ನಾನೂ ರಾಧೆ

ನಾನೂ ರಾಧೆ

ಕವಿತೆ

ಪೂರ್ಣಿಮಾ ಸುರೇಶ್

ನಮ್ಮೂರಿನ ತುಂಬೆಲ್ಲಾ
ಅವರದೇ ಮಾತು- ಕತೆ
ಕಾಡಿದೆ ಅವರ ಕಾಣುವ
ತವಕದ ವ್ಯಥೆ

ಆ ಹಾಲು ತುಳುಕುವ ಕೊಡ
ಮೊಸರ ಮಡಕೆ
ಅವಳ ಅರ್ಧ ಬಿಚ್ಚಿದ ಮುಡಿ
ನವಿಲು ನಡಿಗೆಯ ಅಡಿ
ಅವಳ ಮಿದುನುಡಿಯ ಚೆದುರು
ಆ ವಿಜನ ಬೀದಿ
ದಟ್ಟನೆ ಬಿದಿರ ಮೆಳೆ

ಯಮುನೆಯ ಕಚಗುಳಿ ಇಡುವ
ಆ ಮೆಲ್ಲೆಲರು
ಅವನ ಗುನುಗಿನ ಬೆರಳು
ಅವಳ ಕಣ್ಣವೀಣೆಯ ಮೇಲೆ
ಅವಳ ಅಕ್ಷತ ಬಿಂಬ
ಅವನ ದಿಟ್ಟಿಯನು ತೊಳಗುವ
ಬೆಳಕಿನ ಕಂಬ

ಎಲ್ಲವನೂ ಇಣುಕಿ
ಕಾಣುವ ಬಯಕೆ
ಈ ಕಾತರ ದಗ್ಧ ಮನಕೆ,
ಗೋಕುಲದ ಬಾಗಿಲಲ್ಲೆ
ಒಲವ ಘಮಲು
ಪರಿಸರದ ತುಂಬ
ರಾಸಲೀಲೆಯ ಅಮಲು
ಒಳಗೆ ಸುಳಿದಾಡಿದೆ
ಅಲ್ಲಲ್ಲಿ ಎಡತಾಕಿದೆ
ರಾಧಾಕೃಷ್ಣರ ಅರಸುತ

ಸಿಕ್ಕಿದ ಕೃಷ್ಣ ಮುಗುಳ್ನಕ್ಕ
ಹಾಡ ಜೇನಾಗಿ
ಎದೆಯ ಒಳಹೊಕ್ಕ
ಹಾಯೆನಿಸಿದೆ ಮನದೊಳಗೆ
ಪ್ರೇಮ ಕೊಡೆ ಆಸರೆ ಮಳೆಯೊಳಗೆ

ಈಗ ಕೃಷ್ಣನ
ಪ್ರೇಮ ಕಾವ್ಯಕ್ಕೆ
ನಾನೂ ರಾಧೆ.

**************************

8 thoughts on “ನಾನೂ ರಾಧೆ

Leave a Reply

Back To Top