್ಚಿ 

ಮನವು ಸ್ವಚ್ಛವಾಗಲಿ.

    ಒಳ್ಳೆ ಬೀಜ

    ಪುಷ್ಟಿ ಗೊಬ್ಬರದಿಂದ

    ಬೆಳೆಯು ಬೆಳೆದು ನಿಲ್ಲಲಿ.

ದಾನ-ಧರ್ಮವ

ಜಗಕೆ ಸಾರಿ

ಒಳ್ಳೆ ಭಾವವು ತುಂಬಲಿ.

      ಒಳ್ಳೆ ಬುದ್ಧಿಯಿಂದ

      ಕಾಂತಿ ಹೊಂದಿ

      ಕತ್ತಲೋಡಿ ಹೋಗಲಿ.

ಊರಲೆಲ್ಲ

ಮಳೆಯು ಬಿದ್ದು

ಹಳ್ಳ-ಕೊಳ್ಳ ತುಂಬಿ ಹರಿಯಲಿ.

      ಒಳ್ಳೆ ಬೆಳೆಯು

      ಬೆಳೆದು ನಿಂತು

      ಎಲ್ಲ ಜನರು ಹಾಡಲಿ.

ದವಸ-ಧಾನ್ಯ

ಬೆಳೆದ ರೈತ

ನಾಡಲೆಲ್ಲ ಮೆರೆಯಲಿ.

    ರಾಮರಾಜ್ಯ

    ಪಡೆವ ಭಾಗ್ಯ

    ಇಂದು ನಮ್ಮ ದಾಗಲಿ.

*********************************************************

ಪರಿಚಯಬರಹ:

ವಸುಂಧರಾ ಕದಲೂರು

One thought on “ವಿದ್ಯಾರ್ಥಿ ಪ್ರತಿಭೆ

Leave a Reply

Back To Top