ನವಿರು ಹಾಸ್ಯದೊಳಗೆ ಚುಚ್ಚುವ ಮೊನಚಿದೆ

ಹಿಂದೊಮ್ಮೆ ಪ್ರಮಿಳಾ ರಾಜ್ಯವೊಂದಿತ್ತಂತೆ. ಅಲ್ಲಿ ಮಹಿಳೆಯರೇ ರಾಣಿಯರು, ಅಧಿಕಾರದಲ್ಲಿರುವವರು ಎಲ್ಲಾ. ಅಲ್ಲಿ ಗಂಡಸರಿಗೆ ಪ್ರವೇಶವೇ ಇರಲಿಲ್ಲವಂತೆ. ಸಂತಾನ ಬೇಕಾದ ಸ್ತ್ರೀಯರೂ ರಾಜ್ಯದ ಹೊರಗೆ ಹೋಗಿ ಪಡೆಯಬೇಕಾಗಿತ್ತಂತೆ. ಒಂದುವೇಳೆ ಗಂಡು ಸಂತಾನವನ್ನು ಪಡೆದರೆ ಆ ಮಗುವನ್ನು ಅಲ್ಲಿಯೇ ಬಿಟ್ಟು ಬಿಡುವುದು ಅನಿವಾರ್ಯವಾಗಿತ್ತಂತೆ. ಆದರೆ ಹೆಣ್ಣು ಮಗುವಾಗಿದ್ದರೆ ಮಾತ್ರ ತಮ್ಮ ರಾಜ್ಯಕ್ಕೆ ಕರೆದೊಯ್ಯಬಹುದಿತ್ತಂತೆ. ಅಂತಹುದ್ದೊಂದು ಪ್ರಮಿಳಾ ರಾಜ್ಯವಿದ್ದರೆ  ನಾನೂ ಅಲ್ಲಿಯೇ ಹೋಗಿ ಇರಬಹುದಾಗಿತ್ತು ಎಂದು ಎಷ್ಟೋ ಸಲ ಅಂದುಕೊಳ್ಳುತ್ತಿರುತ್ತೇನೆ. ಎಷ್ಟೊಂದು ಕೆಲಸಗಳು. ಮುಗಿಯದ, ಮುಗಿಯಲೊಲ್ಲದ ಕೆಲಸಗಳು ದಿನವಿಡೀ ಆದಾಗಲೆಲ್ಲ ಮನೆಯಲ್ಲಿರುವ ಹಿರಿಯ, ಕಿರಿಯ ಮತ್ತು ಅತ್ತ ಹಿರಿಯನೂ ಅಲ್ಲದ, ಇತ್ತ ಕಿರಿಯನೂ ಅಲ್ಲದ ಮೂವರು ಗಂಡಸರಿಗೆ ಒಳಗೊಳಗೇ ಬೈಯ್ದುಕೊಳ್ಳುತ್ತೇನೆ. ಮಹಿಳಾ ಸಾಮ್ರಾಜ್ಯವಾಗಬೇಕಿತ್ತು. ಅಧಿಕಾರವೆಲ್ಲ ನಮ್ಮದೇ ಕೈಯ್ಯಲ್ಲಿದ್ದರೆ ಇವರನ್ನೆಲ್ಲ ಆಟ ಆಡಿಸಬಹುದಿತ್ತು ಎಂದುಕೊಳ್ಳುತ್ತ, ಏನೇನು ಮಾಡಬಹುದಿತ್ತು ನಾನು ಎಂದೆಲ್ಲ ಊಹಿಸಿಕೊಂಡು ಮನದೊಳಗೇ ನಸುನಗುತ್ತಿರುತ್ತೇನೆ ಆಗಾಗ. ನಾನು ಹಾಗೆ ನಗುವುದನ್ನು ಕಂಡಾಗಲೆಲ್ಲ ‘ಅಮ್ಮ ಹಗಲುಗನಸು ಕಾಣ್ತಿದ್ದಾಳೆ’ ಎಂದು ಗುಟ್ಟಾಗಿ ಅಪ್ಪನ ಬಳಿ ಹೇಳಿಕೊಂಡು ಮಕ್ಕಳು ನಗುತ್ತಿರುತ್ತಾರೆ. ಅಂತಹುದ್ದೇ ಒಂದು ಕನಸಿನ ಕಥೆ ಇಲ್ಲಿದೆ. ಸಂಕಲನದ ಮೊದಲ ಕಥೆ, ಶೀರ್ಷಿಕಾ ಕಥೆಯೂ ಆದ ಎಪ್ರಿಲ್ ಫೂಲ್ ಇದು. ಇಲ್ಲಿ ಗಂಡ ರಾಮು ಮನೆಗೆಲಸವನ್ನೆಲ್ಲ ಮಾಡುತ್ತಾನೆ. ಮಗ ದೀಪುವನ್ನು ಎಷ್ಟು ಓದಿದರೂ ಮನೆಗೆಲಸ ಮಾಡೋದು ತಾನೆ ಎಂದು ಮುಂದೆ ಓದಿಸದೇ ಮನೆಗೆಲಸ ಕಲಿಸಿದ್ದರು. ಮಗಳು ಭೂಮಿ ಮತ್ತು ಹೆಂಡತಿ ಮೈತ್ರಿ ರಾವ್ ಮಾತ್ರ ಹೊರಗಡೆ ಕೆಲಸಕ್ಕೆ ಹೋಗುವವರು. ಹೆಣ್ಣಿನ ಮೇಲೆ ಆಗುತ್ತಿರುವ ದೌರ್ಜನ್ಯ ಈಗ ಗಂಡಿನ ಮೇಲೆ ಆಗುತ್ತಿದೆ. ಗಂಡು ಹೆಣ್ಣಿನ ಅನುಗ್ರಹಕ್ಕಾಗಿ ಅಳುತ್ತಾನೆ. ತನ್ನನ್ನು ಬಿಟ್ಟು ಹೋದರೆ ಎಂದು ಹಳಹಳಿಸುತ್ತಾನೆ. ಹೆಣ್ಣು ಸರ್ವ ಸ್ವತಂತ್ರಳು. ಹೊರಗಡೆಯ ಜವಾಬ್ಧಾರಿ ಹೆಣ್ಣಿನದ್ದು. ಮಗುವನ್ನು ಹೆತ್ತುಕೊಟ್ಟರೆ ಆಯಿತು. ಪಾಲನೆ ಪೋಷಣೆ ಎಲ್ಲವೂ ಗಂಡಿನದ್ದೇ. ಆಹಾ ಎಂದು ಖುಷಿಯಲ್ಲಿ ಓದುತ್ತಿರುವಾಗಲೇ ಇದು ಕನಸು ಎಂದು ಕಥೆಗಾರ ಹೇಳಿಬಿಡುವುದರೊಂದಿಗೆ ನನ್ನ ಊಹಾಲೋಕವೂ ನಿಂತುಹೋಯಿತು. ಆದರೂ ಕಥೆಯಲ್ಲಿ ಬರುವ ಮೊನಚು ವ್ಯಂಗ್ಯ ಇಂದಿಗೂ ಹೆಣ್ಣಿನ ವೇದನೆಯನ್ನು ಕನ್ನಡಿಯಲ್ಲಿಟ್ಟು ತೋರಿಸುತ್ತದೆ.


ಹನಮಂತ ಹಾಲಿಗೇರಿ ಒಬ್ಬ ಸಶಕ್ತ ಕಥೆಗಾರ. ನಿಸೂರಾಗಿ ಕಥೆ ಹೇಳುವ ಕಲೆ ಸಿದ್ಧಿಸಿದೆ. ಅದನ್ನು ಮನಮುಟ್ಟುವಂತೆ ಅಕ್ಷರಕ್ಕಿಳಿಸುವ ಶೈಲಿಯೂ ಕರಗತವಾಗಿದೆ. ಕಾರವಾರದಲ್ಲಿ ಪತ್ರಕರ್ತನಾಗಿದ್ದಾಗ ಕೆಲವು ವರ್ಷಗಳ ಕಾಲ ಹತ್ತಿರದಿಂದ ಗಮನಿಸಿದ್ದೇನೆ. ನೊಂದವರ ಪರ ನಿಲ್ಲುವ, ಶೋಷಣೆಗೊಳಗಾದವರ ಸಹಾಯಕ್ಕೆ ಧಾವಿಸುವ ಅವರ ಗುಣವನ್ನು ಕಣ್ಣಾರೆ ಕಂಡಿದ್ದೇನೆ. ಅಂತಹ ಗುಣದಿಂದಾಗಿಯೇ ಬಹುಪಾರಮ್ಯದ ಮಾಧ್ಯಮ ಲೋಕದಲ್ಲಿ  ಏಕಾಂಗಿಯಾಗಬೇಕಾದುದನ್ನೂ ಗಮನಿಸಿದ್ದೇನೆ. ಆದರೂ ತಳ ಸಮುದಾಯದ ಪರ ಅವರ ಕಾಳಜಿ ಯಾವತ್ತೂ ಕುಂದಿಲ್ಲ. ಹೀಗಾಗಿಯೇ ಇಲ್ಲಿನ ಕಥೆಗಳಲ್ಲಿ  ಶೋಷಣೆಗೊಳಗಾದವರ ನೋವುಗಳನ್ನು ನೇರಾನೇರ ತೆರೆದಿಡುವ ಗುಣವನ್ನು ಕಾಣಬಹುದು. ಅಲೈ ದೇವ್ರ್ರು, ಸುಡುಗಾಡು, ಪಿಡುಗು, ಸ್ವರ್ಗ ಸಾಯುತಿದೆ ಹೀಗೆ ಸಾಲು ಸಾಲಾಗಿ ಕಥೆಗಳು ನಮ್ಮ ಸಾಮಾಜಿಕ ಸ್ಥರಗಳ ಪರಿಚಯ ಮಾಡಿಕೊಡುತ್ತವೆ. ನಮ್ಮದೇ ಧರ್ಮಾಂಧತೆಯನ್ನು ಕಣ್ಣೆದುರು ಬಿಚ್ಚಿಡುತ್ತವೆ.


   ನಾನು ಚಿಕ್ಕವಳಿರುವಾಗ  ಮನೆಯ ಸಮೀಪ ಒಂದು ಮುಸ್ಲಿಂ ಮನೆಯಿತ್ತು. ಅವರ ರಂಜಾನ್ ಬಕ್ರೀದ್‌ಗೆ ತಪ್ಪದೇ ಸುತ್ತಮುತ್ತಲಿನ ಮನೆಗಳಿಗೆ ಸುರ್‌ಕುಂಬಾ ಕಳಿಸುತ್ತಿದ್ದರು. ಬಹುತೇಕ ಮನೆಯವರು ಅದನ್ನು ತೆಗೆದುಕೊಂಡೂ ಚೆಲ್ಲಿಬಿಡುತ್ತಿದ್ದುದು ನನಗೀಗಲೂ ನೆನಪಿದೆ. ಆದರೆ ನಮ್ಮ ಮನೆಯಲ್ಲಿ ಅಮ್ಮ ಮಾತ್ರ ಲೋಟಕ್ಕೆ ಹಾಕಿ ಕುಡಿ ಎಂದು ಕುಡಿಸುತ್ತಿದ್ದಳು. ‘ಅವರ ಹಬ್ಬ, ಅವರು ಆಚರಿಸುತ್ತಾರೆ. ಸಿಹಿ ಕೊಡುತ್ತಾರೆ. ನಮ್ಮ ಹಬ್ಬ ಮಾಡಿದಾಗ ನಾವೂ ಪಾಯಸ ಕೊಡುವುದಿಲ್ಲವೇ ಹಾಗೆ’ ಎನ್ನುತ್ತಿದ್ದಳು. ಅಕ್ಕಪಕ್ಕದ ಮನೆಯವರೆಲ್ಲ ಚೆಲ್ಲುವುದನ್ನು ಹೇಳಿದಾಗ ಆಹಾರ ಯಾರೇ ಕೊಟ್ಟರೂ ಅದು ದೇವರಿಗೆ ಸಮಾನ. ಅದಕ್ಕೆ ಅಪಮಾನ ಮಾಡಬಾರದು ಎನ್ನುತ್ತಿದ್ದಳು. ಇತ್ತೀಚೆಗೆ ನಾನು ಈಗಿರುವ ಶಾಲೆಗೆ ಬಂದಾಗ ಎಂಟನೇ ತರಗತಿಗೆ ಬಂದ ಮುಸ್ಲಿಂ ಹುಡುಗ ತಮ್ಮ ಹಬ್ಬಕ್ಕೆ ಮತ್ತದೇ ಸಿರ್‌ಕುಂಬಾ ಹಿಡಿದುಕೊಂಡು ಬಂದಿದ್ದ. ನಾನು ಚಿಕ್ಕವಳಾಗಿದ್ದಾಗಿನ ಖುಷಿಯಲ್ಲಿಯೇ ಅದನ್ನು ಸವಿದಿದ್ದೆ. ಹತ್ತಿರದ ಸದಾಶಿವಗಡ ಕೋಟೆಯ ಬಳಿ ತನ್ನ ಆರಾಧ್ಯ ದೈವ ದುರ್ಗಾದೇವಿ ದೇವಸ್ಥಾನವನ್ನು ಕಟ್ಟಿದ್ದ ಶಿವಾಜಿ ಪಕ್ಕದಲ್ಲೇ ಒಂದು ಮಸೀದಿಯನ್ನೂ ಕಟ್ಟಿಸಿಕೊಟ್ಟಿದ್ದಾನೆ. ಹಿಂದೂ ಧರ್ಮದ ಅತ್ಯುಗ್ರ ನಾಯಕ ಎಂದು ಬಿಂಬಿಸುತ್ತ, ಶಿವಾಜಿಯನ್ನು ಮುಸ್ಲಿಂ ವಿರೋಧಿ ಎನ್ನುವಾಗಲೆಲ್ಲ ನನಗೆ ಈ ಮಸೀದಿ ನೆನಪಾಗುತ್ತಿರುತ್ತದೆ. ದುರ್ಗಾದೇವಿಯ ಜಾತ್ರೆಗೆ ಹಾಗೂ ದರ್ಗಾದ ಉರುಸ್‌ಗೆ ಪರಸ್ಪರ ಸಹಕಾರ ನೀಡುವ ಪದ್ದತಿ ಇಲ್ಲಿದೆ. ಹಿಂದೂ ಮುಸ್ಲಿಮರು ಆಚರಿಸುವ ಮೊಹರಂ ಬಗ್ಗೆ ಕೇಳಿದಾಗಲೆಲ್ಲ ಏನೋ ಖುಷಿ. ನನ್ನ ಪರಿಚಯದ ಒಂದು ಮುಸ್ಲಿಂ ಕುಟುಂಬ ಗಣೇಶ ಚತುರ್ಥಿಗೆ ಗಣೇಶನನ್ನು ಕುಳ್ಳಿರಿಸಿ ಪೂಜೆ ಮಾಡುತ್ತದೆ. ಅದೆಷ್ಟೋ ಕ್ರಿಶ್ಚಿಯನ್ ಕುಟುಂಬದೊಡನೆ ಆತ್ಮೀಯ ಸಂಬಂಧವಿದೆ. ನಮ್ಮೂರಿನ ಬಂಡಿ ಹಬ್ಬದ ಸವಿಗಾಗಿ ನಮ್ಮ ಸಹೋದ್ಯೋಗಿಗಳೂ ಮನೆಗೆ ಬರುವುದಿದೆ. ಕ್ರಿಸ್‌ಮಸ್ ಬಂತೆಂದರೆ ನನ್ನ ಪ್ರೀತಿಯ ವೈನ್‌ಕೇಕ್‌ನ ಸುವಾಸನೆ ನಮ್ಮ ಮನೆಯನ್ನೂ ತುಂಬಿರುತ್ತದೆ. ಧಾರ್ಮಿಕ ಸೌಹಾರ್ಧ ಎನ್ನುವುದು ಬರೀ ಬಾಯಿ ಮಾತಿನಲ್ಲಿ ಹೇಳಿದರೆ ಆಗದು. ಇಲ್ಲಿ ಅಲೈ ಹಬ್ಬದಲ್ಲಿ ಹಾಗೂ ಸುಡುಗಾಡು ಎನ್ನುವ ಕಥೆಗಳಲ್ಲಿ ಕಥೆಗಾರ ಧರ್ಮ ಸಾಮರಸ್ಯದ ಬಗ್ಗೆ ಹೇಳುತ್ತಾ ಹೋಗುತ್ತಾರೆ. ಅಲೈ ಹಬ್ಬದಲ್ಲಿ ಹೆಜ್ಜೆ ಹಾಕುವ ಹುಡುಗರು ಹಿಂದುಗಳು. ಆದರೆ ಅದರ ಆಚರಣೆ ಮಸೀದಿಯಲ್ಲಿ.  ಅದನ್ನು ನಿಲ್ಲಿಸಲೆಂದೇ ಬರುವ ಧರ್ಮದ ಕಟ್ಟಾಳುಗಳ ಮಾತನ್ನು ಮೀರಿಯೂ ಹಬ್ಬ ನಡೆಯುತ್ತದೆ. ಆದರೆ ಸುಡಗಾಡು ಕಥೆಯಲ್ಲಿ ಹಿಂದುಗಳ ರುದ್ರಭೂಮಿಯಲ್ಲಿ ಹೆಣದ ಕೆಲಸ ಮಾಡುತ್ತಿದ್ದವನ್ನು ಹೊರಗೆಸೆದು ಅವನ ಜೀವನವನ್ನೇ ನರಕವನ್ನಾಗಿಸುವ ಕಥೆಯಿದೆ. ಸಿದ್ದಯ್ಯನ ಪವಾಡ ಹಾಗೂ ಸ್ಥಿತಪ್ರಜ್ಞ ಕಥೆಗೂ ನಮ್ಮ ದೇವರೆಂಬ ಬಹುನಾಟಕದ ಕಥಾನಕಗಳನ್ನು ಹೇಳುತ್ತವೆ. ದೇವರೇ ಇಲ್ಲ ಎಂಬ ಸತ್ಯವನ್ನರಿತ ಸಿದ್ದಯ್ಯನನ್ನೇ ದೇವರನ್ನಾಗಿಸುವ ಜನರ ಮೂರ್ಖತನವೋ ಮುಗ್ಧತೆಯೋ ಎಂದು ಹೇಳಲಾಗದ ನಡುವಳಿಕೆಯಿದ್ದರೆ ಸ್ಥಿತಿಪ್ರಜ್ಞದಲ್ಲಿ ತನ್ನ ತಾಯಿ ತೀರಿ ಹೋದರೂ ನಗುನಗುತ್ತ ದೇವರ ಪೂಜೆಗೆ ಅಣಿಯಾಗುವ ಮಠಾಧೀಶನೊಬ್ಬನ ಮನುಷ್ಯತ್ವ ಕೊನೆಗೊಂಡ ವ್ಯಕ್ತಿಯ ಚಿತ್ರಣವಿದೆ. ಫಾರಿನ್ ಹೊಲೆಯ ಕಥೆಯಂತೂ ನಮ್ಮ ಧರ್ಮದ ಲೂಪ್‌ಹೋಲ್‌ಗಳನ್ನು ಅತ್ಯಂತ ತೀಕ್ಷ್ಣವಾಗಿ ನಮ್ಮೆದರು ಬೆತ್ತಲಾಗಿಸುತ್ತದೆ. ಬೀಪ್ ತಿನ್ನಬೇಕೆಂದು ಬಯಸಿದ ವಿದೇಶಿ ಕ್ಯಾಮರೂನ್ ಭಾರತದಲ್ಲಿ ಮಾತ್ರ ಸಿದ್ಧವಾಗುವ ಬೀಫ್‌ನ ಮಸಾಲೆ ರುಚಿಯನ್ನು ತಮ್ಮ ಊರಲ್ಲಿ ವರ್ಣಿಸುವುದನ್ನು ಹೇಳುತ್ತ ನಿರೂಪಕನ ಧರ್ಮವನ್ನು ಕರಾರುವಕ್ಕಾಗಿ ವಿಶ್ಲೇಷಿಸುತ್ತಾನೆ.


   ಪಿಡುಗು ಕಥೆಯಲ್ಲಿ ವೇಶ್ಯೆಯರ ಬದುಕಿನ ಕಥೆಯಿದೆ. ಮಧ್ಯಮ ವರ್ಗದ ಮಹಿಳೆಯರು ಯಾವ್ಯಾವುದೋ ಅನಿವಾರ್ಯ ಕಾರಣಗಳಿಗಾಗಿ ಮೈಮಾರಿಕೊಳ್ಳಬೇಕಾದ ಅನಿವಾರ್ಯತೆಯನ್ನು ಈ ಕಥೆ ಹೇಳುತ್ತದೆ. ಕೆಲವು ವರ್ಷಗಳ ಹಿಂದೆ ಗೀತಾ ನಾಗಭೂಷಣರವರ ಒಂದು ಕಥೆ ಎಂಟನೆ ತರಗತಿಗಿತ್ತು. ಮಗನನ್ನು ಕಾಯಿಲೆಯಿಂದ ಉಳಿಸಿಕೊಳ್ಳಲು ಬೇಕಾದ ಔಷಧ ಹಾಗೂ ಆಸ್ಪತ್ರೆಯ ಖರ್ಚಿಗಾಗಿ ಅನಿವಾರ್ಯವಾಗಿ ತನ್ನ ಮೈಯನ್ನು ಒಪ್ಪಿಸಲು ನಿರ್ಧರಿಸುವ ಕಥೆಯದು. ಆದರೆ ಅಂತಹ ಸಂದಿಗ್ಧತೆಯನ್ನು ವಿವರಿಸಿ ಮಕ್ಕಳಿಗೆ ತಾಯಿಯ ಮಹತ್ವವನ್ನು ತಿಳಿಹೇಳಬೇಕಾದ ಅಗತ್ಯತೆ ಅಲ್ಲಿತ್ತು. ವೇಶ್ಯೆಯರೆಂದರೆ ಕೆಟ್ಟವರಲ್ಲ, ಇಂತಹ ಅನಿವಾರ್ಯ ಕಾರಣಗಳೂ ಇರುತ್ತವೆ ಎಂದು ಆಗತಾನೆ ಹರೆಯದ ಹೊಸ್ತಿಲಲ್ಲಿ ಹೆಜ್ಜೆ ಇಡುತ್ತಿರುವ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸುವ ಗುರುತರ ಜವಾಬ್ಧಾರಿಯೂ ಶಿಕ್ಷಕರ ಮೇಲಿತ್ತು. ಆದರೆ ಆ ಕಥೆ ಹರೆಯದ ಮಕ್ಕಳ ಹಾದಿ ತಪ್ಪುವಂತೆ ಮಾಡುತ್ತದೆ ಎಂಬ ನೆಪ ಹೇಳಿ ಪಾಠವನ್ನು ರದ್ದುಗೊಳಿಸಲಾಯಿತು. ವೇಶ್ಯೆಯರೆಂದರೆ ಒಂದೇ ತಟ್ಟೆಯಲ್ಲಿಟ್ಟು ತೂಗುವ ಸಮಾಜದ ಹೊಸ ಪೀಳಿಗೆಗೆ ಈ ಕಥೆ ಹೇಳಿದರೆ ದೃಷ್ಟಿಕೋನ ಬದಲಾಗಬಹುದಿತ್ತು. ಇಲ್ಲಿಯೂ ಕೂಡ ಮಗಳಿಗಾಗಿ ಮೈಮಾರಿಕೊಳ್ಳುವ ಮಧ್ಯ ವಯಸ್ಕ ಗ್ರಹಿಣಿ ಮತ್ತು ಅವಳಿಗಾಗಿ ತಾನೇ ಗಿರಾಕಿಗಳನ್ನು ತರುವ ಗಂಡನ ಹಣದ ದಾಹ, ನಂತರ ತೀರಿ ಹೋದ ತಾಯಿಯಂತೆ ಅನಿವಾರ್ಯವಾಗಿ ಮತ್ತದೇ ದಂಧೆಗೆ ಇಳಿಯುವ ಮಗಳು ನಮ್ಮ ಆತ್ಮಸಾಕ್ಷಿಯನ್ನೇ ಬೀದಿಗೆ ತಂದು ಬೆತ್ತಲಾಗಿಸಿ ಪ್ರಶ್ನೆ ಕೇಳಿದಂತೆ ಅನ್ನಿಸುತ್ತದೆ.


   ಇತ್ತ ಸ್ತ್ರೀ ಎಂದರೆ ಅಷ್ಟೇ ಸಾಕೆ ಎನ್ನುವ ಕಥೆ ಕೂಡ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ. ತನ್ನ ಮಾರ್ಕೆಟಿಂಗ್ ವ್ಯವಹಾರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತ ಮನೆಯ ಜವಾಬ್ಧಾರಿ ವಹಿಸಿಕೊಂಡವಳನ್ನು ಕುಗ್ಗಿಸಿ ತಮ್ಮ ಲಾಭಕ್ಕಾಗಿ ಪುರುಷರ ಮೂತ್ರಿಖಾನೆಯಲ್ಲಿ ಅವಳ ನಂಬರ್ ಬರೆದಿಟ್ಟ ಪುರುಚ ಸಮಾಜ ಅವಳು ಸಂಪೂರ್ಣ ಹತಾಷವಾಗುವಂತೆ ಮಾಡಿಬಿಡುತ್ತದೆ. ಒಮ್ಮೆ ಅನುಮಾನಿಸಿದರೂ ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಂಡು ಜೊತೆಗೆ ನಿಲ್ಲುವ ಗಂಡನೊಬ್ಬ ಇಲ್ಲಿದ್ದಾನೆ ಎಂಬುದೇ ಈ ಕಥೆ ಓದಿದ ನಂತರ ಒಂದು ನಿರಾಳ ನಿಟ್ಟುಸಿರಿಡುವಂತೆ ಮಾಡುತ್ತದೆ.


      ರಾಷ್ಟ್ರೀಯ ಹೆದ್ದಾರಿ ೬೬ನ್ನು ಅಗಲೀಕರಣಗೊಳಿಸುವ ಪ್ರಕ್ರೀಯೆಗೆ ಚಾಲನೆ ದೊರೆತು ನಾಲ್ಕೈದು ವರ್ಷಗಳೇ ಉರುಳಿ ಹೋಗಿದೆಯಾದರೂ ಅಗಲೀಕರಣವಾಗುತ್ತದೆ ಎಂದು ಹೇಳಲಾರಂಭಿಸಿ ಅದೆಷ್ಟೋ ದಶಕಗಳೇ ಕಳೆದು ಹೋಗಿದೆ. ಚಿಕ್ಕವಳಿರುವಾಗ ‘ನಿಮ್ಮ ಮನೆ ರಸ್ತೆಗೆ ಹತ್ತಿರದಲ್ಲಿದೆ. ನಿಮ್ಮನೆ ಗ್ಯಾರಂಟಿ ಹೋಗ್ತದೆ ನೋಡು’ ಎನ್ನುವ ಮಾತು ಕೇಳುತ್ತಲೇ ಬೆಳೆದವಳು ನಾನು. ‘ನಮ್ಮನೆ ಹೋಗೂದಿಲ್ಲ. ಮನೆಪಕ್ಕದಲ್ಲಿ ಪುರಾತತ್ವ ಇಲಾಖೆಗೆ ಸೇರಿದ, ವಿಜಯನಗರ ಸಾಮ್ರಾಜ್ಯದ ಮೂಲ ಮನೆ ಹಾಗೂ ದೇವಸ್ಥಾನವಿದೆ’ ಎನ್ನುತ್ತಿದ್ದೆ ನಾನು. ನಾಗಬಲಿ ಎನ್ನುವ ಈ ಕಥೆಯಲ್ಲಿಯೂ ಬರೀ ಬಾಯಿ ಮಾತಿನಲ್ಲಿದ್ದ ಯೋಜನೆಗೆ ಚಾಲನೆ ದೊರೆತು ಹಾವೂರು ಎನ್ನುವ ಪುರಾತನ ದೇಗುಲದ ಮೇಲೆ ರಸ್ತೆ ಹಾದು ಹೋಗುವುದನ್ನು ವಿರೋಧಿಸುವ ಊರ ಜನರ ಹೋರಾಟ ಯಶಸ್ವಿಯಾದರೂ ಮುಂದೆ ಸರಕಾರ ಅಲ್ಲಿ ಸ್ನೇಕ್ ಟೆಂಪಲ್ ಎನ್ನುವ ಹಾವುಗಳ ಪಾರ್ಕ್ ಮಾಡಿ ಇಡೀ ಊರೆ ನಾಶವಾಗಿ ಹೋಗುವ ಕಥೆ ಇಲ್ಲಿದೆ. ಹಾವುಗಳ ಶಿಲ್ಪ ಮಾಡಿ ಪ್ರದರ್ಶಿಸುವ ನಾವು ನಿಜದ ಹಾವುಗಳನ್ನು ಹೇಗೆ ಕೊಲ್ಲುತ್ತೇವೆ ಎನ್ನುವ ವಿಷಾದ ಇಲ್ಲಿದೆ. ಅದೇರೀತಿ ಹಾಳಾಗಿ ಹೋದ ಊರಿನ ಮತ್ತೊಂದು ಕಥೆ ‘ಸ್ವರ್ಗ ಸಾಯುತ್ತಿದೆ’. ಇಲ್ಲಿ ದೇವಸಗ್ಗ ಎನ್ನುವ ಊರನ್ನು ತಮ್ಮ ಪಾಳೆಗಾರಿಕೆಯಿಂದ ವಶಡಿಸಿಕೊಂಡ ನಾಯಕ, ಹುಲಿಯೋಜನೆಯಿಂದಾಗಿ ಮನೆ ಬಿಟ್ಟ ಊರ ಜನರು, ಊರನ್ನು ಬಿಡಲೊಲ್ಲದ ಒಂದೆರಡು ಮನೆಯವರು ಉಡಲು ವಸ್ತ್ರವಿಲ್ಲದೇ ಬಳ್ಳಿ ಎಲೆಗಳನ್ನು ಸುತ್ತಿಕೊಂಡು ನಾಗರಿಕ ಸಮಾಜಕ್ಕೆ ಆದಿವಾಸಿಗಳಂತೆ ಗೋಚರಿಸುವುದನ್ನು ಕಥೆಗಾರ ಮನೋಜ್ಞವಾಗಿ ಹೇಳಿದ್ದಾರೆ. ಹುಲಿ ಯೋಜನೆ ಅನುಷ್ಟಾನಗೊಂಡ ಹಳ್ಳಿಗಳಲ್ಲಿ ಎಷ್ಟೋ ಸಲ ವಾಸಿಸಿದ್ದೇನೆ. ಮನೆ ಬಿಟ್ಟರೆ ಸರಕಾರ ಪರಿಹಾರ ನೀಡುತ್ತದೆ ಎನ್ನುವ ಆಕರ್ಷಕ ಕೊಡುಗೆಯ ಹೊರತಾಗಿಯೂ ಅಲ್ಲಿನ ಕೆಲ ಜನರು ಮನೆಯನ್ನು ಬಿಡಲೊಲ್ಲದೇ ಅಲ್ಲೇ ಇದ್ದಾರೆ. ಆದರೆ ಅಂತಹ ಹಳ್ಳಿಗಳ ಬಿಟ್ಟ ಮನೆಗಳಿಂದಾಗಿ ನಿರಾಶ್ರಿತರ ತವರೂರಿನಂತಾಗಿರುವುದನ್ನು ಕಂಡು ಬೇಸರಿಸಿದ್ದೇನೆ. ಹರಪ್ಪಾ ಮೊಹಂಜೋದಾರ್‌ನಂತೆ ಅವಶೇಷಗಳ ಊರು ಎನ್ನಿಸಿ ಖೇದವೆನಿಸುತ್ತದೆ. ಈ ಕಥೆಯನ್ನು ಓದಿದಾಗ ಅದೆಲ್ಲ ನೆನಪುಗಳು ಒತ್ತಟ್ಟಿಗೆ ಬಂದು ಕಾಡಲಾರಂಭಿಸಿದ್ದು ಸುಳ್ಳಲ್ಲ. ಮನೆ ಕಟ್ಟುವ ಆಟದಲ್ಲಿ ಬೆಂಗಳೂರೆಂಬ ಬೆಂಗಳೂರಲ್ಲಿ ಮನೆ ಕಟ್ಟಬೇಕೆಂದುಕೊಂಡ ಸಾಮಾನ್ಯ ಪ್ರಿಂಟಿಂಗ್ ಪ್ರೆಸ್‌ನ ನೌಕರನೊಬ್ಬನ ಬವಣೆಯ ಚಿತ್ರವಿದ್ದರೆ ‘ದೀಪದ ಕೆಳಗೆ ಕತ್ತಲು’ ಕಥೆ  ಮಲ ಬಾಚಲು ಹಿಂದೇಟು ಹಾಕಿದ ಪೌರ ಕಾರ್ಮಿಕ ನಂತರ ಎಲ್ಲೂ ಉದ್ಯೋಗ ದೊರಕದೇ ಒದ್ದಾಡುವ ಕಥೆಯನ್ನು ಹೇಳುತ್ತದೆ. ಮಣ್ಣಿಗಾಗಿ ಮಣ್ಣಾದವರು ಸೈನಿಕನೊಬ್ಬನ ಮನಮಿಡಿಯು ಕಥೆಯ ಜೊತೆಗೇ ಅವನ ನಂತರ ಅವನ ಹೆಂಡತಿ ಅನುಭವಿಸುವ ತಲ್ಲಣಗಳನ್ನು ವಿವರಿಸುತ್ತೆ. ಆದರೂ ಈ ಮೂರು ಕಥೆಗಳು ಮತ್ತಿಷ್ಟು ಗಟ್ಟಿಯಾಗಿದ್ದರೆ ಒಳ್ಳೆಯದಿತ್ತು.


    ಗಂಡು ಜೋಗ್ಯ ಕಥೆಯು ಬದುಕಬೇಕೆಂಬ ಆಸೆ ಹೊತ್ತ ಮುತ್ತು ಕಟ್ಟಿಸಿಕೊಂಡ ಜೋಗಪ್ಪನ ಪ್ರೀತಿಯನ್ನು ವಿಷದಪಡಿಸಿದರೆ ಪ್ರೀತಿಗೆ ಸೋಲಿಲ್ಲ ಕಥೆ ಗಂಡು ಹೆಣ್ಣಿನ ಸಂಬಂಧದ ಕುರಿತು ಮಾತನಾಡುತ್ತದೆ. ಹಾಗೆ ನೋಡಿದರೆ ಇಡೀ ಸಂಕಲನವೇ ಮಾನವ ಸಹಜ ಭಾವನೆಗಳಿಂದ ಕೂಡಿಕೊಂಡಿದೆ. ಇಲ್ಲಿ ಪ್ರೀತಿಯಿದೆ, ದ್ವೇಷವಿದೆ, ಮೋಸ, ಸುಳ್ಳುಗಳಿವೆ, ಅಷ್ಟೇ ಸಹಜವಾದ ಕಾಮವೂ ಇದೆ.  ಕಥೆಗಾರನ ಸಹಜತೆ ಎದ್ದು ತೋರುತ್ತಲೇ ಪ್ರತಿಭಟನೆಯ ಮನಸ್ಥಿತಿಯನ್ನೂ ಹೇಳುತ್ತದೆಯಾದರೂ ಕೆಲವು ಕಥೆಗಳನ್ನು ಸೇರಿಸದೇ ಇದ್ದರೆ ಅಥವಾ ಮತ್ತೊಂದಿಷ್ಟು ನಿರೂಪಣೆಯಲ್ಲಿ ಬಿಗಿ ಗೊಳಿಸಿದ್ದರೆ ಎಷ್ಟೊಂದು ಅದ್ಭುತ ಸಂಕಲನವಾಗುತ್ತಿತ್ತಲ್ಲ ಎಂಬ ಹಳಹಳಿಕೆಯಿದೆ. ಆದರೆ ನೀವು ನೆಲಮಟ್ಟದ ತಳ ಸಮುದಾಯದ ಹಾಗೂ ಅತೀ ಸಹಜವಾಗಿ ಓದಿಸುವ ಕಥೆಗಳನ್ನು ಹುಡುಕುತ್ತಿದ್ದರೆ ಈ ಕಥೆಗಳು ನಿಮ್ಮನ್ನೆಂದೂ ನಿರಾಶೆ ಮಾಡವು. ಅಂದಹಾಗೆ ನವಿರು ಹಾಸ್ಯ, ಹಾಸ್ಯದೊಳಗೇ ಚುಚ್ಚುವ ಮೊನಚೂ ಇಲ್ಲಿದೆ.
       

******

************

ಲೇಖಕರ ಬಗ್ಗೆ ಎರಡು ಮಾತು:
ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು

3 thoughts on “

  1. ಚುರುಕು ಮುಟ್ಟಿಸುವ ಈ ನಿಮ್ಮ ವಿಮರ್ಶೆ ಕಥೆಗಳನ್ನು ಪೂರ್ತಿ ಓದಲೇ ಬೇಕು ಎನ್ನುವ ಅದ್ಭತ ಲೋಕಕ್ಕೆ ಕರೆದೊಯ್ದು ಅರ್ಧ ಹಾದಿಯಲ್ಲಿ ಬಿಟ್ಟಿದೆ ಪೂರ್ಣ ಕಥೆ ತಿಳಿಯಲು ಪಪುಸ್ತ ದ ಎಲ್ಲ ಕಥೆಗಳನ್ನು ಓದಲೇ ಬೇಕು ಎನ್ನುವ ಕುತೂಹಲ ಮೂಡಿಸಿದೆ ನಿಮ್ಮ ಈ ರಸಪೂರ್ಣ ಪುಸ್ತಕ ಪರಿಚಯ ಹಾಗೂ ವಿಶ್ಲೇಷಣೆ, ವಿಮರ್ಶೆಗಳ ಎಲ್ಲ ಆಯಾಮ ಗಳ ಲೇಖನಕ್ಕೆ ಧನ್ಯವಾದಗಳು, ಪ್ರೋತ್ಸಾಹ ನೀಡುವ ಈ ನಿಮ್ಮ ಹಾರೈಕೆಗಳಿಗೆ ನಮನಗಳು….

  2. ಅರ್ಥಪೂರ್ಣ ವಿಮರ್ಶೆ …ಹನುಮಂತ ಹಾಲಿಗೇರಿ ನಮ್ಮ ನಡುವಿನ ಸಶಕ್ತ ಕಥೆಗಾರ. ಅವರ ಸಂಕಲನ ವನ್ನು ಓದಲೇಬೇಕು ಎಂಬ ಭಾವ ತಮ್ಮ ವಿಮರ್ಶೆ ಮೂಡಿಸಿದೆ…ಧನ್ಯವಾದಗಳು..

  3. ಕಥಾ ಸಂಕಲನದ‌ ಪರಿಚಯ ಚನ್ನಾಗಿದೆ.ಕಥೆಗಳ‌ ಜೀವಾಳವನ್ನು ಪರಿಚಯಿಸಿ,ಕಥೆಗಳ‌ ಓದಿದೆ ಪ್ರೇರೇಪಿಸುತ್ತದೆ..

Leave a Reply

Back To Top