ಸಂಬಂಧಗಳು ಹುಟ್ಟಿಕೊಳ್ಳುವುದು ಅಂಥ ವಿಶೇಷವಾದ ಸಂಗತಿಯೇನಲ್ಲ. ಹುಟ್ಟಿಕೊಂಡ ಸಂಬಂಧಗಳು ಎಲ್ಲಿಯವರೆಗೆ ಬಾಳುತ್ತವೆ, ನಮ್ಮ ಬದುಕಿನ ಚಲನೆಯಲ್ಲಿ ಅವುಗಳ ಮಹತ್ವವೇನು, ಅವು ಯಾವ ಬಗೆಯ ಹೊಸತನವನ್ನು ನಮ್ಮ ಯೋಚನೆಗಳಿಗೆ ಒದಗಿಸಬಲ್ಲವು ಎನ್ನುವ ಆಧಾರದ ಮೇಲೆ ಸಂಬಂಧಗಳ ಗುಣಮಟ್ಟದ ನಿರ್ಧಾರವಾಗುತ್ತದೆ. ಈ ಗುಣಮಟ್ಟದ ಮೌಲ್ಯಮಾಪನ ಯಾವುದೇ ರೂಪ, ಆಕಾರ ಅಥವಾ ಹೆಸರುಗಳ ಪ್ರಾಪಂಚಿಕ ಚೌಕಟ್ಟಿನೊಳಗೆ ನಡೆಯುವಂಥದ್ದಲ್ಲ. ತಲೆದಿಂಬಿನ ಪಕ್ಕದಲ್ಲಿ ನೆಮ್ಮದಿಯಿಂದ ನಿದ್ರಿಸಿರುವ ಮೊಬೈಲ್ ನಲ್ಲಿ ಪಾಪ್ ಅಪ್ ಆಗುವ ಗುಡ್ ಮಾರ್ನಿಂಗ್ ಮೆಸೇಜುಗಳಲ್ಲಿ ಹದಿನೈದು ವರ್ಷಗಳ ನಂತರ ಮತ್ತೆ ಜೊತೆಯಾದ ಸ್ನೇಹದ ಬಳಗವೊಂದಿರಬಹುದು; ಫೇಸ್ ಬುಕ್ ನಲ್ಲಿ ಹುಟ್ಟಿ, ವಾಟ್ಸಾಪ್ ನಲ್ಲಿ ಬೆಳೆದು ಸುಖ-ದುಃಖಗಳಿಗೆ ಜೊತೆಯಾದ ಸ್ನೇಹಿತೆಯ ನಗುವೊಂದಿರಬಹುದು; ಹೆಸರು-ಭಾವಚಿತ್ರಗಳಿಲ್ಲದ ಅಪರಿಚಿತ ಹೃದಯವೂ ಇರಬಹುದು. ಪಕ್ಕದ ರಸ್ತೆಯಲ್ಲಿ ಹೋಮ್ ವರ್ಕ್ ಮಾಡುತ್ತಲೇ ಹಾಲು ಮಾರುವ ಹುಡುಗ ಕಾಫಿಯೊಂದಿಗಿನ ಸಂಬಂಧವನ್ನು ನಂಬಿಕೆಯಾಗಿ ಕಾಯುತ್ತಿರಬಹುದು. ಅರ್ಥವಾಗದ ಭಾಷೆಯೊಂದನ್ನು ನಗುವಿನಲ್ಲೇ ಕಲಿಸಿಕೊಡುವ ಜಪಾನಿ ಸಿನೆಮಾವೊಂದರ ಪುಟ್ಟ ಹುಡುಗಿ ಭಾವನೆಗಳೊಂದಿಗಿನ ಸಂಬಂಧವನ್ನು ಸಲಹಿದರೆ, ಫ್ರೆಂಚ್ ವಿಂಡೋವೊಂದರ ಕರ್ಟನ್ನುಗಳ ಮೇಲೆ ಹಾರುವ ಭಂಗಿಯಲ್ಲಿ ಕೂತೇ ಇರುವ ನೀಲಿಬಣ್ಣದ ಹಕ್ಕಿ ಮೌನದೊಂದಿಗೆ ಹೊಸ ಸಂಬಂಧವೊಂದನ್ನು ಹುಟ್ಟುಹಾಕಬಹುದು.
ಹೀಗೆ ಎಲ್ಲೋ ಹುಟ್ಟಿ, ಇನ್ಯಾರೋ ಬೆಳಸುವ ಸಂಬಂಧಗಳಿಗೆಲ್ಲ ಅವುಗಳದೇ ಆದ ಉದ್ದೇಶವಿರುವಂತೆ ನನಗೆ ಅನ್ನಿಸುತ್ತದೆ. ಹೈಸ್ಕೂಲಿನ ದಾರಿಯಲ್ಲಿದ್ದ ಬಸ್ ಸ್ಟಾಪಿನಲ್ಲಿ ಕಾಲೇಜಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದ ಹುಡುಗ, ನಗುವಿನಿಂದಲೇ ಕಾಲ್ನಡಿಗೆಯ ಕಷ್ಟವನ್ನೆಲ್ಲ ಕಣ್ಮರೆಯಾಗಿಸುತ್ತಿದ್ದ ನೆನಪೊಂದು ಹೈಸ್ಕೂಲಿನ ಮಾರ್ಕ್ಸ್ ಕಾರ್ಡುಗಳೊಂದಿಗೆ ಯಾವ ನಿರ್ಬಂಧವೂ ಇಲ್ಲದೇ ಸಂಬಂಧವನ್ನು ಬೆಳಸಿಕೊಳ್ಳುತ್ತದೆ. ಡೆಂಟಲ್ ಕುರ್ಚಿಯ ಕೈಮೇಲೆ ಆತಂಕದಿಂದಲೇ ಕೈಯಿಟ್ಟು ಸಂಬಂಧ ಬೆಳೆಸಿಕೊಳ್ಳುವ ಹಲ್ಲಿನ ಒಟ್ಟೆಯೊಂದು ಹುಳುಕು ಮರೆತು ಹೂನಗೆಯ ಚಲ್ಲಿದ ಫೋಟೋವೊಂದು ಗೋಡೆಗಂಟಿದ ಮೊಳೆಯೊಂದಿಗೆ ನಂಟು ಬೆಳಸಿಕೊಳ್ಳುತ್ತದೆ. ಚಾದರದ ಮೇಲಿನ ಹೂವೊಂದು ಸೆಕೆಂಡುಗಳಲ್ಲಿ ಹಣ್ಣಾಗಿ ಡೈನಿಂಗ್ ಟೇಬಲ್ಲಿನ ಮೇಲೆ ಏಕಾಂಗಿಯಾಗಿ ಕುಳಿತಿದ್ದ ಬುಟ್ಟಿಯೊಂದಿಗೆ ನಂಟು ಬೆಳಸಿ, ಬುಟ್ಟಿಯ ಬದುಕಿಗೊಂದಿಷ್ಟು ಬಣ್ಣಗಳನ್ನು ದೊರಕಿಸುತ್ತದೆ. ಟಿವಿ ಸ್ಟ್ಯಾಂಡ್ ನೊಳಗೆ ಬೆಚ್ಚಗೆ ಕುಳಿತ ಸಿಡಿಯೊಂದರ ಹಾಡು ಅಡುಗೆಮನೆಯೊಂದಿಗೆ ಬೇಜಾರಿಲ್ಲದೇ ಸಂಬಂಧವನ್ನು ಬೆಳಸಿಕೊಂಡು, ಏಕತಾನತೆಯ ಮರೆಸುವ ಹೊಸ ರಾಗವೊಂದನ್ನು ಹುಟ್ಟಿಸುತ್ತದೆ. ಹೀಗೇ ಅಸ್ತಿತ್ವದ ಮೋಹಕ್ಕೆ ಬೀಳದೆ ಬದುಕಿನ ಭಾಗವಾಗಿಬಿಡುವ ಸಂಬಂಧಗಳೆಲ್ಲವೂ ಅವಕಾಶವಾದಾಗಲೆಲ್ಲ ಅರಿವಿಗೆ ದೊರಕುತ್ತ, ನಿತ್ಯವೂ ಅರಳುವ ಪುಷ್ಪವೊಂದರ ತಾಳ್ಮೆಯನ್ನು ನೆನಪಿಸುತ್ತವೆ.
ತಾಳ್ಮೆ ಎಂದಾಗಲೆಲ್ಲ ನನಗೆ ನೆನಪಾಗುವುದು ಡೈನಿಂಗ್ ಟೇಬಲ್ಲು. ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನಗೆ ಡೈನಿಂಗ್ ಟೇಬಲ್ ಎನ್ನುವುದು ಐಷಾರಾಮದ ಸಂಗತಿಯಾಗಿತ್ತು. ವರ್ಷಕ್ಕೊಮ್ಮೆ ಹೊಟೆಲ್ ಗಳಿಗೆ ಹೋದಾಗಲೋ ಅಥವಾ ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಸಂಬಂಧಿಕರ ಮನೆಗಳಿಗೆ ಹೋದಾಗಲೋ ಕಾಣಸಿಗುತ್ತಿದ್ದ ಡೈನಿಂಗ್ ಟೇಬಲ್ಲುಗಳ ಬಗ್ಗೆ ವಿಶೇಷವಾದ ಪ್ರೀತಿಯಿತ್ತು. ಮರದ ಡೈನಿಂಗ್ ಟೇಬಲ್ಲಿನ ಮೇಲೆ ಬಿಸಿ ಕುಕ್ಕರನ್ನೋ, ಸಾಂಬಾರಿನ ಪಾತ್ರೆಯನ್ನೋ ಇಡಲು ಉಪಯೋಗಿಸುತ್ತಿದ್ದ ಸ್ಟೀಲಿನ ಸ್ಟ್ಯಾಂಡುಗಳೆಲ್ಲ ನನ್ನಲ್ಲಿ ವಿಚಿತ್ರ ಕಂಪನಗಳನ್ನು ಉಂಟುಮಾಡುತ್ತಿದ್ದವು. ಅಜ್ಜ-ಅಜ್ಜಿ, ಅಪ್ಪ ಇವರೆಲ್ಲ ಹೇಳುತ್ತಿದ್ದ ಪುರಾಣದ ಕಥೆಗಳನ್ನು ಕೇಳುತ್ತಾ ಬೆಳೆದ ನನಗೆ ಸಾಂಬಾರಿನ ಪಾತ್ರೆಯೊಂದು ಡೈನಿಂಗ್ ಟೇಬಲ್ಲಿನ ಜೀವ ಸೆಳೆದೊಯ್ಯುವ ಯಮರಾಜನಂತೆಯೂ, ಸ್ಟೀಲಿನ ಸ್ಟ್ಯಾಂಡೊಂದು ಸತಿ ಸಾವಿತ್ರಿಯಾಗಿ ಪ್ರಾಣ ಉಳಿಸಿದಂತೆಯೂ ಭಾಸವಾಗುತ್ತಿತ್ತು. ಊಟದ ಪ್ಲೇಟಿನಡಿಯ ಮ್ಯಾಟ್ ಗಳ ಮೇಲಿನ ಗುಲಾಬಿ ಹೂವುಗಳೆಲ್ಲ ಸಾಂಬಾರಿನ ಬಿಸಿಗೆ ಕೊಂಚವೂ ಬಾಡದೇ ನಮ್ಮೆಲ್ಲರೊಂದಿಗೆ ಕೂತು ಊಟ ಮಾಡುತ್ತಿರುವಂತೆ ಸಂಭ್ರಮವಾಗುತ್ತಿತ್ತು. ಊಟ-ತಿಂಡಿಯ ನಂತರ ಡೈನಿಂಗ್ ಟೇಬಲ್ಲಿನ ಮೇಲೆ ಬಂದು ಕೂರುತ್ತಿದ್ದ ಹಣ್ಣಿನ ಬುಟ್ಟಿಯೊಂದು ಸಕಲ ಬಣ್ಣ-ರುಚಿಗಳನ್ನು ಡೈನಿಂಗ್ ಟೇಬಲ್ಲಿಗೆ ಒದಗಿಸಿದಂತೆನ್ನಿಸಿ, ಹಣ್ಣಿನ ಬುಟ್ಟಿಯ ಮೇಲೂ ವಿಶೇಷ ಪ್ರೀತಿಯೊಂದು ಹುಟ್ಟಿಕೊಳ್ಳುತ್ತಿತ್ತು.
ಬದುಕಿನ ಯಾವುದೋ ಕ್ಷಣದಲ್ಲಿ ಅರಿವಿಗೇ ಬಾರದಂತೆ ಹುಟ್ಟಿದ ಪ್ರೀತಿಯೊಂದು ಬದುಕಿನುದ್ದಕ್ಕೂ ನಮ್ಮೊಂದಿಗೇ ಅಂಟಿಕೊಂಡು, ತಾನು ಕಟ್ಟಿಕೊಂಡ ಸಂಬಂಧಗಳೊಂದಿಗೆ ನಮ್ಮನ್ನೂ ಬಂಧಿಸಿಬಿಡುತ್ತದೆ. ಬಾಲ್ಯದ ಆ ಸಮಯದಲ್ಲಿ ಐಷಾರಾಮದೆಡೆಗಿನ ಪ್ರೀತಿಯಿಂದ ಹುಟ್ಟಿಕೊಂಡ ಡೈನಿಂಗ್ ಟೇಬಲ್ಲಿನೊಂದಿಗಿನ ಸಂಬಂಧ ಈಗಲೂ ಹಾಗೆಯೇ ಉಳಿದುಕೊಂಡಿದೆ. ಯಮರಾಜನ ಭಯವಿಲ್ಲದ ಕಲ್ಲಿನ ಡೈನಿಂಗ್ ಟೇಬಲ್ಲಿನ ಮೇಲೆ ಚಿಪ್ಸ್ ಪ್ಯಾಕೆಟ್ಟಿನಿಂದ ಹಿಡಿದು ಮಲ್ಲಿಗೆ ಮಾಲೆಯವರೆಗೂ ಹೊಸಹೊಸ ಅವಕಾಶಗಳು ಸೃಷ್ಟಿಯಾಗಿವೆ. ಈಗಷ್ಟೇ ಮರಿಹಾಕಿದ ಬೆಕ್ಕಿನ ಸುತ್ತಲೂ ಕಣ್ಣುಮುಚ್ಚಿ ಮಲಗಿರುವ ಮರಿಗಳಂತೆಯೇ ಭಾಸವಾಗುವ ಡೈನಿಂಗ್ ಟೇಬಲ್ಲಿನ ಕುರ್ಚಿಗಳು ಅಗತ್ಯಬಿದ್ದಾಗಲೆಲ್ಲ ಮೊಬೈಲ್ ಸ್ಟ್ಯಾಂಡಾಗಿ, ಹ್ಯಾಂಗರುಗಳಾಗಿ, ಲ್ಯಾಡರ್ ಆಗಿ ರೂಪಾಂತರಗೊಂಡು ಮನೆಯ ಎಲ್ಲ ವಸ್ತುಗಳೊಂದಿಗೂ ಸ್ನೇಹಸಂಬಂಧವೊಂದನ್ನು ಬೆಸೆದುಕೊಂಡಿವೆ. ಊಟ-ತಿಂಡಿಯನ್ನು ಬಿಟ್ಟು ಉಳಿದೆಲ್ಲ ಕೆಲಸ-ಕಾರ್ಯಗಳಿಗೂ ಬಳಕೆಯಾಗುತ್ತಿರುವ ಡೈನಿಂಗ್ ಟೇಬಲ್ಲಿನ ಮೂಲ ಉದ್ದೇಶವನ್ನೇ ನಾನು ಮರೆತುಹೋಗಿದ್ದರ ಬಗ್ಗೆ ಡೈನಿಂಗ್ ಟೇಬಲ್ಲಿಗೆ ನನ್ನ ಮೇಲೆ ಬೇಸರವೇನೂ ಇದ್ದಂತಿಲ್ಲ. ಅದರ ಮೈಮೇಲೆ ಧೂಳು ಬಿದ್ದಾಗಲೆಲ್ಲ, ವೆಟ್ ಟಿಶ್ಯೂ ಬಳಸಿ ನಾಜೂಕಾಗಿ ಕ್ಲೀನ್ ಮಾಡುವ ನನ್ನ ಮೇಲೂ ಅದಕ್ಕೊಂದು ವಿಶೇಷವಾದ ಪ್ರೀತಿಯಿರುವಂತೆ ಆಗಾಗ ಅನ್ನಿಸುವುದುಂಟು. ನನ್ನೆಲ್ಲ ಭಾವಾತಿರೇಕಗಳನ್ನು ಅಲ್ಲಾಡದೇ ಸಹಿಸಿಕೊಳ್ಳುವ ಡೈನಿಂಗ್ ಟೇಬಲ್ಲಿನ ತಾಳ್ಮೆಯನ್ನು ನೋಡುವಾಗಲೆಲ್ಲ ಸಂಬಂಧಗಳೆಡೆಗಿನ ನಂಬಿಕೆಯೊಂದು ಬಲವಾಗುತ್ತ ಹೋಗುತ್ತದೆ.
ಈ ನಂಬಿಕೆ ಎನ್ನುವುದು ಇರದೇ ಇದ್ದಿದ್ದರೆ ಸಂಬಂಧಗಳಿಗೊಂದು ಗಟ್ಟಿತನ ದೊರಕುತ್ತಿರಲಿಲ್ಲ. ನಂಬಿಕೆಯೆನ್ನುವುದು ಶಕ್ತಿಯ ರೂಪ ತಳೆದು ಸಂಬಂಧಗಳಿಗೊಂದು ಸಕಾರಾತ್ಮಕತೆಯನ್ನೂ, ಆಯುಷ್ಯವನ್ನೂ ಒದಗಿಸುತ್ತದೆ. ನಂಬಿಕೆ ಇಲ್ಲದೇ ಇದ್ದಿದ್ದರೆ ಮೊಬೈಲಿಗೆ ಬಂದ ಅಪರಿಚಿತ ಗುಡ್ ಮಾರ್ನಿಂಗ್ ಮೆಸೇಜು ಸ್ನೇಹವಾಗಿ ಬದಲಾಗುತ್ತಲೇ ಇರಲಿಲ್ಲ; ಹಾಲು ಮಾರುವ ಹುಡುಗ ಕಾಫಿಯ ಮೇಲಿನ ಪ್ರೀತಿಯನ್ನು ಉಳಿಸುತ್ತಿರಲಿಲ್ಲ; ಭಾಷೆ-ಸಂಸ್ಕೃತಿಗಳ ಪರಿಚಯವಿಲ್ಲದ ದೇಶದ ಸಿನೆಮಾ ನಮ್ಮೊಳಗೊಂದು ಜಗತ್ತನ್ನು ಸೃಷ್ಟಿಸುತ್ತಿರಲಿಲ್ಲ; ಕರ್ಟನ್ನನ್ನು ದಾಟಿ ಮನೆಸೇರುವ ಬೆಳಕು ನೀಲಿಹಕ್ಕಿಯ ಮೌನಕ್ಕೆ ಜೊತೆಯಾಗುತ್ತಿರಲಿಲ್ಲ. ಬಸ್ ಸ್ಟಾಪಿನಲ್ಲಿ ಕಾಯುವ ನಗೆಯೊಂದರ ನಂಬಿಕೆಯನ್ನು ಬಸ್ಸು ಉಳಿಸಿದರೆ, ಗೋಡೆಯ ಮೇಲಿನ ಹೂನಗೆಯ ನಂಬಿಕೆಯನ್ನು ಡೆಂಟಲ್ ಕುರ್ಚಿಯೊಂದು ಕಾಪಾಡುತ್ತದೆ; ಕನಸಿನ ನಂಬಿಕೆಯನ್ನು ಹೂವಿನ ಬುಟ್ಟಿ ಸಲಹಿದರೆ, ಅಡುಗೆಮನೆಯನ್ನು ತಲುಪಿದ ಹಾಡಿನ ರಾಗದ ನಂಬಿಕೆಯನ್ನು ಗಾಯಕ ಉಳಿಸಿಕೊಳ್ಳುತ್ತಾನೆ. ಡೈನಿಂಗ್ ಟೇಬಲ್ ಮೇಲಿನ ಮಲ್ಲಿಗೆಮಾಲೆಯ ನಂಬಿಕೆಯನ್ನು ಪ್ರೀತಿ-ಸಹನೆಗಳು ರಕ್ಷಿಸುತ್ತವೆ. ಹುಟ್ಟಿದ ಸಂಬಂಧಗಳೆಲ್ಲವೂ ನಂಬಿಕೆಯ ಬಲದ ಮೇಲೆ ಬೆಳೆಯುತ್ತ, ಉತ್ತಮರ ಒಡನಾಟದಿಂದ ಹೊಸ ಹೊಳಹು-ಸಾಧ್ಯತೆಗಳಿಗೆ ಎದುರಾಗುತ್ತ, ಬದುಕೊಂದರ ಸಾರ್ಥಕತೆಯ ಮೂಲಕಾರಣಗಳಾಗುತ್ತವೆ.
*******
ಲೇಖಕರ ಬಗ್ಗೆ ಎರಡು ಮಾತು:
ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ
ಚಂದದ ಬರಹ ಅಂಜನಾ ❤️
ನಂಬಿಕೆಯೇ ಜೀವನ ಪ್ರೀತಿ. ಬದುಕಿನ ಎಲ್ಲಾ ಸಂಗತಿಗಳನ್ನು ಮತ್ತು ದೈನಿಕದ ಎಲ್ಲಾ ಉಪಯುಕ್ತ ವಸ್ತುಗಳೊಂದಿಗೆ ಹೊಂದುವ ಸಾವಯವ ಸಂಬಂಧವೇ ಉತ್ತಮಿಕೆ. ಚಂದ ಇದೆ ಸಂಬಂಧದ ವ್ಯಾಖ್ಯೆ
ಚಂದದ ಬರಹ.ಡೈನಿಂಗ್ ಟೇಬಲ್ ಮತ್ತು ಇನ್ನೆಷ್ಟೋ ಸಂಗತಿಗಳು ಈ ಬರೆಹದಲ್ಲಿ ಸಜೀವವೆನಿಸಿ ಆಪ್ತವಾದವು..
ಚಂದದ ಬರಹದಲ್ಲಿ ಪದಗಳ ಬಿಗಿಯಾದ ಬಂಧ ಹಿತವಾಗಿದೆ..
ಸಾಮಾನ್ಯ ಆದರೂ ಸಹಜ, ಆಪ್ತ ಭಾವ ಲಹರಿ
ಸಂಬಂಧಕ್ಕೆ ಹೊಸ ಭಾಷ್ಯ
ಚೆನ್ನಾಗಿದೆ
ಅಬ್ಬಾ ಸಂಬಂಧಗಳು ಹೇಗೆಲ್ಲಾ ಬೆಸೆದುಕೊಂಡಿರುತ್ತವಲ್ಲಾ. ಅದನ್ನು ಕಾಣುವ ದೃಷ್ಟಿ ನಮಗಿರಬೇಕು ಅಷ್ಟೇ. ಹೀಗೇ ಬರೆಯುತ್ತಿರಿ ಓದಿನ ಮೂಲಕ ನಮ್ಮ ಸಂಬಂಧ ಹೀಗೇ ಉಳಿಯಲಿ, ಬೆಳೆಯಲಿ