Category: ಅಂಕಣ

ಅಂಕಣ

ಸ್ವಾತ್ಮಗತ

ಬಂಡಾಯ ಸಾಹಿತ್ಯದ ವಿವಿಧ ಮಜಲುಗಳು..! ಶಿವು ಲಕ್ಕಣ್ಣವರ ಬಂಡಾಯ ಸಾಹಿತ್ಯ ಆಧುನಿಕ ಕನ್ನಡ ಸಾಹಿತ್ಯದ ಈಚಿನ ಹಂತ… ನವೋದಯ, ಪ್ರಗತಿಶೀಲ, ನವ್ಯಗಳ ಅನಂತರದ ಸಾಹಿತ್ಯ ಚಳವಳಿ ಇದು. ಇದನ್ನು ನವೋತ್ತರ ಸಾಹಿತ್ಯವೆಂದೂ ಕರೆಯಲಾಗಿದೆ. ಎಪ್ಪತ್ತರ ದಶಕದ ಉತ್ತರಾರ್ಧದಲ್ಲಿ ಕನ್ನಡ ಸಾರಸ್ವತ ಪ್ರಪಂಚದಲ್ಲಿ ಕೇಳಿಬರುತ್ತಿರುವ, ಎಲ್ಲ ಪ್ರಗತಿಪರ ಹಾಗೂ ದಲಿತ ಬರಹಗಾರರಿಂದ ಸೃಷ್ಟಿಯಾದ ಮತ್ತು ಸೃಷ್ಟಿಗುತ್ತಿರುವ ಸಾಹಿತ್ಯವಿದು. ಬಂಡಾಯ ಸಾಹಿತ್ಯದ ಉಗಮ– 1970 ರ ದಶಕದಲ್ಲಿ ಅನೇಕ ಸಾಮಾಜಿಕ, ರಾಜಕೀಯ ಘಟನೆಗಳು ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆಗಳನ್ನು ತಂದವು. ಬದುಕಿನಲ್ಲಿ ಉಂಟಾದ ಕೋಲಾಹಲದಿಂದಾಗಿ ಸಾಹಿತ್ಯದಲ್ಲೂ ಬದಲಾವಣೆ ಅನಿವಾರ್ಯವೆನಿಸಿ ಬಂಡಾಯದ ದನಿ ಮೊಳಗಿತು. ಶತಶತಮಾನದಿಂದ ಸಾಮಾಜಿಕವಾಗಿ, ಆರ್ಥಿಕವಾಗಿ, ಶೋಷಣೆಗೆ, ಅಪಮಾನಕ್ಕೆ, ಕ್ರೌರ್ಯಕ್ಕೆ ಬಲಿಯಾದ ಪ್ರಜ್ಞಾವಂತ ಲೇಖಕರು ಬರೆದ ಪ್ರತಿಭಟನಾ ಸಾಹಿತ್ಯವೇ ನಿಜವಾದ ದಲಿತ ಸಾಹಿತ್ಯವೆನಿಸಿತು. ದಲಿತ ಸಾಹಿತ್ಯವನ್ನು ಒಳಗೊಂಡುದೇ ಬಂಡಾಯ ಸಾಹಿತ್ಯ. ಸಾಹಿತ್ಯ ಸೃಷ್ಟಿ ಖುಷಿಗಾಗಿ ಅಲ್ಲ. ಸಾಂಸ್ಕೃತಿಕ ಬದಲಾವಣೆಗಳಿಗಾಗಿ ಸಂಸ್ಕೃತಿಯಲ್ಲಿ ಪ್ರತಿಷ್ಠಾಪಿತ ಮೌಲ್ಯಗಳು ಜಡವಾದಾಗ, ಪ್ರತಿಗಾಮಿಯಾದಾಗ ಅವುಗಳ ವಿರುದ್ಧ ಹೋರಾಡುವುದೇ ಬಂಡಾಯವಾಗಿದೆ. ಅದು ಸಾಹಿತ್ಯದಲ್ಲಿ ಅಭಿವ್ಯಕ್ತಗೊಂಡಾಗ ಬಂಡಾಯ ಸಾಹಿತ್ಯವೆನಿಸಿದೆ. ಈ ದಿಸೆಯಲ್ಲಿ ಸಂಘಟನೆಗೊಂಡ ಬಂಡಾಯ ಸಾಹಿತಿಗಳ ಸಮ್ಮೇಳನ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿರೋಧಿಸುತ್ತ, 1979 ಮಾರ್ಚ್ 10-11ರಂದು ಬೆಂಗಳೂರಿನಲ್ಲಿ ಸಮಾವೇಶಗೊಡು ಈ ಚಳವಳಿಗೆ ಒಂದು ಸ್ಪಷ್ಟರೂಪ ಕೊಡಲು ಯತ್ನ ನಡೆಸಿತು. ಪ್ರಜಾಪ್ರಭುತ್ವದ ರಕ್ಷಣೆಗೆ ಹಾಗೂ ವಿಸ್ತರಣೆಗೆ ಮತ್ತು ಶೋಷಣೆಯನ್ನು ಸಮರ್ಥಿಸುವ ಯಜಮಾನ ಸಂಸ್ಕೃತಿಯ ವಿರುದ್ಧ ಹೋರಾಟಕ್ಕೆ ಮತ್ತು ಶೋಷಿತ ಜನತೆಯ ಪರವಾದ ಹೋರಾಟದ ಸಾಹಿತ್ಯ ಸೃಷ್ಟಿಗಾಗಿ ಖಡ್ಗವಾಗಲಿ ಕಾವ್ಯ ಎಂಬ ಘೋಷಣೆಗಳನ್ನು ಮೊಳಗಿಸಿತು. ಇವರಲ್ಲಿ ಪ್ರಮುಖರಾದವರು ಪಿ.ಲಂಕೇಶ್ ರು. ಹೀಗಂದರೆ ತಪ್ಪಾಗಲಿಕ್ಕಿಲ್ಲ. ಇದರ ಗುರಿ , ನಿಲುವು– ಎಲ್ಲಿ ರಮ್ಯ-ನವ್ಯ ಪಂಥಗಳು ಸೋತಿವೆಯೋ ಅಲ್ಲಿ ಬಂಡಾಯ ಸಾಹಿತ್ಯ ತನ್ನ ಹೊಣೆಗಾರಿಕೆಯನ್ನು ಗುರುತಿಸಲು ಹೊರಟಿದೆ. ಬಂಡಾಯ ಸಾಹಿತ್ಯವೆಂದರೆ ಕೇವಲ ಸೌಂದರ್ಯೋಪಾಸನೆಯಲ್ಲ ಅಥವಾ ಬೌದ್ಧಿಕ ತುಡಿತವೂ ಅಲ್ಲ, ಅದೊಂದು ಸಾಮಾಜಿಕ ಹೊಣೆಗಾರಿಕೆಯಾಗಿದೆ. ಇಂದು ಸಮಾಜವನ್ನು ಕಿತ್ತು ತಿನ್ನುತ್ತಿರುವ ಅಧೋಗತಿಗೆ ತಳ್ಳಿರುವ ಯಜಮಾನ ಸಂಸ್ಕೃತಿಯ ಮುಖ್ಯ ಅಂಶಗಳಾದ ಜಾತಿ ಮತ್ತು ವರ್ಗಗಳ ವಿರುದ್ಧ ಮತ್ತು ಶೋಷಣೆಯ ವಿರುದ್ಧ ಶ್ರಮ ಜೀವಿಗಳನ್ನು ಬಂಡಾಯಕ್ಕೆ ಅನುಗೊಳಿಸುವುದೇ ಬಂಡಾಯ ಸಾಹಿತ್ಯದ ಗುರಿಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನಂಥ ಸಂಸ್ಥೆ ಸಾಂಪ್ರದಾಯಕ ಜಡತ್ವವನ್ನು ತೋರಿಸಿದಾಗ ಅದನ್ನು ವಿರೋಧಿಸುವ ಸಂಘಟನಾತ್ಮಕ ಹೋರಾಟ ಬಂಡಾಯದ್ದು. ಶೋಷಿತ ಜನತೆಯ ಪರವಾದ ನಿಲವನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಗೊಳಿಸುವುದು ಮತ್ತು ಸಾಹಿತಿ ತನ್ನ ಸಾಮಾಜಿಕ ರಾಜಕೀಯ ಪ್ರಜ್ಞೆಯಿಂದ ಅಸ್ಪೃಶ್ಯತೆ, ಜಾತಿಪದ್ಧತಿ, ಲಿಂಗಭೇದ, ವರ್ಗಭೇದ ನೀತಿಯನ್ನು ವಿರೋಧಿಸುವುದು ಎಂದು ತಿಳಿಸಿ ಬಂಡಾಯ ಸಾಹಿತ್ಯಕ್ಕೆ ತನ್ನದೇ ಆದ ಒಂದು ತಾತ್ವಿಕ ನೆಲೆಯಿದೆಯೆಂದು ಹೇಳಲಾಯಿತು. ಈ ಸಾಹಿತ್ಯ ಪರಂಪರೆಯನ್ನು ಒಟ್ಟಾಗಿ ವಿರೋಧಿಸುವುದಿಲ್ಲವಾದರೂ ಸಂಪ್ರದಾಯದ ಸ್ಥಗಿತತೆಯನ್ನೂ ಮಾನವ ವಿರೋಧಿ ನೀತಿಯನ್ನೂ ವಿರೋಧಿಸುತ್ತದೆ. ಪರಂಪರೆಯ ಜೊತೆಗೆ ಸಂಬಂಧ ಮತ್ತು ಮುಂದುವರಿಕೆ ಬಂಡಾಯದ ನಿಲುವಾಗಿದೆ. ಬಂಡಾಯ ಸಾಹಿತ್ಯ ಎಡಪಂಥೀಯ ವಿಚಾರಧಾರೆಗೆ, ಕಲಿತ ಕಾಳಜಿಗಳಿಗೆ ಬದ್ಧವಾದ ಸಾಹಿತ್ಯವೂ ಆಗಿದೆ. ಸಾಮಾಜಿಕ ಜವಾಬ್ದಾರಿ ಲೇಖಕನಿಗೆ ಇರಬೇಕು ಮತ್ತು ಕಾಲಕ್ಕೆ ಅವನು ಬದ್ಧನಾಗಿರಬೇಕಾಗಿರುವುದು ಮುಖ್ಯವಾಗಿದೆ ಎಂಬುದು ಬಂಡಾಯದ ಬಹು ಮುಖ್ಯ ಗುರಿಯಾಗಿದೆ. ಇದರಿಂದಾಗಿ ಲೇಖಕ ಆಯಾಕಾಲದ ಧೋರಣೆಗೆ ಪ್ರತಿಕ್ರಿಯಿಸುತ್ತಾನೆ. ಅಭಿವ್ಯಕ್ತಿಯಲ್ಲಿ ಯಾವ ಮಾರ್ಗವನ್ನೇ ಅನುಸರಿಸಲಿ ಕ್ರೂರ ವ್ಯವಸ್ಥೆಯ ವಿರೋಧಿ ನೆಲೆಯೊಂದು ಈ ಸಾಹಿತ್ಯದ ಹಿನ್ನೆಲೆಯಲ್ಲಿರುತ್ತದೆ. ‘ಬಂಡಾಯ ಸಾಹಿತಿಗಳು ಯಥಾಸ್ಥಿತಿವಾದದ ವಿರೋಧಿಗಳು ಸಮಾಜ ಬದಲಾವಣೆಯ ಧೋರಣೆಗೆ ಬದ್ಧರು. ಇದಲ್ಲದೇ ಜನಪರ ಹೋರಾಟಗಳೊಂದಿಗೆ ಕ್ರಿಯಾತ್ಮಕ ಸಂಬಂಧ ಬೆಳೆಸಲು ಮತ್ತು ಪ್ರಧಾನವಾಗಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಎಡಪಂಥೀಯ ವಿಚಾರಧಾರೆಯನ್ನು ನೆಲೆಗೊಳಿಸಲು ಬದ್ಧರಾದವರು. ಇಷ್ಟಾಗಿಯೂ ಈ ಸಾಹಿತ್ಯ ಯಾವೊಬ್ಬ ನಿರ್ದಿಷ್ಟ ವ್ಯಕ್ತಿಯ ಸಿದ್ಧಾಂತಗಳನ್ನು ನೆಚ್ಚಿ ನಿಂತಿಲ್ಲವೆಂದು ಹೇಳಲಾಗುತ್ತದೆ. ಕಾರ್ಲ್ ಮಾಕ್ರ್ಸ್, ಲೋಹಿಯಾ, ರಾಮಸ್ವಾಮಿ ನಾಯ್ಕರ್, ಅಂಬೇಡಕರ್, ಜಯಪ್ರಕಾಶ ನಾರಾಯಣ್ ಇನ್ನೂ ಅನೇಕವರೆಲ್ಲ ಈ ಸಾಹಿತ್ಯದ ವ್ಯಕ್ತಿ ಶಕ್ತಿಗಳು ಆಗಿದ್ದಾರೆ ಎನ್ನಲಾಗಿದೆ ಅನ್ನುವುದುಕಿಂತಲೂ ಹೌದು ಎಂಬುದೇ ಹೆಚ್ಚು ಸೂಕ್ತ. ಬಂಡಾಯ ಸಾಹಿತಿ ಸಾಮಾಜಿಕ ಸಂಬಂಧಗಳ ಹಿಂದಿರುವ ಮೋಸಗಳನ್ನು, ಅಮಾನವೀಯತೆಯನ್ನು ಗುರುತಿಸಿ ಸಮಾಜ ವ್ಯವಸ್ಥೆಯ ವಿರುದ್ಧ ಸ್ಫೋಟಿಸುತ್ತಾನೆ. ಈ ಸ್ಫೋಟನೆಯ ಆಳದಲ್ಲಿ ಹೊಸ ಸಮಾಜ ರಚನೆಯ ಕಳಕಳಿ, ಅಸ್ತಿತ್ವದಲ್ಲಿ ಇರುವ ಅಸಮಾನ ಸಮಾಜವನ್ನು ಕುರಿತು ಉಗ್ರವಾದ ಅಸಹನೆವು ಇದರೊಂದಿಗೆ ಒಂದರೊಡನೊಂದು ಬೆಸೆದುಕೊಂಡಿರುತ್ತವೆ. ಅಸಮಾನತೆ, ಅನ್ಯಾಯ, ಶೋಷಣೆಗಳನ್ನೇ ಮೂಲಧನ ಮಾಡಿಕೊಂಡು ಯುಗಯುಗಗಳಿಂದ ಬಡವರನ್ನು ಮತ್ತು ಜಾತಿಯ ದೃಷ್ಟಿಯಿಂದ ಹೀನರಾದವರನ್ನು ತುಳಿಯುತ್ತ ಬಂದ ಯಜಮಾನ ಸಂಸ್ಕೃತಿಯ ವಿರುದ್ಧ ಬಂಡೇಳುವ ಕೆಚ್ಚು ಮತ್ತು ಅಂಥ ಪ್ರತಿಭಟನೆಯ ಹಿಂದಿರುವ ಪ್ರಾಮಾಣಿಕತೆಯೇ ಬಂಡಾಯ ಸಾಹಿತ್ಯದ ಮೂಲ ನೆಲೆ ಎಂದೇ ಹೇಳಬೇಕು. ಈ ಮೇಲಿನ ಅಂಶಗಳು ಬಂಡಾಯ ಸಾಹಿತ್ಯದ ನೆಲೆ ಬೆಲೆಯನ್ನು ಸ್ಥೂಲವಾಗಿ ತಿಳಿಸುತ್ತವೆ. ಪ್ರಾಚೀನ ಸಾಹಿತ್ಯದಲ್ಲಿ ಬಂಡಾಯ– ಪ್ರಾಚೀನ ಸಾಹಿತ್ಯದಲ್ಲೂ ಬಂಡಾಯದ ದನಿಯನ್ನು ಗುರುತಿಸಲಾಗಿದೆ. ದಾಸ ಸಾಹಿತ್ಯ, ವಚನ ಸಾಹಿತ್ಯ, ನವೋದಯ ಸಾಹಿತ್ಯಗಳೂ ಅವುಗಳ ಮಿತಿಯಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಬಂಡಾಯದ ಆಶಯವನ್ನು ವ್ಯಕ್ತಪಡಿಸಿರುವುದನ್ನು ಈ ಸಾಹಿತ್ಯ ಗಮನಿಸುತ್ತದೆ. ಮತ್ತು ಗಮನಿಸುತ್ತದೆ. ವಚನ ಸಾಹಿತ್ಯ– ವಚನ ಸಾಹಿತ್ಯ ಯಜಮಾನ ಸಾಹಿತ್ಯದ ವಿರುದ್ಧ ಬಂಡೆದ್ದ ಸಾಹಿತ್ಯ ಚಳವಳಿಯಾಗಿದೆ. ಹೊಸ ಬದುಕಿನ ತುಡಿತಕ್ಕೆ ಹಾತೊರೆದ ವಚನಕಾರರು ಇದ್ದ ವ್ಯವಸ್ಥೆಯನ್ನು ಸೀಳಿ ಅದರ ಒಡಲಲ್ಲೇ ಹೊಸ ವ್ಯವಸ್ಥೆಯನ್ನು ನಿರ್ಮಿಸಿದ್ದು ಸಾಮಾನ್ಯವಾದ ಸಾಧನೆಯಲ್ಲ. ಏಕದೇವೋಪಾಸನೆಯ ತಳಹದಿಯ ಮೇಲೆಯೇ ಎಲ್ಲರೂ ಸಂಘಟಿತರಾಗಿ ಜಾತಿ ಪದ್ಧತಿ, ಅಸಮಾನತೆ ಮತ್ತು ಮೂಢ ನಂಬಿಕೆಗಳನ್ನು ವಿರೋಧಿಸಿ ದುಡಿಯುವ ವರ್ಗಕ್ಕೊಂದು ಹೊಸ ಜಾಗೃತಿಯನ್ನು ತಂದುಕೊಟ್ಟರು. ಅಂದಿನ ಸಂದರ್ಭದ ಈ ಸಾಧನೆ ವಚನಕಾರರ ಬಂಡಾಯದ ಫಲವೇ ಆಗಿದೆ ಎನ್ನುತ್ತಾರೆ ನಮ್ಮ ಸಾಹಿತಿಗಳು. ದಾಸ ಸಾಹಿತ್ಯ– ದಾಸ ಸಾಹಿತ್ಯ ಪ್ರಗತಿ ಮನೋಭಾವದಿಂದ ರಚಿತವಾದುದು. ಸಾಮಾಜಿಕ ವಿಡಂಬನೆ, ಮಡಿವಂತಿಕೆಯ ವಿರೋಧಗಳನ್ನು ಪ್ರಕಟಿಸಿ ಸಾಮಾನ್ಯರ ಬದುಕನ್ನು ಹಸನು ಮಾಡಿದೆ. ಸರ್ವಜ್ಞ ತನ್ನ ತ್ರಿಪದಿಗಳಲ್ಲಿ ಬದುಕಿನ ಜಡತ್ವಕ್ಕೆ ಚಾಟಿ ಎಸೆದು, ಮೂಢನಂಬಿಕೆ, ಜಾತಿ ಪದ್ಧತಿಗಳನ್ನು ವೈಯಕ್ತಿಕ ನೆಲೆಯಲ್ಲೇ ವಿರೋಧಿಸಿ ಪ್ರಗತಿಪರ ಎನಿಸಿದ್ದಾನೆ. ನವೋದಯ, ನವ್ಯ ಸಾಹಿತ್ಯ– ಇತ್ತೀಚಿನ ನವೋದಯ, ನವ್ಯ ಸಾಹಿತ್ಯ ಚಳವಳಿಗಳೂ ತಮ್ಮ ಮಿತಿಯಲ್ಲೇ ಶೋಷಣೆ, ಜಡ ಸಂಪ್ರದಾಯಗಳ ವಿರೋಧಿ ನಿಲುವನ್ನು ಪ್ರಕಟಿಸಿವೆ. ನವೋದಯದ ಜೊತೆಯಲ್ಲೇ ಬಂದ ಪ್ರಗತಿಶೀಲ ಚಳವಳಿ ಜನತೆ ಸಾಮಾಜಿಕ ಹೊಣೆಗಾರಿಕೆಯ ಕಡೆ ಮುಖ ಮಾಡುವಂತೆ ಮಾಡಿದೆ. ಇಷ್ಟು ದೀರ್ಘ ಪರಂಪರೆಯನ್ನು ಪಡೆದ ಈ ಸಾಹಿತ್ಯ ಹೊಸ ಸಾಂಸ್ಕೃತಿಕ ಪರಂಪರೆಯ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದೆ. ಪ್ರಮುಖ ಸಾಹಿತಿಗಳು ಮತ್ತು ಅವರ ಕೃತಿಗಳು– ಈ ಸಾಹಿತ್ಯದಲ್ಲಿ ಕೃಷಿ ನಡೆಸಿದ ಮತ್ತು ನಡೆಸುತ್ತಾ ಬಂದಿರುವ ಅಲ್ಲದೇ ನಡೆಸುತ್ತಿರುವ ಪ್ರಮುಖರಲ್ಲಿ ಬರಗೂರು ರಾಮಚಂದ್ರಪ್ಪನವರು ಒಬ್ಬರು. ನವ್ಯದ ಕಡೆಗಾಲದಲ್ಲಿ ಬರವಣಿಗೆ ಆರಂಭಿಸಿ ನವ್ಯದ ಪ್ರಭಾವಕ್ಕೆ ಒಳಗಾಗದ ಸ್ವಂತಿಕೆಯನ್ನು ಮೆರೆದರು. ನವ್ಯವೆಂದೇ ಹೇಳಬಹುದಾದ ‘ಮರಕುಟಿಗ’ ಎನ್ನುವ ಅವರ ಕವನ ಸಂಕಲನದಲ್ಲಿ ಸಾಮಾಜಿಕ ನಿಷ್ಠೆತೆಯ ಕುರಿತಂತೇ ಕವಿತೆಗಳಿವೆ. ತಮ್ಮ ಅಭಿವ್ಯಕ್ತಿಯ ಮಾಧ್ಯಮವಾಗಿ ಸಣ್ಣ ಕಥಾ ಕ್ಷೇತ್ರವನ್ನು ಆರಿಸಿಕೊಂಡ ಇವರು ‘ಸುಂಟರಗಾಳಿ’, ‘ಕಪ್ಪು ನೆಲದ ಕೆಂಪು ಕಾಲು’ ಕಥಾ ಸಂಕಲನಗಳನ್ನೂ, ಸೂತ್ರ ‘ಹುತ್ತ’, ‘ಒಂದು ಊರಿನ ಕಥೆ’, ‘ಸೀಳು ನೆಲ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಬಡತನ, ಶೋಷಣೆ, ಮೂಢನಂಬಿಕೆ ಇವಗಳನ್ನು ಕೇಂದ್ರವಾಗಿಟ್ಟುಕೊಂಡೇ ಸುಂಟರಗಾಳಿಯ ಕತೆಗಳು ರಚಿತವಾಗಿವೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ವೈರುಧ್ಯಗಳು ಇವುಗಳ ಜೊತೆ ಮಾನವ ಸಂಬಂಧಗಳು ಇವುಗಳಿಂದ ಮೂಡಿ ಬರುವ ಬಂಡಾಯದ ವಿವಿಧ ಮಜಲುಗಳನ್ನು ‘ಕಪ್ಪು ನೆಲದ ಕೆಂಪು ಕಾಲು’ ಕಥಾ ಸಂಕಲನದಲ್ಲಿ ನಾವು ಕಾಣಬಹುದು. ಬರಗೂರರ ಕಾದಂಬರಿಗಳು ಸ್ವಾತಂತ್ರ್ಯೋತ್ತರ ಹಳ್ಳಿಗಳನ್ನೂ, ನಗರಗಳನ್ನೂ ಕೇಂದ್ರವಾಗಿರಿಸಿಕೊಂಡ ಪ್ರಯತ್ನಗಳಾಗಿವೆ. ಅವರು ತಮ್ಮ ಕಾದಂಬರಿಗಳಲ್ಲಿ ಸಮಾಜದ ಕೊಳಕುಗಳನ್ನು ತೋರಿಸಿ. ಶೋಷಣೆ ದಬ್ಬಾಳಿಕೆಗಳ ಮುಖಾಮುಖಿ ಸಂಘರ್ಷವನ್ನು ಕಲಾತ್ಮಕವಾಗಿ ಮುಂದಿಡುತ್ತಾರೆ. ‘ಒಂದು ಊರಿನ ಕತೆ’ ಅವರೇ ಹೇಳುವಂತೆ ಜೀವನಾನುಭವ ಮತ್ತು ವಾಸ್ತವದ ಗ್ರಹಿಕೆಗಳ ಆಧಾರದ ಮೇಲೆಯೇ ನಿಂತಿದೆ. ತ್ರಿಕೋನಾಕಾರದ ಜಾತಿ ವ್ಯವಸ್ಥೆ ಪಂಚಾಯ್ತಿಯ ಅಧಿಕಾರ ಗ್ರಹಣಕ್ಕಾಗಿ ಒಳಗೊಳಗೇ ತಿಕ್ಕಾಡುವುದು. ಶ್ರೀಮಂತವರ್ಗ ಪಂಚಾಯ್ತಿಯಲ್ಲಿ ಸ್ಥಾನ ಗಿಟ್ಟಿಸಲು ಹೆಣಗಾಡುವುದು. ಅದಕ್ಕಾಗಿ ಮುಗ್ಧ ಹಾಗೂ ದರಿದ್ರ ದಲಿತರನ್ನೇ ಬಲಿಕೊಡಲು ಮುಂದಾಗುವುದು ಈ ಇದು ಸ್ವತಂತ್ರ ಭಾರತದ ಹಳ್ಳಿಗಳ ದೊಡ್ಡದುರಂತವೇ ಆಗಿದೆ. ಈ ದುರಂತದ, ಹೊಲಸು ರಾಜಕೀಯದ ನೈಜ ಚಿತ್ರಣ ಈ ಕಾದಂಬರಿಯಲ್ಲಿ ದಟ್ಟವಾಗಿ ಮೂಡಿಬಂದಿದೆ. ವ್ಯವಸ್ಥೆಯ ಒಳತಿಕ್ಕಾಟಗಳು ಇವರ ಕಾದಂಬರಿಗಳಲ್ಲಿ ತಮ್ಮಷ್ಟಕ್ಕೆ ತಾವೇ ವ್ಯಕ್ತವಾಗುವ ಬಗೆ ಕನ್ನಡದಲ್ಲಿ ಹೊಸದು ಎಂದೇ ಹೇಳಬಹುದು. ಬಂಡಾಯ ಸಾಹಿತಿಗಳಲ್ಲಿ ಮುಖ್ಯರಾದ ಇನ್ನೊಬ್ಬ ಲೇಖಕರೆಂದರೆ ದೇವನೂರು ಮಹಾದೇವ ಅವರು. ‘ದ್ಯಾವನೂರು’ ಎಂಬ ಕಥಾ ಸಂಕಲನ ಮತ್ತು ‘ಒಡಲಾಳ’ ಎಂಬ ಕಿರು ಕಾದಂಬರಿಯನ್ನು ಪ್ರಕಟಿಸಿರುವ ಇವರು ಅಸಮಾನತೆ. ಶೋಷಣೆ, ಅಮಾನವೀಯತೆಗಳ ಬಗ್ಗೆ ವಿಷಾದದಿಂದ ಮತ್ತು ನೋವಿನಿಂದ ತಮ್ಮ ಪ್ರತಿಭಟನೆಯ ಧ್ವನಿ ಎತ್ತಿದ್ದಾರೆ. ಇವರು ತಾತ್ತ್ವಿಕವಾಗಿ ಶೋಷಣೆಯ ವಿರೋಧಿ ಎಂಬುದು ನಿಜವಾದರೂ ಇವರ ಕತೆಗಳಲ್ಲಿ ಸಂಘರ್ಷಕ್ಕಿಂತ ಶೋಷಣೆಗೀಡಾದವರ ಅಸಹಾಯಕ ಸ್ಥಿತಿಗತಿಗಳನ್ನು ಹೇಳುವ ಕಾಳಜಿ ಹೆಚ್ಚು. ‘ಅಮಾಸ’ ‘ಮಾರಿಕೊಂಡವರು’ ‘ಮೂಡಲಸೀಮೇಲೆ ಕೊಲೆಗಿಲೆ’ ಮುಂತಾದ ಕತೆಗಳು ಕಲೆಗಾರಿಕೆ, ವಸ್ತುವಿನ ದೃಷ್ಟಿಯಿಂದ ಉತ್ತಮ ಕತೆಗಳಾಗಿವೆ. ‘ಒಡಲಾಳ’ ಅದರ ವಿವರಣೆಯ ಸಮಗ್ರ ರೂಪ ಹಾಗೂ ತಂತ್ರದಿಂದಾಗಿ ಹೆಚ್ಚು ಗಮನಾರ್ಹ ಕೃತಿಯಾಗಿದೆ. ಕ್ರೌರ್ಯ ಹಾಗೂ ಅಧಿಕಾರಿಶಾಹಿಯಿಂದ ಒಂದು ಕುಟುಂಬದ ಮೇಲಾಗುವ ಪರಿಣಾಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಈ ಕೃತಿ ಚಿತ್ರಿಸುತ್ತದೆ. ಮೇಲಿನ ಲೇಖಕರಷ್ಟೇ ಪ್ರಮುಖರಾದ ಮತ್ತೊಬ್ಬ ಬರಹಗಾರರೆಂದರೆ ಕವಿ ಸಿದ್ಧಲಿಂಗಯ್ಯನವರು, ‘ಹೊಲೆಮಾದಿಗರ ಹಾಡು’, ‘ಸಾವಿರಾರು ನದಿಗಳು’, ‘ಪಂಚಮ’, ‘ನೆಲಸಮ’ ಮುಂತಾದ ಕೃತಿಗಳನ್ನು ಪ್ರಕಟಿಸಿರುವ ಈ ಕವಿ ಆವೇಶದಿಂದ ಕಾವ್ಯ ಕ್ರಿಯೆಯಲ್ಲಿ ತೊಡಗುತ್ತಾರೆ. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬ ಸಂಘಟನಾತ್ಮಕ ಧೋರಣೆಯುಳ್ಳ ಈ ಕವಿಯ ಕಾವ್ಯದ ಛಂದೋ ವೈವಿಧ್ಯ ಅಪೂರ್ವವಾದುದು. ‘ಅಲ್ಲೇ ಕುಂತವರೆ’ ಖಂಡ ಕಾವ್ಯ ವಿಶೇಷವಾಗಿ ಉಲ್ಲೇಖಾರ್ಹವಾದುದು. ನವ್ಯ ಸಾಹಿತ್ಯದಲ್ಲಿ ಯಶಸ್ಸು ಪಡೆದು ಪರಂಪರೆಯ ಜೊತೆ ಜೊತೆಯಲ್ಲೇ ಚಿಂತನ ಶೀಲತೆಯನ್ನು ದಕ್ಕಿಸಿಕೊಂಡ ಕವಿ ಚಂದ್ರಶೇಖರ ಪಾಟೀಲರು. ತುರ್ತುಪರಿ ಸ್ಥಿತಿಯನ್ನು ವಿರೋಧಿಸಿ ಜೈಲನ್ನೂ ಕಂಡು ಇವರು ವರ್ತಮಾನಕ್ಕೆ ತೆರೆದ ಹೃದಯದವರಾಗಿ ಹೊಸ ಸಾಹಿತ್ಯ ಚಳವಳಿಯಲ್ಲಿ ತಮ್ಮನ್ನು ಗುರುತಿಸಿಕೊಂಡು ‘ಗಾಂಧೀಸ್ಮರಣೆ’, ‘ಓ ಎನ್ನ ದೇಶಬಾಂಧವರೆ’ ಮುಂತಾದ ಕವನ ಸಂಕಲಗಳನ್ನು ಪ್ರಕಟಿಸಿದರು. ಅಲ್ಲದೇ ಇವರೇ ಸಂಪಾದಿಸಿದ ‘ಗಾಂಧಿ’ ಮತ್ತು ‘ಜೂನ್ 24 ಮಾರ್ಚ್ 22’ ಎಂಬ ಕವನ ಸಂಕಲನಗಳು ರಾಜಕೀಯ ಜಾಗೃತಿಯ ಪ್ರತೀಕಗಳಾಗಿವೆ. ಸಮಾಜದ ಕೆಡಕುಗಳತ್ತ ಕಣ್ಣು ಹಾಯಿಸಿ, ಅವನ್ನು ಗೇಲಿಗೆಬ್ಬಿಸಿ ವಿಡಂಬನೆಗಳ ಮೂಲಕ ಚುಚ್ಚುವುದನ್ನು ಇವರ ಕೃತಿಗಳಲ್ಲಿ ಕಾಣಬಹುದು. ಅಲ್ಲದೇ ಮುಖ್ಯವಾಗಿ ಬೆಸಗರಹಳ್ಳಿ ರಾಮಣ್ಣ ಮತ್ತು ಕಾಳೇಗೌಡ ನಾಗವಾರ  ಇವರು ಬಂಡಾಯ ಸಾಹಿತ್ಯದ ಬಹು ಸತ್ತ್ವಶಾಲೀ ಲೇಖಕರು. ರಾಮಣ್ಣನವರ ‘ಒಂದು ಹುಡುಗನಿಗೆ ಬಿದ್ದ ಕನಸು’ ಶೋಷಣೆಯ ವಿವಿಧ ಮುಖಗಳನ್ನು ಚಿತ್ರಿಸುತ್ತದೆ. ಜನಪದ ಭಾಷೆಯನ್ನು ದುಡಿಸಿಕೊಳ್ಳುವುದರಲ್ಲಿ ಇವರ ಕತೆಗಳು ಯಶಸ್ವಿಯಾಗಿವೆ. ಗಾಂಧಿ, ಪ್ರಜಾಪ್ರಭುತ್ವ, ಗರ್ಜನೆ, ಕತೆಗಳು ತಮ್ಮ ಪ್ರತಿಭಟನೆಯ ಧೋರಣೆಯನ್ನು ವ್ಯಕ್ತಮಾಡಿವೆ. ಇನ್ನೂ ಕಾಳೇಗೌಡ ನಾಗವಾರರ ‘ಬೆಟ್ಟಸಾಲು ಮಳೆ’, ‘ಕರಾವಳಿಯಲ್ಲಿ ಗಂಗಾಲಗ್ನ’ ಎಂಬೆರಡು ಕೃತಿಗಳು ಸೃಜನಶೀಲ ಕೃತಿಗಳು. ಕಾಳೇಗೌಡ ನಾಗವಾರರು ಗ್ರಾಮೀಣ ಪರಿಸರದಿಂದ ಬಂದವರಾದ್ದರಿಂದ ಅಸಮಾನತೆಯ ವಿರುದ್ಧ ದನಿ ಎತ್ತಿದವರಾಗಿದ್ದಾರೆ. ‘ಬೆಟ್ಟಸಾಲು ಮಳೆ’ ಗ್ರಾಮೀಣ ಹಾಗೂ ನಗರ ಪರಿಸರಗಳೆರಡರ ಪ್ರಭಾವದಿಂದ ರಚಿತವಾಗಿರುವ ಕೃತಿಯಾಗಿದೆ. ಇದರಲ್ಲಿ ಬಂಡಾಯದ ಆಶಯಗಳನ್ನು ಹೊಂದಿರುವ ಕತೆಗಳಿರುವುದರಿಂದ ಈ ಕೃತಿಗೆ

ಮಗುವಾಗಿಸುವ ಸುಂದರ ಹೂ ಮಾಲೆ

ಪುಟ್ಟಲಕ್ಷ್ಮಿ ಕಥೆಗಳುಲೇಖಕರು- ರಘುನಾಥ ಚ ಹಬೆಲೆ-೮೦/-ಪ್ರಕಾಶನ-ಅಂಕಿತ ಪುಸ್ತಕ ಚಿಕ್ಕ ಮಕ್ಕಳ ಲೋಕವೇ ಬೇರೆ ರೀತಿಯದ್ದು. ಕಂಡಿದ್ದೆಲ್ಲವೂ ಅಚ್ಚರಿಯ ವಿಷಯವೇ. ನಾನು ಮೂರನೇ ತರಗತಿಯಲ್ಲಿದ್ದಾಗ ನನ್ನ ಪಕ್ಕದ ಮನೆಯಲ್ಲಿ ದೀಪಾ ಕೊಡ್ಲೆಕೆರೆ ಎನ್ನುವ ನಾಲ್ಕನೆ ತರಗತಿಯ ಗೆಳತಿಯೊಬ್ಬಳಿದ್ದಳು. ಅವಳ ತಂದೆ ಅಲ್ಲೇ ಸಮೀಪದ ಮತ್ತೊಂದು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಅವರು ನಮ್ಮ ಹೆಸರಾಂತ ಕಥೆಗಾgರಾಗಿರುವ ಚಿಂತಾಮಣಿ ಕೊಡ್ಲೆಕೆರೆ ಹಾಗೂ ಮಹಾಬಲಮೂರ್ತಿ ಕೊಡ್ಲೆಕೆರೆಯವರ ಚಿಕ್ಕಪ್ಪ. ನಾನು ದೀಪಾ ಆಗಲೇ ಕವನ ಬರೆಯುತ್ತೇವೆಂದು ಏನೇನೋ ಬರೆಯುತ್ತಿದ್ದೆವು. ಆಗ ನಾವಿದ್ದ ಅಮ್ಮಿನಳ್ಳಿ ಎಂಬ ಪುಟ್ಟ ಊರಿನ ಹೊರಗಿರುವ, ಗಣಪತಿ ಮೂರ್ತಿಯನ್ನು ಮುಳುಗಿಸುವ ದೊಡ್ಡ ಹಳ್ಳದ ಸಂಕದ ಮೇಲೆ ದೆವ್ವಗಳು ಓಡಾಡುತ್ತವೆ ಎಂಬ ಪ್ರತೀತಿಯಿತ್ತು. ಅಥವಾ ನಮ್ಮ ಹುಡುಗಾಟವನ್ನು ಕಡಿಮೆ ಮಾಡಲು ನಾವು ವಾಸವಾಗಿದ್ದ ಮನೆಯ ಓನರ್ ತೇಜಕ್ಕ ನಮ್ಮನ್ನು ಹೆದರಿಸಲೆಂದು ಹೇಳಿದ್ದಳೋ ಗೊತ್ತಿಲ್ಲ. ಅಂತೂ ನಾವಿಬ್ಬರೂ ಅದನ್ನು ನಂಬಿಕೊಂಡು ಸಂಕದ ಮೇಲಿರಬಹುದಾದ ದೆವ್ವದ ಕುರಿತು ಒಂದು ಕವಿತೆ ಬರೆದ ನೆನಪು. ನನ್ನ ಅಪ್ಪ ‘ನನ್ನ ಮಗಳೂ ಕವಿತೆ ಬರಿತಿದ್ದಾಳೆ’ ಎಂದು ಹೆಮ್ಮೆ ಪಟ್ಟರೂ ನಂತರ ನಿಧಾನವಾಗಿ ದೆವ್ವವನ್ನು ನಂಬ್ತೀಯಾ ನೀನು ಎಂದು ಕೇಳಿದ್ದರು. ಅವರೇ ಕಲಿಸಿಕೊಟ್ಟ ಪಾಠ. ಇಲ್ಲ ಎಂದಿದ್ದೆ. ಹಾಗಿದ್ದರೆ ನಂಬದ ವಿಷಯಗಳ ಬಗ್ಗೆ ಬರೆದು ಮೂಢನಂಬಿಕೆ ಪ್ರದರ್ಶಿಸಬಾರದು’ ಎಂದಿದ್ದರು ಅಲ್ಲಿಗೆ ನನ್ನ ಮೊದಲ ಕವಿತೆ ಎಲ್ಲೋ ಕಳೆದು ಹೋಯ್ತು. ಆದರೂ ಈ ದೆವ್ವದ ಕುರಿತಾದ ಕಥೆಗಳು ನಂಬದೇ ಹೋದರೂ ಯಾವತ್ತೂ ನನಗೆ ಅತ್ಯಾಸಕ್ತಿಯ ವಿಷಯವೇ. ಹೀಗಾಗಿ ಪುಟ್ಟಲಕ್ಷ್ಮಿಯ ಮೊದಲ ಕಥೆ ಓದುತ್ತಲೇ ಖುಷಿಯಾಗಿಬಿಟ್ಟಿತು. ದುಬಾಕು ದೆವ್ವ ಚಿಕ್ಕ ಮಕ್ಕಳ ತಿಂಡಿಯನ್ನೆಲ್ಲ ತಿಂದು ಟಿಫಿನ್ ಬಾಕ್ಸ್‌ಗೆ ಕಲ್ಲು ಮಣ್ಣು ತುಂಬಿಸಿ, ನಂತರ ಪುಟ್ಟಲಕ್ಷ್ಮಿಯ ಪೋಚರ್ ಘೋಚರ್‌ಗೆ ಹೆದರಿ ಜೆಸಿಬಿಯಾದ ದೆವ್ವದ ಕಥೆಷ್ಟು ಖುಷಿಕೊಟ್ಟಿತೆಂದರೆ ನನಗೆ ಮತ್ತೊಮ್ಮೆ ಬಾಲ್ಯಕ್ಕೆ ಜಿಗಿದ ಅನುಭವವಾಯಿತು.     ಎರಡನೇ ಕಥೆ ಕಾಗೆ ಮರಿಯ ಹೊಟ್ಟೆ ನೋವು ಕೂಡ ಕಾಗೆಯ ಮರಿಯೊಂದು ಶಾಲೆಗೆ ಹೋಗುವ, ದಾರಿಯಲ್ಲಿ ಕೋಕಾ ಕುಡಿದು ಹೊಟ್ಟೆ ನೋವು ಬರಿಸಿಕೊಳ್ಳುವ ವಿಶಿಷ್ಟ ಕಥೆಯುಳ್ಳದ್ದು. ಬುಸ್ ಬುಸ್ ಹೆದ್ದಾರಿಯಂತೂ ಹಾವಿನ ರೂಪದ ಹೆದ್ದಾರಿಯ ಕಥೆ. ಪುಟ್ಟಲಕ್ಷ್ಮಿಯನ್ನು ತಿನ್ನಲು ಬಂದ ದೆವ್ವದ ಹೊಟ್ಟೆಯೊಳಗೆ ಸೋಪಿನ ಗುಳ್ಳೆಗಳು ರಕ್ತದ ಕುದಿತವನ್ನು ಕಡಿಮೆ ಮಾಡಿ ಅದನ್ನು ಹೆದ್ದಾರಿಯನ್ನಾಗಿಸಿದ ಕಥೆ ಇದು. ಗಿಬಾಕು ಮತ್ತು ಕು ಬೇಂ ಶಿ ಮಾ ಗೋ ಅಗಿ ಚಂ ಕಥೆಯಲ್ಲಿ ಜೆಸಿಬಿ ಆಗಿ ಬದಲಾಗಿದ್ದ ದುಬಾಕು ದೆವ್ವದ ಅಣ್ಣ ಗಿಬಾಕು ಮನೆಗಳನ್ನೆಲ್ಲ ನುಂಗುವುದರಿಂದ ಈಗಿನ ಅಪಾರ್ಟಮೆಂಟ್‌ಗಳಾಗಿ ಬದಲಾಗುವ ಚಿತ್ರವಿದೆ. ಗಾಂಧಿ ತಾತನ ಕಾಡಿನ ಮಕ್ಕಳು ಕಥೆ ಎಷ್ಟೊಂದು ಕಾಲ್ಪನಿಕ, ಆದರೆ ಎಷ್ಟೊಂದು ವಾಸ್ತವ. ಇಲ್ಲಿ ಬರುವ ಹುಲಿ, ಆನೆ, ಜಿರಾಳೆಗಳು ಅದೆಷ್ಟು ಮನುಷ್ಯ ಲೋಕಕ್ಕೆ ಹೊಂದಿಕೊಂಡಂತಿದ್ದರೂ ಅವುಗಳು ಕಾಡಿನಲ್ಲಿ ಸ್ವತಂತ್ರವಾಗಿರುವುದೇ ಸಮಂಜಸವಾದುದು. ಈ ಕಥೆಯ ಪಾತ್ರವಾಗಿರುವ ಗಾಂಧಿತಾತ ಕೂಡ ಎಷ್ಟೊಂದು ಸಹಜ ಎನ್ನಿಸುವಂತಿದೆ. ತೀರಾ ಸಹಜವಾಗಿ ಫೋಟೊದಿಂದ ಎದ್ದು ಪ್ರಾಣಿಗಳಿರುವ ಮೂರು ಪೆಟ್ಟಿಗೆಯನ್ನು ಕೊಡುವುದು ಎಲ್ಲೂ ಅತಿರೇಖ ಅನ್ನುಸುವುದಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಭಯವಾದರೆ, ಕೆಟ್ಟ ಕನಸುಗಳೇನಾದರೂ ಬಿದ್ದರೆ ಗಾಂಧಿತಾತನನ್ನು ನೆನಪಿಸಿಕೊಂಡು ನಿದ್ದೆ ಮಾಡು ಎನ್ನುವ ಪುಟ್ಟಲಕ್ಷ್ಮಿಯ ತಂದೆತಾಯಿಯರ ಮಾತು ನಿಜಕ್ಕೂ ದೊಡ್ಡ ಸಂದೇಶವನ್ನು ಹೇಳುತ್ತದೆಯೆಂದೇ ನನಗನ್ನಿಸುತ್ತದೆ. ಕಾಡುಪ್ರಾಣಿಗಳನ್ನು ಪಂಜರದಲ್ಲಿಟ್ಟು ಪ್ರದರ್ಶನದ ಗೊಂಬೆಗಳಂತೆ ಆಡಿಸುವ ನಾವು ಪುಟ್ಟಲಕ್ಷ್ಮಿಯ ಕನಸಿನಂತೆ ನಮ್ಮನ್ನೆಲ್ಲ ಪಂಜರದಲ್ಲಿಟ್ಟುಬಿಟ್ಟರೆ ಏನಾಗಬಹುದು ಎಂದು ಯೋಚಿಸಿದರೆ ಭಯವಾಗುತ್ತದೆ. ಹೀಗಾಗಿ ಪುಟ್ಟಲಕ್ಷ್ಮಿ ಎಲ್ಲ ಪ್ರಾಣಿಗಳನ್ನು ಕಾಡಿಗೆ ಬಿಟ್ಟುಬಿಡುವ ನಿರ್ಧಾರ ಮಾಡುತ್ತಾಳೆ. ಕಥೆಯ ದೃಷ್ಟಿಯಿಂದ ಹಾಗೂ ಅದರ ಒಳತಿರುಳಿನ ದೃಷ್ಟಿಯಿಂದ ಈ ಕಥೆ ತುಂಬಾ ಮಹತ್ವದ್ದೆನಿಸುತ್ತದೆ. ಕರೀಮಿಯ ಚುಕ್ಕಿಗಳ ಚೆಂಡಾಟ ಕಥೆಯಲ್ಲಿ  ತನ್ನನ್ನು ಕರೀಮಿ ಎಂದ ನಕ್ಷತ್ರವನ್ನು ಹೊಡೆಯಲೆಂದು ಚೆಂಡು, ಕಲ್ಲುಗಳನ್ನೆಲ್ಲ ಎಸೆದು ನಂತರ ಕಪ್ಪು ಕಸ್ತೂರಿ ಕನ್ನಡ ಕಸ್ತೂರಿ ಮಂತ್ರ ಹೇಳಿ ಚುಕ್ಕಿಗಳನ್ನೆಲ್ಲ ಚುಚ್ಚಿ ಗಾಯ ಮಾಡಿದ ಪುಟ್ಟಲಕ್ಷ್ಮಿಯ ಕತೆ ಖಂಡಿತವಾಗಿಯೂ ನಿಮಗೆ ನಿಮ್ಮ ಬಾಲ್ಯವನ್ನು ನೆನಪಿಸದಿದ್ದರೆ ಹೇಳಿ. ಅಪ್ಪನ ಹಾಗೆ ಕಪ್ಪು ಬಣ್ಣ ಹೊತ್ತುಕೊಂಡ ನನಗೆ ಅಮ್ಮನ ಹಾಗೆ ಬೆಳ್ಳಗಿರುವ ಅಣ್ಣನನ್ನು ಕಂಡರೆ ಅಸೂಯೆ. ಕಪ್ಪು ಬಣ್ಣವೇ ಚಂದ ಎಂದು ಪದೇ ಪದೇ ವಾದಿಸುತ್ತ, ದೇವರ ಶಿಲೆ ಕೂಡ ಕಪ್ಪು ಗೊತ್ತಾ? ಎಂದು ನನ್ನ ಮೇಲೆ ನಾನೇ ದೈವತ್ವವನ್ನು ಆರೋಪಿಸಿಕೊಳ್ಳುತ್ತಿದ್ದೆ. ಬಿಳಿಬಣ್ಣ  ಸ್ವಲ್ಪ ಕೂಡ ಚಮದ ಅಲ್ಲ ಅಂತಿದ್ದೆ. ನಿನ್ನ ಮುಖದ ಮೇಲೆ ಒಂದು ಕಪ್ಪು ಮಚ್ಚೆ ಇದ್ದರೆ ಎಷ್ಟು ಚಂದ ಕಾಣ್ತದೆ, ಅದೇ ನನ್ನ ಮುಖದ ಮೇಲೆ ನಿನ್ನ ಬಿಳಿಬಣ್ಣದ ಮಚ್ಚೆ ಇಟ್ಟರೆ ಅಸಹ್ಯ ಎಂದಾಗಲೆಲ್ಲ ಅಣ್ಣ ನನ್ನ ಮುಗ್ಧತೆಗೆ ನಗುತ್ತಿದ್ದ. ಇಲ್ಲಿ ಪುಟ್ಟಲಕ್ಷ್ಮಿ ಕೂಡ ಹೊಟ್ಟೆಕಿಚ್ಚಿನಿಂದ ಸುಟ್ಟುಕೊಂಡೇ ನೀನು ಹೀಗೆ ಬಿಳುಚಿರೋದು ಎನ್ನುತ್ತಾಳೆ. ಬಣ್ಣಗಳ ತಾರತಮ್ಯವನ್ನು ವಿರೋಧಿಸುವ ಕಥೆ ಖುಷಿ ನೀಡುತ್ತದೆ.  ಮತ್ತೂ ವಿಶಿಷ್ಟವೆಂದರೆ ಇಲ್ಲಿ ನಾವೆಲ್ಲ ಚಂದಮಾಮ ಎಂದು ಕರೆಯುವ ಚಂದ್ರ ಚಂದ್ರಮ್ಮನಾಗಿರುವುದು. ಗುಡಾಣ ಹೊಟ್ಟೆಯ ಸೋಮಾರಿ ಮೊಲ ತೀರಾ ಆಸಕ್ತಿದಾಯಕವಾಗಿದೆ. ಆಹಾರ ಹುಡುಕುವ ಸೋಮಾರಿತನಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಕಸದ ಬುಟ್ಟಿಯಾಗಿ ನಿಂತ ಮೊಲಗಳ ಕಥೆ ಇದು. ಆದರೆ ಕೊನೆಯಲ್ಲಿ ಆ ಮೊಲ ಕಾಡನ್ನೆಲ್ಲ ಕಡಿದು ಬಿಟ್ಟಿದ್ದೀರಿ, ತಿನ್ನಲು ಏನೂ ಸಿಗದು ಎನ್ನುವ ಮಾತು ಮನಮುಟ್ಟುತ್ತದೆ. ಸ್ವಯಂವರ ಕಥೆಯಲ್ಲಿರಾಜನನ್ನು ಆರಿಸಲು ಪಟ್ಟದಾನೆಯ ಸೊಂಡಿಲಿಗೆ ಮಾಲೆ ನೀಡಿ ಅದು ಯಾರ ಕೊರಳಿಗೆ ಹಾಕುತ್ತದೋ ಅವನನ್ನು ರಾಜ ಎನ್ನಲಾಗುತ್ತಿತ್ತಂತೆ. ಅದು ರಾಜ್ಯಲಕ್ಷ್ಮಿಯ ಜೊತೆಗಾದ ಸ್ವಯಂವರ. ಆದರೆ ರಾಜನಾಗಬೇಕೆಂದು ಬಯಸಿದವರೆಲ್ಲ, ಮಾವುತನಿಗೆ, ಅವನ ಹೆಂಡತಿ ಮಗನಿಗೆ ಆಮಿಷ ಒಡ್ಡಿ ತನಗೇ ಮಾಲೆ ಹಾಕಬೇಕು ಎಂದು ಕೇಳಿಕೊಳ್ಳುತ್ತಿದ್ದರಂತೆ. ಕೊನೆಗೆ ಮಾವುತನನ್ನೂ ಅವನ ಪಟ್ಟದಾನೆಯನ್ನು ಕೊಲ್ಲುವುದಾಗಿ ಬೆದರಿಕೆಯನ್ನೂ ಹಾಕುತ್ತಿದ್ದರಂತೆ. ಆದರೆ ಆನೆ ಮಾತ್ರ ಕಾರಣಿಕನೊಬ್ಬನಿಗೆ ಮಾಲೆ ಹಾಕಿತಂತೆ. ಈ ಕಥೆಯನ್ನು ಹೇಳಿದ ಪುಟ್ಟಲಕ್ಷ್ಮಿಯ ಅಜ್ಜಿ ಈಗ ಚುನಾವಣಾ ಕಣದಲ್ಲಿರುವವರೂ ಅಂತಹುದ್ದೇ ಅಭ್ಯರ್ಥಿಗಳು ಎನ್ನುತ್ತಾರಲ್ಲದೇ ಆನೆಯಂತೆ ಒಳ್ಳೆಯವನನ್ನು ಆರಿಸಿ ಎನ್ನುತ್ತಾರೆ. ಆದರೆ ಕೊನೆಯ ಮಾತು ನಮ್ಮೆಲ್ಲರನ್ನೂ ನಾಚಿಕೆ ಪಡುವಂತೆ ಮಾಡುತ್ತದೆ. ಹಿರಿಯರು ಮಾಡುವ ಗಲೀಜನ್ನೆಲ್ಲ ಚಿಕ್ಕ ಮಕ್ಕಳು ತೊಳೆಯುವಂತಹ ಕಾಲ ಬಂತಪ್ಪಾ ಎಂದು ಪುಟ್ಟ ಲಕ್ಷ್ಮಿ ಹೇಳುತ್ತಾಳೆ. ನಾವು ಹಾಳು ಮಾಡಿ ಅದರ ಫಲವನ್ನು ಕಿರಿಯರು ಅನುಭವಿಸುವಂತೆ ಮಾಡುವ ನಮ್ಮ ದುರಾಸೆಗೆ, ಲಾಲಸೆಗೆ ಧಿಕ್ಕಾರವಿರಲಿ. ಲೈಟು ಕಂಬದ ಬೆಳಕಿನಲ್ಲಿ ಕಥೆಯಲ್ಲಿ ಶಾಲೆಗೆ ಹೋಗದ ರಾಜುವನ್ನು ಕನಸಿನಲ್ಲಿ ಬಂದ ಲೈಟ್‌ಕಂಬ ವಿಶ್ವೇಶ್ವರಯ್ಯನವರ ಕಥೆ ಹೇಳಿ ಶಾಲೆಗೆ ಹೋಗುವಂತೆ ಮನ ಒಲಿಸುತ್ತದೆ. ಮಾರನೆಯ ದಿನ ಶಾಲೆಗೆ ಬಂದವನನ್ನು ಪುಟ್ಟಲಕ್ಷ್ಮಿ ಅಕ್ಕರೆಯಿಂದ ಕರೆದುಕೊಂಡು ಹೋಗುತ್ತಾಳೆ. ಮಳೆರಾಯನ ವಿರುದ್ಧದ ದೂರಲ್ಲಿ ಕಾಲಕಾಲಕ್ಕೆ ಮಳೆ ಸುರಿಸದ ವರುಣನನ್ನು ದೇವಲೋಕದ ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆ ಮಾಡುವ, ಭೂಲೋಕದ ಜನ ಮರ ಕಡಿದು, ಪರಿಸರವನ್ನು ಮಾಲಿನ್ಯ ಮಾಡಿದ್ದರಿಂದ ಮಳೆಯಾಗುತ್ತಿಲ್ಲ ಎಂದು ತೀರ್ಮಾನಿಸುವ ಚಿತ್ರಣವಿದೆ. ಚುಕ್ಕಿ ಬೇಕಾ ಚುಕ್ಕಿಯಲ್ಲಿ ವೀಕೆಂಡ್‌ನಲ್ಲಿ ಭೂಲೋಕಕ್ಕೆ ಬರುವ ದೇವತೆಗಳ ಕಥೆ ನಗು ತರಿಸಿದರೂಮಳೆ ಸುರಿಸಲಾಗದಂತೆ ಎಡವಟ್ಟು ಮಾಡಿಕೊಂಡ ವರುಣ ದೇವಲೋಕದ ಬರಗಾಲಕ್ಕೂ ಕಾರಣನಾಗುತ್ತಾನೆ. ಇತ್ತ ಮಕ್ಕಳನ್ನು ಸಾಕಲಾಗದ ಚಂದ್ರಮ್ಮ ಚಿಕ್ಕಿಗಳನ್ನೆಲ್ಲ ಭೂಲೋಕಕ್ಕೆ ತಂದು ಮಾರಲು ಪ್ರಯತ್ನಿಸುತ್ತಾಳಾದರೂ ಗಾಜಿನ ಚೂರೆಂದು ಯಾರೂ ಕೊಳ್ಳುವುದಿಲ್ಲ. ನೂರು ರೂಪಾಯಿ ತಳ್ಳು ಎನ್ನುತ್ತ ಬಂದ ಪೋಲೀಸರು ಚಂದ್ರಮ್ಮನ ಕೈ ಎಳೆದಾಗಲೇ ಧೋ ಎಂದು ಮಳೆ ಸುರಿದು ಬುಟ್ಟಿ ಚಲ್ಲಾಪಿಲ್ಲಿಯಾಗುತ್ತದೆ, ಚುಕ್ಕಿಗಳು ಮಳೆಯಲ್ಲಿ ಕೊಚ್ಚಿ ಹೋಗುತ್ತದೆ. ತಪ್ಪಿಸಿಕೊಳ್ಳಲು ಯತ್ನಿಸಿದ ಚಂದ್ರಮ್ಮನಿಗೆ ಫೋಲೀಸರು ಬೆತ್ತ ಬೀಸಿ ಎಚ್ಚರ ತಪ್ಪುವಂತಾಗುತ್ತದೆ. ಕಣ್ಣು ಬಿಟ್ಟರೆ ಗಾಳಿ ಮಳೆ ಬೆಳಕಿಂದ ಆಕಾಶ ಸೇರಿದ ಚಿಕ್ಕಿಗಳು ಹಾಗೂ ಚಂದ್ರಮ್ಮ ಖುಷಿಯಲ್ಲಿರುತ್ತವೆ. ಎಷ್ಟೊಂದು ತೀವ್ರತೆಯನ್ನು ಹೊಂದಿದೆ ಈ ಕಥೆ. ದೇವತೆಗಳೂ ಮನುಷ್ಯರಂತೆ ವೀಕೆಂಡ್ ಪಾರ್ಟಿ ಮಾಡುವುದು, ಕಲಬೆರಿಕೆ ಅಮೃತ, ಮೂಲಿಕೆಗಳು, ಮಕ್ಕಳನ್ನು ಮಾರಲೆತ್ನಿಸುವುದು ಮನಸ್ಸನ್ನು ತಟ್ಟುತ್ತದೆ. ಮಂಚದ ಕಾಲು ಕಥೆ ಹೇಳಿತು ಕಥೆಯಲ್ಲಿ ಅಪ್ಪ ಅಮ್ಮ ಕಥೆ ಹೇಳದಿದ್ದಾಗ ಮುನಿಸಿಕೊಂಡಿದ್ದ ಪುಟ್ಟ ಲಕ್ಷ್ಮಿಗೆ ಮಂಚದ ಕಾಲು ಕಾಡು ಕಡಿದು ನಾಡು ಮಾಡಿಕೊಂಡ ಮನುಷ್ಯನ ದುರ್ವತನೆಯನ್ನು ತಿಳಿಸುವ ಕಥೆ ಹೇಳುತ್ತದೆ. ಸೂರ್ಯನ ದೀಪದಲ್ಲಿ ವಿಶ್ರಾಂತಿ ಇಲ್ಲದೇ ದುಡಿದ ಸೂರ್‍ಯನಿಗೆ ದೇವಲೀಕದವರೆಲ್ಲ ಸನ್ಮಾನ ಮಾಡಿ ದೀಪದ ಕಾಣಿಕೆ ಕೊಟ್ಟರೆ ದಿನವಿಡೀ ಬೆಳಗುವ ಅದರಿಂದ ಕಿರಿಕಿರಿಯಾಗಿ ಸೂರ್‍ಯನ ಹೆಂಡತಿ ಅದನ್ನು ಒಡೆದು ಆ ಚೂರುಗಳೆಲ್ಲ ಚಂದ್ರ ಚುಕ್ಕಿಗಳಾದ ಕಥೆಯನ್ನು ರತ್ನಮ್ಮಜ್ಜಿ ಪುಟ್ಟಲಕ್ಷ್ಮಿಗೆ ಹೇಳುತ್ತಾಳೆ. ಚಾಕಲೇಟು ತಿಂದ ಟ್ಯೋಮಾಟೊ ಕಥೆಯಲ್ಲಿ ಗಿಡದಲ್ಲಿ ಬೆಳೆದ ಟೊಮಾಟೋ ಎಲ್ಲೆಲ್ಲಿಂದಲೋ ಬಂದು ತರಕಾರಿ ಅಂಗಡಿಯಿಂದ ಅಮ್ಮನ ಮುಖಾಂತರ ಪುಟ್ಟಲಕ್ಷ್ಮಿ ಮನೆಗೆ ಬರುತ್ತದೆ. ಗಾಯಗೊಂಡ ಟೋಮಾಟೋ ಸತ್ತೇ ಹೋಗುತ್ತೇನೆ, ಅದಕ್ಕೂ ಮೊದಲು ಒಂದು ಚಾಕಲೇಟು ತಿನ್ನಬೇಕು ಎಂದು ಪುಟ್ಟಲಕ್ಷ್ಮಿಯ ಬಳಿ ಕೇಳಿಕೊಳ್ಳುತ್ತದೆ.. ಚಕಲೇಟು ತಿಂದ ಟೋಮೇಟೊವನ್ನು ಪುಟ್ಟಲಕ್ಷ್ಮಿ ತೋಟದಲ್ಲಿ ಹುಗಿಯುತ್ತಾಳೆ. ಅದರಿಂದ ಎಷ್ಟೆಲ್ಲಾ ಟೋಮೇಟೋ ಗಿಡಗಳು… ಅವೆಲ್ಲ ಟೋಮೇಟೋ ಹಣ್ಣಿನಂತಹ ಚಾಕಲೇಟುಗಳನ್ನು ಬಿಡುತ್ತವೆ.    ಇಡೀ ಪುಸ್ತಕದ ಕಥೆಗಳು ಆಸಕ್ತಿದಾಯಕವಾಗಿ ಓದಿಸಿಕೊಳ್ಳುತ್ತವೆ. ದೆವ್ವದ ಕಥೆ ಬಂದರೂ ಆ ದೆವ್ವವನ್ನು ಓಡಿಸುವ ಮಂತ್ರ ಎಷ್ಟೊಂದು ಸುಲಭದ್ದು. ಬರೀ ಘಾಚರ್ ಘೋಚರ್ ಎಮದರಾಯಿತು. ಆಕಾಶ ಸೇರಬೇಕೆಂದರೆ ಕಪ್ಪು ಕಸ್ತೂರಿ ಕನ್ನಡ ಕಸ್ತೂರಿ ಮಂತ್ರ ಪಟಿಸಿದರಾಯಿತು. ಹೀಗಾಗಿ ಇಲ್ಲಿ ಯಾವುದೂ ಅತಿರೇಕ ಎನ್ನಿಸಿಕೊಳ್ಳುವುದಿಲ್ಲ. ಎಲ್ಲವೂ ಸೀದಾಸಾದಾ ನಮ್ಮ ಮನೆಯಲ್ಲಿಯೇ ನಡೆಯುತ್ತಿರುವಷ್ಟು ಆತ್ಮೀಯ. ಪರಿಸರದ ಕುರಿತಾಗಿ, ಗಿಡಮರಗಳ ಕುರಿತಾಗಿ, ಶಾಲೆಗೆ ಹೋಗುವುದಕ್ಕಾಗಿ ಹೀಗೆ ಎಲ್ಲದಕ್ಕೂ ರಘುನಾಥ ಚ.ಹಾ ತುಂಬ ಚಂದದ ಅಷ್ಟೇ ಸರಳವಾದ, ಓದಲು ಒಂದಿಷ್ಟೂ ಬೇಸರವೆನಿಸದ ಕಥೆಗಳನ್ನು ಹೆಣೆದಿದ್ದಾರೆ. ಬುಟ್ಟಿಯಲ್ಲಿ ತುಂಬಿರುವ ಹತ್ತಾರು ಹೂಗಳನ್ನು ಹಣೆದು ಮಾಲೆ ಮಾಡಿದಂತೆ ಈ ಕಥೆಗಳಲ್ಲಿ ಪುಟ್ಟಲಕ್ಷ್ಮಿ ದಾರವಾಗಿ ಎಲ್ಲ ಕಥೆಗಳನ್ನು ಬೆಸೆದಿರುವ ರೀತಿಯೇ ಅಮೋಘವಾದ್ದು. ಇಲ್ಲಿನ ದೇವರುಗಳೂ ಕೂಡ ಅದ್ಭುತವನ್ನು ಸೃಷ್ಟಿಸುವುದಿಲ್ಲ. ನಮ್ಮಂತೆ ಸಹಜವಾಗಿದ್ದು ಆತ್ಮೀಯವಾಗುವವರು. ಅದಕ್ಕೂ ಹೆಚ್ಚಾಗಿ ಭಯಗೊಂಡಾಗ ಜಪಿಸುವ ಗಾಂಧಿತಾತನ ಹೆಸರು ತೀರಾ ಕುತೂಹಲ ಹುಟ್ಟಿಸುತ್ತದೆ. ಗಾಂಧಿಯನ್ನು ಕೊಂದವರನ್ನು ಪೂಜಿಸುವ ಈ ಕಾಲಘಟ್ಟದಲ್ಲಿ ಇಂತಹ ಕಥೆಗಳು ಇನ್ನಷ್ಟು ಬೇಕಿದೆ. ನಿಜ, ಪುಟ್ಟಲಕ್ಷ್ಮಿಯ ಗೆಳೆತನ ಬೇಕೆಂದರೆ ಈ ಕಥೆಗಳನ್ನು ಓದಲೇ ಬೇಕು, ಓದಿ ಮಗುವಾಗಲೇ ಬೇಕು.                             ************************ ಲೇಖಕರ ಬಗ್ಗೆ ಎರಡು ಮಾತು:ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು

ಉತ್ತಮರ ಸಂಗ ಎನಗಿತ್ತು ಸಲಹೊ

ಸಂಬಂಧಗಳು ಹುಟ್ಟಿಕೊಳ್ಳುವುದು ಅಂಥ ವಿಶೇಷವಾದ ಸಂಗತಿಯೇನಲ್ಲ. ಹುಟ್ಟಿಕೊಂಡ ಸಂಬಂಧಗಳು ಎಲ್ಲಿಯವರೆಗೆ ಬಾಳುತ್ತವೆ, ನಮ್ಮ ಬದುಕಿನ ಚಲನೆಯಲ್ಲಿ ಅವುಗಳ ಮಹತ್ವವೇನು, ಅವು ಯಾವ ಬಗೆಯ ಹೊಸತನವನ್ನು ನಮ್ಮ ಯೋಚನೆಗಳಿಗೆ ಒದಗಿಸಬಲ್ಲವು ಎನ್ನುವ ಆಧಾರದ ಮೇಲೆ ಸಂಬಂಧಗಳ ಗುಣಮಟ್ಟದ ನಿರ್ಧಾರವಾಗುತ್ತದೆ. ಈ ಗುಣಮಟ್ಟದ ಮೌಲ್ಯಮಾಪನ ಯಾವುದೇ ರೂಪ, ಆಕಾರ ಅಥವಾ ಹೆಸರುಗಳ ಪ್ರಾಪಂಚಿಕ ಚೌಕಟ್ಟಿನೊಳಗೆ ನಡೆಯುವಂಥದ್ದಲ್ಲ. ತಲೆದಿಂಬಿನ ಪಕ್ಕದಲ್ಲಿ ನೆಮ್ಮದಿಯಿಂದ ನಿದ್ರಿಸಿರುವ ಮೊಬೈಲ್ ನಲ್ಲಿ ಪಾಪ್ ಅಪ್ ಆಗುವ ಗುಡ್ ಮಾರ್ನಿಂಗ್ ಮೆಸೇಜುಗಳಲ್ಲಿ ಹದಿನೈದು ವರ್ಷಗಳ ನಂತರ ಮತ್ತೆ ಜೊತೆಯಾದ ಸ್ನೇಹದ ಬಳಗವೊಂದಿರಬಹುದು; ಫೇಸ್ ಬುಕ್ ನಲ್ಲಿ ಹುಟ್ಟಿ, ವಾಟ್ಸಾಪ್ ನಲ್ಲಿ ಬೆಳೆದು ಸುಖ-ದುಃಖಗಳಿಗೆ ಜೊತೆಯಾದ ಸ್ನೇಹಿತೆಯ ನಗುವೊಂದಿರಬಹುದು; ಹೆಸರು-ಭಾವಚಿತ್ರಗಳಿಲ್ಲದ ಅಪರಿಚಿತ ಹೃದಯವೂ ಇರಬಹುದು. ಪಕ್ಕದ ರಸ್ತೆಯಲ್ಲಿ ಹೋಮ್ ವರ್ಕ್ ಮಾಡುತ್ತಲೇ ಹಾಲು ಮಾರುವ ಹುಡುಗ ಕಾಫಿಯೊಂದಿಗಿನ ಸಂಬಂಧವನ್ನು ನಂಬಿಕೆಯಾಗಿ ಕಾಯುತ್ತಿರಬಹುದು. ಅರ್ಥವಾಗದ ಭಾಷೆಯೊಂದನ್ನು ನಗುವಿನಲ್ಲೇ ಕಲಿಸಿಕೊಡುವ ಜಪಾನಿ ಸಿನೆಮಾವೊಂದರ ಪುಟ್ಟ ಹುಡುಗಿ ಭಾವನೆಗಳೊಂದಿಗಿನ ಸಂಬಂಧವನ್ನು ಸಲಹಿದರೆ, ಫ್ರೆಂಚ್ ವಿಂಡೋವೊಂದರ ಕರ್ಟನ್ನುಗಳ ಮೇಲೆ ಹಾರುವ ಭಂಗಿಯಲ್ಲಿ ಕೂತೇ ಇರುವ ನೀಲಿಬಣ್ಣದ ಹಕ್ಕಿ ಮೌನದೊಂದಿಗೆ ಹೊಸ ಸಂಬಂಧವೊಂದನ್ನು ಹುಟ್ಟುಹಾಕಬಹುದು.           ಹೀಗೆ ಎಲ್ಲೋ ಹುಟ್ಟಿ, ಇನ್ಯಾರೋ ಬೆಳಸುವ ಸಂಬಂಧಗಳಿಗೆಲ್ಲ ಅವುಗಳದೇ ಆದ ಉದ್ದೇಶವಿರುವಂತೆ ನನಗೆ ಅನ್ನಿಸುತ್ತದೆ. ಹೈಸ್ಕೂಲಿನ ದಾರಿಯಲ್ಲಿದ್ದ ಬಸ್ ಸ್ಟಾಪಿನಲ್ಲಿ ಕಾಲೇಜಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದ ಹುಡುಗ, ನಗುವಿನಿಂದಲೇ ಕಾಲ್ನಡಿಗೆಯ ಕಷ್ಟವನ್ನೆಲ್ಲ ಕಣ್ಮರೆಯಾಗಿಸುತ್ತಿದ್ದ ನೆನಪೊಂದು ಹೈಸ್ಕೂಲಿನ ಮಾರ್ಕ್ಸ್ ಕಾರ್ಡುಗಳೊಂದಿಗೆ ಯಾವ ನಿರ್ಬಂಧವೂ ಇಲ್ಲದೇ ಸಂಬಂಧವನ್ನು ಬೆಳಸಿಕೊಳ್ಳುತ್ತದೆ. ಡೆಂಟಲ್ ಕುರ್ಚಿಯ ಕೈಮೇಲೆ ಆತಂಕದಿಂದಲೇ ಕೈಯಿಟ್ಟು ಸಂಬಂಧ ಬೆಳೆಸಿಕೊಳ್ಳುವ ಹಲ್ಲಿನ ಒಟ್ಟೆಯೊಂದು ಹುಳುಕು ಮರೆತು ಹೂನಗೆಯ ಚಲ್ಲಿದ ಫೋಟೋವೊಂದು ಗೋಡೆಗಂಟಿದ ಮೊಳೆಯೊಂದಿಗೆ ನಂಟು ಬೆಳಸಿಕೊಳ್ಳುತ್ತದೆ. ಚಾದರದ ಮೇಲಿನ ಹೂವೊಂದು ಸೆಕೆಂಡುಗಳಲ್ಲಿ ಹಣ್ಣಾಗಿ ಡೈನಿಂಗ್ ಟೇಬಲ್ಲಿನ ಮೇಲೆ ಏಕಾಂಗಿಯಾಗಿ ಕುಳಿತಿದ್ದ ಬುಟ್ಟಿಯೊಂದಿಗೆ ನಂಟು ಬೆಳಸಿ, ಬುಟ್ಟಿಯ ಬದುಕಿಗೊಂದಿಷ್ಟು ಬಣ್ಣಗಳನ್ನು ದೊರಕಿಸುತ್ತದೆ. ಟಿವಿ ಸ್ಟ್ಯಾಂಡ್ ನೊಳಗೆ ಬೆಚ್ಚಗೆ ಕುಳಿತ ಸಿಡಿಯೊಂದರ ಹಾಡು ಅಡುಗೆಮನೆಯೊಂದಿಗೆ ಬೇಜಾರಿಲ್ಲದೇ ಸಂಬಂಧವನ್ನು ಬೆಳಸಿಕೊಂಡು, ಏಕತಾನತೆಯ ಮರೆಸುವ ಹೊಸ ರಾಗವೊಂದನ್ನು ಹುಟ್ಟಿಸುತ್ತದೆ. ಹೀಗೇ ಅಸ್ತಿತ್ವದ ಮೋಹಕ್ಕೆ ಬೀಳದೆ ಬದುಕಿನ ಭಾಗವಾಗಿಬಿಡುವ ಸಂಬಂಧಗಳೆಲ್ಲವೂ ಅವಕಾಶವಾದಾಗಲೆಲ್ಲ ಅರಿವಿಗೆ ದೊರಕುತ್ತ, ನಿತ್ಯವೂ ಅರಳುವ ಪುಷ್ಪವೊಂದರ ತಾಳ್ಮೆಯನ್ನು ನೆನಪಿಸುತ್ತವೆ.            ತಾಳ್ಮೆ ಎಂದಾಗಲೆಲ್ಲ ನನಗೆ ನೆನಪಾಗುವುದು ಡೈನಿಂಗ್ ಟೇಬಲ್ಲು. ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನಗೆ ಡೈನಿಂಗ್ ಟೇಬಲ್ ಎನ್ನುವುದು ಐಷಾರಾಮದ ಸಂಗತಿಯಾಗಿತ್ತು. ವರ್ಷಕ್ಕೊಮ್ಮೆ ಹೊಟೆಲ್ ಗಳಿಗೆ ಹೋದಾಗಲೋ ಅಥವಾ ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಸಂಬಂಧಿಕರ ಮನೆಗಳಿಗೆ ಹೋದಾಗಲೋ ಕಾಣಸಿಗುತ್ತಿದ್ದ ಡೈನಿಂಗ್ ಟೇಬಲ್ಲುಗಳ ಬಗ್ಗೆ ವಿಶೇಷವಾದ ಪ್ರೀತಿಯಿತ್ತು. ಮರದ ಡೈನಿಂಗ್ ಟೇಬಲ್ಲಿನ ಮೇಲೆ ಬಿಸಿ ಕುಕ್ಕರನ್ನೋ, ಸಾಂಬಾರಿನ ಪಾತ್ರೆಯನ್ನೋ ಇಡಲು ಉಪಯೋಗಿಸುತ್ತಿದ್ದ ಸ್ಟೀಲಿನ ಸ್ಟ್ಯಾಂಡುಗಳೆಲ್ಲ ನನ್ನಲ್ಲಿ ವಿಚಿತ್ರ ಕಂಪನಗಳನ್ನು ಉಂಟುಮಾಡುತ್ತಿದ್ದವು. ಅಜ್ಜ-ಅಜ್ಜಿ, ಅಪ್ಪ ಇವರೆಲ್ಲ ಹೇಳುತ್ತಿದ್ದ ಪುರಾಣದ ಕಥೆಗಳನ್ನು ಕೇಳುತ್ತಾ ಬೆಳೆದ ನನಗೆ ಸಾಂಬಾರಿನ ಪಾತ್ರೆಯೊಂದು ಡೈನಿಂಗ್ ಟೇಬಲ್ಲಿನ ಜೀವ ಸೆಳೆದೊಯ್ಯುವ ಯಮರಾಜನಂತೆಯೂ, ಸ್ಟೀಲಿನ ಸ್ಟ್ಯಾಂಡೊಂದು ಸತಿ ಸಾವಿತ್ರಿಯಾಗಿ ಪ್ರಾಣ ಉಳಿಸಿದಂತೆಯೂ ಭಾಸವಾಗುತ್ತಿತ್ತು. ಊಟದ ಪ್ಲೇಟಿನಡಿಯ ಮ್ಯಾಟ್ ಗಳ ಮೇಲಿನ ಗುಲಾಬಿ ಹೂವುಗಳೆಲ್ಲ ಸಾಂಬಾರಿನ ಬಿಸಿಗೆ ಕೊಂಚವೂ ಬಾಡದೇ ನಮ್ಮೆಲ್ಲರೊಂದಿಗೆ ಕೂತು ಊಟ ಮಾಡುತ್ತಿರುವಂತೆ ಸಂಭ್ರಮವಾಗುತ್ತಿತ್ತು. ಊಟ-ತಿಂಡಿಯ ನಂತರ ಡೈನಿಂಗ್ ಟೇಬಲ್ಲಿನ ಮೇಲೆ ಬಂದು ಕೂರುತ್ತಿದ್ದ ಹಣ್ಣಿನ ಬುಟ್ಟಿಯೊಂದು ಸಕಲ ಬಣ್ಣ-ರುಚಿಗಳನ್ನು ಡೈನಿಂಗ್ ಟೇಬಲ್ಲಿಗೆ ಒದಗಿಸಿದಂತೆನ್ನಿಸಿ, ಹಣ್ಣಿನ ಬುಟ್ಟಿಯ ಮೇಲೂ ವಿಶೇಷ ಪ್ರೀತಿಯೊಂದು ಹುಟ್ಟಿಕೊಳ್ಳುತ್ತಿತ್ತು.           ಬದುಕಿನ ಯಾವುದೋ ಕ್ಷಣದಲ್ಲಿ ಅರಿವಿಗೇ ಬಾರದಂತೆ ಹುಟ್ಟಿದ ಪ್ರೀತಿಯೊಂದು ಬದುಕಿನುದ್ದಕ್ಕೂ ನಮ್ಮೊಂದಿಗೇ ಅಂಟಿಕೊಂಡು, ತಾನು ಕಟ್ಟಿಕೊಂಡ ಸಂಬಂಧಗಳೊಂದಿಗೆ ನಮ್ಮನ್ನೂ ಬಂಧಿಸಿಬಿಡುತ್ತದೆ. ಬಾಲ್ಯದ ಆ ಸಮಯದಲ್ಲಿ ಐಷಾರಾಮದೆಡೆಗಿನ ಪ್ರೀತಿಯಿಂದ ಹುಟ್ಟಿಕೊಂಡ ಡೈನಿಂಗ್ ಟೇಬಲ್ಲಿನೊಂದಿಗಿನ ಸಂಬಂಧ ಈಗಲೂ ಹಾಗೆಯೇ ಉಳಿದುಕೊಂಡಿದೆ. ಯಮರಾಜನ ಭಯವಿಲ್ಲದ ಕಲ್ಲಿನ ಡೈನಿಂಗ್ ಟೇಬಲ್ಲಿನ ಮೇಲೆ ಚಿಪ್ಸ್ ಪ್ಯಾಕೆಟ್ಟಿನಿಂದ ಹಿಡಿದು ಮಲ್ಲಿಗೆ ಮಾಲೆಯವರೆಗೂ ಹೊಸಹೊಸ ಅವಕಾಶಗಳು ಸೃಷ್ಟಿಯಾಗಿವೆ. ಈಗಷ್ಟೇ ಮರಿಹಾಕಿದ ಬೆಕ್ಕಿನ ಸುತ್ತಲೂ ಕಣ್ಣುಮುಚ್ಚಿ ಮಲಗಿರುವ ಮರಿಗಳಂತೆಯೇ ಭಾಸವಾಗುವ ಡೈನಿಂಗ್ ಟೇಬಲ್ಲಿನ ಕುರ್ಚಿಗಳು ಅಗತ್ಯಬಿದ್ದಾಗಲೆಲ್ಲ ಮೊಬೈಲ್ ಸ್ಟ್ಯಾಂಡಾಗಿ, ಹ್ಯಾಂಗರುಗಳಾಗಿ, ಲ್ಯಾಡರ್ ಆಗಿ ರೂಪಾಂತರಗೊಂಡು ಮನೆಯ ಎಲ್ಲ ವಸ್ತುಗಳೊಂದಿಗೂ ಸ್ನೇಹಸಂಬಂಧವೊಂದನ್ನು ಬೆಸೆದುಕೊಂಡಿವೆ. ಊಟ-ತಿಂಡಿಯನ್ನು ಬಿಟ್ಟು ಉಳಿದೆಲ್ಲ ಕೆಲಸ-ಕಾರ್ಯಗಳಿಗೂ ಬಳಕೆಯಾಗುತ್ತಿರುವ ಡೈನಿಂಗ್ ಟೇಬಲ್ಲಿನ ಮೂಲ ಉದ್ದೇಶವನ್ನೇ ನಾನು ಮರೆತುಹೋಗಿದ್ದರ ಬಗ್ಗೆ ಡೈನಿಂಗ್ ಟೇಬಲ್ಲಿಗೆ ನನ್ನ ಮೇಲೆ ಬೇಸರವೇನೂ ಇದ್ದಂತಿಲ್ಲ. ಅದರ ಮೈಮೇಲೆ ಧೂಳು ಬಿದ್ದಾಗಲೆಲ್ಲ, ವೆಟ್ ಟಿಶ್ಯೂ ಬಳಸಿ ನಾಜೂಕಾಗಿ ಕ್ಲೀನ್ ಮಾಡುವ ನನ್ನ ಮೇಲೂ ಅದಕ್ಕೊಂದು ವಿಶೇಷವಾದ ಪ್ರೀತಿಯಿರುವಂತೆ ಆಗಾಗ ಅನ್ನಿಸುವುದುಂಟು. ನನ್ನೆಲ್ಲ ಭಾವಾತಿರೇಕಗಳನ್ನು ಅಲ್ಲಾಡದೇ ಸಹಿಸಿಕೊಳ್ಳುವ ಡೈನಿಂಗ್ ಟೇಬಲ್ಲಿನ ತಾಳ್ಮೆಯನ್ನು ನೋಡುವಾಗಲೆಲ್ಲ ಸಂಬಂಧಗಳೆಡೆಗಿನ ನಂಬಿಕೆಯೊಂದು ಬಲವಾಗುತ್ತ ಹೋಗುತ್ತದೆ.           ಈ ನಂಬಿಕೆ ಎನ್ನುವುದು ಇರದೇ ಇದ್ದಿದ್ದರೆ ಸಂಬಂಧಗಳಿಗೊಂದು ಗಟ್ಟಿತನ ದೊರಕುತ್ತಿರಲಿಲ್ಲ. ನಂಬಿಕೆಯೆನ್ನುವುದು ಶಕ್ತಿಯ ರೂಪ ತಳೆದು ಸಂಬಂಧಗಳಿಗೊಂದು ಸಕಾರಾತ್ಮಕತೆಯನ್ನೂ, ಆಯುಷ್ಯವನ್ನೂ ಒದಗಿಸುತ್ತದೆ. ನಂಬಿಕೆ ಇಲ್ಲದೇ ಇದ್ದಿದ್ದರೆ ಮೊಬೈಲಿಗೆ ಬಂದ ಅಪರಿಚಿತ ಗುಡ್ ಮಾರ್ನಿಂಗ್ ಮೆಸೇಜು ಸ್ನೇಹವಾಗಿ ಬದಲಾಗುತ್ತಲೇ ಇರಲಿಲ್ಲ; ಹಾಲು ಮಾರುವ ಹುಡುಗ ಕಾಫಿಯ ಮೇಲಿನ ಪ್ರೀತಿಯನ್ನು ಉಳಿಸುತ್ತಿರಲಿಲ್ಲ; ಭಾಷೆ-ಸಂಸ್ಕೃತಿಗಳ ಪರಿಚಯವಿಲ್ಲದ ದೇಶದ ಸಿನೆಮಾ ನಮ್ಮೊಳಗೊಂದು ಜಗತ್ತನ್ನು ಸೃಷ್ಟಿಸುತ್ತಿರಲಿಲ್ಲ; ಕರ್ಟನ್ನನ್ನು ದಾಟಿ ಮನೆಸೇರುವ ಬೆಳಕು ನೀಲಿಹಕ್ಕಿಯ ಮೌನಕ್ಕೆ ಜೊತೆಯಾಗುತ್ತಿರಲಿಲ್ಲ. ಬಸ್ ಸ್ಟಾಪಿನಲ್ಲಿ ಕಾಯುವ ನಗೆಯೊಂದರ ನಂಬಿಕೆಯನ್ನು ಬಸ್ಸು ಉಳಿಸಿದರೆ, ಗೋಡೆಯ ಮೇಲಿನ ಹೂನಗೆಯ ನಂಬಿಕೆಯನ್ನು ಡೆಂಟಲ್ ಕುರ್ಚಿಯೊಂದು ಕಾಪಾಡುತ್ತದೆ; ಕನಸಿನ ನಂಬಿಕೆಯನ್ನು ಹೂವಿನ ಬುಟ್ಟಿ ಸಲಹಿದರೆ, ಅಡುಗೆಮನೆಯನ್ನು ತಲುಪಿದ ಹಾಡಿನ ರಾಗದ ನಂಬಿಕೆಯನ್ನು ಗಾಯಕ ಉಳಿಸಿಕೊಳ್ಳುತ್ತಾನೆ. ಡೈನಿಂಗ್ ಟೇಬಲ್ ಮೇಲಿನ ಮಲ್ಲಿಗೆಮಾಲೆಯ ನಂಬಿಕೆಯನ್ನು ಪ್ರೀತಿ-ಸಹನೆಗಳು ರಕ್ಷಿಸುತ್ತವೆ. ಹುಟ್ಟಿದ ಸಂಬಂಧಗಳೆಲ್ಲವೂ ನಂಬಿಕೆಯ ಬಲದ ಮೇಲೆ ಬೆಳೆಯುತ್ತ, ಉತ್ತಮರ ಒಡನಾಟದಿಂದ ಹೊಸ ಹೊಳಹು-ಸಾಧ್ಯತೆಗಳಿಗೆ ಎದುರಾಗುತ್ತ, ಬದುಕೊಂದರ ಸಾರ್ಥಕತೆಯ ಮೂಲಕಾರಣಗಳಾಗುತ್ತವೆ. ******* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

ಅಪಾಯ ಎದುರಿಸುವ ಬಗೆ ಹೀಗೆ . ನಾನೀಗ ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ಕಥೆ ರಷ್ಯಾದ ಖ್ಯಾತ ಸಾಹಿತಿ ಲಿಯೋ ಟಾಲ್ ಸ್ಟಾಯ್ ಬರೆದದ್ದು. ಒಮ್ಮೆ ಇಬ್ಬರು ಗೆಳೆಯರು ಕಾಡಿನಲ್ಲಿ ಹೋಗುತ್ತಿದ್ದರು. ಕಾಡು ಪ್ರಾಣಿಗಳು ಪೊದೆಗಳ ಹಿಂದೆ ಅಡಗಿರಬಹುದೆಂಬ  ಭಯದಿಂದ ಇಬ್ಬರೂ ಕೈ ಕೈ ಹಿಡಿದು ಸಾಗುತ್ತಿದ್ದರು.  ಕಾಡಿನ ದಾರಿಯನು ಗೆಲುವಾಗಿ ಸಾಗಲು ಅತಿ ಪ್ರೀತಿಯಿಂದ ಅದು ಇದು ಹರಟುತ್ತ ಸಾಗುತ್ತಿದ್ದರು. ಒಮ್ಮೆಲೇ ಕರಡಿ ಕಾಣಿಸಿಕೊಂಡಿತು.ಕರಡಿ ಇನ್ನೂ ದೂರದಲ್ಲಿತ್ತು. ಹಾಗಾಗಿ ಹೇಗಾದರೂ ಅದರಿಂದ ಬಚಾವಾಗಬೇಕೆಂದು ಉಪಾಯ ಮಾಡಲು ಅವರಿಬ್ಬರಿಗೂ ಕೆಲ ಕ್ಷಣಗಳು ಉಳಿದಿದ್ದವು. ಅಷ್ಟರಲ್ಲಿ ಇಬ್ಬರಲ್ಲಿ ಒಬ್ಬ ಸರಸರನೆ ಮರ ಹತ್ತಿ ಮರದ ಕೊಂಬೆಯ ಮೇಲೆ ಕುಳಿತು ಬಿಟ್ಟ. ಆದರೆ ಇನ್ನೊಬ್ಬನಿಗೆ ಮರ ಹತ್ತಲು ಬರದು. ಮತ್ತೊಬ್ಬರು ಸಹಾಯ ಸಿಕ್ಕಿದ್ದರೆ ಹತ್ತಿರುತ್ತಿದ್ದನೇನೋ! ಆದರೆ ಅವನ ಗೆಳೆಯ ಅದಾಗಲೇ ಮರದ ತುದಿಯನ್ನೇರಿ ಬಿಟ್ಟಿದ್ದರಿಂದ ಇವನೀಗ ನೆಲದಲ್ಲಿ ಒಬ್ಬಂಟಿಯಾಗಿದ್ದ. ಕರಡಿ ಇನ್ನೇನು ಹತ್ತಿರವೇ ಬಂತು. ಏನು ಮಾಡಬೇಕೆಂದು ಯೋಚಿಸುತ್ತಿರುವಾಗಲೇ ಒಂದು ಉಪಾಯ ಹೊಳೆದಂತಾಯ್ತು.  ಕರಡಿ ಸಮೀಪಕ್ಕೆ ಬಂತು ಎನ್ನುವಷ್ಟರಲ್ಲಿ ನೆಲದ ಮೇಲೆ ಸತ್ತಂತೆ ಮಲಗಿ ಬಿಟ್ಟ. ಕರಡಿ ತೀರಾ ಹತ್ತಿರಕ್ಕೆ ಬಂತು. ಯುವಕನನ್ನು ಮೂಸಿತು. ಸಾವು ಎದೆಯ ಮೇಲೆ ನಿಂತಿರುವಾಗ ಯಾರಿಗಾದರೂ ಉಸಿರು ಬಂದೀತೆ? ಯುವಕನಿಗೆ ಭಯದಲ್ಲಿ ಉಸಿರೇ ನಿಂತು ಹೋದಂತಾಗಿತ್ತು! ಕರಡಿ ಆತನು ಸತ್ತಿರುವನೆಂದು ತಿಳಿದು ತನ್ನ ಪಾಡಿಗೆ ತಾನು ಮುಂದೆ ಸಾಗಿತು. ಕರಡಿ ಕಣ್ಮರೆಯಾಗುವವರೆಗೂ ಮರದ ಮೇಲೆ ಕುಳಿತಿದ್ದ ಯುವಕ ಇನ್ನೇನು ಅಪಾಯವಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ಕೆಳಗಿಳಿದ. ಸತ್ತಂತೆ ನಟಿಸಿ ಮಲಗಿದ್ದವನೂ ಅಬ್ಬಾ! ಅಂತೂ ಇಂತೂ ಬಚಾವಾದೆ ಎಂದು ಎದ್ದು ಕೂತ. ಮರದಿಂದ ಇಳಿದ ಯುವಕ ‘ಏನು ಹೇಳಿತು ಗೆಳೆಯ, ಕರಡಿ ನಿನ್ನ ಕಿವಿಯಲ್ಲಿ? ಎಂದು ನಗುತ್ತ ಕೇಳಿದ. ಸತ್ತಂತೆ ಮಲಗಿದ್ದ ಯುವಕ ಉತ್ತರಿಸಿದ ‘ಅಪಾಯದ ಸಮಯದಲ್ಲಿ ಕೈ ಬಿಟ್ಟು ಹೋಗುವವರನ್ನು ಎಂದೂ ನಂಬಬೇಡ ಎಂದು ಹೇಳಿತು. ಅಪಾಯವೆಂದರೆ. . . . .?      ದೈನಂದಿನ ಬದುಕಿಗೆ ಅಕಸ್ಮಾತ್ತಾಗಿ ಭೇಟಿ ಕೊಡುವಂಥ ಆಗಂತುಕನೇ ಅಪಾಯ. ಆಂತರಿಕ ಅಗ್ನಿಯನ್ನು ಉದ್ದೀಪನಗೊಳಿಸುತ್ತದೆ. ನಮ್ಮೊಳಗಿನ ಅತ್ಯುನ್ನತವಾದುದನ್ನು ಅತ್ಯುತ್ತಮವಾದುದನ್ನು ಹೊರಗೆಳೆಯಲು ಪ್ರೇರೇಪಿಸುತ್ತದೆ. ಬಹುತೇಕರು ಅಪಾಯವನ್ನು ಅಪಾಯಕಾರಿ ಎಂದು ದೂರ ಸರಿಯುತ್ತಾರೆ ಹೊರತು ಅದು ಹೊತ್ತು ತಂದ ಅವಕಾಶಗಳ ಮೂಟೆಗಳನ್ನು ತೆರೆದು ನೋಡುವುದೇ ಇಲ್ಲ. ಸಣ್ಣ ಪುಟ್ಟ ಅಪಾಯಗಳಿಗೂ ಹೆದರಿ ಜೀವನ ಪ್ರೀತಿ ಕಳೆದುಕೊಳ್ಳುವವರು ಅಪಾಯಗಳ ಮಡಿಲಲ್ಲಿ ಬಿದ್ದು ಗಗನಚುಂಬಿ ಹಿಮ ಪರ‍್ವತಗಳ ನೆತ್ತಿಯ ಮೇಲೆ ನಿಂತವರನ್ನು, ಉದ್ದುದ್ದ ಸಾಗರಗಳನ್ನು ಈಸಿ  ಗೆದ್ದವರನ್ನು ಹಗ್ಗದ ಮೇಲೆ ನಡೆಯುವವರನ್ನು ನೋಡಿ ಕಲಿಯಬೇಕು. ಅಪಾಯಗಳು ಮನುಷ್ಯನಿಗೆ ಹೇಳಿ ಕೇಳಿ ಬರುವುದಿಲ್ಲ. ಅಪಾಯದ ಸ್ಥಿತಿಯಲ್ಲಿ ಯಾರಾದರೂ ನಮ್ಮನ್ನು ಬಚಾವು ಮಾಡುತ್ತಾರೆಂದು ನಂಬಿಕೊಂಡು ಕುಳಿತುಕೊಳ್ಳುವುದು ತರವಲ್ಲ. ಸಮಯ ನಿರ‍್ವಹಣೆಯಂತೆ ಅಪಾಯ ನಿರ‍್ವಹಣೆಯೂ ಒಂದು ಕಲಿಯಬೇಕಾದ ಕಲೆ. ಅಪಾಯ ಎದುರಿಸುವ ಬಗೆ ಹೇಗೆ ಎನ್ನುವುದನ್ನು ನೋಡೋಣ ಬನ್ನಿ. ಮೇಲಿನ ಕಥೆಯ ಸಂದೇಶವನ್ನು ಮಾನವರೆಲ್ಲ ಬಯಸುವುದು ಸಹಜ. ಆಪತ್ತಿನಲ್ಲಿ ಉದ್ದೇಶಪೂರ‍್ವಕವಾಗಿ ನಮ್ಮನ್ನು ಕೈ ಬಿಟ್ಟು ಹೋಗುವವರನ್ನು ನಾವು ನಂಬಲೇ ಬಾರದು. ಆದರೆ ಆ ಸಮಯದಲ್ಲಿ ಏನು ಮಾಡಬೇಕೆಂದು ಹೊಳೆಯದೇ ಹಾಗೆ ನಡೆದುಕೊಂಡಿದ್ದರೆ ಅಂಥವರನ್ನು ಕ್ಷಮಿಸುವುದು ಒಳಿತು. ‘ಕ್ಷಮಾ ಗುಣದ ಬಗ್ಗೆ ಖಂಡಿತ ಕಡಿಮೆ ಎಣಿಕೆ ಬೇಡ.’ ಯಾವುದೇ ಕೆಟ್ಟ ಕಾರ‍್ಯ ಶಿಕ್ಷೆಯಿಂದ ತಪ್ಪಿಸಿಕೊಳ್ಳದು. ಎಂಬುದನ್ನು ನೆನಪಿನಲ್ಲಿಡಬೇಕು. ಗೊಂದಲದ ಗೂಡಾದ ಮನಸ್ಸಿಗೆ ಎಲ್ಲವೂ ವಿಪರೀತಾರ‍್ಥಗಳೇ! ಸಮಯ ಸನ್ನಿವೇಶವನ್ನು ಅರ‍್ಥೈಸಿಕೊಂಡು ಆಪತ್ಕಾಲದಲ್ಲಿ ನಮ್ಮೊಂದಿಗಿದ್ದವರು ನಡೆದುಕೊಳ್ಳುವ ರೀತಿಯನ್ನು ಪರಿಶೀಲಿಸಿ ದೂರ ಸರಿಯುವುದೋ ಇಲ್ಲ ಸಂಬಂಧವನ್ನು ಮುಂದುವರೆಸಿಕೊಂಡು ಹೋಗಬೇಕೋ ಎನ್ನುವುದನ್ನು ನಿರ‍್ಧರಿಸುವುದು ಉಚಿತ ಮನಸ್ಥಿತಿ.  ಹಾಗೆ ನೋಡಿದರೆ ಅಪಾಯದ ಸ್ಥಿತಿಯಲ್ಲಿ ನಮ್ಮ ಮನಸ್ಥಿತಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ನಮಗೆ ಘಟಿಸುವ ಅನೇಕ ವಿಷಯಗಳು ಮತ್ತು ಅವು ನಮಗೆ ಎಂಥ ಫಲಗಳನ್ನು ನೀಡುತ್ತವೆ ಎಂಬುದು ನಮ್ಮ ಮನಸ್ಥಿತಿಯ ಮೇಲೆ ಆಧಾರ ಪಡುತ್ತದೆ. ಭಯಗೊಂಡರೆ ಏನು ಮಾಡಬೇಕೆಂದು ತಲೆಗೆ ತೋಚುವುದೇ ಇಲ್ಲ. ಹೀಗಾಗಿ ‘ಧೈರ‍್ಯದಿಂದ ಇದ್ದರೆ  ಅರ‍್ಧ ಅಪಾಯವನ್ನು ಗೆದ್ದಂತೆ.’ಆಶಾವಾದಿ ಭಾವ ಶಕ್ತಿಯನ್ನು ತುಂಬುತ್ತದೆ. ಪ್ರಯತ್ನವೆನ್ನುವುದು ಎಲ್ಲದಕ್ಕೂ ಮೂಲ ಕೇಂದ್ರ ಬಿಂದು. ಅಪಾಯದಲ್ಲಿ ಪ್ರಯತ್ನ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣವೆನ್ನುವುದು ಕೇವಲ ಪಠ್ಯ ಬೋಧನೆಯಲ್ಲ. ಆಗಾಗ ಎದುರಾಗುವ ಅಪಾಯಗಳನ್ನು ಎದುರಿಸಲು ಸಿದ್ಧರಾಗುವುದನ್ನು ಕಲಿಸುವುದೂ ಆಗಿದೆ. ವಿದ್ಯಾರ‍್ಥಿ ದೆಸೆಯಲ್ಲಿ ಅಪಾಯದ ಅಡಿಪಾಯ ಅಲ್ಲಾಡಿಸುವ ಬಗೆ ತಿಳಿದುಕೊಳ್ಳಬೇಕು. ಅನುಭವದ ತಿಳುವಳಿಕೆ ನಾವು ಯಾವುದೇ ಕ್ಷೇತ್ರದಲ್ಲಿರಲಿ ಅಪಾಯ ನಿರ‍್ವಹಣೆಯನ್ನು ಕಲಿಯದ ಹೊರತು ಆ ಕ್ಷೇತ್ರದಲ್ಲಿಯ ವ್ಯಕ್ತಿ ಮತ್ತು ವಸ್ತುಗಳ ಮೌಲ್ಯವನ್ನು ನಿಖರವಾಗಿ ಅಳೆಯದ ಹೊರತು ಕ್ಷೇಮಕರ ಎಂದು ಹೇಳಲಾಗದು. ಅಪಾಯದ ಬಗೆಗಿನ ನಮ್ಮ ಹಿಂದಿನ ಅನುಭವಗಳು ಒಳ್ಳೆಯ ನಿರ‍್ಧಾರಗಳಿಗೆ ದಾರಿ ಮಾಡುವುದಾದರೆ ಸರಿಯಾದ ದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ. ‘ನಾವು ಒಂದು ಅನುಭವದ ತಿಳುವಳಿಕೆಯನ್ನು ಬಿಟ್ಟರೆ ಮಿಕ್ಕೆಲ್ಲದ್ದರಿಂದ ಹೊರ ಬರುವ ಜಾಗರೂಕತೆಯನ್ನು ವಹಿಸಬೇಕು. ಅಲ್ಲಿಗೇ ನಿಲ್ಲಿಸಬೇಕು. ಇಲ್ಲದಿದ್ದರೆ ನಾವು ಬಿಸಿ ಒಲೆಯ ಬಾಣಲೆಯ ಮೇಲೆ ಕುಳಿತ ಬೆಕ್ಕಂತಾಗುತ್ತೇವೆ. ಅದು ಮತ್ತೆ ಬಿಸಿ ಒಲೆಯ ಬಾಣಲೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಇದು ಒಳ್ಳೆಯದೇ, ಆದರೆ ಅದು ತಂಪಾದ ಒಲೆಯ ಮೇಲೂ ಕುಳಿತುಕೊಳ್ಳುವುದಿಲ್ಲ ಎಂದಿದ್ದಾನೆ ಮಾರ‍್ಕ್ ಟ್ವೇನ್. ಧನಾತ್ಮಕ ಆಲೋಚನೆ ಅಪಾಯದ ಸ್ಥಿತಿಯಲ್ಲಿ ಕೈ ಬಿಟ್ಟು ಹೋಗುವವರನ್ನು ಕುರಿತು ನಕಾರಾತ್ಮಕವಾಗಿ ಯೋಚಿಸತೊಡಗಿದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಅವರ ಉಳಿದೆಲ್ಲ ಉತ್ತಮ ಗುಣಗಳು ಗೌಣವೆನಿಸುತ್ತವೆ. ಅವರಿಂದ ದೂರವಾಗಬೇಕೆಂಬ ಭಾವನೆಯೂ ಬಲವಾಗುತ್ತದೆ.ಕೈ ಬಿಟ್ಟವರು ಸ್ವಯಂ ರಕ್ಷಣೆ ಮಾಡಲು ಕಲಿಸಿದರು ಎಂದುಕೊಂಡರೆ ಜೀವನಕ್ಕೊಂದು ಹೊಸ ಪಾಠ ಸಿಕ್ಕಂತಾಗುತ್ತದಲ್ಲವೇ? ಇಂಥವರು ನಮಗೆ ಭಿನ್ನ ದಾರಿಯಲ್ಲಿ ನಡೆಯುವುದನ್ನು ಕಲಿಸುತ್ತಾರೆ ಎಂದುಕೊಳ್ಳಬಹುದಲ್ಲವೇ? ಈ ಆಲೋಚನೆ ರೀತಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿದೆ ಎನಿಸುತ್ತದೆ ಅಲ್ಲವೇ? ಈ ಅಂಶ ಅವರು ಜೀವ ಪರರಾಗಿಲ್ಲವೆನ್ನುವುದಕ್ಕಿಂತ ನಾವೆಷ್ಟು ಸಂಬಂಧ ಪರತೆಯನ್ನು ಹೊಂದಿದ್ದೇವೆ ಎಂಬುದನ್ನು ನಮಗೆ ಮನಗಾಣಿಸುತ್ತದೆ. ಅಷ್ಟಕ್ಕೂ ಇಂಥವರು ನಮಗಾಗಿ ಅಪಾಯವನ್ನು ತಂದೊಡ್ಡುವುದಿಲ್ಲ ಎಂಬುದು ದೊಡ್ಡ ನಿರುಮ್ಮಳ ವಿಷಯ. ಅಪಾಯವನ್ನು ಎದುರಿಸುವ ಸಂಧರ‍್ಭದಲ್ಲಿ ಹೇಗೆ ವರ‍್ತಿಸುವುದು ಗೊತ್ತಿಲ್ಲ ಅಷ್ಟೇ.ಆಪತ್ತು ನಿರ‍್ವಹಣೆಯಲ್ಲಿರುವ ಕೊರತೆಗಾಗಿ ಸಂಬಂಧವನ್ನು ಕಳೆದುಕೊಳ್ಳುವುದು ಮೂರ‍್ಖತನ. ಆದ್ದರಿಂದ ಧನಾತ್ಮಕವಾಗಿ ಆಲೋಚಿಸಬೇಕು. ವಿವೇಚನೆ ಅಪಾಯಗಳಿಂದ ಸಾಕಷ್ಟು ಕಲಿಯುತ್ತೇವೆ. ಅವು ಜೀವನದ ಪಾಠಗಳೇ ಸರಿ.ಅಪಾಯಗಳು ಆತ್ಮಶೋಧನೆಗೆ ವಿಶ್ಲೇಷಣೆಗೆ ಹಚ್ಚುತ್ತವೆ.ಅಪಾಯಗಳು ಯಾವಾಗಲೋ ಬರುತ್ತವೆ ಆಗ ಏನಾದರೊಂದು ಮಾಡಿದರಾಯಿತು ಎಂಬ ನಿರ‍್ಲಕ್ಷ್ಯವು ಸಲ್ಲದು. ಬದುಕು ಆತ್ಮಶೋಧನೆ, ವೈಯಕ್ತಿಕ ಬೆಳವಣಿಗೆ ಮತ್ತು ಜೀವನ ಪರ‍್ಯಂತದ ಕಲಿಕೆಯ ಒಂದು ಪಥವಾಗಿದೆ. ಅಪಾಯಗಳು ಜೀವನದ ಅವಿಭಾಜ್ಯ ಅಂಗಗಳು ಎಂಬ ವಿಷಯ ತಿಳಿಯುವುದು ಸಮಾಧಾನಕರ ಸಂಗತಿ. ಹಾಗಾದಾಗ ಅಪಾಯಗಳನ್ನು ವಿವೇಚನೆಯ ರೀತಿಯಿಂದ ನೋಡುವುದನ್ನು ಕಲಿಯಬಹುದು. ಅನೇಕರು ಅಪಾಯದಲ್ಲಿ ಗೆಲುವಿನ ಹಂತ ಮುಟ್ಟುವ ಸಂಧರ‍್ಭದಲ್ಲಿಯೇ ಕೈ ಚೆಲ್ಲಿ ಬಿಡುತ್ತಾರೆ. ಇದರಿಂದ ಆಂತರಿಕ ಬಲ ಅಪಾರ ದೃಢಶಕ್ತಿಗೆ ನಷ್ಟವುಂಟಾಗುತ್ತದೆ.  ಭಿನ್ನಧಾರೆ ಹಾಗೆ ನೋಡಿದರೆ ಆ ದೇವರು ಪ್ರತಿ ಜೀವಿಗೂ ಅಪಾಯ ನಿರ‍್ವಹಿಸುವ ಕಲೆಯನ್ನು ದಯಪಾಲಿಸಿದ್ದಾನೆ. ಅತಿ ಚಿಕ್ಕದೆನಿಸುವ ಇರುವೆಗೆ ನೋವಾಗಿಸಿದರೆ ನಮ್ಮನ್ನು ಕಚ್ಚುತ್ತದೆ. ಊಸರವಳ್ಳಿ ತನ್ನ ಬೇಟೆಯಾಡುವ ಪ್ರಾಣಿಗಳಿಂದ ಬಚಾವಾಗಲು ಬಣ್ಣ ಬದಲಿಸುತ್ತದೆ. ಹೀಗೆ ಎಲ್ಲ ಜೀವಿಗಳಿಗೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ುರ‍್ತು ಅನಿವಾರ‍್ಯತೆ ಇರುತ್ತದೆ. ಅಪಾಯದಲ್ಲಿರುವಾಗ ಇತರರು ನಮ್ಮನ್ನು ಉಳಿಸುವರೆಂದು ತಿಳಿದರೆ ನಾವು ಅವರ ತೆಕ್ಕೆಗೆ ಬೀಳುತ್ತೇವೆ.ಬೇರೆ ಪ್ರಯತ್ನಗಳತ್ತ ಗಮನ ಹರಿಸುವುದು ಕಡಿಮೆ. ಭಿನ್ನಧಾರೆಯತ್ತ ಹೊರಳುವುದು ಜೀವನ ಪ್ರೀತಿಗೆ ತೆರುವ ಬೆಲೆ ಎನ್ನಬಹುದು. ಇದೆಲ್ಲ ಕೇವಲ ಗೆಳೆತನಕ್ಕೆ ಮಾತ್ರ ಸೀಮಿತವಾದದ್ದು ಎನ್ನುವಂತಿಲ್ಲ. ಆಪತ್ತಿನಲ್ಲಿ ಸಹಕರಿಸಲಿಲ್ಲವೆಂದು ಆಪ್ತಬಾಂಧವರಲ್ಲಿ ಮುನಿಸಿಕೊಳ್ಳುತ್ತೇವೆ. ನಿಜವಾದ ಅವರ ಸ್ಥಿತಿಯನ್ನು ಅರಿಯದೇ ನಮ್ಮ ಮೂಗಿಗೆ ನಾವು ಯೊಚಿಸಿ ಆ ಸಂಬಂಧವನ್ನು ಕಾಟು ಒಗೆಯುತ್ತೇವೆ. ಆತ್ಮೀಯರಲ್ಲಿ ಹಿತೈಷಿಗಳಲ್ಲೂ ಇಂಥ ವಿಷಯಗಳು ಮುನ್ನೆಲೆಗೆ ಬರುವುದುಂಟು. ಅನಗತ್ಯ ಪ್ರಾಮುಖ್ಯತೆಯನ್ನು ಪಡೆಯುವುದುಂಟು. ಆದರೆ ಕಾಲ ಒಂದು ದಿನ ಎಲ್ಲವನ್ನೂ ಹಿಂದಕ್ಕೆ ತಳ್ಳುತ್ತದೆ. ಆಗ ಅಪಾಯ ನಿರ‍್ವಹಣೆ ಗೊತ್ತಿಲ್ಲದವರು ಪ್ರಪಾತಕ್ಕೆ ಬೀಳುತ್ತಾರೆ.  ಕೊನೆ ಹನಿ ಗೆಳೆಯರು ಹಿತೈಷಿಗಳು ಅಪಾಯದ ಸ್ಥಿತಿಯಲ್ಲಿ ಕೈ ಹಿಡಿಯಬೇಕೆಂದು ಬಯಸುವುದು ಸಹಜಗುಣ. ಆದರೆ ಒಂದೊಂದು ಸಂಧರ‍್ಭದಲ್ಲಿ ನಾವು ಬಯಸಿದಂತೆ ನಮಗೆ ಇರಲಾಗುತ್ತದೆಯೇ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗುತ್ತದೆ. ಮಧುರ ಬಾಂಧವ್ಯಗಳ ತಾಳವನ್ನು ತಪ್ಪಿಸುವ ಘಟನೆಗಳನ್ನು ನಿಂದಿಸುವ ರೀತಿಯಲ್ಲಿ ತೆಗೆದುಕೊಳ್ಳದೇ, ನಮ್ಮ ಶಕ್ತಿಯನ್ನು ಗುರುತಿಸಿಕೊಳ್ಳಲು ಸಹಕರಿಸಿದವರೆಂದು ತಿಳಿದು ವಂದಿಸುವ ರೀತಿಯಲ್ಲಿ ನಡೆದುಕೊಳ್ಳುವುದು ಸೂಕ್ತ. ಇದೆಲ್ಲ ನಮ್ಮ ದೃಷ್ಟಿ ಸಂಬಂಧಿಯಾದುದು. ಮನುಷ್ಯನ ಅನೇಕಾನೇಕ ಅಪೇಕ್ಷಿತ ಗುಣಗಳಲ್ಲಿ ಅಪಾಯ ಕಾಲದಲ್ಲಿ ಆಗಬೇಕು ಎನ್ನುವುದೂ ಒಂದು.ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬೀಜವೊಂದು ಸಂಪೂರ‍್ಣವಾಗಿ ಯಾವಾಗ ತನ್ನನ್ನು ಮಣ್ಣಲ್ಲಿ ಕಳೆದುಕೊಳ್ಳುತ್ತದೆಯೋ ಆಗ ಮಾತ್ರ ಅದು ಚಿಗುರೊಡೆದು ಮರವಾಗಿ ಬೆಳೆಯುವುದು. ಅಂತೆಯೇ ನಾವು ಮಾನವೀಯ ತುಡಿತಗಳಿಗೆ ಬೆಲೆ ಕೊಡಬೇಕು.ಗೊತ್ತಿಲ್ಲದೇ ಮಾಡಿದ ತಪ್ಪುಗಳನ್ನು ಕ್ಷಮಿಸಬೇಕು. ವಿಸ್ತಾರ ಚಿಂತನೆಗೆ ಹೊಸ ರೂಪ ಹೊಸ ಭಾಷ್ಯ ಬರೆಯಬೇಕು. ಹೊಸ ಅರ‍್ಥ ಬಿಟ್ಟು ಕೊಡುವ ಜೀವನದ ಹಲವಾರು ಘಟನೆಗಳ ಮೂಲಕ ಮನಸ್ಸಿಗೆ ಕನ್ನಡಿ ಹಿಡಿಯುವ ಕೆಲಸ ನಡೆದರೆ ಅಪಾಯದ ಮಡಿಲನ್ನು ಬಿಟ್ಟು ಸುಂದರ ಜೀವನದ ತೆಕ್ಕೆಯಲ್ಲಿ ನಾವಿರಲು ಸಾಧ್ಯ. ********************** ಲೇಖಕರ ಬಗ್ಗೆ ಎರಡು ಮಾತು ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

ಅಭಿವ್ಯಕ್ತಿ ಮನುಷ್ಯರ ಸಹಜ ಪ್ರಕ್ರಿಯೆ

ಮಹಾಂತೇಶ್ ಪಲದಿನ್ನಿ ಮಿಥುನ ಶಿಲ್ಪಗಳ ಮೂಲಕ ಸಾಮಾಜಿಕ ಎಚ್ಚರಿಕೆ ನೀಡುವ  ಸಂದೇಶವೂ ಇದೆ ‘ * ಕಲಾವಿದ ಡಾ.ಮಹಾಂತೇಶ್ ಎಂ.ಪಲದಿನ್ನಿ . ವಿಜಾಪುರ ಇವರ ಊರು. ಹುಟ್ಟಿದ್ದು ೧೯೮೪. ಕಲಾ ಶಿಕ್ಷಣ ಕಲಿತದ್ದು ಹಂಪಿ ಕನ್ನಡ ವಿವಿ ಶಿಲ್ಪಕಲಾ ವಿಭಾಗದಲ್ಲಿ. ಬಿಎಫ್‌ಎ ಶಿಲ್ಪಕಲೆ ಕಲಿತ ಅವರು ಮೈಸೂರಿನ ಕಾವಾದಲ್ಲಿ ಮಾಸ್ಟರ್ ಆಫ್ ಆರ್ಟ ಕಲಿತರು. ನಂತರ ಶಿಲ್ಪಕಲೆಯಲ್ಲಿ ಎಂ.ಫಿಲ್.ಪದವಿ ಹಾಗೂ ಡಾಕ್ಟರೇಟ್ ಪದವಿಗಳನ್ನು ಹಂಪಿ ಕನ್ನಡ ವಿ.ವಿ.ಯಿಂದ ಪಡೆದರು. ಹಂಪಿ ವಿಶ್ವ ವಿದ್ಯಾಲಯದ ಶಿಲ್ಪಕಲಾ ವಿಭಾಗ ಬದಾಮಿ ಶಾಖೆಯಲ್ಲಿ ಅವರು ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಲೆಗಳನ್ನು ಕೆತ್ತಿ ಕಲೆ ಅರಳಿಸುವ ಅವರು ಈವರೆಗೆ ರೂಪಿಸಿದ ಶಿಲ್ಪಗಳನ್ನು ೨೦೧೮ರಲ್ಲಿ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನವನ್ನು ಹೈದರಾಬಾದ್‌ನಲ್ಲಿ ಏರ್ಪಡಿಸಿದ್ದರು. ಜವಾಹರಲಾಲ್ ನೆಹರು ಆರ್ಕಿಟೆಕ್ಚರ್ ಆಂಡ್ ಫೈನ್ ಆರ್ಟ ಯುನಿವರ್ಸಿಟಿಯಲ್ಲಿ ಅವರ ಶಿಲ್ಪಕಲಾ ಪ್ರದರ್ಶನ ನಡೆದಿದೆ. ೨೦೦೭, ೨೦೦೮,೨೦೦೯,೨೦೧೦ ರಲ್ಲಿ ಕ್ರಮವಾಗಿ ಕೇರಳ, ಚೆನ್ನೆöÊ, ವಿಜಾಪುರ, ಧಾರವಾಡ,  ಹಾಗೂ ೨೦೧೧ರಲ್ಲಿ ಬೆಂಗಳೂರು, ಕುಂದಾಪುರದಲ್ಲಿ ಅವರ ಶಿಲ್ಪಕಲಾ ಕೃತಿಗಳ ಪ್ರದರ್ಶನ ನಡೆದಿದೆ. ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ೧೯೯೯ ರಿಂದ ೨೦೧೭ರವರೆಗೆ ೨೬ ಕಡೆ ಅವರ ಶಿಲ್ಪಗಳ ಪ್ರದರ್ಶನಗಳು ನಡೆದಿವೆ. ೨೦೦೯ ರಿಂದ ೨೦೧೩ರವರೆಗೆ ಅವರು ರಾಜ್ಯದ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿ ಸಹ ಡಾ. ಮಹಾಂತೇಶ್ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ ಹಾಗೂ ದೇಶದ ವಿವಿದೆಡೆ ೨೨ ಕಲಾ ಶಿಬಿರಗಳಲ್ಲಿ ಅವರು ಭಾಗವಹಿಸಿ ಶಿಲ್ಪಗಳನ್ನು ರೂಪಿಸಿದ್ದಾರೆ. ಅವರ ಅತ್ಯುತ್ತಮ ಶಿಲ್ಪಗಳನ್ನು ಕಾರವಾರದ ರಾಕ್ ಗಾರ್ಡನ್ ಸೇರಿದಂತೆ ಹಂಪಿ ಕನ್ನಡ ವಿವಿಯಲ್ಲಿ, ಪಂಜಾಬದ ಪಟಿಯಾಲಾ ಕಲಾಗ್ರಾಮದಲ್ಲಿ, ಇಳಕಲ್ ಚಿತ್ರಕಲಾ ವಿದ್ಯಾಲಯ, ಬಾಗಲಕೋಟೆ ಜಿಲ್ಲಾ ಆಡಳಿತ ಭವನ, ಮಧ್ಯಪ್ರದೇಶದ ಖುಜರಾಹೋ ಶಿಲ್ಪಗ್ರಾಮದಲ್ಲಿ, ಬೆಂಗಳೂರು ಕಲಾ ಗ್ರಾಮದಲ್ಲಿ ,ದಾವಣಗೆರೆ ಕುವೆಂಪು ವಿವಿ ಆವರಣದಲ್ಲಿ, ಕುಪ್ಪಳ್ಳಿಯಲ್ಲಿ, ಬಳ್ಳಾರಿಯಲ್ಲಿ , ಸತ್ತೂರು ಮಠದಲ್ಲಿ, ಹೂವಿನಹಡಗಲಿ ರಂಗಭಾರತಿಯಲ್ಲಿ ಕಾಣಬಹುದಾಗಿದೆ. ………………………………………………………………………….. ನಾಗರಾಜ ಹರಪನಹಳ್ಳಿ : ಬಣ್ಣಗಳ ಜೊತೆ ,ಶಿಲೆಗಳ ಜೊತೆ ಕುಂಚ ಮತ್ತು ಉಳಿಯ ಜೊತೆ ಕಳೆದ ರೋಚಕ ಕ್ಷಣ ಯಾವುದು ? ನೆನಪಲ್ಲಿ ಉಳಿದ ಒಂದು ಪ್ರಸಂಗ ಕುರಿತು ವಿವರಿಸಿ ….  ಮಹಾಂತೇಶ್ ಪಲದಿನ್ನಿ : ವಿದ್ಯಾರ್ಥಿಗಳ ಜೊತೆಗೆ ನಿಸರ್ಗ ಚಿತ್ರ ಬಿಡಿಸಲು ಹೋದಾಗ ಅವರ ಜೊತೆ ಸೇರಿ ಒಂದು ವರ್ಣಚಿತ್ರ ಬಿಡಿಸಿರುವುದು ಸ್ಮರಣೀಯ ಕ್ಷಣ.  ಪ್ರಶ್ನೆ : ಕಲೆ ಅಥವಾ ಚಿತ್ರ, ಹುಟ್ಟುವ ಕ್ಷಣ ಯಾವುದು ? *ಉತ್ತರ :* ಕಲೆ ಯಾವ ಕ್ಷಣದಲ್ಲಿಯಾದರು ಹುಟ್ಟಬಹುದು ಕಲೆಗೆ ನಿರ್ದಿಷ್ಟತೆ ಇಲ್ಲ.  ಪ್ರಶ್ನೆ :  ನಿಮ್ಮ ಶಿಲ್ಪಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಉತ್ತರ : ಬಾದಾಮಿಯಲ್ಲಿರುವ ಏಕಶಿಲಾ ಬೆಟ್ಟದಲ್ಲಿ ನಿರ್ಮಾಣವಾಗಿರುವ ಗುಹಾಂತರ ಶಿಲ್ಪಗಳು, ಅದರ ವಸ್ತು ವಿನ್ಯಾಸಗಳು, ಕಥಾನಕ ಶಿಲ್ಪಗಳು, ಸಾಲಭಂಜಿಕೆ ಶಿಲ್ಪಗಳು, ನನಗೆ ಹೆಚ್ಚು ಇಷ್ಟವಾಗಿವೆ. ಲಜ್ಜಾಗೌರಿ ಶಿಲ್ಪಗಳು ನನಗೆ ಬಹಳ ಕಾಡುವ ವಿಷಯ.  ಪ್ರಶ್ನೆ :  ನಿಮ್ಮ ಶಿಲ್ಪಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಉತ್ತರ : ನಮ್ಮ ಸುತ್ತಲಿನ ಪರಿಸರವು ಕಾರಣವಾಗುತ್ತದೆ. ನಾವು ಕಳೆದ ಬಾಲ್ಯದ ನೆನಪುಗಳು ನಮಗೆ ಅರಿಯದೆ ಶಿಲ್ಪಗಳನ್ನು ರಚಿಸುವಾಗ ಅದರಲ್ಲಿ ಮೂಡುತ್ತದೆ. ಹಾಗೂ ಕೆಲವು ನಮ್ಮಲ್ಲಿರುವಂತಹ ಹೇಳಿಕೊಳ್ಳಲಾಗದ ವಿಷಯವನ್ನು ಶಿಲ್ಪಗಳ ಮೂಲಕ ತೋರಿಸುವುದು. ನಮ್ಮ ಜೀವನದಲ್ಲಿ ನಡೆದಂತಹ ಘಟನೆಗಳನ್ನು ಸಹ ಯಾವುದೇ ಮಾಧ್ಯಮದ ಮೂಲಕ ಅದನ್ನು ತೋರ್ಪಡಿಸಲು ಇಲ್ಲಿ ಅವಕಾಶವಿರುತ್ತದೆ.  ಪ್ರಶ್ನೆ :  ಪ್ರೀತಿಯ ಅಭಿವ್ಯಕ್ತಿ ನಿಮ್ಮ ಶಿಲ್ಪಗಳಲ್ಲಿ ಹೆಚ್ಚು …ಅಲ್ವಾ ? ಉತ್ತರ : ಅಭಿವ್ಯಕ್ತಿ ಎಂಬ ಪದವನ್ನು ಸರಳವಾಗಿ ವಿವರಿಸುವುದಾದರೆ, ನಮ್ಮ ಭಾವನೆಗಳನ್ನು ದೃಶ್ಯದ ಮೂಲಕ ಹೊರಹಾಕುವುದು. ನಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತ ಪಡಿಸುವುದಕ್ಕೆ ಅಭಿವ್ಯಕ್ತಿ ಎಂಬ ಸಾಧನದ ಮೂಲಕ ಚಿತ್ರ, ಶಿಲ್ಪದ ಮೂಲಕವೂ ವ್ಯಕ್ತಪಡಿಸಬಹುದು. ಈ ಎಲ್ಲ ದಾರಿಗಳ ಮೂಲಕ ಪ್ರಕಟಪಡಿಸುವುದೇ ಅಭಿವ್ಯಕ್ತಿ ಅನ್ನಿಸಿಕೊಳ್ಳುತ್ತದೆ. ಅಭಿವ್ಯಕ್ತಿ ಮನುಷ್ಯರ ಸಹಜ ಪ್ರಕ್ರಿಯೆ.  ಪ್ರಶ್ನೆ :  ಮಿಥುನ ಶಿಲ್ಪ ಗಳನ್ನು ಆಧುನಿಕ ಕಲಾ ಶೈಲಿಯಲ್ಲಿ ಹೆಚ್ಚು  ರೂಪಿಸಿದ್ದೀರಿ… ಹೇಗೆ ಇದರ ಪ್ರಭಾವ ಆಯಿತು. ಏನು ಉದ್ದೇಶ ? ಉತ್ತರ : ಮಿಥುನ ಶಿಲ್ಪಗಳು ಕ್ರಿ.ಶ.೨ ನೇ ಶತಮಾನದಷ್ಟು ಪ್ರಾಚೀನವಾದುದು. ಕೆಲವು ಶಿಲ್ಪಗಳು ದೇವಾಲಯದ ಗೋಪುರದ ಮೇಲೆ, ದೇವಾಲಯದ ಭಿತ್ತಿಯ ಮೇಲೆ ರಚಿಸಲಾಗಿದೆ. ಅವುಗಳ ಹಿಂದಿನ ಆಶಯ ಬೇರೆ.  ಹಿಂದಿನ ಕಾಲದಲ್ಲಿ ಲೈಂಗಿಕತೆ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಉದ್ದೇಶವಾಗಿತ್ತು. ನಾನು ರಚಿಸಿದ ಶಿಲ್ಪಗಳಲ್ಲಿ ಮಿಥುನ ಶಿಲ್ಪಗಳನ್ನು ಪ್ರಸ್ತುತ ಸನ್ನಿವೇಶ ನಡೆದಿರುವ ಘಟನೆ ಮತ್ತು ಲೈಂಗಿಕ ಕಿರುಕುಳ, ಸಮಾಜಕ್ಕೆ ಒಳಿತಾಗುವ ದೃಶ್ಯವನ್ನು ನನ್ನ ಶಿಲ್ಪಗಳಲ್ಲಿ ಕಾಣಬಹುದು.  ಪ್ರಶ್ನೆ :  ನಾಡಿನ ದೇವಾಲಯದಲ್ಲಿನ ಶೃಂಗಾರ ಮತ್ತು ಮಿಥುನ ಶಿಲ್ಪಗಳ ಪ್ರಭಾವ ನಿಮ್ಮ ಮೇಲಿದೆಯೇ? ಉತ್ತರ : ದೇವಾಲಯದಲ್ಲಿರುವ ಕಥಾನಕ, ದೇವತಾ ಶಿಲ್ಪಗಳು, ಮಿಥುನ ಶಿಲ್ಪಗಳು, ಮತ್ತು ಆ ಕಾಲದಲ್ಲಿ ರಚಿತವಾದ ಶಿಲ್ಪಶಾಸ್ತ್ರಗಳು ಗ್ರಂಥಗಳು ದೇವಾಲಯಗಳ ನಿರ್ಮಾಣ ಇವೆಲ್ಲ ಪ್ರಭಾವ ನನ್ನ ಕೃತಿಗಳ ಮೇಲಾಗಿದೆ.  ಪ್ರಶ್ನೆ :  ಕಲಾ ಪ್ರಕಾರದಲ್ಲಿ ಯಾವ ಮಾಧ್ಯಮ ನಿಮಗೆ ಇಷ್ಟ? ಉತ್ತರ : ಶಿಲಾ ಮಾಧ್ಯಮ  ಪ್ರಶ್ನೆ :  ಬದಾಮಿ , ಪಟ್ಟದಕಲ್ಲು ಶಿಲಾ ಬಾಲಕಿಯರಿಗೂ, ಹಳೇಬೀಡು, ಬೇಲೂರು ಶಿಲಾ ಬಾಲಕಿಯರಲ್ಲಿ ಯಾರು ಚೆಂದ? ಆ ಶಿಲ್ಪಗಳ ವಿಶೇಷತೆ ಏನು ? ಉತ್ತರ : ಚೆಂದ ಪ್ರಶ್ನೆಯ ಬರುವುದಿಲ್ಲ ಆಯಾ ಕಾಲಘಟ್ಟದಲ್ಲಿ ಪ್ರಚಲಿತದಲ್ಲಿರುವ ಕೆಲವು ಉಡುಗೆ ತೊಡುಗೆಗಳನ್ನು ಧರಿಸಿರುತ್ತಾರೆ. ಬಾದಾಮಿ ಚಾಲುಕ್ಯ ಶಿಲ್ಪಗಳಲ್ಲಿ ಉದ್ದ ನೀಳವಾಗಿ ವಸ್ತ್ರವಿನ್ಯಾಸಗಳು,  ಅಂದಿನ ಕಾಲದಲ್ಲಿ ಪ್ರಚಲಿತವಿದ್ದ ವೇಷಭೂಷಣಗಳು ಇಲ್ಲಿ ರಚನೆಯಾಗಿವೆ. ವಿವಿಧ ಭಾವನಾತ್ಮಕ ಸಂಬAಧವನ್ನು ಹೊಂದಿರುವ ಜೋಡಿ ಶಿಲ್ಪ, ಕೆಲವು ಸಂದರ್ಭಗಳಲ್ಲಿ ಒಂದು ಹೊಸ ರೀತಿಯ ಶಿಲ್ಪಗಳು ಇಂದಿಗೂ ನಾವು ಕಾಣುತ್ತೇವೆ. ಬೇಲೂರಿನ ಶಿಲ್ಪಗಳು ಪ್ರತ್ಯೇಕವಾದ ಶಿಲೆಯನ್ನು ಬಳಸಿ ರಚಿಸಿದ ಶಿಲ್ಪಗಳನ್ನು ತಂದು ಜೋಡಿಸಲಾಗಿದೆ. ಆದರೆ ಬಾದಾಮಿಯಲ್ಲಿ ಏಕಶಿಲಾ ಬೆಟ್ಟದಲ್ಲಿ ಅಖಂಡ ಶಿಲೆಯಲ್ಲಿ ಕೆತ್ತಿರುವುದು ವಿಶೇಷವಾಗಿದೆ. ಅಲ್ಲದೆ ಕಠಿಣವಾದ ಮರಳು ಶಿಲೆಯನ್ನು ಇಲ್ಲಿ ಶಿಲ್ಪಕ್ಕೆ ಬಳಸಿರುವುದು ಮಹತ್ವದ್ದು. ಇದು ಶಿಲ್ಪಕಾರನ ನೈಪುಣ್ಯ, ಕಠಿಣ ಪರಿಶ್ರಮ, ವಿಷಯ ಹಾಗೂ ಮಾಧ್ಯಮದ ಬಗ್ಗೆ ಇರುವ ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತದೆ.  ಪ್ರಶ್ನೆ :  ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ಪ್ರಸ್ತುತ ರಾಜಕೀಯ ಜಾತಿಯಿಂದ ತುಂಬಾ ಹದಗೆಟ್ಟಿದೆ. ಕಲಾವಿದರಿಗೆ ಇಂದಿನ ಪರಿಸ್ಥಿತಿಯಲ್ಲಿ ಬೆಲೆ ಇಲ್ಲದಂತಾಗಿದೆ. ತಮ್ಮ ಸ್ವಾರ್ಥಕ್ಕಾಗಿ ಕಲಾವಿದರನ್ನು ಬಲಿಪಶು ಮಾಡುತ್ತಿದ್ದಾರೆ. ರಾಜಕೀಯ ಅನ್ನೋದೆ ಇರಬಾರದು ನನ್ನ ಪ್ರಕಾರ  ಪ್ರಶ್ನೆ :  ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಉತ್ತರ : ಧರ್ಮ, ದೇವರು ಅಂದರೆ ಯಾವುದು ನಂಬಿಕೆ ಅನ್ನುವುದೆ ದೇವರು ನನ್ನ ಪ್ರಕಾರ. ಧರ್ಮವು ಮಾನವ ಸಮಾಜವನ್ನು ಸಂರಕ್ಷಿಸುವ ಒಂದು ಪ್ರಮುಖ ಸಾಧನವಾಗಿದೆ. ಧರ್ಮೋ ರಕ್ಷತಿ ರಕ್ಷತಃ ಅಂದರೆ ಧರ್ಮವನ್ನು ರಕ್ಷಿಸುವವರನ್ನು ಧರ್ಮವು ರಕ್ಷಿಸುತ್ತದೆ. ಧರ್ಮನಾಶವಾದಲ್ಲಿ ಜನಾಂಗವೇ ನಾಶವಾಗುವುದು. ಒಳ್ಳೆಯ ರೀತಿಯಲ್ಲಿ ಬದುಕುವುದೆ ಧರ್ಮ. ದಯಯೇ ಧರ್ಮದ ಮೂಲ. ದೇವನೊಬ್ಬ ನಾಮ ಹಲವು.  ಪ್ರಶ್ನೆ : ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಉತ್ತರ : ಪ್ರಸ್ತುತ ಸಾಂಸ್ಕೃತಿಕ ವಾತಾವರಣ,  ಅಕಾಡೆಮಿಗಳಲ್ಲಿಯೂ ಕೂಡ ರಾಜಕೀಯದಿಂದ ಹೊರತಾಗಿಲ್ಲ.  ಇತ್ತೀಚಿನ ದಿನಗಳಲ್ಲಿ ಯಾವುದೇ ಕಾರ್ಯಗಳಲ್ಲಿ ರಾಜಕೀಯ ಮುಖ್ಯ ಪಾತ್ರ ವಹಿಸುತ್ತಿದೆ.  ಪ್ರಶ್ನೆ :  ಚಿತ್ರ , ಕಲಾ ಲೋಕ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ : ಪ್ರಸ್ತುತ ಇತ್ತೀಚಿನ ದಿನಗಳಲ್ಲಿ ಕಲಾ ಲೋಕದಲ್ಲಿಯೂ ಕೂಡ ರಾಜಕೀಯ ಮಧ್ಯಸ್ಥಿಕೆ ವಹಿಸುತ್ತಿದೆ. ರಾಜಕೀಯ ಸ್ವಾರ್ಥವೇ ಹೆಚ್ಚಾಗಿದೆ. ನಿಜವಾದ ಕಲಾವಿದರನ್ನು ಗುರುತಿಸುವುದು ಕಷ್ಟವಾಗಿದೆ.  ಪ್ರಶ್ನೆ :  ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉತ್ತರ : ಮನುಜ ಜನ್ಮವು ಒಂದೆ ಎಂದು ತಿಳಿದುಕೊಂಡು ಧರ್ಮ ದಿಂದ ನಡೆಯಬೇಕು.  ಪ್ರಶ್ನೆ : ಕನ್ನಡ ಹಾಗೂ ಆಂಗ್ಲ ಭಾಷೆಯ ಕಲಾಪ್ರಕಾರದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕಲಾವಿದ ಯಾರು ? ಉತ್ತರ : ಕರ್ನಾಟಕದ ಶಿಲ್ಪಿ. ದೇವಲಕುಂದ ವಾದಿರಾಜ ಹಾಗೂ ಪಾಶ್ಚಿಮಾತ್ಯ ಕಲಾವಿದ  ಹೆನ್ರಿ ಮೋರ್. ********************** ************************************* ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

ಕಬ್ಬಿಗರ ಅಬ್ಬಿ – ಸಂಚಿಕೆ ೩

ಶ್ರಾವಣ ಗೀತ ಮಹಾದೇವ ಕಾನತ್ತಿಲ ಸಂಕ್ರಮಣ! ಹೌದು, ಸಂಕ್ರಮಣ, ಒಂದು ಸ್ಥಿತಿಯಿಂದ ಇನ್ನೊಂದಕ್ಕೆ, ಮತ್ತೆ ಮತ್ತೊಂದಕ್ಕೆ!.  ಅಂಗಳದಲ್ಲಿ ಲಂಗದಾವಣಿ ಹಾಕಿ ಕುಣಿದು ಹಾರುತ್ತಿದ್ದ ಹುಡುಗಿ, ಪುಷ್ಪವತಿಯಾಗಿ, ಗಾಂಭೀರ್ಯ ತುಂಬಿ, ಗಜಗಾಮಿನಿಯಾದಾಗ ಸಂಕ್ರಮಣ. ಒಂದು ಮುಂಜಾನೆ, ಕಪ್ಪುಹಸಿರು ಜಡ ಎಲೆಗಳ ಮಾಮರದಲ್ಲಿ, ನಸುಗೆಂಪು ತಳಿರು ಚಿಗುರೊಡೆದಾಗ ಮರಕ್ಕೆ ಸಂಕ್ರಮಣ. ನಲವತ್ತರ ನಸುಕಲ್ಲಿ, ಕಣ್ಣು ಮಬ್ಬಾಗಿ ನೆಟ್ಟ ನೇರ ನೋಟಕ್ಕೆ, ಚಾಳೀಸು ಬಂದಾಗ ಸಂಕ್ರಮಣ. ಅರುವತ್ತಕ್ಕೆ ವೃತ್ತಿಯಿಂದ ನಿವೃತ್ತಿ ಸಂಕ್ರಮಣ. ಹೆಚ್ಚೇನು! ಸೂರ್ಯೋದಯ,ಸೂರ್ಯಾಸ್ತಮಾನ ದಿನ ರಾತ್ರೆಗಳ ಅದಲು ಬದಲು ಸಂಕ್ರಮಣ!.  ಪ್ರಕೃತಿಯಲ್ಲಿ, ಬದುಕಿನ ಘಟನೆಗಳಲ್ಲಿ, ಅರ್ಥವ್ಯವಸ್ಥೆಯ ಸಾಧ್ಯತೆಗಳಲ್ಲಿ, ನೇರವಾಗಿ ಚಲಿಸುವ ನಮ್ಮ ಕಾರು, ಅಚಾನಕ್ ಆಗಿ ರಸ್ತೆ ಬಲಕ್ಕೋ, ಎಡಕ್ಕೋ  ತಿರುಗಿದರೆ ಒಂದು ಬಿಂದುವಿನಲ್ಲಿ ದಾರಿ ಸಂಕ್ರಮಿಸುತ್ತದೆ. ಹೌದು ಅಲ್ಲೊಂದು ಸಂಧಿಬಿಂದುವಿದೆ. ಇಂತಹ ಸಂಕ್ರಮಣಕ್ಕೆ, ಕವಿಮನಸ್ಸನ್ನು ಹೇಗೆ ಸ್ಪಂದಿಸಬಹುದು ಎನ್ನುವುದು ಕೌತುಕವೇನಲ್ಲ. ಕವಿಮನಸ್ಸು ಅತ್ಯಂತ ಸೂಕ್ಷ್ಮ. ಸುತ್ತುಮುತ್ತಲಿನ ಅತಿ ಚಿಕ್ಕ ಬದಲಾವಣೆಗಳನ್ನೂ, ಗಮನಿಸಿ ಸ್ಪಂದಿಸುವ, ಅನುಭವಿಸಿ, ಸೃಜಿಸುವ ಮನಸ್ಸದು. ಉದಾಹರಣೆಗೆ, ನಿನ್ನೆಯವರೆಗೆ ರಣರಣ ಬಿಸಿಲು, ಸಾಯಂಕಾಲ ಗಾಳಿಬೀಸಿದರೂ, ಒಲೆಯಿಂದ ಹೊರಟ ತಿದಿಯ ಹಾಗೆ ಬೇಯಿಸುವ ಗಾಳಿ. ಧೂಳನ್ನೆಬ್ಬಿಸುವ, ಸುಳಿ ಸುಳಿಯಾಗಿ ತಿರುಗಿಸುವ ಸುಂಟರಗಾಳಿ. ಆಕಾಶದಲ್ಲಿ ಬಿಳೀ ಮೋಡಗಳು ನಿರಾಶೆಯ ಹೆಣವನ್ನು ಹೊತ್ತು ಸ್ಮಶಾನ ಹುಡುಕುವಂತೆ ಸುತ್ತುವಾಗ, ಮಳೆಯೆಲ್ಲಿಯದು! ಎಲ್ಲೋ ಮರೀಚಿಕೆಯಂತೆ ಒಂದೋ ಎರಡೋ ಹನಿ ಉದುರಿಸಿ ವಾತಾವರಣವನ್ನು, ಇಡ್ಲಿ ಬೇಯಿಸುವ ಕುಕ್ಕರ್ ನೊಳಗಿನ ಹಬೆಯಂತೆ ಬೆವರಿಳಿಸುವ ಹವೆ.  ಹಾಗಿದ್ದಾಗ ಅಚಾನಕ್ ಆಗಿ ಮಳೆ ಬಂದರೆ! ಅದೆಂಥಾ ಮಳೆ!. ಇಳೆ ತಣಿಸುವ, ನೊಂದು ಬಿಕ್ಕಳಿಸುವ ಮನಸ್ಸಿಗೆ ಬೆನ್ನು ಸವರಿ ಸಾಂತ್ವನ ಹೇಳುವ ಅಮ್ಮನ ಸ್ಪರ್ಶದಂತಹಾ ಮಳೆ!. ಮಳೆಯೋ ಮಳೆ. ಹ್ಞಾ! ಇದೊಂದು ಮೈನವಿರೇಳಿಸುವ ಸಂಕ್ರಮಣವೇ!. ಹೀಗೆ ಉತ್ತರ ಕರ್ನಾಟಕಕ್ಕೆ ಹಾಜರು ಹಾಕುವುದು ಶ್ರಾವಣ! (ಇವಿಷ್ಟೂ ಮಲೆನಾಡು ಮತ್ತು, ಕರಾವಳಿಗೆ ಅನ್ವಯವಾಗಲ್ಲ. ಅಲ್ಲಿ, ಆಷಾಢ ಪೂರ್ತಿ ಮಳೆಸುರಿದು,ಶ್ರಾವಣದಲ್ಲಿ ಸೋನೆಮಳೆ.) ಶ್ರಾವಣ ಬಂತೆಂದರೆ, ಬೇಂದ್ರೆಯಂತಹ ಬೇಂದ್ರೆ, ಕರಗಿ ಹರಿಯುತ್ತಾರೆ.. “ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ ಬಂತು ಶ್ರಾವಣ ಓ! ಬಂತು ಶ್ರಾವಣ” ಸಮ ದೃಷ್ಟಿ, ಬೇಂದ್ರೆಯವರ ಶ್ರಾವಣಕ್ಕೆ!.  ಈ ಶ್ರಾವಣ, ಎಲ್ಲರಿಗೂ, ಎಲ್ಲಾ ನೆಲಕ್ಕೂ, ತಾರತಮ್ಯವಿಲ್ಲದೆ ಕದ ತಟ್ಟಿ, ಎಲ್ಲವನ್ನೂ ಹೊಸತಾಗಿಸುವ ಸಂಕ್ರಮಣ ಕ್ರಿಯೆ. ಶ್ರಾವಣದ ಅಗಾಧತೆ,  ಮನಷ್ಯನ ಯೋಚನೆಗೂ ಮೀರಿದ ಅದರ ಶಕ್ತಿಯನ್ನು, ವ್ಯಾಪ್ತಿಯನ್ನು ಬೇಂದ್ರೆಯವರು ಈ ಕೆಳಗಿನ ಸಾಲುಗಳಲ್ಲಿ ಅನುಭವಿಸುತ್ತಾರೆ. “ಕಡಲಿಗೆ ಬಂತು ಶ್ರಾವಣಾ| ಕುಣಿಧ್ಹಾಂಗ ರಾವಣಾ| ಕುಣಿದಾವ ಗಾಳಿ| ಭೈರವನ ರೂಪತಾಳಿ” ಇಲ್ಲಿ, ಕಡಲು, ಗಾಳಿ ಇತ್ಯಾದಿಗಳು, ಬೇಂದ್ರೆಯವರ ಕಾವ್ಯ ಕುಸುರಿಯ ಹಲವು ಅರ್ಥಸಾಧ್ಯತೆಗಳು. ಅವರು ಮುಂದುವರೆದು, “ಶ್ರಾವಣ ಬಂತು ಘಟ್ಟಕ್ಕ ರಾಜ್ಯ ಪಟ್ಟಕ್ಕ, ಬಾಣ ಮಟ್ಟಕ್ಕ” ಅನ್ನುತ್ತಾರೆ. ಶ್ರಾವಣ ಎಂಬ ಪ್ರತಿಮೆಯನ್ನು, ಮಳೆಯಿಂದ, ಎತ್ತರಕ್ಕೆ ಬೆಳೆಸಿ, ಅದಕ್ಕೆ ರಾಜ್ಯಭಾರದ ಹವಾಮಾನದ ಪ್ರತಿಮೆ, ವಿವಿಧ ಬದುಕಿನ ಸ್ತರಗಳನ್ನು ಅದು ಆವರಿಸುವ ಪ್ರತಿಮೆ, ಅದರ ಅಗಾಧತೆ ಇತ್ಯಾದಿ ಆಯಾಮಗಳಿಂದ ಅರ್ಥವರ್ಷವಾಗಿಸುತ್ತಾರೆ. ಆಷಾಢ ಮಾಸದ ಅಗಂತುಕ, ಅಪರೂಪದ ಅತಿಥಿ ಮಳೆ. ನೆಲ ಹಸನು ಮಾಡಿ, ಬಿತ್ತಿ, ಮಳೆಗಾಗಿ ಕಾಯುವಾಗ, ಅದೋ ನೋಡಿ, ಆಗಸ ತುಂಬಾ ದಟ್ಟ ಮೋಡಗಳು.ಮೋಡಗಳು ಜೀವಜಾಲಕ್ಕೆ ಹೊಸ ಭರವಸೆಯ ಮೋಡ.‌ ಬರೇ ಮೋಡವಲ್ಲ, ಆಗಸದ ತುಂಬಾ ತೂತು ಬಿದ್ದು ಸೋರಿ ಬೀಳುವ ತುಂತುರು ನಿರಂತರ ಮಳೆ, ಆಶೆ ಆಶೋತ್ತರಗಳ ಸಂಕೇತ. “ಬನಬನ ನೋಡು ಈಗ ಹ್ಯಾಂಗ| ಮದುವಿ ಮಗನ್ಹಾಂಗ ತಲಿಗೆ ಬಾಸಿಂಗ| ಕಟ್ಟಿಕೊಂಡೂ| ನಿಂತಾವ ಹರ್ಷಗೊಂಡು” ಶ್ರಾವಣ ಎಂದರೆ ಬೇಂದ್ರೆಯವರಿಗೆ ಸೃಷ್ಟಿಯ ಮುಖಬಾಗಿಲು.  ಅಸಂಖ್ಯ ಬೀಜಗಳು ತಂತಾನೇ ಮೊಳೆತು ಜೀವಸಂಕುಲಗಳ ಚಿಲಿಪಿಲಿ ಎಷ್ಟು ಅಗಾಧ ಎಂದರೆ  ಬೆಟ್ಟಗಳೆಲ್ಲಾ ಹಸಿರಿನ ಅಂಗಿ ತೊಡುತ್ತವೆ. ಶ್ರಾವಣ ಎಂದರೆ ಅದು ಸೃಷ್ಟಿಕ್ರಿಯೆಯ ಉತ್ಸವವೂ ಹೌದು.  ಬನಬನಗಳೂ ಬಾಸಿಂಗ ಕಟ್ಟಿ ಮದುಮಗ, ಮದುಮಗಳಾಗಿ ಸಂಭ್ರಮಿಸುವದನ್ನು ಬೇಂದ್ರೆಯವರು, ಶ್ರಾವಣದ ಮೂಲಕ ಕಾಣುತ್ತಾರೆ. ರೈತರಿಗೆಲ್ಲ, ಬಿತ್ತಿದ,ಬೀಜ, ಮೊಳಕೆ ಹಸಿರು ಚಿಗುರೊಡೆಯುವ ಸಂತಸ. ಪ್ರಕೃತಿ ಹಸಿರುಮನೆಯಾಗಿ ಹೊಸ ಹಕ್ಕಿಗಳನ್ನು ಕರೆಯುತ್ತೆ, ಬಳ್ಳಿಗಳು ಬಳುಕಿ ಮರವೇರಿ ಹೂಗಳ ಬಾವುಟ ಹಾರಿಸುತ್ತವೆ. ಇಂತಹಾ ಶ್ರಾವಣ, ಪ್ರಕೃತಿಯ ಸಂಭ್ರಮದ ಬಾಗಿಲು ತೆರೆದಂತೆ,  ಜೀವಸಂಕುಲಕ್ಕೆ ಚೇತನ ಮೂಡಿಸಿದಂತೆ,  ಹಬ್ಬಗಳೂ ಜನಮಾನಸಕ್ಕೆ ಬಣ್ಣ ತುಂಬುತ್ತವೆ. ಮದುವೆಯಾಗಿ ಗಂಡನಮನೆ ಸೇರಿದ ಹೆಣ್ಣು ಮಗಳನ್ನು ಹೊಕ್ಕುಳಬಳ್ಳಿ ಸೆಳೆಯುತ್ತೆ,ಆಷಾಢ ಮಾಸದ ಕೊನೆಯಲ್ಲಿ. ಅಣ್ಣ ಬಂದು ತವರುಮನೆಗೆ ಕರೆದೊಯ್ಯುವ, ಹಬ್ಬದ ಸಡಗರ ಶ್ರಾವಣದ ಚೌತಿ ಮತ್ತು ಪಂಚಮಿ. ಜಾನಪದ ಸಂಗೀತಕ್ಕೂ ಮತ್ತು ಶ್ರಾವಣಕ್ಕೂ ಬಿಟ್ಟಿರದ ಸಂಬಂಧ. ‘ಆನಂದ ಕಂದ’ ( ಬೆಟಗೇರಿ ಕೃಷ್ಣಶರ್ಮ) ಅವರು ಜಾನಪದ ಶೈಲಿಯಲ್ಲಿ ಬರೆದ ಹಾಡು.. “ಪಂಚಮಿ ಹಬ್ಬ ಉಳಿದಿದೆ ದಿನ ನಾಕs.. ಅಣ್ಣ ಬರಲಿಲ್ಲ ಯಾಕs ಕರಿಯಾಕs..” ಅಂತ ಆರ್ತದನಿಯಲ್ಲಿ ಅಣ್ಣನಿಗಾಗಿ ಕಾಯುವ ತಂಗಿಯ ಹಾಡು.  ಈ ಹಾಡು ಮನಮನವನ್ನೂ ಹೊಕ್ಕು, ಪ್ರತಿಯೊಂದು ಮನೆಯಲ್ಲೂ ಗುನುಗುನಿಸಿ, ಬರೆದವರ ಹೆಸರೇ ಮರೆತಷ್ಟು ಜಾನಪದ ಹಾಡಿನ ಸ್ವರೂಪ ಪಡೆದಿದೆ. ಈ ಶ್ರಾವಣವೇ ಹೀಗೆ. ಇದರ ಮಳೆ, ಇದರ ಮೋಡ, ಮೊಳಕೆಯೊಡೆಯುವ ಹೊಲ, ಎಲ್ಲವೂ ಆಶೆ ಆಶೋತ್ತರಗಳನ್ನು, ಭರವಸೆಗಳನ್ನು ಸೋನೆಮಳೆಯಾಗಿ ಸುರಿಸುತ್ತೆ. ಈ ಹಾಡಿನ ಕೆಳಗಿನ ಸಾಲುಗಳನ್ನು ನೋಡಿ.. “ನಮ್ಮ ತವರೀಲಿ ಪಂಚಮಿ ಭಾರಿ ಮಣದ ತುಂಬಾ ಬಟ್ಟಲ ಕೊಬ್ಬರೀ ಎಳ್ಳು ಅವಲಕ್ಕಿ ತಂಬಿಟ್ಟು ಸೂರಿ ನಾನೂ ತಿನುವಾಕಿ ಬಂದ್‌ ಹಾಂಗ ಮನಕ- ಅಣ್ಣ ಬರಲಿಲ್ಲ ಯಾಕೋ ಕರಿಲಾಕ …” ಪಂಚಮಿ ಹಬ್ಬದ ಸಿಹಿ ತಿಂಡಿಗಳು, ಮನೆ ಮುಂದೆ ಚಿತ್ರಿಸುವ ರಂಗೋಲಿಗಳು, ಹೆಣ್ಮಕ್ಕಳೆಲ್ಲಾ ಮಕ್ಕಳೆಲ್ಲಾ ಸಪ್ತವರ್ಣದ ಬಳೆ ತೊಟ್ಟು ಗಲಗಲಿಸಬೇಕು, ಹೊಸ ಅಂಗಿ ತೊಟ್ಟು,ಜೋಕಾಲಿ ಆಡಬೇಕು, ಎಷ್ಟೆಂದರೆ, ಈ ಹಬ್ಬವನ್ನೇ, ಜೋಕಾಲಿ ಹಬ್ಬ ಎನ್ನುವಷ್ಟು!. ಶ್ರಾವಣ ಅಂದರೆ ಬರೇ ಮಳೆಯಲ್ಲ, ಇದೊಂದು ಸಮಾಜದಿಂದ ಸಮಾಜಕ್ಕೇ ಕಳೆಕಟ್ಟುವ ಹಬ್ಬಗಳ ತೋರಣ. ಶ್ರಾವಣದ ಪಂಚಮಿಯಂದು ಮದುವೆಯಾದ ಹೆಣ್ಣುಮಗಳು ತನ್ನ ತವರಿಗೆ ಬಂದು,  ನಾಗನಿಗೆ ಹಾಲೆರೆದು ತಮ್ನ ಬೆನ್ನು, ಬಸಿರು ತಣ್ಣಗಿರಿಸಬೇಕೆಂದು ನಾಗನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ತನ್ನ ಬೆನ್ನು ಎಂದರೆ ತವರು, ಅಣ್ಣ ತಮ್ಮಂದಿರು, ಬಸಿರು ಎಂದರೆ ಮುಂದಿನ ಪೀಳಿಗೆ. ಹೀಗೆ ತವರಿಗಾಗಿ ಮತ್ತು ತನ್ನ ಪೀಳಿಗೆಗಾಗಿ ಪ್ರಾರ್ಥನೆ ಮಾಡುವಾಗ,ಆಕೆ, ಎರಡು ಮನೆಗಳನ್ನು ತನ್ನ ಮೂಲಕ ಜೋಡಿಸುತ್ತಾಳೆ. ಶ್ರಾವಣ ಕಳೆಯುವ ಕಾಲವಲ್ಲ, ಕೂಡುವ ಕೂಡಿ ಚಿಗುರುವ ಸಮೃಧ್ಧಿಯ ಕಾಲ. ಹೀಗೆ ಶ್ರಾವಣ, ಕವಿಮನಸ್ಸಿನೊಳಗೆ ಹೇಗೆ ಹಲವಾರು ಪ್ರತಿಮೆಗಳ ರೂಪತಳೆದು ಜನ್ಮಿಸುತ್ತದೋ,ಹಾಗೆಯೇ ಜಾನಪದದಲ್ಲೂ ಹಲವು ಆಯಾಮಗಳಿಗೆ ರೂಪಕವಾಗಿ, ಹಳತನ್ನು ಮರೆಯದೆ ಹೊಸತಿಗೆ ತೆರೆಯುವ, ಸ್ವಸ್ಥ ಸಮಾಜದ ನಿರ್ಮಾಣದ, ಸಂಕ್ರಮಣ, ಜೀವಸಂಭ್ರಮ. **********

ನವಿರು ಹಾಸ್ಯದೊಳಗೆ ಚುಚ್ಚುವ ಮೊನಚಿದೆ ಹಿಂದೊಮ್ಮೆ ಪ್ರಮಿಳಾ ರಾಜ್ಯವೊಂದಿತ್ತಂತೆ. ಅಲ್ಲಿ ಮಹಿಳೆಯರೇ ರಾಣಿಯರು, ಅಧಿಕಾರದಲ್ಲಿರುವವರು ಎಲ್ಲಾ. ಅಲ್ಲಿ ಗಂಡಸರಿಗೆ ಪ್ರವೇಶವೇ ಇರಲಿಲ್ಲವಂತೆ. ಸಂತಾನ ಬೇಕಾದ ಸ್ತ್ರೀಯರೂ ರಾಜ್ಯದ ಹೊರಗೆ ಹೋಗಿ ಪಡೆಯಬೇಕಾಗಿತ್ತಂತೆ. ಒಂದುವೇಳೆ ಗಂಡು ಸಂತಾನವನ್ನು ಪಡೆದರೆ ಆ ಮಗುವನ್ನು ಅಲ್ಲಿಯೇ ಬಿಟ್ಟು ಬಿಡುವುದು ಅನಿವಾರ್ಯವಾಗಿತ್ತಂತೆ. ಆದರೆ ಹೆಣ್ಣು ಮಗುವಾಗಿದ್ದರೆ ಮಾತ್ರ ತಮ್ಮ ರಾಜ್ಯಕ್ಕೆ ಕರೆದೊಯ್ಯಬಹುದಿತ್ತಂತೆ. ಅಂತಹುದ್ದೊಂದು ಪ್ರಮಿಳಾ ರಾಜ್ಯವಿದ್ದರೆ  ನಾನೂ ಅಲ್ಲಿಯೇ ಹೋಗಿ ಇರಬಹುದಾಗಿತ್ತು ಎಂದು ಎಷ್ಟೋ ಸಲ ಅಂದುಕೊಳ್ಳುತ್ತಿರುತ್ತೇನೆ. ಎಷ್ಟೊಂದು ಕೆಲಸಗಳು. ಮುಗಿಯದ, ಮುಗಿಯಲೊಲ್ಲದ ಕೆಲಸಗಳು ದಿನವಿಡೀ ಆದಾಗಲೆಲ್ಲ ಮನೆಯಲ್ಲಿರುವ ಹಿರಿಯ, ಕಿರಿಯ ಮತ್ತು ಅತ್ತ ಹಿರಿಯನೂ ಅಲ್ಲದ, ಇತ್ತ ಕಿರಿಯನೂ ಅಲ್ಲದ ಮೂವರು ಗಂಡಸರಿಗೆ ಒಳಗೊಳಗೇ ಬೈಯ್ದುಕೊಳ್ಳುತ್ತೇನೆ. ಮಹಿಳಾ ಸಾಮ್ರಾಜ್ಯವಾಗಬೇಕಿತ್ತು. ಅಧಿಕಾರವೆಲ್ಲ ನಮ್ಮದೇ ಕೈಯ್ಯಲ್ಲಿದ್ದರೆ ಇವರನ್ನೆಲ್ಲ ಆಟ ಆಡಿಸಬಹುದಿತ್ತು ಎಂದುಕೊಳ್ಳುತ್ತ, ಏನೇನು ಮಾಡಬಹುದಿತ್ತು ನಾನು ಎಂದೆಲ್ಲ ಊಹಿಸಿಕೊಂಡು ಮನದೊಳಗೇ ನಸುನಗುತ್ತಿರುತ್ತೇನೆ ಆಗಾಗ. ನಾನು ಹಾಗೆ ನಗುವುದನ್ನು ಕಂಡಾಗಲೆಲ್ಲ ‘ಅಮ್ಮ ಹಗಲುಗನಸು ಕಾಣ್ತಿದ್ದಾಳೆ’ ಎಂದು ಗುಟ್ಟಾಗಿ ಅಪ್ಪನ ಬಳಿ ಹೇಳಿಕೊಂಡು ಮಕ್ಕಳು ನಗುತ್ತಿರುತ್ತಾರೆ. ಅಂತಹುದ್ದೇ ಒಂದು ಕನಸಿನ ಕಥೆ ಇಲ್ಲಿದೆ. ಸಂಕಲನದ ಮೊದಲ ಕಥೆ, ಶೀರ್ಷಿಕಾ ಕಥೆಯೂ ಆದ ಎಪ್ರಿಲ್ ಫೂಲ್ ಇದು. ಇಲ್ಲಿ ಗಂಡ ರಾಮು ಮನೆಗೆಲಸವನ್ನೆಲ್ಲ ಮಾಡುತ್ತಾನೆ. ಮಗ ದೀಪುವನ್ನು ಎಷ್ಟು ಓದಿದರೂ ಮನೆಗೆಲಸ ಮಾಡೋದು ತಾನೆ ಎಂದು ಮುಂದೆ ಓದಿಸದೇ ಮನೆಗೆಲಸ ಕಲಿಸಿದ್ದರು. ಮಗಳು ಭೂಮಿ ಮತ್ತು ಹೆಂಡತಿ ಮೈತ್ರಿ ರಾವ್ ಮಾತ್ರ ಹೊರಗಡೆ ಕೆಲಸಕ್ಕೆ ಹೋಗುವವರು. ಹೆಣ್ಣಿನ ಮೇಲೆ ಆಗುತ್ತಿರುವ ದೌರ್ಜನ್ಯ ಈಗ ಗಂಡಿನ ಮೇಲೆ ಆಗುತ್ತಿದೆ. ಗಂಡು ಹೆಣ್ಣಿನ ಅನುಗ್ರಹಕ್ಕಾಗಿ ಅಳುತ್ತಾನೆ. ತನ್ನನ್ನು ಬಿಟ್ಟು ಹೋದರೆ ಎಂದು ಹಳಹಳಿಸುತ್ತಾನೆ. ಹೆಣ್ಣು ಸರ್ವ ಸ್ವತಂತ್ರಳು. ಹೊರಗಡೆಯ ಜವಾಬ್ಧಾರಿ ಹೆಣ್ಣಿನದ್ದು. ಮಗುವನ್ನು ಹೆತ್ತುಕೊಟ್ಟರೆ ಆಯಿತು. ಪಾಲನೆ ಪೋಷಣೆ ಎಲ್ಲವೂ ಗಂಡಿನದ್ದೇ. ಆಹಾ ಎಂದು ಖುಷಿಯಲ್ಲಿ ಓದುತ್ತಿರುವಾಗಲೇ ಇದು ಕನಸು ಎಂದು ಕಥೆಗಾರ ಹೇಳಿಬಿಡುವುದರೊಂದಿಗೆ ನನ್ನ ಊಹಾಲೋಕವೂ ನಿಂತುಹೋಯಿತು. ಆದರೂ ಕಥೆಯಲ್ಲಿ ಬರುವ ಮೊನಚು ವ್ಯಂಗ್ಯ ಇಂದಿಗೂ ಹೆಣ್ಣಿನ ವೇದನೆಯನ್ನು ಕನ್ನಡಿಯಲ್ಲಿಟ್ಟು ತೋರಿಸುತ್ತದೆ. ಹನಮಂತ ಹಾಲಿಗೇರಿ ಒಬ್ಬ ಸಶಕ್ತ ಕಥೆಗಾರ. ನಿಸೂರಾಗಿ ಕಥೆ ಹೇಳುವ ಕಲೆ ಸಿದ್ಧಿಸಿದೆ. ಅದನ್ನು ಮನಮುಟ್ಟುವಂತೆ ಅಕ್ಷರಕ್ಕಿಳಿಸುವ ಶೈಲಿಯೂ ಕರಗತವಾಗಿದೆ. ಕಾರವಾರದಲ್ಲಿ ಪತ್ರಕರ್ತನಾಗಿದ್ದಾಗ ಕೆಲವು ವರ್ಷಗಳ ಕಾಲ ಹತ್ತಿರದಿಂದ ಗಮನಿಸಿದ್ದೇನೆ. ನೊಂದವರ ಪರ ನಿಲ್ಲುವ, ಶೋಷಣೆಗೊಳಗಾದವರ ಸಹಾಯಕ್ಕೆ ಧಾವಿಸುವ ಅವರ ಗುಣವನ್ನು ಕಣ್ಣಾರೆ ಕಂಡಿದ್ದೇನೆ. ಅಂತಹ ಗುಣದಿಂದಾಗಿಯೇ ಬಹುಪಾರಮ್ಯದ ಮಾಧ್ಯಮ ಲೋಕದಲ್ಲಿ  ಏಕಾಂಗಿಯಾಗಬೇಕಾದುದನ್ನೂ ಗಮನಿಸಿದ್ದೇನೆ. ಆದರೂ ತಳ ಸಮುದಾಯದ ಪರ ಅವರ ಕಾಳಜಿ ಯಾವತ್ತೂ ಕುಂದಿಲ್ಲ. ಹೀಗಾಗಿಯೇ ಇಲ್ಲಿನ ಕಥೆಗಳಲ್ಲಿ  ಶೋಷಣೆಗೊಳಗಾದವರ ನೋವುಗಳನ್ನು ನೇರಾನೇರ ತೆರೆದಿಡುವ ಗುಣವನ್ನು ಕಾಣಬಹುದು. ಅಲೈ ದೇವ್ರ್ರು, ಸುಡುಗಾಡು, ಪಿಡುಗು, ಸ್ವರ್ಗ ಸಾಯುತಿದೆ ಹೀಗೆ ಸಾಲು ಸಾಲಾಗಿ ಕಥೆಗಳು ನಮ್ಮ ಸಾಮಾಜಿಕ ಸ್ಥರಗಳ ಪರಿಚಯ ಮಾಡಿಕೊಡುತ್ತವೆ. ನಮ್ಮದೇ ಧರ್ಮಾಂಧತೆಯನ್ನು ಕಣ್ಣೆದುರು ಬಿಚ್ಚಿಡುತ್ತವೆ.    ನಾನು ಚಿಕ್ಕವಳಿರುವಾಗ  ಮನೆಯ ಸಮೀಪ ಒಂದು ಮುಸ್ಲಿಂ ಮನೆಯಿತ್ತು. ಅವರ ರಂಜಾನ್ ಬಕ್ರೀದ್‌ಗೆ ತಪ್ಪದೇ ಸುತ್ತಮುತ್ತಲಿನ ಮನೆಗಳಿಗೆ ಸುರ್‌ಕುಂಬಾ ಕಳಿಸುತ್ತಿದ್ದರು. ಬಹುತೇಕ ಮನೆಯವರು ಅದನ್ನು ತೆಗೆದುಕೊಂಡೂ ಚೆಲ್ಲಿಬಿಡುತ್ತಿದ್ದುದು ನನಗೀಗಲೂ ನೆನಪಿದೆ. ಆದರೆ ನಮ್ಮ ಮನೆಯಲ್ಲಿ ಅಮ್ಮ ಮಾತ್ರ ಲೋಟಕ್ಕೆ ಹಾಕಿ ಕುಡಿ ಎಂದು ಕುಡಿಸುತ್ತಿದ್ದಳು. ‘ಅವರ ಹಬ್ಬ, ಅವರು ಆಚರಿಸುತ್ತಾರೆ. ಸಿಹಿ ಕೊಡುತ್ತಾರೆ. ನಮ್ಮ ಹಬ್ಬ ಮಾಡಿದಾಗ ನಾವೂ ಪಾಯಸ ಕೊಡುವುದಿಲ್ಲವೇ ಹಾಗೆ’ ಎನ್ನುತ್ತಿದ್ದಳು. ಅಕ್ಕಪಕ್ಕದ ಮನೆಯವರೆಲ್ಲ ಚೆಲ್ಲುವುದನ್ನು ಹೇಳಿದಾಗ ಆಹಾರ ಯಾರೇ ಕೊಟ್ಟರೂ ಅದು ದೇವರಿಗೆ ಸಮಾನ. ಅದಕ್ಕೆ ಅಪಮಾನ ಮಾಡಬಾರದು ಎನ್ನುತ್ತಿದ್ದಳು. ಇತ್ತೀಚೆಗೆ ನಾನು ಈಗಿರುವ ಶಾಲೆಗೆ ಬಂದಾಗ ಎಂಟನೇ ತರಗತಿಗೆ ಬಂದ ಮುಸ್ಲಿಂ ಹುಡುಗ ತಮ್ಮ ಹಬ್ಬಕ್ಕೆ ಮತ್ತದೇ ಸಿರ್‌ಕುಂಬಾ ಹಿಡಿದುಕೊಂಡು ಬಂದಿದ್ದ. ನಾನು ಚಿಕ್ಕವಳಾಗಿದ್ದಾಗಿನ ಖುಷಿಯಲ್ಲಿಯೇ ಅದನ್ನು ಸವಿದಿದ್ದೆ. ಹತ್ತಿರದ ಸದಾಶಿವಗಡ ಕೋಟೆಯ ಬಳಿ ತನ್ನ ಆರಾಧ್ಯ ದೈವ ದುರ್ಗಾದೇವಿ ದೇವಸ್ಥಾನವನ್ನು ಕಟ್ಟಿದ್ದ ಶಿವಾಜಿ ಪಕ್ಕದಲ್ಲೇ ಒಂದು ಮಸೀದಿಯನ್ನೂ ಕಟ್ಟಿಸಿಕೊಟ್ಟಿದ್ದಾನೆ. ಹಿಂದೂ ಧರ್ಮದ ಅತ್ಯುಗ್ರ ನಾಯಕ ಎಂದು ಬಿಂಬಿಸುತ್ತ, ಶಿವಾಜಿಯನ್ನು ಮುಸ್ಲಿಂ ವಿರೋಧಿ ಎನ್ನುವಾಗಲೆಲ್ಲ ನನಗೆ ಈ ಮಸೀದಿ ನೆನಪಾಗುತ್ತಿರುತ್ತದೆ. ದುರ್ಗಾದೇವಿಯ ಜಾತ್ರೆಗೆ ಹಾಗೂ ದರ್ಗಾದ ಉರುಸ್‌ಗೆ ಪರಸ್ಪರ ಸಹಕಾರ ನೀಡುವ ಪದ್ದತಿ ಇಲ್ಲಿದೆ. ಹಿಂದೂ ಮುಸ್ಲಿಮರು ಆಚರಿಸುವ ಮೊಹರಂ ಬಗ್ಗೆ ಕೇಳಿದಾಗಲೆಲ್ಲ ಏನೋ ಖುಷಿ. ನನ್ನ ಪರಿಚಯದ ಒಂದು ಮುಸ್ಲಿಂ ಕುಟುಂಬ ಗಣೇಶ ಚತುರ್ಥಿಗೆ ಗಣೇಶನನ್ನು ಕುಳ್ಳಿರಿಸಿ ಪೂಜೆ ಮಾಡುತ್ತದೆ. ಅದೆಷ್ಟೋ ಕ್ರಿಶ್ಚಿಯನ್ ಕುಟುಂಬದೊಡನೆ ಆತ್ಮೀಯ ಸಂಬಂಧವಿದೆ. ನಮ್ಮೂರಿನ ಬಂಡಿ ಹಬ್ಬದ ಸವಿಗಾಗಿ ನಮ್ಮ ಸಹೋದ್ಯೋಗಿಗಳೂ ಮನೆಗೆ ಬರುವುದಿದೆ. ಕ್ರಿಸ್‌ಮಸ್ ಬಂತೆಂದರೆ ನನ್ನ ಪ್ರೀತಿಯ ವೈನ್‌ಕೇಕ್‌ನ ಸುವಾಸನೆ ನಮ್ಮ ಮನೆಯನ್ನೂ ತುಂಬಿರುತ್ತದೆ. ಧಾರ್ಮಿಕ ಸೌಹಾರ್ಧ ಎನ್ನುವುದು ಬರೀ ಬಾಯಿ ಮಾತಿನಲ್ಲಿ ಹೇಳಿದರೆ ಆಗದು. ಇಲ್ಲಿ ಅಲೈ ಹಬ್ಬದಲ್ಲಿ ಹಾಗೂ ಸುಡುಗಾಡು ಎನ್ನುವ ಕಥೆಗಳಲ್ಲಿ ಕಥೆಗಾರ ಧರ್ಮ ಸಾಮರಸ್ಯದ ಬಗ್ಗೆ ಹೇಳುತ್ತಾ ಹೋಗುತ್ತಾರೆ. ಅಲೈ ಹಬ್ಬದಲ್ಲಿ ಹೆಜ್ಜೆ ಹಾಕುವ ಹುಡುಗರು ಹಿಂದುಗಳು. ಆದರೆ ಅದರ ಆಚರಣೆ ಮಸೀದಿಯಲ್ಲಿ.  ಅದನ್ನು ನಿಲ್ಲಿಸಲೆಂದೇ ಬರುವ ಧರ್ಮದ ಕಟ್ಟಾಳುಗಳ ಮಾತನ್ನು ಮೀರಿಯೂ ಹಬ್ಬ ನಡೆಯುತ್ತದೆ. ಆದರೆ ಸುಡಗಾಡು ಕಥೆಯಲ್ಲಿ ಹಿಂದುಗಳ ರುದ್ರಭೂಮಿಯಲ್ಲಿ ಹೆಣದ ಕೆಲಸ ಮಾಡುತ್ತಿದ್ದವನ್ನು ಹೊರಗೆಸೆದು ಅವನ ಜೀವನವನ್ನೇ ನರಕವನ್ನಾಗಿಸುವ ಕಥೆಯಿದೆ. ಸಿದ್ದಯ್ಯನ ಪವಾಡ ಹಾಗೂ ಸ್ಥಿತಪ್ರಜ್ಞ ಕಥೆಗೂ ನಮ್ಮ ದೇವರೆಂಬ ಬಹುನಾಟಕದ ಕಥಾನಕಗಳನ್ನು ಹೇಳುತ್ತವೆ. ದೇವರೇ ಇಲ್ಲ ಎಂಬ ಸತ್ಯವನ್ನರಿತ ಸಿದ್ದಯ್ಯನನ್ನೇ ದೇವರನ್ನಾಗಿಸುವ ಜನರ ಮೂರ್ಖತನವೋ ಮುಗ್ಧತೆಯೋ ಎಂದು ಹೇಳಲಾಗದ ನಡುವಳಿಕೆಯಿದ್ದರೆ ಸ್ಥಿತಿಪ್ರಜ್ಞದಲ್ಲಿ ತನ್ನ ತಾಯಿ ತೀರಿ ಹೋದರೂ ನಗುನಗುತ್ತ ದೇವರ ಪೂಜೆಗೆ ಅಣಿಯಾಗುವ ಮಠಾಧೀಶನೊಬ್ಬನ ಮನುಷ್ಯತ್ವ ಕೊನೆಗೊಂಡ ವ್ಯಕ್ತಿಯ ಚಿತ್ರಣವಿದೆ. ಫಾರಿನ್ ಹೊಲೆಯ ಕಥೆಯಂತೂ ನಮ್ಮ ಧರ್ಮದ ಲೂಪ್‌ಹೋಲ್‌ಗಳನ್ನು ಅತ್ಯಂತ ತೀಕ್ಷ್ಣವಾಗಿ ನಮ್ಮೆದರು ಬೆತ್ತಲಾಗಿಸುತ್ತದೆ. ಬೀಪ್ ತಿನ್ನಬೇಕೆಂದು ಬಯಸಿದ ವಿದೇಶಿ ಕ್ಯಾಮರೂನ್ ಭಾರತದಲ್ಲಿ ಮಾತ್ರ ಸಿದ್ಧವಾಗುವ ಬೀಫ್‌ನ ಮಸಾಲೆ ರುಚಿಯನ್ನು ತಮ್ಮ ಊರಲ್ಲಿ ವರ್ಣಿಸುವುದನ್ನು ಹೇಳುತ್ತ ನಿರೂಪಕನ ಧರ್ಮವನ್ನು ಕರಾರುವಕ್ಕಾಗಿ ವಿಶ್ಲೇಷಿಸುತ್ತಾನೆ.    ಪಿಡುಗು ಕಥೆಯಲ್ಲಿ ವೇಶ್ಯೆಯರ ಬದುಕಿನ ಕಥೆಯಿದೆ. ಮಧ್ಯಮ ವರ್ಗದ ಮಹಿಳೆಯರು ಯಾವ್ಯಾವುದೋ ಅನಿವಾರ್ಯ ಕಾರಣಗಳಿಗಾಗಿ ಮೈಮಾರಿಕೊಳ್ಳಬೇಕಾದ ಅನಿವಾರ್ಯತೆಯನ್ನು ಈ ಕಥೆ ಹೇಳುತ್ತದೆ. ಕೆಲವು ವರ್ಷಗಳ ಹಿಂದೆ ಗೀತಾ ನಾಗಭೂಷಣರವರ ಒಂದು ಕಥೆ ಎಂಟನೆ ತರಗತಿಗಿತ್ತು. ಮಗನನ್ನು ಕಾಯಿಲೆಯಿಂದ ಉಳಿಸಿಕೊಳ್ಳಲು ಬೇಕಾದ ಔಷಧ ಹಾಗೂ ಆಸ್ಪತ್ರೆಯ ಖರ್ಚಿಗಾಗಿ ಅನಿವಾರ್ಯವಾಗಿ ತನ್ನ ಮೈಯನ್ನು ಒಪ್ಪಿಸಲು ನಿರ್ಧರಿಸುವ ಕಥೆಯದು. ಆದರೆ ಅಂತಹ ಸಂದಿಗ್ಧತೆಯನ್ನು ವಿವರಿಸಿ ಮಕ್ಕಳಿಗೆ ತಾಯಿಯ ಮಹತ್ವವನ್ನು ತಿಳಿಹೇಳಬೇಕಾದ ಅಗತ್ಯತೆ ಅಲ್ಲಿತ್ತು. ವೇಶ್ಯೆಯರೆಂದರೆ ಕೆಟ್ಟವರಲ್ಲ, ಇಂತಹ ಅನಿವಾರ್ಯ ಕಾರಣಗಳೂ ಇರುತ್ತವೆ ಎಂದು ಆಗತಾನೆ ಹರೆಯದ ಹೊಸ್ತಿಲಲ್ಲಿ ಹೆಜ್ಜೆ ಇಡುತ್ತಿರುವ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸುವ ಗುರುತರ ಜವಾಬ್ಧಾರಿಯೂ ಶಿಕ್ಷಕರ ಮೇಲಿತ್ತು. ಆದರೆ ಆ ಕಥೆ ಹರೆಯದ ಮಕ್ಕಳ ಹಾದಿ ತಪ್ಪುವಂತೆ ಮಾಡುತ್ತದೆ ಎಂಬ ನೆಪ ಹೇಳಿ ಪಾಠವನ್ನು ರದ್ದುಗೊಳಿಸಲಾಯಿತು. ವೇಶ್ಯೆಯರೆಂದರೆ ಒಂದೇ ತಟ್ಟೆಯಲ್ಲಿಟ್ಟು ತೂಗುವ ಸಮಾಜದ ಹೊಸ ಪೀಳಿಗೆಗೆ ಈ ಕಥೆ ಹೇಳಿದರೆ ದೃಷ್ಟಿಕೋನ ಬದಲಾಗಬಹುದಿತ್ತು. ಇಲ್ಲಿಯೂ ಕೂಡ ಮಗಳಿಗಾಗಿ ಮೈಮಾರಿಕೊಳ್ಳುವ ಮಧ್ಯ ವಯಸ್ಕ ಗ್ರಹಿಣಿ ಮತ್ತು ಅವಳಿಗಾಗಿ ತಾನೇ ಗಿರಾಕಿಗಳನ್ನು ತರುವ ಗಂಡನ ಹಣದ ದಾಹ, ನಂತರ ತೀರಿ ಹೋದ ತಾಯಿಯಂತೆ ಅನಿವಾರ್ಯವಾಗಿ ಮತ್ತದೇ ದಂಧೆಗೆ ಇಳಿಯುವ ಮಗಳು ನಮ್ಮ ಆತ್ಮಸಾಕ್ಷಿಯನ್ನೇ ಬೀದಿಗೆ ತಂದು ಬೆತ್ತಲಾಗಿಸಿ ಪ್ರಶ್ನೆ ಕೇಳಿದಂತೆ ಅನ್ನಿಸುತ್ತದೆ.    ಇತ್ತ ಸ್ತ್ರೀ ಎಂದರೆ ಅಷ್ಟೇ ಸಾಕೆ ಎನ್ನುವ ಕಥೆ ಕೂಡ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ. ತನ್ನ ಮಾರ್ಕೆಟಿಂಗ್ ವ್ಯವಹಾರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತ ಮನೆಯ ಜವಾಬ್ಧಾರಿ ವಹಿಸಿಕೊಂಡವಳನ್ನು ಕುಗ್ಗಿಸಿ ತಮ್ಮ ಲಾಭಕ್ಕಾಗಿ ಪುರುಷರ ಮೂತ್ರಿಖಾನೆಯಲ್ಲಿ ಅವಳ ನಂಬರ್ ಬರೆದಿಟ್ಟ ಪುರುಚ ಸಮಾಜ ಅವಳು ಸಂಪೂರ್ಣ ಹತಾಷವಾಗುವಂತೆ ಮಾಡಿಬಿಡುತ್ತದೆ. ಒಮ್ಮೆ ಅನುಮಾನಿಸಿದರೂ ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಂಡು ಜೊತೆಗೆ ನಿಲ್ಲುವ ಗಂಡನೊಬ್ಬ ಇಲ್ಲಿದ್ದಾನೆ ಎಂಬುದೇ ಈ ಕಥೆ ಓದಿದ ನಂತರ ಒಂದು ನಿರಾಳ ನಿಟ್ಟುಸಿರಿಡುವಂತೆ ಮಾಡುತ್ತದೆ.       ರಾಷ್ಟ್ರೀಯ ಹೆದ್ದಾರಿ ೬೬ನ್ನು ಅಗಲೀಕರಣಗೊಳಿಸುವ ಪ್ರಕ್ರೀಯೆಗೆ ಚಾಲನೆ ದೊರೆತು ನಾಲ್ಕೈದು ವರ್ಷಗಳೇ ಉರುಳಿ ಹೋಗಿದೆಯಾದರೂ ಅಗಲೀಕರಣವಾಗುತ್ತದೆ ಎಂದು ಹೇಳಲಾರಂಭಿಸಿ ಅದೆಷ್ಟೋ ದಶಕಗಳೇ ಕಳೆದು ಹೋಗಿದೆ. ಚಿಕ್ಕವಳಿರುವಾಗ ‘ನಿಮ್ಮ ಮನೆ ರಸ್ತೆಗೆ ಹತ್ತಿರದಲ್ಲಿದೆ. ನಿಮ್ಮನೆ ಗ್ಯಾರಂಟಿ ಹೋಗ್ತದೆ ನೋಡು’ ಎನ್ನುವ ಮಾತು ಕೇಳುತ್ತಲೇ ಬೆಳೆದವಳು ನಾನು. ‘ನಮ್ಮನೆ ಹೋಗೂದಿಲ್ಲ. ಮನೆಪಕ್ಕದಲ್ಲಿ ಪುರಾತತ್ವ ಇಲಾಖೆಗೆ ಸೇರಿದ, ವಿಜಯನಗರ ಸಾಮ್ರಾಜ್ಯದ ಮೂಲ ಮನೆ ಹಾಗೂ ದೇವಸ್ಥಾನವಿದೆ’ ಎನ್ನುತ್ತಿದ್ದೆ ನಾನು. ನಾಗಬಲಿ ಎನ್ನುವ ಈ ಕಥೆಯಲ್ಲಿಯೂ ಬರೀ ಬಾಯಿ ಮಾತಿನಲ್ಲಿದ್ದ ಯೋಜನೆಗೆ ಚಾಲನೆ ದೊರೆತು ಹಾವೂರು ಎನ್ನುವ ಪುರಾತನ ದೇಗುಲದ ಮೇಲೆ ರಸ್ತೆ ಹಾದು ಹೋಗುವುದನ್ನು ವಿರೋಧಿಸುವ ಊರ ಜನರ ಹೋರಾಟ ಯಶಸ್ವಿಯಾದರೂ ಮುಂದೆ ಸರಕಾರ ಅಲ್ಲಿ ಸ್ನೇಕ್ ಟೆಂಪಲ್ ಎನ್ನುವ ಹಾವುಗಳ ಪಾರ್ಕ್ ಮಾಡಿ ಇಡೀ ಊರೆ ನಾಶವಾಗಿ ಹೋಗುವ ಕಥೆ ಇಲ್ಲಿದೆ. ಹಾವುಗಳ ಶಿಲ್ಪ ಮಾಡಿ ಪ್ರದರ್ಶಿಸುವ ನಾವು ನಿಜದ ಹಾವುಗಳನ್ನು ಹೇಗೆ ಕೊಲ್ಲುತ್ತೇವೆ ಎನ್ನುವ ವಿಷಾದ ಇಲ್ಲಿದೆ. ಅದೇರೀತಿ ಹಾಳಾಗಿ ಹೋದ ಊರಿನ ಮತ್ತೊಂದು ಕಥೆ ‘ಸ್ವರ್ಗ ಸಾಯುತ್ತಿದೆ’. ಇಲ್ಲಿ ದೇವಸಗ್ಗ ಎನ್ನುವ ಊರನ್ನು ತಮ್ಮ ಪಾಳೆಗಾರಿಕೆಯಿಂದ ವಶಡಿಸಿಕೊಂಡ ನಾಯಕ, ಹುಲಿಯೋಜನೆಯಿಂದಾಗಿ ಮನೆ ಬಿಟ್ಟ ಊರ ಜನರು, ಊರನ್ನು ಬಿಡಲೊಲ್ಲದ ಒಂದೆರಡು ಮನೆಯವರು ಉಡಲು ವಸ್ತ್ರವಿಲ್ಲದೇ ಬಳ್ಳಿ ಎಲೆಗಳನ್ನು ಸುತ್ತಿಕೊಂಡು ನಾಗರಿಕ ಸಮಾಜಕ್ಕೆ ಆದಿವಾಸಿಗಳಂತೆ ಗೋಚರಿಸುವುದನ್ನು ಕಥೆಗಾರ ಮನೋಜ್ಞವಾಗಿ ಹೇಳಿದ್ದಾರೆ. ಹುಲಿ ಯೋಜನೆ ಅನುಷ್ಟಾನಗೊಂಡ ಹಳ್ಳಿಗಳಲ್ಲಿ ಎಷ್ಟೋ ಸಲ ವಾಸಿಸಿದ್ದೇನೆ. ಮನೆ ಬಿಟ್ಟರೆ ಸರಕಾರ ಪರಿಹಾರ ನೀಡುತ್ತದೆ ಎನ್ನುವ ಆಕರ್ಷಕ ಕೊಡುಗೆಯ ಹೊರತಾಗಿಯೂ ಅಲ್ಲಿನ ಕೆಲ ಜನರು ಮನೆಯನ್ನು ಬಿಡಲೊಲ್ಲದೇ ಅಲ್ಲೇ ಇದ್ದಾರೆ. ಆದರೆ ಅಂತಹ ಹಳ್ಳಿಗಳ ಬಿಟ್ಟ ಮನೆಗಳಿಂದಾಗಿ ನಿರಾಶ್ರಿತರ ತವರೂರಿನಂತಾಗಿರುವುದನ್ನು ಕಂಡು ಬೇಸರಿಸಿದ್ದೇನೆ. ಹರಪ್ಪಾ ಮೊಹಂಜೋದಾರ್‌ನಂತೆ ಅವಶೇಷಗಳ ಊರು ಎನ್ನಿಸಿ ಖೇದವೆನಿಸುತ್ತದೆ. ಈ ಕಥೆಯನ್ನು ಓದಿದಾಗ ಅದೆಲ್ಲ ನೆನಪುಗಳು ಒತ್ತಟ್ಟಿಗೆ ಬಂದು ಕಾಡಲಾರಂಭಿಸಿದ್ದು ಸುಳ್ಳಲ್ಲ. ಮನೆ ಕಟ್ಟುವ ಆಟದಲ್ಲಿ ಬೆಂಗಳೂರೆಂಬ ಬೆಂಗಳೂರಲ್ಲಿ ಮನೆ ಕಟ್ಟಬೇಕೆಂದುಕೊಂಡ ಸಾಮಾನ್ಯ ಪ್ರಿಂಟಿಂಗ್ ಪ್ರೆಸ್‌ನ ನೌಕರನೊಬ್ಬನ ಬವಣೆಯ ಚಿತ್ರವಿದ್ದರೆ ‘ದೀಪದ ಕೆಳಗೆ ಕತ್ತಲು’ ಕಥೆ  ಮಲ ಬಾಚಲು ಹಿಂದೇಟು ಹಾಕಿದ ಪೌರ ಕಾರ್ಮಿಕ ನಂತರ ಎಲ್ಲೂ ಉದ್ಯೋಗ ದೊರಕದೇ ಒದ್ದಾಡುವ ಕಥೆಯನ್ನು ಹೇಳುತ್ತದೆ. ಮಣ್ಣಿಗಾಗಿ ಮಣ್ಣಾದವರು ಸೈನಿಕನೊಬ್ಬನ ಮನಮಿಡಿಯು ಕಥೆಯ ಜೊತೆಗೇ ಅವನ ನಂತರ ಅವನ ಹೆಂಡತಿ ಅನುಭವಿಸುವ ತಲ್ಲಣಗಳನ್ನು ವಿವರಿಸುತ್ತೆ. ಆದರೂ ಈ ಮೂರು ಕಥೆಗಳು ಮತ್ತಿಷ್ಟು ಗಟ್ಟಿಯಾಗಿದ್ದರೆ ಒಳ್ಳೆಯದಿತ್ತು.     ಗಂಡು ಜೋಗ್ಯ ಕಥೆಯು ಬದುಕಬೇಕೆಂಬ ಆಸೆ ಹೊತ್ತ ಮುತ್ತು ಕಟ್ಟಿಸಿಕೊಂಡ ಜೋಗಪ್ಪನ ಪ್ರೀತಿಯನ್ನು ವಿಷದಪಡಿಸಿದರೆ ಪ್ರೀತಿಗೆ ಸೋಲಿಲ್ಲ ಕಥೆ ಗಂಡು ಹೆಣ್ಣಿನ ಸಂಬಂಧದ ಕುರಿತು ಮಾತನಾಡುತ್ತದೆ. ಹಾಗೆ ನೋಡಿದರೆ ಇಡೀ ಸಂಕಲನವೇ ಮಾನವ ಸಹಜ ಭಾವನೆಗಳಿಂದ ಕೂಡಿಕೊಂಡಿದೆ. ಇಲ್ಲಿ ಪ್ರೀತಿಯಿದೆ, ದ್ವೇಷವಿದೆ, ಮೋಸ, ಸುಳ್ಳುಗಳಿವೆ, ಅಷ್ಟೇ ಸಹಜವಾದ ಕಾಮವೂ

ಮಾತು ಅರಳುವ ಹೊತ್ತು ನಗುವಿನೊಂದಿಗೆ ಜನ್ಮತಳೆದ ಸಂಬಂಧಗಳ ಭವಿಷ್ಯವನ್ನು ಮಾತು ನಿರ್ಣಯಿಸುತ್ತದೆ. ಮಾತು ಸರಾಗವೆನ್ನಿಸದ ಹೊರತು ಸಂಬಂಧಗಳನ್ನು ಸರಳವಾಗಿಸಿ ಸುಂದರಗೊಳಿಸಲಾಗದು. ಬದುಕಿನ ಸೂಕ್ಷ್ಮಗಳೆಲ್ಲವನ್ನೂ ತನ್ನೆಲ್ಲ ಚಾಣಾಕ್ಷತೆಯನ್ನು ಉಪಯೋಗಿಸಿ ಕಾಪಾಡಿಕೊಳ್ಳುವ ಮಾತು, ಅಗತ್ಯ ಬಿದ್ದಾಗಲೆಲ್ಲ ಸಂಬಂಧಗಳಿಗೊಂದು ಜೀವಂತಿಕೆಯನ್ನೂ ಒದಗಿಸುತ್ತದೆ. ಮಾತುಗಳೇ ಇಲ್ಲದ ಸಂಬಂಧವೊಂದು ಎಲ್ಲಿಯವರೆಗೆ ಜೀವಂತವಾಗಿ ಉಳಿದೀತು; ಎಲ್ಲ ನಕಾರಾತ್ಮಕತೆಯ ಪರಿಹಾರವೆನ್ನುವಂತೆ ಹೃದಯಕ್ಕಿಳಿವ ಮಾತು ಮಾತ್ರವೇ ಸಂಬಂಧಗಳನ್ನೆಲ್ಲ ಸಹೃದಯತೆಯ ಸೆರಗಿನಲ್ಲಿ ಬಚ್ಚಿಟ್ಟು ಸಾಕಿ ಸಲಹೀತು!           ಕಾಲಕಾಲಕ್ಕೆ ತಕ್ಕಂತೆ ಸಂಬಂಧಗಳ ಮೌಲ್ಯದ ಪರಿಕಲ್ಪನೆ ಬದಲಾಗುತ್ತಾ ಹೋದರೂ ಮಾತು ಮಾತ್ರ ಬೇಜಾರಿಲ್ಲದೇ ಬದಲಾವಣೆಗಳಿಗೆಲ್ಲ ಹೊಂದಿಕೊಂಡಿತು. ಪತ್ರಗಳ ಪ್ರಿಯ ಗೆಳತಿ-ಗೆಳೆಯಂದಿರೆಲ್ಲ ವಾಟ್ಸಾಪ್ ಮೆಸೇಜುಗಳ ಬ್ರೊ-ಡಿಯರ್ ಗಳಾದರು; ಪೋಸ್ಟ್ ಕಾರ್ಡ್ ನ ನಾಲ್ಕೇ ನಾಲ್ಕು ಸಾಲುಗಳ ಮಧ್ಯದಲ್ಲಿ ಕಷ್ಟಪಟ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದ್ದ ಉದ್ದನೆಯ ವಿಳಾಸವೊಂದು ಏಳೆಂಟು ಅಕ್ಷರಗಳ ಇಮೇಲ್ ಅಡ್ರೆಸ್ಸಾಗಿ ನಿರಾಳವಾಗಿ ಕಾಲುಚಾಚಿತು; ಗ್ರೀಟಿಂಗ್ ಕಾರ್ಡುಗಳಲ್ಲಿ ಆತಂಕದಿಂದ ಬಸ್ಸನ್ನೇರುತ್ತಿದ್ದ ಪ್ರೇಮನಿವೇದನೆಯೊಂದು ಇಮೋಜಿಗಳಲ್ಲಿ, ಸ್ಮೈಲಿಗಳಲ್ಲಿ ಗೌಪ್ಯವಾಗಿ ಹೃದಯಗಳನ್ನು ತಲುಪಲಾರಂಭಿಸಿತು. ಹೀಗೆ ಸಂವಹನದ ಸ್ವರೂಪಗಳೆಲ್ಲ ಬದಲಾದರೂ ಮಹತ್ವ ಕಳೆದುಕೊಳ್ಳದ ಮಾತು ಕಾಲಕ್ಕೆ ತಕ್ಕ ಮೇಕಪ್ಪಿನೊಂದಿಗೆ ಅಪ್ಡೇಟ್ ಆಗುತ್ತಲೇ ಇರುತ್ತದೆ.           ಗಂಡ-ಹೆಂಡತಿ ಪರಸ್ಪರ ಮಾತನ್ನಾಡಿದರೆ ಸಾಕು ಮಕ್ಕಳು ಹುಟ್ಟುತ್ತವೆ ಎಂದು ನಾನು ನಂಬಿಕೊಂಡಿದ್ದ ಕಾಲವೊಂದಿತ್ತು. ಅಜ್ಜ-ಅಜ್ಜಿ ಜೊತೆಯಾಗಿ ಕೂತು ಮಾತನ್ನಾಡಿದ್ದನ್ನೇ ನೋಡಿರದ ನಾನು ಅವರಿಗೆ ಎಂಟು ಮಕ್ಕಳು ಹೇಗೆ ಹುಟ್ಟಿದವು ಎಂದು ಅಮ್ಮನನ್ನು ಪ್ರಶ್ನಿಸುತ್ತಿದ್ದೆ. ಇಂತಹ ಮುಗ್ಧ ಯೋಚನೆಯೊಂದು ಈಗ ನಗು ತರಿಸಿದರೂ, ಕಾಲಕಾಲಕ್ಕೆ ಸಂವಹನವೊಂದು ಬದಲಾಗುತ್ತಾ ಬಂದ ರೀತಿಯೂ ಅಚ್ಚರಿ ಹುಟ್ಟಿಸುತ್ತದೆ. ಅಜ್ಜ-ಅಜ್ಜಿಯ ಕಾಲದಲ್ಲಿ ಊಟ-ತಿಂಡಿ, ಪೂಜೆ-ಪುನಸ್ಕಾರಗಳ ಹೊರತಾಗಿ ಮಾತುಕತೆಯೇ ಇಲ್ಲದ ದಾಂಪತ್ಯವೊಂದು ಜಗಳ-ಮನಸ್ತಾಪಗಳಿಲ್ಲದೇ ನಿರಾತಂಕವಾಗಿ ಸಾಗುತ್ತಿತ್ತು. ಮಕ್ಕಳ-ಮೊಮ್ಮಕ್ಕಳ ಮಾತು-ನಗು ಇವುಗಳೇ ಅವರ ಸುಖೀಸಂಸಾರದ ರಹಸ್ಯಗಳೂ, ಗುಟ್ಟುಗಳು ಎಲ್ಲವೂ ಆಗಿದ್ದವು. ಪ್ರೀತಿಯ ಸೆಲೆಯೊಂದು ಸಂವಹನದ ಮಾಧ್ಯಮವಾಗಿ, ಮಾತು ಮೌನಧರಿಸಿ ಸಂಬಂಧಗಳನ್ನು ಸಲಹುತ್ತಿತ್ತು. ದುಡ್ಡು-ಕಾಸು, ಸೈಟು-ಮನೆ ಹೀಗೆ ಸಂಬಂಧಗಳಿಗೊಂದು ಮೌಲ್ಯವನ್ನು ದೊರಕಿಸದ ಮಾತುಕತೆಗಳು ಮನೆತುಂಬ ಹರಿದಾಡುವಾಗಲೆಲ್ಲ, ಮಾತೊಂದು ಪ್ರೀತಿಯ ರೂಪ ಧರಿಸುತ್ತಿದ್ದ ಅಜ್ಜ-ಅಜ್ಜಿಯ ಕಾಲಕ್ಕೆ ವಾಪಸ್ಸಾಗುವ ವಿಚಿತ್ರ ಆಸೆಯೊಂದು ಆಗಾಗ ಹುಟ್ಟಿಕೊಳ್ಳುತ್ತಿರುತ್ತದೆ.           ಹೀಗೆ ಆಗಾಗ ಆತ್ಮತೃಪ್ತಿಯ ಪರಿಕಲ್ಪನೆಯನ್ನೇ ಪ್ರಶ್ನಿಸಿಬಿಡುವಂತಹ, ಈ ಕ್ಷಣದ ಬದುಕಿನ ಸನ್ನಿವೇಶಕ್ಕೆ ಹೊಂದಾಣಿಕೆಯಾಗದೇ ವಿಲಕ್ಷಣವೆನ್ನಿಸಬಹುದಾದಂತಹ ಆಸೆಯೊಂದು ಎಲ್ಲರ ಬದುಕಿನಲ್ಲಿಯೂ ಇರುತ್ತದೆ. ಅಂತಹ ಆಸೆಯೊಂದರ ಅಕ್ಕಪಕ್ಕ ಬಾಲ್ಯವಂತೂ ಸದಾ ಸುಳಿದಾಡುತ್ತಲೇ ಇರುತ್ತದೆ; ಬಾಲ್ಯದ ಹಿಂದೆ-ಮುಂದೊಂದಿಷ್ಟು ಮಾತುಗಳು! ಆ ಮಾತುಗಳೊಂದಿಗೆ ನಾಡಗೀತೆಯನ್ನು ಸುಮಧುರವಾಗಿ ಹಾಡುತ್ತಿದ್ದ ಪ್ರೈಮರಿ ಸ್ಕೂಲಿನ ಟೀಚರೊಬ್ಬರ ಧ್ವನಿ, ಊರಿನ ದೇವಸ್ಥಾನದಲ್ಲಿ ಚಂಪಾಷಷ್ಠಿಯ ದಿನದಂದು ನಡೆಯುತ್ತಿದ್ದ ತಾಳಮದ್ದಳೆಯ ಮೃದಂಗದ ಸದ್ದು, ಕಪ್ಪು-ಬಿಳುಪು ಟಿವಿಯ ಶ್ರೀಕೃಷ್ಣನ ಅವತಾರ ಮಾತನಾಡುತ್ತಿದ್ದ ಅರ್ಧಂಬರ್ಧ ಅರ್ಥವಾಗುತ್ತಿದ್ದ ಹಿಂದಿ, ದುಷ್ಯಂತ-ಶಕುಂತಲೆಯ ಪ್ರಣಯವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿದ್ದ ಸಂಸ್ಕೃತ ಶಿಕ್ಷಕರ ನಾಚಿಕೆ ಎಲ್ಲವೂ ಸೇರಿಕೊಂಡು ಅಲ್ಲೊಂದು ಹೊಸ ಪ್ರಪಂಚ ಸೃಷ್ಟಿಯಾಗುತ್ತಿರುತ್ತದೆ. ಆ ಪ್ರಪಂಚದ ಮಾತುಗಳೆಲ್ಲವೂ ಆತ್ಮಸಂಬಂಧಿಯಾದದ್ದೇನನ್ನೋ ಧ್ವನಿಸುತ್ತ, ಭಾಷೆಯೊಂದರ ಅಗತ್ಯವೇ ಇಲ್ಲದಂತೆ ಅಮೂರ್ತವಾದ ಅನುಭವವೊಂದನ್ನು ಒದಗಿಸುತ್ತಿರುತ್ತವೆ.           ಹಾಗೆ ಮಾತುಗಳೊಂದಿಗೆ ದಕ್ಕಿದ ಸ್ಮರಣ ಯೋಗ್ಯ ಅನುಭವವೆಂದರೆ ಇಸ್ಪೀಟಿನ ಮಂಡಲಗಳದ್ದು. ತಿಥಿಯೂಟ ಮುಗಿಸಿ ಕಂಬಳಿಯ ಮೇಲೊಂದು ಜಮಖಾನ ಹಾಸಿ ತಯಾರಾಗುತ್ತಿದ್ದ ಇಸ್ಪೀಟಿನ ವೇದಿಕೆಗೆ ಅದರದ್ದೇ ಆದ ಗಾಂಭೀರ್ಯವಿರುತ್ತಿತ್ತು. ಊರ ದೇವಸ್ಥಾನದ ಅಧ್ಯಕ್ಷಸ್ಥಾನದ ಚುನಾವಣೆಯಿಂದ ಹಿಡಿದು ಸಂವಿಧಾನದ ಆರ್ಟಿಕಲ್ ಗಳವರೆಗೆ ಚರ್ಚೆಯಾಗುತ್ತಿದ್ದ ಆ ವೇದಿಕೆಯಲ್ಲಿ ಇಸ್ಪೀಟಿನ ರಾಜ-ರಾಣಿಯರೆಲ್ಲ ಮೂಕಪ್ರೇಕ್ಷಕರಾಗುತ್ತಿದ್ದರು. ಸೋಲು-ಗೆಲುವುಗಳೆಲ್ಲ ಕೇವಲ ನೆಪಗಳಾಗಿ ಮಾತೊಂದೇ ಆ ಮಂಡಲದ ಉದ್ದೇಶವಾಗಿದ್ದಿರಬಹುದು ಎಂದು ನನಗೆ ಯಾವಾಗಲೂ ಅನ್ನಿಸುತ್ತಿರುತ್ತದೆ. ಆಧುನಿಕತೆಯೊಂದು ಮಾತಿನ ಜಾಗ ಕಸಿದುಕೊಂಡು ಎಲ್ಲರೂ ಅವರವರ ಪ್ರಪಂಚದಲ್ಲಿ ಮಗ್ನರಾಗಿರುವಾಗ, ಕಪಾಟಿನ ಮೂಲೆಯಲ್ಲಿ ಮಾತು ಮರೆತು ಕುಳಿತ ಜಮಖಾನದ ದುಃಖಕ್ಕೆ ಮರುಗುತ್ತಾ ರಾಜನೊಂದಿಗೆ ಗುಲಾಮ ಯಾವ ಸಂಭಾಷಣೆಯಲ್ಲಿ ತೊಡಗಿರಬಹುದು ಎಂದು ಯೋಚಿಸುತ್ತೇನೆ.           ಹೀಗೆ ಸಂಭಾಷಣೆಗೊಂದು ವೇದಿಕೆ ಸಿಕ್ಕರೂ ಸಿಗದಿದ್ದರೂ ಮಾತು ಒಮ್ಮೆ ವ್ಯಕ್ತವಾಗಿ, ಇನ್ನೊಮ್ಮೆ ಶ್ರಾವ್ಯವಾಗಿ, ಕೆಲವೊಮ್ಮೆ ಮೌನವೂ ಆಗಿ ತನ್ನದೇ ಆದ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತದೆ. ಸಿನೆಮಾದ ನಾಯಕನೊಬ್ಬ ಫೈಟ್ ಮಾಸ್ಟರ್ ನ ಮಾತನ್ನು ಆಕ್ಷನ್ ಗಿಳಿಸಿದರೆ, ರಂಗಭೂಮಿಯ ಮಾತೊಂದು ತಾನೇ ನಟನೆಗಿಳಿದು ಥಿಯೇಟರನ್ನು ತುಂಬಿಕೊಳ್ಳುತ್ತದೆ; ಪುಟ್ಟ ಕಂದನ ಅಳುವೊಂದು ಹಸಿವಿನ ಮಾತನ್ನು ಅಮ್ಮನಿಗೆ ತಲುಪಿಸುವಾಗ, ಅಮ್ಮನ ಪ್ರೇಮದ ಮಾತೊಂದು ಎದೆಯ ಹಾಲಾಗಿ ಮಗುವನ್ನು ತಲುಪುತ್ತದೆ; ಬಸ್ಸಿನ ಟಿಕೆಟಿನಲ್ಲಿ ಪೇಪರಿನ ನೋಟುಗಳು ಮಾತನಾಡಿದರೆ, ಕಂಡಕ್ಟರ್ ನ ಶಿಳ್ಳೆಯ ಮಾತು ಡ್ರೈವರ್ ನ ಕಿವಿಯನ್ನು ಅಡೆತಡೆಗಳಿಲ್ಲದೇ ತಲುಪುತ್ತದೆ. ಅಪ್ಪನ ಕಣ್ಣುಗಳ ಕಳಕಳಿ, ಪ್ರೇಮಿಯ ಹೃದಯದ ಕಾಳಜಿ, ಸರ್ಜರಿಗೆ ಸಿದ್ಧರಾದ ವೈದ್ಯರ ಏಕಾಗ್ರತೆ, ಪರೀಕ್ಷಾ ಕೊಠಡಿಯ ಪೆನ್ನಿನ ಶಾಯಿ ಎಲ್ಲವೂ ಮಾತುಗಳಾಗಿ ತಲುಪಬೇಕಾದ ಸ್ಥಳವನ್ನು ನಿರಾತಂಕವಾಗಿ ತಲುಪಿ ಸಂವಹನವೊಂದು ಅಚ್ಚುಕಟ್ಟಾಗಿ ರೂಪುಗೊಳ್ಳುತ್ತದೆ.           ಹೀಗೆ ಬೆರಗಿನ ಲೋಕವೊಂದನ್ನು ನಮ್ಮೆದುರು ತೆರೆದಿಡುತ್ತಾ, ತಾನೂ ಬೆಳೆಯುತ್ತ ನಮ್ಮನ್ನೂ ಬೆಳೆಸುವ ಸಂವಹನವೆನ್ನುವ ಸಂವೇದನೆಯೊಂದು ಮಾತಾಗಿ ಅರಳಿ ಮನಸ್ಸುಗಳನ್ನು ತಲುಪುತ್ತಿರಲಿ. ಪ್ರೈಮರಿ ಸ್ಕೂಲಿನ ಅಂಗಳದ ಮಲ್ಲಿಗೆಯ ಬಳ್ಳಿಯೊಂದು ಟೀಚರಿನ ಕಂಠದ ಮಾಧುರ್ಯಕ್ಕೆ ತಲೆದೂಗುತ್ತಿರಲಿ. ಭಕ್ತರ ಮಾತುಗಳನ್ನೆಲ್ಲ ತಪ್ಪದೇ ಆಲಿಸುವ ದೇವರ ಮೌನವೊಂದು ಶಾಂತಿಯ ಮಂತ್ರವಾಗಿ ಹೃದಯಗಳನ್ನು ಅರಳಿಸಲಿ. ಸಕಲ ಬಣ್ಣಗಳನ್ನೂ ಧರಿಸಿದ ಟಿವಿ ಪರದೆಯ ಪಾತ್ರಗಳೆಲ್ಲ ಪ್ರೀತಿ-ವಿಶ್ವಾಸಗಳ ಮಧ್ಯವರ್ತಿಗಳಾಗಿ ಮಾತಿನ ಮೂಲಕ ಮಮತೆಯನ್ನು ಬಿತ್ತರಿಸಲಿ. ನಾಚಿ ನೀರಾಗುತ್ತಿದ್ದ ಸಂಸ್ಕೃತ ಶಿಕ್ಷಕರ ಶಕುಂತಲೆಯ ಪ್ರೇಮಕ್ಕೆಂದೂ ಪರೀಕ್ಷೆಯ ಸಂಕಷ್ಟ ಎದುರಾಗದಿರಲಿ. ಕಲಿತ ಮಾತುಗಳೆಲ್ಲ ಪ್ರೀತಿಯಾಗಿ, ಪ್ರೀತಿಯೊಂದು ಹೃದಯಗಳ ಮಾತಾಗಿ, ಹೃದಯಗಳೊಂದಿಗಿನ ಸಂವಹನವೊಂದು ಸಂಬಂಧಗಳನ್ನು ಸಲಹುತ್ತಿರಲಿ. *************************************** ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

ಸ್ವಾತ್ಮಗತ

ಸುಭಾಷ್ ಪಾಳೇಕರರ ‘ಸಹಜ ಕೃಷಿ ಪದ್ದತಿ’ಯೂ..! ಮೈಸೂರಿನ ಆರ್.ಸ್ವಾಮಿ.ಆನಂದರ ‘ಸುಭಾಷ್ ಪಾಳೇಕರರ ಸಹಜ ಕೃಷಿ’ ಪುಸ್ತಕವೂ.!! ಕಳೆದ ಜುಲೈನಲ್ಲಿ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ‘ಶೂನ್ಯ ಬಂಡವಾಳದ (ನೈಸರ್ಗಿಕ) ಕೃಷಿ’ಯನ್ನು ಉತ್ತೇಜಿಸುವುದಾಗಿ ಉಲ್ಲೇಖಿಸಿದ್ದರು. ಇದಕ್ಕೂ ಮುಂಚೆಯೇ ಕರ್ನಾಟಕವೂ ಸೇರಿದಂತೆ ಆಂಧ್ರ ಪ್ರದೇಶ, ಛತ್ತೀಸ್ ಘಡ, ಹಿಮಾಚಲ ಪ್ರದೇಶ ಮತ್ತು ಮಣಿಪುರ ರಾಜ್ಯಗಳಲ್ಲೂ ಈ ಕೃಷಿ ಪದ್ದತಿಯನ್ನು  ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಆಯಾಯ ರಾಜ್ಯ ಸರ್ಕಾರಗಳು ಹಮ್ಮಿಕೊಂಡಿವೆ. ಈ ನಡುವೆ ನೈಸರ್ಗಿಕ ಕೃಷಿ ಪದ್ಧತಿಯ ಬಗ್ಗೆ ಅನೇಕ ಕೃಷಿ ಪಂಡಿತರು, ವಿಜ್ಞಾನಿಗಳು, ರೈತಪರ ಚಿಂತಕರು ಕೃಷಿ ವಿಶ್ಲೇಷಕರು ಒಳಗೊಂಡಂತೆ ರಾಷ್ಟ್ರವ್ಯಾಪಿ ಚರ್ಚೆಗಳು ನಡೆದಿವೆ. ಕಳೆದ ಕೆಲ ವಾರಗಳ ಹಿಂದೆ ರಮೇಶ್ ಮುಳಬಾಗಿಲುರವರು ಬರೆದ ‘ನೈಸರ್ಗಿಕ ಕೃಷಿಯೊಳಗಿನ ಬಲಪಂಥೀಯವಾದ’ ಲೇಖನಕ್ಕೆ ಚುಕ್ಕು ನಂಜುಡಸ್ವಾಮಿಯವರು ಪ್ರತಿಕ್ರಿಯೆ ನೀಡಿದ್ದರು. ‘ಶೂನ್ಯ ಬಂಡವಾಳ’– ನೈಸರ್ಗಿಕ ಕೃಷಿಯನ್ನು ವಿಮರ್ಶೆ ಮಾಡುತ್ತಿರುವ ಅನೇಕ ಕೃಷಿ ತಜ್ಞರಿಗೆ ನೈಸರ್ಗಿಕ ಕೃಷಿ ಬಗ್ಗೆ ಅನೇಕ ಅನುಮಾನಗಳು ಇದ್ದಂತಿವೆ. ಯಾವ ಬಂಡವಾಳವೂ ಹೂಡದ ಕೃಷಿ ಸಾಧ್ಯವೇ? ಈ ಪದ್ದತಿಯಿಂದ ದೇಶದ 130 ಕೋಟಿ ಜನರ ಹೊಟ್ಟೆ ತುಂಬಿಸಲು ಸಾಧ್ಯವೇ? ದೇಶದ ಎಲ್ಲ ಹವಾಮಾನ ವಲಯಗಳಲ್ಲಿ ಇದನ್ನು ಅಳವಡಿಸಲು ಸಾಧ್ಯವೇ. ಈ ಪದ್ಧತಿಯು ಕೃಷಿ ವಿಶ್ವ ವಿದ್ಯಾಲಯಗಳ ಮಾನ್ಯತೆ ಪಡೆದಿದೆಯೇ ಎಂಬ ಪ್ರಶ್ನೆಗಳನ್ನು ಎತ್ತಿದ್ದರು. ಈ ಕೃಷಿ ಪದ್ಧತಿಯನ್ನು ಸಂಶೋಧನೆಗೆ ಒಳಪಡಿಸಿ ಪರೀಕ್ಷಿಸಬೇಕೆಂದು ಇನ್ನೂ ಕೆಲವರು ಅಭಿಪ್ರಾಯಪಟ್ಟಿದ್ದರು. ಈ ದೇಶದ ಬಹು ಸಂಖ್ಯಾತರ ಭೂಮಿ ಮತ್ತು ಬದುಕನ್ನು ಜೋಪಾನ ಮಾಡುವ ಜವಾಬ್ದಾರಿಯನ್ನು ನಮ್ಮ ಕೃಷಿ ವಿಶ್ವವಿದ್ಯಾಲಯಗಳಿಗೆ ಕೊಡಲಾಗಿತ್ತು. ಆದರೆ ನಮಗೆ ಎದುರಾಗಿದ್ದ ಸವಾಲುಗಳಿಗೆ ನಮ್ಮಲ್ಲೇ ಉತ್ತರ ಹುಡಕುವ ಗೋಜಿಗೆ ಹೋಗಲಿಲ್ಲ ಈ ವಿಶ್ವವಿದ್ಯಾಲಯಗಳು. ಪಾಶ್ಚಿಮಾತ್ಯ ದೇಶಗಳಿಂದ ಎರವಲು ಪಡೆದ ‘ಹಸಿರು ಕ್ರಾಂತಿ’ಯನ್ನು ಪ್ರಚುರಪಡಿಸಿದ್ದಷ್ಟೇ ಇವುಗಳ ಸಾಧನೆಯಾಯಿತು. ಹಸಿರು ಕ್ರಾಂತಿಯ ನಂತರ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿತು ಎನ್ನುವುದೇನೋ ಸತ್ಯ. ಎರಡನೇ ಮಹಾಯುದ್ಧದ ನಂತರ ಶಸ್ತ್ರಾಸ್ತ್ರಗಳಿಗೆ ರಾಸಾಯನಿಕಗಳನ್ನು ತಯಾರಿಸುತ್ತಿದ್ದ ಕಂಪೆನಿಗಳಿಗೆ ಮಾರುಕಟ್ಟೆ ಇಲ್ಲದಂತಾಗಿತ್ತು. ಕೃಷಿ ಸಾಧನ ಸಲಕರಣೆಗಳು- ಬೀಜ ಗೊಬ್ಬರ ಕೀಟನಾಶಕಗಳ ತಯಾರಿಕೆಯಲ್ಲಿ ತಮ್ಮ ವ್ಯಾಪಾರವನ್ನು ಮುಂದುವರೆಸಲು ಈ ಎಲ್ಲ ಕಂಪೆನಿಗಳಿಗೆ ಹಸಿರು ಕ್ರಾಂತಿಯೇ ರತ್ನಗಂಬಳಿ ಹಾಸಿಕೊಟ್ಟಿತು ಎಂಬುದೂ ಅಷ್ಟೇ ಸತ್ಯ. ಹಸಿರು ಕ್ರಾಂತಿಗೂ ಮುಂಚೆ ಭಾರತದ ‘ಕೃಷಿ’ ಬದುಕಿನ ಭಾಗವಾಗಿತ್ತು. ಸಂಸ್ಕೃತಿಯ ನೆಲೆಯಾಗಿತ್ತು. ನಿಸರ್ಗದಲ್ಲಿರುವ ವೈವಿಧ್ಯತೆಯನ್ನು ಆರಾಧಿಸಿ ನಮ್ಮ ಹಿರಿಯರು ಮಾಡುತ್ತಿದ್ದುದು ಮಿಶ್ರ ಬೆಳೆ ಪದ್ಧತಿ. ಕರ್ನಾಟಕದಲ್ಲಿ ಅಕ್ಕಡಿ ಎಂದು ಕರೆದರೆ, ಉತ್ತರ ಭಾರತದಲ್ಲಿ `ಬಾರಾ ಅನಾಜ್” (ಹನ್ನೆರಡು ದವಸ ಧಾನ್ಯ) ಎಂದು ಕರೆದರು. ಮನೆಯ ಆಹಾರ ಭದ್ರತೆಗೆ ಬೇಕಾದ ಧವಸ, ಧಾನ್ಯ, ಬೇಳೆಕಾಳುಗಳು, ಎಣ್ಣೆಬೀಜಗಳನ್ನು ಒಂದಕ್ಕೊಂದು ಹೊಂದುವಂತೆ ಬಿತ್ತಿ ಬೆಳೆಯುವ ಪದ್ಧತಿ ನಶಿಸುತ್ತ ಬಂದು ಅದರ ಜಾಗವನ್ನು ಕಾಲಕ್ರಮೇಣ ಏಕ ಬೆಳೆಯ ಪದ್ಧತಿಯು ಆವರಿಸಿಕೊಂಡಿತು. ನಮ್ಮಲ್ಲಿದ್ದ ಕೋಟ್ಯಾಂತರ ತಳಿಗಳು ಕಾಣೆಯಾದವು. ಹೆಚ್ಚು ಹೆಚ್ಚು ಬೆಳೆ ಬೆಳೆಯಲು ರಾಸಾಯನಿಕ ಗೊಬ್ಬರಗಳು-, ಕ್ರಿಮಿನಾಶಕಗಳನ್ನು ಮನೆ ಬಾಗಿಲಿಗೆ ತಂದುಕೊಟ್ಟರು. ಇವುಗಳನ್ನು ಸುರಿದು ಭೂಮಿ ಬಂಜರಾಯಿತು. ಎಕರೆಗಟ್ಟಲೇ ಭೂಮಿಯಲ್ಲಿ ರೈತರು ಕಬ್ಬು, ಭತ್ತ, ಹತ್ತಿ, ಅಡಿಕೆಯಂತಹ ಬೆಳೆಗಳನ್ನು ಈ ದೇಶದ ಆಹಾರ ಸ್ವಾವಲಂಬನೆಗಾಗಿ ಬೆಳೆದರು. ಮಿಕ್ಕೆಲ್ಲದಕ್ಕೂ ಮಾರುಕಟ್ಟೆಯ ಮೊರೆ ಹೋಗುವಂತಾಯಿತು. ಆಹಾರದ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಯಿತು. ರೈತ ತನ್ನ ಖುದ್ದು ಆಹಾರ ಭದ್ರತೆಗೆ ಪರಾವಲಂಬಿಯಾದ. ಬೇರೆಯವರಿಗೆ ಕೊಡುತ್ತಿದ್ದ ರೈತನ ಕೈ ಮೂರು ಕಾಸಿನ ಸಬ್ಸಿಡಿ ಬೇಡಿ ಚಾಚುವಂತಾಯಿತು. ಇದೆಲ್ಲದರ ಶ್ರೇಯಸ್ಸು ಈ ದೇಶದ ಕೃಷಿ ವಿಜ್ನಾನಿಗಳಿಗೇ ಸಲ್ಲಬೇಕು. ಇದರ ನಡುವೆ ತೊಂಬತ್ತರ ದಶಕದಲ್ಲಿ ಮುಕ್ತ ಮಾರುಕಟ್ಟೆ ನೀತಿ ಜಾರಿಯಾಯಿತು. ವಿದೇಶೀ ಕೃಷಿ ಉತ್ಪನ್ನಗಳು ಯಾವುದೇ ಆಮದು ಸುಂಕವಿಲ್ಲದೇ ಅಗ್ಗದ ದರದಲ್ಲಿ ದೇಶದೊಳಗೆ ಭಾರೀ ಪ್ರಮಾಣದಲ್ಲಿ ಸುರಿದವು. ನಮ್ಮ ದೇಶದ ರೈತರ ಗಾಯದ ಮೇಲೆ ಬರೆ ಎಳೆದವು. ನಮ್ಮ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದಂತಾಯಿತು. ಇಂದಿಗೂ ಕೃಷಿ ಮಾರುಕಟ್ಟೆ ಜೂಜಾಟವಿದ್ದಂತೆಯಾಯಿತು. ಯಾರು ಯಾವಾಗ ಬಾಜಿ ಕಟ್ಟುತ್ತಾರೋ ಯಾರಿಗೂ ತಿಳಿಯದು. ಇಂದಿಗೂ ಬೆಳೆಗಳ ಬೆಲೆ ರಕ್ಷಣೆಗೆ ಸಂಬಂಧಿಸಿದಂತೆ ಈ ದೇಶದಲ್ಲಿ ಯಾವ ಶಾಸನವೂ ಇಲ್ಲ. ಬೆಂಬಲ ಬೆಲೆ ನೀತಿಗಾಗಿ ಪ್ರತಿ ವರ್ಷ ನಡೆಯುವ ರೈತರ ಹೋರಾಟಗಳು ಮತ್ತು ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ಲಕ್ಷಾಂತರ ರೈತರ ಆತ್ಮಹತ್ಯೆಗಳು ನಮ್ಮ ಕಣ್ಮುಂದೆಯೇ ಇವೆ. ಭಾರತ ಸರ್ಕಾರದ ಕೃಷಿ ಮಂತ್ರಾಲಯದ ಅಂಕಿಅಂಶಗಳ ಪ್ರಕಾರ 1951ರಲ್ಲಿ ಭಾರತದಲ್ಲಿ ಒಕ್ಕಲುತನದಲ್ಲಿ ತೊಡಗಿದ್ದ ಜನಸಂಖ್ಯೆಯ ಒಟ್ಟು ಶೇಕಡಾ 69.7%. ಈ ಪ್ರಮಾಣ 2011 ರಲ್ಲಿ 54.6% ಕ್ಕೆ ಕುಸಿಯಿತು. ಇಷ್ಟೆಲ್ಲಾ ಆದರೂ ಸರ್ಕಾರಗಳೇ ಆಗಲಿ, ಕೃಷಿ ವಿಶ್ವವಿದ್ಯಾಲಯಗಳೇ ಆಗಲಿ, ಕೃಷಿ ಒಂದು ಗಂಭೀರ ಬಿಕ್ಕಟ್ಟಿಗೆ ಸಿಲುಕಿದೆಯೆಂದು ಗುರುತಿಸುವ ಕನಿಷ್ಠ ಕೆಲಸವನ್ನು ಕೂಡ ಮಾಡಲಿಲ್ಲ. ಕೃಷಿಯಲ್ಲಾಗುತ್ತಿದ್ದ ಅನ್ಯಾಯ, ಮೋಸಗಳ ಕುರಿತು ಕಣ್ಣು ಬಾಯಿ ಕಿವಿ ಮುಚ್ಚಿಕೊಂಡವು. ಇದೇ ಸಮಯದಲ್ಲಿ ಅನೇಕ ವರ್ಷಗಳ ಸಂಶೋಧನೆಗಳ ನಂತರ ಹಸಿರು ಕ್ರಾಂತಿಯಿಂದಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ತಿಳಿ ಹೇಳುತ್ತಾ ನೈಸರ್ಗಿಕ ತತ್ವಗಳನ್ನಾಧರಿಸಿದ “ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ” ಎಂಬ ಹೆಸರಿನ ಒಂದು ಪರ್ಯಾಯವನ್ನು ದೇಶದ ರೈತರ ಮುಂದಿಟ್ಟವರು ಮಹಾರಾಷ್ಟ್ರದ ಸುಭಾಷ್ ಪಾಳೇಕರ್ ರವರು. ಸುಭಾಷ್ ಪಾಳೇಕರರ ಸಹಜ ಕೃಷಿ ಪದ್ಧತಿ– ಇದಕ್ಕೂ ಮುಂಚೆ ನೈಸರ್ಗಿಕ ತತ್ವಗಳನ್ನಾಧರಿಸಿ ಮಾಡಬಹುದಾದ ಕೃಷಿಯನ್ನು “ಶೂನ್ಯ ಉಳುಮೆ ಕೃಷಿ” (Zero Tillage Farming) ಎಂಬ ಹೆಸರಿನ ಸಹಜ ಕೃಷಿಯನ್ನು ಜಗತ್ತಿಗೇ ಪರಿಚಯಿಸಿದ್ದು ಜಪಾನಿನ ಕೃಷಿ ಸಂತ ಮಸನೊಬು ಫುಕುವೊಕಾ. ಆನಂತರ ನಮ್ಮವರೇ ಆದ ತಮಿಳುನಾಡಿನ ಶ್ರೀಯುತ ನಮ್ಮಾಳವರ್, ಗ್ರಾಮೀಣ ಗಾಂಧೀ ಎಂದೇ ಹೆಸರುವಾಸಿಯಾಗಿದ್ದ ಭಾಸ್ಕರ್ ಸಾವೆ ಹಾಗೂ ಇತ್ತೀಚೆಗೆ ನಮ್ಮನ್ನಗಲಿದ ನಾಡೋಜ ಡಾ.ನಾರಾಯಣರೆಡ್ಡಿಯವರು. 2002 ನೇ ಇಸವಿಯಲ್ಲಿ ಕರ್ನಾಟಕದ ರೈತ ಚಳವಳಿಯ ಹಿರಿಯ ಮುಖಂಡರಾಗಿದ್ದ ಬಸವರಾಜ್ ತಂಬಾಕೆಯವರು ಸುಭಾಷ್ ಪಾಳೇಕರ್ ರವರನ್ನು ಕರ್ನಾಟಕಕ್ಕೆ ಪರಿಚಯ ಮಾಡಿದರು. ಅಲ್ಲದೇ ನಮ್ಮ ಮೈಸೂರಿನ ಪತ್ರಕರ್ತರಾದ ಆರ್.ಸ್ವಾಮಿ ಆನಂದ ಅವರು ಈ‌ ಸುಭಾಷ್ ಪಾಳೇಕರ್ ರನ್ನು ಕಟ್ಟಿಕೊಂಡು ರಾಜ್ಯದ ಮೂಲೆಮೂಲೆಗಳಲ್ಲಿ ಸುತ್ತಾಡಿ ಸುಭಾಷ್ ಪಾಳೇಕರರ ಈ ಕೃಷಿ ಪದ್ದತಿಯನ್ನು ಪ್ರಚುರಪಡಿಸಿದರು. ಅಷ್ಟೇ ಅಲ್ಲ ರೈತರಿಗೆ ಸಹಜ ಕೃಷಿಯನ್ನು ಪದ್ದತಿ ಆಹಾರ ಉತ್ಪಾದನೆಗೆ ಎಷ್ಟು ಬಹುಮುಖ್ಯವೆಂದು ಸಾರಿಸಾರಿ ಹೇಳಿದರು. ಅಲ್ಲದೇ ನಮ್ಮ ‘ಅಗ್ನಿ’ ವಾರಪತ್ರಿಕೆಯಲ್ಲಿ ಅಂಕಣವೊಂದನ್ನು ಧಾರಾವಾಹಿಯಾಗಿ ‘ಸಹಜ‌ ಕೃಷಿ’ಯ ಬಗೆಗೆ ಕಂತುಗಟ್ಟಲೇ ಬರೆದು ರೈತರನ್ನು ಎಚ್ಚರಿಸುವ ಲೇಖನ ಮಾಲೆಯನ್ನು ಹೊರತಂದರು. ಈ ಸಹಜ ಕೃಷಿ ಕೃಷಿ ಬಗೆಗಿನ ಪುಸ್ತಕ ೩-೪ ಮುದ್ರಣ ಕಂಡಿತು. ಇರಲಿ… ಆರ್. ಸ್ವಾಮಿ ಆನಂದರ ಜೊತೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸುಭಾಷ್ ಪಾಳೇಕರರ ಅನೇಕ ತರಬೇತಿಗಳನ್ನು ಆಯೋಜಿಸಿತು. ಶಿಬಿರಕ್ಕೆ ಬರುತ್ತಿದ್ದ ರೈತರ ಊಟ, ವಸತಿಗೆ ಅನೇಕ ಪ್ರಗತಿಪರ ಮಠಾಧೀಶರುಗಳ ಸಹಕಾರ ದೊರಕಿತು. ಕರ್ನಾಟಕದಲ್ಲಿ ಮೊದಲಿಗೆ ಈ ಕೃಷಿ ಪದ್ಧತಿಯಲ್ಲಿ ರೈತ ಸಂಘದ ಕಾರ್ಯಕರ್ತ ಬನ್ನೂರಿನ ಕೃಷ್ಣಪ್ಪ ಅಳವಡಿಸಿ ಎಲ್ಲರೂ ಹುಬ್ಬೇರಿಸುವಂತೆ ಬಾಳೆ ಬೆಳೆದರು. ಆಗ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ಮೈಸೂರಿನ ಸ್ವಾಮಿ ಆನಂದ್ ರವರು ಕೃಷ್ಣಪ್ಪರವರ ಬಾಳೆಯ ಬಗ್ಗೆ ಲೇಖನ ಬರೆದರು. ನಂತರ ಹೀಗೆ ನೈಸರ್ಗಿಕ ಕೃಷಿಯ ಆಂದೋಲನ ಕರ್ನಾಟಕದಲ್ಲಿ ವ್ಯಾಪಕಗೊಳ್ಳುತ್ತಾ ಹೋಯಿತು. 2006 ಅಥವಾ 2007 ಇರಬೇಕು. ಕೂಡಲ ಸಂಗಮದಲ್ಲಿ ನಡೆದ ಪಾಳೇಕರ್ ರವರ ಏಳು ದಿನಗಳ ಶಿಬಿರದಲ್ಲಿ ಭಾಗವಹಿಸಿದ ರೈತರ ಸಂಖ್ಯೆ ಆರು ಸಾವಿರ ದಾಟಿತ್ತು. ಕರ್ನಾಟಕದಲ್ಲಿ ಮೌನವಾಗಿ ನಡೆಯುತ್ತಿದ್ದ ಈ ಚಳವಳಿಯನ್ನು ನೋಡಿದ ತಮಿಳುನಾಡಿನ ‘ಪಸುಮೈ ವಿಕಟನ್’ ಪತ್ರಿಕೆ ತಮಿಳುನಾಡಿನಲ್ಲೂ ಪಾಳೇಕರರ ಶಿಬಿರ ಆಯೋಜಿಸಿತು. ನಂತರ ಕೇರಳ, ಪಂಜಾಬ್, ಆಂಧ್ರ ಪ್ರದೇಶ, ರಾಜಸ್ಥಾನ ಹೀಗೆ ನೈಸರ್ಗಿಕ ಕೃಷಿಯ ಆಂದೋಲನ ವ್ಯಾಪಕವಾಗಿ ಬೆಳೆಯತೊಡಗಿತು. ವಿಶ್ವ ರೈತ ಚಳವಳಿಯಾದ ‘ಲಾ ವಿಯಾ ಕ್ಯಾಂಪೆಸಿನಾ’ದ ಮೂಲಕ ಶ್ರೀಲಂಕಾ, ನೇಪಾಳ ಮತ್ತು ಇಂಡೋನೇಷಿಯಾದಲ್ಲೂ ಅನೇಕ ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿ ಯಶಸ್ಸನ್ನು ಕಂಡಿದ್ದರು. ಆದರೆ, ಇದೆಲ್ಲದರ ನಡುವೆ ನಮ್ಮ ಯಾವೊಬ್ಬ ಕೃಷಿ ವಿಜ್ಞಾನಿಯೂ, ಕೃಷಿ ಅಧಿಕಾರಿಯೂ ಇದರ ಕಡೆ ತಿರುಗಿ ನೋಡಲಿಲ್ಲ. ಪಾಳೇಕರ್ ಪದ್ಧತಿ ಅವೈಜ್ಞಾನಿಕ ಅಥವಾ ಅರ್ಥಹೀನ ಎಂದು ತೀರ್ಮಾನಿಸಿದಂತಿತ್ತು ಅವರ ನಡೆ. ಇವರೆಲ್ಲರನ್ನೂ ಮೀರಿ ಅನೇಕ ರಾಜ್ಯ ಸರ್ಕಾರಗಳು ಮತ್ತು ಇತ್ತೀಚೆಗೆ ಕೇಂದ್ರ ಸರ್ಕಾರವೂ ಸೇರಿದಂತೆ ಶೂನ್ಯ ಬಂಡವಾಳ (ನೈಸರ್ಗಿಕ) ಕೃಷಿಗೆ ಒತ್ತು ನೀಡಲು ತೀರ್ಮಾನಿಸಿಯಾಗಿದೆ. ಆಂಧ್ರ ಪದೇಶದ ಸರ್ಕಾರ 2015ರಲ್ಲಿ ಈ ಕೃಷಿ ಪದ್ಧತಿಯನ್ನು ರಾಜ್ಯದಾದ್ಯಂತ ಒಯ್ಯಲು ಕೈಗೊಂಡ ತೀರ್ಮಾನವೇ ಇದೆಲ್ಲಕ್ಕೆ ನಾಂದಿ ಆಗಿತ್ತು. 2024 ರವರೆಗೆ ಇಡೀ ರಾಜ್ಯವನ್ನು ನೈಸರ್ಗಿಕ ಕೃಷಿಗೆ ಒಳಪಡಿಸಬೇಕೆಂದು ಆಂಧ್ರ ಈಗ ಪಣ ತೊಟ್ಟಿದೆ. ಇದಕ್ಕೆ ಮೀಸಲಿಟ್ಟಿರುವ ಹಣ ಹದಿನೇಳು ಸಾವಿರ ಕೋಟಿಗಳಷ್ಟು. ಇದರ ಬಗ್ಗೆ ಅನೇಕ ಟೀಕೆಗಳೂ ಕೇಳಿ ಬರುತ್ತಿವೆ. ಶೂನ್ಯ ಬಂಡವಾಳವೆಂದ ಮೇಲೆ ಹದಿನೇಳು ಸಾವಿರ ಕೋಟಿ ಏಕೆ? ಹದಿನೇಳು ಸಾವಿರ ಕೋಟಿ ಮೀಸಲಿಟ್ಟಿರುವುದು ಎಂಟರಿಂದ ಹತ್ತು ವರ್ಷಗಳ ಯೋಜನಾ ಅವಧಿಗೇ ಹೊರತು ಕೇವಲ ಒಂದು ವರ್ಷಕ್ಕಲ್ಲ. 2024 ರ ಒಳಗೆ ರಾಜ್ಯದ ಅರವತ್ತು ಲಕ್ಷ ರೈತರನ್ನು ತಲುಪಲು ಈ ಹಣವನ್ನು ಬಳಸಲಾಗುತ್ತಿದೆ. (http://apzbnf.in/an-open-letter-to-critics/). ಈ ಹಣ ಬಹುರಾಷ್ಟೀಯ ಕಂಪೆನಿಗಳಿಂದ ಅಥವಾ ಜಗತ್ತಿನ ದೈತ್ಯ ಕಂಪೆನಿಗಳಿಂದ ಬರುತ್ತಿದ್ದಲ್ಲಿ, ಅದನ್ನು ವಿರೋಧಿಸಬೇಕಾಗುತ್ತೆ. ಆದರೆ ಈ ಆಪಾದನೆಗಳಿಗೆ ಸದ್ಯ ಯಾವ ಪುರಾವೆಗಳೂ ಇಲ್ಲ. ಈಗ ವಿಮರ್ಶೆ ಮಾಡಿರುವ ಅನೇಕರು ‘ಶೂನ್ಯ ಬಂಡವಾಳ’ ಎಂಬುದನ್ನು ಯಥಾವತ್ ಅರ್ಥ ಮಾಡಿಕೊಂಡಂತಿದೆ. ಪಾಳೇಕರ್ ಅವರು ಹೇಳಿರುವುದು ಒಂದು ಬೆಳೆಯನ್ನು ಬೆಳೆಯಲು ತಗಲುವ ವೆಚ್ಚವನ್ನು ಬೆಳೆಯ ನಡುವೆ ಬೆಳೆಯಬಹುದಾದ ಅಂತರ ಬೆಳೆಯಿಂದ ಬರುವ ಆದಾಯದಿಂದ ಭರಿಸುವುದೆಂದು. ಅದಕ್ಕೂ ಮಿಗಿಲಾಗಿ ‘ಶೂನ್ಯ ಬಂಡವಾಳ’ ಎಂಬುದು ಒಂದು ಪರ್ಯಾಯ ಕೃಷಿ ಚಿಂತನೆಗೆ ಆಹ್ವಾನ ನೀಡುವ ಘೋಷಣೆಯೂ ಆಗಿದೆ. ಈಗ ಸುಭಾಷ್ ಪಾಳೇಕರ್ ರವರು ಹೆಸರನ್ನು ಬದಲಾಯಿಸಿದ್ದಾರೆ. ಅದಕ್ಕೆ ಅನೇಕರ ಸಹಮತ ಇಲ್ಲ. ಶೂನ್ಯ ಬಂಡವಾಳದ ಕೃಷಿಯಲ್ಲಿ ಹೊರಗಿನಿಂದ ಏನನ್ನೂ ತರುವುದಿಲ್ಲ. ಬೀಜ, ಜೀವಾಮೃತ, ಕ್ರಿಮಿನಾಶಕಗಳ ಸಿದ್ಧತೆಯಲ್ಲಿ ಪ್ರಕೃತಿದತ್ತವಾಗಿ ಸಿಗುವದನ್ನೇ ಬಳಸಲಾಗುತ್ತದೆ. ಇದನ್ನು ವೈಜ್ನಾನಿಕ ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತಿರುವ ವಿಜ್ಞಾನಿಗಳು ಕಾನೂನು ಬಾಹಿರವಾಗಿ ಮಾರಲಾಗುತ್ತಿರುವ ಬಿಟಿ ಬದನೆ ಬೀಜಗಳ ಬಗ್ಗೆ ಯಾಕೆ ಬಾಯಿ ಬಿಡುತ್ತಿಲ್ಲ? ಜಗತ್ತಿನ ಅನೇಕ ದೇಶಗಳಲ್ಲಿ ಈಗಾಗಲೇ ನಿಷೇಧಿಸಲಾಗಿದ್ದು ನಮ್ಮ ದೇಶದಲ್ಲಿ ರಾಜಾರೋಷವಾಗಿ ಮಾರಾಟ್ವಾಗುತ್ತಿರುವ ಹಾನಿಕಾರಕ Glyphosate ಅಥವಾ Round Up ಕಳೆ ನಾಶಕಗಳ ಬಗ್ಗೆ ಯಾವುದೇ ವಿಜ್ಞಾನಿ ಏಕೆ ಪ್ರಶ್ನೆ ಮಾಡುತ್ತಿಲ್ಲ? ನೈಸರ್ಗಿಕ ಕೃಷಿಗೆ ವೈಜ್ಞಾನಿಕ ಮಾನ್ಯತೆ ಇದೆಯೇ ಎಂಬ ಪ್ರಶ್ನೆ ಅಪ್ರಸ್ತುತವಾಗಿದೆ. ಈಗಾಗಲೇ ಹದಿನೈದು ವರ್ಷಗಳಿಂದ ನೈಸರ್ಗಿಕ ಕೃಷಿಯನ್ನು ಮಾಡುತ್ತಿರುವ ರೈತರೇ ಮಾನ್ಯತೆ ಕೊಟ್ಟಿರುವಾಗ, ವಿಶ್ವವಿದ್ಯಾಲಯಗಳ ಮಾನ್ಯತೆ ಪಡೆಯುವ ಅಗತ್ಯವಿದೆಯೇ? ಹಿಮಾಚಲದ ಸೇಬು ಬೆಳೆಗಾರರಿಂದ ಹಿಡಿದು ಬೀದರ ಜಿಲ್ಲೆಯ ಖುಷ್ಕಿ ಬೆಳೆಗಾರರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಎಲ್ಲಾ ಹವಾಮಾನಗಳಿಗೂ ಹೊಂದುವುದಿಲ್ಲ ಎನ್ನುವವರಿಗೆ ಒಂದು ಸಲಹೆ– ದಯವಿಟ್ಟು ನೈಸರ್ಗಿಕ ಕೃಷಿ ಮಾಡುತ್ತಿರುವ ರೈತರನ್ನು ಭೇಟಿ ಮಾಡಿ ಮಾತನಾಡಿಸಿ. ವಿತಂಡ ವಾದಗಳನ್ನು ಮಾಡುತ್ತಿರುವವರಿಗೆ ಜಗತ್ತಿನ ಮುಂದೆ ನಿಂತಿರುವ ಅತಿ

ಭಯದ ಬಗ್ಗೆ ಭಯ ಬೇಡ

ಇಂದಿನ ಆಧುನಿಕ ಗಡಿಬಿಡಿ ಜೀವನ ಶೈಲಿಯು ನಮ್ಮ  ಮನಸ್ಸಿನ ಮೆಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತಿದೆ. ಅದರಲ್ಲಿ ಭಯವು ಪ್ರಮುಖವಾಗಿದೆ. ಭಯದ ಜೊತೆಗೆ ಉತ್ಸುಕತೆ ಹೆಚ್ಚುತ್ತಿದೆ. ಇವೆರಡೂ ಮಾನವನ ಸಹಜ ಗುಣಗಳಾದರೂ ಇತ್ತೀಚಿನ ದಿನಮಾನಗಳಲ್ಲಿ ಇವು ನಮ್ಮ ನಿಕಟ ಸಂಗಾತಿಗಳಾಗಿವೆ. ಮನಸ್ಸಿನಲ್ಲಿ ಭಯ ಮೂಡಿತೆಂದರೆ ಅದರಿಂದ ಹೊರಬರುವದು ಅಷ್ಟು ಸುಲಭದ ಮಾತಲ್ಲ.         ಮಕ್ಕಳು ಯಾವ ಯಾವುದೋ ವಿಷಯಕ್ಕೆ ಭಯಗೊಳ್ಳುತ್ತವೆ. ಭಯ ಕೇವಲ ಮಕ್ಕಳಿಗೆ ಅಷ್ಟೇ ಅಲ್ಲ ದೊಡ್ಡವರಿಗೂ ಕಾಡುವ ಮಾನಸಿಕ ಸಮಸ್ಯೆ. ಭಯ ಅಂದರೇನು? ಅದು ಏಕೆ ಉಂಟಾಗುತ್ತದೆ ಅದನ್ನು ಹೇಗೆ ನಿವಾರಿಸುವುದು ಎಂಬ ಪ್ರಶ್ನೆಗಳು ನಮ್ಮಲ್ಲಿ  ಅದೆಷ್ಟೋ ಬಾರಿ ಸುಳಿಯುತ್ತವೆ. ಭಯ ಅಂದರೆ ಏನು ಅಂತ ಹೇಳೋಕೆ ಆಗಲ್ಲ ಆದರೆ ಅದನ್ನು ಒಂದಿಲ್ಲೊಂದು ಸಂದರ್ಭದಲ್ಲಿ ನಾವು ಅನುಭವಿಸುತ್ತೇವೆ. ಇದು ಮನಸ್ಸಿನ ನಕಾರಾತ್ಮಕ ಭಾವನೆ.  ಭಯ ಎಂದರೇನು?   ನಮ್ಮ ಶಕ್ತಿಗೆ ಮೀರಿದ ಅಸಂಭಾವ್ಯ ವಿಚಾರವು ನಮ್ಮ ಮನಸ್ಸಿಗೆ ಹೊಕ್ಕಿತೆಂದರೆ ಆಗ ನಮ್ಮಲ್ಲಿ ನಾವು ಏನೋ ಕಲ್ಪಿಸಿಕೊಳ್ಳುತ್ತೇವೆ. ಇಂತಹ ವಾಸ್ತವವಲ್ಲದ ಕಲ್ಪನೆಗಳಿಗೆ ಒಂದು ಸ್ಪಷ್ಟ ಚಿತ್ರಣವನ್ನು ಸೃಷ್ಟಿಸಿಕೊಂಡು ನೋಡಲು ಶುರು ಮಾಡುತ್ತೇವೆ. ಆಗ ಮನದಲ್ಲಿ ಸಾವಕಾಶವಾಗಿ ಭಯವು ಆವರಿಸಕೊಳ್ಳತೊಡಗುತ್ತದೆ. ನಾವು ಸೃಷ್ಟಿಸಿಕೊಂಡ ಕಾಲ್ಪನಿಕ ಚಿತ್ರಣವು ಕ್ರಮೇಣ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿ ನಮ್ಮನ್ನು ಅಧೋಗತಿಗೆ ತಳ್ಳುತ್ತದೆ.          ಬಹಳಷ್ಟು ಬಾರಿ ಭಯವು ನಮ್ಮ ಭ್ರಮೆಯೇ ಆಗಿರುತ್ತದೆ. ಇಲ್ಲದ್ದನ್ನು ಇದ್ದ ಹಾಗೆ ತಿಳಿದುಕೊಳ್ಳುತ್ತೇವೆ. ಇದು ಒಂದು ಭಾವನಾತ್ಮಕ ಅನುಭವ. ಮನದಲ್ಲಿ ಆತಂಕ ಭಾವ ಸೃಷ್ಟಿ ಮಾಡಿ, ಭಾವನಾತ್ಮಕ ಅಡಚಣೆಯನ್ನುಂಟು ಮಾಡುತ್ತದೆ. ಭಯದಿಂದಾಗಿ ನಮ್ಮ ಜಾಗೃತ ಮನಸ್ಸು ನೋವನ್ನು ಅನುಭವಿಸುತ್ತದೆ. ನೋವಿನಿಂದ ಹೊರಬರಲು ನಮ್ಮ ಮನಸ್ಸು ಒದ್ದಾಡುತ್ತದೆ. ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ಎಚ್ಚರಿಕೆಯ ಸಂಕೇತವಾಗಿ ವರ್ತಿಸುತ್ತದೆ. ಇಲ್ಲವಾದಲ್ಲಿ ಮಾನಸಿಕ ವ್ಯಾಧಿಯಾಗಿ ಕಾಡುತ್ತದೆ.          ಭಯ ಉಂಟಾಗೋದು ಯಾವಾಗ?     ನಾಳೆ ಏನಾಗುತ್ತದೆಯೋ ಏನೊ ಎಂಬ ಚಿಂತೆಯು ಭಯವಾಗಿ ಪರಿವರ್ತನೆಯಾಗುತ್ತದೆ. ಯಾವುದೇ ವಿಷಯದ ಬಗೆಗೆ ನಿರಾಶಾದಾಯಕವಾಗಿ ಆಲೋಚಿಸುವದು, ಸುಮ್ಮನೆ ಏನನ್ನೋ ಇಲ್ಲದ್ದನ್ನು ಊಹಿಸಿಕೊಳ್ಳುವದು,ಹಿಂದೆ ನಡೆದು ಹೋದ ಕಹಿ ಘಟನೆಗಳನ್ನು ಮೇಲಿಂದ ಮೇಲೆ ನೆನಪು ಮಾಡಿಕೊಳ್ಳುವದು, ನಾನೆಲ್ಲಿ ಸೋತು ಹೋಗುತ್ತೇನೋ ಎಂಬ ಸೋಲಿನ ಆತಂಕ, ನನಗಾರೂ ಇಲ್ಲ ನಾನು ಏಕಾಂಗಿ ಎಂಬ ಭಾವ, ಪರರು ನನಗಿಂತ ಮುಂದೆ ಹೋಗುತ್ತಿದ್ದಾರೆ ಎಂಬ ಮತ್ಸರ ಭಾವ ನಮ್ಮಲ್ಲಿ ಭಯವನ್ನು ಹುಟ್ಟು ಹಾಕುತ್ತವೆ. ನಾವು ಅಪಾಯದಲ್ಲಿ ದ್ದಾಗ ನಮ್ಮ ಜೀವನದ ಬಗ್ಗೆ ಹೆದರಿಕೆಯಾಗುತ್ತದೆ.    ಯಾವುದಕ್ಕೆ ಭಯಗೊಳ್ಳುತ್ತೇವೆ?     ಚಿಕ್ಕ ಪುಟ್ಟ ವಿಷಯಗಳಿಗೂ ಮನಸ್ಸು ಭಯಗೊಳ್ಳುತ್ತದೆ. ಇದು ಒಂದು ತೆರನಾದ ಮಾನಸಿಕ ಸಂಘರ್ಷ. ಇದಕ್ಕೆ ಫೋಬಿಯೋ ಅಂತಲೂ ಕರೆಯುತ್ತಾರೆ. ಕೆಲವರಿಗೆ ಕಾಡುಪ್ರಾಣಿಗಳೆಂದರೆ ಭಯ. ಇನ್ನೂ ಕೆಲವರಿಗೆ ಸಾಕು ಪ್ರಾಣಿಗಳಾದ ನಾಯಿ ಬೆಕ್ಕು ಕಂಡರೂ  ಭಯ. ಮಳೆ ಗುಡುಗು ಮಿಂಚಿಗೂ ಹೆದರುತ್ತಾರೆ. ವಿಚಿತ್ರವೆಂದರೆ ಕೆಲವರು ಜನರನ್ನು ಕಂಡರೆ ಕಾಡು ಪ್ರಾಣಿ ನೋಡಿದ ಥರ ಭಯಗೊಳುತ್ತಾರೆ. ಆಹಾರದ ಭಯ, ಎತ್ತರ ಜಾಗದ ಭಯ, ಬಸ್ಸಿನಲ್ಲಿ , ರೈಲಿನಲ್ಲಿ ವಿಮಾನದಲ್ಲಿ ಪ್ರಯಾಣ ಮಾಡುವುದೆಂದರೆ ಭಯ ಇನ್ನು ಕೆಲವರು ನೀರು ಕಂಡರೆ ಹೆದರುತ್ತಾರೆ. ಅಂದರೆ ಭಯ ಎಲ್ಲ ಹಂತಗಳಲ್ಲಿ ಇದ್ದೇ ಇರುತ್ತದೆ.ಒಬ್ಬೊಬ್ಬರಿಗೆ ಒಂದೊಂದನ್ನು ಕಂಡರೆ ಭಯ. ಆಫೀಸಿಗೆ ಹೋದ ಗಂಡ, ಸ್ಕೂಲಿಗೆ ಹೋದ ಮಕ್ಕಳು ಮನೆಗೆ ಸರಿಯಾದ ಸಮಯಕ್ಕೆ ಮರಳಿ ಬರದಿದ್ದರೂ ಭಯಗೊಳ್ಳುವ ಪ್ರಸಂಗಗಳಿವೆ.  ನಾವು ಧೈರ್ಯವಂತರು ಎಂದು ಎಷ್ಟೋ ಜಂಭ ಕೊಚ್ಚಿಕೊಂಡರೂ ಭಯಗೊಳ್ಳುತ್ತೇವೆ ಎಲ್ಲಕ್ಕಿಂತ ದೊಡ್ಡ ಭಯ ಎಂದರೆ ಸಾವಿನ ಭಯ. ಈ ಭಯ ನಮ್ಮ ಅಸ್ತಿತ್ವಕ್ಕೆ ಸಂಬಂಧಿಸಿದ್ದು. ಎಲ್ಲಿ ನಮ್ಮ ಪ್ರಾಣಕ್ಕೆ ಸಂಚಕಾರ ಬರುತ್ತೇನೋ ಎಂದು ಎಷ್ಟೋ ಬಾರಿ ಭಯಗೊಳ್ಳುತ್ತೇವೆ.             ಭಯದ ಲಕ್ಷಣಗಳೇನು?      ಭಯವುಂಟಾದಾಗ ಮೈಂಡ್ ಫುಲ್ ಬ್ಲಾಂಕ್ ಆಗಿರುತ್ತೆ ಯಾವುದೇ ವಿಚಾರಗಳು ಆಲೋಚನೆಗಳು ಹೊಳೆಯುವುದಿಲ್ಲ. ಮೈಯೆಲ್ಲ ಬೆವರುತ್ತೆ.ಕೈ ಕಾಲುಗಳಲ್ಲಿ ಶಕ್ತಿಯಿಲ್ಲದಂತೆ ಭಾಸವಾಗುತ್ತೆ. ಮಾತೇ ಹೊರಡೋದಿಲ್ಲ. ಹೊರಡಿದರೂ ತೊದಲುತ್ತೆ. ಭಯದ ವಿಚಾರವನ್ನು ಹೊರತುಪಡಿಸಿ ಬೇರೆ ಯಾವ ವಿಚಾರಗಳು ಮನಸ್ಸಿನಲ್ಲಿ ಸುಳಿಯಲಾರವು. ವಿಚಾರಗಳೆಲ್ಲ ಅಸ್ತವ್ಯಸ್ತವಾಗುವುವು. ಅಂದುಕೊಂಡ ಯಾವ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಸಣ್ಣ ಪುಟ್ಟ ವಿಷಯಗಳಿಗೆ ಬೆಚ್ಚಿ ಬೀಳುವುದು ಅಥವಾ ಇದಕ್ಕೆ ತದ್ವಿರುದ್ಧವಾಗಿ ಗಂಭೀರ ವಿಷಯಗಳಿಗೂ ಪ್ರತಿಕ್ರಿಯಿಸದೆ ಮೌನವಾಗಿರುವದು ಇವೆಲ್ಲ ಭಯದ ಮುಖ್ಯ ಲಕ್ಷಣಗಳು.            ಭಯ ತಡೆಯೋಕೆ ಏನು ಉಪಾಯ ?       ಪ್ರತಿಯೊಂದು ಭಯದಿಂದಲೂ ನಾವು ಮುಕ್ತರಾಗಬಹುದು. ಭಯ ತಡೆಯುವ ಉಪಾಯಗಳು ಕಠಿಣವೆನಿಸಿದರೂ ಅಸಾಧ್ಯವೇನಲ್ಲ. ನಾವು ಭಯಗೊಳ್ಳುತ್ತೇವೆ ಎನ್ನುವ ಸಂಗತಿಯನ್ನು ಒಪ್ಪಿಕೊಳ್ಳುವುದು.ಯಾವ ವಿಷಯದ ಬಗ್ಗೆ ಭಯವಿದೆಯೋ ಎಂಬುನ್ನು ತಿಳಿದು ಅದನ್ನು ಮುಕ್ತವಾಗಿ  ಆತ್ಮೀಯರೊಂದಿಗೆ ಚರ್ಚಿಸುವದು.ಯಾವಾಗಲೂ ಕೆಲಸದಲ್ಲಿ  ತೊಡಗಿಸಿಕೊಳ್ಳುವದು. ಮೂಢನಂಬಿಕೆ ಮತ್ತು ಅಪಶಕುನಗಳನ್ನು ನಂಬದೆ ಇರುವದು. ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳುವುದು. ಪರಿಸ್ತಿತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನಿರ್ಣಯ ಕೈಗೊಳ್ಳುವದು ಅನುಮಾನಕ್ಕೆ ಆಸ್ಪದ ಕೊಡದಿರುವದು ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ನಮಗೆ ಎಚ್ಚರಿಕೆಯಂತೆ ವರ್ತಿಸುತ್ತದೆ ಎಂದು ತಿಳಿದುಕೊಳ್ಳುವುದು.ಭಯ ನಿವಾರಿಸುವುದಕ್ಕೆ ಪ್ರಯತ್ನಿಸಿ ತಜ್ಞ ವೈಜ್ಞರನ್ನು ಭೇಟಿ ಮಾಡುವುದು. ನಿಜವಾದ ಧೈರ್ಯವನ್ನು ಮನಸ್ಸಿಗೆ ತುಂಬಿಕೊಳ್ಳುವದು ಆಶಾವಾದಿಯಾಗಿರುವದು. ನಾನು ಧೈರ್ಯವಂತ ಎಂದು ನನ್ನಷ್ಟಕ್ಕೆ ನಾವೇ ಹೇಳಿಕೊಳ್ಳುವದು ಎಂದರೆ ಸೆಲ್ಪ್ ಹಿಪ್ನಾಟಿಸಂ ಮಾಡಿಕೊಳ್ಳುವದು.  ವಿವೇಕಾನಂದರ ವಾಣಿಯಂತೆ ‘ನಿಮ್ಮಿಂದ ನೀವೇ ಉದ್ದಾರವಾಗಬೇಕು. ಸ್ನೇಹಿತನೆ ನಿನಗೆ ಯಾರೂ ಸಹಾಯ ಮಾಡಲಾರರು. ನಿನಗೆ ನೀನೇ ದೊಡ್ಡ ಶತ್ರು . ನಿನಗೆ ನೀನೇ  ದೊಡ್ಡ ಮಿತ್ರ ಹಾಗಾದರೆ ನೀನು ಆತ್ಮವನ್ನು ದೃಢವಾಗಿ ಹಿಡಿದುಕೊ ಎದ್ದು  ನಿಲ್ಲು ಅಂಜಬೇಕಾಗಿಲ್ಲ. ನೀನು ಜಗತ್ತನ್ನೇ ಅಲ್ಲಾಡಿಸಲು  ಸಮರ್ಥನಾಗುವೆ. ಶಕ್ತಿಯ ರಹಸ್ಯ ವ್ಯಕ್ತಿ ಮತ್ತು ಆತನ ಜೀವನವೇ ಹೊರತು ಮತ್ತಾವುದು ಅಲ್ಲವೆಂಬುವುದನ್ನು ನೆನಪಿನಲ್ಲಿಡಿ’.          ಸ್ವಾಮಿ ವಿವೇಕಾನಂದರ ವಿವೇಕಭರಿತವಾದ ಈ ವಾಣಿಯನ್ನು  ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತ ಕೇವಲ ದೈಹಿಕ ಆರೋಗ್ಯದ ಕಡೆಗೆ ಗಮನ ಕೊಡದೆ ಮಾನಸಿಕ ಆರೋಗ್ಯದ ಬಗೆಗೆ ಗಮನವಹಿಸಿ ಆಗಾಗ ತಜ್ಞ ವೈದ್ಯರನ್ನು ಭೇಟಿಯಾಗಿ ನಮ್ಮ ವರ್ತನೆಯಲ್ಲಾದ ಬದಲಾವಣೆಯ ಕುರಿತು ಚರ್ಚಿಸಿ, ಅವರ ಸಲಹೆಗಳನ್ನು ಪಾಲಿಸಿದರೆ, ಭಯ ಮಂಗಮಾಯವಾಗುವದು ಖಚಿತ. ***************

Back To Top