ಕಾವ್ಯ ಸಂಗಾತಿ
ಬೆಂಶ್ರೀ ರವೀಂದ್ರ
“ಹೆಡೆ ಬಿಚ್ಚಿ ಹೊಡೆ”


ನೀನು ಮನೆ ಬಿಟ್ಟು ಹೋದ ರಾತ್ರಿಯೇ ರಾಹುಲ ಹುಟ್ಟಿದ
ಹೆರಿಗೆಯ ನೋವಲಿದ್ದವಳ
ಕೈ ಹಿಡಿದು ಯಶೋಧರಾ
ಸಹಿಸಿಕೊ ನಾನಿದ್ದೇನೆ
ಅಂತೇಕೆ ಅಂದು ಹೋಗಲಿಲ್ಲ
ನಾನೇನು ಕಡಿಮೆ ಮಾಡಿದ್ದೆ
ಅಂತಃಪುರದ ತುಂಬಾ ಸೀತೆಗೂ
ಮಿಗಿಲು ಸುಂದರಿಯರು ಇದ್ದರಲ್ಲ
ಬೇಡವೆಂದನೇ
ಅವಳೊಬ್ಬಳನ್ನು ಬಿಡೆಂದು
ಗೋಗರೆದರೂ ಧಿಕ್ಕರಿಸಿದೆಯಲ್ಲ.
ಬೇಕಿತ್ತೆ ಅಗ್ನಿಗಿಂತ ಬೇರೆ ಸಾಕ್ಷಿ
ಕಾಡಾಡಿಯಾಗಿ ಮಾಡಿದೆಯಲ್ಲ
ತುಂಬು ಬಸುರಿಗೆ
ಅವನಿಯೇ ಗತಿಯಾಯ್ತಲ್ಲ
ಹೇಳಿ ಹೋಗಬಹುದಿತ್ತು ಮಧುರೆಗೆ
ನಾ ಬರುವುದರಲ್ಲೇ ಮತ್ತೆಂದೂ
ಸಿಗದಂತೆ ಹೊರಟೆಯಲ್ಲ
ಅಷ್ಟು ಅವಸರವಿತ್ತೇ
ಎದೆ ಮಿಡಿತಕೆ ಸದೆಬಡಿತವೇ
ಹೀಗೆ ಬರೆಯಲುಂಟು ನೂರಾರು
ಕಥೆಗಳು ಇತಿಹಾಸ ಚರಿತ್ರೆ
ಇಲ್ಲಿ ಮಾತ್ರವಲ್ಲ ಎಲ್ಲೆಲ್ಲೂ ಜಗದಗಲ ಮುಗಿಲಗಲ
ಮತ ಧರ್ಮ ಜಾತಿ ವರ್ಗ ವರ್ಣಗಳ ಭೇದವಿಲ್ಲದೆ
ಹೆಬ್ಬೆಟ್ಟಿನಡಿಯಲೇ ಇಟ್ಟು
ನಡೆದಿದೆ ನುಡಿ ಸಾಂತ್ವನ
ನಡೆ ಗೊಸುಂಬೆ ಅಯ್ಯೋ
ಮತ್ತೆ ನೀನಿವರ ಕೈಗೊಂಬೆ
ಅವರ ಮೇಲಿವರು
ಇವರ ಮೇಲವರು
ಎಡ ಬಲ ಮಧ್ಯದ
ಮುಖವಿಲ್ಲದ ಕೂಗುಮಾರಿಗಳು
ಭಾಷಣ ಭೂಷಣರು
ಇವರೇ ಅವರು ಅವರೇ ಇವರು
ಬಿಲ್ಲುಗಳ ಹೆಣೆಯುತ್ತಾರೆ
ಹಾರುವುದಿಲ್ಲ ಬಾಣ
ನುಡಿ ನೇವರಿಕೆಗೆ
ತಣಿವುದೇ ಬಾಯಾರಿಕೆ
ನೀನಿಲ್ಲದೆ ಅವರಿಲ್ಲ
ಎಂಬರಿವಿದ್ದರೂ
ಅರಿವುಗೆಟ್ಟ ಅರಿಗಳು
ಮಂಗಮಾಡುವ ನರಿಗಳು
ಮತಕಾಗಿ ಹಾರಿಸುವ ಹುಸಿ
ಮತಾಪುಕೋರರು
ಹುಡುಗಿ
ನೀನಿನ್ನು ಇರಬಾರದು ಸುಮ್ಮನೆ
ಬಯಲಿಗೆಳೆದು ಬಿಮ್ಮನೆ
ಕಳಚಿ ಮುಖವಾಡಗಳ
ಪೂತ್ಕರಿಸಿ ಈ ಬೇಮಾನರ
ಪಡೆ ಕಟ್ಟಿ ಪಡೆ ನಿನ್ನ ಪಾಲು
ಹೆಡೆ ಬಿಚ್ಚಿ ಹೊಡೆ
ಇಲ್ಲವಾದರೆ ಏಳಲ್ಲ
ಎಪ್ಪತ್ತು ದಶಕವಾದರೂ
ನಿನಗಿಷ್ಟೂ ಕೂಳು ಸಿಕ್ಕುವುದಿಲ್ಲ.
ಬೆಂಶ್ರೀ ರವೀಂದ್ರ



