ಧಾರಾವಾಹಿ ಸಂಗಾತಿ-22 ಅರ್ಜುನ ಉವಾಚ ವಿಶ್ವನಾಥ್ ಎನ್ ನೇರಳೆಕಟ್ಟೆ ಸುಧನ್ವನ ಸಾಹಸವದು ಸೂರೆಗೊಂಡಿತು ನಮ್ಮ ಸೇನೆಯನು ಈಗ ಪಶ್ಚಾತ್ತಾಪ ಭಾವ ಮೂಡಿತು ಪುರೋಹಿತ ಲಿಖಿತನಲ್ಲಿ. ಕೃಷ್ಣಭಕ್ತನಾದ ಸುಧನ್ವನಿಗೆ ತೊಂದರೆ ಆಗಲೆಂದು ಬಯಸಿದ ತನಗೆ ಮರಣವೇ ಸರಿಯಾದ ಶಿಕ್ಷೆ ಎಂಬ ಭಾವನೆ ಮೂಡಿತ್ತು ಅವನಲ್ಲಿ. ಸುಧನ್ವನಿದ್ದ ಆ ಎಣ್ಣೆ ಕೊಪ್ಪರಿಗೆಗೆ ಜಿಗಿದ. ಕೃಷ್ಣಭಕ್ತನ ಸಂಗದ ಘನಪರಿಣಾಮದಲಿ ಉಷ್ಣಾತಿಉಷ್ಣ ತೈಲದಲಿ ಬಿದ್ದರೂ ಸಹ ಲಿಖಿತ ಉಷ್ಣರಹಿತ ಸ್ಥಿತಿಯನ್ನು ಅನುಭವಿಸಿದ. ತಂಪುತಂಪಾದ ಕೊಳದಂತೆ ಭಾಸವಾಯಿತು ಆ ಕೊಪ್ಪರಿಗೆಯ ಒಳಗು ಅವನಿಗೆ. ಅರಸ ಹಂಸಧ್ವಜನಿಗೆ ನಂಬಲಸಾಧ್ಯವಾದ ವಿಸ್ಮಯವಾಯಿತು. ಒಡನೆ ಬಂದವನು ಸುಧನ್ವ ಲಿಖಿತ ಇಬ್ಬರನ್ನೂ ಪ್ರೀತಿಯಿಂದ ಆಲಂಗಿಸಿಕೊAಡ. “ನಿನ್ನ ಮಗನ ದೆಸೆಯಿಂದ ನಮ್ಮ ಈ ನಗರ ಧನ್ಯವಾಯಿತಿಂದು” ಎಂದು ಹಂಸಧ್ವಜನಲ್ಲಿ ಸುಧನ್ವನನ್ನು ಮನಸಾರೆ ಹೊಗಳಿದ ಲಿಖಿತ. ಕೃಷ್ಣಲೀಲೆಗೆ ಪಾತ್ರನಾದ ಸುಧನ್ವ ಈಗ ವೀರಾಗ್ರಣಿಯ ಪಾತ್ರ ಧರಿಸಿ ರಣರಂಗಪ್ರವೇಶ ಮಾಡಿದ. ಈ ಮೊದಲು ಮಗನನ್ನು ತೆಗಳಿದ್ದ ಹಂಸಧ್ವಜನಲ್ಲಿ ಈಗ ಅದೇ ಮಗನ ಬಗೆಗೆ ಹೆಮ್ಮೆಯ ಭಾವನೆಯಿತ್ತು. ಮಕ್ಕಳಾದವರ ಬದುಕಿನ ನಿಜ ಸಾರ್ಥಕತೆಯಿದು ಎನಿಸಿತು ನನಗೆ ಆ ಕ್ಷಣದಲ್ಲಿ. ತಂದೆ ತಾಯಿ ಅವರಿವರಲ್ಲಿ ಹೇಳಿಕೊಂಡು ಹೆಮ್ಮೆಪಡುವಂತಹ ರೀತಿಯಲ್ಲಿ ಬದುಕುವುದಕ್ಕಿಂತ ಮಿಗಿಲಾದದ್ದು ಏನಿದೆ ಮಕ್ಕಳ ಪಾಲಿಗೆ! ಹಂಸಧ್ವಜನ ಆ ಪ್ರೌಢ ಮೊಗದಲ್ಲಿ ಸಂತಸದ ಭಾವ ತಾಂಡವವಾಡುತ್ತಿತ್ತು. ತಂದೆಯ ಚರಣಕ್ಕೆ ನಮಿಸಿದ ಸುಧನ್ವ ಯುದ್ಧಕ್ಕೆ ಸಿದ್ಧನಾಗಿ ಚತುರಂಗ ಬಲವನ್ನು ನಮ್ಮೆಡೆಗೆ ಮುನ್ನಡೆಸಿದ. ಮುಂದೆ ಮುಂದೆ ಬಂದ ಸೇನೆ ನಮ್ಮ ಕುದುರೆಯನ್ನು ಹಿಡಿಯಿತು. ತಕ್ಷಣವೇ ಪದ್ಮವ್ಯೂಹವನ್ನು ರಚಿಸಿದರು ಚಂಪಕಾಪುರಿಯ ಸೈನಿಕರು. ಆ ವ್ಯೂಹದೊಳಗೆ ಬಂಧಿಯಾಯಿತು ನಮ್ಮ ಕುದುರೆ. ಈ ವಿಚಾರ ತಿಳಿದ ತಕ್ಷಣವೇ ನಾನು ಹೊರಳಿದ್ದು ಶ್ರೀಕೃಷ್ಣ ಸುತನೆಡೆಗೆ. ವಿಷಯ ತಿಳಿಸಿದೆ. ಮಾಡಬಹುದೇನೀಗ ಎಂದು ಕೇಳಿದೆ. ಕೆಲವೊಮ್ಮೆ ಹಾಗೆಯೇ, ಬದುಕೆಂಬ ಯುದ್ಧರಂಗದಲ್ಲಿ ಅನುಭವಕ್ಕಿಂತಲೂ ಕಿರಿಯರ ತಕ್ಷಣದ ಸಲಹೆಯೇ ಮುಖ್ಯ ಎನಿಸಿಬಿಡುತ್ತದೆ. ತಾನೊಬ್ಬನೇ ಪದ್ಮವ್ಯೂಹವನ್ನು ಹೊಕ್ಕು ಕುದುರೆಯನ್ನು ಬಿಡಿಸಿ ತರುತ್ತೇನೆ ಎಂಬ ಧೀರನುಡಿಯನ್ನಾಡಿದ ಪ್ರದ್ಯುಮ್ನ. ಅವನಿಗೊಂದು ಅವಕಾಶ ಕೊಟ್ಟುನೋಡುವುದು ಒಳ್ಳೆಯದು ಎನಿಸಿತು. ಅಷ್ಟರಲ್ಲಿ ಬಳಿಬಂದ ಕರ್ಣಸುತ ವೃಷಕೇತು “ಇಂದಿನ ಯುದ್ಧವಿದು ನನ್ನನ್ನು ಸೆಳೆಯುತ್ತಿದೆ. ಶತ್ರುಸೇನೆಯನ್ನು ಪುಡಿಗಟ್ಟಿ ಕುದುರೆಯನ್ನು ತಾರದೇ ಹೋದರೆ ನಾನು ಕರ್ಣನಿಗೆ ಜನಿಸಿದವನೇ ಅಲ್ಲ” ಎಂದ. ಪ್ರದ್ಯುಮ್ನನ ಮಾತಿಗಿಂತಲೂ ಇವನ ಮಾತಿನಲ್ಲಿ ಬಿರುಸು ಅಧಿಕವಿದೆ ಎನಿಸಿತು. ಅವನನ್ನೇ ಕಳುಹಿಸಿಕೊಟ್ಟೆ ಸುಧನ್ವನಿಗೆ ಎದುರಾಗಿ. ಯುದ್ಧಕ್ಕೆ ಹೋದ ವೃಷಕೇತುವಿನ ಗುರುತು ಮೊದಲಿಗೆ ಸಿಗಲಿಲ್ಲ ಸುಧನ್ವನಿಗೆ. ಕೇಳಿದ. “ನೀನಾರು? ಯಾರ ಮಗ? ಯಾವ ಕುಲ ನಿನ್ನದು?” ಕುಲದ ಪ್ರಶ್ನೆಯೆತ್ತಿದ್ದಕ್ಕೆ ಘಟಾನುಘಟಿಗಳ ಎದುರೇ ಸಿಡಿದುನಿಂತವನು ಕರ್ಣ. ಅವನ ಮಗನಾದ ವೃಷಕೇತುವಿನಲ್ಲಿಯೂ ಕಾಣಿಸಿಕೊಂಡಿತು ಅದೇ ಬಗೆಯ ಅಸಮಾಧಾನ, ಸುಧನ್ವ ಪ್ರಶ್ನೆ ಕೇಳಿದಾಗ. “ನಯನಕ್ಕೆ ಅಗೋಚರವಾಗಿರುವ ಹೂವೊಂದು ಪರಿಮಳವನ್ನು ಪಸರಿಸುತ್ತದೆ. ಕುಲ ಯಾವುದು ಎನ್ನುವುದು ಅರಿವಿಗೆ ಬರಬೇಕಾದದ್ದು ಪೌರುಷದಿಂದಲೇ ಹೊರತು ಬೇರಾವುದರಿಂದಲೂ ಅಲ್ಲ. ನಿನಗೆ ನನ್ನ ಗುರುತು ಇಲ್ಲವೆಂದ ಮಾತ್ರಕ್ಕೆ ನಾನು ಪರಾಕ್ರಮ ತೋರಿಸದೇ ಇರುವವನಲ್ಲ” ಎಂದ ಕರ್ಣತನಯ. ನನಗವನ ಮಾತು ಸರಿಯೆಂದು ತೋರಿತು. ಕುಲದ ಪ್ರಶ್ನೆಯನ್ನು ಮುಂದಿಟ್ಟುಕೊAಡು ಅವಕಾಶವನ್ನು ಕೊಡುವುದಾಗಲೀ, ಅವಕಾಶವನ್ನು ನಿರಾಕರಿಸುವುದಾಗಲೀ ಸರಿಯಲ್ಲ. ಕುಲವನ್ನು ಇನ್ನೊಬ್ಬರು ಹೇಳಿಕೊಳ್ಳಬೇಕಾದ ಅಗತ್ಯವೂ ಇಲ್ಲ. ಯುದ್ಧಕ್ಕಿಳಿದರು ಸುಧನ್ವ ವೃಷಕೇತು. ಇದ್ದವರೆಲ್ಲರೂ ಅಚ್ಚರಿಯಿಂದ ನೋಡುವ ತೆರದಲ್ಲಿ ಶೌರ್ಯಭರಿತವಾಗಿ ಕದನ ನಡೆಯಿತು. ಹಂಸಧ್ವಜಸುತ ಪ್ರಯೋಗಿಸಿದ ಬಾಣಗಳು ಕರ್ಣಸುತನ ಶರೀರದೆಲ್ಲೆಡೆ ನಾಟಿ ಅವನನ್ನು ಅತೀವವಾಗಿ ಜರ್ಜರಿತಗೊಳಿಸಿದವು. ಪ್ರಜ್ಞೆ ಕಳೆದುಕೊಂಡ ವೃಷಕೇತು. ಸುಧನ್ವನ ಗೆಲುವಿಗೆ ಪ್ರಜ್ಞೆಬಂತು. ರಥವನ್ನು ತಿರುಗಿಸಿದ ಸಾರಥಿ ವೃಷಕೇತುವಿನ ಜೀವವನ್ನು ಉಳಿಸಿದ. ಆಗಲೇ ಸುಧನ್ವನೆದುರು ಹೋಗಿ ಕದನಕ್ಕೆ ಮನಮಾಡಿದ ಪ್ರದ್ಯುಮ್ನ. ಎಂಟು ಬಾಣಗಳು ಸಿಡಿದು ಬಂದವು ಕೃಷ್ಣಪುತ್ರನೆಡೆಗೆ, ಹಂಸಧ್ವಜಪುತ್ರನ ಬಿಲ್ಲಿನಿಂದ. ಪ್ರದ್ಯುಮ್ನನೂ ಅದೇ ಬಗೆಯ ಉತ್ತರವಿತ್ತ. ಅವನ ಪ್ರತಿಕ್ರಿಯೆಯನ್ನು ಸಹಿಸುವುದಕ್ಕಾಗಲಿಲ್ಲ ಸುಧನ್ವನಿಗೆ. “ಕೃಷ್ಣಸುತ ನೀನೆಂದು ಇದುವರೆಗೂ ಸಹಿಸಿದೆ. ಇನ್ನು ನಾನು ಸಹಿಸುವವನಲ್ಲ. ನನ್ನ ಬಾಣವದು ಬಾಯಾರಿದೆ. ನಿನ್ನೊಡಲಲ್ಲಿ ಕೆಂಪುಜಲವಿದೆ. ನನ್ನ ಬಾಣಕ್ಕೆ ಆ ಜಲವನ್ನು ಕುಡಿಸದೆ ಬಿಡುವವನಲ್ಲ” ಎಂದು ಹೇಳುತ್ತಲೇ ಪ್ರದ್ಯುಮ್ನನ ಬಾಣವನ್ನು ಏಳು ತುಂಡುಗಳಾಗಿ ಕತ್ತರಿಸಿದ. ಸುಧನ್ವ ಶೌರ್ಯದ ಮುಂದೆ ಪ್ರದ್ಯುಮ್ನ ಪರಾಕ್ರಮವದು ಕಳೆಗುಂದಿತು. ಸುಧನ್ವನನ್ನು ಸೋಲಿಸದೆಯೇ ಮರಳುವವರಲ್ಲ ಎಂದು ವೀರಾವೇಷದಿಂದ ಹೋದ ಕೃತವರ್ಮ ಸೋಲಿನ ಮುಖ ಹೊತ್ತು ಮರಳುವಂತಾಯಿತು. ಅನುಸಾಲ್ವನ ಸಾಮರ್ಥ್ಯವದು ಸಾಲದೇ ಹೋಯಿತು. ನಮ್ಮ ಸೇನೆಯನ್ನು ಸಂಪೂರ್ಣವಾಗಿ ಸೂರೆಗೊಳ್ಳುವ ಹುಮ್ಮಸ್ಸಿನಲ್ಲಿದ್ದಾನೆ ಆತ ಎನ್ನುವುದು ಗೊತ್ತಾಗುತ್ತಿತ್ತು. ನಮ್ಮ ಕಡೆಯ ವೀರಾಧಿವೀರರನ್ನು ಬಹುಬೇಗ ಕೊನೆಗಾಣಿಸಿ ಕ್ಷಿಪ್ರವಾಗಿ ಕೃಷ್ಣದರ್ಶನಗೈಯ್ಯುವ ಉತ್ಸುಕತೆ ಸುಧನ್ವನಲ್ಲಿ ಇದ್ದಂತಿತ್ತು. ಜೀವ ಕಳೆದುಕೊಂಡು ನೆಲದ ಮೇಲೆ ಬಿದ್ದಿದ್ದ ನಮ್ಮ ಸೇನೆಯ ಆನೆ ಕುದುರೆ ರಥ ಸೈನಿಕರು ಎಲ್ಲವೂ ಎಲ್ಲರೂ ಸಾರಿ ಸಾರಿ ಹೇಳುತ್ತಿದ್ದುದು ಗಗನದೆತ್ತರವಾಗಿದ್ದ ಸುಧನ್ವ ಪರಾಕ್ರಮವನ್ನು. ಬರಿಯ ಕೃಷ್ಣಭಕ್ತ ಇವನಲ್ಲ, ಯುದ್ಧದಲ್ಲಿ ಸರ್ವಶಕ್ತ ಎಂದೆನಿಸಿತು ನನಗೆ. ಆದರೂ ನನ್ನ ಶಕ್ತಿಗೆ ಸಮನಲ್ಲ ಎಂಬ ಮೇಲರಿಮೆಯ ಭಾವವೂ ಮೂಡಿತು. ಇನ್ನು ನಾನು ಯುದ್ಧರಂಗವನ್ನು ಪ್ರವೇಶಿಸದಿದ್ದರೆ ಗೆಲುವು ದೊರೆಯುವಂಥದ್ದಲ್ಲ ಎಂದು ಹೇಳುತ್ತಿತ್ತು ನನ್ನ ಅಂತರಂಗ. ಸುಧನ್ವನನ್ನು ಎದುರಿಸಲು ಸಜ್ಜಾದೆ… ಡಾ. ವಿಶ್ವನಾಥ ಎನ್ ನೇರಳಕಟ್ಟೆ
“ರೈತ ನೀಡಿದ ಕೃತಜ್ಞತೆಯ ಪಾಠ” ವೀಣಾ ಹೇಮಂತ್ ಗೌಡ ಪಾಟೀಲ್
ವಿಶೇಷ ಸಂಗಾತಿ “ರೈತ ನೀಡಿದ ಕೃತಜ್ಞತೆಯ ಪಾಠ” ವೀಣಾ ಹೇಮಂತ್ ಗೌಡ ಪಾಟೀಲ್ ನಮ್ಮ ಪುಣ್ಯ ಭರತ ಭೂಮಿಯ ಹಳ್ಳಿಯೊಂದರಲ್ಲಿ ಓರ್ವ ರೈತ ವಾಸವಾಗಿದ್ದ. ಆತನ ಕೈಗಳು ಭೂಮಿಯಿಂದ ಆತನನ್ನು ಎಳೆದು ತೆಗೆದಂತೆ ತಿರುಚಿದ್ದವು ಆತನ ಬೆನ್ನು ಬಿಲ್ಲಿನಂತೆಬಾಗಿತ್ತು. ಅತ್ಯಂತ ವಯಸ್ಸಾಗಿದ್ದ ಆತ ಒಬ್ಬನೇ ವಾಸಿಸುತ್ತಿದ್ದ. ತನ್ನವರೆಲ್ಲರನ್ನು ಕಳೆದುಕೊಂಡ ಆತನಿಗೆ ಒಂಟಿ ಜೀವನ ಅಭ್ಯಾಸವಾಗಿತ್ತು.ಅದೊಂದು ಸುಗ್ಗಿಯ ದಿನ ಸತತವಾಗಿ ಕೆಲಸ ಮಾಡಿ ಮರಳಿಮನೆಗೆ ಬಂದ ಆತನ ದೇಹದಿಂದ ಬೆವರಿನ ವಾಸನೆ ಹಾಗೂ ಆತನ ಬಟ್ಟೆಗೆ ಮೆತ್ತಿದ ಹಸಿ ಮಣ್ಣಿನ ವಾಸನೆ ಇನ್ನಿಲ್ಲದಂತೆ ಅಂಟಿಕೊಂಡಿತ್ತು. ಮನೆಯ ಹಿತ್ತಲಿನ ಬಾವಿಯ ಬಳಿ ಕೈಕಾಲು ಮುಖವನ್ನು ತೊಳೆದ ಆತ ತನ್ನ ಸ್ನೇಹಿತನಿಗೂ ನೀರು ಕೊಟ್ಟು ಉಪಚರಿಸಿದ… ನಂತರ ಸ್ನೇಹಿತನೊಂದಿಗೆ ಅಡುಗೆಮನೆಯ ಮೇಜಿನ ಮೇಲೆ ಕುಳಿತ. ಮುಂಜಾನೆ ತಾನೇ ಮಾಡಿಟ್ಟ ಅಡುಗೆ ಅಲ್ಲಿತ್ತು.ತಟ್ಟೆಯಲ್ಲಿ ಬಡಿಸಿಕೊಂಡ ಆತ ಊಟವನ್ನು ಸೇವಿಸುವ ಮುನ್ನ ಎಂದಿನಂತೆ ತನ್ನ ತಲೆಯನ್ನು ಬಾಗಿಸಿ ಕೆಲ ಪ್ರಾರ್ಥನೆಯ ಮಂತ್ರಗಳನ್ನು ನಿಧಾನವಾಗಿ ಪಠಿಸಿದ. ನಂತರ ತನ್ನ ಜೊತೆಗೆ ಬಂದಿದ್ದ ಸ್ನೇಹಿತನೊಂದಿಗೆ ಕುಳಿತು ಊಟ ಮಾಡಿದ. ಊಟಕ್ಕೂ ಮುನ್ನ ತಮ್ಮ ರೈತ ಸ್ನೇಹಿತ ತಲೆಬಾಗಿ ಪ್ರಾರ್ಥನೆ ಮಾಡಿದ್ದನ್ನು ನೋಡಿದ ಆತನ ಸ್ನೇಹಿತನಿಗೆ ಇನ್ನು ತಡೆಯಲಾಗಲಿಲ್ಲ..ಗೆಳೆಯ… ಊಟಕ್ಕೆ ಮುನ್ನ ಪ್ರಾರ್ಥನೆಯ ಅಗತ್ಯ ಇದೆಯೇ? ಇದೆಲ್ಲವನ್ನು ನೀನು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಿಂದ ಪಡೆದದ್ದು ಮತ್ತೇಕೆ ದೇವರನ್ನು ಪ್ರಾರ್ಥಿಸುವೆ ಎಂದು ಗೆಳೆಯನನ್ನು ಪ್ರಶ್ನಿಸಿದ.ತಾನು ಕುಳಿತುಕೊಂಡಿದ್ದ ಸಾಕಷ್ಟು ಶಿಥಿಲವಾಗಿದ್ದ ಕುರ್ಚಿಯಿಂದ ತುಸು ಮುಂದಕ್ಕೆ ಬಾಗಿದ ಆ ರೈತ ನಿಧಾನವಾಗಿ ಎದ್ದು ನಿಂತನು. ಕಿಟಕಿಯ ಬಳಿ ತೆರಳಿ ತನ್ನ ಎರಡು ಕೈಗಳನ್ನು ಬಳಸಿ ಕಿಟಕಿಯ ಕಂಬಿಯನ್ನು ಗಟ್ಟಿಯಾಗಿ ಹಿಡಿದನು. ಮುಖದಲ್ಲಿ ಪುಟ್ಟದಾದ ನಗುವೊಂದನ್ನು ಹೊತ್ತು ದೂರದಲ್ಲಿ ಕಾಣುತ್ತಿದ್ದ ತನ್ನ ಹೊಲವನ್ನು ಸ್ನೇಹಿತನಿಗೆ ತೋರಿಸಿ ಅತ್ಯಂತ ಶಾಂತವಾಗಿ ಹೇಳಿದ. ಗೆಳೆಯ…ನಾನು ಹೊಲದಲ್ಲಿ ಕೆಲಸ ಮಾಡಲು ಸಾಧ್ಯ, ಆದರೆ ಮಳೆ ಬರಿಸಲು ನನ್ನಿಂದ ಸಾಧ್ಯವಿಲ್ಲ. ನನಗೆ ಬೀಜವನ್ನು ಬಿತ್ತಲು ಸಾಧ್ಯ ಆದರೆ ಆ ಬೀಜಕ್ಕೆ ಮೊಳೆತು ಬೆಳೆ ಎಂದು ಅಜ್ಞಾಪಿಸಲು ಸಾಧ್ಯವಿಲ್ಲ. ನನ್ನ ಕೈಗಳು ಕೆಲಸವನ್ನು ನಿರ್ವಹಿಸುತ್ತದೆ ಎಂಬುದೇನೋ ಖಂಡಿತವಾಗಿಯೂ ನಿಜ, ಆದರೆ ಚಮತ್ಕಾರವನ್ನು ಮಾಡಲು ಅಗೋಚರ ಶಕ್ತಿಗೆ ಮಾತ್ರ ಸಾಧ್ಯ ಎಂದು ಹೇಳಿ ದೀರ್ಘವಾದ ಉಸಿರನ್ನು ತೆಗೆದುಕೊಂಡ.ಆತನ ಕಣ್ಣುಗಳಲ್ಲಿ ಪ್ರಶಾಂತತೆ ತುಂಬಿ ತುಳುಕುತ್ತಿತ್ತು.ಒಂದೆರಡು ಕ್ಷಣಗಳ ವಿರಾಮವನ್ನು ತೆಗೆದುಕೊಂಡ ಆತ ಇದೆಲ್ಲ ಚಮತ್ಕಾರವನ್ನು ಬೇರೊಬ್ಬರು ಮಾಡುತ್ತಿದ್ದಾರೆ…. ಪ್ರಾರ್ಥಿಸುವ ಮೂಲಕ ನಾನು ನನ್ನ ಕೆಲಸ ಯಾವುದು ಎಂಬುದನ್ನು ಅರಿತುಕೊಳ್ಳುತ್ತೇನೆ. ಉಪಕಾರ ಸ್ಮರಣೆ ಮಾಡುವುದರ ಮೂಲಕ ನನ್ನ ಮೇಲೆ ಕೃಪೆಯನ್ನು ತೋರುವ ಆ ಭಗವಂತನನ್ನು ನಾನು ನೆನೆಯದಿದ್ದರೆ ಹೇಗೆ ? ಆದ್ದರಿಂದಲೇ ಆ ಕಾಣದ ಕೈಗಳಿಗೆ, ಅಗೋಚರ ಶಕ್ತಿಗೆ ಪ್ರಾರ್ಥನೆಯ ಮಾಡುವ ಮೂಲಕ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಇದು ನನ್ನ ಆದ್ಯ ಕರ್ತವ್ಯ ಎಂದು ತನ್ನ ಮಾತನ್ನು ಪೂರ್ಣಗೊಳಿಸಿದನು.ಆತ ಹೇಳಿದ ಮಾತುಗಳನ್ನು ನಾವೆಂದೂ ಮರೆಯಬಾರದು. ಎಲ್ಲರ ಬದುಕು ಅಷ್ಟೇ ಸರಳವಾಗಿ ಇರುವುದಿಲ್ಲ. ಅದರಲ್ಲೂ ಬಿರುಗಾಳಿ, ನೆರೆ, ಭೀಕರ ಕ್ಷಾಮ ಇದ್ದೇ ಇರುತ್ತವೆ. ರೈತನ ಬದುಕಂತೂ ಅನಿಶ್ಚಿತತೆಯ ಹಾದಿಯಲ್ಲಿ ಸಾಗುತ್ತದೆ. ಬಿತ್ತಿದ ಬೆಳೆಗೆ ಸಾಕಷ್ಟು ಮಳೆ ಬೀಳದೆ ಹೋಗಬಹುದು ಫಸಲು ಕೈಗೆ ಬರುವುದರಲ್ಲಿಯೇ ಹಾಳಾಗಿ ಹೋಗಬಹುದು ಫಸಲಿಗೆ ಒಳ್ಳೆಯ ಬೆಲೆ ಸಿಕ್ಕದೆ ಹೋಗಬಹುದು. ಆತನ ಹೊರೆಗಳು ಮತ್ತಷ್ಟು ಹೆಚ್ಚಾಗುತ್ತವೆಯೇ ಹೊರತು ಕಡಿಮೆಯಾಗುವುದು ಸಾಧ್ಯವಿಲ್ಲ…ಆದರೂ ಕೂಡ ಪ್ರತಿದಿನ ಮುಂಜಾನೆ ಆತ ಬೇಗನೆ ಏಳುವುದನ್ನು ತಪ್ಪಿಸುವುದಿಲ್ಲ. ತನ್ನ ಅನಿಶ್ಚಿತ ಬದುಕಿನ ಕುರಿತು ಆತನಿಗೆ ಬೇಸರವಿಲ್ಲ… ಆದರೂ ಆತ ದೇವರಿಗೆ ಸದಾ ಕೃತಜ್ಞನಾಗಿರುತ್ತಾನೆ. ತನಗೆ ಉಸಿರು ಕೊಟ್ಟದ್ದಕ್ಕಾಗಿ, ತನ್ನಲ್ಲಿ ಸಾಮರ್ಥ್ಯವನ್ನು ತುಂಬಿದ್ದಕ್ಕಾಗಿ ಮತ್ತೆ ತನ್ನ ಹೊಲದಲ್ಲಿ ತಾನು ನಡೆದು ಓಡಾಡಲು ಅವಕಾಶವನ್ನು ಕಲ್ಪಿಸಿದ್ದಕ್ಕಾಗಿ ಆತ ದೇವರಿಗೆ ಸದಾ ಕೃತಜ್ಞನಾಗಿರುತ್ತಾನೆ. ಅಂತಹ ಒಂದು ಶಾಂತವಾದ, ಸಂತೃಪ್ತವಾದ, ಕೃತಜ್ಞತಾ ಭಾವದ ಮನಸ್ಥಿತಿಯಲ್ಲಿ ಆತ ತನ್ನ ಬದುಕಿನಲ್ಲಿ ಅದೆಷ್ಟೇ ದೊಡ್ಡ ಪ್ರಮಾಣದ ಬಿರುಗಾಳಿ ಬೀಸಿದರೂ ಅಚಲವಾಗಿ ನಿಲ್ಲುವ ಸಾಮರ್ಥ್ಯವನ್ನು ಹೊಂದುತ್ತಾನೆ. ಸ್ನೇಹಿತರೆ, ಕೃತಜ್ಞತೆ ಎನ್ನುವುದು ನಮಗೆ ಬಲಹೀನತೆಯಾಗಿ ತೋರಬೇಕಾಗಿಲ್ಲ ಕೃತಜ್ಞತೆಯನ್ನು ತೋರುವುದು ಅಂಧ ವಿಶ್ವಾಸವಂತೂ ಖಂಡಿತವಾಗಿ ಅಲ್ಲ. ಎಲ್ಲಾ ಆಶಾಶ್ವತತೆಗಳ ನಡುವೆ ಅತ್ಯಂತ ವಿನಮ್ರತೆಯಿಂದ ರೂಪುಗೊಂಡ ಶಕ್ತಿ ಹಾಗೂ ಸಾಮರ್ಥ್ಯವೇ ಕೃತಜ್ಞತೆಯಾಗಿರುತ್ತದೆ. ಬದುಕಿನ ಅನಿಶ್ಚಿತತೆಗಳ ನಡುವೆಯೂ ಕೂಡ ನಮಗೆ ಬದುಕು ಕೊಟ್ಟ ಎಲ್ಲ ಅವಕಾಶಗಳನ್ನು ಗೌರವ ಪೂರ್ವಕವಾಗಿ ನೆನೆಯಲು ನಾವು ಆಯ್ದುಕೊಳ್ಳುವ ಒಂದು ವಿಧಾನವಾಗಿರುತ್ತದೆ. ಏನಂತೀರಾ ಸ್ನೇಹಿತರೆ ? ವೀಣಾ ಹೇಮಂತ್ ಗೌಡ ಪಾಟೀಲ್
“ರೈತ ನೀಡಿದ ಕೃತಜ್ಞತೆಯ ಪಾಠ” ವೀಣಾ ಹೇಮಂತ್ ಗೌಡ ಪಾಟೀಲ್ Read Post »
“ಸಂಗಮ”ತೆಲುಗು ಕವಿತೆ,ಮೂಲ ಡಾ. ದೇವರಾಜು ಮಹಾರಾಜು ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು
ಅನುವಾದ ಸಂಗಾತಿ “ಸಂಗಮ” ತೆಲುಗು ಕವಿತೆ, ಮೂಲ ಡಾ. ದೇವರಾಜು ಮಹಾರಾಜು ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು ಒಂದೊಂದು ಪದವನ್ನೇ ಆಯ್ದುಕೊಳ್ಳುತ್ತಾ ಆಯ್ದುಕೊಳ್ಳುತ್ತಾ ಪುಟ್ಟಮಗು ಬೆಂಕಿಪೆಟ್ಟಿಗೆಯ ರೈಲುಗಾಡಿಯನ್ನು ತಯಾರುಮಾಡಿದಂತೆ ನಾನೊಂದುಬ ವಾಕ್ಯವನ್ನು ತಯಾರುಮಾಡುತ್ತೇನೆ ವಿಚಿತ್ರ? ಅದು ತಯಾರಾದಕೂಡಲೇ ದ್ರವರೂಪವನ್ನು ಅಳವಡಿಸಿಕೊಳ್ಳುತ್ತದೆ ಅಷ್ಟೇಅಲ್ಲ, ಪ್ರವಾಹವೇಗದಿಂದ ಸಾಗುತ್ತದೆ ಅದರಜೊತೆಗೆ ನಾನೋ, ನನ್ನಜೊತೆಗೆ ಅದೋ ತಿಳಿಯದಂತೆ ನಾವಿಬ್ಬರೂ ಕವನ ಸಮುದ್ರದಲ್ಲಿ ಭೇಟಿ ಆಗುತ್ತೇವೆ ಮನಸ್ಸಿನಲ್ಲಿ ಸುಳಿಗಳು ತಿರುಗಿ ತಿರುಗಿ, ಕಟ್ಟೆ ಒಡೆದು ಹಾಳೆಯ ಮೇಲೆ ಪ್ರವಹಿಸಿದ ನದಿ ಕವನ ಸಮುದ್ರದಲ್ಲಿ ಸೇರದೆ ಏನಾಗುತ್ತದೆ? ವೈಯಕ್ತಿಕ ಭಾವನಗಳೆಲ್ಲವೂ ಕಳೆದುಕೊಂಡಿರುವೆನೆಂದು ನನ್ನವು ನನ್ನವಾಗದೆ ಹೋಗಿವೆ ಎಂದು ಯಾವುದೋ ಕೊರೆತೆಯಿಂದ , ಯಾವುದೊ ದಿಗಿಲಿನಿಂದ ಬೆಪ್ಪುಮೂರೇ ಹಾಕಿಕೊಂಡು ಮುಗ್ಧವಾಗಿ ಗುಕ್ಕುಹಿಡಿಯುತ್ತೇನೆ ಆಗ ಕವನ ಸಮುದ್ರದಲ್ಲಿ ಕದುಲುತ್ತಿರುವ ಒಬ್ಬ ಓದುಗ ಋಷಿ ನನ್ನನ್ನು ಅಪ್ಪಿಕೊಂಡು ಸಂತೈಸುತ್ತಾನೆನೀನೀಗ ಕವಿ-ಎನ್ನುತ್ತಾನೆ ರಚನೆಯ – ರವಿಎನ್ನುತ್ತಾನೆ ನಿನ್ನದೆಂದುಕೊಳ್ಳುವುದು ನಿನ್ನದಲ್ಲ, ಅದು ಸಾಮಾಜಿಕ- ಎನ್ನುತ್ತಾನೆ ನಿನ್ನ ಒಣ ಭಾವನೆಗಳು ಈಗ ಆಳಗಳನ್ನು ಅಳವಡಿಸಿಕೊಂಡು ವಿಸ್ತಾರಗೊಂಡು ವಿಶ್ವವವೆಲ್ಲಾ ವ್ಯಾಪಿಸಿದ ಕವನವು – ಎನ್ನುತ್ತಾನೆ ಇಲ್ಲಿನೋಡು, ಈ ನೆಗೆಯುತ್ತಿರುವ ಅಲೆಗಳ ಆರ್ಭಟ? ನಿನ್ನ ಅಮೃತಮಯ ಸೃಜನಶೀಲತೆಯಲ್ಲಿ ನಾನೀಗ ಅನಂತತ್ವವನ್ನು, ಅಮರತ್ವವನ್ನು ಪಡೆಯುತ್ತಿದ್ದೇನೆ- ಎನ್ನುತ್ತಾನೆ ಎನ್ನುತ್ತಲೇ- ಕರುಣೆಯಿಂದ ನನ್ನನ್ನು ದಡಕ್ಕೆ ಸೇರಿಸುತ್ತಾನೇ ನಾನೊಂದು ಮೌನ ಸಮುದ್ರಯಾಗುತ್ತೇನೆ ಕವನದ ಸಮುದ್ರದ ಅಲೆಗಳು ನನ್ನಲ್ಲಿ ಎದ್ದು ಬೀಳುತ್ತಿರುತ್ತವೆ! ತೆಲುಗು ಮೂಲ : ಡಾ. ದೇವರಾಜು ಮಹಾರಾಜುಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು
“ಸಂಗಮ”ತೆಲುಗು ಕವಿತೆ,ಮೂಲ ಡಾ. ದೇವರಾಜು ಮಹಾರಾಜು ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು Read Post »
ಬೆಂಶ್ರೀ ರವೀಂದ್ರ ಅವರ ಕವಿತೆ “ಹೆಡೆ ಬಿಚ್ಚಿ ಹೊಡೆ”
ಕಾವ್ಯ ಸಂಗಾತಿ ಬೆಂಶ್ರೀ ರವೀಂದ್ರ “ಹೆಡೆ ಬಿಚ್ಚಿ ಹೊಡೆ” ನೀನು ಮನೆ ಬಿಟ್ಟು ಹೋದ ರಾತ್ರಿಯೇ ರಾಹುಲ ಹುಟ್ಟಿದಹೆರಿಗೆಯ ನೋವಲಿದ್ದವಳಕೈ ಹಿಡಿದು ಯಶೋಧರಾಸಹಿಸಿಕೊ ನಾನಿದ್ದೇನೆಅಂತೇಕೆ ಅಂದು ಹೋಗಲಿಲ್ಲ ನಾನೇನು ಕಡಿಮೆ ಮಾಡಿದ್ದೆಅಂತಃಪುರದ ತುಂಬಾ ಸೀತೆಗೂಮಿಗಿಲು ಸುಂದರಿಯರು ಇದ್ದರಲ್ಲಬೇಡವೆಂದನೇಅವಳೊಬ್ಬಳನ್ನು ಬಿಡೆಂದುಗೋಗರೆದರೂ ಧಿಕ್ಕರಿಸಿದೆಯಲ್ಲ. ಬೇಕಿತ್ತೆ ಅಗ್ನಿಗಿಂತ ಬೇರೆ ಸಾಕ್ಷಿಕಾಡಾಡಿಯಾಗಿ ಮಾಡಿದೆಯಲ್ಲತುಂಬು ಬಸುರಿಗೆಅವನಿಯೇ ಗತಿಯಾಯ್ತಲ್ಲ ಹೇಳಿ ಹೋಗಬಹುದಿತ್ತು ಮಧುರೆಗೆನಾ ಬರುವುದರಲ್ಲೇ ಮತ್ತೆಂದೂಸಿಗದಂತೆ ಹೊರಟೆಯಲ್ಲಅಷ್ಟು ಅವಸರವಿತ್ತೇಎದೆ ಮಿಡಿತಕೆ ಸದೆಬಡಿತವೇ ಹೀಗೆ ಬರೆಯಲುಂಟು ನೂರಾರುಕಥೆಗಳು ಇತಿಹಾಸ ಚರಿತ್ರೆಇಲ್ಲಿ ಮಾತ್ರವಲ್ಲ ಎಲ್ಲೆಲ್ಲೂ ಜಗದಗಲ ಮುಗಿಲಗಲಮತ ಧರ್ಮ ಜಾತಿ ವರ್ಗ ವರ್ಣಗಳ ಭೇದವಿಲ್ಲದೆಹೆಬ್ಬೆಟ್ಟಿನಡಿಯಲೇ ಇಟ್ಟುನಡೆದಿದೆ ನುಡಿ ಸಾಂತ್ವನನಡೆ ಗೊಸುಂಬೆ ಅಯ್ಯೋಮತ್ತೆ ನೀನಿವರ ಕೈಗೊಂಬೆ ಅವರ ಮೇಲಿವರುಇವರ ಮೇಲವರುಎಡ ಬಲ ಮಧ್ಯದಮುಖವಿಲ್ಲದ ಕೂಗುಮಾರಿಗಳುಭಾಷಣ ಭೂಷಣರುಇವರೇ ಅವರು ಅವರೇ ಇವರು ಬಿಲ್ಲುಗಳ ಹೆಣೆಯುತ್ತಾರೆಹಾರುವುದಿಲ್ಲ ಬಾಣನುಡಿ ನೇವರಿಕೆಗೆತಣಿವುದೇ ಬಾಯಾರಿಕೆನೀನಿಲ್ಲದೆ ಅವರಿಲ್ಲಎಂಬರಿವಿದ್ದರೂಅರಿವುಗೆಟ್ಟ ಅರಿಗಳುಮಂಗಮಾಡುವ ನರಿಗಳುಮತಕಾಗಿ ಹಾರಿಸುವ ಹುಸಿಮತಾಪುಕೋರರು ಹುಡುಗಿನೀನಿನ್ನು ಇರಬಾರದು ಸುಮ್ಮನೆಬಯಲಿಗೆಳೆದು ಬಿಮ್ಮನೆಕಳಚಿ ಮುಖವಾಡಗಳಪೂತ್ಕರಿಸಿ ಈ ಬೇಮಾನರಪಡೆ ಕಟ್ಟಿ ಪಡೆ ನಿನ್ನ ಪಾಲುಹೆಡೆ ಬಿಚ್ಚಿ ಹೊಡೆಇಲ್ಲವಾದರೆ ಏಳಲ್ಲಎಪ್ಪತ್ತು ದಶಕವಾದರೂನಿನಗಿಷ್ಟೂ ಕೂಳು ಸಿಕ್ಕುವುದಿಲ್ಲ. ಬೆಂಶ್ರೀ ರವೀಂದ್ರ
ಬೆಂಶ್ರೀ ರವೀಂದ್ರ ಅವರ ಕವಿತೆ “ಹೆಡೆ ಬಿಚ್ಚಿ ಹೊಡೆ” Read Post »
ಮಲಯಾಳಂ ಕವಿತೆ “ಒಂದು ನುಡಿ?”ಮೂಲ ತಾಜುದ್ದೀನ್ ಕನ್ನಡಕ್ಕೆ ಐಗೂರು ಮೋಹನ್ ದಾಸ್ ಜಿ.
ಅನುವಾದ ಸಂಗಾತಿ ಮಲಯಾಳಂ ಕವಿತೆ “ಒಂದು ನುಡಿ?” ಮೂಲ ತಾಜುದ್ದೀನ್ ಕನ್ನಡಕ್ಕೆ ಐಗೂರು ಮೋಹನ್ ದಾಸ್ ಜಿ. ಸಹ ಪ್ರಯಾಣಿಕನೇ…….,ಈ ತಿರುವಿನಲ್ಲಿಯೂಅಥವಾಮುಂದಿನ ತಿರುವಿನಲ್ಲಿಯೂನಾವು ಬೇರೆಯಾಗುತ್ತೇವೆ….!ನೀನು ಪುನಃಯಾತ್ರೆಯನ್ನು ಮುಂದುವರಿಸುವಾಗನನ್ನ ‘ಶವಪೆಟ್ಟಿಗೆ ‘ಯನ್ನುಹೊತ್ತುಕೊಂಡು ಸಾಗಬೇಡಾ….!!!. ಯಾರದ್ದರೂನನ್ನ ಕುರಿತು ಕೇಳಿದ್ದರೇ…….,ನಾನುಜೊತೆಗೆ ಇದ್ದುನಷ್ಟವಾದ ದುರಾದೃಷ್ಟವಂತ….!ಬಾಳಿನಿಂದ ದೂರವಾದಪಾತ್ರದಾರ……ಎಂದು ಮಾತ್ರ ಹೇಳಬೇಕು….!‘ ದರಿದ್ರ’ನಾಗಿದ್ದೆ ಎಂದುಮಾತ್ರ ಹೇಳಬಾರದು…..!!! ನನ್ನ ನೋಟಗಳಲ್ಲಿಬರೆಯದೇ ಇದ್ದದ್ದುಓದಿದ್ದರೇ……ಅಳಿಸಿ ಹಾಕಲುನೀನು ‘ಅವಳ ‘ಬಳಿ ಹೇಳಬೇಕು….!!! ನಾನು ಒಂದು‘ಹೂವು’ ಸಹಕಿತ್ತು ಹಾಕಿಯೇಇಲ್ಲ….!!!. ಮಲಯಾಳಂ ಮೂಲ: ತಾಜುದ್ದೀನ್.ಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ.
ಮಲಯಾಳಂ ಕವಿತೆ “ಒಂದು ನುಡಿ?”ಮೂಲ ತಾಜುದ್ದೀನ್ ಕನ್ನಡಕ್ಕೆ ಐಗೂರು ಮೋಹನ್ ದಾಸ್ ಜಿ. Read Post »
ಪ್ರೊ.ರಾಜಕುಮಾರ ಬಿ ಟಿ. ಅವರ ಕವಿತೆ “ಮಾನವೀಯತೆ ಹರಿಕಾರರು”
ಕಾವ್ಯ ಸಂಗಾತಿ ಪ್ರೊ.ರಾಜಕುಮಾರ ಬಿ ಟಿ. “ಮಾನವೀಯತೆ ಹರಿಕಾರರು” ಅವಿಭಕ್ತ ಕುಟುಂಬದಲಿ ಜನಿಸಿಅಸ್ಪೃಶ್ಯತಾ ಅಂಧಕಾರವನು ಅಳಿಸಿಜಾತೀಯತೆ ಹೊಡೆದೊಡಿಸಲುಜಾತ್ಯತೀತ ಭಾವ ಮೂಡಿಸಲು ಮೂಡಿಹರು ದಲಿತ ಸೂರ್ಯ’ರು -೧- ಅಸ್ಪೃಶ್ಯತೆಯ ಕಹಿಯನು ಉಂಡುಅವಮಾನದಿಕುಲುಮೆಯಲಿ ಬೆಂದುಬದುಕಿನ ಬವಣೆಗಳಲಿ ನೊಂದುಅಸಹಾಯಕತೆಯ ಕಣ್ಣಿರಲಿ ಮಿಂದುದೀನ-ದುರ್ಬಲರ ಧ್ವನಿಯಾಗಿಹರು -೨- ಸಮಾನತೆಯ ಲೇಖನಿ ಹಿಡಿದುಸಮ ಸಮಾಜಕೆ ಸಂವಿಧಾನ’ವ ಬರೆದುಸರ್ವರಲೂ ಸಮಭಾವ ತಂದು ಸಾಮಾಜಿಕ ನ್ಯಾಯವೆಂದು ಸಾರಿಹರು ಮಾನವತಾವಾದಿಆಗಿಹರು -೩- ಅಕ್ಷರಗಳನು ಆಯುಧವಾಗಿರಿಸಿಅಂಧಶ್ರದ್ಧೆಗಳನು ಬೇಧಿಸಿಲೇಖನಿಯ ಮಸಿಕೋಟಿ-ಕೋಟಿ ಜನಗಳಿಗೆ ಬಿಸಿಎಂದಬ್ಬರಿಸಿ ಘರ್ಜಿಸಿದ ಭೀಮ’ರಿವರು -೪- ಅನಿಷ್ಟಗಳ ನಡುವಿಂದ ಸಿಡಿದುಅಜ್ಞಾನವ ದೈರ್ಯದಿ ತುಳಿದು ದೇಶ-ಕೋಶಗಳಿಗೆ ಮಿಡಿದುಜ್ಞಾನಕ್ಷೀರವನು ಕುಡಿದುಘರ್ಜಿಸಿಹರು ಮಹಾ ನಾಯಕರಿವರುಅಂಬೇಡ್ಕರರು -೫- ಪ್ರೊ.ರಾಜಕುಮಾರ ಬಿ ಟಿ.
ಪ್ರೊ.ರಾಜಕುಮಾರ ಬಿ ಟಿ. ಅವರ ಕವಿತೆ “ಮಾನವೀಯತೆ ಹರಿಕಾರರು” Read Post »
ಡಾ.ಕಾಡಜ್ಜಿ ಮಂಜುನಾಥ್ ಅವರ ಕವಿತೆ “ನ್ಯಾಯ ಕಣ್ಣು ತೆರೆದಿದೆ”
ಕಾವ್ಯ ಸಂಗಾತಿ ಡಾ.ಕಾಡಜ್ಜಿ ಮಂಜುನಾಥ್ “ನ್ಯಾಯ ಕಣ್ಣು ತೆರೆದಿದೆ” ಜನಸಾಮಾನ್ಯರಉಸಿರು ನಿಲ್ಲಿಸಿದರ್ಪ ಮೆರೆದನರನ ಮಾತುಮೌನವಾಗಿದೆ; ಹಣದಕಪಿಮುಷ್ಠಿಯಲಿಹಂತಕರ ಸೃಷ್ಟಿಸಿದ್ವೇಷವೆಂಬ ರೋಗದಿಜೀವ ತೆಗೆದಜೀವಿಯಮುಖವಾಡ ಕಳಚಿದೆ; ತೋಳ್ಬಲದಕತ್ತಿಯ ಅಂಚಿನಲಿಹಣದಾಸೆ ತೋರಿಸಿಕುರ್ಚಿಯ ವ್ಯಾಮೋಹದಿಪ್ರಾಣ ತೆಗೆದವಿನಯದದುರಹಂಕಾರಮಣ್ಣಾಗಿದೆ; ಕಾನೂನಿನರಕ್ಷಕರೇಅಪರಾಧಿಗಳಆಮಿಷಕ್ಕೆ ಬಲಿಯಾಗಿಸಹಾಯ ಹಸ್ತಚಾಚಿದಮೃಗಗಳ ಮೇಲೆನ್ಯಾಯ ದೇವತೆಯಕಣ್ಣು ಬಿದ್ದಿದೆ; ಬಾಳಿ ಬದುಕಬೇಕಾದಮುಗ್ದ ಯುವಕನನ್ನುದಬ್ಬಾಳಿಕೆಯಕೆಂಡದಲಿಕೊಲೆ ಮಾಡಿದಕಟುಕರನ್ನುಕಾರಾಗೃಹ ಕೈಬೀಸಿಕರೆದಿದೆ; ತೆರೆ ಹಿಂದಿನಕುತಂತ್ರಗಳು ಕರಗಿಹಣ ಅಧಿಕಾರ ಪ್ರಭುತ್ವದಕೈಗಳುಕಾನೂನಿನ ಕುಣಿಕೆಗೆಸಿಲುಕಿಸಂವಿಧಾನವುತನ್ನ ಅಭೇದ್ಯಶಕ್ತಿಯನ್ನುನ್ಯಾಯದ ಚಾಟಿಯಲಿಕರ್ಮವುಮರುಕಳಿಸಿದೆ;ಡಾ.ಕಾಡಜ್ಜಿ ಮಂಜುನಾಥ
ಡಾ.ಕಾಡಜ್ಜಿ ಮಂಜುನಾಥ್ ಅವರ ಕವಿತೆ “ನ್ಯಾಯ ಕಣ್ಣು ತೆರೆದಿದೆ” Read Post »
“ಲೋಕಾಯುಕ್ತರು ಬರುತ್ತಾರೆ” ವ್ಯಂಗ್ಯ, ಹಾಸ್ಯ, ಸಾಮಾಜಿಕ ಸತ್ಯ ಸಮನ್ವಯ ನಾಟಕ.ಗೊರೂರು ಅನಂತರಾಜು
ರಂಗ ಸಂಗಾತಿ ಗೊರೂರು ಅನಂತರಾಜು “ಲೋಕಾಯುಕ್ತರು ಬರುತ್ತಾರೆ” ವ್ಯಂಗ್ಯ, ಹಾಸ್ಯ, ಸಾಮಾಜಿಕ ಸತ್ಯ ಸಮನ್ವಯ ನಾಟಕ. “ಲೋಕಾಯುಕ್ತರು ಬರುತ್ತಾರೆ”ಸ್ತುತಿ : ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು, ಗಂಧದಕೋಠಿ. ಹಾಸನ.ಮೂಲ: ನಿಕೊಲಾಯ್ ಗೊಗೊಲ್.ಕನ್ನಡ ರೂಪ, ಸಂಗೀತ ನಿರ್ದೇಶನ ಧನಂಜಯ ದಿಯಾನ್ ರಂಗ ಪ್ರಯೋಗ ಹಾಸನದ ನಾಟ್ಯ ವೈಭವ, ರಂಗಸಿರಿ ಮತ್ತು ಜಿಲ್ಲಾ ಪತ್ರಕರ್ತರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ 3 ದಿನಗಳ ಕಾಲೇಜು ರಂಗೋತ್ಸವದಲ್ಲಿ 2ನೇ ದಿನ ಬುಧವಾರಸ್ತುತಿ : ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು, ಗಂಧದಕೋಠಿ. ಹಾಸನ.ಮೂಲ: ನಿಕೊಲಾಯ್ ಗೊಗೊಲ್.ಕನ್ನಡ ರೂಪ, ಸಂಗೀತ ನಿರ್ದೇಶನ ಧನಂಜಯ ದಿಯಾನ್ ಅವರದು. ಬೆಳಿಗ್ಗೆ ಪ್ರದರ್ಶಿಸಿದ ನಾಟಕ ಲೋಕಾಯುಕ್ತರು ಬರುತ್ತಾರೆ. ಪ್ರಲೋಕಾಯುಕ್ತರು ಬರುತ್ತಾರೆ ನಾಟಕವು ವ್ಯಂಗ್ಯ, ಹಾಸ್ಯ ಮತ್ತು ಸಾಮಾಜಿಕ ಸತ್ಯಗಳ ಸಮನ್ವಯದಲ್ಲಿ ಮೂಡಿ ಬಂದ ಒಂದು ಶಕ್ತಿಯುತ ರಂಗಕೃತಿ. ಇದು ಮೂಲತಃ The Government Inspector ಎಂಬ ಪ್ರಸಿದ್ಧ ನಾಟಕದಿಂದ ಪ್ರೇರಿತವಾಗಿದ್ದು, Nikolai Gogol ಅವರ ಕೃತಿಯ ಆತ್ಮವನ್ನು ಕನ್ನಡದ ನೆಲದ ಸನ್ನಿವೇಶಕ್ಕೆ ತಂದು, ಧನಂಜಯ ದಿಯಾನ್ ಅವರು ಹೊಸ ಅರ್ಥಭರಿತ ರೂಪದಲ್ಲಿ ಮರು ಸೃಷ್ಟಿಸಿದ್ದಾರೆ. ಈ ನಾಟಕದ ಕೇಂದ್ರದಲ್ಲಿ ಇರುವ ವಿಷಯ ಭಯ!ಆದರೆ ಅದು ಸಾಮಾನ್ಯ ಭಯವಲ್ಲ. ಅದು ಅಧಿಕಾರಿಗಳ ಅಂತರಂಗದಲ್ಲಿರುವ ಅಪರಾಧ ಭಾವನೆಯ ಭಯ. ಲೋಕಾಯುಕ್ತರು ಬರುತ್ತಾರೆ ಎಂಬ ಒಂದು ವದಂತಿ ಮಾತ್ರವೇ ಸಂಪೂರ್ಣ ವ್ಯವಸ್ಥೆಯನ್ನು ನಡುಗಿಸುತ್ತದೆ. ಈ ಕಲ್ಪನೆ ನಾಟಕದ ಹೃದಯವಾಗಿದ್ದು, ಅಧಿಕಾರದ ಅಹಂಕಾರ, ಭ್ರಷ್ಟಾಚಾರ ಮತ್ತು ಸುಳ್ಳಿನ ಮೇಲೆ ಕಟ್ಟಿದ ವ್ಯವಸ್ಥೆಯ ದುರ್ಬಲತೆಯನ್ನು ಬಯಲಿಗೆಳೆಯುತ್ತದೆ.ನಾಟಕದಲ್ಲಿ ಪಟ್ಟಣದ ಮೇಯರ್ ಹಾಗೂ ಇತರೆ ಅಧಿಕಾರಿಗಳು ತಮ್ಮ ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ತೊಡಗುತ್ತಾರೆ. ಯಾರೂ ನೇರವಾಗಿ ಸತ್ಯವನ್ನು ಎದುರಿಸಲು ಸಿದ್ಧರಿರುವುದಿಲ್ಲ. ಆದರೆ ನಿಜವಾದ ಲೋಕಾಯುಕ್ತರು ಬಂದಿರಲಿ ಇಲ್ಲದಿರಲಿ ಅವರ ಭಯವೇ ಅವರನ್ನು ಒಳಗಿನಿಂದ ಒಡೆದುಹಾಕುತ್ತದೆ. ಇದು ಈ ನಾಟಕದ ಅತ್ಯಂತ ಪರಿಣಾಮಕಾರಿ ವ್ಯಂಗ್ಯ ವಿಡಂಬನೆ. ಧನಂಜಯ ದಿಯಾನ್ ಅವರ ರೂಪಾಂತರದಲ್ಲಿ ಈ ಕಥೆ ಕೇವಲ ಒಂದು ಆಡಳಿತ ವ್ಯವಸ್ಥೆಯ ವಿಮರ್ಶೆಯಾಗಿ ಉಳಿಯುವುದಿಲ್ಲ. ಅದು ಸಮಗ್ರ ಸಮಾಜದ ಪ್ರತಿಬಿಂಬವಾಗುತ್ತದೆ. ಲೋಕಾಯುಕ್ತರು ಇಲ್ಲಿ ಕೇವಲ ಒಂದು ಸಂಸ್ಥೆಯ ಹೆಸರು ಅಲ್ಲ.ಅದು ನಮ್ಮೊಳಗಿನ ಅಂತಃಕರಣ,ನಮ್ಮ ಪ್ರಜ್ಞೆ,ನಮ್ಮ ಸತ್ಯದ ಕಣ್ಣು.ಈ ನಾಟಕದ ಇನ್ನೊಂದು ವಿಶಿಷ್ಟತೆ ಎಂದರೆ ಇದನ್ನು ಮಹಿಳಾ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ ನಿರ್ದೇಶಕರು. ಸಾಮಾನ್ಯವಾಗಿ ಪುರುಷ ಪ್ರಧಾನವಾಗಿರುವ ಪಾತ್ರಗಳನ್ನು ಇಲ್ಲಿ ಮಹಿಳಾ ಧ್ವನಿಗಳ ಮೂಲಕ ಹೊಸ ರೀತಿಯಲ್ಲಿ ಅಭಿವ್ಯಕ್ತಿಸಲಾಗಿದೆ. ಇದರಿಂದ ನಾಟಕವು ಹೊಸ ಸಂವೇದನೆ, ಹೊಸ ದೃಷ್ಟಿಕೋನವನ್ನು ಪಡೆಯುತ್ತದೆ. ಮಹಿಳೆಯರ ಅನುಭವ ಅವರ ಒಳ ಜಗತ್ತು ಅವರ ಪ್ರಶ್ನೆಗಳು ಈ ನಾಟಕದ ಮೂಲಕ ಹೆಚ್ಚು ತೀವ್ರವಾಗಿ ಹೊರಹೊಮ್ಮುತ್ತವೆ.ಶೈಲಿಯಲ್ಲಿ, ನಾಟಕವು ಹಾಸ್ಯ ಮತ್ತು ವ್ಯಂಗ್ಯವನ್ನು ಬಳಸಿಕೊಂಡು ಗಂಭೀರ ವಿಷಯಗಳನ್ನು ಹೇಳುತ್ತದೆ. ಸಂಭಾಷಣೆಗಳಲ್ಲಿ ಲಯ, ಪ್ರಾಸ, ನಾಟಕೀಯ ತೀವ್ರತೆ ಕಂಡುಬರುತ್ತದೆ. ಕೆಲವೆಡೆ ಕಾಮಿಡಿ ದೃಶ್ಯಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತವೆ. ಅಂತೆಯೇ ಆ ನಗುವಿನ ಹಿಂದಿನ ಕಠಿಣ ಸತ್ಯವೂ ಗೋಚರಿಸುತ್ತದೆ. ಇದು ನಾಟಕದ ಒಂದು ಶಕ್ತಿ.ಸಂಗೀತ, ಲಯಬದ್ಧ ಹಾಡುಗಳು ಮತ್ತು ರಂಗರೂಪಗಳು ನಾಟಕಕ್ಕೆ ಮತ್ತಷ್ಟು ಜೀವ ತುಂಬುತ್ತವೆ. ವಿಶೇಷವಾಗಿ ಲಂಚಾವತಾರ ನಿಲ್ಲಬೇಕು ಎಂಬ ಸಂದೇಶದ ಹಾಡುಗಳು ಕೇವಲ ಹಾಡುಗಳಲ್ಲಅವು ಒಂದು ಸಾಮಾಜಿಕ ಘೋಷಣೆ, ಒಂದು ಹೋರಾಟದ ನಾದವಾಗಿ ಹೊರಹೊಮ್ಮಿದೆ.ಕ್ಲೈಮಾಕ್ಸ್‌ನಲ್ಲಿ ನಾಟಕ ತನ್ನ ಶಿಖರವನ್ನು ತಲುಪುತ್ತದೆ. ಎಲ್ಲಾ ಭ್ರಮೆಗಳು ಒಡೆದುಹೋಗುತ್ತವೆ. ಸುಳ್ಳಿನ ಮೇಲಿರುವ ಕಟ್ಟಡ ಕುಸಿಯುತ್ತದೆ. ಪ್ರೇಕ್ಷಕರ ಮುಂದೆ ಉಳಿಯುವುದು ಒಂದೇ ಪ್ರಶ್ನೆನಿಜವಾದ ಲೋಕಾಯುಕ್ತರು ಯಾರು?ಹೊರಗಿನಿಂದ ಬರುವವನಾ?ಅಥವಾ ನಮ್ಮೊಳಗೇ ಇರುವ ನ್ಯಾಯ ಬುದ್ಧಿಯೇನಾ?ಒಟ್ಟಾರೆ ಲೋಕಾಯುಕ್ತರು ಬರುತ್ತಾರೆ ನಾಟಕವು ಕೇವಲ ಮನರಂಜನೆ ನೀಡುವ ಕೃತಿ ಅಲ್ಲ. ಅದು ಒಂದು ಜಾಗೃತಿ. ಒಂದು ಪ್ರತಿಬಿಂಬ. ಒಂದು ಎಚ್ಚರಿಕೆ.ಇದು ಪ್ರೇಕ್ಷಕರನ್ನು ನಗಿಸುತ್ತದೆ, ಯೋಚಿಸಲು ಪ್ರೇರೇಪಿಸುತ್ತದೆ, ಮತ್ತು ಕೊನೆಗೆಸತ್ಯದ ಎದುರು ನಿಲ್ಲುವ ಧೈರ್ಯವನ್ನು ನೀಡುತ್ತದೆ.ಇಲ್ಲಿ ನನ್ನ (ಗೊರೂರು ಅನಂತರಾಜು) ಒಂದೆರಡು ಅನುಭವಗಳು ನೆನಪಾದವು. ಹಿಂದೊಮ್ಮೆ ಲೋಕಾಯುಕ್ತ ಡಿ.ವೈ.ಎಸ್.ಪಿ. ಯಾಗಿದ್ದವರು ನನ್ನ ಕವಿ ಮಿತ್ರರು. ಇವರ ಒಂದು ಹನಿಗವನ ಸಂಕಲನದ ವಿಮರ್ಶೆ ಬರೆದಿದ್ದನು. ಹಿಂದೊಮ್ಮೆ ಇವರು ನಡೆಸಿದ ರೈಡ್ ಗೆ ನಾನೇ ಸಾಕ್ಷಿಯಾಗಿ ಹೋಗಿ ಬಾಲ್ಯದಲ್ಲಿ ನಾನು ಓದುತ್ತಿದ್ದ . ಎನ್.ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿ ಡಿಡೆಕ್ಟಿವ್ ಪತ್ತೇದಾರಿ ಪುರುಷೋತ್ತಮನ ಸಹಾಯಕ ಮೃತ್ಯುಂಜಯನ ಪಾತ್ರ ಮತ್ತು ಚಲನಚಿತ್ರನಟ ಬಾಲಕೃಷ್ಣ ಒಂದು ಸಿನಿಮಾದಲ್ಲಿ ಹೇಳುತ್ತಿದ್ದ ಥ್ರಿಲ್ ರೋಮಾಂಚನ! ಸಂಭಾಷಣೆ ದೃಶ್ಯ ಎಲ್ಲಾ ಒಟ್ಟೊಟ್ಟಿಗೆ ನೆನಪಾದವು.. ನನ್ನ ಹಾಸ್ಯ ಸವಿ ಹನಿಗವನ ಸಂಕಲನದಕವಿಗವನಗಳು ಹೀಗಿದೆ.ಕವಿಗಳು ಶ್ರೀಮಂತರುಹಾಗೆಂದು ಲೋಕಾಯುಕ್ತರುದಾಳಿ ಮಾಡಿದರೆ ಸಿಗಬಹುದುಶಾಲು ಕೃತಿಗಳು ನಿಘಂಟುಸಿಗಲಾರದು ಗಂಟುಏಕೆಂದರೆ ಇವರು ಬರೇಭಾವನೆಗಳ ಹೃದಯ ಶ್ರೀಮಂತರು ಇನ್ನೂ ನಿರ್ದೇಶಕರು Dhananjaya Diyan ಅವರು ಕನ್ನಡ ರಂಗಭೂಮಿಯಲ್ಲಿ ವೈಶಿಷ್ಟ್ಯಮಯ ಚಿಂತನೆ, ಸಂವೇದನಾಶೀಲ ಅಭಿವ್ಯಕ್ತಿ ಮತ್ತು ಆಳವಾದ ಕಲಾತ್ಮಕ ದೃಷ್ಟಿಯಿಂದ ಗುರುತಿಸಿಕೊಂಡಿರುವ ನಿರ್ದೇಶಕ, ನಟನಾ ತರಬೇತುದಾರ ಹಾಗೂ ಸಾಹಿತ್ಯಕರ್ತ. ನಿನಾಸಂನಲ್ಲಿ ಪಡೆದ ರಂಗಶಿಕ್ಷಣದ ಆಧಾರದ ಮೇಲೆ, ಅವರು ರಂಗಭೂಮಿಯನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸದೆ, ಸಮಾಜದ ಒಳನೋಟಗಳನ್ನು ಅನಾವರಣಗೊಳಿಸುವ ಶಕ್ತಿಯಾಗಿ ಬಳಸುತ್ತಾರೆ.40ಕ್ಕೂ ಹೆಚ್ಚು ರಂಗತರಬೇತಿ ಶಿಬಿರಗಳನ್ನು ನಡೆಸಿ, ಅನೇಕ ಯುವ ಪ್ರತಿಭೆಗಳನ್ನು ರೂಪಿಸಿರುವ ಇವರು, ಕಲಿಕೆಯನ್ನು ಅನುಭವಾತ್ಮಕ ಪ್ರಕ್ರಿಯೆಯಾಗಿ ರೂಪಿಸುವಲ್ಲಿ ವಿಶೇಷತೆ ಹೊಂದಿದ್ದಾರೆ. Andhayuga, Tughlaq, Kusumabaale ಸೇರಿದಂತೆ ಹಲವು ಪ್ರಮುಖ ನಾಟಕಗಳನ್ನು ನಿರ್ದೇಶಿಸಿರುವ ಇವರ ಪ್ರತಿಯೊಂದು ಕೃತಿಯಲ್ಲೂ ಭಾವನೆ, ದಾರ್ಶನಿಕತೆ ಮತ್ತು ಜೀವನದ ಸೂಕ್ಷ್ಮತೆಗಳನ್ನು ಒಳಗೊಂಡಿರುತ್ತವೆ.‘Innu Saku Badukiddu ಎಂಬ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮ ಸ್ಪರ್ಶ ಮೂಡಿಸಿರುವ ಇವರು ಬರವಣಿಗೆ, ನಿರ್ದೇಶನ ಮತ್ತು ತರಬೇತಿಯ ಮೂಲಕ ಸಮಗ್ರ ಕಲಾ ವ್ಯಕ್ತಿತ್ವವಾಗಿ ಬೆಳೆದಿದ್ದಾರೆ. ಇವರ ದೃಷ್ಟಿಯಲ್ಲಿ ರಂಗಭೂಮಿ ಒಂದು ಸಾಧನೆ ಮನಸ್ಸುಗಳನ್ನು ಸ್ಪರ್ಶಿಸಿ, ಚಿಂತನೆಗೆ ಪ್ರೇರೇಪಿಸುವ ಶಕ್ತಿಯುತ ಸಾಧನ. ಇದಿಷ್ಟು ಮಾಹಿತಿಯನ್ನು ಹಂಚಿಕೊಂಡ ಇದೇ ಧನಂಜಯ್ ಅವರು 15 ವರ್ಷಗಳ ಹಿಂದೆ ಇದೇ ರಂಗಸಿರಿ ಸಂಘಟನೆಯಲ್ಲಿ ಹಾಸನದಲ್ಲಿ ನಡೆದ ಕಾಲೇಜು ರಂಗೋತ್ಸವದಲ್ಲಿ ಹಾಸನ ಸರ್ಕಾರಿ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿಯರಿಗೆ ವಿಶ್ರಾಂತ ನಾಟಕ ನಿರ್ದೇಶಿಸಿದ್ದರು. ಇದರ ವಿಮರ್ಶಾ ಬರಹ 2011 ರಲ್ಲಿ ಪ್ರಕಟವಾಗಿರುವ ನನ್ನ ರಂಗಪ್ರಯೋಗ ಕೃತಿಯಲ್ಲಿಯೂ ದಾಖಲಾಗಿದೆ ಗೊರೂರು ಅನಂತರಾಜು, ಹಾಸನ9449462879ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 3ನೇ ಕ್ರಾಸ್,ಹಾಸನ- .573201
“ಲೋಕಾಯುಕ್ತರು ಬರುತ್ತಾರೆ” ವ್ಯಂಗ್ಯ, ಹಾಸ್ಯ, ಸಾಮಾಜಿಕ ಸತ್ಯ ಸಮನ್ವಯ ನಾಟಕ.ಗೊರೂರು ಅನಂತರಾಜು Read Post »
ಡಾ. ಪುಷ್ಪಾವತಿ ಶಲವದಿಮಠ ಅವರ ಕವಿತೆ “ಅರಿವಿನ ದಾರಿ ಹುಡುಕುತ”
ಕಾವ್ಯ ಸಂಗಾತಿ ಡಾ. ಪುಷ್ಪಾವತಿ ಶಲವದಿಮಠ “ಅರಿವಿನ ದಾರಿ ಹುಡುಕುತ” ಇದ್ದು ಬಿಡು ಸುಮ್ಮನೆ ಸುಮ್ಮನಿದ್ದುಬಿಡುಹೊರಟು ಬಿಡುಬುದ್ಧನಂತೆ ಎದ್ದು ಬಿಡು ಈ ಜಗದ ಜಂಜಡ ಕಳೆದುಕೊಂಡು ಬಿಡು ಕೊಡವಿಕೊಂಡು ಬಿಡು ಹೊರಟು ಬಿಡು ನೀನುನಡೆವ ದಾರಿ ದೊಡ್ಡದಿದೆಕಲ್ಲು ಮುಳ್ಳು ಚುಚ್ಚಬಹುದುರಕ್ತ ಒಸರಬಹುದುಮುಲಾಮು ಹಚ್ಚಿಕೋಪಟ್ಟಿ ಕಟ್ಟಿಕೋನಡೆಯುವುದು ಮಾತ್ರ ಬಿಡಬೇಡಎಲ್ಲೂ ನಿಲ್ಲಬೇಡಾನಡೆಯುತ್ತಲೇ ಇದ್ದುಬಿಡು ನಿನ್ನ ಅಂಜಿಸುವವರು ಹೀಯಾಳಿಸುವವರುಅನುಮಾನಿಸುವವರುಹಿಂದೆಳೆಯುವವರುತೆಗಳುವವರುಬೈಯುವವರುಇರಬಹುದು ನೂರೆಂಟು ಮಂದಿಬಿಟ್ಟು ಬಿಡು ಅವರಿವರ ಮಾತುಗಳಮನದ ಮಾತು ಕೇಳು ಸಾಕು ನಿನ್ನ ಕಷ್ಟ ಕಣ್ಣಿರಿಗೆ ಕರುಗುವರಿಲ್ಲಕರಗಲೆಂದು ಕಾಯುತ್ತ ಬೇಡಿಕೊಳ್ಳಬೇಡಈ ದುರ್ಬಲತೆಯ ನೀಗಲೇ ಬೇಕು ನೀನುನಿನಗೆ ನೀನು ಆಸರೆಯಾಗಬೇಕುಕಾಲ ನಿಲ್ಲುವುದಿಲ್ಲನೀನು ನಿಂತರೆ ಹೇಗೆ?!ತಳ್ಳಿಕೊಂಡೆ ಹೋಗಿಬಿಡುವುದು ಕಾಲಜೊತೆಗೆ ನಿಲ್ಲುವರಿಲ್ಲನಿಲ್ಲಬೇಡ ನೀನು ಚಲಿಸುತ್ತಲಿರುಯಾರಿಗೂ ಕಾಯಬೇಡಯಾರೂ ಕಾದಿಲ್ಲ ನಿನಗಾಗಿ ಒಂಟಿ ಪಯಣವೆಂದು ಬೇಸರಸದಿರುದೂರದ ದಡ ಸೇರಲುಒಂಟಿಯಾಗಿಯೇ ನಡೆಯಬೇಕುನಿನ್ನ ಪಾಪ ಪುಣ್ಯಗಳ ಮೂಟೆ ನೀನೇ ಹೆಗಲಿಗೆರಿಸಿಕೊಳ್ಳಬೇಕುಪಾಲುದಾರರಿಲ್ಲ ಪಾಪಗಳಿಗೆನಡೆದು ಬಿಡು ಮೋಹ ಮಮಕಾರಗಳ ತೊರೆದುಬುದ್ಧ ಬಸವ ಅಂಬೇಡ್ಕರ್ ನಡೆಯಲಿಲ್ಲವೇಅವರ ದಾರಿಯೇನು ಸಲೀಸಾಗಿತ್ತೆ?! ಬೆಳಕಿನ ಅರಮನೆಗೆನೂರಾರು ದಾರಿಗಳಿವೆಯಂತೆನಡೆದು ಬಿಡು ಬೆಳಕಿನೆಡೆಗೆಸವಿ ಸಗ್ಗ ಪಡೆಯಲುಇಹದ ಕಗ್ಗ ಬಿಡಿಸಿಕೊಳ್ಳಬೇಕುಬಿಡಿಸಿಕೊಂಡು ಬಿಡುಅಲ್ಲಮ ನಡೆದ ದಾರಿಅಕ್ಕ ನಡೆದ ದಾರಿನಿನ್ನೆದುರಿಗಿದೆಆ ದಾರಿಗುಂಟ ನಡೆದು ಬಿಡುಸಿಗಬಹುದು ನಿನಗೆಅರಿವಿನ ಮನೆಬೆಳಕಿನ ಅರಮನೆ ತೊರೆದು ಬಿಡು ಸಾವಿರ ಚಿಂತೆಇದ್ದು ಬಿಡು ಬುದ್ಧನಂತೆಹೊರಟು ಬಿಡು ಹೊರಟು ಬಿಡುಬಿಟ್ಟು ಅವರಿವರ ಚಿಂತೆಅರಿವ ದಾರಿ ಹುಡುಕುತಕನಕ ಶರೀಫರು ಮೀಟಿದತಂಬೂರಿ ಮೀಟತ….. ಡಾ. ಪುಷ್ಪಾವತಿ ಶಲವದಿಮಠ
ಡಾ. ಪುಷ್ಪಾವತಿ ಶಲವದಿಮಠ ಅವರ ಕವಿತೆ “ಅರಿವಿನ ದಾರಿ ಹುಡುಕುತ” Read Post »
ಶಾಲಿನಿ ರುದ್ರಮುನಿ ಹುಬ್ಬಳ್ಳಿ ಅವರ ಕವಿತೆ “ನಾನು ಅಪೂರ್ಣಳಲ್ಲ”
ಕಾವ್ಯಸಂಗಾತಿ ಶಾಲಿನಿ ರುದ್ರಮುನಿ ಹುಬ್ಬಳ್ಳಿ “ನಾನು ಅಪೂರ್ಣಳಲ್ಲ” pic:gemini ನಾನು ಪರಿಪೂರ್ಣ ತಾಯಿ ಅಲ್ಲಈ ಒಪ್ಪಿಗೆನನ್ನ ಸೋಲಿನ ದನಿಯಂತು ಅಲ್ಲ!, ಬದುಕಿನ ಸತ್ಯದ ನಿಸ್ಸಂಶಯ ಮೌನದಿನವೆಲ್ಲಾ ಹರಿದಾಡುವಕ್ಷಣಗಳ ನಡುವೆ,ನನ್ನ ಉಸಿರು ಕೂಡಾ ಕೆಲಸದಲಯಗತಿಯಲ್ಲೆ ಸಾಗುತ್ತದೆ,ಕೈಗಳಲ್ಲಿ ಮನೆಯ ಒಪ್ಪ ಓರಣ,ಮನಸ್ಸಿನಲ್ಲಿ ನಿನ್ನ ನಾಳೆಗಳು!, ಕಣ್ಣುಗಳಲ್ಲಿ ಅನೇಕ ಪ್ರಶ್ನೆಗಳ ನೆರಳು,ಕೆಲವೊಮ್ಮೆಧ್ವನಿ ಎತ್ತರವಾಗುತ್ತದೆ,ಅದು ಕೋಪದ ಭಾಷೆಯಲ್ಲ,ದಣಿವಿನ ಅನುವಾದ, ಸಹನೆಯ ಹೂವಲ್ಲುಮುಳ್ಳಿನ ಕೊನೆ,ಆದರೂ, ಅದರ ಬೇರುಪ್ರೀತಿಯಲ್ಲೇ ನಾಟಿದೆ, ನನ್ನೊಳಗೆಒಂದು ನಿರಂತರ ಸಂಭಾಷಣೆ,“ಸಾಕ ನಾನು ?”“ಸಾಕ್ಷಮಳಾ ನಾನು?”ಈ ಪ್ರಶ್ನೆಗಳೇನನ್ನ ತಾಯಿತನದ ಪ್ರತಿದಿನದ ಪರೀಕ್ಷೆ.ಕೆಲ ಕ್ಷಣಗಳಲ್ಲಿನಾನು ಕಳೆದುಹೋಗುವೆ,ಪಾತ್ರಗಳ ನಡುವೆ,ನೀರೀಕ್ಷೆಗಳ ಗೋಡೆ ಬಿರುಕಿನಲಿ,ಜವಾಬ್ದಾರಿಗಳ ಗದ್ದಲದಲ್ಲಿ,ನನ್ನನ್ನೇ ಹುಡುಕುವ ಪ್ರಯತ್ನದಲ್ಲಿ ಕಡೆಗೆ,ಆದರೂ!ತಾಯಿಯಾಗಿರುವುದುಪರಿಪೂರ್ಣತೆಯ ಮಾನದಂಡವಲ್ಲ ಅಲ್ವಾ?,ಅದು ಅಪೂರ್ಣತೆಯನ್ನುಸ್ವೀಕರಿಸುವ ಧೈರ್ಯ.ನಾನು ಸಂಪೂರ್ಣಳಲ್ಲ,ಆದರೆ ನಿನಗಾಗಿ ನಾನುಪ್ರತಿ ದಿನ ಪುನಃ ಹುಟ್ಟುತ್ತೇನೆ,ಸೂರ್ಯನಂತೆ, ನನ್ನ ಪ್ರೀತಿ,ಅದು ನಿಯಮಗಳಿಗೆಸಿಕ್ಕದ ಒಂದು ನದಿ,ತಪ್ಪುಗಳನ್ನೂ ತೊಳೆದುಮತ್ತೆ ಮತ್ತೆ ನಿನ್ನತ್ತ ಹರಿಯುವನಿಷ್ಕಳಂಕ ಸತ್ಯ ಹರಿವು,ನಾನು ಪರಿಪೂರ್ಣ ತಾಯಿ ಅಲ್ಲ,ಆದರೆನಿನ್ನನ್ನು ಪ್ರೀತಿಸುವ ನನ್ನ ಹೃದಯಅದು ಎಂದಿಗೂ ಅಪೂರ್ಣವಾಗುವುದಿಲ್ಲ… ಶಾಲಿನಿ ರುದ್ರಮುನಿ ಹುಬ್ಬಳ್ಳಿ
ಶಾಲಿನಿ ರುದ್ರಮುನಿ ಹುಬ್ಬಳ್ಳಿ ಅವರ ಕವಿತೆ “ನಾನು ಅಪೂರ್ಣಳಲ್ಲ” Read Post »









