ಅಪಾಯ ಎದುರಿಸುವ ಬಗೆ ಹೀಗೆ .

ನಾನೀಗ ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ಕಥೆ ರಷ್ಯಾದ ಖ್ಯಾತ ಸಾಹಿತಿ ಲಿಯೋ ಟಾಲ್ ಸ್ಟಾಯ್ ಬರೆದದ್ದು. ಒಮ್ಮೆ ಇಬ್ಬರು ಗೆಳೆಯರು ಕಾಡಿನಲ್ಲಿ ಹೋಗುತ್ತಿದ್ದರು. ಕಾಡು ಪ್ರಾಣಿಗಳು ಪೊದೆಗಳ ಹಿಂದೆ ಅಡಗಿರಬಹುದೆಂಬ  ಭಯದಿಂದ ಇಬ್ಬರೂ ಕೈ ಕೈ ಹಿಡಿದು ಸಾಗುತ್ತಿದ್ದರು.  ಕಾಡಿನ ದಾರಿಯನು ಗೆಲುವಾಗಿ ಸಾಗಲು ಅತಿ ಪ್ರೀತಿಯಿಂದ ಅದು ಇದು ಹರಟುತ್ತ ಸಾಗುತ್ತಿದ್ದರು. ಒಮ್ಮೆಲೇ ಕರಡಿ ಕಾಣಿಸಿಕೊಂಡಿತು.ಕರಡಿ ಇನ್ನೂ ದೂರದಲ್ಲಿತ್ತು. ಹಾಗಾಗಿ ಹೇಗಾದರೂ ಅದರಿಂದ ಬಚಾವಾಗಬೇಕೆಂದು ಉಪಾಯ ಮಾಡಲು ಅವರಿಬ್ಬರಿಗೂ ಕೆಲ ಕ್ಷಣಗಳು ಉಳಿದಿದ್ದವು. ಅಷ್ಟರಲ್ಲಿ ಇಬ್ಬರಲ್ಲಿ ಒಬ್ಬ ಸರಸರನೆ ಮರ ಹತ್ತಿ ಮರದ ಕೊಂಬೆಯ ಮೇಲೆ ಕುಳಿತು ಬಿಟ್ಟ. ಆದರೆ ಇನ್ನೊಬ್ಬನಿಗೆ ಮರ ಹತ್ತಲು ಬರದು. ಮತ್ತೊಬ್ಬರು ಸಹಾಯ ಸಿಕ್ಕಿದ್ದರೆ ಹತ್ತಿರುತ್ತಿದ್ದನೇನೋ! ಆದರೆ ಅವನ ಗೆಳೆಯ ಅದಾಗಲೇ ಮರದ ತುದಿಯನ್ನೇರಿ ಬಿಟ್ಟಿದ್ದರಿಂದ ಇವನೀಗ ನೆಲದಲ್ಲಿ ಒಬ್ಬಂಟಿಯಾಗಿದ್ದ. ಕರಡಿ ಇನ್ನೇನು ಹತ್ತಿರವೇ ಬಂತು. ಏನು ಮಾಡಬೇಕೆಂದು ಯೋಚಿಸುತ್ತಿರುವಾಗಲೇ ಒಂದು ಉಪಾಯ ಹೊಳೆದಂತಾಯ್ತು.  ಕರಡಿ ಸಮೀಪಕ್ಕೆ ಬಂತು ಎನ್ನುವಷ್ಟರಲ್ಲಿ ನೆಲದ ಮೇಲೆ ಸತ್ತಂತೆ ಮಲಗಿ ಬಿಟ್ಟ. ಕರಡಿ ತೀರಾ ಹತ್ತಿರಕ್ಕೆ ಬಂತು. ಯುವಕನನ್ನು ಮೂಸಿತು. ಸಾವು ಎದೆಯ ಮೇಲೆ ನಿಂತಿರುವಾಗ ಯಾರಿಗಾದರೂ ಉಸಿರು ಬಂದೀತೆ? ಯುವಕನಿಗೆ ಭಯದಲ್ಲಿ ಉಸಿರೇ ನಿಂತು ಹೋದಂತಾಗಿತ್ತು! ಕರಡಿ ಆತನು ಸತ್ತಿರುವನೆಂದು ತಿಳಿದು ತನ್ನ ಪಾಡಿಗೆ ತಾನು ಮುಂದೆ ಸಾಗಿತು.

ಕರಡಿ ಕಣ್ಮರೆಯಾಗುವವರೆಗೂ ಮರದ ಮೇಲೆ ಕುಳಿತಿದ್ದ ಯುವಕ ಇನ್ನೇನು ಅಪಾಯವಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ಕೆಳಗಿಳಿದ. ಸತ್ತಂತೆ ನಟಿಸಿ ಮಲಗಿದ್ದವನೂ ಅಬ್ಬಾ! ಅಂತೂ ಇಂತೂ ಬಚಾವಾದೆ ಎಂದು ಎದ್ದು ಕೂತ. ಮರದಿಂದ ಇಳಿದ ಯುವಕ ‘ಏನು ಹೇಳಿತು ಗೆಳೆಯ, ಕರಡಿ ನಿನ್ನ ಕಿವಿಯಲ್ಲಿ? ಎಂದು ನಗುತ್ತ ಕೇಳಿದ. ಸತ್ತಂತೆ ಮಲಗಿದ್ದ ಯುವಕ ಉತ್ತರಿಸಿದ ‘ಅಪಾಯದ ಸಮಯದಲ್ಲಿ ಕೈ ಬಿಟ್ಟು ಹೋಗುವವರನ್ನು ಎಂದೂ ನಂಬಬೇಡ ಎಂದು ಹೇಳಿತು.

ಅಪಾಯವೆಂದರೆ. . . . .?     

ದೈನಂದಿನ ಬದುಕಿಗೆ ಅಕಸ್ಮಾತ್ತಾಗಿ ಭೇಟಿ ಕೊಡುವಂಥ ಆಗಂತುಕನೇ ಅಪಾಯ. ಆಂತರಿಕ ಅಗ್ನಿಯನ್ನು ಉದ್ದೀಪನಗೊಳಿಸುತ್ತದೆ. ನಮ್ಮೊಳಗಿನ ಅತ್ಯುನ್ನತವಾದುದನ್ನು ಅತ್ಯುತ್ತಮವಾದುದನ್ನು ಹೊರಗೆಳೆಯಲು ಪ್ರೇರೇಪಿಸುತ್ತದೆ. ಬಹುತೇಕರು ಅಪಾಯವನ್ನು ಅಪಾಯಕಾರಿ ಎಂದು ದೂರ ಸರಿಯುತ್ತಾರೆ ಹೊರತು ಅದು ಹೊತ್ತು ತಂದ ಅವಕಾಶಗಳ ಮೂಟೆಗಳನ್ನು ತೆರೆದು ನೋಡುವುದೇ ಇಲ್ಲ. ಸಣ್ಣ ಪುಟ್ಟ ಅಪಾಯಗಳಿಗೂ ಹೆದರಿ ಜೀವನ ಪ್ರೀತಿ ಕಳೆದುಕೊಳ್ಳುವವರು ಅಪಾಯಗಳ ಮಡಿಲಲ್ಲಿ ಬಿದ್ದು ಗಗನಚುಂಬಿ ಹಿಮ ಪರ‍್ವತಗಳ ನೆತ್ತಿಯ ಮೇಲೆ ನಿಂತವರನ್ನು, ಉದ್ದುದ್ದ ಸಾಗರಗಳನ್ನು ಈಸಿ  ಗೆದ್ದವರನ್ನು ಹಗ್ಗದ ಮೇಲೆ ನಡೆಯುವವರನ್ನು ನೋಡಿ ಕಲಿಯಬೇಕು. ಅಪಾಯಗಳು ಮನುಷ್ಯನಿಗೆ ಹೇಳಿ ಕೇಳಿ ಬರುವುದಿಲ್ಲ. ಅಪಾಯದ ಸ್ಥಿತಿಯಲ್ಲಿ ಯಾರಾದರೂ ನಮ್ಮನ್ನು ಬಚಾವು ಮಾಡುತ್ತಾರೆಂದು ನಂಬಿಕೊಂಡು ಕುಳಿತುಕೊಳ್ಳುವುದು ತರವಲ್ಲ. ಸಮಯ ನಿರ‍್ವಹಣೆಯಂತೆ ಅಪಾಯ ನಿರ‍್ವಹಣೆಯೂ ಒಂದು ಕಲಿಯಬೇಕಾದ ಕಲೆ.

ಅಪಾಯ ಎದುರಿಸುವ ಬಗೆ ಹೇಗೆ ಎನ್ನುವುದನ್ನು ನೋಡೋಣ ಬನ್ನಿ.

ಮೇಲಿನ ಕಥೆಯ ಸಂದೇಶವನ್ನು ಮಾನವರೆಲ್ಲ ಬಯಸುವುದು ಸಹಜ. ಆಪತ್ತಿನಲ್ಲಿ ಉದ್ದೇಶಪೂರ‍್ವಕವಾಗಿ ನಮ್ಮನ್ನು ಕೈ ಬಿಟ್ಟು ಹೋಗುವವರನ್ನು ನಾವು ನಂಬಲೇ ಬಾರದು. ಆದರೆ ಆ ಸಮಯದಲ್ಲಿ ಏನು ಮಾಡಬೇಕೆಂದು ಹೊಳೆಯದೇ ಹಾಗೆ ನಡೆದುಕೊಂಡಿದ್ದರೆ ಅಂಥವರನ್ನು ಕ್ಷಮಿಸುವುದು ಒಳಿತು. ‘ಕ್ಷಮಾ ಗುಣದ ಬಗ್ಗೆ ಖಂಡಿತ ಕಡಿಮೆ ಎಣಿಕೆ ಬೇಡ.’ ಯಾವುದೇ ಕೆಟ್ಟ ಕಾರ‍್ಯ ಶಿಕ್ಷೆಯಿಂದ ತಪ್ಪಿಸಿಕೊಳ್ಳದು. ಎಂಬುದನ್ನು ನೆನಪಿನಲ್ಲಿಡಬೇಕು. ಗೊಂದಲದ ಗೂಡಾದ ಮನಸ್ಸಿಗೆ ಎಲ್ಲವೂ ವಿಪರೀತಾರ‍್ಥಗಳೇ! ಸಮಯ ಸನ್ನಿವೇಶವನ್ನು ಅರ‍್ಥೈಸಿಕೊಂಡು ಆಪತ್ಕಾಲದಲ್ಲಿ ನಮ್ಮೊಂದಿಗಿದ್ದವರು ನಡೆದುಕೊಳ್ಳುವ ರೀತಿಯನ್ನು ಪರಿಶೀಲಿಸಿ ದೂರ ಸರಿಯುವುದೋ ಇಲ್ಲ ಸಂಬಂಧವನ್ನು ಮುಂದುವರೆಸಿಕೊಂಡು ಹೋಗಬೇಕೋ ಎನ್ನುವುದನ್ನು ನಿರ‍್ಧರಿಸುವುದು ಉಚಿತ ಮನಸ್ಥಿತಿ. 

ಹಾಗೆ ನೋಡಿದರೆ ಅಪಾಯದ ಸ್ಥಿತಿಯಲ್ಲಿ ನಮ್ಮ ಮನಸ್ಥಿತಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ನಮಗೆ ಘಟಿಸುವ ಅನೇಕ ವಿಷಯಗಳು ಮತ್ತು ಅವು ನಮಗೆ ಎಂಥ ಫಲಗಳನ್ನು ನೀಡುತ್ತವೆ ಎಂಬುದು ನಮ್ಮ ಮನಸ್ಥಿತಿಯ ಮೇಲೆ ಆಧಾರ ಪಡುತ್ತದೆ. ಭಯಗೊಂಡರೆ ಏನು ಮಾಡಬೇಕೆಂದು ತಲೆಗೆ ತೋಚುವುದೇ ಇಲ್ಲ. ಹೀಗಾಗಿ ‘ಧೈರ‍್ಯದಿಂದ ಇದ್ದರೆ  ಅರ‍್ಧ ಅಪಾಯವನ್ನು ಗೆದ್ದಂತೆ.’ಆಶಾವಾದಿ ಭಾವ ಶಕ್ತಿಯನ್ನು ತುಂಬುತ್ತದೆ. ಪ್ರಯತ್ನವೆನ್ನುವುದು ಎಲ್ಲದಕ್ಕೂ ಮೂಲ ಕೇಂದ್ರ ಬಿಂದು. ಅಪಾಯದಲ್ಲಿ ಪ್ರಯತ್ನ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣವೆನ್ನುವುದು ಕೇವಲ ಪಠ್ಯ ಬೋಧನೆಯಲ್ಲ. ಆಗಾಗ ಎದುರಾಗುವ ಅಪಾಯಗಳನ್ನು ಎದುರಿಸಲು ಸಿದ್ಧರಾಗುವುದನ್ನು ಕಲಿಸುವುದೂ ಆಗಿದೆ. ವಿದ್ಯಾರ‍್ಥಿ ದೆಸೆಯಲ್ಲಿ ಅಪಾಯದ ಅಡಿಪಾಯ ಅಲ್ಲಾಡಿಸುವ ಬಗೆ ತಿಳಿದುಕೊಳ್ಳಬೇಕು.

ಅನುಭವದ ತಿಳುವಳಿಕೆ

ನಾವು ಯಾವುದೇ ಕ್ಷೇತ್ರದಲ್ಲಿರಲಿ ಅಪಾಯ ನಿರ‍್ವಹಣೆಯನ್ನು ಕಲಿಯದ ಹೊರತು ಆ ಕ್ಷೇತ್ರದಲ್ಲಿಯ ವ್ಯಕ್ತಿ ಮತ್ತು ವಸ್ತುಗಳ ಮೌಲ್ಯವನ್ನು ನಿಖರವಾಗಿ ಅಳೆಯದ ಹೊರತು ಕ್ಷೇಮಕರ ಎಂದು ಹೇಳಲಾಗದು. ಅಪಾಯದ ಬಗೆಗಿನ ನಮ್ಮ ಹಿಂದಿನ ಅನುಭವಗಳು ಒಳ್ಳೆಯ ನಿರ‍್ಧಾರಗಳಿಗೆ ದಾರಿ ಮಾಡುವುದಾದರೆ ಸರಿಯಾದ ದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ. ‘ನಾವು ಒಂದು ಅನುಭವದ ತಿಳುವಳಿಕೆಯನ್ನು ಬಿಟ್ಟರೆ ಮಿಕ್ಕೆಲ್ಲದ್ದರಿಂದ ಹೊರ ಬರುವ ಜಾಗರೂಕತೆಯನ್ನು ವಹಿಸಬೇಕು. ಅಲ್ಲಿಗೇ ನಿಲ್ಲಿಸಬೇಕು. ಇಲ್ಲದಿದ್ದರೆ ನಾವು ಬಿಸಿ ಒಲೆಯ ಬಾಣಲೆಯ ಮೇಲೆ ಕುಳಿತ ಬೆಕ್ಕಂತಾಗುತ್ತೇವೆ. ಅದು ಮತ್ತೆ ಬಿಸಿ ಒಲೆಯ ಬಾಣಲೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಇದು ಒಳ್ಳೆಯದೇ, ಆದರೆ ಅದು ತಂಪಾದ ಒಲೆಯ ಮೇಲೂ ಕುಳಿತುಕೊಳ್ಳುವುದಿಲ್ಲ ಎಂದಿದ್ದಾನೆ ಮಾರ‍್ಕ್ ಟ್ವೇನ್.

ಧನಾತ್ಮಕ ಆಲೋಚನೆ

ಅಪಾಯದ ಸ್ಥಿತಿಯಲ್ಲಿ ಕೈ ಬಿಟ್ಟು ಹೋಗುವವರನ್ನು ಕುರಿತು ನಕಾರಾತ್ಮಕವಾಗಿ ಯೋಚಿಸತೊಡಗಿದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಅವರ ಉಳಿದೆಲ್ಲ ಉತ್ತಮ ಗುಣಗಳು ಗೌಣವೆನಿಸುತ್ತವೆ. ಅವರಿಂದ ದೂರವಾಗಬೇಕೆಂಬ ಭಾವನೆಯೂ ಬಲವಾಗುತ್ತದೆ.ಕೈ ಬಿಟ್ಟವರು ಸ್ವಯಂ ರಕ್ಷಣೆ ಮಾಡಲು ಕಲಿಸಿದರು ಎಂದುಕೊಂಡರೆ ಜೀವನಕ್ಕೊಂದು ಹೊಸ ಪಾಠ ಸಿಕ್ಕಂತಾಗುತ್ತದಲ್ಲವೇ? ಇಂಥವರು ನಮಗೆ ಭಿನ್ನ ದಾರಿಯಲ್ಲಿ ನಡೆಯುವುದನ್ನು ಕಲಿಸುತ್ತಾರೆ ಎಂದುಕೊಳ್ಳಬಹುದಲ್ಲವೇ? ಈ ಆಲೋಚನೆ ರೀತಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿದೆ ಎನಿಸುತ್ತದೆ ಅಲ್ಲವೇ? ಈ ಅಂಶ ಅವರು ಜೀವ ಪರರಾಗಿಲ್ಲವೆನ್ನುವುದಕ್ಕಿಂತ ನಾವೆಷ್ಟು ಸಂಬಂಧ ಪರತೆಯನ್ನು ಹೊಂದಿದ್ದೇವೆ ಎಂಬುದನ್ನು ನಮಗೆ ಮನಗಾಣಿಸುತ್ತದೆ. ಅಷ್ಟಕ್ಕೂ ಇಂಥವರು ನಮಗಾಗಿ ಅಪಾಯವನ್ನು ತಂದೊಡ್ಡುವುದಿಲ್ಲ ಎಂಬುದು ದೊಡ್ಡ ನಿರುಮ್ಮಳ ವಿಷಯ. ಅಪಾಯವನ್ನು ಎದುರಿಸುವ ಸಂಧರ‍್ಭದಲ್ಲಿ ಹೇಗೆ ವರ‍್ತಿಸುವುದು ಗೊತ್ತಿಲ್ಲ ಅಷ್ಟೇ.ಆಪತ್ತು ನಿರ‍್ವಹಣೆಯಲ್ಲಿರುವ ಕೊರತೆಗಾಗಿ ಸಂಬಂಧವನ್ನು ಕಳೆದುಕೊಳ್ಳುವುದು ಮೂರ‍್ಖತನ. ಆದ್ದರಿಂದ ಧನಾತ್ಮಕವಾಗಿ ಆಲೋಚಿಸಬೇಕು.

ವಿವೇಚನೆ

ಅಪಾಯಗಳಿಂದ ಸಾಕಷ್ಟು ಕಲಿಯುತ್ತೇವೆ. ಅವು ಜೀವನದ ಪಾಠಗಳೇ ಸರಿ.ಅಪಾಯಗಳು ಆತ್ಮಶೋಧನೆಗೆ ವಿಶ್ಲೇಷಣೆಗೆ ಹಚ್ಚುತ್ತವೆ.ಅಪಾಯಗಳು ಯಾವಾಗಲೋ ಬರುತ್ತವೆ ಆಗ ಏನಾದರೊಂದು ಮಾಡಿದರಾಯಿತು ಎಂಬ ನಿರ‍್ಲಕ್ಷ್ಯವು ಸಲ್ಲದು. ಬದುಕು ಆತ್ಮಶೋಧನೆ, ವೈಯಕ್ತಿಕ ಬೆಳವಣಿಗೆ ಮತ್ತು ಜೀವನ ಪರ‍್ಯಂತದ ಕಲಿಕೆಯ ಒಂದು ಪಥವಾಗಿದೆ. ಅಪಾಯಗಳು ಜೀವನದ ಅವಿಭಾಜ್ಯ ಅಂಗಗಳು ಎಂಬ ವಿಷಯ ತಿಳಿಯುವುದು ಸಮಾಧಾನಕರ ಸಂಗತಿ. ಹಾಗಾದಾಗ ಅಪಾಯಗಳನ್ನು ವಿವೇಚನೆಯ ರೀತಿಯಿಂದ ನೋಡುವುದನ್ನು ಕಲಿಯಬಹುದು. ಅನೇಕರು ಅಪಾಯದಲ್ಲಿ ಗೆಲುವಿನ ಹಂತ ಮುಟ್ಟುವ ಸಂಧರ‍್ಭದಲ್ಲಿಯೇ ಕೈ ಚೆಲ್ಲಿ ಬಿಡುತ್ತಾರೆ. ಇದರಿಂದ ಆಂತರಿಕ ಬಲ ಅಪಾರ ದೃಢಶಕ್ತಿಗೆ ನಷ್ಟವುಂಟಾಗುತ್ತದೆ.

 ಭಿನ್ನಧಾರೆ

ಹಾಗೆ ನೋಡಿದರೆ ಆ ದೇವರು ಪ್ರತಿ ಜೀವಿಗೂ ಅಪಾಯ ನಿರ‍್ವಹಿಸುವ ಕಲೆಯನ್ನು ದಯಪಾಲಿಸಿದ್ದಾನೆ. ಅತಿ ಚಿಕ್ಕದೆನಿಸುವ ಇರುವೆಗೆ ನೋವಾಗಿಸಿದರೆ ನಮ್ಮನ್ನು ಕಚ್ಚುತ್ತದೆ. ಊಸರವಳ್ಳಿ ತನ್ನ ಬೇಟೆಯಾಡುವ ಪ್ರಾಣಿಗಳಿಂದ ಬಚಾವಾಗಲು ಬಣ್ಣ ಬದಲಿಸುತ್ತದೆ. ಹೀಗೆ ಎಲ್ಲ ಜೀವಿಗಳಿಗೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ುರ‍್ತು ಅನಿವಾರ‍್ಯತೆ ಇರುತ್ತದೆ. ಅಪಾಯದಲ್ಲಿರುವಾಗ ಇತರರು ನಮ್ಮನ್ನು ಉಳಿಸುವರೆಂದು ತಿಳಿದರೆ ನಾವು ಅವರ ತೆಕ್ಕೆಗೆ ಬೀಳುತ್ತೇವೆ.ಬೇರೆ ಪ್ರಯತ್ನಗಳತ್ತ ಗಮನ ಹರಿಸುವುದು ಕಡಿಮೆ. ಭಿನ್ನಧಾರೆಯತ್ತ ಹೊರಳುವುದು ಜೀವನ ಪ್ರೀತಿಗೆ ತೆರುವ ಬೆಲೆ ಎನ್ನಬಹುದು. ಇದೆಲ್ಲ ಕೇವಲ ಗೆಳೆತನಕ್ಕೆ ಮಾತ್ರ ಸೀಮಿತವಾದದ್ದು ಎನ್ನುವಂತಿಲ್ಲ. ಆಪತ್ತಿನಲ್ಲಿ ಸಹಕರಿಸಲಿಲ್ಲವೆಂದು ಆಪ್ತಬಾಂಧವರಲ್ಲಿ ಮುನಿಸಿಕೊಳ್ಳುತ್ತೇವೆ. ನಿಜವಾದ ಅವರ ಸ್ಥಿತಿಯನ್ನು ಅರಿಯದೇ ನಮ್ಮ ಮೂಗಿಗೆ ನಾವು ಯೊಚಿಸಿ ಆ ಸಂಬಂಧವನ್ನು ಕಾಟು ಒಗೆಯುತ್ತೇವೆ. ಆತ್ಮೀಯರಲ್ಲಿ ಹಿತೈಷಿಗಳಲ್ಲೂ ಇಂಥ ವಿಷಯಗಳು ಮುನ್ನೆಲೆಗೆ ಬರುವುದುಂಟು. ಅನಗತ್ಯ ಪ್ರಾಮುಖ್ಯತೆಯನ್ನು ಪಡೆಯುವುದುಂಟು. ಆದರೆ ಕಾಲ ಒಂದು ದಿನ ಎಲ್ಲವನ್ನೂ ಹಿಂದಕ್ಕೆ ತಳ್ಳುತ್ತದೆ. ಆಗ ಅಪಾಯ ನಿರ‍್ವಹಣೆ ಗೊತ್ತಿಲ್ಲದವರು ಪ್ರಪಾತಕ್ಕೆ ಬೀಳುತ್ತಾರೆ.

 ಕೊನೆ ಹನಿ

ಗೆಳೆಯರು ಹಿತೈಷಿಗಳು ಅಪಾಯದ ಸ್ಥಿತಿಯಲ್ಲಿ ಕೈ ಹಿಡಿಯಬೇಕೆಂದು ಬಯಸುವುದು ಸಹಜಗುಣ. ಆದರೆ ಒಂದೊಂದು ಸಂಧರ‍್ಭದಲ್ಲಿ ನಾವು ಬಯಸಿದಂತೆ ನಮಗೆ ಇರಲಾಗುತ್ತದೆಯೇ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗುತ್ತದೆ. ಮಧುರ ಬಾಂಧವ್ಯಗಳ ತಾಳವನ್ನು ತಪ್ಪಿಸುವ ಘಟನೆಗಳನ್ನು ನಿಂದಿಸುವ ರೀತಿಯಲ್ಲಿ ತೆಗೆದುಕೊಳ್ಳದೇ, ನಮ್ಮ ಶಕ್ತಿಯನ್ನು ಗುರುತಿಸಿಕೊಳ್ಳಲು ಸಹಕರಿಸಿದವರೆಂದು ತಿಳಿದು ವಂದಿಸುವ ರೀತಿಯಲ್ಲಿ ನಡೆದುಕೊಳ್ಳುವುದು ಸೂಕ್ತ. ಇದೆಲ್ಲ ನಮ್ಮ ದೃಷ್ಟಿ ಸಂಬಂಧಿಯಾದುದು. ಮನುಷ್ಯನ ಅನೇಕಾನೇಕ ಅಪೇಕ್ಷಿತ ಗುಣಗಳಲ್ಲಿ ಅಪಾಯ ಕಾಲದಲ್ಲಿ ಆಗಬೇಕು ಎನ್ನುವುದೂ ಒಂದು.ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬೀಜವೊಂದು ಸಂಪೂರ‍್ಣವಾಗಿ ಯಾವಾಗ ತನ್ನನ್ನು ಮಣ್ಣಲ್ಲಿ ಕಳೆದುಕೊಳ್ಳುತ್ತದೆಯೋ ಆಗ ಮಾತ್ರ ಅದು ಚಿಗುರೊಡೆದು ಮರವಾಗಿ ಬೆಳೆಯುವುದು. ಅಂತೆಯೇ ನಾವು ಮಾನವೀಯ ತುಡಿತಗಳಿಗೆ ಬೆಲೆ ಕೊಡಬೇಕು.ಗೊತ್ತಿಲ್ಲದೇ ಮಾಡಿದ ತಪ್ಪುಗಳನ್ನು ಕ್ಷಮಿಸಬೇಕು. ವಿಸ್ತಾರ ಚಿಂತನೆಗೆ ಹೊಸ ರೂಪ ಹೊಸ ಭಾಷ್ಯ ಬರೆಯಬೇಕು. ಹೊಸ ಅರ‍್ಥ ಬಿಟ್ಟು ಕೊಡುವ ಜೀವನದ ಹಲವಾರು ಘಟನೆಗಳ ಮೂಲಕ ಮನಸ್ಸಿಗೆ ಕನ್ನಡಿ ಹಿಡಿಯುವ ಕೆಲಸ ನಡೆದರೆ ಅಪಾಯದ ಮಡಿಲನ್ನು ಬಿಟ್ಟು ಸುಂದರ ಜೀವನದ ತೆಕ್ಕೆಯಲ್ಲಿ ನಾವಿರಲು ಸಾಧ್ಯ.

**********************

ಲೇಖಕರ ಬಗ್ಗೆ ಎರಡು ಮಾತು

ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

3 thoughts on “

  1. ಬರಹ ಬಹಳ ಚೆನ್ನಾಗಿದೆ. ತುಂಬಾ ಸರಳವಾಗಿ ಆದರೆ ಮೌಲಿಕವಾಗಿ ವಿಷಯವನ್ನು ನಿರೂಪಿಸಿದ್ದೀರಿ.

  2. ಪ್ರತಿಕ್ರಿಯಿಸಿದ ಮನಸ್ಸಿಗೆ
    ಧನ್ಯವಾದಗಳು

  3. ಜಯಶ್ರೀ ಅವರೇ,
    ಲಿಯೋ ಟಾಲ್ಸ್ಟಾಯ್ ಅವರ ಕಥೆಯ ಎಳೆ ಹಿಡಿದು, ಅಪಾಯವನ್ನು ಎದುರಿಸಲು ಬತ್ತಳಿಕೆಯಲ್ಲಿರ ಬೇಕಾದ ವಿವಿಧ ಶಸ್ತ್ರ ಶಾಸ್ತ್ರಗಳನ್ನು ನೀವು ಪರಿಚಯಿಸಿದ ಪರಿ,ಅನನ್ಯ.

Leave a Reply

Back To Top