ಅಭಿವ್ಯಕ್ತಿ ಮನುಷ್ಯರ ಸಹಜ ಪ್ರಕ್ರಿಯೆ

ಮಹಾಂತೇಶ್ ಪಲದಿನ್ನಿ

ಮಿಥುನ ಶಿಲ್ಪಗಳ ಮೂಲಕ ಸಾಮಾಜಿಕ ಎಚ್ಚರಿಕೆ ನೀಡುವ  ಸಂದೇಶವೂ ಇದೆ ‘

* ಕಲಾವಿದ ಡಾ.ಮಹಾಂತೇಶ್ ಎಂ.ಪಲದಿನ್ನಿ . ವಿಜಾಪುರ ಇವರ ಊರು. ಹುಟ್ಟಿದ್ದು ೧೯೮೪. ಕಲಾ ಶಿಕ್ಷಣ ಕಲಿತದ್ದು ಹಂಪಿ ಕನ್ನಡ ವಿವಿ ಶಿಲ್ಪಕಲಾ ವಿಭಾಗದಲ್ಲಿ. ಬಿಎಫ್‌ಎ ಶಿಲ್ಪಕಲೆ ಕಲಿತ ಅವರು ಮೈಸೂರಿನ ಕಾವಾದಲ್ಲಿ ಮಾಸ್ಟರ್ ಆಫ್ ಆರ್ಟ ಕಲಿತರು. ನಂತರ ಶಿಲ್ಪಕಲೆಯಲ್ಲಿ ಎಂ.ಫಿಲ್.ಪದವಿ ಹಾಗೂ ಡಾಕ್ಟರೇಟ್ ಪದವಿಗಳನ್ನು ಹಂಪಿ ಕನ್ನಡ ವಿ.ವಿ.ಯಿಂದ ಪಡೆದರು. ಹಂಪಿ ವಿಶ್ವ ವಿದ್ಯಾಲಯದ ಶಿಲ್ಪಕಲಾ ವಿಭಾಗ ಬದಾಮಿ ಶಾಖೆಯಲ್ಲಿ ಅವರು ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಲೆಗಳನ್ನು ಕೆತ್ತಿ ಕಲೆ ಅರಳಿಸುವ ಅವರು ಈವರೆಗೆ ರೂಪಿಸಿದ ಶಿಲ್ಪಗಳನ್ನು ೨೦೧೮ರಲ್ಲಿ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನವನ್ನು ಹೈದರಾಬಾದ್‌ನಲ್ಲಿ ಏರ್ಪಡಿಸಿದ್ದರು. ಜವಾಹರಲಾಲ್ ನೆಹರು ಆರ್ಕಿಟೆಕ್ಚರ್ ಆಂಡ್ ಫೈನ್ ಆರ್ಟ ಯುನಿವರ್ಸಿಟಿಯಲ್ಲಿ ಅವರ ಶಿಲ್ಪಕಲಾ ಪ್ರದರ್ಶನ ನಡೆದಿದೆ. ೨೦೦೭, ೨೦೦೮,೨೦೦೯,೨೦೧೦ ರಲ್ಲಿ ಕ್ರಮವಾಗಿ ಕೇರಳ, ಚೆನ್ನೆöÊ, ವಿಜಾಪುರ, ಧಾರವಾಡ,  ಹಾಗೂ ೨೦೧೧ರಲ್ಲಿ ಬೆಂಗಳೂರು, ಕುಂದಾಪುರದಲ್ಲಿ ಅವರ ಶಿಲ್ಪಕಲಾ ಕೃತಿಗಳ ಪ್ರದರ್ಶನ ನಡೆದಿದೆ. ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ೧೯೯೯ ರಿಂದ ೨೦೧೭ರವರೆಗೆ ೨೬ ಕಡೆ ಅವರ ಶಿಲ್ಪಗಳ ಪ್ರದರ್ಶನಗಳು ನಡೆದಿವೆ.

೨೦೦೯ ರಿಂದ ೨೦೧೩ರವರೆಗೆ ಅವರು ರಾಜ್ಯದ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿ ಸಹ ಡಾ. ಮಹಾಂತೇಶ್ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ ಹಾಗೂ ದೇಶದ ವಿವಿದೆಡೆ ೨೨ ಕಲಾ ಶಿಬಿರಗಳಲ್ಲಿ ಅವರು ಭಾಗವಹಿಸಿ ಶಿಲ್ಪಗಳನ್ನು ರೂಪಿಸಿದ್ದಾರೆ. ಅವರ ಅತ್ಯುತ್ತಮ ಶಿಲ್ಪಗಳನ್ನು ಕಾರವಾರದ ರಾಕ್ ಗಾರ್ಡನ್ ಸೇರಿದಂತೆ ಹಂಪಿ ಕನ್ನಡ ವಿವಿಯಲ್ಲಿ, ಪಂಜಾಬದ ಪಟಿಯಾಲಾ ಕಲಾಗ್ರಾಮದಲ್ಲಿ, ಇಳಕಲ್ ಚಿತ್ರಕಲಾ ವಿದ್ಯಾಲಯ, ಬಾಗಲಕೋಟೆ ಜಿಲ್ಲಾ ಆಡಳಿತ ಭವನ, ಮಧ್ಯಪ್ರದೇಶದ ಖುಜರಾಹೋ ಶಿಲ್ಪಗ್ರಾಮದಲ್ಲಿ, ಬೆಂಗಳೂರು ಕಲಾ ಗ್ರಾಮದಲ್ಲಿ ,ದಾವಣಗೆರೆ ಕುವೆಂಪು ವಿವಿ ಆವರಣದಲ್ಲಿ, ಕುಪ್ಪಳ್ಳಿಯಲ್ಲಿ, ಬಳ್ಳಾರಿಯಲ್ಲಿ , ಸತ್ತೂರು ಮಠದಲ್ಲಿ, ಹೂವಿನಹಡಗಲಿ ರಂಗಭಾರತಿಯಲ್ಲಿ ಕಾಣಬಹುದಾಗಿದೆ.

…………………………………………………………………………..

ನಾಗರಾಜ ಹರಪನಹಳ್ಳಿ : ಬಣ್ಣಗಳ ಜೊತೆ ,ಶಿಲೆಗಳ ಜೊತೆ ಕುಂಚ ಮತ್ತು ಉಳಿಯ ಜೊತೆ ಕಳೆದ ರೋಚಕ ಕ್ಷಣ ಯಾವುದು ? ನೆನಪಲ್ಲಿ ಉಳಿದ ಒಂದು ಪ್ರಸಂಗ ಕುರಿತು ವಿವರಿಸಿ ….

 ಮಹಾಂತೇಶ್ ಪಲದಿನ್ನಿ : ವಿದ್ಯಾರ್ಥಿಗಳ ಜೊತೆಗೆ ನಿಸರ್ಗ ಚಿತ್ರ ಬಿಡಿಸಲು ಹೋದಾಗ ಅವರ ಜೊತೆ ಸೇರಿ ಒಂದು ವರ್ಣಚಿತ್ರ ಬಿಡಿಸಿರುವುದು ಸ್ಮರಣೀಯ ಕ್ಷಣ.

 ಪ್ರಶ್ನೆ : ಕಲೆ ಅಥವಾ ಚಿತ್ರ, ಹುಟ್ಟುವ ಕ್ಷಣ ಯಾವುದು ?

*ಉತ್ತರ :* ಕಲೆ ಯಾವ ಕ್ಷಣದಲ್ಲಿಯಾದರು ಹುಟ್ಟಬಹುದು ಕಲೆಗೆ ನಿರ್ದಿಷ್ಟತೆ ಇಲ್ಲ.

 ಪ್ರಶ್ನೆ :  ನಿಮ್ಮ ಶಿಲ್ಪಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ?

ಉತ್ತರ : ಬಾದಾಮಿಯಲ್ಲಿರುವ ಏಕಶಿಲಾ ಬೆಟ್ಟದಲ್ಲಿ ನಿರ್ಮಾಣವಾಗಿರುವ ಗುಹಾಂತರ ಶಿಲ್ಪಗಳು, ಅದರ ವಸ್ತು ವಿನ್ಯಾಸಗಳು, ಕಥಾನಕ ಶಿಲ್ಪಗಳು, ಸಾಲಭಂಜಿಕೆ ಶಿಲ್ಪಗಳು, ನನಗೆ ಹೆಚ್ಚು ಇಷ್ಟವಾಗಿವೆ. ಲಜ್ಜಾಗೌರಿ ಶಿಲ್ಪಗಳು ನನಗೆ ಬಹಳ ಕಾಡುವ ವಿಷಯ.

 ಪ್ರಶ್ನೆ :  ನಿಮ್ಮ ಶಿಲ್ಪಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ?

ಉತ್ತರ : ನಮ್ಮ ಸುತ್ತಲಿನ ಪರಿಸರವು ಕಾರಣವಾಗುತ್ತದೆ. ನಾವು ಕಳೆದ ಬಾಲ್ಯದ ನೆನಪುಗಳು ನಮಗೆ ಅರಿಯದೆ ಶಿಲ್ಪಗಳನ್ನು ರಚಿಸುವಾಗ ಅದರಲ್ಲಿ ಮೂಡುತ್ತದೆ. ಹಾಗೂ ಕೆಲವು ನಮ್ಮಲ್ಲಿರುವಂತಹ ಹೇಳಿಕೊಳ್ಳಲಾಗದ ವಿಷಯವನ್ನು ಶಿಲ್ಪಗಳ ಮೂಲಕ ತೋರಿಸುವುದು. ನಮ್ಮ ಜೀವನದಲ್ಲಿ ನಡೆದಂತಹ ಘಟನೆಗಳನ್ನು ಸಹ ಯಾವುದೇ ಮಾಧ್ಯಮದ ಮೂಲಕ ಅದನ್ನು ತೋರ್ಪಡಿಸಲು ಇಲ್ಲಿ ಅವಕಾಶವಿರುತ್ತದೆ.

 ಪ್ರಶ್ನೆ :  ಪ್ರೀತಿಯ ಅಭಿವ್ಯಕ್ತಿ ನಿಮ್ಮ ಶಿಲ್ಪಗಳಲ್ಲಿ ಹೆಚ್ಚು …ಅಲ್ವಾ ?

ಉತ್ತರ : ಅಭಿವ್ಯಕ್ತಿ ಎಂಬ ಪದವನ್ನು ಸರಳವಾಗಿ ವಿವರಿಸುವುದಾದರೆ, ನಮ್ಮ ಭಾವನೆಗಳನ್ನು ದೃಶ್ಯದ ಮೂಲಕ ಹೊರಹಾಕುವುದು. ನಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತ ಪಡಿಸುವುದಕ್ಕೆ ಅಭಿವ್ಯಕ್ತಿ ಎಂಬ ಸಾಧನದ ಮೂಲಕ ಚಿತ್ರ, ಶಿಲ್ಪದ ಮೂಲಕವೂ ವ್ಯಕ್ತಪಡಿಸಬಹುದು. ಈ ಎಲ್ಲ ದಾರಿಗಳ ಮೂಲಕ ಪ್ರಕಟಪಡಿಸುವುದೇ ಅಭಿವ್ಯಕ್ತಿ ಅನ್ನಿಸಿಕೊಳ್ಳುತ್ತದೆ. ಅಭಿವ್ಯಕ್ತಿ ಮನುಷ್ಯರ ಸಹಜ ಪ್ರಕ್ರಿಯೆ.

 ಪ್ರಶ್ನೆ :  ಮಿಥುನ ಶಿಲ್ಪ ಗಳನ್ನು ಆಧುನಿಕ ಕಲಾ ಶೈಲಿಯಲ್ಲಿ ಹೆಚ್ಚು  ರೂಪಿಸಿದ್ದೀರಿ… ಹೇಗೆ ಇದರ ಪ್ರಭಾವ ಆಯಿತು. ಏನು ಉದ್ದೇಶ ?

ಉತ್ತರ : ಮಿಥುನ ಶಿಲ್ಪಗಳು ಕ್ರಿ.ಶ.೨ ನೇ ಶತಮಾನದಷ್ಟು ಪ್ರಾಚೀನವಾದುದು. ಕೆಲವು ಶಿಲ್ಪಗಳು ದೇವಾಲಯದ ಗೋಪುರದ ಮೇಲೆ, ದೇವಾಲಯದ ಭಿತ್ತಿಯ ಮೇಲೆ ರಚಿಸಲಾಗಿದೆ. ಅವುಗಳ ಹಿಂದಿನ ಆಶಯ ಬೇರೆ.  ಹಿಂದಿನ ಕಾಲದಲ್ಲಿ ಲೈಂಗಿಕತೆ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಉದ್ದೇಶವಾಗಿತ್ತು. ನಾನು ರಚಿಸಿದ ಶಿಲ್ಪಗಳಲ್ಲಿ ಮಿಥುನ ಶಿಲ್ಪಗಳನ್ನು ಪ್ರಸ್ತುತ ಸನ್ನಿವೇಶ ನಡೆದಿರುವ ಘಟನೆ ಮತ್ತು ಲೈಂಗಿಕ ಕಿರುಕುಳ, ಸಮಾಜಕ್ಕೆ ಒಳಿತಾಗುವ ದೃಶ್ಯವನ್ನು ನನ್ನ ಶಿಲ್ಪಗಳಲ್ಲಿ ಕಾಣಬಹುದು.

 ಪ್ರಶ್ನೆ :  ನಾಡಿನ ದೇವಾಲಯದಲ್ಲಿನ ಶೃಂಗಾರ ಮತ್ತು ಮಿಥುನ ಶಿಲ್ಪಗಳ ಪ್ರಭಾವ ನಿಮ್ಮ ಮೇಲಿದೆಯೇ?

ಉತ್ತರ : ದೇವಾಲಯದಲ್ಲಿರುವ ಕಥಾನಕ, ದೇವತಾ ಶಿಲ್ಪಗಳು, ಮಿಥುನ ಶಿಲ್ಪಗಳು, ಮತ್ತು ಆ ಕಾಲದಲ್ಲಿ ರಚಿತವಾದ ಶಿಲ್ಪಶಾಸ್ತ್ರಗಳು ಗ್ರಂಥಗಳು ದೇವಾಲಯಗಳ ನಿರ್ಮಾಣ ಇವೆಲ್ಲ ಪ್ರಭಾವ ನನ್ನ ಕೃತಿಗಳ ಮೇಲಾಗಿದೆ.

 ಪ್ರಶ್ನೆ :  ಕಲಾ ಪ್ರಕಾರದಲ್ಲಿ ಯಾವ ಮಾಧ್ಯಮ ನಿಮಗೆ ಇಷ್ಟ?

ಉತ್ತರ : ಶಿಲಾ ಮಾಧ್ಯಮ

 ಪ್ರಶ್ನೆ :  ಬದಾಮಿ , ಪಟ್ಟದಕಲ್ಲು ಶಿಲಾ ಬಾಲಕಿಯರಿಗೂ, ಹಳೇಬೀಡು, ಬೇಲೂರು ಶಿಲಾ ಬಾಲಕಿಯರಲ್ಲಿ ಯಾರು ಚೆಂದ? ಆ ಶಿಲ್ಪಗಳ ವಿಶೇಷತೆ ಏನು ?

ಉತ್ತರ : ಚೆಂದ ಪ್ರಶ್ನೆಯ ಬರುವುದಿಲ್ಲ ಆಯಾ ಕಾಲಘಟ್ಟದಲ್ಲಿ ಪ್ರಚಲಿತದಲ್ಲಿರುವ ಕೆಲವು ಉಡುಗೆ ತೊಡುಗೆಗಳನ್ನು ಧರಿಸಿರುತ್ತಾರೆ. ಬಾದಾಮಿ ಚಾಲುಕ್ಯ ಶಿಲ್ಪಗಳಲ್ಲಿ ಉದ್ದ ನೀಳವಾಗಿ ವಸ್ತ್ರವಿನ್ಯಾಸಗಳು,  ಅಂದಿನ ಕಾಲದಲ್ಲಿ ಪ್ರಚಲಿತವಿದ್ದ ವೇಷಭೂಷಣಗಳು ಇಲ್ಲಿ ರಚನೆಯಾಗಿವೆ. ವಿವಿಧ ಭಾವನಾತ್ಮಕ ಸಂಬAಧವನ್ನು ಹೊಂದಿರುವ ಜೋಡಿ ಶಿಲ್ಪ, ಕೆಲವು ಸಂದರ್ಭಗಳಲ್ಲಿ ಒಂದು ಹೊಸ ರೀತಿಯ ಶಿಲ್ಪಗಳು ಇಂದಿಗೂ ನಾವು ಕಾಣುತ್ತೇವೆ. ಬೇಲೂರಿನ ಶಿಲ್ಪಗಳು ಪ್ರತ್ಯೇಕವಾದ ಶಿಲೆಯನ್ನು ಬಳಸಿ ರಚಿಸಿದ ಶಿಲ್ಪಗಳನ್ನು ತಂದು ಜೋಡಿಸಲಾಗಿದೆ. ಆದರೆ ಬಾದಾಮಿಯಲ್ಲಿ ಏಕಶಿಲಾ ಬೆಟ್ಟದಲ್ಲಿ ಅಖಂಡ ಶಿಲೆಯಲ್ಲಿ ಕೆತ್ತಿರುವುದು ವಿಶೇಷವಾಗಿದೆ. ಅಲ್ಲದೆ ಕಠಿಣವಾದ ಮರಳು ಶಿಲೆಯನ್ನು ಇಲ್ಲಿ ಶಿಲ್ಪಕ್ಕೆ ಬಳಸಿರುವುದು ಮಹತ್ವದ್ದು. ಇದು ಶಿಲ್ಪಕಾರನ ನೈಪುಣ್ಯ, ಕಠಿಣ ಪರಿಶ್ರಮ, ವಿಷಯ ಹಾಗೂ ಮಾಧ್ಯಮದ ಬಗ್ಗೆ ಇರುವ ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತದೆ.

 ಪ್ರಶ್ನೆ :  ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ?

ಉತ್ತರ : ಪ್ರಸ್ತುತ ರಾಜಕೀಯ ಜಾತಿಯಿಂದ ತುಂಬಾ ಹದಗೆಟ್ಟಿದೆ. ಕಲಾವಿದರಿಗೆ ಇಂದಿನ ಪರಿಸ್ಥಿತಿಯಲ್ಲಿ ಬೆಲೆ ಇಲ್ಲದಂತಾಗಿದೆ. ತಮ್ಮ ಸ್ವಾರ್ಥಕ್ಕಾಗಿ ಕಲಾವಿದರನ್ನು ಬಲಿಪಶು ಮಾಡುತ್ತಿದ್ದಾರೆ. ರಾಜಕೀಯ ಅನ್ನೋದೆ ಇರಬಾರದು ನನ್ನ ಪ್ರಕಾರ

 ಪ್ರಶ್ನೆ :  ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ?

ಉತ್ತರ : ಧರ್ಮ, ದೇವರು ಅಂದರೆ ಯಾವುದು ನಂಬಿಕೆ ಅನ್ನುವುದೆ ದೇವರು ನನ್ನ ಪ್ರಕಾರ. ಧರ್ಮವು ಮಾನವ ಸಮಾಜವನ್ನು ಸಂರಕ್ಷಿಸುವ ಒಂದು ಪ್ರಮುಖ ಸಾಧನವಾಗಿದೆ. ಧರ್ಮೋ ರಕ್ಷತಿ ರಕ್ಷತಃ ಅಂದರೆ ಧರ್ಮವನ್ನು ರಕ್ಷಿಸುವವರನ್ನು ಧರ್ಮವು ರಕ್ಷಿಸುತ್ತದೆ. ಧರ್ಮನಾಶವಾದಲ್ಲಿ ಜನಾಂಗವೇ ನಾಶವಾಗುವುದು. ಒಳ್ಳೆಯ ರೀತಿಯಲ್ಲಿ ಬದುಕುವುದೆ ಧರ್ಮ. ದಯಯೇ ಧರ್ಮದ ಮೂಲ. ದೇವನೊಬ್ಬ ನಾಮ ಹಲವು.

 ಪ್ರಶ್ನೆ : ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ?

ಉತ್ತರ : ಪ್ರಸ್ತುತ ಸಾಂಸ್ಕೃತಿಕ ವಾತಾವರಣ,  ಅಕಾಡೆಮಿಗಳಲ್ಲಿಯೂ ಕೂಡ ರಾಜಕೀಯದಿಂದ ಹೊರತಾಗಿಲ್ಲ.  ಇತ್ತೀಚಿನ ದಿನಗಳಲ್ಲಿ ಯಾವುದೇ ಕಾರ್ಯಗಳಲ್ಲಿ ರಾಜಕೀಯ ಮುಖ್ಯ ಪಾತ್ರ ವಹಿಸುತ್ತಿದೆ.

 ಪ್ರಶ್ನೆ :  ಚಿತ್ರ , ಕಲಾ ಲೋಕ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?

ಉತ್ತರ : ಪ್ರಸ್ತುತ ಇತ್ತೀಚಿನ ದಿನಗಳಲ್ಲಿ ಕಲಾ ಲೋಕದಲ್ಲಿಯೂ ಕೂಡ ರಾಜಕೀಯ ಮಧ್ಯಸ್ಥಿಕೆ ವಹಿಸುತ್ತಿದೆ. ರಾಜಕೀಯ ಸ್ವಾರ್ಥವೇ ಹೆಚ್ಚಾಗಿದೆ. ನಿಜವಾದ ಕಲಾವಿದರನ್ನು ಗುರುತಿಸುವುದು ಕಷ್ಟವಾಗಿದೆ.

 ಪ್ರಶ್ನೆ :  ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ?

ಉತ್ತರ : ಮನುಜ ಜನ್ಮವು ಒಂದೆ ಎಂದು ತಿಳಿದುಕೊಂಡು ಧರ್ಮ ದಿಂದ ನಡೆಯಬೇಕು.

 ಪ್ರಶ್ನೆ : ಕನ್ನಡ ಹಾಗೂ ಆಂಗ್ಲ ಭಾಷೆಯ ಕಲಾಪ್ರಕಾರದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕಲಾವಿದ ಯಾರು ?

ಉತ್ತರ : ಕರ್ನಾಟಕದ ಶಿಲ್ಪಿ. ದೇವಲಕುಂದ ವಾದಿರಾಜ ಹಾಗೂ ಪಾಶ್ಚಿಮಾತ್ಯ ಕಲಾವಿದ  ಹೆನ್ರಿ ಮೋರ್.

**********************

*************************************

ಲೇಖಕರ ಬಗ್ಗೆ:

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

4 thoughts on “ಅಭಿವ್ಯಕ್ತಿ ಮನುಷ್ಯರ ಸಹಜ ಪ್ರಕ್ರಿಯೆ

  1. ಕಲೆಗೆ ಬೆಲೆ ಸಿಗಬೇಕು ಎನ್ನುವುದು ನಮ್ಮ ಆಶಯ. ಶಿಲ್ಪಕಲೆ ಮತ್ತು ಕಲೆಗಾರನ ಪರಿಚಯಿಸಿದ ಲೇಖಕರಿಗೆ ಧನ್ಯವಾದಗಳು

  2. ಕಲೆ – ಕಲಾವಿದರ ನಡುವೆ ರಾಜಕೀಯ ಬರಬಾರದು. ಸತ್ಯವಾದ ಮಾತು. ಸಂದರ್ಶನ ಚೆನ್ನಾಗಿದೆ.

Leave a Reply

Back To Top