ಮಾತು ಅರಳುವ ಹೊತ್ತು

ನಗುವಿನೊಂದಿಗೆ ಜನ್ಮತಳೆದ ಸಂಬಂಧಗಳ ಭವಿಷ್ಯವನ್ನು ಮಾತು ನಿರ್ಣಯಿಸುತ್ತದೆ. ಮಾತು ಸರಾಗವೆನ್ನಿಸದ ಹೊರತು ಸಂಬಂಧಗಳನ್ನು ಸರಳವಾಗಿಸಿ ಸುಂದರಗೊಳಿಸಲಾಗದು. ಬದುಕಿನ ಸೂಕ್ಷ್ಮಗಳೆಲ್ಲವನ್ನೂ ತನ್ನೆಲ್ಲ ಚಾಣಾಕ್ಷತೆಯನ್ನು ಉಪಯೋಗಿಸಿ ಕಾಪಾಡಿಕೊಳ್ಳುವ ಮಾತು, ಅಗತ್ಯ ಬಿದ್ದಾಗಲೆಲ್ಲ ಸಂಬಂಧಗಳಿಗೊಂದು ಜೀವಂತಿಕೆಯನ್ನೂ ಒದಗಿಸುತ್ತದೆ. ಮಾತುಗಳೇ ಇಲ್ಲದ ಸಂಬಂಧವೊಂದು ಎಲ್ಲಿಯವರೆಗೆ ಜೀವಂತವಾಗಿ ಉಳಿದೀತು; ಎಲ್ಲ ನಕಾರಾತ್ಮಕತೆಯ ಪರಿಹಾರವೆನ್ನುವಂತೆ ಹೃದಯಕ್ಕಿಳಿವ ಮಾತು ಮಾತ್ರವೇ ಸಂಬಂಧಗಳನ್ನೆಲ್ಲ ಸಹೃದಯತೆಯ ಸೆರಗಿನಲ್ಲಿ ಬಚ್ಚಿಟ್ಟು ಸಾಕಿ ಸಲಹೀತು!

          ಕಾಲಕಾಲಕ್ಕೆ ತಕ್ಕಂತೆ ಸಂಬಂಧಗಳ ಮೌಲ್ಯದ ಪರಿಕಲ್ಪನೆ ಬದಲಾಗುತ್ತಾ ಹೋದರೂ ಮಾತು ಮಾತ್ರ ಬೇಜಾರಿಲ್ಲದೇ ಬದಲಾವಣೆಗಳಿಗೆಲ್ಲ ಹೊಂದಿಕೊಂಡಿತು. ಪತ್ರಗಳ ಪ್ರಿಯ ಗೆಳತಿ-ಗೆಳೆಯಂದಿರೆಲ್ಲ ವಾಟ್ಸಾಪ್ ಮೆಸೇಜುಗಳ ಬ್ರೊ-ಡಿಯರ್ ಗಳಾದರು; ಪೋಸ್ಟ್ ಕಾರ್ಡ್ ನ ನಾಲ್ಕೇ ನಾಲ್ಕು ಸಾಲುಗಳ ಮಧ್ಯದಲ್ಲಿ ಕಷ್ಟಪಟ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದ್ದ ಉದ್ದನೆಯ ವಿಳಾಸವೊಂದು ಏಳೆಂಟು ಅಕ್ಷರಗಳ ಇಮೇಲ್ ಅಡ್ರೆಸ್ಸಾಗಿ ನಿರಾಳವಾಗಿ ಕಾಲುಚಾಚಿತು; ಗ್ರೀಟಿಂಗ್ ಕಾರ್ಡುಗಳಲ್ಲಿ ಆತಂಕದಿಂದ ಬಸ್ಸನ್ನೇರುತ್ತಿದ್ದ ಪ್ರೇಮನಿವೇದನೆಯೊಂದು ಇಮೋಜಿಗಳಲ್ಲಿ, ಸ್ಮೈಲಿಗಳಲ್ಲಿ ಗೌಪ್ಯವಾಗಿ ಹೃದಯಗಳನ್ನು ತಲುಪಲಾರಂಭಿಸಿತು. ಹೀಗೆ ಸಂವಹನದ ಸ್ವರೂಪಗಳೆಲ್ಲ ಬದಲಾದರೂ ಮಹತ್ವ ಕಳೆದುಕೊಳ್ಳದ ಮಾತು ಕಾಲಕ್ಕೆ ತಕ್ಕ ಮೇಕಪ್ಪಿನೊಂದಿಗೆ ಅಪ್ಡೇಟ್ ಆಗುತ್ತಲೇ ಇರುತ್ತದೆ.

          ಗಂಡ-ಹೆಂಡತಿ ಪರಸ್ಪರ ಮಾತನ್ನಾಡಿದರೆ ಸಾಕು ಮಕ್ಕಳು ಹುಟ್ಟುತ್ತವೆ ಎಂದು ನಾನು ನಂಬಿಕೊಂಡಿದ್ದ ಕಾಲವೊಂದಿತ್ತು. ಅಜ್ಜ-ಅಜ್ಜಿ ಜೊತೆಯಾಗಿ ಕೂತು ಮಾತನ್ನಾಡಿದ್ದನ್ನೇ ನೋಡಿರದ ನಾನು ಅವರಿಗೆ ಎಂಟು ಮಕ್ಕಳು ಹೇಗೆ ಹುಟ್ಟಿದವು ಎಂದು ಅಮ್ಮನನ್ನು ಪ್ರಶ್ನಿಸುತ್ತಿದ್ದೆ. ಇಂತಹ ಮುಗ್ಧ ಯೋಚನೆಯೊಂದು ಈಗ ನಗು ತರಿಸಿದರೂ, ಕಾಲಕಾಲಕ್ಕೆ ಸಂವಹನವೊಂದು ಬದಲಾಗುತ್ತಾ ಬಂದ ರೀತಿಯೂ ಅಚ್ಚರಿ ಹುಟ್ಟಿಸುತ್ತದೆ. ಅಜ್ಜ-ಅಜ್ಜಿಯ ಕಾಲದಲ್ಲಿ ಊಟ-ತಿಂಡಿ, ಪೂಜೆ-ಪುನಸ್ಕಾರಗಳ ಹೊರತಾಗಿ ಮಾತುಕತೆಯೇ ಇಲ್ಲದ ದಾಂಪತ್ಯವೊಂದು ಜಗಳ-ಮನಸ್ತಾಪಗಳಿಲ್ಲದೇ ನಿರಾತಂಕವಾಗಿ ಸಾಗುತ್ತಿತ್ತು. ಮಕ್ಕಳ-ಮೊಮ್ಮಕ್ಕಳ ಮಾತು-ನಗು ಇವುಗಳೇ ಅವರ ಸುಖೀಸಂಸಾರದ ರಹಸ್ಯಗಳೂ, ಗುಟ್ಟುಗಳು ಎಲ್ಲವೂ ಆಗಿದ್ದವು. ಪ್ರೀತಿಯ ಸೆಲೆಯೊಂದು ಸಂವಹನದ ಮಾಧ್ಯಮವಾಗಿ, ಮಾತು ಮೌನಧರಿಸಿ ಸಂಬಂಧಗಳನ್ನು ಸಲಹುತ್ತಿತ್ತು. ದುಡ್ಡು-ಕಾಸು, ಸೈಟು-ಮನೆ ಹೀಗೆ ಸಂಬಂಧಗಳಿಗೊಂದು ಮೌಲ್ಯವನ್ನು ದೊರಕಿಸದ ಮಾತುಕತೆಗಳು ಮನೆತುಂಬ ಹರಿದಾಡುವಾಗಲೆಲ್ಲ, ಮಾತೊಂದು ಪ್ರೀತಿಯ ರೂಪ ಧರಿಸುತ್ತಿದ್ದ ಅಜ್ಜ-ಅಜ್ಜಿಯ ಕಾಲಕ್ಕೆ ವಾಪಸ್ಸಾಗುವ ವಿಚಿತ್ರ ಆಸೆಯೊಂದು ಆಗಾಗ ಹುಟ್ಟಿಕೊಳ್ಳುತ್ತಿರುತ್ತದೆ.

          ಹೀಗೆ ಆಗಾಗ ಆತ್ಮತೃಪ್ತಿಯ ಪರಿಕಲ್ಪನೆಯನ್ನೇ ಪ್ರಶ್ನಿಸಿಬಿಡುವಂತಹ, ಈ ಕ್ಷಣದ ಬದುಕಿನ ಸನ್ನಿವೇಶಕ್ಕೆ ಹೊಂದಾಣಿಕೆಯಾಗದೇ ವಿಲಕ್ಷಣವೆನ್ನಿಸಬಹುದಾದಂತಹ ಆಸೆಯೊಂದು ಎಲ್ಲರ ಬದುಕಿನಲ್ಲಿಯೂ ಇರುತ್ತದೆ. ಅಂತಹ ಆಸೆಯೊಂದರ ಅಕ್ಕಪಕ್ಕ ಬಾಲ್ಯವಂತೂ ಸದಾ ಸುಳಿದಾಡುತ್ತಲೇ ಇರುತ್ತದೆ; ಬಾಲ್ಯದ ಹಿಂದೆ-ಮುಂದೊಂದಿಷ್ಟು ಮಾತುಗಳು! ಆ ಮಾತುಗಳೊಂದಿಗೆ ನಾಡಗೀತೆಯನ್ನು ಸುಮಧುರವಾಗಿ ಹಾಡುತ್ತಿದ್ದ ಪ್ರೈಮರಿ ಸ್ಕೂಲಿನ ಟೀಚರೊಬ್ಬರ ಧ್ವನಿ, ಊರಿನ ದೇವಸ್ಥಾನದಲ್ಲಿ ಚಂಪಾಷಷ್ಠಿಯ ದಿನದಂದು ನಡೆಯುತ್ತಿದ್ದ ತಾಳಮದ್ದಳೆಯ ಮೃದಂಗದ ಸದ್ದು, ಕಪ್ಪು-ಬಿಳುಪು ಟಿವಿಯ ಶ್ರೀಕೃಷ್ಣನ ಅವತಾರ ಮಾತನಾಡುತ್ತಿದ್ದ ಅರ್ಧಂಬರ್ಧ ಅರ್ಥವಾಗುತ್ತಿದ್ದ ಹಿಂದಿ, ದುಷ್ಯಂತ-ಶಕುಂತಲೆಯ ಪ್ರಣಯವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿದ್ದ ಸಂಸ್ಕೃತ ಶಿಕ್ಷಕರ ನಾಚಿಕೆ ಎಲ್ಲವೂ ಸೇರಿಕೊಂಡು ಅಲ್ಲೊಂದು ಹೊಸ ಪ್ರಪಂಚ ಸೃಷ್ಟಿಯಾಗುತ್ತಿರುತ್ತದೆ. ಆ ಪ್ರಪಂಚದ ಮಾತುಗಳೆಲ್ಲವೂ ಆತ್ಮಸಂಬಂಧಿಯಾದದ್ದೇನನ್ನೋ ಧ್ವನಿಸುತ್ತ, ಭಾಷೆಯೊಂದರ ಅಗತ್ಯವೇ ಇಲ್ಲದಂತೆ ಅಮೂರ್ತವಾದ ಅನುಭವವೊಂದನ್ನು ಒದಗಿಸುತ್ತಿರುತ್ತವೆ.

          ಹಾಗೆ ಮಾತುಗಳೊಂದಿಗೆ ದಕ್ಕಿದ ಸ್ಮರಣ ಯೋಗ್ಯ ಅನುಭವವೆಂದರೆ ಇಸ್ಪೀಟಿನ ಮಂಡಲಗಳದ್ದು. ತಿಥಿಯೂಟ ಮುಗಿಸಿ ಕಂಬಳಿಯ ಮೇಲೊಂದು ಜಮಖಾನ ಹಾಸಿ ತಯಾರಾಗುತ್ತಿದ್ದ ಇಸ್ಪೀಟಿನ ವೇದಿಕೆಗೆ ಅದರದ್ದೇ ಆದ ಗಾಂಭೀರ್ಯವಿರುತ್ತಿತ್ತು. ಊರ ದೇವಸ್ಥಾನದ ಅಧ್ಯಕ್ಷಸ್ಥಾನದ ಚುನಾವಣೆಯಿಂದ ಹಿಡಿದು ಸಂವಿಧಾನದ ಆರ್ಟಿಕಲ್ ಗಳವರೆಗೆ ಚರ್ಚೆಯಾಗುತ್ತಿದ್ದ ಆ ವೇದಿಕೆಯಲ್ಲಿ ಇಸ್ಪೀಟಿನ ರಾಜ-ರಾಣಿಯರೆಲ್ಲ ಮೂಕಪ್ರೇಕ್ಷಕರಾಗುತ್ತಿದ್ದರು. ಸೋಲು-ಗೆಲುವುಗಳೆಲ್ಲ ಕೇವಲ ನೆಪಗಳಾಗಿ ಮಾತೊಂದೇ ಆ ಮಂಡಲದ ಉದ್ದೇಶವಾಗಿದ್ದಿರಬಹುದು ಎಂದು ನನಗೆ ಯಾವಾಗಲೂ ಅನ್ನಿಸುತ್ತಿರುತ್ತದೆ. ಆಧುನಿಕತೆಯೊಂದು ಮಾತಿನ ಜಾಗ ಕಸಿದುಕೊಂಡು ಎಲ್ಲರೂ ಅವರವರ ಪ್ರಪಂಚದಲ್ಲಿ ಮಗ್ನರಾಗಿರುವಾಗ, ಕಪಾಟಿನ ಮೂಲೆಯಲ್ಲಿ ಮಾತು ಮರೆತು ಕುಳಿತ ಜಮಖಾನದ ದುಃಖಕ್ಕೆ ಮರುಗುತ್ತಾ ರಾಜನೊಂದಿಗೆ ಗುಲಾಮ ಯಾವ ಸಂಭಾಷಣೆಯಲ್ಲಿ ತೊಡಗಿರಬಹುದು ಎಂದು ಯೋಚಿಸುತ್ತೇನೆ.

          ಹೀಗೆ ಸಂಭಾಷಣೆಗೊಂದು ವೇದಿಕೆ ಸಿಕ್ಕರೂ ಸಿಗದಿದ್ದರೂ ಮಾತು ಒಮ್ಮೆ ವ್ಯಕ್ತವಾಗಿ, ಇನ್ನೊಮ್ಮೆ ಶ್ರಾವ್ಯವಾಗಿ, ಕೆಲವೊಮ್ಮೆ ಮೌನವೂ ಆಗಿ ತನ್ನದೇ ಆದ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತದೆ. ಸಿನೆಮಾದ ನಾಯಕನೊಬ್ಬ ಫೈಟ್ ಮಾಸ್ಟರ್ ನ ಮಾತನ್ನು ಆಕ್ಷನ್ ಗಿಳಿಸಿದರೆ, ರಂಗಭೂಮಿಯ ಮಾತೊಂದು ತಾನೇ ನಟನೆಗಿಳಿದು ಥಿಯೇಟರನ್ನು ತುಂಬಿಕೊಳ್ಳುತ್ತದೆ; ಪುಟ್ಟ ಕಂದನ ಅಳುವೊಂದು ಹಸಿವಿನ ಮಾತನ್ನು ಅಮ್ಮನಿಗೆ ತಲುಪಿಸುವಾಗ, ಅಮ್ಮನ ಪ್ರೇಮದ ಮಾತೊಂದು ಎದೆಯ ಹಾಲಾಗಿ ಮಗುವನ್ನು ತಲುಪುತ್ತದೆ; ಬಸ್ಸಿನ ಟಿಕೆಟಿನಲ್ಲಿ ಪೇಪರಿನ ನೋಟುಗಳು ಮಾತನಾಡಿದರೆ, ಕಂಡಕ್ಟರ್ ನ ಶಿಳ್ಳೆಯ ಮಾತು ಡ್ರೈವರ್ ನ ಕಿವಿಯನ್ನು ಅಡೆತಡೆಗಳಿಲ್ಲದೇ ತಲುಪುತ್ತದೆ. ಅಪ್ಪನ ಕಣ್ಣುಗಳ ಕಳಕಳಿ, ಪ್ರೇಮಿಯ ಹೃದಯದ ಕಾಳಜಿ, ಸರ್ಜರಿಗೆ ಸಿದ್ಧರಾದ ವೈದ್ಯರ ಏಕಾಗ್ರತೆ, ಪರೀಕ್ಷಾ ಕೊಠಡಿಯ ಪೆನ್ನಿನ ಶಾಯಿ ಎಲ್ಲವೂ ಮಾತುಗಳಾಗಿ ತಲುಪಬೇಕಾದ ಸ್ಥಳವನ್ನು ನಿರಾತಂಕವಾಗಿ ತಲುಪಿ ಸಂವಹನವೊಂದು ಅಚ್ಚುಕಟ್ಟಾಗಿ ರೂಪುಗೊಳ್ಳುತ್ತದೆ.

          ಹೀಗೆ ಬೆರಗಿನ ಲೋಕವೊಂದನ್ನು ನಮ್ಮೆದುರು ತೆರೆದಿಡುತ್ತಾ, ತಾನೂ ಬೆಳೆಯುತ್ತ ನಮ್ಮನ್ನೂ ಬೆಳೆಸುವ ಸಂವಹನವೆನ್ನುವ ಸಂವೇದನೆಯೊಂದು ಮಾತಾಗಿ ಅರಳಿ ಮನಸ್ಸುಗಳನ್ನು ತಲುಪುತ್ತಿರಲಿ. ಪ್ರೈಮರಿ ಸ್ಕೂಲಿನ ಅಂಗಳದ ಮಲ್ಲಿಗೆಯ ಬಳ್ಳಿಯೊಂದು ಟೀಚರಿನ ಕಂಠದ ಮಾಧುರ್ಯಕ್ಕೆ ತಲೆದೂಗುತ್ತಿರಲಿ. ಭಕ್ತರ ಮಾತುಗಳನ್ನೆಲ್ಲ ತಪ್ಪದೇ ಆಲಿಸುವ ದೇವರ ಮೌನವೊಂದು ಶಾಂತಿಯ ಮಂತ್ರವಾಗಿ ಹೃದಯಗಳನ್ನು ಅರಳಿಸಲಿ. ಸಕಲ ಬಣ್ಣಗಳನ್ನೂ ಧರಿಸಿದ ಟಿವಿ ಪರದೆಯ ಪಾತ್ರಗಳೆಲ್ಲ ಪ್ರೀತಿ-ವಿಶ್ವಾಸಗಳ ಮಧ್ಯವರ್ತಿಗಳಾಗಿ ಮಾತಿನ ಮೂಲಕ ಮಮತೆಯನ್ನು ಬಿತ್ತರಿಸಲಿ. ನಾಚಿ ನೀರಾಗುತ್ತಿದ್ದ ಸಂಸ್ಕೃತ ಶಿಕ್ಷಕರ ಶಕುಂತಲೆಯ ಪ್ರೇಮಕ್ಕೆಂದೂ ಪರೀಕ್ಷೆಯ ಸಂಕಷ್ಟ ಎದುರಾಗದಿರಲಿ. ಕಲಿತ ಮಾತುಗಳೆಲ್ಲ ಪ್ರೀತಿಯಾಗಿ, ಪ್ರೀತಿಯೊಂದು ಹೃದಯಗಳ ಮಾತಾಗಿ, ಹೃದಯಗಳೊಂದಿಗಿನ ಸಂವಹನವೊಂದು ಸಂಬಂಧಗಳನ್ನು ಸಲಹುತ್ತಿರಲಿ.

***************************************

ಲೇಖಕರ ಬಗ್ಗೆ ಎರಡು ಮಾತು:

ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

11 thoughts on “

  1. ಮಾತಿನ ಮಹತ್ವದ ಕುರಿತು ಹೇಳುತ್ತಲೇ ಅದರ ನಿರರ್ಥಕತೆ ಯನ್ನೂ …, ಮೌನ ಸಂವೇದನೆಯನ್ನು…, ಸಂವಹನನದಲ್ಲಿ ಮಾತಿನ ಸಾರ್ಥಕತೆಯನ್ನೂ.. ಹೀಗೆ ಎಲ್ಲವನ್ನೂ ಹೇಳ ಹೊರಟ ಬರಹ..

    1. ನೀವು ಓದುವ ರೀತಿಗೆ, ಅದರ ಪ್ರೀತಿಗೆ ಶರಣಾಗಿದ್ದೇನೆ !!

  2. ಮಾತು. ಮಾತು. ಮಾತು.
    ‘ಮಾತು ಬೆಳ್ಳಿ ಮೌನ ಬಂಗಾರ’ ‘ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು’ ಇಂತಹ ಗಾದೆಗಳನ್ನು ನಿಮ್ಮ ಬರಹಕ್ಕೆ ನಿವಾಳಿಸಿ ಒಗೆಯಬೇಕು.
    ಬಾಯಿ ಇದ್ದರೆ ತಾಯಿ ಇದ್ದಂತೆ. ಮಾತಿನ ಮಹತ್ವ ಹೇಳುವ ಸಾಲು ನೆನಪಾಯಿತು

Leave a Reply

Back To Top