ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಲಂಕಾರದ ಮೂರ್ತಿಯಲ್ಲ ನೀನು
ಕರಗುವ ಕರ್ಪೂರದ ಗೊಂಬೆಯೂ ಅಲ್ಲ……
ಭೋಗದ ವಸ್ತು ಅಲ್ಲ ನೀನು
ಭೋರ್ಗರೆಯುವ ಭಾವನೆಗಳ
ಮಹಪೂರವೇ ನೀನು…..

ಅಬಲೆಯೆಂದು ನಿಟ್ಟುಸಿರು
ಬಿಡದಿರು ಓ ನನ್ನ ಗೆಳತಿ…
ಭವಿಷ್ಯದ ಬೇರಿನ ಗಿಡಗಳಿಗೆ
ನೀರೇರೆದು ಬೆಳೆಸುವ ಭೂಮಿಕೆಯೇ
ನೀನು…..

ಮೌನದ ಎಲೆಗಳ ಮೇಲೆ
ಮಾತನ್ನು ಉಣಬಡಿಸಿದವಳು ನೀನು……
ಯಾರಿಗೂ ಭಾರವಲ್ಲ ಹೆಣ್ಣು
ಜೀವರಾಶಿಯ ಕನಸುಗಳ ಹೊತ್ತು
ಬೆಳೆಸುವ ಆ ದೇಗುಲದ
ಹೊನ್ನ ಕಳಸವೇ ನೀನು…..

ಅಳುವ ಸಾಗರದಲ್ಲೂ
ನಗುವ ಬೀರಿದವಳು ನೀನು…
ಪ್ರತಿಫಲ ಬಯಸದ
ಓ ಹೆಣ್ಣು ಜೀವವೇ…
ಗರ್ಭ ಗುಡಿಯಲ್ಲಿ ಕುಳಿತು
ಭಾನೆತ್ತರದ ತೇರಾದವಳು ನೀನು…..

ಮಮತೆಗೆ ಬರವಿಲ್ಲ
ನಿಷ್ಕಲ್ಮಶ ಪ್ರೀತಿಗೆ ಬೆಲೆ ಕಟ್ಟುವವರಿಲ್ಲ…
ಮಾತೃತ್ವದ ಒಡಲಿಗೆ ಸರಿಸಮಾನರಾರಿಲ್ಲ….
ನಿನ್ನಂತರಾಳದ ಕಡಲ ತಲುಪಿದವರಾರಿಲ್ಲ……

ಪ್ರಕೃತಿಯ ಪ್ರತಿಬಿಂಬದ ಹೊನಲು
ಮಹಿಳೆ ನೀನು ಮಹೋನ್ನತ ಮಮತೆಯ ಮಂದಾರದ ಕಡಲು……

—————————————–

About The Author

1 thought on “ಅಕ್ಷತಾ ಜಗದೀಶ ಕವಿತೆ-ಭೂಮಿಕೆ”

Leave a Reply

You cannot copy content of this page

Scroll to Top