ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಹಮೀದಾಬೇಗಂ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ ಹಮೀದಾಬೇಗಂ ದೇಸಾಯಿ ಅವರ ಗಜಲ್ ಬಾಲರವಿಯು  ಕದ್ದನೇನು  ಅವಳ ಅಧರದ  ಕೆಂಪನು  ಸಾಕಿಗುಲಾಬಿ  ಹೂವು ಬೇಡಿತೇ ನಲ್ಲೆಯ  ಕೆನ್ನೆಯ  ರಂಗನು  ಸಾಕಿ ಅದೇಕೆ  ಬಾನು ನೀರಸಗೊಂಡಿದೆ  ಮೇಘ ಮುಸುಕಿನಲಿಚಂದ್ರಿಕೆಯು  ಸೆಳೆಯಿತೇ ನನ್ನವಳ  ಮೈಯ  ಬಿಳುಪನು  ಸಾಕಿ ಹೂದೋಟವೆಲ್ಲವೂ  ಘಮಘಮಿಸಿದೆ ಅರಳಿದರಳುಗಳ ಸೌಗಂಧದಿಂದಭ್ರಮರ  ಬೆರಗುಗೊಂಡಿತೇ ಕಂಡು ಚೆಲುವೆಯ ಕುರುಳನು  ಸಾಕಿ ಕಡಲ ಅಲೆಗಳು ನಗುತಿವೆ  ಒಯ್ಯಾರದಲಿ  ದಡವ ಚುಂಬಿಸುತಲಿಕಾರ್ಮೋಡ  ಚಕಿತಗೊಂಡಿತೇ ನೋಡಿ  ಕಂಗಳ  ಕಾಡಿಗೆಯನು  ಸಾಕಿ ಠೀವಿಯಲಿ  ಗರಿಗೆದರಿ ಕುಣಿಯುತಿದೆ  ನವಿಲೊಂದು  ದೂರದಲಿಹೃದಯ ಹಾಡುತಿಹುದೇ ರಾಗವಾಗಿ  ಬೇಗಂ ಳ ಒಲವನು ಸಾಕಿ ಹಮೀದಾಬೇಗಂ ದೇಸಾಯಿ.

ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ.ರೇಖಾ ಉದಯ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾ ಉದಯ ಗಜಲ್ ಇಲ್ಲೊಂದಿಷ್ಟು ಸಹಿಸಲಾಗದ್ದನ್ನು ಸಹಿಸಬೇಕಿದೆ ನೋಡುಕೆಲವೊಂದಿಷ್ಟು ಕೇಳಲಾಗದ್ದನ್ನು ಕೇಳಿಸಬೇಕಿದೆ ನೋಡು ಅವರಿವರ ಡೊಂಬರಾಟದ ಹೋರಾಟಗಳಾಗಾಗ ನೋಡುತ್ತಿರುಮೂರು ಮಂಗಗಳು ಉದಾಹರಣೆ ತಿಳಿಸಬೇಕಿದೆ ನೋಡು ನ್ಯಾಯ ಪ್ರಾಮಾಣಿಕತೆಗಳ ಮೂಟೆ ಕಟ್ಟಿ ಮೂಲೆ ಸೇರಿವೆಬಕೆಟ್ ಹಿಡಿದು ಬದುಕುವವರಿಗೆ ಬಿಸಿ ಮುಟ್ಟಿಸಬೇಕಿದೆ ನೋಡು ಇಲ್ಲಿ ತಿಳಿದು ತಿಳಿಯದಂತಿಹರು ಅನೇಕಾನೇಕ ಬುದ್ಧಿವಂತರುಕತ್ತಲೆಯಲ್ಲಿ ಅಡಗಿದವರಿಗೆ ಜ್ಞಾನದ ಕಿಡಿ ಹೊತ್ತಿಸಬೇಕಿದೆ ನೋಡು ಮತ್ತೊಮ್ಮೆ ಅವತಾರವೆತ್ತಬೇಕಿದೆ ಶ್ರೀಹರಿ ಭೂಗರ್ಭದಲ್ಲಿ ರೇಖೂಮುಂದಿನ ಪೀಳಿಗೆಗಾದರೂ ಸಂಸ್ಕಾರಗಳ ಕಲಿಸಬೇಕಿದೆ ನೋಡು ರೇಖಾಕ್ಷರ

ಡಾ.ರೇಖಾ ಉದಯ ಅವರ ಗಜಲ್ Read Post »

ಇತರೆ

“ಮಕ್ಕಳು ಮತ್ತು ಸ್ವಾತಂತ್ರ್ಯ.” ವಿಶೇಷ ಲೇಖನ ಜಯಲಕ್ಷ್ಮಿ .ಕೆ

ಮಕ್ಕಳ ಸಂಗಾತಿ ಜಯಲಕ್ಷ್ಮಿ .ಕೆ “ಮಕ್ಕಳು ಮತ್ತು ಸ್ವಾತಂತ್ರ್ಯ.” ನನ್ನ ಗೆಳತಿಯೊಬ್ಬಳ ಜೊತೆಗೆ ಮೈಸೂರಿನ ಬಟ್ಟೆ ಮಳಿಗೆಯೊಂದಕ್ಕೆ ಹೋಗಿದ್ದೆ.ಆಕೆಯ ಅವಳಿ ಮಕ್ಕಳ ಹುಟ್ಟುಹಬ್ಬ ಸ್ವಾತಂತ್ರ್ಯ ದಿನಾಚರಣೆಯಂದೇ ಆಗಿದ್ದುದರಿಂದ ಮಕ್ಕಳ ಬಟ್ಟೆಯ ಆಯ್ಕೆಯ ಸಂಪೂರ್ಣ ಸ್ವಾತಂತ್ರ್ಯವನ್ನು ಅವರಿಗೇ ಬಿಡಲಾಗಿತ್ತು. ಮಕ್ಕಳು ಇಷ್ಟ  ಪಟ್ಟ ಬಟ್ಟೆಗಳು ( ತಾಯಿಗೆ ಇಷ್ಟ ಆಗದಿದ್ದರೂ )ಖರೀದಿ ಮಾಡಲೇಬೇಕಾದ ಅವಿವಾರ್ಯತೆಯಲ್ಲಿದ್ದಳು ನನ್ನ ಗೆಳತಿ. ಮಕ್ಕಳು ಬಟ್ಟೆ ಆರಿಸಿದ್ದೇ ಆರಿಸಿದ್ದು… ಕೊನೆಗೂ ಆಯ್ಕೆ ಮುಗಿಯಿತು. ಬಹು ಹೊತ್ತು ಅಲ್ಲೇ ನಿಂತಿದ್ದರಿಂದ ದಣಿವು ಹಸಿವು ಎರಡೂ ಆಗಿತ್ತು. ಬಟ್ಟೆ ಮಳಿಗೆಯಿಂದೀಚೆ ಬಂದ ತಕ್ಷಣ  ಏನಾದರೂ ತಿನ್ನೋಣ ಎಂದೆನಿಸಿತ್ತು. ಮತ್ತೆ ಹೋಟೆಲ್ ನ ಆಯ್ಕೆ.. ಅಲ್ಲಿ ತಿನಿಸಿನ ಆಹಾರದ ಆಯ್ಕೆ ಎಲ್ಲ ಸ್ವಾತಂತ್ರ್ಯ  ಮಕ್ಕಳದ್ದೇ ಆಗಿತ್ತು. ಅಲ್ಲಿಂದ ಮರಳಿ ಮನೆಗೆ ಬಂದರೆ ಅಲ್ಲೂ ಮಕ್ಕಳಿಗೆ ನೀಡುತ್ತಿದ್ದ ಅತಿಯಾದ ಸ್ವಾತಂತ್ರ್ಯ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇಬ್ಬರಿಗೂ ಪ್ರತ್ಯೇಕ ಮೊಬೈಲ್.. ಮೊಬೈಲ್ ಗೇಮ್ ಜೊತೆ ಜೊತೆಗೇ  ಮಕ್ಕಳ ಆಯ್ಕೆಯ ಟಿ ವಿ ಸೀರಿಯಲ್ ವೀಕ್ಷಣೆ!! ಇಷ್ಟೆಲ್ಲಾ ಆದ ಮೇಲೂ ಒಂದರ್ದ ಗಂಟೆ ಓದಿಕೊಳ್ಳಿ ಎಂದು ಹೇಳಿದ್ದಕ್ಕೆ ” ನಮಗೆ ಸ್ವಾತಂತ್ರ್ಯಾನೇ  ಇಲ್ಲ ” ಎನ್ನುತ್ತಾ ಸಿಟ್ಟು ಮಾಡಿಕೊಂಡು ಆ ಮಕ್ಕಳು  ನಿದ್ದೆ ಮಾಡಿದವು!! ಇವನ್ನೆಲ್ಲ ನೋಡಿ ಸ್ವಾತಂತ್ರ್ಯ ಎನ್ನುವ ಪದದ ಅರ್ಥವೇನು ಎಂದು ಯೋಚಿಸತೊಡಗಿದೆ. ನಮ್ಮ ಬಾಲ್ಯದಲ್ಲಿ, (ಬಾಲ್ಯದಲ್ಲಿ ಅನ್ನುವುದಕ್ಕಿಂತ ದುಡಿದು ಗಳಿಸುವ ಹಂತಕ್ಕೆ ನಾವು ತಲುಪುವವರೆಗೂ ಎಂದೇ ಹೇಳಬಹುದು )ಬಟ್ಟೆ, ಊಟ ವಸತಿ ಈ ಎಲ್ಲವುಗಳ ಆಯ್ಕೆ ಅಪ್ಪ ಅಮ್ಮ ಅಥವಾ ಮನೆಯ ಹಿರಿಯರದ್ದೇ ಆಗಿತ್ತು. ಆಗ ನಮಗೆ ಸ್ವಾತಂತ್ರ್ಯ ಬೇಕು ಎಂದು ಅನಿಸುತ್ತಲೇ ಇರಲಿಲ್ಲ. ಸ್ವಾತಂತ್ರ್ಯ ಎಂದರೆ ನೆನಪಾಗುತ್ತಿದ್ದದ್ದು ಆಗಸ್ಟ್ 15 ರ ಸಂಭ್ರಮ! ಅಷ್ಟೇ. ಅಗತ್ಯ ವಸ್ತುಗಳನ್ನು ಕೇಳಲೂ ಭಯಪಡುತ್ತಿದ್ದ ಕಾಲವದು. ಆದರೆ ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ಕೇಳಿದ ವಸ್ತುಗಳನ್ನು ತೆಗೆದು ಕೊಡದಿದ್ದರೆ ಮಕ್ಕಳು ಏನು ಮಾಡಿಕೊಳ್ಳುವರೋ ಎಂದು ಭಯಪಡುವ ಸ್ಥಿತಿ ಪೋಷಕರದ್ದು .  ಹೊರಗಿನ ನಿಯಂತ್ರಣದಿಂದ ಮುಕ್ತವಾಗಿ ನಮ್ಮ ಮನ ದಿಚ್ಚೆಯಂತೆ ಬದುಕುವ ನಿರಾಳ ಸ್ಥಿತಿಯನ್ನು ಸ್ವಾತಂತ್ರ್ಯ ಎನ್ನಬಹುದು. ನಮ್ಮ ಜೀವನ ಇನ್ನೊಬ್ಬರ ಅಧೀನದಲ್ಲಿ ಇಲ್ಲದೆ ನಮ್ಮ ಸ್ವಂತಿಕೆಯನ್ನು ಯಾರೂ ಪ್ರಶ್ನಿಸಲಾಗದ ಸ್ಥಿತಿಯಲ್ಲಿ ನಾವಿದ್ದರೆ ನಾವು ಸ್ವತಂತ್ರರು ಎಂದು ಅರ್ಥ. ಒಂದು ದೇಶ ತನ್ನದೇ ಆದ ಕಾನೂನುಗಳನ್ನು ರಚಿಸಿಕೊಂಡು ಅವುಗಳನ್ವಯ ಆಡಳಿತವನ್ನು ಸುಸೂತ್ರವಾಗಿ ನಡೆಸುತ್ತಿದ್ದರೆ ಅದನ್ನು ಸ್ವತಂತ್ರ ದೇಶವೆನ್ನುತ್ತೇವೆ.  ವ್ಯಕ್ತಿಯೊಬ್ಬ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದು,ಊಟ ವಸತಿ ವಸ್ತ್ರಗಳ ವಿಚಾರದಲ್ಲಿ ತನ್ನ ಆಯ್ಕೆಯಾನುಸಾರ ಬದುಕುತ್ತಿದ್ದಾನೆಂದರೆ ಅದು ಅವನ  ವೈಯಕ್ತಿಕ ಸ್ವಾತಂತ್ರ್ಯ. ಚಿತ್ತ ಚಂಚಲತೆಯನ್ನು ಹೊಂದಿರದೆ ತನ್ನ ಭಾವನೆಗಳನ್ನು ಇತರರ ಅಭಿಪ್ರಾಯಗಳಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳದೆ ಸ್ವಾಭಿಮಾನದಿಂದ ಬದುಕುವ ವ್ಯಕ್ತಿ ಭಾವನಾತ್ಮಕವಾಗಿ ಸ್ವತಂತ್ರವಾಗಿದ್ದಾನೆ ಎಂದರ್ಥ. ತಮ್ಮ ಎಲ್ಲ ಬೇಡಿಕೆಗಳ ಪೂರೈಕೆಗೆ ಪೋಷಕರನ್ನೇ ಸಂಪೂರ್ಣವಾಗಿ ಅವಲಂಬಿಸಿರುವ ಭೂತ ವರ್ತಮಾನ,ಭವಿಷ್ಯಗಳ ಬಗೆಗೆ ಕಿಂಚಿತ್ತೂ ಚಿಂತನೆ ಮಾಡಲಾಗದ ಎಳೆ ಮಕ್ಕಳು ಕೇಳುವ ಸ್ವಾತಂತ್ರ ಯಾವ ವರ್ಗದ್ದು ಎನ್ನುವುದೇ ಒಂದು ಉತ್ತರ ಕಂಡುಕೊಳ್ಳಲಾಗದ ಪ್ರಶ್ನೆ!  ಮಿತಿಮೀರಿದ ಸ್ವಾತಂತ್ರ್ಯ ಸ್ವೇಚ್ಛಾಚಾರಕ್ಕೆ ಎಡೆ ಮಾಡಿಕೊಡುತ್ತದೆ ಎನ್ನುವ ಒಂದು ಮಾತಿದೆ. ಮಕ್ಕಳಿಗಾಗಲಿ ದೊಡ್ಡವರಿಗಾಗಲಿ ಬದುಕಲು ಸ್ವಾತಂತ್ರ್ಯ ಬೇಕು. ಆದರೆ ಆ ಸ್ವಾತಂತ್ರ್ಯ ಕಡಿವಾಣವಿಲ್ಲದ ಕುದುರೆಯಂತಾಗಬಾರದು. ಮಕ್ಕಳ ವಿಚಾರಕ್ಕೆ ಬಂದಾಗ ತುಂಬಾ ಚಿಂತನೆ ಮಾಡಬೇಕಾದ ಅಂಶವಿದು. ಇಂದು ನಾವು ಅವರಿಗೆ ನೀಡುವ ಸ್ವಾತಂತ್ರ್ಯ ನಾಳಿನ ಅವರ ಬಾಳ ಹಾದಿಗೆ ಕಂಟಕವಾಗಬಾರದು. ಮನೆಯಲ್ಲಿ ಮಕ್ಕಳ ತಾಳಕ್ಕೆ ತಕ್ಕಂತೆ ಕುಣಿಯುವ ಅಸಹಾಯಕ ಸ್ಥಿತಿ ಪೋಷಕರದ್ದು. ಶಾಲೆಯಲ್ಲಿ ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದಿ ಹೇಳಲಿಕ್ಕೂ ಹೆದರುವ ಪರಿಸ್ಥಿತಿ ಶಿಕ್ಷಕರದ್ದು. ಬೇರೆಯವರ ಮಕ್ಕಳು.. ತಿದ್ದಿ ಬುದ್ಧಿ ಹೇಳಿದರೆ  ಸಂಬಂಧವೆಲ್ಲಿ ಹಾಳಾಗುವುದೋ ಎನ್ನುವ ಆತಂಕ ಸಮಾಜದ್ದು. ಅಗತ್ಯಕ್ಕೂ ಮೀರಿ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿದ ಕಾನೂನು. ಇವೆಲ್ಲವುಗಳ ನಡುವೆ  ಸರಿ ತಪ್ಪುಗಳ ವಿಮರ್ಶೆ ಮಾಡಲಾಗದ ಸ್ಥಿತಿಯ ಮಕ್ಕಳು. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎನ್ನುವಂತೆ  ಮಕ್ಕಳನ್ನು ತಿದ್ದುವ ಹೊಣೆಗಾರಿಕೆ ಯಾರದ್ದು ಎನ್ನುವುದೇ ಯಾರ ಚಿಂತನೆಗೂ ನಿಲುಕದ ವಿಚಾರ.  ಬೆಳೆಯುವ ಮಕ್ಕಳಿಗೆ ಸ್ವಾತಂತ್ರ್ಯ ಬೇಕು. ದೇಹ ಮನಸುಗಳನ್ನು ಆರೋಗ್ಯವಾಗಿರಿಸುವಷ್ಟು ಆಟವಾಡಲು, ತಮ್ಮಲ್ಲಿನ  ಬುದ್ಧಿಶಕ್ತಿ ಯನ್ನು ಒರೆಗೆ ಹಚ್ಚಲು, ಕ್ರಿಯಾಶೀಲತೆಯನ್ನು ಸೂಕ್ತ ರೀತಿಯಲ್ಲಿ  ಬಳಸಿಕೊಳ್ಳಲು,ಸುಪ್ತ ಪ್ರತಿಭೆಗಳನ್ನು ಸೂಕ್ತ ವೇದಿಕೆಗಳಲ್ಲಿ ಅನಾವರಣಗೊಳಿಸಲು,ಮನದ ಕುತೂಹಲಕ್ಕೆ ಉತ್ತರವನ್ನು ಕಂಡುಕೊಳ್ಳಲು ಸ್ವಾತಂತ್ರ್ಯ ಬೇಕು. ಈ ಎಲ್ಲ ಸಂದರ್ಭಗಳಲ್ಲಿಯೂ  ಮಕ್ಕಳಿಗೆ ನೀಡುವ ಸ್ವಾತಂತ್ರ್ಯಕ್ಕೆ ಒಂದು ಎಲ್ಲೆ ಇರಬೇಕು. ಮಕ್ಕಳ ಇಚ್ಛೆಯಂತೆಯೇ ಎಲ್ಲವೂ ನಡೆಯಲಿ ಎನ್ನುವ ಭಾವಕ್ಕೆ ಸ್ವಾತಂತ್ರ್ಯ ಎನ್ನುವುದಿಲ್ಲ.  ಇಂದು ಮಕ್ಕಳಿಗೆ ನಾವು ನೀಡುವ ಸ್ವಾತಂತ್ರ್ಯ ನಾಳಿನ ಅವರ ಬದುಕಿಗೆ ಮಾರಕವಾಗಬಾರದು. ಮಿತಿಮೀರಿದ ಸ್ವಾತಂತ್ರ್ಯ ಅಪಾಯಕಾರಿ ಎನ್ನುವ ಮಾತು ಮಕ್ಕಳ ವಿಚಾರಕ್ಕೆ ಹೇಳಿ ಮಾಡಿಸಿದಂತಿದೆ. ಮಕ್ಕಳಿಗೆ ನಾವು ನೀಡುವ ಸ್ವಾತಂತ್ರ್ಯ ಅವರ ಭವಿಷ್ಯಕ್ಕೆ ಉರುಳಾಗಬಾರದು. ಕುಸಿಯುತ್ತಿರುವ ಶೈಕ್ಷಣಿಕ ಮೌಲ್ಯದ ಜೊತೆ ಜೊತೆಗೆ ಮಕ್ಕಳ ನೈತಿಕ ಮೌಲ್ಯಗಳೂ ಕುಸಿದರೆ ಅವರ ಮುಂದಿನ ಬಾಳಿಗೆ ದಾರಿ ತೋರುವವರು ಯಾರು ಎನ್ನುವುದು ಹಿರಿಯರಾದ ನಮ್ಮೆಲ್ಲರ ಚಿಂತನೆಯಾಗಬೇಕು. ಇದು ಇಂದಿನ ಅವಶ್ಯ ಕೂಡ.  ಅಸುರಕ್ಷಿತ ಸಂಬಂಧಗಳು, ಹಾನಿಕಾರಕ ಹವ್ಯಾಸಗಳು, ಮಿತಿ ಮೀರಿದ ಹಠ . ಬಯಸಿದ್ದೆಲ್ಲ ಸಿಗಲೇಬೇಕು ಎನ್ನುವ ಮನೋ ಭಾವ, ಶಿಸ್ತಿಲ್ಲದ ಜೀವನ ಕ್ರಮ.. ವೈಭವೀ ಬದುಕಿಗೆ ಹಾತೊರೆದು ಅವರು ತುಳಿಯುವ ಅಡ್ಡದಾರಿ ಇವೆಲ್ಲವೂ ಬಾಲ್ಯದಲ್ಲಿ ನಾವು ನೀಡಿದ ಸ್ವಾತಂತ್ರ್ಯದ ಪರಿಣಾಮವೇ ಏನೋ ಎಂದೆನಿಸುತ್ತದೆ. ಹಾಗೆಂದು ನಮ್ಮ ಮುಷ್ಟಿಯಲ್ಲಿಯೇ ಮಕ್ಕಳಿರಬೇಕು.. ಮಕ್ಕಳು ಹೆಜ್ಜೆ ಹೆಜ್ಜೆಗೂ ನಮ್ಮ ಮಾತಿನಂತೆಯೇ ನಡೆಯಬೇಕು ಎನ್ನುವ ಹಿರಿಯರ ಕಠಿಣ ನಿಲುವು ಕೂಡಾ ಸರಿಯಲ್ಲ. ಬಹುಶಃ ವಯೋಮಾನಕ್ಕೆ ಅನುಗುಣವಾಗಿ ಮಕ್ಕಳ ಮಾನಸಿಕ ಬೆಳವಣಿಗೆಗೆ ಅಡ್ಡಿ ಆಗದ ರೀತಿಯಲ್ಲಿ ಸ್ವಾತಂತ್ರ್ಯ ನೀಡುವುದು ಉತ್ತಮ. ಯಾವ ಹಂತದಲ್ಲಿ ಯಾವ ಸ್ವಾತಂತ್ರ್ಯ ನೀಡಬೇಕು ಎನ್ನುವುದು ಪೋಷಕರ ವಿವೇಚನೆಗೇ ಬಿಟ್ಟದ್ದು. ಜಯಲಕ್ಷ್ಮಿ ಕೆಮಡಿಕೇರಿ.

“ಮಕ್ಕಳು ಮತ್ತು ಸ್ವಾತಂತ್ರ್ಯ.” ವಿಶೇಷ ಲೇಖನ ಜಯಲಕ್ಷ್ಮಿ .ಕೆ Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-34 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದಮಹಾನ್‌ ಚೇತನ ರಾಷ್ಟ್ರ ಐಕ್ಯತೆ -ಅಖಂಡ ಭಾರತ *ಭಾರತ ಸ್ವಾತಂತ್ರ್ಯ ಪಡೆದ ನಂತರ ದೇಶವನ್ನು ಭಾಷಾವಾರು ಪ್ರಾಂತಗಳಾಗಿ ಪುನರ್ರಚಿಸುವ ಬೇಡಿಕೆ ಬಲವಾಗಿತ್ತು. ಕನ್ನಡಿಗರು ಕೂಡ ಎಲ್ಲ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಅಖಂಡ ಕರ್ನಾಟಕವನ್ನು ನಿರ್ಮಿಸಬೇಕು ಎಂದು ಹೋರಾಟ ನಡೆಸುತ್ತಿದ್ದರು. ಆದರೆ ಆ ಸಂದರ್ಭದಲ್ಲಿ ದೇಶದ ರಾಜಕೀಯ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿತ್ತು. ಒಂದೆಡೆ ಪಾಕಿಸ್ತಾನದ ವಿಭಜನೆಯ ಪರಿಣಾಮಗಳು, ಮತ್ತೊಂದೆಡೆ ಬಂಗಾಳದ ವಿಭಜನೆ ಮತ್ತು ಗಡಿಭಾಗದ ಸಮಸ್ಯೆಗಳು, ಇನ್ನೊಂದೆಡೆ ಗೋವಾ ವಿಮೋಚನೆಗಾಗಿ ಹೋರಾಟ ನಡೆದಿದ್ದವು.ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ರಾಜಕೀಯ ಅಶಾಂತಿ. ಇವೆಲ್ಲವೂ ಭಾರತದ ಏಕತೆಗೆ ಸವಾಲಾಗಿದ್ದವು.ಇಂತಹ ಸಂದರ್ಭಗಳಲ್ಲಿ ಕೇವಲ ಭಾಷೆಯ ಆಧಾರದ ಮೇಲೆ ಪರಸ್ಪರ ಸಂಘರ್ಷ ಮಾಡುವುದು ದೇಶದ ಹಿತಕ್ಕೆ ಮಾರಕವಾಗಬಹುದು ಎಂಬುದು ಜಯದೇವಿ ತಾಯಿಯವರ ಚಿಂತನೆಯಾಗಿತ್ತು .ಭಾರತ ಸ್ವಾತಂತ್ರ್ಯ ಪಡೆದ ನಂತರ ದೇಶದ ಗಡಿಗಳು, ರಾಷ್ಟ್ರೀಯ ಏಕತೆ, ಪ್ರಾದೇಶಿಕ ಸಮಸ್ಯೆಗಳು ಮತ್ತು ಜನರ ಭದ್ರತೆ ಮುಂತಾದ ಅನೇಕ ಪ್ರಶ್ನೆಗಳು ಎದುರಾಗಿದ್ದವು.ಇಂತಹ ಸಮಯದಲ್ಲಿ “ನನ್ನ ಭಾಷೆ ಶ್ರೇಷ್ಠ, ನಿನ್ನ ಭಾಷೆ ಕಡಿಮೆ” ಎಂಬ ರೀತಿಯ ಭಾಷಾ ವೈಷಮ್ಯ ಬೆಳೆಸಿದರೆ, ಅದು ದೇಶದ ಒಗ್ಗಟ್ಟನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಭಾಷೆ ನಮ್ಮ ಅಭಿಮಾನ ಮತ್ತು ಸಂಸ್ಕೃತಿಯ ಸಂಕೇತವಾಗಿರಬೇಕು….ಸಂಘರ್ಷದ ಕಾರಣವಾಗಬಾರದು ಎಂಬ ಸಂದೇಶವನ್ನು ಅವರು ನೀಡಿದರು.ಭಾಷೆ ಮುಖ್ಯ, ಆದರೆ ದೇಶದ ಏಕತೆ ಇನ್ನೂ ಮುಖ್ಯ ಎಂದರು. ಕನ್ನಡಿಗರಿಗೆ ತಮ್ಮದೇ ಆದ ಏಕೀಕೃತ ಕರ್ನಾಟಕ ಬೇಕು.ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಉಳಿಸಬೇಕು……ಆದರೆ ಅದಕ್ಕಾಗಿ ಇತರ ಭಾಷೆಯ ಜನರನ್ನು ದ್ವೇಷಿಸಬಾರದು.ಭಾಷೆಯ ಹೆಸರಿನಲ್ಲಿ ಜಗಳ, ದ್ವೇಷ ಮತ್ತು ವಿಭಜನೆ ಉಂಟಾಗಬಾರದು. ಎಲ್ಲಕ್ಕಿಂತ ಮೊದಲು ನಾವು ಭಾರತೀಯರು ಎಂಬ ರಾಷ್ಟ್ರೀಯ ಭಾವನೆ ಇರಬೇಕು.ಅಂದರೆ “ಕನ್ನಡವನ್ನು ಪ್ರೀತಿಸಿ, ಆದರೆ ಇತರ ಭಾಷೆಗಳನ್ನು ದ್ವೇಷಿಸಬೇಡಿ” ಎಂಬ ಉದಾತ್ತ ಚಿಂತನೆ ಅವರ ಮಾತಿನಲ್ಲಿ ಕಾಣಿಸುತ್ತದೆ. “ದೇಶದ ಐಕ್ಯತೆಯ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಮುಖ್ಯ” ದೇಶದ ಸ್ವಾಭಿಮಾನ, ರಾಷ್ಟ್ರೀಯ ಏಕತೆ, ಸಾರ್ವಭೌಮತ್ವ ಮತ್ತು ಒಗ್ಗಟ್ಟು.ದೇಶವು ಹೊರಗಿನ ಮತ್ತು ಒಳಗಿನ ಹಲವು ಸವಾಲುಗಳನ್ನು ಎದುರಿಸುತ್ತಿರುವಾಗ, ಜನರು ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಲ್ಲಿ ಸಿಲುಕಿಕೊಳ್ಳದೆ ರಾಷ್ಟ್ರದ ಹಿತವನ್ನು ಮೊದಲ ಸ್ಥಾನದಲ್ಲಿ ಇಡಬೇಕು ಎಂದು ಅವರು ತಿಳಿಸಿದರು. ಒಂದು ಮನೆಯಲ್ಲಿರುವವರು ಬೇರೆ ಬೇರೆ ಅಭಿಪ್ರಾಯ ಹೊಂದಿದ್ದರೂ ಮನೆ ಒಂದಾಗಿರುವುದು ಮುಖ್ಯ. ಅದೇ ರೀತಿ ಭಾರತದಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು, ಮರಾಠಿ, ಬಂಗಾಳಿ ಮುಂತಾದ ಅನೇಕ ಭಾಷೆಗಳನ್ನು ಮಾತನಾಡುವ ಜನರಿದ್ದರೂ ಭಾರತ ಎಂಬ ರಾಷ್ಟ್ರದ ಏಕತೆ ಉಳಿಯುವುದು ಅತ್ಯಂತ ಮುಖ್ಯ.”ಎಂದು ತಮ್ಮ ಭಾಷಣದಲ್ಲಿ ಹೇಳುತಿದ್ದರು. ಜಯದೇವಿ ತಾಯಿಯವರ  ಚಿಂತನೆ ಇಂದಿಗೂ ಬಹಳ ಪ್ರಸ್ತುತವಾಗಿದೆ. ಭಾಷೆ ನಮ್ಮ ಗುರುತು, ನಮ್ಮ ಸಂಸ್ಕೃತಿ, ನಮ್ಮ ಇತಿಹಾಸ. ಅದನ್ನು ಗೌರವಿಸಬೇಕು ಮತ್ತು ಬೆಳೆಸಬೇಕು. ಆದರೆ ಭಾಷೆಯ ಹೆಸರಿನಲ್ಲಿ ಮತ್ತೊಬ್ಬರನ್ನು ಕೀಳಾಗಿ ಕಾಣುವುದು ಅಥವಾ ದ್ವೇಷಿಸುವುದು ಸರಿಯಲ್ಲ.ಭಾಷಾ ವೈವಿಧ್ಯತೆ ಭಾರತದ ಶಕ್ತಿ….ರಾಷ್ಟ್ರೀಯ ಏಕತೆ ಭಾರತದ ಅಸ್ತಿತ್ವ. “ಭಾಷೆಯನ್ನು ಪ್ರೀತಿಸೋಣ, ಭಾಷಾ ಸಂಸ್ಕೃತಿಯನ್ನು ಉಳಿಸೋಣ…”ಎನ್ನುವರು. ಇದು ಕರ್ನಾಟಕ ಏಕೀಕರಣದ ಹೋರಾಟದಲ್ಲಿದ್ದರೂ ವಿಶಾಲವಾದ ಭಾರತೀಯ ರಾಷ್ಟ್ರೀಯತೆಯನ್ನು ಮರೆಯದ ಜಯದೇವಿ ತಾಯಿಯವರ ದೂರದೃಷ್ಟಿಯನ್ನು ತೋರಿಸುತ್ತದೆ. ಪಾಕಿಸ್ತಾನದವರು ಬಂಗಾಲದ ಅಲ್ಪಸಂಖ್ಯಾತರ ಮೇಲೆ ಎರಡು ತಿಂಗಳ ಕಾಲ ಹವ್ಯಾಹಾತವಾಗಿ ಸತತ ಆಕ್ರಮಣ ಮಾಡಿದರು ಇಂತಹ ಅಮಾನುಷ ಘಟನೆಯನ್ನು ಪ್ರತಿಭಟಿಸಿ ಅಲ್ಲಲ್ಲಿ ಸಭೆಗಳು ನಡೆದವು ಸೊಲ್ಲಾಪುರದಲ್ಲಿಯೂ ಸರ್ವ ಪಕ್ಷಿಯ ಬಹಿರಂಗ ಸಭೆ ನಡೆಯಿತು ಈ ಸಭೆಗೆ ಸ್ತ್ರೀ ಪುರುಷರು ಬಹುಸಂಖ್ಯಾದಲ್ಲಿ ಉಪಸ್ಥಿತರಿದ್ದರು ಜಯದೇವಿ ತಾಯಿಯವರು ಮಾಡಿದ ಭಾಷಣ ಬಹಳ ಪ್ರಭಾವ ಬೀರಿತ್ತು ಎಲ್ಲ ಪತ್ರಿಕೆಗಳಲ್ಲಿ ವರದಿಯಾದವು.  ಬಂಗಾಳದಲ್ಲಿ ನಡೆದ ಅಮಾನುಷ ಹಿಂಸಾಚಾರವನ್ನು ಕಂಡು ಅನುಭವಿಸಿದ ಆಘಾತ, ನೋವು, ಆಕ್ರೋಶ ಮತ್ತು ಮಾನವೀಯ ಕಳಕಳಿ ಅತ್ಯಂತ ತೀವ್ರವಾಗಿ ವ್ಯಕ್ತಪಡಿಸಿದ್ದಾರೆ. “ಬೆಂದಿದೆ ಬಂಗಾಲ” ಕವನ ರಚನೆ ಮಾಡಿದರು*“ಬೆಂದಿದೆ ಬಂಗಾಲ”*“ಹಳ್ಳಿ ಪಟ್ಟಣಗಳು ಸುಟ್ಟು ಬೂದಿ ಮಾಡಿದರು,ಹೆಣಗಳ ರಾಶಿಯೊಟ್ಟಿದರು”“ಕಾಮಾಂಧರು ಕೋಮಲಾಂಗಿಯರ ಶೀಲಸೂರೆಗೈದರು”ಏನಿದ್ದ ಹೊಂಗನಾಡು? ಏನಾಯಿತು?”ಭಾರತೀಯರ ಬಂಗಾಳಿಗಳ ನರನಾಡಿಲಿ ಹರಿವರಕ್ತ ನೀರಾಯಿತೇ……….!!! ಈ ಸಾಲುಗಳಲ್ಲಿ ಬಂಗಾಳದಲ್ಲಿ ನಡೆದ ಭೀಕರ ಹಿಂಸಾಚಾರದ ಚಿತ್ರಣವಿದೆ. ಜನರು ನೆಮ್ಮದಿಯಿಂದ ಬದುಕುತ್ತಿದ್ದ ಹಳ್ಳಿಗಳು ಮತ್ತು ಪಟ್ಟಣಗಳು ಬೆಂಕಿಗೆ ಆಹುತಿಯಾಗಿ ನಾಶವಾದವು. ಜೀವಂತ ಜನರ ವಾಸಸ್ಥಳಗಳು ಸುಟ್ಟು ಬೂದಿಯಾದವು. ಎಲ್ಲೆಡೆ ಸಾವು-ನೋವು ತುಂಬಿ, ಹೆಣಗಳ ರಾಶಿ ಕಾಣುವಂತಹ ದಾರುಣ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಕವಯಿತ್ರಿ ನೋವಿನಿಂದ ಹೇಳುತ್ತಾರೆ.ಹಿಂಸಾಚಾರಕ್ಕೆ ಬಲಿಯಾದ ಮಹಿಳೆಯರ ದುಸ್ಥಿತಿಯನ್ನು ಚಿತ್ರಿಸಿದ್ದಾರೆ. ಯುದ್ಧ, ಕೋಮು ಹಿಂಸೆ ಅಥವಾ ರಾಜಕೀಯ ಸಂಘರ್ಷದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವು ಅತ್ಯಂತ ಅಮಾನುಷವಾದದ್ದು. ಇಂತಹ ಘಟನೆಗಳು ಅವರ ಮನಸ್ಸನ್ನು ತೀವ್ರವಾಗಿ ಘಾಸಿಗೊಳಿಸಿವೆ. ಮಹಿಳೆಯರ ಗೌರವ ಮತ್ತು ಮಾನವೀಯತೆಯನ್ನೇ ತುಳಿದುಹಾಕಿದ ಕ್ರೌರ್ಯವನ್ನು ಅವರು ಖಂಡಿಸಿದ್ದಾರೆ. ಈ ಪ್ರಶ್ನೆಗಳಲ್ಲಿ ಕವಯಿತ್ರಿಯ ತಳಮಹ, ದುಃಖ ಮತ್ತು ಅಸಹಾಯಕತೆ ವ್ಯಕ್ತವಾಗುತ್ತದೆ. ಒಮ್ಮೆ ಸಮೃದ್ಧಿ, ಸೌಂದರ್ಯ ಮತ್ತು ಸಾಂಸ್ಕೃತಿಕ ವೈಭವದಿಂದ ಕೂಡಿದ್ದ ಬಂಗಾಳವು ಇಂತಹ ರಕ್ತಪಾತದ ನೆಲವಾಗಿ ಹೇಗೆ ಬದಲಾಯಿತು? ಜನರು ಪರಸ್ಪರ ಪ್ರೀತಿ ಮತ್ತು ಸಹಬಾಳ್ವೆಯಿಂದ ಬದುಕುತ್ತಿದ್ದ ನಾಡಿನಲ್ಲಿ ಇಷ್ಟೊಂದು ದ್ವೇಷ ಮತ್ತು ಹಿಂಸೆ ಹೇಗೆ ಹುಟ್ಟಿತು? ಎಂಬ ಪ್ರಶ್ನೆಯ ಕೇಳಿದರು.ಇದು ಕೇವಲ ಬಂಗಾಳದ ದುಃಖವಲ್ಲ ಇಡೀ ಮಾನವ ಸಮಾಜದ ಅಧಃಪತನದ ಬಗ್ಗೆ ಅವರಿಗೆ ಆತಂಕವಿತ್ತು. *ಜಾತಿ ಸೂತಕವಳಿದು ನೀತಿಯೇ ಹಿರಿದೆಂದು ಪ್ರೀತಿಯಿಂದ ಎಲ್ಲರನ್ನು ಕಾಣುತ ಇರಬೇಕುಪತಿತ ಪಾವನ ನೀವು ನಾವಾಗಬೇಕು* ಮತವು ಮನುಷ್ಯನಿಗೆ ನೀತಿ, ದಯೆ, ಪ್ರೀತಿ ಮತ್ತು ಸಹಬಾಳ್ವೆ ಕಲಿಸಬೇಕೇ ಹೊರತು ದ್ವೇಷ ಮತ್ತು ಹಿಂಸೆಯನ್ನು ಕಲಿಸಬಾರದು. ಆದರೆ ಮತದ ಹೆಸರಿನಲ್ಲಿ ಮನುಷ್ಯನೇ ಮನುಷ್ಯನ ಶತ್ರುವಾದಾಗ, ಧರ್ಮದ ನಿಜವಾದ ಉದ್ದೇಶವೇ ನಾಶವಾಗುತ್ತದೆ… ಬಂಗಾಳಿಗಳ ಮೇಲೆ ನಡೆದ ಹತ್ಯಾಕಾಂಡದ ತೀವ್ರತೆಯನ್ನು ವ್ಯಕ್ತಪಡಿಸುತ್ತಾರೆ. “ಬೆಂದಿದೆ ಬಂಗಾಲ” ಪದ್ಯದಲ್ಲಿ ಜಯದೇವಿ ತಾಯಿಯವರು ಮೂರು ಪ್ರಮುಖ ವಿಚಾರಗಳನ್ನು ಅತ್ಯಂತ ಗಾಢವಾಗಿ ವ್ಯಕ್ತಪಡಿಸಿದ್ದಾರೆಹಿಂಸಾಚಾರ ಮತ್ತು ಹತ್ಯಾಕಾಂಡದ ವಿರುದ್ಧದ ತೀವ್ರ ಪ್ರತಿಭಟನೆ ಕೋಮು ದ್ವೇಷದ ವಿರುದ್ಧದ ಎಚ್ಚರಿಕೆ.ಶಾಂತಿ, ಸಹೋದರತ್ವ ಮತ್ತು ಮಾನವೀಯತೆಯ ಪರವಾದ ದೃಢವಾದ ನಿಲುವು.ಹೀಗಾಗಿ ಈ ಪದ್ಯವನ್ನು ಬಂಗಾಳದ ದುರಂತದ ವರ್ಣನೆ ಆದರೂ ಇದು “ಧರ್ಮ ಮನುಷ್ಯನನ್ನು ಮನುಷ್ಯನಿಂದ ದೂರ ಮಾಡಬಾರದು…. ಮಾನವೀಯತೆಯೇ ಎಲ್ಲಕ್ಕಿಂತ ದೊಡ್ಡ ಧರ್ಮ” ಎಂಬ ಜಯದೇವಿ ತಾಯಿಯವರ ಉದಾತ್ತ ಸಂದೇಶವನ್ನು ಸಾರುವ ಕವನವಾಗಿದೆ. ಇನ್ನೊಂದೆಡೆ ಭಾರತೀಯರ ಮೇಲೆ ಚೀನಿಯರು ಅಕ್ರಮಣ ನಡೆಯಿತು ಆ ಹೊತ್ತಿಗೆ ಈ ದೇಶದಲ್ಲಿ ಹಲವಾರು ಆಂತರಿಕ ಸಮಸ್ಯೆಗಳು ಎದಿದ್ದವು ಅದನ್ನೇ ದೊಡ್ಡದು ಮಾಡದೇ ದೇಶದ ಭದ್ರತೆಯ ಕಡೆಗೆ ಗಮನವಿಡಲು ಕರೆಕೊಟ್ಟರು .ಗಡಿ ವಿವಾದದ ಮಧ್ಯೆ  ಭಾಷಾವಾರು ಪ್ರಾಂತದ ಚಳುವಳಿ ಬೇಡವೆಂದು ಜನತೆಗೆ ಮನವಿ ಮಾಡಿದರು. ರಾಜಕಾರಣಿಗಳು ಇಂಥ ಅವಕಾಶವನ್ನು ದುರುಪಯೋಗ ಪಡಿಸಿ ಕೊಳ್ಳಬಾರದು ಎಂದು ಎಚ್ಚರಿಕೆ ಕೊಟ್ಟರು ರಾಜ್ಯಕ್ಕಿಂತ ರಾಷ್ಟ್ರ ಚಿಂತೆ ಮುಖ್ಯ ಪರಸ್ಥಿತಿಯನ್ನು ಕೆಡದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕೆ ವಹಿಸಲು ಹೇಳಿದರು. ಇನ್ನೊಂದಡೆ ಗೋವಾ ದೀವ ದಮನ ಪ್ರದೇಶಗಳು ಪೋರ್ಚುಗೀಸರ ವಶವಾಗಿದ್ದವು ದೇಶ ಬಾಂಧವರು ಪರಕೀಯರ ಕೈಯಲ್ಲಿ ತೊಳಲಾಡುವುದು ಹೇಳಿದರು ಶಾಂತಿ ರೀತಿಯ ಹೋರಾಟಕ್ಕೆ ಬೆಂಬಲ ಸೂ ಭಾಷಿಕವಾಗಿ ಮತ್ತು ಸಂಸ್ಕೃತಿಕವಾಗಿ  ಕರ್ನಾಟಕಕ್ಕೆ ಉಳಿಸಿಕೊಳ್ಳುವುದು ಸೂಕ್ತ ಪ್ರಯತ್ನಗಳು ಸಾಗಬೇಕು ಮುಂದೋರಣೆಯಿಂದ ಕಾರ್ಯಾಚರಣೆ ಚಟುವಟಿಕೆ ತೊಡಗಬೇಕು ಗತ ವ್ಯುಭವದ ಮೈಸೂರು ಮಹಾರಾಷ್ಟ್ರ ಗಡಿ ಸಮಸ್ಯೆಯನ್ನು ನಿರ್ವಹಿಸಿದ ಹೊರತು ಅಧಿಕಾರದಲ್ಲಿ ಮುಂದುವರಿಯಲು ನಮ್ಮ ಮುಖಂಡರಿಗೆ ಯಾವ ನೈತಿಕ ಬಲವೂ ಇಲ್ಲ ತಮ್ಮ ಹೇಳಿಕೆಗಳ ಚಾಟಿ ಏಟಿನಿಂದ ಹೀಗೆ ಖಂಡನೆ ಮೇಲಿಂದ ಮೇಲೆ ಮಾಡುತ್ತಿದ್ದರು.  ಮಹಾರಾಷ್ಟ್ರವೂ ಗೋವಾ ತನಗೆ ಬೇಕೆಂದು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲು ಕೇಳಿ ಕೊಂಡಿತ್ತು.ಕರ್ನಾಟಕವು ತನಗೆ ಬೇಕೆಂದು ಬೇಡಿಕೆ ಮುಂದಿಟ್ಟಿತ್ತು .ಅಖಂಡ ಕರ್ನಾಟಕ ಏಕೀಕರಣ ಸಂಘದ ಉಪಾಧ್ಯಕ್ಷರಾಗಿ ಜಯದೇವಿ, ತಾಯಿಯವರು ಮೈಸೂರು ಗೋವಾ ಸಂಸ್ಕೃತಿಕ ಸಂಬಂಧ ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ಎಚ್ಎಫ್ ಕಟ್ಟಿಮನಿ ಮಾಸ್ತರು ,ಎಸ್ ನಿಜಲಿಂಗಪ್ಪ ,ಕೆ ಎಸ್ ಪಾಟೀಲ ಇವರೆಲ್ಲರೂ ಗೋವೆಯನ್ನು ಕರ್ನಾಟಕಕ್ಕೆ ಪಡೆಯುವ ಹೋರಾಟದಲ್ಲಿ ಪಾಲ್ಗೊಂಡಿದ್ದರು. ತಾಯಿಯವರು ಸೊಲ್ಲಾಪುರ ಸಹಿತ ಅಖಂಡ ಕರ್ನಾಟಕ ಏಕೀಕರಣದ ಕನಸನ್ನು ಹೊತ್ತಿದ್ದರು. ಜೊತೆ ಜೊತೆಗೆ ಅವರು ಯಾವಾಗಲೂ ರಾಷ್ಟ್ರದ ಐಕ್ಯತೆ ಮತ್ತು ಅಖಂಡ ಭಾರತದ ಕನಸು ಜಯದೇವಿ ತಾಯಿಯವರ ಹೃದಯದಲ್ಲಿ ಸದಾ ಧಗಧಗಿಸುವ ಜ್ವಾಲೆಯಂತಿತ್ತು. ಜಾತಿ, ಮತ, ಭಾಷೆ, ಪ್ರಾಂತಗಳ ಎಲ್ಲ ಭೇದಭಾವಗಳನ್ನು ಮೀರಿ, “ನಾವು ಭಾರತೀಯರು” ಎಂಬ ಏಕೈಕ ಭಾವನೆಯೇ ರಾಷ್ಟ್ರದ ನಿಜವಾದ ಶಕ್ತಿ ಎಂಬ ಅಚಲ ನಂಬಿಕೆಯಿಂದ ಅವರು ತಮ್ಮ ಬದುಕನ್ನು ರಾಷ್ಟ್ರಸೇವೆಗೆ ಸಮರ್ಪಿಸಿಕೊಂಡರು.ದೇಶದ ಏಕತೆ  ಹೃದಯಗಳ ಸಂಗಮ, ಭಾವನೆಗಳ ಸಮನ್ವಯ ಮತ್ತು ರಾಷ್ಟ್ರಪ್ರೇಮದ ಅಖಂಡ ಸಂಕಲ್ಪ ಎಂಬುದನ್ನು ಅವರು ತಮ್ಮ ಕಾರ್ಯದ ಮೂಲಕ ಸಾರಿದರು. ವಿಭಜನೆಯ ವಿಷಬೀಜಗಳು ಮೊಳಕೆಯೊಡೆಯುತ್ತಿದ್ದ ಸಂದರ್ಭದಲ್ಲಿಯೂ, ಜನಮನಗಳಲ್ಲಿ ದೇಶಪ್ರೇಮದ ಕಿಡಿಯನ್ನು ಹೊತ್ತಿಸಿ, ಒಗ್ಗಟ್ಟಿನ ಜ್ಯೋತಿಯನ್ನು ಬೆಳಗಿಸುವಲ್ಲಿ ಅವರು ನಿರಂತರವಾಗಿ ಶ್ರಮಿಸಿದರು. ಜಯದೇವಿ ತಾಯಿಯವರ ಜೀವನ ನಮಗೆ ಸಾರುವ ಸಂದೇಶ ಒಂದೇ….ಭಾರತದ ಅಖಂಡತೆ ನಮ್ಮ ಹೆಮ್ಮೆ, ರಾಷ್ಟ್ರದ ಐಕ್ಯತೆ ನಮ್ಮ ಹೊಣೆ, ದೇಶಪ್ರೇಮ ನಮ್ಮ ಪರಮ ಕರ್ತವ್ಯ. ತಾಯಿನಾಡು ನುಡಿ ನಮ್ಮ ಗೌರವ ಎಂದು ಸಾರಿದರು.ರಾಷ್ಟ್ರಕ್ಕಾಗಿ ಸಮರ್ಪಿತವಾದ ಅವರ ಜೀವನ ಸದಾಕಾಲವೂ ದೇಶಭಕ್ತಿಯ ದಾರಿಯಲ್ಲಿ ಬೆಳಕು ಚೆಲ್ಲುವ ದೀಪಸ್ತಂಭವಾಗಿ ಉಳಿಯುತ್ತದೆ. ಸವಿತಾ ದೇಶಮುಖ

Read Post »

ಅನುವಾದ, ಕಥಾಗುಚ್ಛ

“ದಿ ಮೇಕಿಂಗ್ ಆಫ್ ಅವರ್ ಡ್ರಾಮ-ದೇಶ ದ್ರೋಹಿಗಳು” ತೆಲುಗು ಸಣ್ಣಕಥೆ : ಜಿ. ಉಮಾಮಹೆೇಶ್ವರ್, ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು

ಕಥಾ ಸಂಗಾತಿ “ದಿ ಮೇಕಿಂಗ್ ಆಫ್ ಅವರ್ ಡ್ರಾಮ-ದೇಶ ದ್ರೋಹಿಗಳು” ತೆಲುಗು ಸಣ್ಣಕಥೆ : ಜಿ. ಉಮಾಮಹೆೇಶ್ವರ್, ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು ದಿ ಮೇಕಿಂಗ್  ಆಫ್  ಅವರ್ ಡ್ರಾಮ-ದೇಶ ದ್ರೋಹಿಗಳುತೆಲುಗು ಮೂಲ : ಜಿ. ಉಮಾಮಹೇಶ್ವರ್ಕನ್ನಡಕ್ಕೆ : ರಂಗನಾಥ  ರಾಮಚಂದ್ರರಾವು “ಸಾರ್, ಈಬಾರಿ ಆಗಸ್ಟ್  ಹದಿನೈದರಂದು ನಾವು ಕೂಡಾ ಒಂದು ನಾಟಕ ಪ್ರದರ್ಶಿಸಲು ಬಯಸುತ್ತಿದೇವೆ ಸಾರ್”ಸ್ಟಾಫ್  ರೂಮಿನಲ್ಲಿ ಒಬ್ಬಂಟಿಯಾಗಿ ಸಿಕ್ಕಿದ್ದ ವಿಜಯಕುಮಾರ್ ಸಾರ್ ಮುಂದೆ ನಮ್ಮ ಬಯಕೆಯನ್ನು ನಾನು-ಮಲ್ಲಿ ಹೇಳಿಕೊಂಡೆವು.ವಿಜಯಕುಮಾರ್ ಸಾರ್  ತೆಲುಗು ಶಿಕ್ಷಕರಷ್ಟೇಅಲ್ಲ, ಸಾಹಿತ್ಯ ಮತ್ತು ನಾಟಕಗಳನ್ನು ತುಂಬಾ ಪ್ರೀತಿಸುತ್ತಿದ್ದರು. ಅಲ್ಲೆನ್ನ ಸಾರ್ ಜೊತೆ ಸೇರಿ ಹಲವುನಾಟಕಗಳು,ಮತ್ತು ಏಕಾಂಕಗಳನ್ನು ಪ್ರದರ್ಶಿಸಿದ ಅನುಭಅವ ಅವರಿಗಿದೆ.“ಯಾವ ನಾಟಕವಪ್ಪಾ?” ಎಂದುಕೇಳಿದರು.“ದೇಶದ್ರೋಹಿಗಳು” ನಾನು ಉತ್ತರಿಸಿದೆ.“ದೇಶದ್ರೋಹಿಗಳಾ ? ಎಂದೂ ಕೇಳಿಲ್ಲವಲ್ಲಾ, ಬರೆದವರು ಯಾರು? ಸ್ಕ್ರಿಪ್ಟ್ಇದೆಯೇ?” ಎಂದು ಕೇಳಿದರು.“ನಾನೇ ಬರೆಯುತ್ತಿದ್ದೇನೆ ಸಾರ್, ಇನ್ನೂ ಮುಗಿದಿಲ್ಲ, ಇನ್ನೆರಡು ದಿನಗಳಲ್ಲಿ ತೋರಿಸ್ತೇನೆ ಸಾರ್” ಅಂದೆ.ಅದಕ್ಕೂ ಮುಂಚೆ ಏಳನೇ ಕ್ಲಾಸ್ ನಲ್ಲಿ ನಮ್ಮ ECA (Extra Curricular Activities)ಪಿರಿಯಡ್ ನಲ್ಲಿ ನಾನು ಬರೆದ ‘ಈ ಸಮಾಜ ಬದಲಾಗದೆ?’ ಎಂಬ ಏಕಾಂಕ ನಾಟಕವನ್ನು,ಅದಕ್ಕೂ ಮುಂಚೆ ನಮ್ಮ ಕ್ಲಾಸ್ ಪುಸ್ತಕದಲ್ಲಿ ಇರುವ ‘ಬುರ್ರಕಥೆ’ ಯನ್ನು ಅನುಸರಿಸುತ್ತಾ  ಚಂದ್ರಶೇಖರ್, ನಾನು, ಕೂನ ಶ್ರೀನಿವಾಸ್ ಪ್ರದರ್ಶಿಸಿದ ವಿಷಯ ನೆನಪಿದ್ದರಿಂದ ಆಶ್ಚರ್ಯಪಡಲಿಲ್ಲ. ಆದರೆ ಎಷ್ಟು ಮಾತ್ರವೂ ಆಸಕ್ತಿ ತೋರಲಿಲ್ಲ. ಅಷ್ಟೇ ಅಲ್ಲದೆ,“ಏನೋ, ಸ್ಕ್ರಿಪ್ಟ್ ರೆಡೀ ಇರುವ ನಾಟಕಗಳಿಗೆ ರಿಹರ್ಸಲ್ಮಾಡಿಸಲು ಸಮಯ ಸಾಕಾಗುತ್ತದೋ, ಇಲ್ಲವೋ ಎಂದು ನಾವು ಯೋಚಿಸುತ್ತಿದ್ದರೆ, ನಿಮ್ಮ ಸ್ಕ್ರಿಪ್ಟ್ ಇನ್ನೂ ರೆಡೀನೇ ಇಲ್ಲ. ಯಾವಾಗ ಬರೆಯುತ್ತೀರಿ? ಯಾವಾಗ ಪ್ರಾಕ್ಟೀಸ್ ಮಾಡುತ್ತೀರಿ? ಇದು ಸಾಧ್ಯವಾಗುವ ಕೆಲಸ ಅಲ್ಲ” ಎಂದು ಹೇಳಿದರು.ನಮಗೆ ನಿರಾಶೆಯಾಯಿತು. ಆದರೆ ಹಿಂದೆ ಸರಿಯಲಿಲ್ಲ. ಅಲ್ಲಿರುವಾಗಲೇ ನಾನು, ಮಲ್ಲಿ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾ, ಅವರನ್ನು ಹೇಗೆ ಒಪ್ಪಿಸುವುದು ಎಂದು ಯೋಚಿಸುತ್ತಿರುವಾಗ, ಏನಂದುಕೊಂಡರೊ ಏನೋ  ಅವರೇ-“ಸರಿ ಅಪ್ಪಾ, ಒಂದು ಕೆಲಸ ಮಾಡಿರಿ. ಇವತ್ತು ಇಪ್ಪತ್ತಾರು ಅಲ್ಲವೇ? ಮುವ್ವತ್ತನೇ  ತಾರೀಕಿನ  ಒಳಗೆ  ಸ್ಕ್ರಿಪ್ಟ್ ,ಟೀಮ್ ಎಲ್ಲಾ ರೆಡಿಯಾದರೆ ನಿಮ್ಮ ಡ್ರಾಮಾ  ಇರುತ್ತದೆ, ಇಲ್ಲದಿದ್ದರೆ ಮುಂದಿನ ವರ್ಷ ಹಾಕಿರಿ” ಎಂದರು.“ಸರಿ ಸಾರ್” ಎಂದು ನಾವು ಖುಷಿಯಿಂದ ಹೇಳಿ,ಇನ್ನೂ ಅಲ್ಲೇ ಇದ್ದರೆ, ಮತ್ತೆ ಎಲ್ಲಿ ಅವರ ಮನಸು ಬದಲಾಗುತ್ತದೋ ಎಂದು ಒಂದೇ ಹೆಜ್ಜೆಯಲ್ಲಿ ಹೊರ ಬಿದ್ದೆವು.ನಾವು ಹೊರಗೆ ಬಂದು ಯೋಚಿಸ ತೊಡಗಿದೆವು.ತಲೆಯಲ್ಲಿ ಹೀರೋ ಕೃಷ್ಣ ಅವರ ಸಿನಿಮಾಗಳು ಗಿರ್ರೆಂದು ಸುತ್ತುತ್ತಿದ್ದವು. ಗೂಢಚಾರಿ (ಗೂಢಚಾರ) 116, ಏಜೆಂಟ್  ಗೋಪಿ ಕಣ್ಣ ಮುಂದೆ ಕದಲುತ್ತಾ ಇರುತ್ತವೆ. ಅದಕ್ಕೆ ಮೊದಲೇ ತಯಾರಿ ಮಾಡಿಕೊಂಡಿದ್ದ  ರಫ್  ಸ್ಕೆಚ್ ಇದೆ. ಅದರ ತುಂಬಾ ಈಗ  ‘ವನ್ಸ್ ಮೋರ್ ‘ ಡೈಲಾಗ್‌ಗಳಿಂದ ತುಂಬಿಸಬೇಕು. ಇಡೀ ನಾಟಕ ತುಂಬಾ  ಬಂದೂಕಿನ     ವ್ಯವಹಾರವಾಗಿದ್ದರಿಂದ ಮಾತುಗಳು  ಕೂಡಾ ಗುಂಡುಗಳಂತೆ ಸಿಡಿಯಬೇಕು. ಖಳನಾಯಕನ‘ಚಾಲೆಂಜ್ ಮಾತುಗಳು, ಹೀರೋ ಪಂಚ್ ಡೈಲಾಗ್ ಗಳು  ಉತ್ಪ್ರೇಕ್ಷಿತ ಅಲಂಕಾರಗಳಿಂದ ನಡುಗಬೇಕು. ಫಿರದೌಸಿ ಷಾನಾಮಾ ಗ್ರಂಥಕ್ಕೆ ಪಟ್ಟಿರುವ ಕಷ್ಟವನ್ನು ಪಟ್ಟಿದ್ದೇನೆ. ತಿನ್ನುತಿದ್ದರೂ, ತರಗತಿಯಲ್ಲಿದ್ದರೂ, ಮನೆಗೆ,ಶಾಲೆಗೆ ಹೋಗುತ್ತಿದ್ದರೂ, ಅವೇ ಆಲೋಚನೆಗಳು. ಯಾವಾಗ  ಯಾವ ಡೈಲಾಗ್ ಮನಸ್ಸಿಗೆ ಹೊಳೆಯುತ್ತದೋ ತಿಳಿಯದು, ಅದರಿಂದ, ನಾಟಕ ಬರೆಯುತ್ತಿದ್ದ ಲೇಪಾಕ್ಷಿ ನೋಟ್ ಬುಕ್ ಯಾವಾಗಲೂ ನನ್ನೊಂದಿಗೆ ಇರುತ್ತಿತ್ತು. ಎಷ್ಟೋ ಬರಹಗಳು, ಹೊಡೆದು ಹಾಕುವುದು, ತಿದ್ದುಪಡಿಗಳಾದ ಮೇಲೆ  ಇಡೀ ಸ್ಕ್ರಿಪ್ಟ್  ಒಂದು ಸ್ತರಕ್ಕೆ ಬಂದಿತ್ತು. ಈಗ ನಮಗೆ ನಟೀ ನಟರು ಬೇಕು. ಹೀರೋ  ಇನ್ ಸ್ಪೆಕ್ಟರ್ ಆದ್ದರಿಂದ ಇನ್ನೂ ಇಬ್ಬರು ಅಥವಾ ಮೂವರು ಪೋಲೀಸು ಪೇದೆಗಳು ಇರಬೇಕು. ವಿಲನ್  ದೊಡ್ಡ ಡಾನ್. ಅದ್ದರಿಂದ ಅವನಿಗೆ  ಅನುಚರಗಣ ಇರಬೇಕು. ಅವರು ಇಬ್ಬರು ಅಥವಾ ಮೂವರು ಇರಬೇಕು. ದೊಡ್ಡ ದೊಡ್ಡ ಅಪರಾಧಗಳನ್ನು ಮಾಡುತ್ತಾ ಪೊಲೀಸರಿಂದ ತಪ್ಪಿಸಿಕೊಳ್ಳುವ ಡಾನ್‌ನ್ನ ಗುಪ್ತವೇಷದಲ್ಲಿ ಬಂದಿರುವ ಹೀರೋ ಹೇಗೆ ವಿಲನ್ ಕಥೆಯನ್ನು ಮುಗಿಸುತ್ತಾನೆ ಎಂಬುದು ಕಥಾಂಶ.   ಆಗಲೂ ನಮ್ಮ ಮಿತ್ರರಾದವರು, ನಮ್ಮ ಮಾತು ಕೇಳುವವರು ಎಂಬ ಅಂಶಗಳ ಆಧಾರದಮೇಲೆ ನಟಿ ನಟರ ಆಯ್ಕೆ ಮುಗಿಸಿದ್ದೇನೆ. ಪಾತ್ರಗಳು- ಪಾತ್ರಧಾರಿಗಳು ಎಂಬ ಪೇಪರ್ ಮುಂದೆ ಇಟ್ಟುಕೊಂಡು, ಬಾಕಿ ಸ್ಕ್ರಿಪ್ಟ್ ಎಲ್ಲ ಬರೆದಿರುವ ನೋಟ್ ಬುಕ್ ಹಿಡಿದುಕೊಂಡು ವಿಜಯಕುಮಾರ್ ಸಾರ್ ರೂಮಿಗೆ ಹೋದೆ.ಅಷ್ಟುಹೊತ್ತಿಗೆ ಸಾರ್  ಬೇರೆ ತರಗತಿಗೆ ಹೋಗುವ ಆತುರದಲ್ಲಿದ್ದರು. ಒಮ್ಮೆ ಇಡೀ ಸ್ಕ್ರಿಪ್ಟ್ ಇದೆಯೋ ಇಲ್ಲೋ ಎಂದು ನೋಡಿಕೊಂಡು ಸಮಾಧಾನಪಟ್ಟೆ.“ಸರಿ ಕಣಯ್ಯ, ಎಷ್ಟು ಸಮಯತೆಗೆದು ಕೊಳ್ಳುತ್ತದೆ?” ಎಂದು ಕೆಳಿದರು,ಡಸ್ಟರ್, ಚಾಕ್ ಪೀಸ್ ತೆಗೆದುಕೊಳ್ಳುತ್ತ-“ಇನ್ನೂ ನೋಡಿಲ್ಲ ಸಾರ್, ಇವತ್ತು ಸಾಯಂಕಾಲ ಎಲ್ಲರನ್ನು ಬರುವಂತೆ ಹೇಳಿದ್ದೀನಿ. ಒಮ್ಮೆ ರಿಹರ್ಸಲ್ಸ್ ಮಾಡಿದ್ರೆ ಗೊತ್ತಾಗುತ್ತೆ” ಎಂದೆ.“ಅದು ಬೇಕಾಗಿಲ್ಲ, ನಿನಗೆ ಎಲ್ಲರೂ ಸಿಕ್ಕಿ, ಎಲ್ಲರಿಗೂ ಡೈಲಾಗ್‌ಗಳು ಬಾಯಿಗೆ ಬಂದು ಅವರು ಅಭ್ಯಾಸ ಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ನೀನೆ ಎಲ್ಲ ಡೈಲಾಗ್ ಗಳನ್ನು ಹೇಗೆ ಬರೆದಿದ್ದೀಯೋ  ಹಾಗೆ ಓದುತ್ತಾ, ನಡುವೆ ನಡುವೆ ಗ್ಯಾಪ್ ಕೊಡುತ್ತಾ ಹೋದರೆ ನಿನಗೆ ಗೊತ್ತಾಗುತ್ತೆ. ಎಷ್ಟು ಸಮಯ ತೆಗೆದುಕೊಳ್ಳುತ್ತದೋ ನನಗೆ ಸಂಜೆಗೆ ಹೇಳು” ಅಂದರು.ನಾನು ಕೂಡಲೇ ನನ್ನ ತರಗತಿಗೆ ಹೋದೆ. ಮಧ್ಯಾಹ್ನ ಲಂಚ್ ಸಮಯದಲ್ಲಿ ಬೇಗಬೇಗನೆ ಮುಗಿಸಿ, ಎಲ್ಲ ಪಾತ್ರಧಾರಿಗಳ ಡೈಲಾಗ್ ಗಳನ್ನು ಅಭಿನಯಿಸುತ್ತಾ ಹೋದರೆ  ಹದಿನೈದು ನಿಮೊಷಗಳು ತೆಗೆದುಕೊಳ್ಳಿತ್ತು. ಸಂಜೆ ನಾನು ಹೋಗಿ ಸಾರ್ ಗೆ ಹೇಳಿದೆ. ಅವರು ಸ್ಟೇಜ್ ಬದಲಾವಣೆಗಳು ಮತ್ತು ವಿರಾಮಗಳನ್ನು ಒಳಗೊಂಡಂತೆ ಇಪ್ಪತ್ತು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರ್ಧರಿಸಿದರು.“ಸರಿ, ನೀವು ಹೋಗಿ ರಿಹರ್ಸಲ್ಸ್  ಮಾಡಿಕೊಳ್ಳಿ.ಹನ್ನೆರಡನೇ ತಾರೀಖಿಗೆ  ನಾನು, ಅಲ್ಲೆನ್ನ ಸಾರೂ ಬಂದು ನೋಡ್ತೀವಿ” ಎಂದು ಹೇಳಿದಾಗ ಹೃದಯ ಸಂತೋಷದಿಂದ ಕುಣಿಯಿತು.  ನಾನು ತಕ್ಷಣ ಮಲ್ಲಿ ಕಡೆಗೆ ಹೋದೆ. . ಅವನು ಕೂಡಾ ತನ್ನ ಪಾತ್ರಕ್ಕೆ ತಕ್ಕ ಕೆಲವು ಡೈಲಾಗ್ ಗಳನ್ನು ಬರೆದುಕೊಂಡು ಸಿದ್ದವಾಗಿದ್ದ.ನಾವಿಬ್ಬರೂ ಕುಳಿತು ಫೈನಲ್  ಸ್ಕ್ರಿಪ್ಟ್  ಸಿದ್ಧಪಡಿಸಿದೆವು. ಮರುದಿನದಿಂದ ರಿಹಾರ್ಸಲ್ಸ್  ಎಂದು ಹೇಳಿ ಎಲ್ಲರನ್ನು ಸಂಜೆ ಶಾಲೆ ಮುಗಿದಮೇಲೆ ತರಗತಿ ಕೋಣೆಯಲ್ಲೇ ಇರಲು ಹೇಳಿದೆ. ಹಾಗೆ ಮರುದಿನ ನಾವು ಎಲ್ಲರೂ ಸೇರಿದವು. ಆಗಲೇ ನಾನು ಎಲ್ಲರಿಗೂ ಅವರವರ ಡೈಲಾಗ್ ಗಳು ಪ್ರತ್ಯೇಕವಾಗಿ ಬರೆದು ಹಂಚಿದೆ. ಕಡಿಮೆ ಡೈಲಾಗ್ ಗಳು ಬಂದವರುಸ್ವಲ್ಪ ಮುಖ ಸಪ್ಪಗೆ ಮಾಡಿಕೊಂಡರು. ಅವನು ಎಸ್‌.ಐ.ಆದರೆ  ನಾನು ಕಾನಸ್ಟೇಬಲ್ ಆಗುವುದಿಲ್ಲ ಎಂದು ಕೆಲವರು ಹಠ ಹಿಡಿದರು. ಡಾನ್‌ ಆಗಿ ನಾನಿರುತ್ತೇನೆ ಎಂದು ಕೆಲವರು ಡಿಮಾಂಡ್  ಮಾಡಿದರು. ಎಲ್ಲರನ್ನು ಸಮಾಧಾನಮಾಡಿ, ಬೇಡಿಕೊಂಡು, ದಾರಿಗೆ ತರಲು ಆ ದಿನ ಕಳೆದುಹೋಯಿತು.ಮರುದಿನ ತರಗತಿಯಲ್ಲಿ ಎಲ್ಲರೂ ಈ ವಿಷಯವನ್ನು ಚರ್ಚಿಸುತ್ತಿದ್ದಾಗ,ಹಿಂದಿನದಿನ ಒಪ್ಪಿಕೊಂಡವರು ತಮ್ಮ‌ ಹಿತೈಷಿಗಳ ಮಾತು ಕೇಳಿ  ರಿಹರ್ಸಲ್ಸ್ ಗೆ ಬರಲು ನಿರಾಕರಿಸಿದರು. ಯಾರು ಅನಿವಾರ್ಯವಾಗಿ/ ಅವಶ್ಯಕವಾಗಿ  ಬೇಕೋ ನಿರ್ಧರಿಸಿ, ಉಳಿದ ಪಾತ್ರಗಳಿಗೆ ಇಬ್ಬರು ಮೂವರನ್ನು ಸ್ಪೇರ್  ಆಗಿ ಇಟ್ಟುಕೊಂಡು, ಅವರಿಗೆ ಅಸಿಸ್ಟೆಂಟ್  ಡೈರೆಕ್ಟರ್ ಸ್ಥಾನಮಾನ ಕೊಟ್ಟು, ನಾಟಕದಲ್ಲಿ ಸಾಧ್ಯವಾದರೆ ಒಂದು ಪಾರ್ಟ್ ಕೊಡುತ್ತೇನೆ ಎಂದು ಆಶೆ ತೋರಿಸಿ ಒಪ್ಪಿಸಲು ಸಾಕುಸಾಕಾಯಿತು.ಇಷ್ಟೆಲ್ಲಾ ಮಾಡಿದ ಮೇಲೆ ನಮ್ಮ ಫುಲ್ ರಿಹರ್ಸಲ್ಸ್  ಶುರುವಾಗಲಿಕ್ಕೆ ಮೂರುದಿನ ಬೇಕಾಯಿತು.ವೇದಿಕೆಯ ಅಲಂಕಾರ, ನಡುವೆ ನಡುವೆ ಅಂಕಗಳು ಬದಲಾಗುವುದು ಅವೆಲ್ಲಾ ಲೆಕ್ಕಿಸಲಾಗಲಿಲ್ಲ. ನಿಜಕ್ಕೆ ನಾವು ಬಣ್ಣಗಳು ಬಳೆದುಕೊಂಡು,ಒಳ್ಳೆಯ ಸ್ಟೇಜ್ ಮೇಲೆ ವೇಷ ಧರಿಸುತ್ತೇವೆ ಎಂದು ಭಾವಿಸಿರಲಿಲ್ಲ.ನಮಗೆ ಸ್ವಲ್ಪ ಸಮಯ ಕೊಡುತ್ತಾರೆ . ನಾವು ಮಾಡಬೇಕಾದ್ದು ಮಾಡುತ್ತೇವೆ ಎಂದು ಭಾವಿಸುತ್ತಿದ್ದೆವು. ರಿಹಾ ರ್ಸಲ್ಸ್  ನಡೆಯುತ್ತಿದ್ದವು. ಪಾತ್ರಗಳು ಸಿಗದವರು,  ನಮ್ಮನ್ನು ತಮಾಷೆ ಮಾಡುತ್ತಿದ್ದರು. ಗೇಲಿಮಾಡುತ್ತಿದ್ದರು. ಹಿಂದೆ ಸೇರಿಕೊಂಡು ಕಾಮೆಂಟ್  ಮಾಡುತ್ತಿದ್ದರು.ಅವರ ಕಾಮೆಂಟ್‌ಗಳಿಗೆ,ನೊಂದುಕೊಂಡವರು ನಾಟಕದಿಂದ  ಹೊರಟುಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದರು. ಮರುದಿನದಿಂದ ಸಾರ್ ಗೆ ಹೇಳಿ ನಮ್ಮ ಟೀಮನ್ನು  ರೂಮಿನೊಳಗೆ ಬರಮಾಡಿಕೊಂಡು ಬಾಗಿಲುಗಳು ಮುಚ್ಚಿಕೊಂಡು ಪ್ರಾಕ್ಟೀಸ್ ಮಾಡಿದೆವು.  ಆದರೂ ಕೆಲವರು ಕಿಟಕಿಯ ಬಳಿ ನಿಂತು,ಬಾಗಿಲಿನ ಸಂದುಗಳಿಂದ ಕಾಮೆಂಟ್ ಗಳು ಮಾಡುತ್ತಲೇ ಇದ್ದರು.ಹತ್ತು ದಿನಗಳ ನಂತರ ಇಡೀ ವಿಷಯ ಒಂದು ಹಂತಕ್ಕೆಬಂದಿತು. ಅಷ್ಟರೊಳಗೆ ಹನ್ನೆರಡನೆ ತಾರೀಕು ಬಂದಿತ್ತು. ವಿಜಯಕುಮಾರ್ ಸಾರ್ , ಮತ್ತು ಅಲ್ಲೆನ್ನ  ಸಾರ್  ಬಂದರು. ನಾವು ಅವರಿಗಾಗಿ ನಮ್ಮ ನಾಟಕವನ್ನು ಪ್ರದರ್ಶಿಸಿದೆವು. ಸಣ್ಣಸಣ್ಣ ಬದಲಾವಣೆಗಳನ್ನುಸೂಚಿಸಿದರು. ಒಟ್ಟಾರೆ ಲಾಜಿಕಲ್ ಆಗಿ ನೋಡಿದರೆ ಚನ್ನಾಗಿದೆ  ಎಂದರು ಅಲ್ಲೆನ್ನ ಸಾರ್.  ವಿಜಯಕುಮಾರ್ ಸಾರ್  ಏನನ್ನೂ ಮಾತಾಡಲಿಲ್ಲ. ಅವರು ನನ್ನನ್ನು ಕರೆದು  ಯಾವ ದೃಶ್ಯಕ್ಕೆ ಯಾವ ಹಿನ್ನೆಲೆ ಇರಬೇಕು, ಸ್ಟೇಜ್ ಮೇಲೆ ಯಾವ ಯಾವವಸ್ತುಗಳು ಅಗತ್ಯವೋ ವಿವರವಾಗಿ ಬರೆಯಬೇಕೆಂದು, ಅದರ ಪ್ರಕಾರವೇ  ಅಲಂಕಾರಮಾಡುತ್ತಾರೆಂದು ಹೇಳಿದರೇ ಆಶ್ಚರ್ಯ ಪಟ್ಟೆ. ಇಷ್ಟೆಲ್ಲಾ ವ್ಯವಸ್ಥೆ ಇರುತ್ತದೆಂದು, ಇಷ್ಟು ಆಡಂಬರವಾಗಿ ಇರುತ್ತದೆಂದು ನನಗೆ ಗೊತ್ತಿರಲಿಲ್ಲ. ಊಹಿಸಿರಲಿಲ್ಲ. ಆಶಿಸಿರಲೂ ಇಲ್ಲ. ನನ್ನ ಜೀವನದಲ್ಲಿ ನಾನು ಆಶಿಸಿದ್ದು ಬಹಳ ಕಡಿಮೆ. ಹಾಗಾಗಿ ನಿರೀಕ್ಷೆಗಿಂತಲೂ ಹೆಚ್ಚಾಗಿ ಸಿಕ್ಕಿದೆ. ಮೊದಲನೆಯ ನಾಟಕ–ಅಷ್ಟು ಜನರ ಮುಂದೆ!ನನ್ನ ಉತ್ಸಾಹ ದುಪ್ಪಟ್ಟಾಯಿತು. ಮಲ್ಲಿ, ಜೈನುಲ್ಲಾ, ಚೆನ್ನಯ್ಯ, ರಮಣ, ಜಾಕೀರ್, ಅಚ್ಚಯ್ಯ, ನಾವೆಲ್ಲರೂ ತಯಾರಾಗಿದ್ದೇವೆ. ಆಗಾಗ ಡೈಲಾಗ್ ಗಳನ್ನು ಮನನಮಾಡಿಕೊಂಡು,ಎಲ್ಲಾ  ದೃಶ್ಯಗಳನ್ನು ರಿವೈಂಡ್ ಮಾಡಿಕೊಳ್ಳುತ್ತಿದ್ದೆ. ತರಗತಿಯಲ್ಲಿ ನಾಟಕದ ಬಗ್ಗೆ  ಸಾಕಷ್ಟು ಗಲಾಟೆ ನಡೆಯುತ್ತಿತ್ತು. ಗೆಳೆಯರನ್ನು ನಾಟಕದ ಹೆಸರಿನಿಂದ ಕರೆಯುವುದು, ನಾವು ಪ್ರಾಕ್ಟೀಸ್  ಮಾಡುವಾಗ ನೋಡಿದ, ಕೇಳಿದ  ಡೈಲಾಗ್ ಗಳು ತರಗತಿಯಲ್ಲಿ ಬೇರೆಯವರಮೇಲೆ ಪ್ರಯೋಗಿಸುವುದು,‘ಅರೆ!,ಗಬ್ಬರ್  ಬರುತ್ತಿದ್ದಾನೋ’ ಎಂದು ತಮಾಷೆ ಮಾಡುವುದು ಮಾಮೂಲು ವಿಷಯವಾಯಿತು. ಈಗ ಅದು ನೆನೆದರೆ ನಗು ಬರುತ್ತದೆ, ಆದರೆ ವಿಪರೀತವಾದ ಕೊಪವೂ ಬಂದು, ನಾಟಕದಲ್ಲಿ ಬಳಸಿದ ಡಮ್ಮೀ  ಗನ್ನು  ನಿಂದ ಷೂಟ್ ಮಾಡಬೇಕೆಂದು ಅನ್ನಿಸುತ್ತಿತ್ತು. ಅಷ್ಟು ಗಲಭೆ ಮತ್ತು ಅಪಹಾಸ್ಯನಡೆಯುತ್ತಿತ್ತು.ಆಗಸ್ಟ್  ಹದಿನೈದು ಬಂತು. ಎಲ್ಲಾ ತೊಡಕುಗಳನ್ನು ದಾಟಿ,ನಾವು ಗ್ರೀನ್ ರೂಮಿನಲ್ಲಿಮುಖಕ್ಕೆ ಬಣ್ಣ ಬಳಿದು ಕೊಳ್ಳುತ್ತಿದ್ದರೆ ಅದೊಂದು ಅನಿರ್ವಚನೀಯ ಅನುಭವ.ಮೊದಲು ನಮ್ಮ ನಾಟಕ ಮುಗಿಸಿದನಂತರ ವಿಜಯಕುಮಾರ್ ಸಾರ್ ಅವರ ನಾಟಕ ಪ್ರದರ್ಶಿಸಬೇಕು. ನಾಟಕದ ಡೈಲಾಗ್‌ಗಳು ನೆನಪಿಲ್ಲದಿದ್ದರೇ, ಪ್ರಾಂಪ್ಟರ್  ಇರುತ್ತಾನೆಂದು ಕೂಡಾ ತಿಳಿಯದು. ಅದರಿಂದ ಯಾರನ್ನು ಆ ಕೆಲಸಕ್ಕೆ ನೇಮಿಸಲಿಲ್ಲ. ವಿಜಯಕುಮಾರ್ ಸಾರ್ ಅವರೇ ನಮ್ಮಸ್ಕ್ರಿಪ್ಟ್  ತೆಗೆದುಕೊಂಡು ಎರಡು ಮೂರು ಬಾರಿ ಹಿಂದೆ ಮುಂದೆ ತಿರುಗಿಸಿ ಸ್ಟೇಜ್ ಹಿಂದೆ ನಿಂತು ಆ ಪಾತ್ರವನ್ನುನಿರ್ವಹಿಸಿದರು. ಮಲ್ಲಿ ಸರಿಯಾಗಿ ಸ್ಟೇಜ್ ಬರುವ ಮುಂಚೆ ಕೆಳಗೆ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡ. ಅದರಿಂದ ಕುಂಟುತ್ತಾ ನಡೆಯಬೇಕಾಯಿತು. ಅವನು ತುಂಬಾ –ಸಮಯಸ್ಪೂರ್ತಿಯಿಂದ ಕುಂಟುತ್ತಾ ನಡೆಯುವುದು ವಿಲನ್ ಮ್ಯಾನೇರಿಜಮ್ ಅಂತೆ ಬದಲಿಸಿ ನಟಿಸಿದ. ಒಳ್ಳೆಯ ಮೆಚ್ಚುಗೆಯನ್ನು ಪಡೆದ.  ನಾನು ಮಾಡಿದ ಹೀರೋ ಇನ್ ಸ್ಪೆಕ್ಟರ್  ಪಾತ್ರಕ್ಕಿಂತ ವಿಲನ್  ಪಾತ್ರದಲ್ಲಿ ಮಲ್ಲಿ ಅದ್ಭುತವಾಗಿ ನಟಿಸಿದ್ದ. ಎಲ್ಲರೂ ತಮ್ಮತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದರು. ಅಲ್ಲೊಂದು ಇಲ್ಲೊಂದು ಕೆಲವು‌ ದೋಷಗಳೊಂದಿಗೆ (ಮಿಷ್ಟರ್ ಗೋಪಿ, ವಾಟ್ ಈಜ್ ಯುವರ್ ನೇಮ್… ಇತ್ಯಾದಿ)ಒಟ್ಟಾರೆ ನಾಟಕ ತುಂಬಾ ಚೆನ್ನಾಗಿತ್ತು. ಅದಾವುದೂ ಸಿನಿಮಾ ಷೂಟಿಂಗ್ ನಡೆದಂತೆ ಮೂರು ನಾಲ್ಕು ಡೈಲಾಗ್ ಗಳಿಗೆ ಒಂದು ಸೀನ್  ಚೇಂಜ್ ಮಾಡುತ್ತಾ ಹೋದರೆ,ಪ್ರತಿಬಾರಿಯೂ ಸ್ಟೇಜ್ ಅಲಂಕರಿಸಲು ಅಲ್ಲಿಯ ಸಹಾಯಕರು ತುಂಬಾನೇ ಕಷ್ಟಪಟ್ಟರು. ಸಿನಿಮಾವನ್ನು ಕಲ್ಪಿಸಿಕೊಂಡು ನಾಟಕ ಬರೆದರೆ ಎಷ್ಟು ತೊಂದರೆ ಯಾಗುತ್ತದೆ ಎಂದು ಅರ್ಥವಾದಾಗ ನಮ್ಮ ನಾಟಕ ಮುಗಿಯಿತು.ವಿಜಯಕುಮಾರ್ ಸಾರ್, ಪಾತ್ರಗಳು- ಪಾತ್ರಧಾರಿಗಳು ಎಂದು ಎಲ್ಲರನ್ನು ಪರಿಚಯಿಸಿದರು. ಅಂದುನಾನು ‘ಮೇಘ ಸಂದೇಶಂ’ ಪೋಸ್ಟರ್ ಗಳ ಮೇಲೆ ಬರೆದಿರುವ ಕಥೆ, ಸಂಭಾಷಣೆ, ಸ್ಕ್ರೀನ್ ಪ್ಲೇ –ದಾಸರಿ ನಾರಾಯಣರಾವ್ ಎಂಬ  ನೆನಪಿನ ಆಧಾರದ ಮೇಲೆ ಹಾಗೆ ಬರೆದು

“ದಿ ಮೇಕಿಂಗ್ ಆಫ್ ಅವರ್ ಡ್ರಾಮ-ದೇಶ ದ್ರೋಹಿಗಳು” ತೆಲುಗು ಸಣ್ಣಕಥೆ : ಜಿ. ಉಮಾಮಹೆೇಶ್ವರ್, ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಅಂಕಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಹಾಮಾನವತಾವಾದಿ ಶರಣೆ ಮದರ್ ಥೆರೇಸಾ ಬಡವರ ನಿರ್ಗತಿಕರ ರೋಗಿಗಳ ಪಾಲಿನ ದೇವತೆ ಮಾನವತಾವಾದಿ ಮದರ್ ಥೆರೇಸಾ ಅವರ ಜೀವನವೇ ಒಂದು ದಿವ್ಯಾವದರ್ಶನ. ಮದರ್ ಥೆರೇಸಾ ಅವರು ಜಗತ್ತಿನಾದ್ಯಂತ ದಯೆ, ಕರುಣೆ ಮತ್ತು ನಿಸ್ವಾರ್ಥ ಸೇವೆಗೆ ಹೆಸರಾದ ಒಬ್ಬ ಮಹಾನ್ ಮಾನವತಾವಾದಿ. ಅವರು ತಮ್ಮ ಇಡೀ ಜೀವನವನ್ನು ಅನಾಥರು, ರೋಗಿಗಳು ಮತ್ತು ಸಮಾಜದಿಂದ ನಿರ್ಲಕ್ಷಿಸಲ್ಪಟ್ಟ ಬಡವರ ಸೇವೆಗಾಗಿ ಮುಡಿಪಾಗಿಟ್ಟರು. ೧. ಆರಂಭಿಕ ಜೀವನ ಮತ್ತು ಬಾಲ್ಯ ನಿಜವಾದ ಹೆಸರು: ಆಗ್ನೆಸ್ ಗೊಂಕ್ಷಾ ಬೊಜಾಕ್ಸಿಯು.ಜನನ: ಆಗಸ್ಟ್ ೨೬, ೧೯೧೦ ರಂದು ಉತ್ತರ ಮ್ಯಾಸಿಡೋನಿಯಾದ ಸ್ಕೋಪ್ಜೆಯಲ್ಲಿ ಜನಿಸಿದರು. ಅಲ್ಬೇನಿಯಾ ಕುಟುಂಬ:  ಇವರ ಪೋಷಕರು ನಿಕೊಲಾ ಮತ್ತು ಡ್ರಾನಾಫಿಲ್ ಬೊಜಾಕ್ಸಿಯು ಅಲ್ಬೇನಿಯಾ.  ಇವರ ಕುಟುಂಬವು ಬಡವರ ಬಗ್ಗೆ ಅಪಾರ ದಯೆ ಹೊಂದಿತ್ತು. ಧಾರ್ಮಿಕ ಕರೆ:  ಆಗ್ನೆಸ್ ಅವರಿಗೆ ಕೇವಲ ೧೨ನೇ ವಯಸ್ಸಿನಲ್ಲಿಯೇ ಧಾರ್ಮಿಕ ಜೀವನವನ್ನು ನಡೆಸುವ ಮತ್ತು ಬಡವರ ಸೇವೆ ಮಾಡುವ ಬಯಕೆ ಮೂಡಿತ. ೨. ಭಾರತಕ್ಕೆ ಆಗಮನ ಮತ್ತು ಶಿಕ್ಷಕಿಯಾಗಿ ಸೇವೆ ೧೮ನೇ ವಯಸ್ಸಿನಲ್ಲಿ ಅವರು ‘ಸಿಸ್ಟರ್ಸ್ ಆಫ್ ಲೊರೆಟೊ’ ಸಂಸ್ಥೆಯನ್ನು ಸೇರಿದರು.೧೯೨೯ರಲ್ಲಿ ಭಾರತಕ್ಕೆ ಬಂದ ಅವರು, ಕೋಲ್ಕೊತ್ತಾದ (ಕಲ್ಕತ್ತಾ) ಸೇಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಭೂಗೋಳಶಾಸ್ತ್ರ ಶಿಕ್ಷಕಿಯಾಗಿ ಸೇವೆ ಆರಂಭಿಸಿದರು. ನಂತರ ಅಲ್ಲಿಯೇ ಮುಖ್ಯೋಪಾಧ್ಯಾಯಿನಿಯಾಗಿಯೂ ಕಾರ್ಯನಿರ್ವಹಿಸಿದರು ೩. ಮಿಷನರೀಸ್ ಆಫ್ ಚಾರಿಟಿ ಸ್ಥಾಪನೆ ೧೯೪೬ರಲ್ಲಿ ಕೋಲ್ಕೊತ್ತಾದ ಕೊಳೆಗೇರಿಗಳಲ್ಲಿದ್ದ ಬಡವರ ಕಷ್ಟಗಳನ್ನು ಕಂಡು, ಅವರ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಡಲು ತೀರ್ಮಾನಿಸಿದರು. ೧೯೫೦ರಲ್ಲಿ ವ್ಯಾಟಿಕನ್‌ನ ಅನುಮತಿಯೊಂದಿಗೆ “ಮಿಷನರೀಸ್ ಆಫ್ ಚಾರಿಟಿ” ಎಂಬ ಸೇವಾ ಸಂಸ್ಥೆಯನ್ನು ಸ್ಥಾಪಿಸಿದರು.ಈ ಸಂಸ್ಥೆಯ ಸನ್ಯಾಸಿನಿಯರು ನೀಲಿ ಅಂಚಿನ ಸರಳ ಬಿಳಿ ಸೀರೆಯನ್ನು ತಮ್ಮ ಸಮವಸ್ತ್ರವಾಗಿ ಧರಿಸತೊಡಗಿದರು. ೧೯೫೨ರಲ್ಲಿ ಸಾಯುವ ಸ್ಥಿತಿಯಲ್ಲಿದ್ದವರಿಗಾಗಿ ‘ನಿರ್ಮಲ್ ಹೃದಯ’ ಎಂಬ ಧರ್ಮಶಾಲೆಯನ್ನು ಆರಂಭಿಸಿದರು. ಇಲ್ಲಿ ನಿರಾಶ್ರಿತರು ಘನತೆಯಿಂದ ಕೊನೆಯುಸಿರೆಳೆಯಲು ಆಸರೆಯಾಗುತ್ತಿದ್ದರು. ೪. ಪ್ರಶಸ್ತಿ ಮತ್ತು ಗೌರವಗಳು ಅವರ ನಿಸ್ವಾರ್ಥ ಮಾನವೀಯ ಸೇವೆಯನ್ನು ಗುರುತಿಸಿ ಜಗತ್ತಿನಾದ್ಯಂತ ನೂರಾರು ಪ್ರಶಸ್ತಿಗಳನ್ನು ನೀಡಲಾಯಿತು: ನೊಬೆಲ್ ಶಾಂತಿ ಪ್ರಶಸ್ತಿ  (೧೯೭೯). ಭಾರತ ರತ್ನ ಪ್ರಶಸ್ತಿ (೧೯೮೦)  – ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ. ರೇಮನ್ ಮ್ಯಾಗ್ಸೇಸೆ ಪ್ರಶಸ್ತಿ (೧೯೬೨) ೫. ಕೊನೆಯ ದಿನಗಳು ಮತ್ತು ಸಂತ ಪದವಿ ನಿರಂತರ ಕಠಿಣ ಶ್ರಮ ಮತ್ತು ವಯೋಸಹಜ ಕಾಯಿಲೆಗಳಿಂದಾಗಿ ಮದರ್ ಥೆರೇಸಾ ಅವರು ಸೆಪ್ಟೆಂಬರ್ ೫, ೧೯೯೭ ರಂದು ಕೋಲ್ಕೊತ್ತಾದಲ್ಲಿ ನಿಧನರಾದರು.ಭಾರತ ಸರ್ಕಾರವು ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಿತು. ಸೆಪ್ಟೆಂಬರ್ ೪, ೨೦೧೬ ರಂದು ವ್ಯಾಟಿಕನ್‌ನ ಪೋಪ್ ಫ್ರಾನ್ಸಿಸ್ ಅವರು ಮದರ್ ಥೆರೇಸಾ ಅವರಿಗೆ ‘ಸಂತ’ (Saint Teresa of Calcutta) ಪದವಿಯನ್ನು ನೀಡಿ ಗೌರವಿಸಿದರು. ಮದರ್ ಥೆರೇಸಾ ಅವರ ನಿಸ್ವಾರ್ಥ ಸೇವೆ, ಕರುಣೆ ಮತ್ತು ಮಾನವೀಯತೆಯನ್ನು ಭಾರತದ ರಾಷ್ಟ್ರೀಯ ನಾಯಕರು, ಕವಿಗಳು ಮತ್ತು ವಿಮರ್ಶಕರು ವಿಭಿನ್ನ ಹಾಗೂ ಗೌರವಾನ್ವಿತ ದೃಷ್ಟಿಕೋನಗಳಿಂದ ಕಂಡಿದ್ದಾರೆ. ಅವರ ಬಗ್ಗೆ ಪ್ರಮುಖರ ಅಭಿಪ್ರಾಯಗಳು ನೋಡೋಣ: 1. ರಾಷ್ಟ್ರೀಯ ನಾಯಕರ ಅಭಿಪ್ರಾಯ ಭಾರತದ ರಾಜಕೀಯ ನಾಯಕರು ಮದರ್ ಥೆರೇಸಾ ಅವರನ್ನು ಭಾರತದ ಸಾಂಸ್ಕೃತಿಕ ರಾಯಭಾರಿ ಮತ್ತು ಕರುಣೆಯ ಸಾಕಾರ ರೂಪವಾಗಿ ನೋಡಿದ್ದಾರೆ. ಮಹಾತ್ಮ ಗಾಂಧಿ ಮತ್ತು ಅವರ ತತ್ವಗಳ ಹೋಲಿಕೆ:  ಅನೇಕ ನಾಯಕರು ಮದರ್ ಥೆರೇಸಾ ಅವರ ಸೇವೆಯನ್ನು ಗಾಂಧೀಜಿಯವರ “ದರಿದ್ರ ನಾರಾಯಣ” (ಬಡವರಲ್ಲಿ ದೇವರನ್ನು ಕಾಣುವುದು) ತತ್ವಕ್ಕೆ ಹೋಲಿಸಿದ್ದಾರೆ. ಇಂದಿರಾ ಗಾಂಧಿ: “ಮದರ್ ಥೆರೇಸಾ ಅವರನ್ನು ಭೇಟಿಯಾಗುವುದೆಂದರೆ ನಂಬಿಕೆ, ಕರುಣೆ ಮತ್ತು ದೈವಿಕ ಶಕ್ತಿಯನ್ನು ಹತ್ತಿರದಿಂದ ಅನುಭವಿಸಿದಂತೆ. ಅವರು ಮಾತನಾಡುವುದು ಕಡಿಮೆ, ಮಾಡುವುದು ಹೆಚ್ಚು” ಎಂದು ಹೇಳಿದ್ದರು. ಡಾ. ಎಸ್. ರಾಧಾಕೃಷ್ಣನ್: “ಅವರು ಜಗತ್ತಿನ ಅತ್ಯಂತ ದೀನ ದಲಿತರಲ್ಲಿ ದೇವರನ್ನು ಕಂಡರು. ಅವರ ಸೇವೆ ಯಾವುದೇ ಧರ್ಮ ಅಥವಾ ದೇಶಕ್ಕೆ ಸೀಮಿತವಾಗಿರಲಿಲ್ಲ, ಅದು ಜಾಗತಿಕವಾಗಿತ್ತು” ಎಂದು ಶ್ಲಾಘಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ: ಮದರ್ ಥೆರೇಸಾ ನಿಧನರಾದಾಗ, “ಭಾರತವು ತನ್ನ ಅತ್ಯಂತ ಪ್ರೀತಿಯ ಮಗಳನ್ನು ಕಳೆದುಕೊಂಡಿದೆ. ಅವರು ಕತ್ತಲೆಯಲ್ಲಿದ್ದ ಕೋಟಿಗಟ್ಟಲೆ ಜನರ ಜೀವನದಲ್ಲಿ ಬೆಳಕಾಗಿದ್ದರು” ಎಂದು ಕಂಬನಿ ಮಿಡಿದಿದ್ದರು. 2. ಕವಿಗಳ ದೃಷ್ಟಿಕೋನ ಕವಿಗಳು ಮದರ್ ಥೆರೇಸಾ ಅವರನ್ನು ಶಾಂತಿ, ಪ್ರೀತಿ ಮತ್ತು ದೈವಿಕ ಕೃಪೆಯ ಸಂಕೇತವಾಗಿ ತಮ್ಮ ಕಾವ್ಯಗಳಲ್ಲಿ ಚಿತ್ರಿಸಿದ್ದಾರೆ.ನಡೆದಾಡುವ ದೇವತೆ: ಕವಿಗಳು ಅವರನ್ನು ಕಲ್ಕತ್ತಾದ ಬೀದಿಗಳಲ್ಲಿ ನಡೆದಾಡಿದ “ಕರುಣೆಯ ದೇವತೆ” ಎಂದು ವರ್ಣಿಸಿದ್ದಾರೆ. ಅಹಿಂಸೆ ಮತ್ತು ಪ್ರೀತಿಯ ಭಾಷೆ:  ಕಾವ್ಯಗಳಲ್ಲಿ ಅವರ ಬಿಳಿ ಮತ್ತು ನೀಲಿ ಅಂಚಿನ ಸೀರೆಯನ್ನು ಶಾಂತಿಯ ಧ್ವಜಕ್ಕೆ ಹೋಲಿಸಲಾಗಿದೆ. ಭಾಷೆ ತಿಳಿಯದ ದೇಶಕ್ಕೆ ಬಂದು ಕೇವಲ ‘ಪ್ರೀತಿಯ ಭಾಷೆ’ಯ ಮೂಲಕವೇ ಎಲ್ಲರ ಹೃದಯ ಗೆದ್ದರೆಂದು ಕವಿಗಳು ಕೊಂಡಾಡಿದ್ದಾರೆ. ತ್ಯಾಗದ ಮೂರ್ತಿ: ಸ್ವಂತ ಸಂಸಾರ, ದೇಶವನ್ನು ತೊರೆದು ಪರರ ಕಣ್ಣೀರು ಒರೆಸುವುದನ್ನೇ ಧರ್ಮವಾಗಿಸಿಕೊಂಡ ಅವರ ತ್ಯಾಗವನ್ನು ಕವಿಗಳು ದೈವಿಕ ಮಟ್ಟಕ್ಕೆ ಏರಿಸಿದ್ದಾರೆ. 3. ವಿಮರ್ಶಕರು ಕಂಡಂತೆ ವಿಮರ್ಶಕರು ಮದರ್ ಥೆರೇಸಾ ಅವರ ಕಾರ್ಯವನ್ನು ಸಾಮಾಜಿಕ ಮತ್ತು ತಾತ್ವಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ. ಸಾಂಸ್ಥಿಕ ಸಮಾಜ ಸೇವೆ: ವಿಮರ್ಶಕರ ಪ್ರಕಾರ, ಮದರ್ ಥೆರೇಸಾ ಕೇವಲ ವೈಯಕ್ತಿಕವಾಗಿ ಸೇವೆ ಮಾಡಲಿಲ್ಲ. ಬದಲಿಗೆ ‘ಮಿಷನರೀಸ್ ಆಫ್ ಚಾರಿಟಿ’ ಸಂಸ್ಥೆಯ ಮೂಲಕ ಜಗತ್ತಿನಾದ್ಯಂತ ವ್ಯವಸ್ಥಿತವಾದ ಸೇವಾ ಜಾಲವನ್ನು ನಿರ್ಮಿಸಿದರು. ಇದು ಆಧುನಿಕ ಜಗತ್ತಿಗೆ ಮಾದರಿ.ಮಾನವೀಯತೆಯೇ ಧರ್ಮ: ಕೆಲವರು ಅವರ ಧಾರ್ಮಿಕ ಹಿನ್ನೆಲೆಯನ್ನು ಚರ್ಚಿಸಿದರೂ, ಬಹುತೇಕ ವಿಮರ್ಶಕರು “ಅವರ ಸೇವೆ ಜಾತೀಯತೆ ಮತ್ತು ಧರ್ಮದ ಗಡಿಗಳನ್ನು ಮೀರಿದ್ದು. ರೋಗಿಗಳನ್ನು ಮುಟ್ಟಲು ಹಿಂಜರಿಯುತ್ತಿದ್ದ ಕಾಲದಲ್ಲಿ, ಅವರು ಕುಷ್ಠರೋಗಿಗಳನ್ನು ತಬ್ಬಿ ಆರೈಕೆ ಮಾಡಿದ್ದು ಕ್ರಾಂತಿಕಾರಿ ಹೆಜ್ಜೆ” ಎಂದು ಒಪ್ಪಿಕೊಂಡಿದ್ದಾರೆ. ನೊಬೆಲ್ ಪ್ರಶಸ್ತಿಯ ಸಾರ್ಥಕತೆ:  ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಬಂದಾಗ, “ಈ ಪ್ರಶಸ್ತಿಯಿಂದ ಮದರ್ ಥೆರೇಸಾ ಅವರಿಗೆ ಗೌರವ ಬರಲಿಲ್ಲ, ಬದಲಿಗೆ ಅವರಿಗೆ ನೀಡಿದ್ದರಿಂದ ನೊಬೆಲ್ ಪ್ರಶಸ್ತಿಗೇ ಒಂದು ಸಾರ್ಥಕತೆ ಸಿಕ್ಕಿತು” ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಮದರ ಥೆರೇಸಾ ಎಂಬ ಮಹಾಮಾನವತೆಯ ದೇವತೆ ಹುಟ್ಟಿದ ಅಲ್ಬೇನಿಯಾ ರಾಷ್ಟ್ರ ಮತ್ತು ಕರ್ಮ ಭೂಮಿ ಭಾರತದ ನೆಲದ ಋಣ ತೀರಿಸಿದ ಸಂತೆ ಶರಣೆ. ಮನುಕುಲವು ನೆನಪಿಡುವ ಮಹಾ ಮಾನವತಾವಾದಿ ಸಾವಿಲ್ಲದ ಶರಣೆ _______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

ಇತರೆ

“ಕ್ಷಣಗಳನ್ನು ಶಾಶ್ವತಗೊಳಿಸುವ ಕಲೆ ಕರಗತ ಮಾಡಿ ಕೊಂಡ ಗದಗ ಜಿಲ್ಲಾ ಪತ್ರಿಕೋದ್ಯಮ ಛಾಯಾ ಚಿತ್ರಗ್ರಾಹಕರು” ಎ.ಎಸ್.ಮಕಾನದಾರ

ಛಾಯಾಚಿತ್ರ ಸಂಗಾತಿ “ಕ್ಷಣಗಳನ್ನು ಶಾಶ್ವತಗೊಳಿಸುವ ಕಲೆ ಕರಗತ ಮಾಡಿ ಕೊಂಡ ಗದಗ ಜಿಲ್ಲಾ ಪತ್ರಿಕೋದ್ಯಮ ಛಾಯಾ ಚಿತ್ರಗ್ರಾಹಕರು” ಎ.ಎಸ್.ಮಕಾನದಾರ ಕ್ಷಣಗಳನ್ನು ಶಾಶ್ವತಗೊಳಿಸುವ ಕಲೆ ಕರಗತ ಮಾಡಿ ಕೊಂಡ ಗದಗ ಜಿಲ್ಲಾ ಪತ್ರಿಕೋದ್ಯಮ ಛಾಯಾ ಚಿತ್ರಗ್ರಾಹಕರು (ಪ್ರಪಂಚದಾದ್ಯಂತ ದಿ.19ರಂದು ವಿಶ್ವ ಛಾಯಾಗ್ರಾಹಕರ ದಿನವನ್ನು ಆಚರಿಸಲಾಗುತ್ತದೆ ತನ್ನಿಮಿತ್ಯ ಈ ಲೇಖನ )  ***                    ಕಣ್ಣಿಗೆ ಕಾಣುವ ಒಂದು ಕ್ಷಣವನ್ನು ಕ್ಯಾಮೆರಾದ ಕಣ್ಣಿನ ಮೂಲಕ ಸೆರೆಹಿಡಿದು, ಅದನ್ನು ಮುಂದಿನ ಪೀಳಿಗೆಗಳಿಗೂ ಉಳಿಸಿಕೊಡುವ ಛಾಯಾಗ್ರಾಹಕರ ಸೃಜನಶೀಲತೆ ಮತ್ತು ಪರಿಶ್ರಮವನ್ನು ಗೌರವಿಸುವ ದಿನವಿದು. ಛಾಯಾಗ್ರಹಣವೆಂದರೆ ಕೇವಲ ಒಂದು ಚಿತ್ರ ತೆಗೆಯುವ ತಂತ್ರವಲ್ಲ; ಅದು ಕಾಲವನ್ನು ದಾಖಲಿಸುವ ಕಲೆ. ಒಂದು ಛಾಯಾಚಿತ್ರದಲ್ಲಿ ವ್ಯಕ್ತಿಯ ಭಾವನೆ, ಸಮಾಜದ ಸ್ಥಿತಿ, ಪ್ರಕೃತಿಯ ಸೌಂದರ್ಯ, ಇತಿಹಾಸದ ಹೆಜ್ಜೆಗುರುತು ಹಾಗೂ ಬದುಕಿನ ಅನೇಕ ನೆನಪುಗಳು ಅಡಗಿರುತ್ತವೆ. ಮಾತುಗಳಿಂದ ಹೇಳಲಾಗದ ಭಾವವನ್ನೂ ಒಂದು ಉತ್ತಮ ಛಾಯಾಚಿತ್ರ ಹೇಳಬಲ್ಲದು. ಒಬ್ಬ ಛಾಯಾಗ್ರಾಹಕ ಸಾಮಾನ್ಯ ದೃಶ್ಯದಲ್ಲಿಯೂ ಅಸಾಮಾನ್ಯ ಸೌಂದರ್ಯವನ್ನು ಕಂಡುಕೊಳ್ಳುತ್ತಾನೆ. ಬೆಳಕು–ನೆರಳು, ಬಣ್ಣ–ಭಾವ, ಕ್ಷಣ–ಕಾಲ ಇವೆಲ್ಲವನ್ನೂ ಸಮನ್ವಯಗೊಳಿಸಿ ಒಂದು ಚಿತ್ರಕ್ಕೆ ಜೀವ ತುಂಬುತ್ತಾನೆ. ಕೆಲವೊಮ್ಮೆ ಒಂದು ಛಾಯಾಚಿತ್ರವೇ ಸಾವಿರಾರು ಪದಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾತನಾಡುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್‌ಗಳಲ್ಲಿಯೇ ಅತ್ಯಾಧುನಿಕ ಕ್ಯಾಮೆರಾಗಳು ಲಭ್ಯವಾಗಿವೆ. ಪ್ರತಿಯೊಬ್ಬರೂ ಛಾಯಾಚಿತ್ರ ತೆಗೆಯಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಚಿತ್ರ ತೆಗೆಯುವುದು ಬೇರೆ, ಚಿತ್ರವನ್ನು ಸೃಷ್ಟಿಸುವುದು ಬೇರೆ. ಸರಿಯಾದ ಕ್ಷಣವನ್ನು ಗುರುತಿಸುವ ದೃಷ್ಟಿ, ಬೆಳಕಿನ ಅರಿವು, ಸಂಯೋಜನೆಯ ಪ್ರಜ್ಞೆ ಮತ್ತು ವಿಷಯದ ಮೇಲಿನ ಸೂಕ್ಷ್ಮ ಸಂವೇದನೆ ಒಬ್ಬ ಉತ್ತಮ ಛಾಯಾಗ್ರಾಹಕನನ್ನು ರೂಪಿಸುತ್ತವೆ. ರೂಪ ದರ್ಶಿ ಫೋಟೋ ಗ್ರಫಿ, ನಿಸರ್ಗ, ವ್ಯಾಪಾರಿ, ಪತ್ರಿಕೋದ್ಯಮ,  ಫಿಲಂ ಫೋಟೋ ಗ್ರಫಿ ಹೀಗೆ ಅನೇಕ ಬಗೆಯ ಫೋಟೋ ಗ್ರಾಫರ್ಗಳ ಜೊತೆಗೆ ಹವ್ಯಾಸಿ ಫೋಟೋ ಗ್ರಾಫರ್ ನಮ್ಮ ನಡುವೆ ಇದ್ದಾರೆ.ಸುದ್ದಿ ಛಾಯಾಗ್ರಾಹಕರು ಸಮಾಜದ ಘಟನೆಗಳನ್ನು ದಾಖಲಿಸುತ್ತಾರೆ. ಪ್ರಕೃತಿ ಛಾಯಾಗ್ರಾಹಕರು ಪರಿಸರದ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸುತ್ತಾರೆ. ವನ್ಯಜೀವಿ ಛಾಯಾಗ್ರಾಹಕರು ಅಪರೂಪದ ಜೀವಿಗಳ ಬದುಕನ್ನು ನಮ್ಮ ಕಣ್ಣಮುಂದೆ ತರುತ್ತಾರೆ. ಕಲಾತ್ಮಕ ಛಾಯಾಗ್ರಾಹಕರು ಕಲ್ಪನೆ ಮತ್ತು ಸೌಂದರ್ಯದ ಹೊಸ ಲೋಕವನ್ನು ನಿರ್ಮಿಸುತ್ತಾರೆ. ಹೀಗೆ ಛಾಯಾಗ್ರಹಣದ ಪ್ರತಿಯೊಂದು ಕ್ಷೇತ್ರವೂ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಒಂದು ಹಳೆಯ ಛಾಯಾಚಿತ್ರವನ್ನು ನೋಡಿದಾಗ ನಾವು ಕೇವಲ ಮುಖಗಳನ್ನು ನೋಡುವುದಿಲ್ಲ; ಅದರೊಂದಿಗೆ ಒಂದು ಕಾಲಘಟ್ಟವನ್ನೇ ಮರುಕಾಣುತ್ತೇವೆ. ಕುಟುಂಬದ ನೆನಪುಗಳಿಂದ ಹಿಡಿದು ಐತಿಹಾಸಿಕ ಘಟನೆಗಳವರೆಗೆ, ಛಾಯಾಚಿತ್ರಗಳು ನಮ್ಮ ಸ್ಮೃತಿಯ ಅಮೂಲ್ಯ ದಾಖಲೆಗಳಾಗಿವೆ. ಆದ್ದರಿಂದ ವಿಶ್ವ ಛಾಯಾಗ್ರಾಹಕರ ದಿನವು ಕೇವಲ ಛಾಯಾಗ್ರಾಹಕರಿಗೆ ಶುಭಾಶಯ ಕೋರುವ ದಿನವಲ್ಲ. ಕಾಲವನ್ನು ಸೆರೆಹಿಡಿದು ನೆನಪುಗಳಿಗೆ ಜೀವ ನೀಡುವ ಪ್ರತಿಯೊಬ್ಬ ಛಾಯಾಗ್ರಾಹಕನ ಕಲೆಯನ್ನು ಗೌರವಿಸುವ ದಿನ. ಅವರ ಕ್ಯಾಮೆರಾದ ಕಣ್ಣು ಸಮಾಜವನ್ನು ನೋಡುವ ಮತ್ತೊಂದು ಸೂಕ್ಷ್ಮ ಕಣ್ಣಾಗಿದೆ. ಕ್ಷಣ ಕಳೆದುಹೋಗಬಹುದು; ಕಾಲ ಮುಂದೆ ಸಾಗಬಹುದು; ಆದರೆ ಅದನ್ನು ಪ್ರೀತಿಯಿಂದ ಸೆರೆಹಿಡಿದ ಒಂದು ಛಾಯಾಚಿತ್ರ ಮಾತ್ರ ನೆನಪಾಗಿ ನಮ್ಮೊಂದಿಗೆ ಉಳಿಯುತ್ತದೆ.ಗದಗ ಜಿಲ್ಲೆಯ ಪತ್ರಿಕಾ ಫೋಟೋ ಗ್ರಾಫರ್ ಗಳಿಗೆ ಒಂದು ವಿಶೇಷ ಸ್ಥಾನ ಮಾನ ವಿದೆ ಜೊತೆಗೆ ಇತಿಹಾಸ ಕೂಡ.   ನಾಗಪ್ಪ ಮಹೇಂದ್ರ ಕರ್ ಅವರು 1922ರಲ್ಲಿ ಸ್ಟುಡಿಯೋ ಆರಂಭಸಿದರು. ಮಹಾತ್ಮಾ ಗಾಂಧೀಜಿ ಯವರು ಜಕ್ಕಲಿ ಗೆ ಆಗಮಿಸಿದ ಸಂದರ್ಭವನ್ನು ಸೆರೆ ಹಿಡಿದಿದ್ದು ಈ ನಾಗಪ್ಪ ಅವರೇ. ಅವರ 5ಜನ ಮಕ್ಕಳು ಕೂಡ ಫೋಟೋಗ್ರಫಿಯಲ್ಲಿ ತೊಡಗಿ ಕೊಂಡಿದ್ದಾರೆ. ಅವರಲ್ಲಿ ಭೀಮರಾವ, ದತ್ತಾತ್ರೇಯ, ಶ್ರೀಧರ್, ವಸಂತ, ಮಧುಕರ್ ಅವರು ತಮ್ಮ ಉಸಿರನ್ನು ಫೋಟೋ ಗ್ರಫಿ ಗಾಗಿ ಮೀಲಿಟ್ಟಿದ್ದಾರೆ.73 ವಸಂತ ದಲ್ಲಿರುವ ವಸಂತ ಮಹೇಂದ್ರಕರ ಅವರು ಗದಗ ಕಾಟನ್ ಸೇಲ್ಸ್ ಸೊಸೈಟಿ ಗೆ ಆಗಮಿಸಿದ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಯವರ ಫೋಟೋ ನಾನೇ ತೆಗಿದಿದ್ದು ಅಂತಾ ಹೆಮ್ಮೆ ಮತ್ತು ಅಭಿಮಾನದಿಂದ ಹೇಳುತ್ತಾರೆ ಅವರ ಕಂಗಳಲ್ಲಿ ಮೂರನೇ ಕಣ್ಣು ಕೂಡ ಗತ ಕಾಲದ ಘಟನೆಯ ರೀಲು ಚಕ್ ಚಕ್ ಹೊರಳುತ್ತದೆ. ಇವರ ಮಕ್ಕಳು ಗುತ್ತಿಗೆ ಆಧಾರದ ಮೇಲೆ ವಿಶ್ವ ವಿದ್ಯಾಲಯದ ಫೋಟೋ ಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ನವೋದಯ. ವಾರ್ತಾ ಇಲಾಖೆಯ ಫೋಟೋ ಗ್ರಾಫರ್ ಕೂಡ ಹೌದು ಇವರ ಸಹೋದರ ಪೊಲೀಸ್ ಇಲಾಖೆಯ ಫೋಟೋಗ್ರಾಫರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಹೋದರರ ಮಗ ಚೋಟು  ಕಿತ್ತೂರು ಕರ್ನಾಟಕ ಪತ್ರಿಕೆಯ ಫೋಟೋ ಗ್ರಾಫರ್. ಪ್ರಜಾವಾಣಿ ಪತ್ರಿಕೆ ಫೋಟೋ ಗ್ರಾಫರ್ ಬನೇಶ್ ಕುಲಕರ್ಣಿ ಕೆಳೆದ 37 ವರುಷಗಳಿಂದ ಕ್ಯಾಮರಾ ಕೊರಳಿಗೆ ಹಾಕಿ ಕೊಂಡಿದ್ದಾರೆ. ಈ ಟಿವಿ, ಉದಯ ಟಿವಿ ಕ್ಯಾಮರಾ ಮ್ಯಾನ್. ಫೋಟೋ ಗ್ರಾಫರ್ ಆಗಿ ಸಧ್ಯ ಪ್ರಜಾವಾಣಿ ಪತ್ರಿಕೆ ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಜಯ ಕರ್ನಾಟಕ ಜಿಲ್ಲಾ ವರದಿ ಗಾರ ಸಲೀಂ ಬಳಬಟ್ಟಿ ಯವರದು ವಿಶೇಷ ಫೋಟೋ ಗ್ರಫಿ ಅವರ ತಂದೆಯವರಾದ ಬಂಡಾಯ ಸಾಹಿತಿ, ಕವಿ, ರಂಗಭೂಮಿ ಕಲಾವಿದ, ಫೋಟೋ ಗ್ರಾಫರ್ ಬಿ. ಬಾಬು ಅವರಿಂದ ಬಂದ ಬಳುವಳಿಯಾಗಿದೆ.  ಸಮೋಹ ಸಂವಹನ ಮತ್ತು ಪತ್ರಿಕೋದ್ಯಮ ದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸನ್ 2008ರಲ್ಲಿ ಕರ್ನಾಟಕ ಫೋಟೋ ನ್ಯೂಸ್ ಸಂಸ್ಥೆ ಯ ಫೋಟೋ ಜರ್ನಲಿಸ್ಟ ಆಗಿ ಸೇವೆ ಆರಂಭ ಮಾಡಿದರು. ಉದಯ ವಾಣಿ. ಕನ್ನಡ ಪ್ರಭಾ ಪತ್ರಿಕೆ ವರದಿ ಗಾರರಾಗಿ ವಿಶ್ವ ವಾಣಿ ಉಪ ಸಂಪಾದಕರಾಗಿ ಸೇವೆ ಕೂಡ ಸಲ್ಲಿಸಿದ್ದಾರೆ. ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಛಾಯಾ ಚಿತ್ರ ಪ್ರದರ್ಶನ ದಲ್ಲಿ ಭಾಗ ವಹಿಸಿ ಪ್ರಶಸ್ತಿ ಕೂಡ ಪಡೆದಿದ್ದಾರೆ.    ಕಳೆದ 34ವರ್ಷ ಗಳಿಂದ ಕೊರಳಿಗೆ ಕ್ಯಾಮರಾ ಹಾಕಿಕೊಂಡ  ಜಂಗಮ ಮುತ್ತು ಹಾಳಕೇರಿ. ಫೋಟೋ ಗ್ರಾಫರ್ ಚಿತ್ರ ಮಾತ್ರ ತೆಗೆಯುವದಲ್ಲ  ತನ್ನನ್ನು ತಾನೇ ಪ್ರಶ್ನಿಸಿ ಕೊಳ್ಳಬೇಕು, ಕ್ಯಾಮರಾ ಕಟ್ಟಿದ ಕೊರಳು ನೂರು ಕೊರಳುಗಳ ಬಗ್ಗೆ ಚಿಂತಿಸಬೇಕು . ಪ್ರಚಲಿತ ಸಮಸ್ಯೆ ಗಳ ಬಗ್ಗೆ, ಗ್ರಾಮೀಣ ಬದುಕಿನ ಜೀವನ ಬಗ್ಗೆ ಚಿಂತಿಸಬೇಕೆಂಬುದು ಅವರ ಆಶಯ. ಅಲೆಮಾರಿ ಕುರಿಗಾಯಿ ಗಳು ನೀರಿಗಾಗಿ ಅಲೆಯುವ ಮುತ್ತು ಅವರು ತೆಗೆದ ಫೋಟೋ 25 ಸಾವಿರ ರೂ ಬಹುಮಾನ ಪಡೆಯಿತು ಆ ಬಹುಮಾನ ದ ಮೊತ್ತ ಕುರಿಗಾಯಿಗಳಿಗೆ ಕಾಣಿಕೆ ಯಾಗಿ ಕೊಟ್ಟ ಸಹೃದಯಿ ಯಾಗಿದ್ದಾರೆ. ನಾಡಿನ ತುಂಬೆಲ್ಲ ಇವರ ಛಾಯಾಚಿತ್ರ ಪ್ರದರ್ಶನ ಗೊಂಡಿವೆ. ಮದುವೆ ಕ್ಷಣ ಗಳು ಎನ್ನುವ ಶೀರ್ಷಿಕೆ ಅಡಿಯಲ್ಲಿ ಸುವರ್ಣ ನ್ಯೂಸ್ ರಾಜ್ಯ ಮಟ್ಟದ ಸ್ಪರ್ಧೆ ಯಲ್ಲಿ ದ್ವಿತೀಯ ಬಹುಮಾನ ಪಡೆದ ಹೆಗ್ಗಳಿಕೆ ಮುತ್ತು ಅವರದು. ಪ್ರತಿ ಪ್ರಗತಿಪರ ಸಂಘಟನೆಗಳ ಕಾರ್ಯಕ್ರಮ ದಲ್ಲಿ ಮುತ್ತು ಅವರ ಹಾಜರಾತಿ ಇದ್ದೆ ಇರುತ್ತದೆ. ಸಾರ್ವಜನಿಕ ಸಭೆ ಸಮಾರಂಭ, ಸರ್ಕಾರಿ ಕಾರ್ಯಕ್ರಮ ಗಳಲ್ಲಿ ರಾಮು ವಗ್ಗಿ ವಿಜಯ ಕರ್ನಾಟಕ ಪತ್ರಿಕೆ, ಲಕ್ಷ್ಮಣ ವಗ್ಗಿ ಉದಯ ವಾಣಿ ಪತ್ರಿಕೆ ಫೋಟೋ ಗಳಾಗಿ ಎಲ್ಲರ ಗಮನ ಸೆಳೆದಿದ್ದಾರೆ.ಗದಗ ಉತ್ಸವ, ಕರ್ನಾಟಕ ಮಾಧ್ಯಮ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನೇಕ ಪ್ರಶಸ್ತಿ ಪುರಸ್ಕಾರ ಗಳನ್ನು ಸಹೋದರರು ತಮ್ಮ ಮೂಡಿಗೇರಿಸಿ ಕೊಂಡಿದ್ದಾರೆ.ಸಂಜೆವಾಣಿ ಪತ್ರಿಕೆಯ ಬಸವ ರಾಜ ದಂಡಿನ ಹಿರಿಯ ಪತ್ರ ಕರ್ತ್ ರು ಫೋಟೋ ಗ್ರಾಫರ್ ಕೂಡ.ಸಮಾಜ ಮುಖಿ ಚಿಂತನೆಗಳ ಬರವಣಿಗೆ ಯಲ್ಲಿ ತೊಡಗಿ ಕೊಂಡವರು ನಾಡಿನ ಅನೇಕ ಪತ್ರಿಕೆಗಳಲ್ಲಿ ಸಂಘಟನೆಗಳಲ್ಲಿ ಗುರುತಿಸಿ ಕೊಂಡವರು. ಶಂಕರ್ ಗುರಿಕಾರ. ಉಮೇಶ್ ಸಜ್ಜನ ಮಾತ್ರವಲ್ಲ ಜಿಲ್ಲೆಯ ತುಂಬಾ ಅನೇಕ ಪತ್ರಿಕೆ ಛಾಯಾಚಿತ್ರ ಕಲಾವಿದರು ಇದ್ದಾರೆ.ai ಮೊಬೈಲ್ ಹಾವಳಿಗಳ ನಡುವೆ ತಮ್ಮ ತನ ಉಳಿಸಿಕೊಂಡು ಪತ್ರಿಕಾ ಛಾಯಾ ಚಿತ್ರಕಾರರಾಗಿ ಪರೋಕ್ಷ ಅಪರೋಕ್ಷ ವಾಗಿ ಪತ್ರಿಕೋದ್ಯಮದ ಘನತೆ ಗೌರವ ಎತ್ತಿ ಹಿಡಿಯುತ್ತಿದ್ದಾರೆ ಇದೊಂದು ಅಭಿಮಾನ ದ ಸಂಗತಿ ವಿಶ್ವ ಛಾಯಾಗ್ರಾಹಕರ ದಿನದಂದು ಕ್ಷಣಗಳಿಗೆ ಚಿರಂತನತೆ ನೀಡುವ ಎಲ್ಲ ಛಾಯಾಗ್ರಾಹಕರಿಗೆ ಹೃತ್ಪೂರ್ವಕ ಶುಭಾಶಯಗಳು.. ಎ. ಎಸ್. ಮಕಾನದಾರಕವಿ, ಪ್ರಕಾಶಕ, ಸಂಪಾದಕನಿರಂತರ ಪ್ರಕಾಶನ, ಗದಗ

“ಕ್ಷಣಗಳನ್ನು ಶಾಶ್ವತಗೊಳಿಸುವ ಕಲೆ ಕರಗತ ಮಾಡಿ ಕೊಂಡ ಗದಗ ಜಿಲ್ಲಾ ಪತ್ರಿಕೋದ್ಯಮ ಛಾಯಾ ಚಿತ್ರಗ್ರಾಹಕರು” ಎ.ಎಸ್.ಮಕಾನದಾರ Read Post »

ಇತರೆ

“ವಿಮರ್ಶೆ : ಸಮಕಾಲೀನ ಗೊಂದಲಗಳು ಮತ್ತು ನಿಜವಾದ ಸ್ವರೂಪ” ಡಾ. ಮಲ್ಲಿನಾಥ ಎಸ್. ತಳವಾರ

ವಿಮರ್ಶಾ ಸಂಗಾತಿ ಡಾ. ಮಲ್ಲಿನಾಥ ಎಸ್. ತಳವಾರ “ವಿಮರ್ಶೆ : ಸಮಕಾಲೀನ ಗೊಂದಲಗಳು ಮತ್ತು ನಿಜವಾದ ಸ್ವರೂಪ”           ಇಂದು ಸಾಹಿತ್ಯ ಲೋಕದಲ್ಲಿ ‘ವಿಮರ್ಶೆ’ ಎಂಬ ಪದವು ಅತ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಆದರೆ ವಿಪರ್ಯಾಸವೆಂದರೆ, ತನ್ನ ಮೂಲ ಅರ್ಥವನ್ನು ಕ್ರಮೇಣ ಕಳೆದುಕೊಳ್ಳುತ್ತಿರುವುದು! ಪುಸ್ತಕ ಪರಿಚಯ, ಕೃತಿಯ ಸಂಕ್ಷಿಪ್ತ ಸಾರಾಂಶ, ಲೇಖಕರ ಪರಿಚಯ, ಪ್ರಶಂಸಾತ್ಮಕ ಲೇಖನ, ಪ್ರಚಾರಾತ್ಮಕ ಬರಹ, ಮುನ್ನುಡಿ-ಬೆನ್ನುಡಿಯ ವಿವರಣೆ, ಬಿಡುಗಡೆ ಸಮಾರಂಭದ ಭಾಷಣ, ಸಾಮಾಜಿಕ ಜಾಲತಾಣದ ಪ್ರತಿಕ್ರಿಯೆ, ವೈಯಕ್ತಿಕ ಅಭಿಪ್ರಾಯ ….. ಇವೆಲ್ಲವನ್ನೂ ‘ವಿಮರ್ಶೆ’ಯೆಂದು ಕರೆಯುವ ಪ್ರವೃತ್ತಿ ವ್ಯಾಪಕವಾಗುತ್ತಿದೆ. ಈ ಗೊಂದಲವು ‘ವಿಮರ್ಶೆ’ಯ ಸ್ವರೂಪವನ್ನೇ ವಿಕೃತಗೊಳಿಸುತ್ತಿದೆ. ಪುಸ್ತಕವನ್ನು ಓದಿದ ನಂತರ ಅದನ್ನು ಪರಿಚಯಿಸುವುದು ಪುಸ್ತಕ ಪರಿಚಯ; ಅದರ ವಿಷಯವಸ್ತುವನ್ನು ವಿವರಿಸುವುದು ವಿವರಣೆ; ಕೃತಿಯ ಪ್ರಸಾರ ಮತ್ತು ಓದುಗರ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಬರೆಯುವುದು ಪ್ರಚಾರಾತ್ಮಕ ಬರಹ; ಓದುಗರ ವೈಯಕ್ತಿಕ ಅನುಭವವನ್ನು ದಾಖಲಿಸುವುದು ಓದುಗರ ಪ್ರತಿಕ್ರಿಯೆ. ಹಾಗಾಗಿ ಪುಸ್ತಕ ಪರಿಚಯವನ್ನು ಪರಿಚಯವೆಂದೇ, ಪ್ರಚಾರ ಬರಹವನ್ನು ಪ್ರಚಾರವೆಂದೇ, ಓದುಗರ ಪ್ರತಿಕ್ರಿಯೆಯನ್ನು ಪ್ರತಿಕ್ರಿಯೆಯೆಂದೇ ಗುರುತಿಸಬೇಕಾಗಿದೆ. ಇವೆಲ್ಲವೂ ತಮ್ಮದೇ ಆದ ಸಾಹಿತ್ಯಿಕ ಮಹತ್ವವನ್ನು ಹೊಂದಿವೆ. ಪ್ರತಿಯೊಂದು ಸಾಹಿತ್ಯಿಕ ಕ್ರಿಯೆಯೂ ತನ್ನದೇ ಆದ ಉದ್ದೇಶ ಮತ್ತು ಮಿತಿಯನ್ನು ಹೊಂದಿವೆ. ಅವುಗಳ ನಡುವಿನ ಭೇದವನ್ನು ಉಳಿಸಿಕೊಳ್ಳುವುದೇ ಸಾಹಿತ್ಯದ ಆರೋಗ್ಯವನ್ನು ಕಾಪಾಡುವ ಮೊದಲ ಹೆಜ್ಜೆಯಾಗಿದೆ.        ಇಂದು ಸಾಹಿತ್ಯ ಲೋಕದಲ್ಲಿ ಪುಸ್ತಕ ಪರಿಚಯ, ಓದುಗರ ಪ್ರತಿಕ್ರಿಯೆ, ಪ್ರಚಾರಾತ್ಮಕ ಬರಹ ಮತ್ತು ವಿಮರ್ಶೆ ಇವುಗಳ ನಡುವಿನ ಗಡಿರೇಖೆಗಳು ಮಸುಕಾಗುತ್ತಿರುವ ಸಂದರ್ಭದಲ್ಲಿ, ಅವುಗಳ ಸ್ವರೂಪ ಮತ್ತು ವ್ಯಾಪ್ತಿಯನ್ನು ಮರುನಿರ್ವಚಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ. ಪ್ರತಿಯೊಂದು ಸಾಹಿತ್ಯಿಕ ಕ್ರಿಯೆಯನ್ನೂ ಅದರ ಉದ್ದೇಶಕ್ಕೆ ಅನುಗುಣವಾಗಿ ಗುರುತಿಸಿದಾಗ ಮಾತ್ರ ವಿಮರ್ಶೆಯ ಗೌರವ ಮತ್ತು ಸಾಹಿತ್ಯದ ಆರೋಗ್ಯ ಎರಡನ್ನೂ ಉಳಿಸಿಕೊಳ್ಳಲು ಸಾಧ್ಯ. ‘ವಿಮರ್ಶೆ’ಯ ಉದ್ದೇಶವು ಕೇವಲ ಮಾಹಿತಿ ನೀಡುವುದಾಗಲಿ ಅಥವಾ ಆಸಕ್ತಿ ಹುಟ್ಟಿಸುವುದಾಗಲಿ ಅಲ್ಲ; ಕೃತಿಯ ಅಂತರಂಗವನ್ನು ವಿವೇಚನಾತ್ಮಕವಾಗಿ ಪರಿಶೀಲಿಸಿ ಅದರ ಸಾಹಿತ್ಯಿಕ ಮೌಲ್ಯವನ್ನು ನಿರ್ಣಯಿಸುವುದಾಗಿದೆ. ಅಂದರೆ, ಕೃತಿಯ ರೂಪ, ಆಶಯ, ಭಾಷೆ, ಶೈಲಿ, ಸಾಂಸ್ಕೃತಿಕ ಹಿನ್ನೆಲೆ, ಸೌಂದರ್ಯಪ್ರಜ್ಞೆ ಮತ್ತು ಸಾಹಿತ್ಯಿಕ ಮೌಲ್ಯಗಳನ್ನು ಸಮಗ್ರವಾಗಿ ಪರಿಶೀಲಿಸುವ ಬೌದ್ಧಿಕ ಹಾಗೂ ಸೃಜನಾತ್ಮಕ ಕ್ರಿಯೆ. ಅದರ ಗುರಿ ಲೇಖಕರನ್ನು ಸಂತೋಷಪಡಿಸುವುದೂ ಅಲ್ಲ, ನೋಯಿಸುವುದೂ ಅಲ್ಲ; ಕೃತಿಯ ಸಾಹಿತ್ಯಸತ್ಯವನ್ನು ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ದಾಖಲಿಸುವುದಾಗಿದೆ.        ಸಮಕಾಲೀನ ಸಾಹಿತ್ಯದಲ್ಲಿ ಇನ್ನೊಂದು ಪ್ರವೃತ್ತಿಯೂ ಕಂಡುಬರುತ್ತಿದೆ. ಕೆಲವರು ಪ್ರಶಂಸೆಯನ್ನೇ ‘ವಿಮರ್ಶೆ’ ಎಂದು ಭಾವಿಸುತ್ತಿರುವುದು; ಇನ್ನೂ ಕೆಲವರು ದೋಷಗಳನ್ನು ಹುಡುಕುವುದನ್ನೇ ‘ವಿಮರ್ಶೆ’ಯ ಮುಖ್ಯ ಗುರಿಯೆಂದು ಪರಿಗಣಿಸುತ್ತಿರುವುದು. ಈ ಎರಡೂ ಅತಿರೇಕಗಳು ‘ವಿಮರ್ಶೆ’ಯ ನಿಜವಾದ ಧರ್ಮಕ್ಕೆ ವಿರುದ್ಧವಾಗಿವೆ. ಹಾಗಂತ ಹೊಗಳಿಕೆಯಾಗಲಿ, ತೆಗಳಿಕೆಯಾಗಲಿ ವಿಮರ್ಶೆಯಾಗುವುದಿಲ್ಲ. ಅದು ಪ್ರಶಂಸೆ ಮತ್ತು ಟೀಕೆ ಎಂಬ ಎರಡೂ ಅಂಶಗಳನ್ನು ಮೀರಿದ, ನ್ಯಾಯಸಮ್ಮತ ವಿವೇಚನೆಯಾಗಿದೆ. ಕೃತಿಯಲ್ಲಿ ಗುಣಗಳಿದ್ದರೆ ಅವುಗಳನ್ನು ಸೂಕ್ತವಾಗಿ ಗುರುತಿಸುವ, ಮಿತಿಗಳಿದ್ದರೆ ಅವುಗಳನ್ನು ವಸ್ತುನಿಷ್ಠವಾಗಿ ಸೂಚಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ಆದರೆ ಈ ಎರಡನ್ನೂ ಮಾಡುವಾಗ ವಿಮರ್ಶಕರ ವೈಯಕ್ತಿಕ ರುಚಿ, ಸ್ನೇಹ, ದ್ವೇಷ, ಪೂರ್ವಾಗ್ರಹ ಅಥವಾ ಸಿದ್ಧಾಂತಗಳ ಒತ್ತಡ ನಿರ್ಣಾಯಕವಾಗಬಾರದು. ನಿರ್ಣಾಯಕವಾಗಬೇಕಾದುದು ಕೃತಿಯ ಸ್ವರೂಪ ಮತ್ತು ಅದರ ಸಾಹಿತ್ಯಿಕ ಮೌಲ್ಯ ಮಾತ್ರ! ನಿಜವಾದ ವಿಮರ್ಶೆಯು ಕೃತಿಯ ಕಥೆಯನ್ನು ಪುನಃ ಹೇಳುವುದಿಲ್ಲ; ಕೃತಿಯೊಳಗೆ ಅಡಗಿರುವ ಅರ್ಥವನ್ನು ಅನಾವರಣಗೊಳಿಸುತ್ತದೆ. ಅದು ಲೇಖಕರನ್ನು ಕೇಂದ್ರವಾಗಿಸಿಕೊಳ್ಳುವುದಿಲ್ಲ; ಕೃತಿಯನ್ನು ಕೇಂದ್ರವಾಗಿಸಿಕೊಳ್ಳುತ್ತದೆ. ಅದು ಓದುಗರ ಮೇಲೆ ಅಭಿಪ್ರಾಯವನ್ನು ಹೇರಲು ಪ್ರಯತ್ನಿಸುವುದಿಲ್ಲ; ಅವರ ಗ್ರಹಿಕೆಯನ್ನು ವಿಸ್ತರಿಸುತ್ತದೆ. ವಿಮರ್ಶಕರು ನ್ಯಾಯಾಧೀಶರಂತೆ ಶಿಕ್ಷೆ ವಿಧಿಸುವವರೂ ಅಲ್ಲ; ಪ್ರಚಾರಕರಂತೆ ಹೊಗಳುವವರೂ ಅಲ್ಲ. ಅವರು ಕೃತಿಯ ಅಂತರಂಗವನ್ನು ಸೂಕ್ಷ್ಮವಾಗಿ ಅರಿತು, ಅದರ ಸಾಹಿತ್ಯಿಕ ಸತ್ಯವನ್ನು ಸಹೃದಯ ಓದುಗರ ಮುಂದಿಡುವ ಮಧ್ಯವರ್ತಿ!        ಭಾರತೀಯ ಕಾವ್ಯಮೀಮಾಂಸೆಯು ವಿಮರ್ಶಕರಲ್ಲಿ ಸಹೃದಯತೆಯನ್ನು ಅತ್ಯುನ್ನತ ಗುಣವೆಂದು ಪರಿಗಣಿಸುತ್ತದೆ. ಸಹೃದಯತೆ ಎಂದರೆ ಕೇವಲ ಮೆಚ್ಚುಗೆಯಲ್ಲ; ಕೃತಿಯ ಅಂತರಂಗದೊಂದಿಗೆ ತಾದಾತ್ಮ್ಯ ಸಾಧಿಸುವ ಸಾಮರ್ಥ್ಯ. ಪಾಶ್ಚಾತ್ಯ ವಿಮರ್ಶೆಯು ವಸ್ತುನಿಷ್ಠತೆ, ತಾರ್ಕಿಕತೆ ಮತ್ತು ಸಾಹಿತ್ಯಿಕ ಮಾನದಂಡಗಳನ್ನು ಒತ್ತಿ ಹೇಳುತ್ತದೆ. ಈ ಎರಡೂ ಪರಂಪರೆಗಳ ಸಾರ ಒಂದೇ, ಅದೆಂದರೆ ವಿಮರ್ಶೆಯು ಪೂರ್ವಾಗ್ರಹದಿಂದ ಮುಕ್ತವಾದ, ಜ್ಞಾನ ಮತ್ತು ಸಂವೇದನೆಯ ಸಮನ್ವಯದ ವಿವೇಚನಾತ್ಮಕ ಕ್ರಿಯೆಯಾಗಿರಬೇಕು ಎಂಬುದು! ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಪುಸ್ತಕ ಪರಿಚಯವನ್ನು ವಿಮರ್ಶೆ ಎಂದು ಕರೆಯುವುದು, ಪ್ರಚಾರಾತ್ಮಕ ಬರಹವನ್ನು ವಿಮರ್ಶೆ ಎಂದು ಭಾವಿಸುವುದು ಅಥವಾ ವೈಯಕ್ತಿಕ ಅಭಿಪ್ರಾಯವನ್ನು ವಿಮರ್ಶೆಯೆಂದು ಪ್ರತಿಪಾದಿಸುವುದು ವಿಮರ್ಶೆಯ ವ್ಯಾಪ್ತಿಯನ್ನು ಸಂಕುಚಿತಗೊಳಿಸುತ್ತದೆ. ಇವು ಸಾಹಿತ್ಯ ಸಂವಹನದ ಅಗತ್ಯ ರೂಪಗಳಾದರೂ, ಅವುಗಳನ್ನು ವಿಮರ್ಶೆಯೊಂದಿಗೆ ಸಮೀಕರಿಸುವುದು ಶಾಸ್ತ್ರೀಯ ದೃಷ್ಟಿಯಿಂದ ಸಮಂಜಸವಲ್ಲ. ವಿಮರ್ಶೆಯು ವಿಶ್ಲೇಷಣೆ, ವ್ಯಾಖ್ಯಾನ, ಮೌಲ್ಯಮಾಪನ, ಸೌಂದರ್ಯಾಸ್ವಾದನೆ ಮತ್ತು ವಸ್ತುನಿಷ್ಠ ವಿವೇಚನೆಯ ಎಲ್ಲ ಆಯಾಮಗಳ ಸಮನ್ವಯದಿಂದ ರೂಪುಗೊಳ್ಳುವ ಸ್ವತಂತ್ರ ಸಾಹಿತ್ಯ ಪ್ರಕಾರವಾಗಿದೆ. ಹೀಗಾಗಿ ವಿಮರ್ಶೆಯು ಕೃತಿಯನ್ನು ಹೊಗಳುವ ಸಾಧನವಾಗಲಿ, ಅವಮಾನಿಸುವ ಆಯುಧವಾಗಲಿ, ಲೇಖಕರನ್ನು ಪ್ರತಿಷ್ಠಾಪಿಸುವ ವೇದಿಕೆಯಾಗಲಿ, ಅವರನ್ನು ನಿರಾಕರಿಸುವ ನ್ಯಾಯಪೀಠವಾಗಲಿ ಅಲ್ಲ. ಅದು ಕೃತಿಯ ಸಾಹಿತ್ಯಿಕ ಸತ್ಯವನ್ನು ಅನಾವರಣಗೊಳಿಸಿ, ಅದರ ಮೌಲ್ಯವನ್ನು ಸಮರ್ಥವಾಗಿ ನಿರ್ಣಯಿಸಿ, ಲೇಖಕ ಮತ್ತು ಸಹೃದಯ ಓದುಗರ ನಡುವೆ ಅರ್ಥಪೂರ್ಣ ಸಂವಾದವನ್ನು ನಿರ್ಮಿಸುವ ಸೃಜನಾತ್ಮಕ ಬೌದ್ಧಿಕ ಪ್ರಕ್ರಿಯೆಯಾಗಿದೆ.        ಸಾಹಿತ್ಯಕ್ಕೆ ಶ್ರೇಷ್ಠ ಸೃಜನಶೀಲರು ಎಷ್ಟು ಅಗತ್ಯವೋ, ಅಷ್ಟೇ ಪ್ರಾಮಾಣಿಕ ವಿಮರ್ಶಕರೂ ಅಗತ್ಯ. ಸೃಜನಶೀಲರು ಸಾಹಿತ್ಯವನ್ನು ನಿರ್ಮಿಸಿದರೆ, ವಿಮರ್ಶಕರು ಅದರ ಮೌಲ್ಯವನ್ನು ಗುರುತಿಸುತ್ತಾರೆ, ಸಾಹಿತ್ಯದ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತಾರೆ ಹಾಗೂ ಓದುಗರ ಅಭಿರುಚಿಯನ್ನು ಪರಿಷ್ಕರಿಸುತ್ತಾರೆ. ಸೃಷ್ಟಿ ಸಾಹಿತ್ಯವನ್ನು ವಿಸ್ತರಿಸಿದರೆ, ವಿಮರ್ಶೆ ಅದನ್ನು ಆಳಗೊಳಿಸುತ್ತದೆ. ಈ ನೆಲೆಯಲ್ಲಿ ವಿವೇಚಿಸಿದಾಗ ವಿಮರ್ಶೆಯು ಸಾಹಿತ್ಯದ ಪರಾವಲಂಬಿಯಲ್ಲ; ಅದು ಸಾಹಿತ್ಯದ ಸಹಸೃಷ್ಟಿ. ಒಂದು ಉತ್ತಮ ಕೃತಿ ಹೇಗೆ ಓದುಗರಲ್ಲಿ ಹೊಸ ಅನುಭವವನ್ನು ಮೂಡಿಸುತ್ತದೆಯೋ, ಅದೇ ರೀತಿ ಉತ್ತಮ ವಿಮರ್ಶೆಯು ಆ ಅನುಭವಕ್ಕೆ ಅರ್ಥ, ಆಳ ಮತ್ತು ದೃಷ್ಟಿಯನ್ನು ನೀಡುತ್ತದೆ ಎಂಬುದು ಮನವರಿಕೆಯಾಗುತ್ತದೆ. ನಿಜವಾದ ವಿಮರ್ಶೆಯು ಪೂರ್ವಾಗ್ರಹದಿಂದ ಮುಕ್ತವಾದ, ತರ್ಕದಿಂದ ನಿಯಂತ್ರಿತವಾದ, ಸೌಂದರ್ಯಪ್ರಜ್ಞೆಯಿಂದ ಸಮೃದ್ಧವಾದ ಮತ್ತು ಸಾಹಿತ್ಯಸತ್ಯಕ್ಕೆ ಬದ್ಧವಾದ ಚಿಂತನಾ ಪ್ರಕ್ರಿಯೆಯಾಗಿದೆ. ಅದು ಲೇಖಕರ ಪರವೂ ಅಲ್ಲ, ವಿರುದ್ಧವೂ ಅಲ್ಲ; ಸಾಹಿತ್ಯದ ಪರವಾಗಿದೆ. ಆದ್ದರಿಂದ ವಿಮರ್ಶಕರ ಮೊದಲ ನಿಷ್ಠೆ ವ್ಯಕ್ತಿಯ ಮೇಲಲ್ಲ, ಕೃತಿಯ ಮೇಲೆ; ಕೃತಿಯ ಮೇಲಲ್ಲ, ಸಾಹಿತ್ಯಸತ್ಯದ ಮೇಲೆ ಇರಬೇಕು. ಈ ನಿಷ್ಠೆಯೇ ವಿಮರ್ಶೆಯನ್ನು ಸಾಮಾನ್ಯ ಅಭಿಪ್ರಾಯದಿಂದ ಪ್ರತ್ಯೇಕಿಸಿ, ಅದನ್ನು ಶಾಸ್ತ್ರೀಯ, ಸೃಜನಾತ್ಮಕ ಮತ್ತು ಸಾಂಸ್ಕೃತಿಕ ಹೊಣೆಗಾರಿಕೆಯಾಗಿ ರೂಪಿಸುತ್ತದೆ. ವಿಮರ್ಶೆಯ ಈ ಮೂಲ ಸ್ವರೂಪವನ್ನು ಪುನಃ ಸ್ಥಾಪಿಸುವುದು ಇಂದಿನ ಸಾಹಿತ್ಯ ಲೋಕದ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ. ವಿಮರ್ಶೆಯನ್ನು ಅದರ ನಿಜವಾದ ಅರ್ಥದಲ್ಲಿ ಮರುಸ್ಥಾಪಿಸುವುದು ಕೇವಲ ವಿಮರ್ಶಕರ ಹೊಣೆಗಾರಿಕೆಯಲ್ಲ; ಲೇಖಕರು, ಓದುಗರು, ಸಂಶೋಧಕರು ಮತ್ತು ಸಾಹಿತ್ಯ ಸಂಸ್ಥೆಗಳು ಸೇರಿದಂತೆ ಸಮಸ್ತ ಸಾಹಿತ್ಯ ಸಮುದಾಯದ ಜವಾಬ್ದಾರಿಯಾಗಿದೆ. ಏಕೆಂದರೆ ಉತ್ತಮ ಸಾಹಿತ್ಯವು ಶ್ರೇಷ್ಠ ಸೃಷ್ಟಿಯಿಂದ ಮಾತ್ರವಲ್ಲ, ಪ್ರಾಮಾಣಿಕ ಮತ್ತು ಪ್ರಬುದ್ಧ ವಿಮರ್ಶೆಯಿಂದಲೂ ರೂಪುಗೊಳ್ಳುತ್ತದೆ.        ಸಾಹಿತ್ಯವು ಸೃಷ್ಟಿಯ ಕಲೆ; ವಿಮರ್ಶೆಯು ಆ ಸೃಷ್ಟಿಯ ಸತ್ಯವನ್ನು ಅನಾವರಣಗೊಳಿಸುವ ಪುನರ್ ಕಲೆ. ಆದ್ದರಿಂದ ವಿಮರ್ಶೆಯು ಯಾವುದೇ ವ್ಯಕ್ತಿಯ ಪರವಾಗಲೀ ವಿರುದ್ಧವಾಗಲೀ ನಿಲ್ಲದೆ; ಸಾಹಿತ್ಯದ ಪರವಾಗಿ ಇರುವಂಥದ್ದು. ಈ ಉದ್ದೇಶವನ್ನು ಸಾಧಿಸಲು ಪ್ರತಿಯೊಬ್ಬ ವಿಮರ್ಶಕರು ಪಾಲಿಸಬೇಕಾದ ಹತ್ತು ಮೂಲ ತತ್ತ್ವಗಳನ್ನು ಈ ರೀತಿಯಲ್ಲಿ ಸಂಗ್ರಹಿಸಬಹುದು!√೦೧. ಕೃತಿಯೇ ಕೇಂದ್ರ; ಲೇಖಕರಲ್ಲ : ವಿಮರ್ಶೆಯ ವಿಷಯ ಲೇಖಕರ ವ್ಯಕ್ತಿತ್ವವಲ್ಲ, ಕೃತಿ. ಲೇಖಕರ ಖ್ಯಾತಿ, ಸ್ನೇಹ, ವೈಯಕ್ತಿಕ ಬದುಕು ಅಥವಾ ಸಾಮಾಜಿಕ ಸ್ಥಾನಮಾನವು ವಿಮರ್ಶೆಯ ಮಾನದಂಡವಾಗಬಾರದು. ಕೃತಿಯೇ ವಿಮರ್ಶೆಯ ಕೇಂದ್ರಬಿಂದುವಾಗಬೇಕು.√೦೨. ಸಂಪೂರ್ಣವಾಗಿ ಓದದೆ ಕೃತಿಯ ವಿಮರ್ಶೆ ಸಲ್ಲದು : ಅಪೂರ್ಣ ಓದು ಅಪೂರ್ಣ ತೀರ್ಪಿಗೆ ಕಾರಣವಾಗುತ್ತದೆ. ಕೃತಿಯ ಆಶಯ, ರಚನೆ, ಭಾಷೆ, ಸಂದರ್ಭ ಮತ್ತು ಅಂತರಾರ್ಥವನ್ನು ಗ್ರಹಿಸದೆ ನೀಡುವ ಯಾವುದೇ ಅಭಿಪ್ರಾಯ ವಿಮರ್ಶೆ ಎಂದು ಅನಿಸಿಕೊಳ್ಳುವುದಿಲ್ಲ.√೦೩. ಹೊಗಳಿಕೆ-ತೆಗಳಿಕೆ ಎರಡನ್ನೂ ಸಮಾನವಾಗಿ ಕಾಣಬೇಕು : ಕಾರಣವಿಲ್ಲದ ಪ್ರಶಂಸೆ ಹೇಗೆ ಅಪಾಯಕಾರಿಯೋ, ಕಾರಣವಿಲ್ಲದ ಟೀಕೆಯೂ ಅಷ್ಟೇ ಅಪಾಯಕಾರಿ. ಗುಣವನ್ನು ಗುಣವೆಂದೂ, ಮಿತಿಯನ್ನು ಮಿತಿಯೆಂದೂ ಹೇಳುವ ಪ್ರಾಮಾಣಿಕತೆಯೇ ವಿಮರ್ಶೆಯ ಧರ್ಮ.√೦೪. ವೈಯಕ್ತಿಕ ಅಭಿರುಚಿಯನ್ನು ಸಾಹಿತ್ಯಿಕ ಮಾನದಂಡವೆಂದು ಭಾವಿಸಲಾಗದು : ‘ನನಗೆ ಇಷ್ಟ’ ಅಥವಾ ‘ನನಗೆ ಇಷ್ಟವಿಲ್ಲ’ ಎಂಬುದು ಓದುಗರ ಪ್ರತಿಕ್ರಿಯೆಯಾಗಬಹುದು; ಆದರೆ ವಿಮರ್ಶೆಯ ನಿರ್ಣಯ ಸಾಹಿತ್ಯಿಕ ಆಧಾರಗಳ ಮೇಲೆ ನಿಲ್ಲಬೇಕು.√೦೫. ಮೊದಲು ಮನನ; ನಂತರ ನಿರ್ಣಯ : ಅರ್ಥೈಸದೆ ನಿರ್ಣಯಿಸುವುದು ಪೂರ್ವಾಗ್ರಹವಾಗುತ್ತದೆ. ಕೃತಿಯು ಏನು ಹೇಳುತ್ತದೆ ಎಂಬುದನ್ನು ಮೊದಲು ಗ್ರಹಿಸಬೇಕು; ಅದು ಎಷ್ಟರ ಮಟ್ಟಿಗೆ ಸಾಧಿಸಿದೆ ಎಂಬುದನ್ನು ನಂತರ ಪರಿಶೀಲಿಸಬೇಕು.√೦೬. ಕೃತಿಯ ಕಾಲ, ಸಮಾಜ ಮತ್ತು ಸಾಹಿತ್ಯಿಕ ಹಿನ್ನೆಲೆಯನ್ನು ಗೌರವಿಸಬೇಕು : ಯಾವುದೇ ಕೃತಿಯನ್ನು ಅದರ ಸಂದರ್ಭದಿಂದ ಬೇರ್ಪಡಿಸಿ ಅಳೆಯಲಾಗದು. ಪ್ರತಿಯೊಂದು ಕೃತಿಯೂ ತನ್ನ ಕಾಲದ, ಸಂಸ್ಕೃತಿಯ ಮತ್ತು ಸಾಹಿತ್ಯ ಪರಂಪರೆಯೊಂದಿಗೆ ಸಂವಾದ ನಡೆಸುತ್ತದೆ.√೦೭. ದೋಷಗಳನ್ನು ಮಾತ್ರವಲ್ಲ, ಗುಣಗಳನ್ನೂ ಗುರುತಿಸಬೇಕು : ವಿಮರ್ಶೆಯ ಗುರಿ ಕೇವಲ ತಪ್ಪುಗಳನ್ನು ಪತ್ತೆ ಹಚ್ಚುವುದಲ್ಲ; ಕೃತಿಯ ನಿಜವಾದ ಸಾಹಿತ್ಯಿಕ ಮೌಲ್ಯವನ್ನು ಕಂಡುಹಿಡಿಯುವುದು. ಮಿತಿಗಳನ್ನು ಸೂಚಿಸುವಷ್ಟೇ ಪ್ರಾಮಾಣಿಕವಾಗಿ ಸಾಧನೆಗಳನ್ನೂ ಗುರುತಿಸಬೇಕು.√೦೮. ಓದುಗರ ಗ್ರಹಿಕೆಯನ್ನು ವಿಸ್ತರಿಸಬೇಕು; ನಮ್ಮ ಅಭಿಪ್ರಾಯಗಳನ್ನು ಹೇರಬಾರದು : ಉತ್ತಮ ವಿಮರ್ಶೆಯು ಓದುಗರಿಗೆ ಯೋಚಿಸಲು ಕಲಿಸುತ್ತದೆ. ಅದು ಅಂತಿಮ ತೀರ್ಪನ್ನು ಹೇರದೆ, ಹೊಸ ಅರ್ಥಗಳ ಕಡೆಗೆ ದಾರಿ ತೋರಿಸುತ್ತದೆ.√೦೯. ಸತ್ಯಕ್ಕೆ ನಿಷ್ಠವಾಗಿರಬೇಕು; ವ್ಯಕ್ತಿಗೆ ಅಲ್ಲ : ಸ್ನೇಹ, ದ್ವೇಷ, ಗುಂಪುಗಾರಿಕೆ, ಸಿದ್ಧಾಂತ ಅಥವಾ ವೈಯಕ್ತಿಕ ಹಿತಾಸಕ್ತಿಗಳು ವಿಮರ್ಶೆಯನ್ನು ನಿಯಂತ್ರಿಸಬಾರದು. ವಿಮರ್ಶಕರ ಮೊದಲ ನಿಷ್ಠೆ ಸಾಹಿತ್ಯಸತ್ಯಕ್ಕೆ ಇರಬೇಕು.√೧೦. ವಿಮರ್ಶೆ ಸಾಹಿತ್ಯಸೇವೆ; ಅಧಿಕಾರವಲ್ಲ : ವಿಮರ್ಶಕರು ನ್ಯಾಯಾಧೀಶರಲ್ಲ; ಸಾಹಿತ್ಯದ ಸಹಯಾತ್ರಿ. ಹಾಗಾಗಿ ವಿಮರ್ಶಕರ ಕೆಲಸ ಲೇಖಕರನ್ನು ಭಯಪಡಿಸುವುದಲ್ಲ, ಸಾಹಿತ್ಯವನ್ನು ಸಮೃದ್ಧಗೊಳಿಸುವುದು. ಆದ್ದರಿಂದ ವಿನಯ, ಸಹೃದಯತೆ, ತಾರ್ಕಿಕತೆ ಮತ್ತು ವಸ್ತುನಿಷ್ಠತೆ ವಿಮರ್ಶಕರ ಶಾಶ್ವತ ಗುಣಗಳಾಗಿರಬೇಕು.      ಈ ದಶಸೂತ್ರಗಳು ವಿಮರ್ಶಕರನ್ನು ಬಂಧಿಸುವ ನಿಯಮಗಳಲ್ಲ; ಅವರನ್ನು ಪ್ರಬುದ್ಧರನ್ನಾಗಿ ಮಾಡುವ ಮಾರ್ಗಸೂಚಿಗಳಾಗಿವೆ. ಇವುಗಳನ್ನು ಅನುಸರಿಸಿದಾಗ ಮಾತ್ರ ವಿಮರ್ಶೆಯು ಪುಸ್ತಕ ಪರಿಚಯದಿಂದ ಭಿನ್ನವಾಗಲು; ಪ್ರಶಂಸೆ ಮತ್ತು ಟೀಕೆಯ ಮಿತಿಗಳನ್ನು ಮೀರಲು ಹಾಗೂ ವೈಯಕ್ತಿಕ ಅಭಿಪ್ರಾಯದಿಂದ ಸಾಹಿತ್ಯಿಕ ಮೌಲ್ಯಮಾಪನದ ಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ. ಆಗ ವಿಮರ್ಶೆಯು ಕೇವಲ ಒಂದು ಬರವಣಿಗೆಯ ವಿಧಾನವಾಗಿ ಉಳಿಯುವುದಿಲ್ಲ; ಬದಲಿಗೆ ಸಾಹಿತ್ಯದ ಗುಣಮಟ್ಟವನ್ನು ಕಾಪಾಡುವ ಸಾಂಸ್ಕೃತಿಕ ಹೊಣೆಗಾರಿಕೆಯಾಗುತ್ತದೆ. ಅಂದಾಗ ಮಾತ್ರ ‘ಸೃಷ್ಟಿಯು ಸಾಹಿತ್ಯಕ್ಕೆ ಜೀವ ನೀಡಿದರೆ, ವಿಮರ್ಶೆಯು ಆ ಜೀವಕ್ಕೆ ದಿಕ್ಕು ನೀಡುತ್ತದೆ’ ಎಂಬ ಸೂಕ್ತಿ ನಿಜವೆನಿಸುತ್ತದೆ. ಡಾ. ಮಲ್ಲಿನಾಥ ಎಸ್. ತಳವಾರಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರುಕನ್ನಡ ವಿಭಾಗ,ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ,ಕಲಬುರಗಿ ೫೮೫ ೧೦೩

“ವಿಮರ್ಶೆ : ಸಮಕಾಲೀನ ಗೊಂದಲಗಳು ಮತ್ತು ನಿಜವಾದ ಸ್ವರೂಪ” ಡಾ. ಮಲ್ಲಿನಾಥ ಎಸ್. ತಳವಾರ Read Post »

ನಿಮ್ಮೊಂದಿಗೆ

ಬಾಗೇಪಲ್ಲಿ ಅವರ ಗಜಲ್

ಕಾವ್ಯ ಸಂಗಾತಿ ಬಾಗೇಪಲ್ಲಿ ಗಜಲ್ ಅದಾರು ಬಂದದು ಲಲನೆ ಥಟ್ಟoತ ಹೊಳೆಯುತಕರಿ ಮೋಡ ಸರಿದಾಗ ನಕ್ಷತ್ರ ಫಳ್ಳoತ ಮಿನುಗುತ ನೀಲಿ ಕಣ್ಣ, ತಲೆ ಕೂದಲಲಿ ಹೂ ವನು ಮುಡಿದವಳುಅವಳ ಆಗಮನದಿಂ ಕತ್ತಲೆ ಕೋಣೆ ಪಟ್ಟoತ ಬೆಳಗುತ ನೇರ ನಾಜೂಕು ಹೆದ್ದಾರಿಯಂತೆ ಬೈತಲೆ ಹೊಂದಿದವಳುಆದರ ರೂಬಿ ಕಲ್ಲ ಬಲಾಕು ಚಟ್ಟoತ ಫಳಗುಟ್ಟುತ ಕತ್ತಲ ಕೋಣೆ ಕತ್ತಲನು ಸುರೆಯಂತೆ ಸವಿಯುತ್ತಿರೆಅನಿರೀಕ್ಷಿತ ಮಿಂಚೊoದು ಫಳಾರoತ ಪ್ರಕಾಶಿಸುತ ಕೃಷ್ಣಾ! ನಿನ್ನ ಚಕ್ರ ಸೂರ್ಯನ ಮುಚ್ಚಿದ್ದು ತಿಳಿಯಲಿಲ್ಲಪಾರ್ಥ ಶಪಥ ತೀರಿದಂತೆ ಪ್ರಿಯೆ ಗೊಳ್ಳoತ ನಗುತ(ಬೇಸರದಿ ಕತ್ತಲ ಕೋಣೆಯಲಿ ಏಕಾಂಗಿ ಕುಳಿತಿರುವಾಗ ಅಚಾನಕ್ ಬೆಳಕಿನ ಕಿರಣ ಬಂದಾಗಿನ ಭಾವ ಗಝಲಾಗಿಸಿದೆ. ಇದು ಜುಲ್ ಕಾಫಿಯಾ ಆಗುವುದೇ.? ಬಲ್ಲವರು ತಿಳಿಸಿ ) ಬಾಗೇಪಲ್ಲಿ

ಬಾಗೇಪಲ್ಲಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಗಜಲ್ ಇಂದಿಗೆ ಬಾಳಲಿ ನಿನ್ನ ನನ್ನ ಹಿಸಾಬ್ ಚುಕ್ತಾ ಆಯ್ತುಮಂದಿಗೆ ಬಾಯಲಿ ನಮ್ಮಿಬ್ಬರ  ಕಿತಾಬ್ ಮಕ್ತಾ ಆಯ್ತು ಹೃದಯದಿಂದ ಲೆಕ್ಕದ ಪನ್ನಾಪನ್ನಾ ಕಿತ್ತು ಬಿಸಾಕಿದ್ದೇನೆಧೋಕಾ ಎಲ್ಲ ಸರಿಸಿದಾಗ ಬಜಾರಿನಲೇ ನಕಾಬ್ ಬಯಲಾಯ್ತು  ರಂಗಿಗೆ ಬಂಗು ಹತ್ತಿದಾಗ ಎಲ್ಲಿದೆ ಹೇಳು ಖೂಬ್ಸೂರ್ತಿಕಟ್ಟ ಕಡೆಗೆ ನಿನ್ನೆಲ್ಲ ಕರ್ತುತಗಳಿಗೆ ಜವಾಬ್ ಕೊಟ್ಟಾಯ್ತು ನಂಬಿಕೆಗಳ ಮೇಲೆಯೆ ನಂಬಿಕೆ ಸತ್ತು ಹೋಗಿದೆ ನನ್ನಲ್ಲಿನಟ್ಟನಡುರಾತ್ರಿಯಲೇ ರಾತ್ರಿಯಲೇ ನಕ್ಷತ್ರಗಳ ಶಬಾಬ್ ಹೊರಟೋಯ್ತು  ಸ್ವಪ್ನಗಳ ಸವಾರಿ ಮಾಡಿ ಆಸೆ ತೀರ ಮುಟ್ಟಲಿಲ್ಲ ಜ್ಯೋತಿ ಬದುಕಿನ ನಶೆ ಏರುವ ಮುನ್ನವೇ ಜಾಮಿನಿಂದ ಶರಾಬ್ ಚೆಲ್ಲೋಯ್ತು ಜ್ಯೋತಿ ಮಾಳಿ

ಜ್ಯೋತಿ ಮಾಳಿ ಅವರ ಗಜಲ್ Read Post »

You cannot copy content of this page

Scroll to Top