ಕಾವ್ಯ ಸಂಗಾತಿ
ನಾಗೊಂಡಹಳ್ಳಿ ಸುನಿಲ್
“ಯುದ್ಧಕ್ಕೆ ಗೆದ್ದಲು ಹಿಡಿಯಲಿ”


ಯುದ್ಧಕ್ಕೆ ಗೆದ್ದಲು ಹಿಡಿಯಲಿ
ಸೋಲು ಗೆಲುವುಗಳಿಗೆ
ಅಧಿಕಾರದ ಗದ್ದುಗೆಯ ಗದ್ದಲಗಳಿಗೆ
ಗೆದ್ದಲು ಹಿಡಿಯಲಿ
ಬುದ್ಧನನ್ನು ಮರೆತ ಈ ಯುದ್ಧಗಳಿಗೆ
ಪಾಪ ಪ್ರಜ್ಞೆ ಕಾಡುತಿರಲಿ
ಚಿಗುರುವ ಎಲೆಗಳ ಮೇಲೆ
ರಕ್ತದ ಹನಿ ತೊಟ್ಟಿಕ್ಕುತ್ತಿದೆ
ತೊಟ್ಟಿಲ ಕಂದಮ್ಮಗಳಿಗೂ
ಸಾವಿನ ಬಾಗಿಲು ತಟ್ಟುತ್ತಿದೆ
ನರಳಾಡುವ ಜೀವಗಳ ಮೇಲೆ
ವಿಜಯ ಪತಾಕೆ ನಗುತ್ತಿರುವಾಗ
ಗೆದ್ದವರ ಸಂಭ್ರಮದ ಕಣ್ಣುಗಳಲ್ಲಿ
ಸೋತು ಸತ್ತವರ ಶಾಪಗಳೇ ಕಾಣುತ್ತಿವೆ
ರೆಕ್ಕೆಯಿಲ್ಲದ ಹಕ್ಕಿಗಳು
ಕರುಗಳಿಲ್ಲದ ಗೋವುಗಳು
ರೆಂಬೆಗಳಿಲ್ಲದ ಮರಗಳು
ಇದೀಗ ಅಲ್ಲಿ ಎಲ್ಲವೂ
ಬೋಳು ಬೋಳಾಗಿ ಕಾಣಿಸಿಕೊಳ್ಳುತ್ತಿವೆ
ಹಸಿಗಾಯದ ನೋವಿನ ಊರಲ್ಲಿ
ಬೆಂಕಿಯ ಮಳೆ ಸುರಿಯುತ್ತಿದೆ
ಬಂದೂಕು ಬಾಂಬುಗಳ ಹೃದಯಗಳಿಗೆ
ಪ್ರೇಮದ ಕಾಯಿಲೆ ಅಂಟಲಿ
ಆತ್ಮವಿಲ್ಲದ ರಕ್ಕಸರಿಗೆ
ರಕ್ತದ ದಾಹ ಕೊನೆಗೊಳ್ಳಲಿ




Superb