ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಗಜೇಶ ಮಸಣಯ್ಯ ಗಜೇಶ ಮಸಣಯ್ಯನವರ ವಚನಗಳು ಶರಣಸತಿ ಲಿಂಗಪತಿ ಭಾವ, ಷಟ್ಸ್ಥಲ ಸಿದ್ಧಾಂತ ಮತ್ತು ಆತ್ಮಜ್ಞಾನದ ಆಳವಾದ ತಿಳುವಳಿಕೆಯನ್ನು ಒಳಗೊಂಡಿವೆ. ಬಸವಣ್ಣನವರ ಕೀರ್ತಿಯನ್ನು ಕೇಳಿ ಇವರು ತಮ್ಮ ಮಡದಿಯೊಂದಿಗೆ ಕಲ್ಯಾಣಕ್ಕೆ ಬಂದು ಅನುಭವ ಮಂಟಪದ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇವರು ಅಕ್ಕಲಕೋಟೆ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಜನಿಸಿದರು. ಒಬ್ಬಶ್ರೇಷ್ಠಅನುಭಾವಿ ಚಿಂತಕ ಬಸವಕಾಲಿನಶರಣರು. ಕಾಲ – ಹನ್ನೆರಡನೆಯ ಶತಮಾನಒಟ್ಟು ವಚನಗಳು 70 ಜನ್ಮ ಸ್ಥಳ ಇವರು ಅಕ್ಕಲಕೋಟೆ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಜನಿಸಿದರು.ಅಂಕಿತ -ಮಹಾಲಿಂಗ ಗಜೇಶ್ವರ”. ಮಡದಿ -ಗಜೇಶ ಮಸಣಮ್ಮಐಕ್ಯ ಸ್ಥಳ – ಕಲ್ಯಾಣ ಕ್ರಾಂತಿಯ ನಂತರದಲ್ಲಿ ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಮನಹಳ್ಳಿ ಗ್ರಾಮದಲ್ಲಿದ್ದು ಕೊನೆಗೆ ಅಲ್ಲಿಯೇ ಐಕ್ಯರಾದರೆಂದು ಕೆಲವರು ಹೇಳಿದರೆ, ಅಕ್ಕಲಕೋಟೆಯ ಕರ್ಜಗಿ ಗ್ರಾಮದಲ್ಲಿ ಐಕ್ಯರಾದರೆಂದು ತಿಳಿದು ಬರುತ್ತದೆ. 12 ನೇ ಶತಮಾನದ ಅಪ್ರಸಿದ್ದ ವಚನಕಾರ, ಅಕಲಕೋಟೆ ತಾಲ್ಲೋಕಿನ ಕರಜಗಿ ಗ್ರಾಮದ ನಿವಾಸಿ. ಬಸವಾದಿ ಶರಣರ ಸಮಕಾಲೀನ. ಈತನ ಪತ್ನಿಯ ಹೆಸರು ಏನೆಂದು ತಿಳಿಯುವುದಿಲ್ಲವಾದರೂ ಆಕೆಯೂ ವಚನಕಾರ್ತಿಯಾಗಿರುವುದನ್ನು ಗಮನಿಸಬಹುದಾಗಿದೆ. ಇಂತಹ ಒಂದೆರಡು ಪ್ರಸಂಗಗಳು ವಚನ ಸಾಹಿತ್ಯಯುಗದಲ್ಲಿ ದಾಖಲಾಗಿವೆ. ಅವೆಲ್ಲವೂ ಷಟ್ಸ್ಥಲಸಿದ್ದಾಂತದ ವಿವರಗಳನ್ನು, ಆತ್ಮಜ್ಞಾನದ ತಿಳುವಳಿಕೆಯನ್ನು ಒಳಗೊಂಡಿವೆ. ಇವರ ವಚನಗಳ ಅಂಕಿತ “ಮಹಾಲಿಂಗ ಗಜೇಶ್ವರ”. ಹೊಸ ಮದುವೆ ಹಸೆ ಉಡುಗದ ಮುನ್ನಹೂಸಿದರಿಶಿನ ಬಿಸಿಲಿಂಗೆ ಹರಿಯದ ಮುನ್ನನೀರ ತಾಳ್ಮೆ ಹರಿಯದ ಮುನ್ನತನು ಸಂಚಳವಾಗಿ, ಮನ ಗುರುಕಾರುಣ್ಯವ ಪಡೆದುಹುಸಿ ಇಲ್ಲದಿದ್ದಡೆ ಭಕ್ತನೆಂಬೆಪಿಡಿಯಲಿಲ್ಲದಿದ್ದಡೆ ಮಾಹೇಶ್ವರನೆಂಬೆತನುವಿಲ್ಲದಿದ್ದಡೆ ಪ್ರಸಾದಿ ಎಂಬೆಭೇಧವಿಲ್ಲದಿದ್ದಡೆ ಪ್ರಾಣಲಿಂಗಿ ಎಂಬೆಆಸೆ ಇಲ್ಲದಿದ್ದಡೆ ಶರಣನೆಂಬೆಐವರ ಸಂಪರ್ಕ ಭೋಗವಾ[ಗ]ದಡೆ ಐಕ್ಯನೆಂಬೆಐಕ್ಯದ ಸಂತೋಷ ಹಿಂಗಿದಡೆ ಜ್ಯೋತಿರ್ಮಯವೆಂಬೆಇಂತಾಗಬೇಕೆಂಬ ಮನದ ದೇಹಇರಿದಡರಿಯದು, ಸ್ತುತಿಸಿದಡರಿಯದುಸುಖವನರಿಯದು, ದುಃಖವನರಿಯದುಈ ಚತಿರ್ವಿಧ ತಾಗು ನಿರೋಧವನರಿಯದಿರ್ದಡೆಅದೇ ಮಹಾಲಿಂಗ ಗಜೇಶ್ವರನೆಂಬೆ ಎನ್ನ ಕರಸ್ಥಲವೇ ಬಸವಣ್ಣನಯ್ಯಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯಎನ್ನ ಭಾವ ಸ್ಥಲವೇಪ್ರಭುದೇವರಯ್ಯ,ಇಂತೆನ್ನ ಕರ ಮನ ಭಾವಂಗಳಲ್ಲಿ ಇಷ್ಟ ಪ್ರಾಣ ಭಾವಂಗಳು ತಳ್ಳಿಯವಾಗಿ ಮಹಾಲಿಂಗ ಗಜೇಶ್ವರನಿಮ್ಮ ಶರಣರ ಘನವನುಎನ್ನ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾಗಿರ್ದೆನು. ಗಜೇಶ ಮಸಣಯ್ಯ -ವಚನ ಸಂಖ್ಯೆ 213 ಪುಟ 78 ಸಂಪುಟ 7ಇದು ಮಹಾ ಅನುಭವಿ ಗಜೇಶ ಮಸಣಯ್ಯನವರ ಅಪರೂಪದ ವಚನವಾಗಿದೆ. ಇಷ್ಟಲಿಂಗ ಪ್ರಾಣ ಲಿಂಗ ಭಾವಲಿಂಗಗಳು ತನ್ನ ಬದುಕಿನಲ್ಲಿ ಹೇಗೆ ಅಳವಡಿಸಿಕೊಂಡನು ಮಸಣಯ್ಯ ಎಂದು ಸುಂದರವಾಗಿ ಸಾದರಪಡಿಸಿದ್ದಾನೆ .ಎನ್ನ ಕರಸ್ಥಲವೇ ಬಸವಣ್ಣನಯ್ಯ———————————-ಗುರು ಲಿಂಗ ಜಂಗಮ – ಉಪಾದಿತವಲ್ಲ ಅವು ತತ್ವಗುಣಗಳು .ಶರೀರದಲ್ಲಿಯೇ ಇರುವ ಗುರು ಲಿಂಗ ಜಂಗಮ ತತ್ವವವನ್ನು ವಿಸ್ತಾರಗೊಳಿಸಿ ಆಚರಿಸುವ ಸಲುವಾಗಿ, ಸುಲಭ ಸಾಧನವೆಂಬ ಇಷ್ಟಲಿಂಗ (ಕುರುಹು) ವನ್ನು ಪರಿಕಲ್ಪಿಸಿಕೊಟ್ಟು, ಸಮಸ್ತ ಜನವರ್ಗವನ್ನು ಪಾವನ ಮಾಡಿದವನು ಬಸವಣ್ಣ.ಕರಸ್ಥಲಕ್ಕೆ ಪರಂಜ್ಯೋತಿಯ ಕುರುಹು ತಂದಿಟ್ಟ ಕರಣ ಬಸವಣ್ಣ ತನ್ನ ಕರಸ್ಥಲದಲ್ಲಿದ್ದನಯ್ಯ ಬಸವಣ್ಣನು ಎಂದಿದ್ದಾನೆ ಗಜೇಶ ಮಸಣಯ್ಯ . ಇದನ್ನು ಚಾಮರಸನು ಅತ್ಯಂತ ಸುಂದರವಾಗಿ ಹೀಗೆ ಹೇಳಿದ್ದಾನೆ. ಕಾಯದೊಳು ಗುರು ಲಿಂಗ ಜಂಗಮದಾಯತವನರಿಯಲ್ಕೆ ಸುಲಭೋಪಾಯದಿಂದಿದಿರಿಟ್ಟು ಬಾಹ್ಯಸ್ಥಲಕೆ ಕುರುಹಾಗಿ |ದಾಯದೋರಿ ಸಮಸ್ತ ಭಕ್ತ ನಿಕಾಯವನು ಪಾವನವ ಮಾಡಿದರಾಯ ಪೂರ್ವಾಚಾರ್ಯ ಸಂಗನಬಸವ ಶರಣಾರ್ಥಿ|| ಚಾಮರಸ ( ಪ್ರಭು ಲಿಂಗ ಲೀಲೆ ) ಗಜೇಶ ಮಸಣಯ್ಯನವರು ಬಸವಣ್ಣ ತನ್ನ ಕರಸ್ಥಲದ ಚೇತನ ಕಾರಸ್ತಹದಲ್ಲಿ ಇಂಬುಗೊಂಡ ಲಿಂಗದ ಜನಕ ಎಂತಲೂ ಹೇಳಿದ್ದಾನೆ. ಕರಸ್ಥದಲ್ಲಿರುವ ಲಿಂಗವು ಜಂಗಮ ಸಮಾಜ ಎಂತಾದರೆ ಮಸಣಯ್ಯನವರಿಗೆ ಅದು ಬಸವಣ್ಣ ಮಾತ್ರ.ಕರಸ್ಥಲದಿಂದ ಕಾಯಕ ಮಾಡಿ ದಾಸೋಹ ಮಾಡುವ ತತ್ವವ ನೀಡಿದ ಬಸವಣ್ಣ ತನ್ನ ನಿಜದ ಅರಿವಿನ ಗುರು ಎಂದಿದ್ದಾನೆ. ಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯ————————————–ಕರವು ಬಸವಣ್ಣನವರು ನೀಡಿದ ಇಷ್ಟಲಿಂಗದಿಂದ ಚುಳುಕಾಗಿ ಜಂಗಮ ಜ್ಞಾನಕ್ಕೆ ಕಾಲಿಡುವಾಗ ಮುಂದಿನ ಅಂತರಂಗದ ವಿಕಸತನದಲ್ಲಿ ಚೆನ್ನ ಬಸವಣ್ಣ ಮನದ ಮೂರುತಿಯಾಗುತ್ತಾರೆ.ಮಾನಸಿಕವಾಗಿ ಬೌದ್ಧಿಕವಾಗಿ ಬಾಹ್ಯ ಶರೀರದಿಂದ ಆತ್ಮದ ಒಳಗೆ ಪ್ರವೇಶ ಮಾಡುವಾಗ ಚೆನ್ನ ಬಸವಣ್ಣನವರ ಷಟಸ್ಥಲ ಕರಣ ಹಸಿಗೆ ಕೊಡುಗೆ ಅಪಾರವಾಗಿದೆ..ಹೀಗಾಗಿ ಚೆನ್ನ ಬಸವಣ್ಣನವರ ಅನುಭವ ತಮ್ಮ ಪ್ರಾಣಲಿಂಗವಾಯಿತ್ತು ಎಂದು ಇಷ್ಟಲಿಂಗವೆಂಬ ಸ್ಥಾವರ ಭಾವವನ್ನು ತೊರೆದು ಚೆನ್ನಬಸವಣ್ಣನವರ ಅನುಭವವೇ ಮೌಲ್ಯ ಅವುಗಳೇ ತಮಗೆ ಪ್ರಾಣಲಿಂಗವಾಗಿಸಲು ಅಂತರಂಗದ ಆತ್ಮ ವಿಮರ್ಶೆ ಆತ್ಮಾವಲೋಕನ ಅಗತ್ಯವಾಗಿದೆ ಎಂದಿದ್ದಾರೆ ಮಸಣಯ್ಯನವರು. ಎನ್ನ ಭಾವಸ್ಥಲವೇ ಪ್ರಭುದೇವರಯ್ಯ,———————————–ಇಷ್ಟಲಿಂಗ ಬಸವಣ್ಣ ಪ್ರಾಣಲಿಂಗಚೆನ್ನಬಸವಣ್ಣನವರ ಜ್ಞಾನ ಪಡೆದ ಶರಣನು ಅಲ್ಲಮ ಪ್ರಭುದೇವರ ಉದಾತ್ತೀಕರಣ . ನಿರ್ದೇಹಿ ತತ್ವ ಶರಣ ಸಂಕುಲಕ್ಕೆ ಆಕರ್ಷಣೆ ಮತ್ತು ಅನುಕರಣೀಯವಾಗಿದೆ.ಅಲ್ಲಮರ ಅನುಭಾವವು ಚಿಂತನೆಗಳು ಜಗತ್ತಿನ ಇಂದಿಗೂ ಆದರಣೀಯವಾದ ಮೌಲ್ಯಗಳು . ಇಷ್ಟಲಿಂಗವೆಂಬುದು ಅರಿವಿನ ಕುರು ಇಷ್ಟಲಿಂಗವು ಯೋಗ ಸಾಧನವು. ಅದನ್ನು ಮನದಲ್ಲಿರಿಸಿಕೊಂಡು ಪ್ರಾಣಜೀವಕ್ಕೆ ಸಂಚಯಿಸುವುದು ಪ್ರಾಣಲಿಂಗವು ಅದು ಚೆನ್ನಬಸವಣ್ಣನವರಜ್ಞಾನ ಮತ್ತು ಅನುಭವವು. ಪ್ರಾಣಮಯ ಮಾಡಿದ ಲಿಂಗ ಜ್ಞಾನವು ಭಾವಲಿಂಗವಾಗಿ ಸೃಷ್ಟಿ ಸ್ಥಿತಿ ಲಯಗಳ ಮಧ್ಯೆ ಪಂಚ ಮಹಾಭೂತಗಳ ಚೇಷ್ಟೆ ಕಾರ್ಯಗಳನ್ನು ಪಂಚೇಂದ್ರಿಗಳ ಮೂಲಕ ಅನುಭವಿಸುವ ಭಾವ ಲಿಂಗವೇ ಅಲ್ಲಮ ಪ್ರಭುಗಳು ಎಂದೆನ್ನುತ್ತಾರೆ ಮಸಣಯ್ಯನವರು. ಇಂತೆನ್ನ ಕರ ಮನ ಭಾವಂಗಳಲ್ಲಿ ಇಷ್ಟ ಪ್ರಾಣ ಭಾವಂಗಳು ತಳ್ಳಿಯವಾಗಿ——————————————————————————ಈ ರೀತಿಯಾಗಿ ಇಷ್ಟ ಲಿಂಗ ಪ್ರಾಣಲಿಂಗ ಭಾವಲಿಂಗವು ತನ್ನ ಕಾಯದೊಳು ಕೂಡಿಕೊಂಡು ತನ್ನ ಶರೀರವನ್ನುಪ್ರಾಣವನ್ನು ಮನವನ್ನು ಭಾವವನ್ನು ಶುದ್ಧ ಮಾಡುವ ಪರಿ ಅದ್ಭುತವಾಗಿದೆ . ಇಷ್ಟ ಪ್ರಾಣ ಭಾವ ಲಿಂಗವೆನ್ನುವುದು ಒಂದು ಮುಹೂರ್ತ ಸ್ವರೂಪ . ಭಕ್ತನ ಆಧ್ಯಾತ್ಮಿಕ ವಿಕಸನದ ಒಳ ಪಯಣ .ಬಾಹ್ಯವಾಗಿ ಬದುಕಲುಅಣಿಯಾಗುವ ಉಪಕ್ರಮ ಮಾತ್ರ . ಇದೆ ಕಾರಣಕ್ಕೆ ಬಸವಣ್ಣನವರು ಇದೆ ಅಂತರಂಗದ ಶುದ್ಧಿ ಇದೆ ಬಹಿರಂಗದ ಶುದ್ಧಿ ಎಂದಿದ್ದಾರೆ.ಒಳಗಿನ ಶುಚಿತ್ವವು ಹೊರಗಿನ ಸುಂದರತೆಗೆ ತತ್ವ ನಿಷ್ಠೆಗೆ ಕಾರಣವಾಗುತ್ತದೆ. ಶರಣ ಸಂಸ್ಕೃತಿಗೆ ಬಸವಣ್ಣ ಚೆನ್ನ ಬಸವಣ್ಣ ಮತ್ತು ಅಲ್ಲಮಪ್ರಭುಗಳ ಅನುಭಾವ ಅನುಪಮವಾದದ್ದು ಎಂದು ಮಸಣಯ್ಯ ಶರಣ ಅವರನ್ನು ನೆನೆದಿದ್ದಾನೆ. ಮಹಾಲಿಂಗ ಗಜೇಶ್ವರ ನಿಮ್ಮ ಶರಣರ ಘನವನು ಎನ್ನ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾಗಿರ್ದೆನು.————————————————————————————————–ಶರಣರ ಆಧ್ಯಾತ್ಮಿಕ ಸಾಧನೆಯಲ್ಲಿ ಅಲ್ಲಮ ಬಸವಣ್ಣ ಸಿದ್ಧರಾಮ ಅಕ್ಕಮಹಾದೇವಿ ಚೆನ್ನ ಬಸವಣ್ಣ ಮಡಿವಾಳ ಮಾಚಿದೇವ ಕಕ್ಕಯ್ಯ ಹೀಗೆ ಸಾವಿರಾರು ಶರಣರುತಮ್ಮ ಅನುಭಗಳ ನಿಜದ ನಿಲುವುಗಳನ್ನು ಅನುಭವ ಮಂಟಪದಲ್ಲಿ ನಿರಂತರವಾಗಿ ಪ್ರಕಟಗೊಳಿಸಿ ಶರಣಾತ ತತ್ವಗಳನ್ನು ಇನ್ನಷ್ಟು ಬಲಗೊಳಿಸಿದ್ದಾರೆ.ಆ ಕಾರಣ ತನ್ನ ಚೈತನ್ಯದ ಕುರುಹು ಮಹಾಲಿಂಗ ಗಜೇಶ್ವರ ಎಂಬುದಾಗಿ ಆತ್ಮ ನಿವೇದನೆ ಮಾಡಿಕೊಳ್ಳುತ್ತಾ ಗಜೇಶ ಮಸಣಯ್ಯನವರು ಪ್ರತಿ ಸಾಧಕರ ಶರಣರ ಘನವಾದ ನಿಲುವುಗಳನ್ನು ತಮ್ಮ ಅಂಗ ಗುಣ ಕಾಯದಲ್ಲಿ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾದೆನು ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ.ಇಷ್ಟಲಿಂಗ ಸಾಧಕನ ಗಟ್ಟಿ ಮುಟ್ಟದ ಸಂಕೇತ ಅರಿವಿನ ಕುರುಹು ಅದನ್ನು ಕೊಟ್ಟ ಬಸವಣ್ಣ ಸಮಗ್ರ ಪಯಣದ ಚಿಂತನೆಗಳ ಆರಂಭಿಕ ಸೂತ್ರಧಾರ . ಇಷ್ಟಲಿಂಗವು ನಿತ್ಯ ಯೋಗಕ್ಕೆ ಸಾಧನ ಹಾಗು ಬಹು ಮುಖ್ಯ ಸಾಧನೆಯ ಮೆಟ್ಟಿಲು. ಇಷ್ಟಲಿಂಗದ ಯೋಗದೊಳು ಹೊಕ್ಕು ನಿರಂತರವಾಗಿ ವಿಕಸಿತವಾಗಿ ಅವುಗಳನ್ನು ಪ್ರಾಣದಲ್ಲಿ ಪ್ರತಿಷ್ಠಾಪನೆ ಮಾಡಿದಲ್ಲಿ ಅಲ್ಲಿ ಪ್ರಾಣವು ಆನಂದಕರ ಭಾವವನ್ನು ಹೊಂದುತ್ತದೆ ಅದು ಮುಂದೆ ಭಾವಕ್ಕೆ ತಲುಪಿ ಮನವು ಪ್ರಸನ್ನ ಭಾವವಾಗುತ್ತದೆ. ಅದುವೇ ಕಾಯ ಪ್ರಸಾದ ಗುಣವಾಗುವ ಸಿದ್ಧಿಯೋಗ. ಬಸವಣ್ಣ ಸ್ಥೂಲ ಚೆನ್ನಬಸವಣ್ಣ ಸೂಕ್ಷ್ಮ ಮತ್ತು ಅಲ್ಲಮ ಪ್ರಭುಗಳು ಕಾರಣ ಶರೀರಕ್ಕೆ ಪ್ರತಿನಿಧಿಗಳಾಗುತ್ತಾರೆ.ಇದನ್ನು ಭಕ್ತನು ನಿತ್ಯ ನಿರಂತರವಾಗಿ ಕೈಗೊಂಡಾಗ ಮಾತ್ರ ಅನಂತಹ ಎತ್ತರದ ನಿಲುವನ್ನು ಕಾಣಲುಸಾದ್ಯ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಅಂಕಣ ಸಂಗಾತಿ ಶರಂದ್ರ ತಳ್ಳಿ ಕುಪ್ಪಿಗುಡ್ಡ ಗಾದೆಗಳ ಗಣಿ ಗುಬ್ಬಿ ಮ್ಯಾಲೆ ಬ್ರಹ್ಮಾಸ್ತ್ರವೆ, ತಬ್ಬಲಿ ಮ್ಯಾಲೆ ಹಾರಾಟವೆ? *ಗುಬ್ಬಿ ಮ್ಯಾಲೆ ಬ್ರಹ್ಮಾಸ್ತ್ರವೆ, ತಬ್ಬಲಿ ಮ್ಯಾಲೆ ಹಾರಾಟವೆ?* — ಈ ಮೇಲಿನ ಮಾತು ಸಮಾಜದಲ್ಲಿ ಕಾಣಸಿಗುವ ಅಸಮಾನತೆ, ಶಕ್ತಿ ಪ್ರದರ್ಶನ ಮತ್ತು ದುರ್ಬಲರ ಮೇಲಿನ ದೌರ್ಜನ್ಯವನ್ನು ಅತ್ಯಂತ ಮಾರ್ಮಿಕವಾಗಿ ಖಂಡಿಸುತ್ತದೆ. ತೀರಾ ಕಡುಬಡವರು ಅಥವಾ ಕಾರ್ಮಿಕರಿಗೆ ನಿಜಕ್ಕೂ ವಾಕ್ ಸ್ವಾತಂತ್ರ್ಯವಿಲ್ಲ.ಅವರ ಮನಸ್ಸಿನಲ್ಲಿರುವ ಮಾತುಗಳನ್ನು ಯಥಾವತ್ತಾಗಿ ಹೇಳಬಯಸಿದ್ದನ್ನು ಹೇಳಲಾಗುವುದಿಲ್ಲ.ನಮ್ಮೆದುರಿಗಿರುವ ಬಾಸ್,ಧಣಿ,ಅಧಿಕಾರಿಗಳು ಇರುವ ಕಡೆಗೆ ನೋಡಿ ಅಂಜಿಕೆ,ಅಳುಕುವಿನಿಂದ ನಮ್ಮ ಅಗತ್ಯಕ್ಕೆ ತಕ್ಕಂತೆ,ಅನುಗುಣವಾಗಿ, ಪರಿಸ್ಥಿತಿಗೆ ತಲೆಬಾಗಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಮೃದುವಾದ ಭಾವನೆಯಿಂದ ಸಂಕೋಚದಿಂದಲೆ ಮಾತಾಡುತ್ತೇವೆ.ಅಧಿಕಾರ ಪಡೆದವರು ಕೆಳವರ್ಗದವರನ್ನು ನಿಂದಿಸಬೇಕಾದರೆ ಪ್ರಾಣಿಗಳಿಗೆ ಹೋಲಿಸಿ ಬಯ್ಯುತ್ತಿರುತ್ತಾರೆ.ಯಾವ ವಿಷಯದಲ್ಲಿಯೂ ತಳಮಟ್ಟದ ಕೆಲಸಗಾರರಿಗೆ ಇತಿಮಿತಿ ಇಲ್ಲ.ಹೌದು! ಕೆಳಮಟ್ಟದ ಕಾರ್ಮಿಕರಿಗೆ ಇರುವ ವಿಚಾರ ಶಕ್ತಿ, ಆಳುವ ವರ್ಗದವರಿಗೆ, ಅಧಿಕಾರಿಗಳಿಗೆ ಇರುವುದಿಲ್ಲ.ಪ್ರಾಣಿಗಳಿಗಿಂತಲೂ ದುಡಿಯುವ ಮನಸ್ಸುಗಳ ಜೀವನ ಉನ್ನತವಾಗಿದೆಯೆ?ಏನೋ! ಅದೆಷ್ಟೋ ಸಂದರ್ಭಗಳಲ್ಲಿ ಪ್ರಾಣಿಗಳು ದುಡಿಯುವ ವರ್ಗದವರನ್ನು ನೋಡಿ ತಲೆ ಬಾಗಿಸುತ್ತವೆಯೋ ಏನೋ?ಕತ್ತಲು ಬೆಳಕಿಗೆ ಜನ್ಮ ನೀಡುತ್ತದೆ.ದುಡಿಯುವವರು ಯಾವತ್ತಿದ್ದರೂ ಕತ್ತಲು.ಅವರು ಮಾಡುವ ಕೆಲಸಗಳು ಮಾತ್ರ ಬೆಳಕು.ಮೈ ಮುರಿದು ದುಡಿಯುವ ಎಲ್ಲಾ ಜನಾಂಗದವರಿಗೆ ಅಲ್ಪ ಸ್ವಲ್ಪ ಜ್ಞಾನವಿರುತ್ತದೆ.ಬುದ್ಧಿವಂತಿಕೆಯೂ ಇರುತ್ತದೆ.ಕೆಲಸ ಕಾರ್ಯಗಳು ಯಾವುದೇ ಇರಲಿ.ಕೆಲವು ಪರಸ್ಥಿತಿಗಳ ಕಾರಣದಿಂದ ಒಂದೊಂದು ಸಲ ಕಾರ್ಮಿಕರು ಬ್ಯಾಲೆನ್ಸ್ ಕಳೆದುಕೊಳ್ಳಬಹುದು.ತಪ್ಪೂ ಸಹ ಮಾಡಬಹುದು.ಆದರೆ ಆದೇಶದ ಆವೇಶದಲ್ಲಿ ಅಧಿಕಾರಿಗಳು ಆಡಿದ ಮಾತುಗಳನ್ನು ಹಿಂತೆಗೆದುಕೊಳ್ಳಲಾಗುವುದಿಲ್ಲ ಈ ಮೇಲಿನ ಮಾತು ಸಾಧಾರಣವಲ್ಲ. ಗುಬ್ಬಚ್ಚಿ ಅತ್ಯಂತ ಸಣ್ಣ ಹಾಗೂ ನಿರಪರಾಧಿ ಹಕ್ಕಿ. ಅದನ್ನು ಕೊಲ್ಲಲು ಅಥವಾ ಹೆದರಿಸಲು ಬ್ರಹ್ಮಾಸ್ತ್ರದಂತಹ ಅತ್ಯಂತ ಶಕ್ತಿಶಾಲಿ ಹಾಗೂ ವಿನಾಶಕಾರಿ ಅಸ್ತ್ರವನ್ನು ಬಳಸುವ ಅವಶ್ಯಕತೆ ಇಲ್ಲ. ಸಣ್ಣ ಕಲ್ಲಿನಿಂದಲೇ ಅದನ್ನು ಓಡಿಸಬಹುದು. ಆದರೂ ಅದರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವುದು ಮೂರ್ಖತನ ಮತ್ತು ಅತಿಯಾದ ಅಹಂಕಾರದ ಸಂಕೇತ. ತಬ್ಬಲಿ ಎಂದರೆ ಯಾರು? ಏನೂ ಇಲ್ಲದ ಅಸಹಾಯಕ ಅಥವಾ ಬಡವ ,ನಿರ್ಗತಿಕ,ಅನಾಥ ಮಗು ಎನ್ನಬಹುದು. ಶಕ್ತಿಹೀನ, ರಕ್ಷಣೆಯಿಲ್ಲದ ಜೀವದ ಮುಂದೆ ತಮ್ಮ ಶಕ್ತಿ, ಅಧಿಕಾರ ಅಥವಾ ಶೌರ್ಯವನ್ನು ಪ್ರದರ್ಶಿಸುವುದು ಹೇಡಿತನವಾಗಿದೆ.ಅತಿಯಾದ ಶಕ್ತಿ ಪ್ರದರ್ಶನ ಮಾಡುವುದು ವ್ಯರ್ಥ. ತಮಗಿಂತ ತೀರಾ ಸಣ್ಣವರಾದ, ಅಸಹಾಯಕರಾದ ಜನರ ಮೇಲೆ ತಮ್ಮ ಇಡೀ ಅಧಿಕಾರ ಅಥವಾ ಬಲವನ್ನು ಬಳಸಿ ಜಿಗುಟುತನ ತೋರುವ ಜನರನ್ನು ಈ ಮೇಲಿನ ಮಾತು ಎಚ್ಚರಿಸುತ್ತದೆ. “ಇಷ್ಟೊಂದು ಸಣ್ಣ ವಿಷಯಕ್ಕೆ.,ಸಣ್ಣ ವ್ಯಕ್ತಿಗೆ., ಇಷ್ಟೊಂದು ದೊಡ್ಡ ರಾದ್ಧಾಂತ ಬೇಕೇ? ಎಂದು ಕೇಳಲು ಈ ಮಾತನ್ನು ಬಳಸಲಾಗುತ್ತದೆ.ನ್ಯಾಯ ಮತ್ತು ಮಾನವೀಯತೆಯ ಕೊರತೆಯಲ್ಲಿ ಕರಗುತ್ತದೆ .ಯಾಕೆಂದರೆ ಬಲಿಷ್ಠರು ಯಾವಾಗಲೂ ತಮ್ಮ ಸಮಾನರಾದವರ ಜೊತೆ ಹೋರಾಡಬೇಕೇ ಹೊರತು, ಧ್ವನಿಯಿಲ್ಲದ ಅಸಹಾಯಕರ ಮೇಲಲ್ಲ. ದುರ್ಬಲರನ್ನು ಮತ್ತಷ್ಟು ತುಳಿಯುವುದು ಶೌರ್ಯವಲ್ಲ, ಅದು ಕ್ರೌರ್ಯ ಎಂಬುದನ್ನು ಈ ಮಾತು ನೆನಪಿಸುತ್ತದೆ.ಪ್ರಸ್ತುತ ಸಂದರ್ಭಕ್ಕೆ ಅನ್ವಯವಾಗುವ ಗಾದೆ ಮಾತುಗಳುಇಂದಿನ ಸಮಾಜದಲ್ಲೂ ನೂರಕ್ಕೆ ನೂರು ನಿಜವಾಗುವುದು.ಕಛೇರಿಗಳಲ್ಲಿ ಮೇಲಧಿಕಾರಿಗಳು ಸಣ್ಣ ತಪ್ಪುಗಳಿಗಾಗಿ ಕೆಳಹಂತದ ನೌಕರರನ್ನು ಅತಿಯಾಗಿ ಶಿಕ್ಷಿಸಿದಾಗ,ರಾಜಕೀಯದಲ್ಲಿ ಸಾಮಾನ್ಯ ಜನರ ಮೇಲೆ ಕಾನೂನಿನ ಅಸ್ತ್ರಗಳನ್ನು ಅತಿಯಾಗಿ ಪ್ರಯೋಗಿಸಿದಾಗ,ಶ್ರೀಮಂತರು ಬಡವರನ್ನು ಹೆದರಿಸಿದಾಗ ಈ ಮಾತನ್ನು ಬಳಸಲಾಗುತ್ತದೆ.ಸಣ್ಣ ಮತ್ತು ಅಸಹಾಯಕ ಜೀವಿಗಳ ವಿರುದ್ಧ ಬಲಪ್ರದರ್ಶನ ಮಾಡುವುದು ವೀರನ ಲಕ್ಷಣವಲ್ಲ. ಶಕ್ತಿಯುಳ್ಳವರು ದುರ್ಬಲರನ್ನು ರಕ್ಷಿಸಬೇಕೇ ಹೊರತು, ಅವರ ಮೇಲೆ ಸವಾರಿ ಮಾಡಬಾರದು. *ಗುಬ್ಬಿ ಮ್ಯಾಲೆ ಬ್ರಹ್ಮಾಸ್ತ್ರವೆ, ತಬ್ಬಲಿ ಮ್ಯಾಲೆ ಹಾರಾಟವೆ?* ಎಂಬುದು ಕೇವಲ ಒಂದು ಮಾತಲ್ಲ, ಹೋಲಿಕೆಯಲ್ಲ; ಇದು ಮನುಷ್ಯನ ಅಹಂಕಾರ, ಅಧಿಕಾರದ ದುರ್ಬಳಕೆ ಮತ್ತು ಸಮಾಜದ ರಚನಾತ್ಮಕ ದೌರ್ಬಲ್ಯವನ್ನು ಅಗೆದು ತೋರಿಸುವ ಒಂದು ದಾರ್ಶನಿಕ ಸೂತ್ರವಾಗಿದೆ.ಶಕ್ತಿಯ ದುರಹಂಕಾರ ಮತ್ತು ವಿವೇಚನಾ ಶೂನ್ಯತೆಯಬ್ರಹ್ಮಾಸ್ತ್ರ ಎಂಬುದು ಇಡೀ ಜಗತ್ತನ್ನೇ ನಾಶಮಾಡಬಲ್ಲ ಅತ್ಯುನ್ನತ ದಿವ್ಯಾಸ್ತ್ರ. ಅದನ್ನು ಬಳಸಲು ತಪಸ್ಸು, ಅರ್ಹತೆ ಮತ್ತು ಅತ್ಯಂತ ಕಠಿಣವಾದ ಸಂದರ್ಭವಿರಬೇಕು. ಆದರೆ, ಎದುರಿಗಿರುವ ಶತ್ರು ಯಾರು? ಒಂದು ಪುಟ್ಟ ಗುಬ್ಬಚ್ಚಿ!ಇಲ್ಲಿ ‘ಗುಬ್ಬಿ’ ಮತ್ತು ‘ಬ್ರಹ್ಮಾಸ್ತ್ರ’ ಪರಸ್ಪರ ತದ್ವಿರುದ್ಧ ಧ್ರುವಗಳು. ಮನುಷ್ಯನಿಗೆ ಅತಿಯಾದ ಅಧಿಕಾರ ಅಥವಾ ಸಂಪತ್ತು ಸಿಕ್ಕಾಗ ಅವನಿಗೆ ವಿವೇಚನೆ ತಪ್ಪುತ್ತದೆ ಎಂಬುದನ್ನು ಇದು ತೋರಿಸುತ್ತದೆ.ಸಣ್ಣ ಸಮಸ್ಯೆಯನ್ನು ಪ್ರೀತಿ ಅಥವಾ ಸಮಾಧಾನದಿಂದ ಬಗೆಹರಿಸುವ ಬದಲು, ಅಹಂಕಾರದಿಂದ ದೊಡ್ಡ ರಾದ್ಧಾಂತ ಮಾಡಿಕೊಳ್ಳುವ ಮಾನಸಿಕತೆಯನ್ನು ಇದು ಎತ್ತಿ ತೋರಿಸುತ್ತದೆ. ನಿಜವಾದ ವೀರ ಅಥವಾ ಶಕ್ತಿವಂತ ತನ್ನ ಶಕ್ತಿಯನ್ನು ತನ್ನಷ್ಟೇ ಬಲಿಷ್ಠನಾದವನ ಎದುರು ಪ್ರದರ್ಶಿಸಬೇಕು. ಆದರೆ, ಸಮಾಜದಲ್ಲಿ ಅನೇಕರು ತಮಗಿಂತ ಮೇಲಿರುವವರ ಮುಂದೆ ಕೈಕಟ್ಟಿ ನಿಂತು, ತಮಗಿಂತ ಕೆಳಗಿರುವ ಅಥವಾ ಅಸಹಾಯಕರಾದ ತಬ್ಬಲಿಗಳ ಮೇಲೆ ತಮ್ಮ ಇಡೀ ಕೋಪ, ಅಧಿಕಾರವನ್ನು ಹರಿಸುತ್ತಾರೆ.ತಬ್ಬಲಿ ಮ್ಯಾಲೆ ಹಾರಾಟ ಚೀರಾಟ,ಕೂಗಾಟ,ಮಾಡುತ್ತಾ,ಶಕ್ತಿ ಇಲ್ಲದವರನ್ನು ನೋಡಿ ಆರ್ಭಟಿಸುವುದು.ಇದು ಶೌರ್ಯದ ಸಂಕೇತವಲ್ಲ, ಬದಲಿಗೆ ಇದು ಮನುಷ್ಯನ ಒಳಗಿರುವ ಹೇಡಿತನ. ಮತ್ತು ಕೀಳರಿಮೆಯನ್ನು ಮುಚ್ಚಿಕೊಳ್ಳಲು ಮಾಡುವ ಹತಾಶೆಯ ಪ್ರಯತ್ನವಾಗಿದೆ. ಸಾಮಾಜಿಕ ಮತ್ತು ರಾಜಕೀಯ ಆಯಾಮದ ಬುಡದಿಂದ ನೋಡಿದರೂ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತದೆ.ಕಾನೂನಿನ ದುರ್ಬಳಕೆಯಾಗುತ್ತದೆ. ದೊಡ್ಡ ದೊಡ್ಡ ಹಗರಣ ಮಾಡಿದವರು, ಕೋಟ್ಯಂತರ ರೂಪಾಯಿ ವಂಚಿಸಿದವರು ಕಾನೂನಿನ ಸಣ್ಣ ಸಣ್ಣ ಸರಕುಗಳನ್ನು ಬಳಸಿಕೊಂಡು ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ. ಆದರೆ, ಹೊಟ್ಟೆಪಾಡಿಗಾಗಿ ಸಣ್ಣ ತಪ್ಪು ಮಾಡಿದ ಬಡವನ ಮೇಲೆ ಇಡೀ ವ್ಯವಸ್ಥೆಯೇ ಮುಗಿಬೀಳುತ್ತದೆ. ಇದು ಬಡವನೆಂಬ ‘ಗುಬ್ಬಿ’ಯ ಮೇಲೆ ಕಾನೂನೆಂಬ ‘ಬ್ರಹ್ಮಾಸ್ತ್ರ’ ಪ್ರಯೋಗಿಸುವ ಜಗತ್ತಾಗಿದೆ.ಸಾವಿರಾರುಸಂಸ್ಥೆಗಳಲ್ಲಿ ಶೋಷಣೆಯಾಗುತ್ತವೆ. ಕಾರ್ಪೊರೇಟ್ ಜಗತ್ತಿನಲ್ಲಾಗಲಿ ಅಥವಾ ಸರ್ಕಾರಿ ಕಚೇರಿಗಳಲ್ಲಾಗಲಿ, ಮೇಲಧಿಕಾರಿಗಳು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಅಥವಾ ತಮ್ಮ ಅಹಂ ತೃಪ್ತಿಗಾಗಿ ಅತ್ಯಂತ ಕೆಳಮಟ್ಟದ ನೌಕರನನ್ನು ಬಲಿಪಶು ಮಾಡುತ್ತಾರೆ. ತಾತ್ವಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಿ ಅಧ್ಯಯನ ನಡೆಸಿದರೆ,ನಮ್ಮ ಜನಪದರು ಪ್ರಕೃತಿಯ ನಿಯಮವನ್ನು ಚೆನ್ನಾಗಿ ಅರಿತಿದ್ದರು. ಪ್ರಕೃತಿಯಲ್ಲಿ ಪ್ರತಿಯೊಂದು ಜೀವಕೂ ಬದುಕುವ ಹಕ್ಕಿದೆ.ಒಂದು ಜೀವಿಗೆ ಮತ್ತೊಂದು ಜೀವಿಯನ್ನು ನಾಶಮಾಡುವ ಶಕ್ತಿ ಇದೆ ಎಂದಮಾತ್ರಕ್ಕೆ ಅದನ್ನು ನಾಶಮಾಡುತ್ತಾ ಹೋಗುವುದು ಧರ್ಮವಲ್ಲ.”ಅಧಿಕಾರ ಮತ್ತು ಶಕ್ತಿ ಇರುವುದು ರಕ್ಷಿಸುವುದಕ್ಕಾಗಿಯೇ ಹೊರತು ಶಿಕ್ಷಿಸುವುದಕ್ಕಲ್ಲ” ಎಂಬುದು ಭಾರತೀಯ ಸಂಸ್ಕೃತಿಯ ಮೂಲ ತತ್ವವಾಗಿದೆ. ಬ್ರಹ್ಮಾಸ್ತ್ರವನ್ನು ಹೊಂದಿರುವವನಿಗೆ ಜಗತ್ತನ್ನು ರಕ್ಷಿಸುವ ಜವಾಬ್ದಾರಿಯೂ ಇರುತ್ತದೆ. ಅದನ್ನು ಬಿಟ್ಟು ಗುಬ್ಬಿಯ ಮೇಲೆ ಪ್ರಯೋಗಿಸಿದರೆ ಆ ಅಸ್ತ್ರಕ್ಕೂ ಅಪಚಾರ, ಅದನ್ನು ಬಳಸಿದವನಿಗೂ ಅಧಃಪತನ ಎಂಬುದು ಸತ್ಯ. ಜಾಗೃತಗೊಳಿಸುವ ಒಂದು ಪ್ರಶ್ನೆಯಿದೆ. ನಮಗೆ ಜೀವನದಲ್ಲಿ ಸ್ವಲ್ಪ ಅಧಿಕಾರ, ಹಣ ಅಥವಾ ಶಕ್ತಿ ಬಂದಾಗ ನಾವು ಅಹಂಕಾರದಿಂದ ಕುರುಡಾಗುತ್ತಿದ್ದೇವಾ? ನಮ್ಮ ಶಕ್ತಿಯನ್ನು ಧ್ವನಿಯಿಲ್ಲದವರನ್ನು ದಮನ ಮಾಡಲು ಬಳಸುತ್ತಿದ್ದೇವಾ? ಎಂದು ನಾವೇ ಆತ್ಮಾವಲೋಕನ ಮಾಡಿಕೊಳ್ಳಲು ಇದು ಪ್ರೇರೇಪಿಸುತ್ತದೆ. ಶಕ್ತಿವಂತನಾದವನು ‘ಸಂಹಾರಕ’ನಾಗಬಾರದು, ‘ಪಾಲಕ’ನಾಗಬೇಕು. ಎಂಬುದೇ ಈ ಗಾದೆ ಮಾತಿನ ಆಳವಾದ ಸಂದೇಶವಾಗಿದೆ. ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ಧಾರಾವಾಹಿ ಸಂಗಾತಿ-38 ಡಾ.ವಿಶ್ವನಾಥ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಗರ್ಭವತಿಯಾದಳುಭೂಗರ್ಭಸಂಜಾತೆಸೀತೆ ತಮ್ಮ ತಮ್ಮ ಪ್ರೀತಿಪಾತ್ರರನ್ನು ಕೂಡಬಯಸುವ, ಸೇರಿ ಆನಂದಿಸುವ, ಆನಂದವನ್ನು ವರ್ಧಿಸುವ ಬಯಕೆಗಳನ್ನು ಮನದಲ್ಲಿ ಒಗ್ಗೂಡಿಸುವ ವಸಂತಕಾಲವದು ಓಡಿಬಂತು ಇಳೆಯ ಬಳಿಗೆ. ಅದೇ ಸಮಯದಲ್ಲಿ ಬುವಿಸುತೆ ರಾಮಸತಿ ಸೀತೆ ಋತುಮತಿಯಾದಳು. ಮಲ್ಲಿಗೆಯಂತಹ ಶುಭ್ರ ನಗೆಯನ್ನು ಹೊಂದಿರುವ, ಚಿಗುರಿನಂತಹ ಅಧರದಿಂದ ಶೋಭಿಸುವ, ದುಂಬಿಯ ತೆರದ ಮುಂಗುರುಳಿನಿAದ ಚೆಲುವು ಪಡೆದ, ಗಿಳಿ- ಕೋಗಿಲೆಗಳ ಮೃದು ಮಧುರ ಧ್ವನಿಯನ್ನು ತನ್ನದಾಗಿಸಿಕೊಂಡ, ಹೂವಿನಂತಹ ಕಣ್ಣಿನಿಂದ ಅಂದ ಹೆಚ್ಚಿಸಿಕೊಂಡ, ಚಂದಿರಸದೃಶ ಮೊಗದವಳಾದ ಸೀತೆ ಸೊಬಗಿನಿಂದ ಮೆರುಗು ಪಡೆದಳು ಋತುಮತಿಯಾದ ಆ ಸಮಯದಲ್ಲಿ. ಮೈನೆರೆದ ಹೆಣ್ಣು ಪೂರೈಸಬೇಕಾದ ನೀತಿನಿಯಮಗಳಷ್ಟನ್ನೂ ಅಚ್ಚುಕಟ್ಟಾಗಿ ಸಹನೆಯಿಂದ ಪಾಲಿಸಿದಳು ಪೃಥ್ವಿಸುತೆ.ನಾಲ್ಕನೆಯ ದಿನ ವಿಶಿಷ್ಟ ಸ್ನಾನವನ್ನು ಮುಗಿಸಿದಳು. ಮಿಂದು ಶುಭ್ರಳಾಗಿ ನಿಂದು ಕುಂದಿಲ್ಲದ ಇಂದುವಿನAತೆ ಶೋಭಿಸುತ್ತಿದ್ದ ಸೀತೆ ಶ್ರೀರಾಮನ ಕಣ್ಣಿಗೆ ಹೊಸಬಗೆಯಲ್ಲಿ ಕಂಡಳು. ನಿಮಿಷದಲ್ಲಿಯೇ ಮೂರೂ ಲೋಕಗಳನ್ನು ಗೆಲ್ಲುವ ಉತ್ಸುಕತೆಯಲ್ಲಿ ಮನ್ಮಥ ಹರಿತಗೊಳಿಸಿಟ್ಟ ಆಯುಧದಂದದಿ ತೋರಿದಳು. ಕಳಂಕವನ್ನೆಲ್ಲಾ ಕಳೆದು ಆ ಮದನ ಇರಿಸಿದ ಸೌಂದರ್ಯಸಾರದAತೆ ಗೋಚರಿಸಿದಳು. ಕಾಮನ ಸಂಪೂರ್ಣ ಯಶಸ್ಸದು ಸಾಕಾರಗೊಂಡAತಹ ಅನುಭವವಾಯಿತು ಶ್ರೀರಾಮನಿಗೆ, ಪೂರ್ಣ ಪರಿಶುದ್ಧತೆಯಿಂದ ತನ್ನೆದುರು ನಿಂತ ಸೀತೆಯನ್ನು ನೋಡಿದಾಗ.ಮಂದಗಮನೆಯ ಮಂದಹಾಸವದು ಅವನಿಗೆ ಮುದ್ದಾಗಿ ತೋರಿತು. ಅಂದದ ಮುಖಾರವಿಂದದವಳ ಕುಂದಿಲ್ಲದ ಅಂಗಾAಗ ಸೌಂದರ್ಯ ಅವನಿಗೆ ಮುದ ನೀಡಿತು. ಚಂದನದ ಸುಗಂಧವನ್ನು ಬೀರುತ್ತಿದ್ದ ಅವಳ ಶರೀರ, ಚಂದ್ರನAತಿದ್ದ ಅವಳ ಮುಖ ಅವನ ಮನಸ್ಸನ್ನು ತಣಿಸಿತು. ಹಣೆಯಲ್ಲಿ ತಿಲಕವಿತ್ತು. ವದನದಲ್ಲಿ ಮಂದಸ್ಮಿತ. ಉಟ್ಟ ಉಡುಗೆಯದು ಮನೋಹರವಾಗಿತ್ತು. ಮೂರು ಸರಗಳನ್ನು ಧರಿಸಿದ್ದಳು. ನೀಳವಾದ ಕೇಶರಾಶಿ ಹೊಂದಿದವಳಾಗಿದ್ದಳು.ಮಹಾವಿಷ್ಣು ಸಾಗರದ ಮಧ್ಯೆ ಹಾವಿನ ಹಾಸಿಗೆಯ ಮೇಲೆ ಲಕ್ಷಿö್ಮಯ ಜೊತೆಗೆ ಭೋಗಿಸಿದ ರೀತಿಯಲ್ಲಿ ಅಯೋಧ್ಯಾಧಿಪತಿ ಶ್ರೀರಾಮಚಂದ್ರ ಸುಖವನ್ನು ಪಡೆಯತೊಡಗಿದ ಸೀತೆಯ ಜೊತೆಗೆ.ಎರಡು ದೇಹಗಳಾಗ, ಈಗ ಒಂದು. ಅವನು ಸಾಗರ, ಅವಳು ಬಿಂದು. ಅವನು ಸಾಸಿರ, ಅವನು ಒಂದು. ಅವಳು ಇಲ್ಲದೆ ಅವನು ಇಲ್ಲ. ಅವನ ಜೊತೆಯದು ಅವಳಿಗೆಲ್ಲ. ಅವನೀಗ ಸುರನಲ್ಲ. ಅನುರಾಗ ಪ್ರಿಯ ನಲ್ಲ. ಪುಳಕವದು ಶಾಶ್ವತ. ಅಕ್ಕರೆಯು ಅವಿರತ. ಶ್ರೀರಾಮ ಸೀತೆಯರ ಸಮರತಿಯ ಸಂಗವನು ಕಂಡು ಶ್ರಮಕೀಡಾದ ಆ ಮನ್ಮಥ. ಮದನನಿಗೆ ಶ್ರಮ, ಇಲ್ಲ ವಿರಾಮ. ಅಂಗಜ ಸಂಗದಲಿ ಸೀತೆ ಶ್ರೀರಾಮ, ಮನಕೆ ಹೊಸಬಗೆಯ ಆರಾಮ.ಈ ಬಗೆಯಲ್ಲಿ ಶ್ರೀರಾಮ ದೇಹವದು ಮಿಲನಗೊಂಡಿತು ಸೀತೆಯಲ್ಲಿ. ಮನಸ್ಸುಗಳು ಸಮಾಗಮಗೊಂಡವು ಹೊಸಬಗೆಯ ಹುರುಪಿನಲ್ಲಿ.ವರವಿಷ್ಣು ನಕ್ಷತ್ರವದು ಕೊನೆಗಾಣುತ್ತಿರುವ ಸಮಯದಲ್ಲಿ ಗರ್ಭವತಿಯಾದಳು ಆ ಭೂಗರ್ಭೆ. ಸೀತೆಯ ಗರ್ಭದ ಫಲವನ್ನು ತಿಳಿದವರಲ್ಲಿ ಕೇಳಿದ ಶ್ರೀರಾಮ. “ನಿನ್ನನ್ನವಳು ತೊರೆದು ಬೇರಾವುದೋ ಪರಸ್ಥಳದಲ್ಲಿ ಮಕ್ಕಳನ್ನು ಪಡೆಯುತ್ತಾಳೆ” ಎಂಬ ಭವಿಷ್ಯವದು ತಿಳಿದುಬಂತು.ಇದನ್ನರಿಯದ ಸೀತೆ ತಾಯ್ತನದ ಸುಖದ ಭಾವದಲ್ಲಿದ್ದಳು. ರಾಮಚಂದ್ರನನ್ನೇ ಹೋಲುವ ಅವಳಿ ಚಂದ್ರ ಸದೃಶರಾದ ಶಿಶುಗಳನ್ನು ಗರ್ಭದಲ್ಲಿ ಹೊತ್ತುನಿಂತಿದ್ದ ಚಂದ್ರಮುಖಿ ಸೀತೆ ಪೌರ್ಣಮಿಯ ಚಂದ್ರನAದದಿ ಶೋಭಿಸುತ್ತಿದ್ದಳು ಗರ್ಭಿಣಿಯಾದ ಸಮಯದಲ್ಲಿ.ಸೀತೆ ಗರ್ಭವತಿಯೆನಿಸಿಕೊಂಡ ನಾಲ್ಕನೆಯ ತಿಂಗಳಿಗೆ ಅವಳ ಸೀಮಂತ ಶಾಸ್ತçವನ್ನು ನಡೆಸಿದ ಶ್ರೀರಾಮಚಂದ್ರ. ವಸಿಷ್ಠ, ವಿಶ್ವಾಮಿತ್ರರ ಸಲಹೆಗನುಗುಣವಾಗಿ ನಡೆಯಿತದೋ ಸೀಮಂತ ಶಾಸ್ತç. ಮೂರು ಯೋಜನ ವಿಸ್ತೀರ್ಣತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು ಉತ್ಸವವನ್ನು. ಬ್ರಾಹ್ಮಣರಿಗೆ ಅವರು ಬಯಸಿದ್ದನ್ನು ಕೊಡಲಾಯಿತು. ರಾಜರುಗಳಿಗೆ, ಸುಗ್ರೀವ, ವಿಭೀಷಣ ಮೊದಲಾದವರಿಗೆ ಭೋಜನ, ಸುಗಂಧ, ತಾಂಬೂಲ, ಪುಷ್ಪ, ಅಕ್ಷತೆ, ವಸ್ತಾçಭರಣಗಳನ್ನಿತ್ತು ಗೌರವಿಸಿದ ಶ್ರೀರಾಮ. ಪೂರ್ಣ ಭೂಮಿಯದು ಹೊಗಳುವಂತೆ ನಡೆಯಿತು ಭೂಸುತೆಯ ಸೀಮಂತ ಶಾಸ್ತç.ಉತ್ಸವಕ್ಕೆ ಬಂದವರೆಲ್ಲರೂ ಸಂತಸದಿAದ ತೆರಳಿದ ಬಳಿಕ ಶ್ರೀರಾಮನ ಬಳಿಗೆ ಬಂದಳು ಸೀತೆ. ತನ್ನ ಮನದಿಂಗಿತವನ್ನು ತೋಡಿಕೊಂಡಳು. ವನವಾಸದ ಸಮಯದಲ್ಲಿ ಅವಳು ಶ್ರೀರಾಮನ ಜೊತೆ ಹಲವು ಆಶ್ರಮಗಳಿಗೆ ಹೋಗಿದ್ದಳು. ಋಷಿಪತ್ನಿಯರ ಜೊತೆಗೆ ಮಾತನಾಡಿದ್ದಳು. ಆನಂದದಿAದ ಬೆರೆತಿದ್ದಳು. ಅದರ ನೆನಪದು ಈಗ ಮೂಡಿತ್ತು ಸೀಮಂತಿನಿ ಸೀತೆಗೆ. ಈಗ ಬಸುರಿ ಬಯಕೆಯದು ಅವಳಲ್ಲಿ ಮೂಡಿತ್ತು. ಮುನಿಪತ್ನಿಯರನ್ನು ಈಗ ಮತ್ತೆ ನೋಡಬೇಕು, ಮಾತನಾಡಿಸಬೇಕು, ಅವರೊಂದಿಗೆ ದಿನ ಕಳೆಯಬೇಕು ಎಂದು ಆಸೆಪಟ್ಟಿತ್ತು ಅವನ ಮನಸ್ಸು. ಅದನ್ನೇ ಹೇಳಿಕೊಂಡಳು ಪತಿ ಶ್ರೀರಾಮಚಂದ್ರನಲ್ಲಿ. “ನಾನೀಗ ಮತ್ತೆ ವನವನ್ನು ಸೇರಿಕೊಳ್ಳುತ್ತೇನೆ. ಅನುವು ಮಾಡಿಕೊಡಬೇಕು ನೀವು” ಎಂದು ಕೇಳಿಕೊಂಡಳು. ಜನಕಸುತೆಯ ಮನದಿ ಜನಿಸಿದ್ದ ಬಯಕೆಯದು ನಗುವನ್ನು ತರಿಸಿತು ರಘುಕುಲೋತ್ತಮನಿಗೆ. ಅವಳ ಇಚ್ಛೆಯನ್ನು ಈಡೇರಿಸುವ ಭರವಸೆ ಕೊಟ್ಟ ಶ್ರೀರಾಮ.ಹೀಗಿದ್ದ ಕಾಲದಲ್ಲಿಯೇ ಒಂದು ಇರುಳು ಕನಸೊಂದನ್ನು ಕಂಡ ರಘುಪತಿ. ಗಂಗೆಯನ್ನು ದಾಟಿದ ಸೀತೆ ಕಾಡನ್ನು ಸೇರಿ ದಿಕ್ಕುದೆಸೆ ಇಲ್ಲದವರಂತೆ ಅಸಹಾಯಕಳಾಗಿ ದೆಸೆದೆಸೆಯ ಈಕ್ಷಿಸುತ, ಮರುಗುತ್ತಿರುವುದನ್ನು ಕನಸಿನಲ್ಲಿ ಕಂಡು ಕನಲಿದ ಶ್ರೀರಾಮ.ತನ್ನ ಕನಸನ್ನು ವಸಿಷ್ಠರಲ್ಲಿ ಹೇಳಿಕೊಂಡ. “ಈ ಕನಸು ಶುಭದ ಸೂಚನೆಯೋ? ಅಶುಭದ ಸುಳುಹೋ?” ಎಂದು ಕೇಳಿದ. “ಒಳ್ಳೆಯದನ್ನು ತಿಳಿಸುವ ಕನಸಲ್ಲವಿದು” ಎಂಬ ನುಡಿ ಮೂಡಿಬಂತು ಅವರಿಂದ. ಶ್ರೀರಾಮ ಮನಸ್ಸದು ಕನಸಿನ ಅಳುಕಿನಿಂದ ಮುಕ್ತವಾಗುವಂತಹ ಮಾತುಗಳನ್ನಾಡಿ ಶಾಂತಿ ಮೂಡಿಸುವ ಯತ್ನ ಮಾಡಿದರು. ಡಾ.ವಿಶ್ವನಾಥ ಎನ್ ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-128 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಶಿಫಾರಸ್ಸಿನ ಪತ್ರ ಆ ಹುಡುಗಿಯ ಕಸಿನ್ ತನ್ನ ಕುಟುಂಬದವರಿಗೆ ಸುಮತಿಯ ಅನಾರೋಗ್ಯದ ಬಗ್ಗೆ ತಿಳಿಸಿದನು. ಸುಮತಿಯ ಅನಾರೋಗ್ಯದ ಬಗ್ಗೆ ತಿಳಿದು ಕುಟುಂಬದ ಎಲ್ಲರಿಗೂ ಬಹಳ ದುಃಖವಾಯಿತು. ಸುಮತಿಯ ಮಗಳಿಗೆ ಊಟವನ್ನು ಬಡಿಸುವಂತೆ ಅತ್ತಿಗೆಗೆ ಹೇಳಿ ತಮ್ಮ ಹಿತ್ತಲ ತೆಂಗಿನ ಮರದಿಂದ ನಾಲ್ಕೈದು ಎಳನೀರನ್ನು ಕೆಲಸಗಾರರಿಗೆ ಹೇಳಿ ಕೊಯ್ಯಿಸಿ, ತಾನೂ ಊಟ ಮಾಡಿ…. “ಬಾ ಆಸ್ಪತ್ರೆಗೆ ಹೋಗೋಣ…. ಎಂದು ಆ ಹುಡುಗಿಗೆ ಹೇಳುತ್ತಾ,…. “ಅಮ್ಮಾ ….ನಾನು ಅತ್ತೆಯನ್ನು ನೋಡಲು ಹೋಗಿ ಬರುತ್ತೇನೆ”…. ಎಂದಾಗ ಬಾಗಿಲ ಬಳಿ ಬಂದ ಆತನ ಅತ್ತಿಗೆ…. “ಅತ್ತೆಗೆ ಹೇಳು, ನಾಳೆ ನಾನು ಅಣ್ಣ ಜೊತೆಗೆ ಆಸ್ಪತ್ರೆಗೆ ಅತ್ತೆಯನ್ನು ನೋಡಲು ಬರುತ್ತೇವೆ …. ಎಂದು ಹೇಳಿ ಅವರಿಬ್ಬರನ್ನೂ ಬೀಳ್ಕೊಟ್ಟರು. ದಾರಿಯುದ್ದಕ್ಕೂ ಮೌನವಾಗಿದ್ದ ಹುಡುಗಿಯನ್ನು ಆತ ಮಾತಿಗೆಳೆಯುತ್ತಲೇ ಇದ್ದ. ಅತ್ತೆಯ ಅನಾರೋಗ್ಯಕ್ಕೆ ಕಾರಣವೇನು ಎಂದು ಕೇಳಿದ. ಆತನ ಎಲ್ಲಾ ಪ್ರಶ್ನೆಗೂ ಚುಟುಕಾಗಿ ಉತ್ತರಿಸಿ ಆ ಹುಡುಗಿ ಸುಮ್ಮನಾಗುತ್ತಿದ್ದಳು. ಆಸ್ಪತ್ರೆಯನ್ನು ತಲುಪಿ ಇಬ್ಬರೂ ವಾರ್ಡ್ ಒಳಗೆ ಪ್ರವೇಶಿಸಿದಾಗ, ಸುಮತಿಯ ಹಿರಿಯ ಮಗಳು ತನ್ನ ಪುಟ್ಟ ಮಕ್ಕಳೊಂದಿಗೆ ವಾರ್ಡಿನಲ್ಲಿ ಸುಮತಿಯ ಬಳಿ ಕುಳಿತು ಮಾತನಾಡುತ್ತಿದ್ದಳು. ತನ್ನ ತಂಗಿಯ ಜೊತೆ ಕಸಿನ್ ಅನ್ನು ಕಂಡಾಗ ಈತ ಹೇಗೆ ಇಲ್ಲಿಗೆ ಬಂದ? ಎನ್ನುವಂತೆ ಅಕ್ಕ ತಂಗಿಯೆಡೆಗೆ ಪ್ರಶ್ನಾರ್ಥಕ ನೋಟ ಬೀರಿದಳು. ಅದಕ್ಕೆ ತಂಗಿ ಆಮೇಲೆ ಹೇಳುತ್ತೇನೆ ಎಂದು ಸನ್ನೆ ಮಾಡಿದಳು….”ಅಮ್ಮಾ ….ನೋಡು ಯಾರು ಬಂದಿದ್ದಾರೆ”…. ಎಂದು ತಾಯಿಯನ್ನು ಕೇಳಿದಳು. ಬಾಗಿಲ ಕಡೆಗೆ ಬೆನ್ನು ಹಾಕಿ ಕುಳಿತಿದ್ದ ಸುಮತಿ ಹಿಂದಕ್ಕೆ ತಿರುಗಿ ನೋಡಿದಳು. ಮಗಳ ಜೊತೆಗೆ ತನ್ನ ತಂದೆಯ ಅಕ್ಕನ ಮಗಳ ಎರಡನೇ ಮಗ ನಿಂತಿರುವುದು ಕಂಡಿತು. ಸುಮತಿಯ ಮುಖ ಖುಷಿಯಿಂದ ಅರಳಿತು…. “ಏನಪ್ಪಾ ಹೇಗಿದ್ದೀಯಾ? ಮನೆಯಲ್ಲಿ ಎಲ್ಲರೂ ಸೌಖ್ಯವೇ?”… ಎಂದು ಸುಮತಿ ಆತನನ್ನು ಕೇಳಿದಾಗ…. “ಎಲ್ಲರೂ ಸೌಖ್ಯ ಅತ್ತೆ…. ನೀವು ಹೇಗಿದ್ದೀರಿ?… ಬೆಳಗ್ಗೆ ಇವಳು ಕಾಲೇಜಿಗೆ ತಡವಾಗಿ ಬಂದದ್ದು ಏಕೆ ಎಂದು ಕೇಳಿದೆ… ಆಗ ನೀವು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವುದು ತಿಳಿಯಿತು…. ಹಾಗಾಗಿ ನಾನೂ ಜೊತೆಗೆ ಬರುತ್ತೇನೆ ಎಂದು ಹೇಳಿದೆ…. ಈಗ ನಿಮ್ಮ ಆರೋಗ್ಯ ಹೇಗಿದೆ?…. ಡಾಕ್ಟರ್ ಏನು ಹೇಳಿದರು?”…. ಎಂದು ಸುಮತಿಯನ್ನು ಕೇಳುತ್ತಾ, ಕೈಯಲ್ಲಿ ಹಿಡಿದಿದ್ದ ಎಳನೀರುಗಳ ಕಾಯಿಯನ್ನು ಮಂಚದ ಪಕ್ಕದಲ್ಲಿ ಇದ್ದ ಕಿಟಕಿಯ ಬಳಿ ಇಟ್ಟ…. “ಪರವಾಗಿಲ್ಲಪ್ಪಾ…. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಮಗಳಿಗೆ ಡಾಕ್ಟರ್ ತಿಳಿಸಿದ್ದಾರೆ”…. ಎಂದು ತನ್ನ ಎರಡನೇ ಮಗಳ ಮುಖವನ್ನು ನೋಡುತ್ತಾ ಸುಮತಿ ಹೇಳಿದಳು. ಅವಳು ‘ಹೌದು’ ಎನ್ನುವಂತೆ ತಲೆ ಆಡಿಸಿದಳು….. “ಹಾಗಾದರೆ ಬೆಂಗಳೂರಿಗೆ ಹೋಗಿ ಬನ್ನಿ ಅತ್ತೆ…. ಅಲ್ಲಿ ಒಳ್ಳೆಯ ಆಸ್ಪತ್ರೆಗಳು ಇವೆ…. ನಿಮಗೆ ಸರಿಯಾದ ಚಿಕಿತ್ಸೆಯೂ ದೊರಕುತ್ತದೆ”… ಎಂದು ಹೇಳಿ, ಸುಮತಿಯ ಹಿರಿಯ ಮಗಳನ್ನು ಉದ್ದೇಶಿಸಿ…. “ನೀನು ಯಾವಾಗ ಬಂದೆ?”…. ಎಂದು ಕೇಳುತ್ತಾ, ಅವಳ ಇಬ್ಬರು ಮುದ್ದಾದ ಮಕ್ಕಳ ತಲೆಯನ್ನು ನೇವರಿಸಿದ…. “ನಾನು ಬಂದು ಸ್ವಲ್ಪ ಹೊತ್ತಾಯ್ತು”… ಎಂದಳು. ಉಭಯ ಕುಶಲೊಪರಿಯ ನಂತರ ಆತ ಹೊರಡಲನುವಾದ. ಹೊರಡುವ ಮುನ್ನ ನಾಳೆ ತನ್ನ ಅಣ್ಣ ಮತ್ತು ಅತ್ತಿಗೆ ಬರುವುದಾಗಿ ತಿಳಿಸಿದ್ದಾರೆ ಎಂಬುದನ್ನು ಹೇಳಲು ಆತ ಮರೆಯಲಿಲ್ಲ. ಸುಮತಿಯ ಎರಡನೇ ಮಗಳು ಆತನ ಜೊತೆಗೆ ವಾರ್ಡಿನಿಂದ ಹೊರಗೆ ಅಷ್ಟು ದೂರ ಬೀಳ್ಕೊಡಲು ಬಂದಳು. ತನ್ನ ಅಮ್ಮನನ್ನು ನೋಡಲು ಬಂದಿದ್ದಕ್ಕಾಗಿ ಮತ್ತು ಎಳನೀರುಗಳನ್ನು ತಂದಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದಳು. ಆತ ಮುಗುಳ್ನಗುತ್ತಾ…. “ಸರಿ ಹೊರಡುತ್ತೇನೆ…. ನೀನು ಹೆಚ್ಚು ಆಲೋಚನೆ ಮಾಡಬೇಡ…. ಅತ್ತೆಯ ಆರೋಗ್ಯ ಸರಿಯಾಗುತ್ತದೆ”… ಎಂದು ಹೇಳಿ ಮನೆಯ ಕಡೆಗೆ ನಡೆದನು. ಆ ಹುಡುಗಿ ವಾರ್ಡಿಗೆ ಹಿಂದಿರುಗಿದಳು. ವಾರ್ಡಿಗೆ ಹಿಂತಿರುಗಿದ ತಂಗಿಯನ್ನು ಉದ್ದೇಶಿಸಿ…. “ಅಮ್ಮನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಾ?…. ನೀನು ನನಗೆ ಈ ಬಗ್ಗೆ ತಿಳಿಸಲೇ ಇಲ್ಲ”… ಎಂದಳು….” ಹೌದು ಅಕ್ಕಾ”…. ಎಂದು ಉತ್ತರಿಸಿದಳು…. “ಬೆಂಗಳೂರಿಗೆ ಹೋಗಬೇಕಾದರೆ ಮತ್ತು ಅಲ್ಲೇ ಚಿಕಿತ್ಸೆಯನ್ನು ಪಡೆಯಬೇಕಾದರೆ ಹೆಚ್ಚಿನ ಹಣ ಖರ್ಚಾಗುತ್ತದೆ ಅಲ್ಲವೇ?…. ನಮ್ಮಲ್ಲಿ ಯಾರಲ್ಲೂ ಅಷ್ಟೊಂದು ಹಣವಿಲ್ಲ…. ಏನು ಮಾಡುವುದು?”… ಎಂದು ಚಿಂತಿತಳಾಗಿ ತಂಗಿಯನ್ನು ಕೇಳಿದಳು…. “ನೀನೇನೂ ಹೆಚ್ಚು ಆಲೋಚಿಸಬೇಡ ಅಕ್ಕಾ…. ನಾನಾಗಲೇ ನಮ್ಮ ಎಸ್ಟೇಟಿನ ಸಾಹುಕಾರರು ಹಾಗೂ ಅವರ ಪತ್ನಿಯ ಬಳಿ ಮಾತನಾಡಿದ್ದೇನೆ…. ಅಮ್ಮನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ”…. ಎಂದಳು. “ಒಬ್ಬಳೇ ಅಮ್ಮನನ್ನು ಕರೆದುಕೊಂಡು ಬೆಂಗಳೂರಿಗೆ ಹೇಗೆ ಹೋಗುತ್ತೀಯಾ?”…. ಎಂದು ಅಕ್ಕ ಕೇಳಿದಾಗ…. ಇಂದು ಸಂಜೆ ನಾನು ನಿಮ್ಮ ಮನೆಗೆ ಬಂದು ಈ ವಿಷಯವನ್ನು ತಿಳಿಸಿ, ನಮ್ಮ ಜೊತೆಗೆ ಬಾವನನ್ನು ಬೆಂಗಳೂರಿಗೆ ಬರುವಂತೆ ಕೇಳಿಕೊಳ್ಳಬೇಕೆಂದಿದ್ದೆ…. ಈಗ ನೀನೇ ಇಲ್ಲಿಗೆ ಬಂದಿದ್ದು ತುಂಬಾ ಒಳ್ಳೆಯದಾಯಿತು…. ದಯವಿಟ್ಟು ನಮ್ಮ ಜೊತೆ ಬಾವ ಬರುವಂತೆ ವಿನಂತಿಸು ಅಕ್ಕ”…. ಎಂದಾಗ…. “ಏನೇ ಹೀಗೆ ಹೇಳ್ತಾ ಇದ್ದೀಯಾ…. ಬಾವನೇನು ಹೊರಗಿನವರೇ?…. ಅಮ್ಮನ ಬಗ್ಗೆ ಅವರಿಗೂ ಕಾಳಜಿ ಇದೆ…. ನಿಮ್ಮಿಬ್ಬರನ್ನೇ ಅವರು ಬೆಂಗಳೂರಿಗೆ ಕಳುಹಿಸುತ್ತಾರೆಯೇ?…. ಖಂಡಿತಾ ಬಂದೇ ಬರುತ್ತಾರೆ…. ಸ್ವಲ್ಪ ಹೊತ್ತಿನಲ್ಲೇ ನಿನ್ನ ಬಾವನೂ ಇಲ್ಲಿಗೆ ಬರುತ್ತಾರೆ.”… ಎಂದಳು. ಅಕ್ಕ ಈಗ ಬಂದಿದ್ದು ಒಳ್ಳೆಯದಾಯಿತು ಎನಿಸಿತು ತಂಗಿಗೆ. ಸಂಜೆ ಬಾವ ಬಂದರೆ ಡಾಕ್ಟರನ್ನು ಭೇಟಿ ಮಾಡಿ ತಾಯಿಯನ್ನು ಇಲ್ಲಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಬೆಂಗಳೂರಿಗೆ ಕರೆದುಕೊಂಡು ಹೋಗುವ ಬಗ್ಗೆ ಮಾತನಾಡಬಹುದು ಎಂದು ಮನದಲ್ಲಿ ಅಂದುಕೊಂಡಳು. ತಾಯಿ ಮತ್ತು ಮಕ್ಕಳು ಮಾತನಾಡುತ್ತಾ ಕುಳಿತಿರುವಾಗಲೇ ಸುಮತಿಯ ಅಳಿಯ ಬಂದ. ಹಿರಿಯ ಮಗಳು ಎಲ್ಲ ವಿಷಯವನ್ನೂ ತನ್ನ ಗಂಡನಿಗೆ ತಿಳಿಸಿದಳು. ನಾನು ನಿಮ್ಮ ಜೊತೆ ಬೆಂಗಳೂರಿಗೆ ಬರುತ್ತೇನೆ ಎಂದು ಅಳಿಯ ಭರವಸೆ ನೀಡಿದನು. ಸಂಜೆ ಸುಮತಿಯ ಚಿಕಿತ್ಸೆ ಮಾಡುತ್ತಿರುವ ಫಿಜಿಷಿಯನ್ ರನ್ನು ಕಂಡು ಸುಮತಿಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದಾಗ, ಅವರಿಗೂ ಬಹಳ ಸಂತೋಷವಾಯಿತು. ಆದಷ್ಟು ಬೇಗ ಬೆಂಗಳೂರಿಗೆ ಕರೆದುಕೊಂಡು ಹೋಗಿ ಉತ್ತಮ ಚಿಕಿತ್ಸೆಯನ್ನು ಕೊಡಿಸಿ ಎಂದು ಹೇಳಿ, ಬೆಂಗಳೂರಿನ ಕಿಡ್ನಿ ಫೌಂಡೇಶನ್ ಆಸ್ಪತ್ರೆಯ ವೈದ್ಯರಿಗೆ ಒಂದು ಶಿಫಾರಸ್ಸಿನ ಪತ್ರವನ್ನು ಬರೆದು ತಮ್ಮ ಸಹಿ ಹಾಕಿ ಕೊಟ್ಟರು.
ಅಂಕಣ ಸಂಗಾತಿ ಜ್ಯೋತಿ ಡಿ . ಬೊಮ್ಮಾ ಮನದ ಮಾತುಗಳು ಜಿರಳೆಗಳು ಮತ್ತು ಶಿಕ್ಷಣ ವ್ಯವಸ್ಥೆ. ಈ ಸಂದರ್ಭದ ಮಾತುಗಳಂದ್ರ ಮಳಿ ಮತ್ತು ಜಿರಲೆಗಳು.ಮಳಿಗಾಲ ಶರು ಆಗಿ ಎರಡು ತಿಂಗಳಾದಮ್ಯಾಲ ಈಗ ನಮ್ಮ ಕಲ್ಬುರ್ಗಿ ಕಡಿ ಮಳಿ ಬರಲತದ. ಬಿತ್ತಿದ ಉದ್ದು ಹೆಸರು ಬೆಳೆಗಳು ಮಳಿ ಇಲ್ದೆ ಬಾಡಿ ಹೋದ್ವು.ಈಗ ಬಿತ್ತಿದ ತೊಗರಿ ಅತೀ ಮಳೆಯಿಂದ ಎನಾಗತದೋ , ಪ್ರತಿ ವರ್ಷ ಇದೇ ಕತಿ .ಅತಿವೃಷ್ಟಿ ಅಥವಾ ಅನಾವೃಷ್ಟಿ , ಆಹಾರ ಹೆಂಗಾದ್ರೂ ಮಾಡ್ಬಹುದು. ಬೋರ್ವೆಲ್ ಗಳದಾಗೆಲ್ಲ ಅಂತರ್ಜಲ ಮಟ್ಟ ಕುಸದು ನೀರು ಬತ್ತಿ ಹೋಗಿದ್ವು. ಇನ್ನೂ ಸ್ವಲ್ಪ ದಿನ ಮಳಿ ಬರದಿದ್ರ ನೀರಿನ ಬರಗಾಲ ಕಾಣಬೇಕಾಗಿತ್ತು.ಮಳಿ ಕರುಣೆ ತೋರಿಸ್ತು. ಇದರ ಜೋತೆಗೆ ನಮ್ಮ ದೇಶದ ಯುವ ಜಿರಲೆಗಳ ಹರತಾಳ ಒಂದು ರೀತಿ ಯಶಶ್ವಿ ಆಯ್ತು.ಈಗಿನ ಯುವ ಪಿಳಗಿ ಜೆನ್ ಝಿ ಗಳ ಒಂದು ರೀತಿ ಹಠಮಾರಿಗಳು.ಅವರ ವಿದ್ಯ ಬಗ್ಗೆ ಹೇಳಬೆಕಂದ್ರ ಈಗ ಎಲ್ಲರೂ ಓದಿದವ್ರೆ.ಓದಲಾರದವ್ರು ಕೂಡ ಸೋಸಿಯಲ್ ಮಿಡಿಯಾದ ಪ್ರಭಾವದಿಂದ ವುದ್ಯಾವಂತ್ರೆ.ಯಾಕಂದ್ರ ಇಂಗ್ಲಿಷ್ ಓದಕ್ಕ ಬರೆಯಕ್ಕ ಬರದಿದ್ರೂ ಇವರು ಪೋನ್ ನಲ್ಲಿ ಇಂಗ್ಲಿಷ್ ಒದ್ತಾರ.ಮತ್ತ ಟೈಪ್ ಕೂಡ ಮಾಡತಾರ.ಇದು ಝನ್ ಝಿ ಗಳ ಕರಾಮತ್ತು. ನಮ್ಮ ನ್ಯಾಯವಾದುಗಳು ಈಗಿನ ನಿರುದ್ಯೋಗಿ ಯುವ ಪಿಳಿಗಿ ಜಿರಲೆಗಳಂತೆ ಎಲ್ಲರ ಮ್ಯಾಲ ಎಗರಿ ಬಿಳತಾರ ಅಂತ ಹೆಳಿದ್ರು.ಆದ್ರ ಅದು ಸುಳ್ಳು. ಝನ್ ಝಿ ಗಳು ತಮ್ಮ ಪಾಡಿಗಿ ತಾವು ಯಾವಾಗ್ಲೂ ಪೋನ್ ನಲ್ಲಿ ಮುಳಗಿರತಾವ.ಅವರಿಗೆ ಭವಿಷ್ಯದ ಬಗ್ಗೆ ಅತೀ ನಿರೀಕ್ಷೆ ಗಳಿಲ್ಲ. ಯಾರ ಜೋತೆ ಹೆಚ್ಚು ಮಾತಿಲ್ಲ , ಎಕಾಂಗಿಯಾಗೆ ಇರತಾರ.ಮನಿಗಿ ಯಾರಾದ್ರೂ ಅಥಿತಿ ಗಳು ಬಂದ್ರ ಸುಮ್ನ ಮಾರಿ ತೋರ್ಸಿ ರೂಂ ನೊಳಗ ಹೋಗಿ ಸೇರಿಕೊಂಡು ಬಿಡತಾವ.ಅವ್ರು ಗೆಳೆಯರೊಂದಿಗೆ ಆಪ್ತ ಆಗಿ ಇರುವಷ್ಟು ಹೆತ್ತವರೊಂದಿಗೂ ಇರಲ್ಲ.ತಮ್ಮ ಮನದಾಳ ಗೂಗಲ್ ಅಥವಾ ಅಲೆಕ್ಸಾ ಗ ಹೇಳತಾರ ಹೊರತಾಗಿ ಹೆತ್ತವರಿಗಿ ಹೇಳಲ್ಲ. ಆದ್ರ ಅವರಿಗಿ ಒತ್ತಾಯಿಸಿದ್ರ ದಬ್ಬಾಳಿಕಿ ಮಾಡಿದ್ರ , ಕಿಡಿಕಿಡಿ ಆಗತಾರ. ಆತ್ಮಹತ್ಯೆಗಳಂತ ನಿರ್ಧಾರ ಕ್ಕೂ ಕೂಡ ಯುವ ಜನ ಅಂಜತಿಲ್ಲ.ಇದು ಶೋಚನೀಯ ವಿಷಯ. ಈಗಿನ ಯುವ ಜನ ಗೌಪ್ಯತೆ ಇಷ್ಟ ಪಡತಾರ.ಯಾರೊಂದಿಗೂ ಹೆಚ್ಚು ಎನನ್ನು ಹಂಚಿಕೊಳ್ಳಲ್ಲ. ಎಕಾಂತ ಮತ್ತು ಪೋನ್ ಗಳೆ ಅವ್ರ ಆಪ್ತ ಸಂಗಾತಿಗಳು. ಇನ್ನೂ ಶಿಕ್ಷಣದ ವಿಷಯ ಬಂದ್ರೆ ಯುವ ಜನ ಅದರ ಬಗ್ಗೆ ಸಂತುಷ್ಟರಾಗಿಲ್ಲ.ಎಷ್ಟೇ ಓದಿ ಎರಡೆರಡು ಡಿಗ್ರಿ ತಗೊಂಡ್ರು ಉದ್ಯೋಗದ ಭರವಸೆಗಳಿಲ್ಲ.ಗ್ರಾಮೀಣ ಭಾಗದಲ್ಲಿ ಓದಿದ ವಿದ್ಯಾರ್ಥಿಗಳು ಕಾರ್ಪೊರೇಟ್ ನೌಕರಿಗಾಗಿ ದೊಡ್ಡ ಊರು ಸೇರಿ ಪಟ್ಟಣದವರೊಂದಿಗೆ ಸೆಣಸಿ ತಮ್ಮ ನೌಕರಿ ಉಳಿಸಿಕೊಳ್ಳಲು ಹರಸಾಹಸ ಪಡಬೇಕು.ಇನ್ನೂ ಸರ್ಕಾರಿ ನೌಕರಿ ಸೇರಬೇಕಾದ್ರ ವಶೀಲಿ ಅಥವಾ ದುಡ್ಡಿನ ಆಧಾರ ಬೇಕು. ಸರ್ಕಾರಿ ನೌಕರಿ ಸಿಕ್ರು ನೆಮ್ಮದಿ ಇಲ್ಲ.ವ್ಯವಸ್ಥೆ ವಿರುದ್ದ ಹೋಗಲಾರದೆ , ತಮ್ಮಿಷ್ಟದಂತೆ ಕೆಲಸ ಮಾಡ್ಲಿಕ್ಕಾಗ್ದೆ ಅಶಾಂತಿ ಯಲ್ಲೆ ಇರತಾರ. ಶಿಕ್ಷಣ ಯುವಜನಕ್ಕೆ ಯಾವ ರೀತಿ ಉಪಯೋಗ ಆಗ್ತಾ ಇದೆ ಅಂತ ಚಿಂತಿ ಆಗತದ.ಬಿ ಎ . ಬಿ ಕಾಂ ನಂತಹ ಡಿಗ್ರಿ ಮಾಡಿ ಮುಂದೆ ಏನ್ ಮಾಡ್ಬೇಕು . ಅದಕ್ಕ ಎಲ್ರೂ ಡಾಕ್ಟರ್ ಇಂಜಿನಿಯರ್ ಗಳೆ ಆಗಬೇಕು ಅಂತ ಹೆತ್ತವರ ಆಸೆ.ಮಕ್ಕಳಿಗಿ ಇಷ್ಟ ಇರಲಿ ಬಿಡ್ಲಿ , ಆಸ್ತಿ ಮಾರಿ ಸಾಲ ಮಾಡಿಯಾದ್ರೂ ಮಕ್ಕಳಿಗಿ ಡಾಕ್ಟರ್ ಇಂಜಿನಿಯರ್ ಮಾಡ್ಬೇಕು ಎಂಬುದೇ ಹೆತ್ತವರ ಉದ್ದೇಶ. ಡಾಕ್ಟರ್ ಇಂಜಿನಿಯರ್ ಓದಿದವ್ರು ಈಗ ನಿರುದ್ಯೋಗಿಗಳು.ಇನ್ನೂ ಆರ್ಟ್ಸ್ , ಕಾಮರ್ಸ್ ಮಾಡಿದವ್ರ ಪಾಡು ಕೆಳೋದೇ ಬ್ಯಾಡ.ಇಂತಹ ಸಂದರ್ಭದಾಗ ಯುವಜನತೆಯ ಮನಸ್ಥಿತಿ ಏನಾಗಿರತದ..! ಮಾಡಲು ಕೆಲಸ ಇಲ್ದೆ ಭವಿಷ್ಯದ ಬಗ್ಗೆ ನಿರುತ್ಸಾಹಿತರಾಗತಾರ.ಇದಕ್ಕ ಯಾರು ಹೊಣೆ..! ಈಗಿನ ಯುವ ಪಿಳಿಗಿ ಓದುವ ವಿಷಯಕ್ಕೆ ಎಲ್ರು ಜಾಣರೆ ಇದ್ದಾರ.ಹಗಲೂ ರಾತ್ರಿ ಓದ್ತಾರ.ಡಾಕ್ಟರ್ ಇಂಜಿನಿಯರ್ ಆಗ್ಲೇಬೇಕು ಅಂತ ಅತೀ ಆಕಾಂಕ್ಷೆ ಇಟ್ಟುಕೊಂಡು ಓದ್ತಾರ.ಅಂತದ್ದರಲ್ಲಿ ಈ ಪೇಪರಗಳು ಪರೀಕ್ಷೆಗೆ ಮೊದಲೆ ಸೋರಿ ಕಣ್ಣಾಗ ಎಣ್ಣಿ ಹಾಕ್ಕೊಂಡು ಓದಿದವ್ರಿಗೆ ಹತಾಶ ಭಾವ ಉಂಟುಮಾಡತದ.ಸಹಜ , ಒಂದಲ್ಲ ಎರಡಲ್ಲ , ಮ್ಯಾಲಿಂದ ಮ್ಯಾಲ ಪೇಪರ್ ಲೀಕ್ ಆಗೋದು.ಪರಿಕ್ಷೆಗಳು ಮತ್ತ ನಡೆಯೊದು ಇವೆಲ್ಲ ವಿದ್ಯಾರ್ಥಿಗಳಿಗಿ ಒತ್ತಡ ಉಂಟು ಮಾಡತದ. ಭವಿಷ್ಯದ ಬಗ್ಗೆ ಹತಾಶರಾಗಿ ಆತ್ಮಹತ್ಯೆ ಗೆ ಶರಣಾಗತಿದ್ದಾರ. ಇದಕ್ಕೆಲ್ಲ ಯಾರು ಹೊಣೆ..! ಸರ್ಕಾರ. ಯುವಕರಿಗೆ ಉದ್ಯೋಗವಕಾಶಗಳನ್ನು ಮೊದಲು ಒದಗಿಸಬೇಕು.ಒಂದರನಂತರ ಒಂದು ಹೋಸ ಹೋಸ ಕಾಲೇಜ್ ಗಳಿಗಿ ಪರವಾನಗಿ ಕೊಟ್ಡು ವಿದ್ಯಾವಂತ ನಿರಿದ್ಯೋಗಿಗಳನ್ನು ಸರ್ಕಾರ ಸೃಷ್ಟಿ ಮಾಡಲತದ.ಹೆಚ್ಚು ಹೆಚ್ಚು ಶಿಕ್ಷಣ ಸಂಸ್ಥೆ ಗಳು ಬೆಳೆದಂದ ಉದ್ಯೋಗ ಗಳನ್ನು ಒದಗಿಸ್ರಿ. ಡಿಗ್ರಿ ಕೊಡೊದಷ್ಟೆ ನಮ್ಮ ಕೆಲಸ ಅಂತ ಸರ್ಟಿಫಿಕೇಟ್ ಕೊಟ್ಟು ಕಳಸಿದ್ರ.. ಹೊರಗ ಬಂದಮ್ಯಾಲ ಯುವಜನತೆ ಏನು ಮಾಡ್ಬೇಕು..! ಇದಕ್ಕೆಲ್ಲ ಉತ್ತರಾನೆ ಇಲ್ಲ ಬಿಡ್ರಿ. ಈಗ ಅತೀ ವಿದ್ಯಾವಂತ್ರೆ ಹೆಚ್ಚು ಆತ್ಮಹತ್ಯೆ ಗಳಿಗೆ ಶರಣಾಗತಿದ್ದಾರ.ವಿದ್ಯ ವ್ಯಕ್ತಿತ್ವ ವಿಕಸನ ಮಾಡುವ ಬದಲಾಗಿ ವ್ಯಕ್ತಿತ್ವವನ್ನು ಹತಾಶೆಗೊಳಿಸ್ತಿದೆ.ಹಂಗಾದ್ರೆ ಮುಂದಿನ ಪಿಳಿಗೆಯ ಭವಿಷ್ಯ..! ಇಂತಹ ವಿಷಯಗಳು ಮಾತಾಡ್ಬೇಕಾದ ಸರ್ಕಾರ ಮೌನವಾಗಿದ್ರ ಯುವಜನ ದಂಗೆ ಏಳಲಾರಧ ಮತ್ತೆನು ಮಾಡ್ಬೇಕು. ಪ್ರಶ್ನೆ ಪತ್ರಿಕೆ ಸೋರಿಕೆ ಎಲ್ಲಾ ಸರ್ಕಾರದ ಅವಧಿಯಲ್ಲೂ ಆಗಿರಬಹುದು.ಅದಕ್ಕಾಗಿ ದ್ವನಿ ಎತ್ತುವ ಸಮಯ ಈಗ ಬಂದಿತ್ತು.ಆ ವಿಷಯದ ಚರ್ಚೆಗಾಗಿ ಸರ್ಕಾರದ ಸಿದ್ದವಿರಲಾರದಕ್ಕ ಪರಿಸರ ಹೋರಾಟಗಾರ ಸೋನ್ಂ ವಾಂಗ್ಚೂಕ್ ವಿದ್ಯಾರ್ಥಿ ಗಳ ಪ್ರತಿನಿಧಿ ಯಾಗಿ ಉಪವಾಸ ಸತ್ಯಾಗ್ರಹ ಆರಂಬಿಸಿದ್ರು. ಆಗಲಾದ್ರೂ ಸರ್ಕಾರ ಅವರೊಂದಿಗೆ ಚರ್ಚೆಗೆ ಬರಬೇಕಾಗಿತ್ತು.ಒಬ್ಬ ವ್ಯಕ್ತಿ ದೇಶದ ವಿಷಯದ ಬಗ್ಗೆ ಉಪವಾಸ ಸತ್ಯಾಗ್ರಹ ಮಾಡತಿದ್ರೆ ಸರ್ಕಾರದ ಕರ್ತವ್ಯ ಆಗತಿರದ ಆ ವ್ಯಕ್ತಿಗೆ ಭೇಟಿ ಮಾಡಿ ಸಮಸ್ಯೆ ಆಲಿಸಿ ಅದರ ಪರಿಹಾರಕ್ಕಾಗಿ ನಾವು ನೀವು ಕೂಡಿ ಪ್ರಯತ್ನಿಸೋಣ ಎಂದು ಹೇಳೊದು. ಆದ್ರ ನಮ್ಮ ಸರ್ಕಾರ ಇದರ ಬಗ್ಗೆ ಚರ್ಚಿಸೋದು ಇರಲಿ.ಒಬ್ಬ ವ್ಯಕ್ತಿ ಉಪವಾಸ ಮಾಡಿ ಸಾಯುವ ಸ್ಥಿತಿಗೆ ಬರತಿದ್ದಾನ ಅಂತ ಗೊತ್ತಿದ್ದೂ ಆ ವಿಷಯದ ಬಗ್ಗೆ ಚಕಾರ ಎತ್ತದೆ ಇರೊದ್ರೀಂದ ಜನರ ಅದರಲ್ಲೂ ಯುವಜನರ ವಿರೋಧ ಎದಿರಿಸಬೇಕಾಯ್ತು. ನಮ್ಮ ದೇಶದ ಬಿಜೆಪಿ ಸರ್ಕಾರಕ್ಕೆ ಯಾಕ ಇಷ್ಟು ಆತ್ಮ ಪ್ರತಿಷ್ಟೆ..! ನಾವು ಏನು ಮಾಡಿದ್ರು ನಡಿತದ ಎಂಬ ದೋರಣೆ. ನಾವು ಮಾಡಿದ್ದೆಲ್ಲ ಸರಿ ಇರತದ ಎಂಬ ಅತೀ ಆತ್ಮ ವಿಶ್ವಾಸ. ಇಂಥ ಸರ್ವಾಧಿಕಾರಿ ದೋರಣೆ ನಮ್ಮ ದೇಶದ ಯುವಜನರನ್ನ ರೊಚ್ಚಿಗೆಬ್ಬಿಸ್ತು. ಮೊದಲೆ ಶಿಕ್ಷಣ ವ್ಯವಸ್ಥೆ ಯಿಂದ , ನಿರುದ್ಯೋಗ ದಿಂದ ಒದ್ದಾಡತಿರೋ ವಿದ್ಯಾರ್ಥಿಗಳು , ತಮಗಾಗಿ ಉಪವಾಸ ಸತ್ಯಾಗ್ರಹ ಮಾಡುವರ ಪರ ಆದ್ರು.ಸರ್ಕಾರದ ವಿರುದ್ದ ದಂಗೆ ಎದ್ರು. ಸತ್ಯಾಗ್ರಹ ಗಳಲ್ಲಿ ಮುಷ್ಕರ ಗಳಲ್ಲಿ ದಂಗೆಗಳಾಗತ್ತವ.ಕೆಲವು ದಂಗೆಕೋರರು ಇಂತಹ ಅವಕಾಶ ಬಳಸಿಕೊಳ್ಳಲಿಕ್ಕೆ ಕಾಯ್ತಿರತಾರ. ವಿದ್ಯಾರ್ಥಿ ಗಳು ಮಾಡತಿರೋ ಮುಷ್ಕರ ದಲ್ಲಿ ಕಿಡಿಗೇಡಿಗಳು ಪೋಲಿಸ್ ರ ಮೇಲೆ ಹಲ್ಲೆ ಮಾಡಿದಕ್ಕೆ ವಿದ್ಯಾರ್ಥಿ ಸಮೂಹದ ಮ್ಯಾಲ ಲಾಠಿ ಚಾರ್ಜ್ ಮಾಡಿ ಹೊಡೆಯೊದು ಅಮಾನುಷ ವರ್ತನೆ. ಹೊಡೆತ ತಿಂದ ವಿದ್ಯಾರ್ಥಿಗಳು ಮತ್ತಷ್ಟು ದಂಗೆ ಎದ್ರು.ಇದನ್ನು ನಿತಂತ್ರಿಸಲಿಕ್ಕೆ ಪೋಲಿಸರು ಮತ್ತಷ್ಟು ಲಾಠಿ ಚಾರ್ಜ್ ಮಾಡಿದ್ರು.ಈ ಘರ್ಷಣೆ ಗೆ ಸರ್ಕಾರ ಹೊಣೆ.ನಮ್ಮ ಪ್ರಧಾನ ಮಂತ್ರಿ ಯ ಮೌನದಿಂದಲೇ ಇಷ್ಟೆಲ್ಲಾ ಆಯ್ತು.ಇನ್ನೂ ಮುಷ್ಕರ ದಲ್ಲಿ ಯುವಕ ಯುವತಿಯರ ವರ್ತನೆಗಳ ಬಗ್ಗೆ ಎಲ್ಲಾ ಸಕಾರಾತ್ಮಕವಾಗೆ ಹೇಳಲಿಕ್ಕಾಗಲ್ಲ.ಯುವ ಪಿಳಗಿ ಅಂದ್ರ ಒಂದು ರೀತಿ ಕಪಿಗಳಂಗ.ಕೆಣಕಿದ್ರ ಮೈಮ್ಯಾಲ ಬರತಾವ.ತಮಗಾದ ಅನ್ಯಾಯಕ್ಕೆ ಎನಾದ್ರೂ ಸಮಾಧಾನ ಆಗುವಹಂಗ ಮಾತಾಡಿ ರಮಿಸ್ತಾರ ನಮ ಪ್ರಧಾನ ಮಂತ್ರಿಗಳು ಅಂತ ಆಪೇಕ್ಕಾ ಪಟ್ರ ತಮಗ ಲಾಠಿಯಿಂದ ಹೊಡ್ಸತಾರ ಅಂತ ಮತ್ತಿಟು ಸಿಟ್ಟಾದ್ವು. ಆಗ ನಮ್ಮ ಪ್ರ ಮಂ ಗಳಿಗಿ ಗೊತ್ತಾಯ್ತು.ಈ ಝನ್ ಝಿ ಪಿಳಗಿ ಲಾಠಿ ಏಟಗಿ ಬಗ್ಗವು ಅಲ್ಲ.ಇವಕ್ಕೆ ಪ್ರೀತಿಯಿಂದ ಅವ್ರ ಭಾಷಾದಾಗೆ ಒಲಿಸಿಕೊಳ್ಳಬೇಕು ಅಂತ ಪೋನ್ ಮಾರಿ ಮುಂದ ಹಿಡಕೊಂಡು ರಾತ್ರಿ ಅವರಾತ್ರಿ ರೀಲ್ ಮಾಡಿ ಝನ್ ಝಿ ಆಗಲಿಕ್ಕ ಪ್ರಯತ್ನಿಸಿದ್ರು.ಇದೇ ಮೊದಲೆ ಮಾಡಿದ್ರ ಆಗ್ತಿತ್ತು..ಆದ್ರ ನಾನೇ ಶ್ರೇಷ್ಠ ಅಂದಕೊಳ್ಳೋರಿಗೆ ಸಮಯನೆ ಪಾಠ ಕಲಿಸ್ತದಂತ. ಜ್ಯೋತಿ ಡಿ ಬೊಮ್ಮಾ
ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ರಾಜಕೀಯ ಜೀವನ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯು ೧೯೫೧ ಅಕ್ಟೋಬರ್ 25ರಿಂದ ೧೯೫೨ರ ಫೆಬ್ರವರಿ 21ರವರೆಗೆ ನಡೆಯಿತು. ಇದು ಸ್ವಾತಂತ್ರ್ಯಾನಂತರದ ಮೊದಲ ರಾಷ್ಟ್ರೀಯ ಚುನಾವಣೆಯಾಗಿದ್ದು… ರಾಷ್ಟ್ರೀಯ ಕಾಂಗ್ರೆಸ್ ಭರ್ಜರಿ ಜಯದ ತಯಾರಾಯಲ್ಲಿ ಇತ್ತು. ಸ್ವಾತಂತ್ರ ಭಾರತದ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದಾಗ ದೇಶದಾದ್ಯಂತ ರಾಜಕೀಯ ಚಟುವಟಿಕೆಗಳು ಅತಿಯಾಗಿ ಚುರುಕುಗೊಂಡಿದ್ದವು. ಆ ಸಂದರ್ಭದಲ್ಲಿ ಜಯದೇವಿ ತಾಯಿಯವರು ಕೂಡ ಅನೇಕ ರಾಷ್ಟ್ರೀಯ ನಾಯಕರಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಪಕ್ಷದ ಕಾರ್ಯಕರ್ತೆಯಾಗಿ,…. ಪ್ರಮುಖ ನಾಯಕರು ಮತ್ತು ಜನರ ನಡುವಿನ ಕೊಂಡಿಯಾಗಿ ಸೇವೆ ಸಲ್ಲಿಸಿದರು. ಸಂಘಟನಾ ಸಾಮರ್ಥ್ಯ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿಯಿಂದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ವಿಶ್ವಾಸವನ್ನು ಗಳಿಸಿದ್ದರು. ಆ ಸಮಯದಲ್ಲಿ ಮಹಾರಾಷ್ಟ್ರ ಪ್ರಾಂತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಹಿರಿಯ ನಾಯಕರು ಜಯದೇವಿ ತಾಯಿಯವರ ಕಾರ್ಯಕ್ಷಮತೆಯನ್ನು ಗಮನಿಸಿ, ಅವರನ್ನು ಚುನಾವಣೆಗೆ ಸ್ಪರ್ಧಿಸಲು ಆಹ್ವಾನಿಸಿದರು. ರಾಜಕೀಯವಾಗಿ ಉಜ್ವಲ ಭವಿಷ್ಯ ಮತ್ತು ಮಂತ್ರಿ ಸ್ಥಾನವೂ ಅವರಿಗೆ ಸುಲಭವಾಗಿ ದೊರೆಯಬಹುದಾಗಿತ್ತು.ಅಂದಿನ ಕೆಲವು ನಾಯಕರು, ಕರ್ನಾಟಕದ ಪರವಾಗಿ ಅವರು ನಡೆಸುತ್ತಿದ್ದ ಹೋರಾಟವನ್ನು ಮೃದುಗೊಳಿಸಲು ಹಾಗೂ ಅವರನ್ನು ತಮ್ಮ ಮಂತ್ರಿಮಂಡಲದಲ್ಲಿ ಸೇರಿಸಿಕೊಳ್ಳುವ ಯೋಚನೆಯನ್ನೂ ಮಾಡಿಕೊಂಡಿದ್ದರು ಎನ್ನಲಾಗುತ್ತದೆ. ಜಯದೇವಿ ತಾಯಿಯವರು ಅಧಿಕಾರದ ಆಸೆಗೆ ಮಣಿಯುವ ವ್ಯಕ್ತಿತ್ವ ಹೊಂದಿರಲಿಲ್ಲ. ಅವರ ದೃಷ್ಟಿಯಲ್ಲಿ ಹುದ್ದೆ, ಅಧಿಕಾರ ಮತ್ತು ವೈಯಕ್ತಿಕ ಗೌರವಕ್ಕಿಂತ ನಾಡು-ನುಡಿ ಮತ್ತು ಜನರ ಹಿತವೇ ಶ್ರೇಷ್ಠವಾಗಿತ್ತು. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿದಾಗ ಅವರು ನೀಡಿದ ಉತ್ತರ ಅವರ ವ್ಯಕ್ತಿತ್ವದ ಎತ್ತರವನ್ನು ತೋರಿಸುತ್ತದೆ.ಅವರು ಸ್ಪಷ್ಟವಾಗಿ ಹೀಗೆ ಹೇಳಿದರು…. “ರಾಜ್ಯಸಭೆಯಲ್ಲಿ ಸೋಲ್ಲಾಪುರ ಕರ್ನಾಟಕದ ಭಾಗವಾಗಲೇಬೇಕು ಎಂದು ಧೈರ್ಯವಾಗಿ ಹೇಳುವ ಸಂಪೂರ್ಣ ಸ್ವಾತಂತ್ರ್ಯ ಮತ್ತು ಅನುಮತಿ ನನಗೆ ಇದ್ದರೆ ಮಾತ್ರ ನಾನು ಚುನಾವಣೆಗೆ ಸಹಕರಿಸಲು ಸಿದ್ಧ.”ಈ ಮಾತುಗಳು ಜಯದೇವಿ ತಾಯಿಯವರ ಅಚಲ ನಿಲುವಿಗೆ ಸಾಕ್ಷಿಯಾಗಿವೆ. ಅವರಿಗೆ ಚುನಾವಣೆಯಲ್ಲಿ ಗೆಲ್ಲುವುದು ಅಥವಾ ಮಂತ್ರಿಯಾಗುವುದು ಮುಖ್ಯವಲ್ಲ……ಗಡಿ ಭಾಗದ ಕನ್ನಡಿಗರ ನ್ಯಾಯಸಮ್ಮತ ಹಕ್ಕುಗಳ ಪರವಾಗಿ ಸಂಸತ್ತಿನಲ್ಲಿಯೂ ಧ್ವನಿ ಎತ್ತಲು ಅವಕಾಶ ದೊರೆಯಬೇಕೆಂಬುದು ಅವರ ಏಕೈಕ ಆಶಯವಾಗಿತ್ತು.ಜಯದೇವಿ ತಾಯಿಯವರು ಅಧಿಕಾರಕ್ಕಾಗಿ ತಮ್ಮ ತತ್ವಗಳನ್ನು ಎಂದಿಗೂ ಬಿಟ್ಟುಕೊಡದ ನಾಯಕಿಯಾದರು. ಅವರ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಮುಖ್ಯ ಕಾರಣವೆಂದರೆ ಗಡಿ ಭಾಗದ ಕನ್ನಡಿಗರ ಹಕ್ಕುಗಳ ರಕ್ಷಣೆ… ಕನ್ನಡಿಗರ ಆಸ್ತಿ ತ್ವದ ರಕ್ಷಣೆ ಆಗಬೇಕು ಅಖಂಡ ಕರ್ನಾಟಕದ ನಿರ್ಮಾಣ ಮಾಡುವ ಉದ್ದೇಶವಾಗಿತ್ತು. ಕರ್ನಾಟಕದವರ ಪರವಹಿಸಿ ಮಾತನಾಡುತ್ತಿದ್ದ ಜಯದೇವಿತಾಯಿಯವರನ್ನು ಶಾಂತಗೊಳಿಸಲು ಆಗಿನ ಎಂಪಿ ಸಿಸಿ ಅಧ್ಯಕ್ಷರಾಗಿದ್ದ ಹಿರೇಯವರು ಚುನಾವಣೆಯಲ್ಲಿ ನಿಲ್ಲಲು ಜಯದೇವಿ ತಾಯಿಯವರಿಗೆ ಕೇಳಿದರು. ಜಯದೇವಿತಾಯಿಯವರು ಸ್ಪರ್ಧಿಸಿಸಲು ಒಪ್ಪದಿದ್ದಾಗ ಹೀರೆಯವರು..”ತಾಯಾಯವರೆ ನೀವು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ನೀವು ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸದಿದ್ದರೆ, ನಿಮ್ಮ ಅಭಿಪ್ರಾಯದಂತೆ ಜನಸೇವೆಗೆ ಸಮರ್ಥರಾಗಿರುವ ವ್ಯಕ್ತಿಯೊಬ್ಬರನ್ನು ಸೂಚಿಸಿ” ಎಂದು ಕೇಳಿದರು. ಆಗ ಜಯದೇವಿ ತಾಯಿಯವರು ಯಾವುದೇ ವೈಯಕ್ತಿಕ ಲಾಭ ಅಥವಾ ರಾಜಕೀಯ ಲೆಕ್ಕಾಚಾರವಿಲ್ಲದೆ *ಮಹಾರಾಣಿ ನಿರ್ಮಲಾರಾಜೆ ಭೋಸಲೆ ಅವರ ಹೆಸರನ್ನು ಶಿಫಾರಸು ಮಾಡಿದರು.ನಿರ್ಮಲಾರಾಜೆ ಭೋಸಲೆ *ಅವರು ಅಕ್ಕಲಕೋಟೆ ಸಂಸ್ಥಾನದ ಮಹಾರಾಣಿಯಾಗಿದ್ದರು. ಅರಮನೆಯ ವೈಭವದ ಜೀವನದಲ್ಲಿದ್ದವರು…. ಅವರಲ್ಲಿದ್ದ ನಾಯಕತ್ವತೆ,ಸಂವೇದನಾ ಶೀಲತೆ ಮತ್ತು ಸೇವಾ ಮನೋಭಾವವು ಸಮಾಜದ ಅಭಿವೃದ್ಧಿಗೆ ಬಳಕೆಯಾಗಬೇಕೆಂದು ಜಯದೇವಿ ತಾಯಿಯವರು ನಿರ್ಮಲಾ ರಾಜಯೆವರಿಗೆ ಹೇಳಿದರು “ಅರಮನೆಯ ನಾಲ್ಕು ಗೋಡೆಗಳೊಳಗೆ ಜೀವನವನ್ನು ಸೀಮಿತಗೊಳಿಸದೆ, ಜನರ ನಡುವೆ ಬೆರೆತು ಅವರ ಕಷ್ಟ-ಸುಖಗಳನ್ನು ಅರಿಯಬೇಕು” ಎಂದು ಅವರು ನಿರ್ಮಲಾ ರಾಜೆಯವರನ್ನು ಪ್ರೇರೇಪಿಸಿದರು.ಜಯದೇವಿ ತಾಯಿಯವರ ಪ್ರೋತ್ಸಾಹದಿಂದ ನಿರ್ಮಲಾ ರಾಜೆಯವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ ಶಿಕ್ಷಣ, ಮಹಿಳಾ ಕಲ್ಯಾಣ, ಸಾರ್ವಜನಿಕ ಸೇವೆ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಮಾಜಸೇವೆಯ ಅನುಭವವು ಅವರಿಗೆ ಜನಜೀವನದ ನೈಜ ಸಮಸ್ಯೆಗಳ ಪರಿಚಯವನ್ನು ನೀಡಿತು. ಈ ಸಾಮಾಜಿಕ ಸೇವೆಯ ಪಯಣವೇ ಮುಂದೆ ಅವರನ್ನು ರಾಜಕೀಯ ಕ್ಷೇತ್ರಕ್ಕೂ ಕೊಂಡೊಯ್ದಿತು. ಜನಸೇವೆಯನ್ನು ಇನ್ನಷ್ಟು ವ್ಯಾಪಕವಾಗಿ ಮಾಡಲು ರಾಜಕೀಯವೂ ಒಂದು ಸಾಧನ ಎಂಬ ಅರಿತಿದ್ದ ಜಯದೇವಿ ತಾಯಿಯವರು ನಿರ್ಮಲಾರಾಜೆ ಭೋಸಲೆ ಅವರ ನಾಯಕತ್ವದ ವಿಶಿಷ್ಟ ಗುಣ ಔದಾರ್ಯವೆಂದು ತೋರಿಸಿಕೊಟ್ಟರು. ಸಮಾಜಕ್ಕೆ ಉತ್ತಮ ನಾಯಕತ್ವ ನೀಡಬಲ್ಲ ವ್ಯಕ್ತಿಗಳನ್ನು ಗುರುತಿಸಿ, ಅವರನ್ನು ಬೆಳೆಸುವ ಮಹತ್ತರ ಕಾರ್ಯವನ್ನು ಮಾಡಿದರು. ನಿಜವಾದ ನಾಯಕ ಎಂದರೆ ಸ್ವತಃ ಮುಂದೆ ನಿಲ್ಲದೇ ಮತ್ತೊಬ್ಬ ನಾಯಕನನ್ನು ರೂಪಿಸುವ ಸಾಮರ್ಥ್ಯವೂ ಹೊಂದಿರಬೇಕು ಎಂಬುದಕ್ಕೆ ಜಯದೇವಿ ತಾಯಿಯವರ ಜೀವನವೇ ಅತ್ಯುತ್ತಮ ಉದಾಹರಣೆಯಾಗಿದೆ. ಕನ್ನಡ ನಾಡಿನ ಗಡಿಭಾಗಗಳ ಬಗ್ಗೆ ಅವರಿಗೆ ಅಪಾರವಾದ ಕಾಳಜಿ. ಅಕ್ಕಲಕೋಟ, ಸೊಲ್ಲಾಪುರ ಸೇರಿದಂತೆ ಕನ್ನಡಿಗರ ಬದುಕು, ಭಾಷೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದ ಪ್ರದೇಶಗಳು ಕರ್ನಾಟಕದೊಂದಿಗೆ ಉಳಿಯಬೇಕು ಎಂಬುದು ಅವರ ಆಂತರಿಕ ಬಯಕೆಯಾಗಿತ್ತು. ಅಕ್ಕಲಕೋಟ ಮತ್ತು ಸೊಲ್ಲಾಪುರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಗೊತ್ತುವಳಿ ತರಲು ನಿರ್ಮಲ ರಾಜಯೆಅವರು ಕಾರಣರಾದರು ಎಂಬ ಸುದ್ದಿ ಜಯದೇವಿ ತಾಯಿಯವರ ಕಿವಿಗೆ ಬಿದ್ದಾಗ, ಅದು ಅವರ ಮನಸ್ಸಿನ ಮೇಲೆ ಬಿದ್ದ ದೊಡ್ಡ ಹೊಡೆತವಾಗಿತ್ತು.ಯಾಕೆಂದರೆ, ತಾವು ನಂಬಿ ಬೆಳೆಸಿದ ವ್ಯಕ್ತಿಯೇ ತಮ್ಮ ಮನಸ್ಸಿಗೆ ವಿರುದ್ಧವಾದ ನಿಲುವು ತೆಗೆದುಕೊಂಡಿದ್ದಾರೆ ಎಂಬ ನೋವು ಒಂದು ಕಡೆಯಾಯಿತು. “ನಾವು ಯಾರಿಗಾಗಿ ಹೋರಾಡಿದೆವು?ಯಾರನ್ನು ನಂಬಿ ಮುಂದೆ ಕಳುಹಿಸಿದೆವು?ನಮ್ಮ ನಾಡಿನ ನೋವನ್ನು ಹೇಳಬೇಕಾದವರೇ ನಮ್ಮ ನಾಡಿನ ಗಡಿಯನ್ನು ಬೇರೆಯವರ ಪಾಲಾಗಿಸುವ ಮಾತಿಗೆ ಹೇಗೆ ಕೈಜೋಡಿಸಿದರು?”ಎಂದರು .ಜಯದೇವಿ ತಾಯಿಯವರಿಗೆ ಸಾಮಾನ್ಯ ರಾಜಕೀಯ ಭಿನ್ನಾಭಿಪ್ರಾಯವಾಗಿರಲಿಲ್ಲ.ಅಕ್ಕಲಕೋಟ, ಸೊಲ್ಲಾಪುರ ಕೇವಲ ಭೂಪಟದ ಮೇಲಿನ ಪ್ರದೇಶಗಳಾಗಿರದೆ…..ಅಲ್ಲಿ ಕನ್ನಡದ ಉಸಿರಿತ್ತು. ಕನ್ನಡಿಗರ ಬದುಕಿತ್ತು. ತಲೆಮಾರುಗಳಿಂದ ಬೆಳೆದು ಬಂದ ಭಾಷೆ, ಸಂಸ್ಕೃತಿ, ನೆನಪುಗಳು, ಸಂಬಂಧಗಳು ಇದ್ದವು.ಆ ನೆಲದ ಬಗ್ಗೆ ಅವರಿಗಿದ್ದ ಭಾವನೆ ತಾಯಿಗೆ ತನ್ನ ಮಗುವಿನ ಮೇಲಿರುವ ಮಮತೆಯಂತಿತ್ತು. ತಾವು ಪ್ರೀತಿಸಿದ ನಾಡಿಗಾಗಿ ಹೋರಾಡುವವರನ್ನು ಹುಡುಕಿ, ಅವರನ್ನು ಮುಂದೆ ತಂದು, ಅವರ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ ಒಬ್ಬ ಹಿರಿಯ ಹೋರಾಟಗಾರ್ತಿಯ ಮನಸ್ಸಿಗೆ ಇದು ಎಷ್ಟು ದೊಡ್ಡ ಆಘಾತವಾಯಿತು. ಜಯದೇವಿ ತಾಯಿಯವರ ರಾಜಕೀಯ ಜೀವನದಲ್ಲಿ ಒಂದು ಕಹಿ ಅಧ್ಯಾಯವಾಗಿದ್ದರೂ, ಅದು ಅವರ ಕನ್ನಡಾಭಿಮಾನವನ್ನು ಕುಗ್ಗಿಸಲಿಲ್ಲ.ಬದಲಿಗೆ ಅವರ ಮನಸ್ಸಿನಲ್ಲಿ ಇನ್ನಷ್ಟು ಗಟ್ಟಿಯಾದ ಸಂಕಲ್ಪ ಮೂಡಿಸಿತು….ಗಡಿ ಕಳೆದುಕೊಂಡರೂ ಕನ್ನಡ ಕಳೆದುಕೊಳ್ಳಬಾರದು.ಭೂಭಾಗದ ಮೇಲೆ ಹಕ್ಕು ಕಳೆದುಕೊಂಡರೂ ಭಾಷೆಯ ಮೇಲಿನ ಪ್ರೀತಿ ಕಳೆದುಕೊಳ್ಳಬಾರದು.ರಾಜಕೀಯದಲ್ಲಿ ಸೋಲು ಬಂದರೂ ನಾಡಿನ ಪರವಾದ ಹೋರಾಟದಲ್ಲಿ ಹಿಂದೆ ಸರಿಯಬಾರದೆಂದ ತಮ್ಮ ಹೊರಾಟ ಮುಂದುವರಿಸಿದರು. ಅವರ ಜೀವನ ನಮಗೆ ಹೇಳುವ ಸಂದೇಶ ಒಂದೇ“ಪದವಿ ಬದಲಾಗಬಹುದು…ರಾಜಕೀಯದವರು ಬದಲಾಗಬಹುದು…ಆದರೆ ಹೆತ್ತ ತಾಯಿಯ ಮೇಲಿನ ಪ್ರೀತಿ, ನಾಡಿನ ಮೇಲಿನ ಅಭಿಮಾನ ಮತ್ತು ನುಡಿಯ ಮೇಲಿನ ನಿಷ್ಠೆ ಬದಲಾಗಬಾರದು.”ಸೊಲ್ಲಾಪುರ ಮತ್ತು ಅಕ್ಕಲಕೋಟ,ಜತ್ತದ ನೆಲದ ಮೇಲೆ ಕನ್ನಡದ ಹೆಜ್ಜೆಗುರುತು ಉಳಿಯಬೇಕು ಎಂಬ ಅವರ ಕನಸನ್ನು ತಮ್ಮ ಹೃದಯದಿಂದ ಎಂದಿಗೂ ಅಳಿಸಿರಲಿಲ್ಲ.ಅದೇಷ್ಟೋ ಬಾರಿ ಕಣ್ಣೀರಿನು ಹಾಕಿದರುಅದು ತನ್ನ ನಾಡು ತನ್ನ ಕೈಯಿಂದ ಜಾರಿಹೋಗುತ್ತಿರುವುದನ್ನು ಕಂಡ ಕನ್ನಡ ತಾಯಿಯ ಹೃದಯದ ನೊಂದಿತ್ತು. *ಕನ್ನಡ ತಾಯಿಗಾಗಿ |ಕಣ್ಣೀರ ಸುರಿದಾವಉನ್ನತ ನಾಡು ಒಂದು ಗೂಡಿಸಲು- ಸಿದ್ದರಾಮಅನ್ನ ನೀರಿನ ಪರಿವೆ ಹರಿಸಿದಿರಿ||* ಅದಕ್ಕಾಗಿಯೇ ಜಯದೇವಿ ತಾಯಿಯವರು ಇಂದಿಗೂ ನಿಸ್ವಾರ್ಥ ಸೇವೆ, ಕನ್ನಡಾಭಿಮಾನ ಮತ್ತು ತತ್ವನಿಷ್ಠ ರಾಜಕೀಯದ ಪ್ರತೀಕವಾಗಿ ಸ್ಮರಿಸಲ್ಪಡುತ್ತಾರೆ. (ಮುಂದುವರೆಯುವುದು) ಸವಿತಾ ದೇಶಮುಖ .
ಅಂಕಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಸಮಾಜವಾದಿ ಚಿಂತಕರು,ಗಾಂಧಿವಾದಿಡಾ ಕುಮಾರ ಸಪ್ತರ್ಷಿ ಗ್ರಾಮ ರಾಜ್ಯದ ಕನಸು ಕಂಡ ಅಪ್ಪಟ ಗಾಂಧಿವಾದಿ ಡಾ. ಕುಮಾರ ಸಪ್ತರ್ಷಿ ಅವರು ಮಹಾರಾಷ್ಟ್ರದ ಪ್ರಸಿದ್ಧ ಹಿರಿಯ ಸಮಾಜವಾದಿ ಚಿಂತಕರು, ಗಾಂಧಿವಾದಿ ಹೋರಾಟಗಾರರು ಮತ್ತು ಯುವ ನಾಯಕರಾಗಿದ್ದರು. ಅವರು ಮಹಾರಾಷ್ಟ್ರದ ಸಾಮಾಜಿಕ, ರಾಜಕೀಯ ಮತ್ತು ಪ್ರಗತಿಪರ ಚಳವಳಿಗಳಲ್ಲಿ ದಶಕಗಳ ಕಾಲ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ದುರದೃಷ್ಟವಶಾತ್, ಅವರು ತಮ್ಮ 85ನೇ ವಯಸ್ಸಿನಲ್ಲಿ 18 ಜುಲೈ 2026 ರಂದು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿನಿಧನರಾದರು. 1941ರ ಆಗಸ್ಟ್ 21ರಂದು ಜನಿಸಿದ ಸಪ್ತರ್ಷಿ ಅವರು ಬಿಹಾರದ ಗಯಾದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ತಮ್ಮ ಸಾಮಾಜಿಕ ಜೀವನವನ್ನು ಆರಂಭಿಸಿದರು; ಅಲ್ಲಿ ಅವರು ಬರಗಾಲದಿಂದ ತೊಂದರೆಗೀಡಾದ ಜನರಿಗಾಗಿ ಸಹಾಯ ಕೇಂದ್ರವೊಂದನ್ನು ನಡೆಸುತ್ತಿದ್ದರು. ಅವರು 1967ರ ನವೆಂಬರ್ನಲ್ಲಿ ‘ಯುಕ್ರಂದ್’ (Yukrand) ಸಂಘಟನೆಯನ್ನು ಸ್ಥಾಪಿಸಿದರು. ಮಹಾರಾಷ್ಟ್ರದ ಇತಿಹಾಸದಲ್ಲಿ ‘ಯುಕ್ರಂದ್’ ಕಾಲಘಟ್ಟವು ಮಹತ್ವದ ಸ್ಥಾನವನ್ನು ಹೊಂದಿದೆ, ಏಕೆಂದರೆ ಇದು ಸಾಮಾಜಿಕ ನ್ಯಾಯದ ವಿಷಯವನ್ನು ಬಲವಾಗಿ ಎತ್ತಿಕೊಂಡ ಸಮಾಜವಾದಿ ನಾಯಕರ ಗುಂಪಾಗಿತ್ತು. ಜಾತಿ ತಾರತಮ್ಯದ ವಿಷಯದಲ್ಲಿ ಈ ಸಂಘಟನೆಯು ಎಷ್ಟು ಸಕ್ರಿಯವಾಗಿತ್ತೆಂದರೆ, ಮುಂದಿನದಿನಗಳಲ್ಲಿಅದು ‘ದಲಿತ ಪ್ಯಾಂಥರ್’ ಜೊತೆಗೂಡಿ ಜಂಟಿ ಹೋರಾಟಗಳನ್ನು ನಡೆಸಿತು. ಕುಮಾರ ಸಪ್ತರ್ಷಿ ಅವರ ಜೀವನ ಮತ್ತು ಪ್ರಮುಖ ಕಾರ್ಯಗಳ ಪ್ರಮುಖ ಸಾಧನೆಗಳು ಮತ್ತು ಸಂಘಟನೆಗಳು ಯುವಕ ಕ್ರಾಂತಿ ದಳ (ಯುಕ್ರಾಂದ್): ಯುವಕರಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ಪ್ರಗತಿಪರ ಆಲೋಚನೆಗಳನ್ನು ಬೆಳೆಸಲು ಅವರು 1967 ರಲ್ಲಿ ಈ ಪ್ರಭಾವಿ ಯುವ ಸಂಘಟನೆಯನ್ನು ಸ್ಥಾಪಿಸಿದರು. ಮಹಾರಾಷ್ಟ್ರ ಗಾಂಧಿ ಸ್ಮಾರಕ ನಿಧಿ: ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ, ಗಾಂಧಿವಾದಿ ತತ್ವಗಳನ್ನು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೊಸ ಪೀಳಿಗೆಗೆ ತಲುಪಿಸಲು ಶ್ರಮಿಸಿದರು.ಸಾಮಾಜಿಕ ಹೋರಾಟಗಳು: ಭ್ರಷ್ಟಾಚಾರ, ಸಾಮಾಜಿಕ ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿದ್ದ ಅವರು, ವಿವಿಧ ಆಂದೋಲನಗಳ ಭಾಗವಾಗಿ ಸುಮಾರು 35 ಕ್ಕೂ ಹೆಚ್ಚು ಬಾರಿ ಜೈಲು ಸೇರಿದ್ದರು. ತುರ್ತು ಪರಿಸ್ಥಿತಿಯ (Emergency) ಸಮಯದಲ್ಲಿ ಅವರು ‘ಮಿಸಾ’ (MISA) ಕಾಯ್ದೆಯಡಿ ಯೆರವಾಡ ಜೈಲಿನಲ್ಲಿ ಬಂಧಿಯಾಗಿದ್ದರು. ರಾಜಕೀಯ ಮತ್ತು ಸಾಹಿತ್ಯಿಕ ಕೊಡುಗೆಶಾಸಕರಾಗಿ ಸೇವೆ: 1977 ರಲ್ಲಿ ಜನತಾ ಪಕ್ಷವನ್ನು ಸೇರಿ, 1978 ರ ವಿಧಾನಸಭಾ ಚುನಾವಣೆಯಲ್ಲಿ ಅಹಮದ್ನಗರ ಕ್ಷೇತ್ರದಿಂದ ಶಾಸಕರಾಗಿ (MLA) ಆಯ್ಕೆಯಾಗಿದ್ದರು. *ಪತ್ರಿಕೋದ್ಯಮ ಮತ್ತು ಸಾಹಿತ್ಯ: ಪ್ರಗತಿಪರ ವಿಚಾರಗಳನ್ನು ಹರಡಲು ‘ಸತ್ಯಾಗ್ರಹಿ ಪತ್ರಿಕೋದ್ಯಮ’ (Satyagrahi Vichardhara) ಎಂಬ ಮರಾಠಿ ಮಾಸಿಕ ಪತ್ರಿಕೆಯ ಸಂಪಾದಕರಾಗಿ ದೀರ್ಘಕಾಲ ಕೆಲಸ ಮಾಡಿದರು. ಅವರು ‘ಸಂಕಲ್ಪ’, ‘ಯಾತ್ರಿ’ ಮತ್ತು ‘ಡೇಸ್ ಅಟ್ ಯೆರವಾಡ ಯೂನಿವರ್ಸಿಟಿ’ ಸೇರಿದಂತೆ ಹಲವು ಪ್ರಸಿದ್ಧ ಪುಸ್ತಕಗಳನ್ನು ಬರೆದಿದ್ದಾರೆ. ವೃತ್ತಿಯಿಂದ ವೈದ್ಯರಾಗಿದ್ದರೂ (Medical Doctor), ತಮ್ಮ ಇಡೀ ಜೀವನವನ್ನು ಸಮಾಜ ಸೇವೆ, ಜಾತಿ ನಿರ್ಮೂಲನೆ ಮತ್ತು ಸಮಾನತೆಯ ಹೋರಾಟಕ್ಕಾಗಿ ಮುಡುಪಾಗಿಟ್ಟಿದ್ದರು. ಸಮಾಜವಾದದ ಗಟ್ಟಿ ಕೊಂಡಿಯೊಂದು ಕಳಚಿತಿದೆ. ಬುದ್ಧ ಬಸವ ಮಹಾತ್ಮಾ ಗಾಂಧಿ ಬಾಬಾಸಾಹೇಬ ಅಂಬೇಡ್ಕರ ಅವರ ವಿಚಾರ ಧಾರೆಗೆ ಆಕರ್ಷಿತರಾದ ಇವರು ಜೀವನದಲ್ಲಿ ಬಡವರ ಪರವಾಗಿ ಧ್ವನಿ ಎತ್ತಿದರು. ಜೆಪಿ ಚಳುವಳಿಯ ಮಹಾರಾಷ್ಟ್ರದ ಉಸ್ತುವಾರಿ ವಹಿಸಿದ ಅಪ್ಪಟ ಭಾರತೀಯ ಸಂಸ್ಕೃತಿ ಚಿಂತಕ ಸಮಾಜವಾದಿ ಈಗ ನೆನಪು ಮಾತ್ರ. ಇತ್ತೀಚೆಗೆ ಶ್ರೀ ಸಂಜಯ ಇಂಡೆ ಅವರ ಮೂಲಕ ಬಸವ ತಿಳುವಳಿಕೆ ಮತ್ತು ತತ್ವಜ್ಞಾನದ ಒಂದು ದಿನದ ಕಾರ್ಯಾಗಾರವನ್ನು ಪುಣೆಯ ಗಾಂಧಿ ಭವನದಲ್ಲಿ ಮಾಡಲು ಅವರ ಮೂಲಕ ನನಗೆಸೂಚಿಸಿದ್ದರು. ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಧಾರಾವಾಹಿ ಸಂಗಾತಿ-36 ಡಾ.ವಿಶ್ವನಾಥ್ ಎನ್.ನೇರಳೆಕಟ್ಟೆ ಅರ್ಜುನ ಉವಾಚ ದಶರಥಸುತ ದಮನಿಸಿದ ದಶಕಂಠನನ್ನು ಇಕ್ಷಾಕು ಮೊದಲಾದ ರಾಜಾಧಿರಾಜರನ್ನು ಹೊಂದಿದ ಶ್ರೇಷ್ಠಕುಲವಾಗಿತ್ತು ಸೂರ್ಯವಂಶ. ಅಯೋಧ್ಯೆಯನ್ನು ಆಧಾರವಾಗಿಟ್ಟುಕೊಂಡು ಇವರೆಲ್ಲರೂ ಆಳ್ವಿಕೆ ನಡೆಸಿದರು. ಹೀಗಿದ್ದ ರವಿಕುಲದಲ್ಲಿ, ಅಯೋಧ್ಯಾಪುರದಲ್ಲಿ ಪುತ್ರಕಾಮೇಷ್ಠಿ ಯಾಗದ ಫಲವಾಗಿ, ದಶರಥಪುತ್ರನಾಗಿ ಜನಿಸಿದ ಮಹಾವಿಷ್ಣು, ಶ್ರೀರಾಮಚಂದ್ರನೆಂಬ ಹೆಸರನ್ನು ಹೊತ್ತು. ಕೌಸಲ್ಯೆಯ ಗರ್ಭದೊಳಗಿಂದ ಈ ಇಳೆಗಿಳಿದ ಶ್ರೀರಾಮ ಬೆಳೆದದ್ದು ಲಕ್ಷಣ, ಭರತ, ಶತ್ರುಘ್ನರೆಂಬ ತಮ್ಮಂದಿರೊಡನೆ. ಕೌಶಿಕ ರಾಜನ ಯಾಗವನ್ನು ಕಾಪಾಡುವ ಹಿರಿದು ಹೊಣೆಯದು ಕಿರಿದು ವಯಸ್ಸಿನಲ್ಲಿಯೇ ಅವನದ್ದಾಯಿತು. ತಾಟಕಿಯೆಂಬ ರಕ್ಕಸಿಯನ್ನು ಕೊಂದ ಕೌಸಲ್ಯಾ ಸುತ. ಶಾಪದ ಫಲವಾಗಿ ಶಿಲೆಯಾಗಿದ್ದ ಗೌತಮ ಋಷಿಯ ಮಡದಿ ಅಹಲ್ಯೆಯನ್ನು ಉದ್ಧರಿಸಿದ ದಶರಥನಂದನ. ಮಿಥಿಲೆಯಲ್ಲಿ ನಡೆಯುತ್ತಿದ್ದ ಸೀತಾ ಸ್ವಯಂವರಕ್ಕೆ ಹೋದವನು ಶಿವಧನುಸ್ಸನ್ನು ಮುರಿದು, ಜನಕರಾಜನ ಸುತೆಯಾದ ಜಾನಕಿಯನ್ನು ಸತಿಯಾಗಿ ಪಡೆದ.ಹೀಗೆ ಬದುಕಿನಲ್ಲಿ ಏಳಿಗೆಯನ್ನು ಗಳಿಸುತ್ತಾ, ಪ್ರವರ್ಧಮಾನಕ್ಕೆ ಬರುತ್ತಿರುವ ಮಗ ಶ್ರೀರಾಮನಿಗೆ ಅಯೋಧ್ಯೆಯ ಪೂರ್ಣ ಜವಾಬ್ದಾರಿಯನ್ನು ನೀಡಬೇಕು ಎನಿಸಿತು ದಶರಥನಿಗೆ. ರಘುಕುಲತಿಲಕನ ಪಟ್ಟಾಭಿಷೇಕಕ್ಕೆ ಮುಹೂರ್ತವದು ನಿಗದಿಗೊಂಡಿತು. ಈ ವಿಚಾರವನ್ನು ಮಂಥರೆಯ ಮೂಲಕ ತಿಳಿದಳು ಕೈಕೇಯಿ. ದಶರಥನ ಪ್ರೀತಿಯ ರಾಣಿ. ಮಂಥರೆಯ ಮತ್ಸರದ ನುಡಿಯದು ಕೈಕೇಯಿ ಮನವನ್ನು ಮಥಿಸಿತು ಹೀನವಾಗಿ. ತನ್ನ ಮಗ ಭರತನಿಗೇ ಪಟ್ಟ ದೊರೆಯಬೇಕೆಂದು ಹಠ ಹಿಡಿದಳು ಗಂಡನಲ್ಲಿ. ಹಿಂದೆ ಅವಳಿಗೆ ಕೊಟ್ಟಿದ್ದ ಮಾತು ಈಗವನ ಬಾಯಿಯನ್ನು ಮುಚ್ಚಿಸಿತು. ಭರತನಿಗೆ ದೊರಕಿತು ಅಯೋಧ್ಯೆಯ ಸಿಂಹಾಸನ. ಪ್ರಭುವಾಗಬೇಕಿದ್ದ ಶ್ರೀರಾಮನದ್ದು ವನದೆಡೆಗಿನ ಗಮನ. ಜೊತೆಗಿದ್ದದ್ದು ಒಲವಿನ ಮಡದಿ ಸೀತೆ, ಪ್ರಿಯ ಸೋದರ ಲಕ್ಷö್ಮಣ.ವನವಾಸದ ಅವಧಿಯಲ್ಲಿ ಅದೆಷ್ಟೋ ರಕ್ಕಸರು ಕೊನೆಗಂಡರು, ರಾಮಬಾಣಕ್ಕೆ ಸಿಲುಕಿ. ಋಷಿಸಂತತಿಯದು ಸಂತಸ ಪಡೆಯಿತು, ಶ್ರೀರಾಮ ಸಹವಾಸದಲಿ.ಹೀಗೆ ರಾಮ, ಲಕ್ಷö್ಮಣ, ಸೀತೆಯರು ದಂಡಕಾರಣ್ಯದಲ್ಲಿದ್ದಾಗ ಅವರನ್ನು ಕಂಡವಳು ರಾವಣ ಸೋದರಿ ಶೂರ್ಪನಖಿ. ರಾಮನಲ್ಲಿ ಮನಸ್ಸಾಯಿತು ಆಕೆಗೆ. ಲಕ್ಷö್ಮಣನಲ್ಲಿಗೆ ಕಳುಹಿಸಿಕೊಟ್ಟ ರಾಮ, ಆ ದುಷ್ಟೆಗೆ ಬುದ್ಧಿ ಕಲಿಸುವ ತೆರದಿ. ಅಂಗಭAಗಕ್ಕೆ ಒಳಗಾಗಿ ಅವಮಾನಕ್ಕೀಡಾದವಳು ಸೀತೆಯ ಚೆಲುವನ್ನು ಹೊಗಳಿದಳು ರಾವಣನಲ್ಲಿ. ಕಾಮದಾಸೆಯಲ್ಲಿ ಅಂಕುಶ ಮೀರಿದ ಲಂಕೆಯ ಅಧಿಪತಿ, ಕಪಟ ವೇಷದಿಂದ ರಾಮ ಲಕ್ಷö್ಮಣರನ್ನು ಮರುಳುಗೊಳಿಸಿ, ಸೀತೆಯನ್ನು ಅಪಹರಿಸಿದ.ಕಾಣದಾದ ಸತಿಯನ್ನು ಹುಡುಕಿ ಹೊರಟ ಶ್ರೀರಾಮ ರಾವಣನನ್ನು ಎದುರಿಸಿ, ಬಿದ್ದಿದ್ದ ಜಟಾಯುವನ್ನು ಕಂಡ. ವಿವರವನ್ನು ಕೇಳಿದ. ಮಾರ್ಗಮಧ್ಯೆ ಕಬಂಧ ಎಂಬ ಅಸುರನನ್ನು ಕೊಂದ. ತನ್ನ ಆಗಮನಕ್ಕಾಗಿ ಕಾಯುತ್ತಿದ್ದ ಶಬರಿಗೆ ದರುಶನವನ್ನಿತ್ತು, ಅವಳನ್ನು ಧನ್ಯಗೊಳಿಸಿದ. ಆಂಜನೇಯ ಬಲವದು ಆ ಸಮಯದಲ್ಲಿಯೇ ಅವನನ್ನು ಸೇರಿತು. ವಾಲಿ ಸುಗ್ರೀವ ಸಹೋದರ ಕಲಹದಲ್ಲಿ ಭಾಗವಹಿಸಿ, ವಾಲಿಯನ್ನು ಕೊಂದ. ಸುಗ್ರೀವ ಸಹಾಯವನ್ನು ಸದಾ ತನ್ನದಾಗಿಸಿಕೊಂಡ. ಜಾಂಬವAತನ ನೆರವು ದೊರಕಿತು ರಘುಕುಲವೀರನಿಗೆ.ಜನಕಸುತೆಯನ್ನು ಹುಡುಕುವುದಕ್ಕೆ ಅಂಜನಾಸುತನನ್ನು ಕಳುಹಿಸಿಕೊಟ್ಟ. ಅಮಿತ ಬಲದಿಂದ ಸಮುದ್ರವನ್ನು ಉಲ್ಲಂಘಿಸಿದ ಹನುಮಂತ. ಶ್ರೀರಾಮಸತಿ ಸೀತೆಗೆ ಶ್ರೀರಾಮಾಂಕಿತದ ಮುದ್ರಿಕೆಯನ್ನಿತ್ತ. ಅವಳ ಸಂದೇಶವನ್ನು ಶ್ರೀರಾಮನಿಗೆ ತಿಳಿಸುವ ಮಾತುಕೊಟ್ಟ. ರಾವಣನ ಅಶೋಕವನವನ್ನು ಧೂಳೀಪಟ ಮಾಡಿದ. ತಡೆಯಲು ಬಂದ ರಕ್ಕಸರನ್ನು ಕೊಂದ. ಬಾಲಕ್ಕೆ ಬಿದ್ದ ಬೆಂಕಿಯಿAದ ಲಂಕೆಯನ್ನೇ ಸುಟ್ಟ. ಸೀತೆಯಿತ್ತ ಸಂದೇಶವನ್ನು ಶ್ರೀರಾಮನಿಗೆ ಹೇಳಿದ.ರಾಮ ರಾವಣರ ಮಧ್ಯೆ ನಡೆಯಿತದೋ ಘೋರ ಕಾಳಗ. ಅಸುರ ಕುಲದ ಹೆಸರೇ ಅಳಿದುಹೋಗುವಂತೆ ಪರಾಕ್ರಮ ತೋರಿದ ಶ್ರೀರಾಮಚಂದ್ರ. ರಾವಣ ಮರಣವನ್ನಪ್ಪಿದ. ವಿಭೀಷಣ ಲಂಕಾಧಿಪತಿ ಎನಿಸಿಕೊಂಡ.ರಾವಣ ಸೆರೆಯಲ್ಲಿದ್ದ ಸೀತೆಯನ್ನು ಮರಳಿ ತನ್ನವಳನ್ನಾಗಿಸಿಕೊಂಡ ಶ್ರೀರಾಮ ಅಯೋಧ್ಯೆಯನ್ನು ಮರಳಿ ಕಂಡ. ತನ್ನವರೆಲ್ಲರನ್ನೂ ನೋಡಿ ಹರ್ಷಗೊಂಡ. ಮಗನ ಮೈಯ್ಯಲ್ಲಿದ್ದ ಗಾಯಗಳನ್ನು ಕಂಡೊಡನೆಯೇ ಕೌಸಲ್ಯೆ ಕರುಳದು ನೊಂದಿತು. “ನಿನ್ನ ಕೋಮಲಕಾಯವನ್ನು ನೋಯಿಸಿದವರು ಯಾರು?” ಎಂದು ಕೇಳುತ್ತಾ, ಪೂರ್ಣ ನೊಂದಳು ರಾಮಮಾತೆ. ತಾಯಿಯನ್ನು ಸಂತೈಸಿದ ಅವಳ ಪ್ರಿಯಸುತ.ಅಯೋಧ್ಯೆಯ ಅಧಿಕಾರವದು ಈಗ ಶ್ರೀರಾಮನದ್ದಾಯಿತು. ಪಟ್ಟಾಭಿಷಿಕ್ತನಾದ ಪರಮ ಪಾವನ ಪುರುಷೋತ್ತಮ. ಒಂಭತ್ತು ಸಾವಿರ ವರ್ಷಗಳದು ಉರುಳಿಹೋದವು. ಶ್ರೀರಾಮನ ಆಳ್ವಿಕೆಯ ಆ ಕಾಲದಲ್ಲಿ ಪೂರ್ಣ ಅಯೋಧ್ಯೆ ಪರಿಪೂರ್ಣತೆಯನ್ನು ಹೊತ್ತುನಿಂತಿತು. ಎಲ್ಲಿ ನೋಡಿದರೂ ಸಮೃದ್ಧಿ, ಸಂಪನ್ನತೆ. ನೀತಿಶಾಸ್ತçಗಳಿಂದಲೇ ಹೆಸರು ಗಳಿಸಿತು ಅಯೋಧ್ಯೆ.ಹೀಗಿದ್ದಾಗಲೇ ರಘುಕುಲವದು ತನ್ನಿಂದ ಮುಂದಕ್ಕೆ ಮುಂದುವರಿಯಬೇಕೆAಬ ಬಯಕೆ ಮೂಡಿತು ರಾಮನಲ್ಲಿ. ಸಂತಾನದ ಅಪೇಕ್ಷೆ ಅವನದ್ದು. ಏಕಾಂತದಲ್ಲಿ ಸತಿ ಸೀತೆಯ ಜೊತೆಗೆ ಮನದ ಭಾವನೆಯನ್ನು ಹಂಚಿಕೊAಡ.“ಇಕ್ಷಾ÷್ವಕು ವಂಶ ಇದುವರೆಗೂ ಅವಿರತವಾಗಿ ಮುನ್ನಡೆಯುತ್ತಾ ಬಂದಿದೆ. ಈಗ ನಾನು ಮಕ್ಕಳನ್ನು ಪಡೆಯದೇ ಹೋದರೆ ನನ್ನಿಂದ ಈ ಕುಲ ಅಳಿಯಿತೆಂಬ ಕಳಂಕ ನನ್ನದಾಗುತ್ತದೆ. ಸಂಸಾರದ ಭ್ರಾಂತಿಯದು ತನ್ನಿಂದ ತೊಲಗಿಹೋಗಬೇಕಾದರೆ ಸಂತಾನದ ಏಳಿಗೆ ಆಗಬೇಕು. ಆದ್ದರಿಂದ ನಾವಿಬ್ಬರೂ ಕೂಡಿ ಸಂತಾನ ಪ್ರಾಪ್ತವಾಗಿಸಿಕೊಳ್ಳಬೇಕು ಎಂದು ಬಯಸುತ್ತಿದೆ ನನ್ನ ಮನಸ್ಸು” ಎಂದವನು ಅವಳ ಒಪ್ಪಿಗೆಯನ್ನು ಬಯಸಿದ.ಸೀತೆ ಚಿತ್ತವದು ತಾಯ್ತನದೆಡೆಗೆ ಆಕರ್ಷಿತವಾಗಿತ್ತು. ಮಗುವನ್ನು ಹೊಂದುವ ಸಹಜ ಆಸೆ ಅವಳದಾಗಿತ್ತು. ಅದನ್ನೇ ಹೇಳಿಕೊಂಡಳು ಪತಿಯಲ್ಲಿ. ಅವನ ಆಕಾಂಕ್ಷೆಯೇ ತನ್ನ ಆಕಾಂಕ್ಷೆ ಎಂದು ನುಡಿದಳು. ಮುದ್ದು ಶಿಶುವನ್ನು ಪಡೆಯುವ ಹಿರಿದು ಭಾಗ್ಯವದು ಸಕಲ ಹೆಂಗಳೆಯರಿಗೆ ದೊರೆಯುವುದೇ! ಎಂದು ಸಂದೇಹ ವ್ಯಕ್ತಪಡಿಸಿದ್ದಳು.ಹೀಗಿದ್ದಾಗಲೇ ಶ್ರೀರಾಮ ಆಸ್ಥಾನಕ್ಕೆ ಮುನಿಶ್ರೇಷ್ಠ ವಸಿಷ್ಠರ ಆಗಮನವಾಯಿತು. ಸಂತಾನದ ಬಯಕೆಯನ್ನು ಅವರಲ್ಲಿ ಹೇಳಿಕೊಂಡ ಶ್ರೀರಾಮ. “ನಿಮಗಿಬ್ಬರಿಗೂ ಸಂತಾನ ಭಾಗ್ಯವಿದೆ. ಮುಂದೆ ಒಳ್ಳೆಯದಾಗಲಿದೆ” ಎಂಬ ಒಳಿತಿನ ನುಡಿ ಅವರಿಂದ ಮೂಡಿಬಂತು. ಹರ್ಷಚಿತ್ತನಾದನು ಶ್ರೀರಾಮ. ಆಗಲೇ ವಸಂತಕಾಲವದು ಬಂತು… ಡಾ.ವಿಶ್ವನಾಥ್ ಎನ್.ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-127 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ತರಗತಿಗೆ ತಡವಾಗಿ ಹೋದ ಮಗಳು ತನ್ನನ್ನು ಅಪ್ಪಿಕೊಂಡ ಮಗಳ ತಲೆಯನ್ನು ನೇವರಿಸುತ್ತಾ…. ಏನಾಯ್ತು ಮಗಳೇ, ಇಷ್ಟೊಂದು ಸಂತೋಷದಲ್ಲಿರುವೆ? … ಎಂದು ಸುಮತಿ ಕೇಳಲು,…. “ಅಮ್ಮಾ …ನಿನಗೆ ಇನ್ನೂ ಉತ್ತಮ ಮಟ್ಟದ ಚಿಕಿತ್ಸೆಯನ್ನು ಕೊಡಿಸಹುದೆಂದು ಡಾಕ್ಟರ್ ಹೇಳಿದ್ದಾರೆ….. ನಾವು ಆದಷ್ಟು ಬೇಗ ಬೆಂಗಳೂರಿಗೆ ಹೋಗೋಣ…. ಅಲ್ಲಿನ ಕಿಡ್ನಿ ಫೌಂಡೇಶನ್ ಗೆ ನಿನ್ನನ್ನು ಕರೆದುಕೊಂಡು ಹೋಗುತ್ತಿದ್ದೇವೆ”….ಎಂದು ಮಗಳು ಹೇಳಿದಾಗ…. “ಏನು ಹೇಳುತ್ತಿದ್ದಯಾ? ನಾವು ಬೆಂಗಳೂರಿಗೆ ಹೋಗುವುದೇ?… ಬೆಂಗಳೂರಿಗೆ ಹೋಗಬೇಕಾದರೆ ಹಾಗೂ ಅಲ್ಲಿ ಚಿಕಿತ್ಸೆ ಪಡೆಯಬೇಕಾದರೆ ಹೆಚ್ಚಿನ ಹಣದ ಅಗತ್ಯವಿರುತ್ತದೆ…. ನಮ್ಮಲ್ಲಿ ಅಷ್ಟು ಹಣವಿಲ್ಲ…. ಸುಮ್ಮನೇ ತೊಂದರೆಗಳಿಗೆ ನಮ್ಮನ್ನು ಒಡ್ಡಿಕೊಳ್ಳುವುದು ಬೇಡ”…. ಎಂದು ಸುಮತಿ ಹೇಳಿದಾಗ ಮಗಳು ತಾಯಿಯ ಹಸ್ತವನ್ನು ತನ್ನ ಕರದಲ್ಲಿ ಭದ್ರವಾಗಿ ಹಿಡಿದು….” ಅಮ್ಮಾ …. ನೀನೇನೂ ಚಿಂತಿಸಬೇಡ… ನೀನು ಚಿಕಿತ್ಸೆ ಪಡೆಯುವುದಕ್ಕೆ ತಯಾರಾಗು…. ಬೆಂಗಳೂರಿಗೆ ಹೋಗಲು ನಮಗೆ ಸಹಾಯ ಮಾಡುತ್ತೇವೆ ಎಂದು ಸಣ್ಣ ಸಾಹುಕಾರರು ಮತ್ತು ಅಮ್ಮ ಇಬ್ಬರೂ ಭರವಸೆ ನೀಡಿದ್ದಾರೆ…. ನಾನು ವೈದ್ಯರನ್ನು ಕಂಡು ಈ ಬಗ್ಗೆ ಮಾತನಾಡುತ್ತೇನೆ ಮತ್ತು ನಿನ್ನನ್ನು ಡಿಸ್ಚಾರ್ಜ್ ಮಾಡಲು ವಿನಂತಿಸಿಕೊಳ್ಳುತ್ತೇನೆ…. ಆದಷ್ಟು ಬೇಗ ನಾವು ಬೆಂಗಳೂರಿಗೆ ಹೋಗೋಣ…. ಈ ಬಗ್ಗೆ ತಂಗಿಯ ಜೊತೆಗೂ ಮಾತನಾಡಿದ್ದೇನೆ…ಅವಳು ಸರಿ ಹೋಗಿ ಬನ್ನಿ ನಾನು ಇಲ್ಲಿಯೇ ಇದ್ದು ಅಮ್ಮನ ಪರವಾಗಿ ಶಾಲೆಗೆ ಹೋಗಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತೇನೆ ಎಂದು ಹೇಳಿದ್ದಾಳೆ…. ಅಕ್ಕನ ಮನೆಗೆ ಹೋಗಿ, ಬಾವ ನಮ್ಮ ಜೊತೆಗೆ ಬರುವಂತೆ ವಿನಂತಿಸಿಕೊಳ್ಳುತ್ತೇನೆ…. ಖಂಡಿತ ಅವರು ಒಪ್ಪುತ್ತಾರೆ”… ಎಂದಳು ಸುಮತಿಗೆ ಸಂತೋಷವಾಯಿತು. ತಾನು ಪ್ರತಿದಿನವೂ ಅನುಭವಿಸುತ್ತಿರುವ ಸಂಕಟ, ನೋವು ಇನ್ನಾದರೂ ಕಡಿಮೆಯಾಗುತ್ತದೆ ಎನ್ನುವ ಸಮಾಧಾನವೂ ಆಯಿತು. ಆದರೆ ಬೆಂಗಳೂರಿಗೆ ಹೋದರೆ ನಾವು ಎಲ್ಲಿ ಉಳಿದುಕೊಳ್ಳುವುದು? ಎನ್ನುವ ಚಿಂತೆ ಕಾಡಿತು…. “ನೀನು ಹೇಳಿದ್ದು ಎಲ್ಲವೂ ಸರಿ ಮಗಳೇ…. ಆದರೆ ಅಲ್ಲಿ ಹೋದರೆ ನಾವು ಎಲ್ಲಿ ಉಳಿದುಕೊಳ್ಳುವುದು?”… ಎಂದು ಸುಮತಿ ಕೇಳಿದಾಗ…. “ಅಮ್ಮಾ …ಬೆಂಗಳೂರಿನಲ್ಲಿ ನಮ್ಮ ಹಿರಿಯ ಮಾವ ( ಸುಮತಿಯ ಹಿರಿಯ ತಮ್ಮ) ಕುಟುಂಬ ಸಮೇತ ಅಲ್ಲಿಯೇ ಇದ್ದಾರಲ್ಲವೇ ?… ಅವರು ಯಾವ ಬಡಾವಣೆಯಲ್ಲಿ ವಾಸವಾಗಿದ್ದಾರೆ ಎನ್ನುವ ಬಗ್ಗೆ ದೊಡ್ಡಮ್ಮನನ್ನು ಕೇಳಿ ತಿಳಿದುಕೊಳ್ಳುತ್ತೇನೆ…. ಅವರ ವಿಳಾಸ ಪಡೆದು ಅಲ್ಲಿಗೆ ಹೋದರಾಯಿತು”…. ಎಂದಳು ಮಗಳು. ಅವಳು ಹೇಳಿದ್ದು ಸರಿ ಎನಿಸಿತು ಸುಮತಿಗೆ. ಹಾಸನದಿಂದ ಬೆಂಗಳೂರಿಗೆ ತನ್ನ ತಮ್ಮ ವರ್ಗವಾಗಿ ಹೋದ ನಂತರ ಸುಮತಿ ಒಮ್ಮೆಯೂ ಅವನನ್ನು ಭೇಟಿಯಾಗಿರಲಿಲ್ಲ. ಹಾಗಾಗಿ ತಮ್ಮನನ್ನು ನೋಡಬಹುದು ಮತ್ತು ಆಸ್ಪತ್ರೆಗೆ ಹೋಗಿ ಬರಲು ನಮಗೆ ಅವನು ಖಂಡಿತಾ ಸಹಾಯ ಮಾಡಿಯೇ ಮಾಡುತ್ತಾನೆ ಎನ್ನುವ ಭರವಸೆಯೂ ಮೂಡಿತು…. “ಸರಿ ಹಾಗೆಯೇ ಆಗಲಿ ಮಗಳೇ…. ನಾಳೆ ಬೆಳಗ್ಗೆ ಡಾಕ್ಟರ್ ರೌಂಡ್ಸ್ ಗೆ ಬರುವಾಗ ಈ ಬಗ್ಗೆ ಅವರೊಂದಿಗೆ ಮಾತನಾಡು”…. ಎಂದು ಸುಮತಿ ಮಗಳಿಗೆ ಹೇಳಿದಳು. ನಾಳೆ ಬೆಳಗ್ಗೆ ಕಾಲೇಜು ಮುಗಿದ ನಂತರ ದೊಡ್ಡಮ್ಮನ ಮನೆಗೆ ಹೋಗಿ ಮಾವನ ಅಡ್ರೆಸ್ ಪಡೆಯುವುದು ಎಂದು ಆ ಹುಡುಗಿ ತೀರ್ಮಾನಿಸಿದಳು. ಸಂಜೆ ಆಶ್ರಮಕ್ಕೆ ಹೋಗಿ ಬಂದು ರಾತ್ರಿ ಅಮ್ಮನ ಜೊತೆಗೆ ಆಸ್ಪತ್ರೆಯಲ್ಲಿ ಉಳಿದುಕೊಂಡ ಹುಡುಗಿಗೆ ರಾತ್ರಿಯೆಲ್ಲಾ ನಿದ್ರೆ ಬರಲಿಲ್ಲ. ಒಂದೊಂದೇ ಲೆಕ್ಕಾಚಾರ ಮನದಲ್ಲಿ. ಏನೇನೋ ಆಲೋಚನೆಗಳು ಸುಳಿದು ಅವಳ ನಿದ್ರೆಗೆಡಿಸಿದ್ದವು. ಮೊದಲೇ ತೀರ್ಮಾನಿಸಿದಂತೆ ಬೆಳಗ್ಗೆ ಬೇಗನೆ ಎದ್ದು ಆಶ್ರಮಕ್ಕೆ ಹೋದಳು. ಅಲ್ಲಿ ತನ್ನ ಕೆಲಸಗಳನ್ನೆಲ್ಲಾ ಮುಗಿಸಿ ಕಾಲೇಜಿಗೆ ಹೊರಟಳು. ಅಂದು ಕಾಲೇಜಿಗೆ ತಡವಾಯಿತು. ಗಡಿಬಿಡಿಯಲ್ಲಿ ತರಗತಿಯ ಕಡೆಗೆ ಹೋಗುತ್ತಿದ್ದಾಗ ಅದಾಗಲೇ ಲೆಕ್ಚರರ್ ತರಗತಿಯೊಳಗೆ ಪ್ರವೇಶಿಸಿ ಪಾಠ ಮಾಡುತ್ತಿದ್ದರು. ಹಾಗಾಗಿ ತರಗತಿಯ ಆಚೆಯೇ ನಿಂತಳು ಆ ಹುಡುಗಿ. ಪಕ್ಕದ ತರಗತಿಗೆ ಹೋಗಲು ಬಂದ ಅವಳ ಕಸಿನ್ ತರಗತಿಯ ಹೊರಗೆ ನಿಂತಿರುವ ಅವಳನ್ನು ಕಂಡು ಅವಳ ಬಳಿಗೆ ಬಂದು…. “ಏನಾಯ್ತು?…. ಏಕೆ ಇಷ್ಟು ತಡವಾಗಿ ಕಾಲೇಜಿಗೆ ಬಂದಿರುವೆ?… ಸದಾ ಬೇಗನೆ ಬರುತ್ತಿದ್ದ ನಿನಗೆ ಇಂದು ಏನಾಯಿತು?”… ಎಂದು ಕೇಳಿದ. ಅವಳ ಕಸಿನ್ ಕೂಡ ಇದೇ ಡಿಗ್ರಿ ಕಾಲೇಜಿನಲ್ಲಿ ಹೊಸದಾಗಿ ಲೆಕ್ಚರರ್ ಆಗಿ ಸೇರ್ಪಡೆಗೊಂಡಿದ್ದ. ಕಸಿನ್ ಕೇಳಿದ ಪ್ರಶ್ನೆಗೆ…. “ನನ್ನ ತಾಯಿಯ ಆರೋಗ್ಯ ಸರಿ ಇಲ್ಲ…. ಅವಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದೇನೆ”…. ಎಂದು ಹೇಳುತ್ತಾ ಈವರೆಗೂ ನಡೆದ ಎಲ್ಲಾ ವಿಚಾರವನ್ನೂ ಆತನಿಗೆ ತಿಳಿಸಿದಳು. ಅತ್ತೆಗೆ ಹುಷಾರಿಲ್ಲ ಎನ್ನುವುದನ್ನು ಅರಿತ ಆತನ ಮನಸ್ಸಿಗೆ ತುಂಬಾ ಬೇಸರವಾಯಿತು…. “ಒಂದು ಕೆಲಸ ಮಾಡು…. ತರಗತಿಗಳು ಮುಗಿದ ನಂತರ ನೀನು ಆಸ್ಪತ್ರೆಗೆ ಹೋಗುವಾಗ ನನಗಾಗಿ ಸ್ವಲ್ಪ ಹೊತ್ತು ಇಲ್ಲಿಯೇ ಕಾದಿರು…. ನನ್ನ ತರಗತಿ ಮುಗಿದ ನಂತರ ನಾವಿಬ್ಬರೂ ಜೊತೆಯಾಗಿಯೇ ನಮ್ಮ ಮನೆಗೆ ಹೋಗೋಣ…. ಅತ್ತೆಯನ್ನು ನೋಡಲು ನಿನ್ನ ಜೊತೆಗೆ ನಾನೂ ಬರುತ್ತೇನೆ”.. ಎಂದು ಹೇಳಿ, ಅವಳ ತರಗತಿಯ ಬಾಗಿಲನ್ನು ಡಸ್ಟರ್ನಿಂದ ಮೆಲ್ಲಗೆ ತಟ್ಟಿದನು. ತರಗತಿಯನ್ನು ತೆಗೆದುಕೊಳ್ಳುತ್ತಿದ್ದ ಲೆಕ್ಚರರ್ ಬಾಗಿಲ ಕಡೆಗೆ ನೋಡಿದಾಗ ತನ್ನ ಗೆಳೆಯ ತನ್ನ ತರಗತಿಯ ವಿದ್ಯಾರ್ಥಿನಿಯೊಂದಿಗೆ ಹೊರಗಡೆ ನಿಂತಿರುವುದು ಕಂಡಿತು….” ಒಂದು ನಿಮಿಷ ಇರಿ ಮಕ್ಕಳೇ…. ಇದೋ ಬಂದೆ”…. ಎಂದು ಹೇಳುತ್ತಾ, ಗೆಳೆಯನಿಗೆ ಹಸ್ತಲಾಘವ ಕೊಟ್ಟು,… “ಇದೇನು ಹುಡುಗೀ…, ತರಗತಿಗೆ ಬರದೇ ಇಲ್ಲೇಕೆ ನಿಂತಿರುವೆ? ….. ದಿನವೂ ತರಗತಿಗೆ ಸರಿಯಾದ ಸಮಯದಲ್ಲಿ ಹಾಜರಾಗುತ್ತಿದ್ದ ನಿನಗೆ ಇಂದೇನಾಯಿತು?…. ಎಂದಾಗ ಆತನ ಗೆಳೆಯ ತನ್ನ ಕಸಿನ್ ಬಗ್ಗೆ ಎಲ್ಲಾ ವಿವರವನ್ನೂ ತಿಳಿಸಿದ. ಆ ಲೆಕ್ಚರರ್ ಹುಡುಗಿಯನ್ನು ನೋಡಿ ಅನುಕಂಪದಿಂದ…. “ಸರಿ ಹೋಗು…. ತರಗತಿಯಲ್ಲಿ ಕುಳಿತುಕೋ”… ಎಂದು ಹೇಳಿ, ಮತ್ತೆ ಸಿಗೋಣ ಎಂದು ಗೆಳೆಯನಿಗೆ ಹೇಳುತ್ತಾ ಕೈ ಬೀಸಿ, ಲೆಕ್ಚರರ್ ತರಗತಿಗೆ ತೆರಳಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಪ್ರಾರಂಭಿಸಿದರು. ಅವಳ ಗೆಳತಿಯರು ಮತ್ತು ಇತರೇ ವಿದ್ಯಾರ್ಥಿಗಳು ಅವಳನ್ನು ಪ್ರಶ್ನಾರ್ಥಕವಾಗಿ ನೋಡಿದರು. ಆದರೆ ಇವಳ ಗಮನ ಯಾರಡೆಗೂ ಇರಲಿಲ್ಲ. ತರಗತಿಗಳೆಲ್ಲವೂ ಮುಗಿದ ನಂತರ ಇಂದು ತಾನು ಮಾಡಬೇಕಾದ ಕೆಲಸಗಳ ಬಗ್ಗೆ ಯೋಚಿಸುತ್ತಿದ್ದಳು. ತರಗತಿಯಲ್ಲಿ ಪಾಠದ ಕಡೆಗೆ ಕೂಡ ಗಮನ ಹರಿಸಲು ಅವಳಿಂದ ಸಾಧ್ಯವಾಗಲಿಲ್ಲ. ತರಗತಿಗಳಿಲ್ಲವೂ ಮುಗಿದ ಕೂಡಲೇ ಕಾಲೇಜಿನ ಆವರಣದಲ್ಲಿದ್ದ ಮರದ ಕೆಳಗೆ ಕುಳಿತು ತನ್ನ ಕಸಿನ್ ಬರುವಿಕೆಗಾಗಿ ಕಾಯುತ್ತಿದ್ದಳು. ಕಸಿನ್ ಬಂದು ಕೂಡಲೇ ಎದ್ದು ಆತನ ಜೊತೆಗೆ ಅವನ ಮನೆಯ ಕಡೆಗೆ ಹೆಜ್ಜೆ ಹಾಕಿದಳು. ದಾರಿಯುದ್ದಕ್ಕೂ ಮೌನವಾಗಿದ್ದ ಆ ಹುಡುಗಿಯನ್ನು ಕಂಡು ಆತನ ಮನ ಮರುಗಿತು.
ಧಾರಾವಾಹಿ ಸಂಗಾತಿ-29 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ ಮಹಾನ್ ಚೇತನ ಕನ್ನಡ ಕೋಟಿ ಪ್ರಕಾಶನ ನಿರ್ಮಾಣ ಗಡಿನಾಡ ಸೊಲ್ಲಾಪುರದಲಿ ಕನ್ನಡ ಕೋಟಿ ಪ್ರಕಾಶನ ಸ್ಥಾಪನೆ ಸ್ವಾತಂತ್ರ್ಯಾನಂತರ ಭಾರತದ ರಾಜ್ಯಗಳ ಪುನರ್ರಚನೆಗೆ ಭಾಷೆಯನ್ನು ಪ್ರಮುಖ ಆಧಾರವನ್ನಾಗಿ ಪರಿಗಣಿಸುವ ಚರ್ಚೆ ಆರಂಭವಾಯಿತು. ಇದೇ ಸಂದರ್ಭದಲ್ಲಿ ಗಡಿ ಪ್ರದೇಶಗಳಾದ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ನಿಪ್ಪಾಣಿ, ಬೀದರ ಮೊದಲಾದ ಭಾಗಗಳಲ್ಲಿ ಭಾಷಾ ಆಧಾರಿತ ಗುರುತಿನ ಪ್ರಶ್ನೆ ತೀವ್ರ ಸ್ವರೂಪ ಪಡೆದಿತು.ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಸೊಲ್ಲಾಪುರವನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆತಂಕ ಕನ್ನಡಿಗರಲ್ಲಿ ಮೂಡಿತ್ತು. ಕನ್ನಡಿಗರಲ್ಲಿದ್ದ ಅಜಾಗರೂಕತೆ ಹಾಗೂ ಸಂಘಟನೆಯ ಕೊರತೆಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದರು.ಆ ಸಮಯದಲ್ಲಿ ದೇಶದಾದ್ಯಂತ ಜನಗಣತಿ ಕಾರ್ಯ ಆರಂಭವಾಗಿತ್ತು. ಜನಗಣತಿಯಲ್ಲಿ ಜನರು ತಮ್ಮ ಮಾತೃಭಾಷೆಯನ್ನು ಯಾವ ಭಾಷೆಯೆಂದು ದಾಖಲಿಸುತ್ತಾರೋ, ಅದರ ಆಧಾರದ ಮೇಲೆಯೇ ಮುಂದಿನ ಭಾಷಾವಾರು ರಾಜ್ಯಗಳ ರಚನೆಗೆ ಮಹತ್ವದ ಆಧಾರ ಸಿಗುವ ಸಾಧ್ಯತೆ ಇತ್ತು. ಹೀಗಾಗಿ ಗಡಿನಾಡಿನ ಕನ್ನಡಿಗರಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿತ್ತು. ಒಳನಾಡಿನ ಕನ್ನಡಿಗರಿಗಿಂತ ಗಡಿನಾಡಿನ ಕನ್ನಡಿಗರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ಇಂಥ ಸಂದರ್ಭದಲ್ಲಿ ಕೆಲವು ಮಹಾರಾಷ್ಟ್ರ ಪರ ಸಂಘಟನೆಗಳು ಮುಗ್ಧ ಹಾಗೂ ಅಶಿಕ್ಷಿತ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ನಡೆಸಿದವು. ಮರಾಠಿಯನ್ನು ಮಾತೃಭಾಷೆಯಾಗಿ ದಾಖಲಿಸಿದರೆ ಹೆಚ್ಚಿನ ಸೌಲಭ್ಯಗಳು ದೊರೆಯುತ್ತವೆ ಎಂಬ ಸುಳ್ಳು ಪ್ರಚಾರ ಮಾಡಲಾಯಿತು. ಇದರಿಂದ ಕನ್ನಡಿಗರ ಅಸ್ತಿತ್ವಕ್ಕೆ ಧಕ್ಕೆಯಾಗುವ ಅಪಾಯ ಎದುರಾಯಿತು.ಇಂಥ ಗಂಭೀರ ಪರಿಸ್ಥಿತಿಯನ್ನು ಅರಿತ ಜಯದೇವಿ ತಾಯಿಯವರು ತಮ್ಮ ಸ್ವಂತ ಖರ್ಚಿನಲ್ಲಿ ಕನ್ನಡ ಕೋಟಿ ಎನ್ನುವ ಪ್ರಕಾಶನವನ್ನು ಪ್ರಾರಂಭಿಸಿದರು.ಅವರ ಜೊತೆ ಕನ್ನಡ ಪರ ಹೋರಾಟಗಾರರು ಮತ್ತು ಸಮಾಜಮುಖಂಡರು ಜನರಲ್ಲಿ ಕನ್ನಡಾಭಿಮಾನ ಬೆಳೆಸಲು ಮುಂದಾದರು. ಜನರಿಗೆ ಕನ್ನಡದ ಇತಿಹಾಸ, ಸಂಸ್ಕೃತಿ, ಸಾಹಿತ್ಯ ಹಾಗೂ ಭಾಷೆಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ಮನೆ ಮನೆಗೆ ತೆರಳಿ, ಸಭೆ-ಸಮಾರಂಭಗಳನ್ನು ಆಯೋಜಿಸಿ, ಕನ್ನಡವೇ ತಮ್ಮ ಮಾತೃಭಾಷೆ ಎಂದು ಜನಗಣತಿಯಲ್ಲಿ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದರು.ಈ ಜಾಗೃತಿ ಅಭಿಯಾನದ ಪ್ರಮುಖ ಭಾಗವಾಗಿ ಸೊಲ್ಲಾಪುರದಲ್ಲಿ “ಕನ್ನಡ ಕೋಟಿ” ಎಂಬ ಪ್ರಕಾಶನ ಸ್ಥಾಪಿಸಲಾಯಿತು. ಇದರ ಉದ್ದೇಶ ಗಡಿಭಾಗದ ಕನ್ನಡಿಗರನ್ನು ಒಗ್ಗೂಡಿಸುವುದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವುದು, ಮರಾಠೀಕರಣದ ಪ್ರಯತ್ನಗಳನ್ನು ಪ್ರಜಾಸತ್ತಾತ್ಮಕವಾಗಿ ಎದುರಿಸುವುದು ಹಾಗೂ ಕನ್ನಡಿಗರಲ್ಲಿ ಆತ್ಮವಿಶ್ವಾಸ ಮೂಡಿಸುವುದಾಗಿತ್ತು.ಕನ್ನಡ ಕೋಟಿಯ ಮೂಲಕ ಕನ್ನಡ ಶಾಲೆಗಳ ರಕ್ಷಣೆ, ಕನ್ನಡ ಸಾಹಿತ್ಯ ಕಾರ್ಯಕ್ರಮಗಳು, ಸಾಂಸ್ಕೃತಿಕ ಉತ್ಸವಗಳು, ಸಾರ್ವಜನಿಕ ಸಭೆಗಳು ಮತ್ತು ಜಾಗೃತಿ ಬರಹಗಳನ್ನು ಹೊರತಂದರು….ಜನಗಣತಿಯಲ್ಲಿ ಕನ್ನಡವನ್ನೇ ತಮ್ಮ ಮಾತೃಭಾಷೆಯಾಗಿ ದಾಖಲಿಸಿಕೊಳ್ಳುವಂತೆ ವ್ಯಾಪಕ ಪ್ರಚಾರ ನಡೆಸು ಪ್ಲಾಮಪ್ಲೇಟ್ಸ್ಗಳನ್ನು, ಬುಕ್ಲಿಟ್ಸ್ ಗಳನ್ನು ಪ್ರಕಟಿಸಲಾಯಿತು. ಹಳ್ಳಿ ಹಳ್ಳಿಗೆ ಹೋಗಿ ಹಂಚಲಾಯಿತು. ಗಡಿಭಾಗದ ಕನ್ನಡಿಗರಲ್ಲಿ ಹೊಸ ಚೈತನ್ಯ ಮೂಡಿಸಿ, ಕನ್ನಡ ಭಾಷೆ ಗಡಿಭಾಗದ ಜನರಲ್ಲಿ ಬಲವಾದ ಅಡಿಪಾಯ ಹಾಕಿದವು. ಹೀಗೆ ಸೊಲ್ಲಾಪುರದಲ್ಲಿ ಸ್ಥಾಪನೆಯಾದ ಕನ್ನಡ ಕೋಟಿ ಪ್ರಕಾಶನವು ಗಡಿನಾಡಿನ ಕನ್ನಡಿಗರ ಭಾಷಾ ಹಕ್ಕು, ಸಾಂಸ್ಕೃತಿಕ ಅಸ್ತಿತ್ವ ಹಾಗೂ ಸ್ವಾಭಿಮಾನವನ್ನು ಕಾಪಾಡುವ ಮಹತ್ವದ ಚಳವಳಿಯಾಗಿ ರೂಪುಕೊಡುವಲ್ಲಿ, ಭಾಷಾವಾರು ರಾಜ್ಯಗಳ ರಚನೆಯ ಇತಿಹಾಸದಲ್ಲಿ ಗಡಿನಾಡಿನ ಕನ್ನಡ ಜಾಗೃತಿಗೆ ಕೊಟ್ಟ ಕೊಡುಗೆ ಸ್ಮರಣೀಯವಾಗಿದೆ. “ಸುಲಭ ಕನ್ನಡದೊಳು | ಸಲ್ಲಲಿತ ವಚನಾದಿ |ಸಲ್ಲಿಸಿದರು ಅನುಭವ ದಾಸೋಹ – ನಮ್ಮವರು ಕಲಿಸಿದರು ಸರಳ ಶೈಲಿಯನು ||”ಎನ್ನು ತ ಜಯದೇವಿ ತಾಯಿಯವರು ಕನ್ನಡ ಸಾಹಿತ್ಯದ ಶರಣರು ಮತ್ತು ದಾಸರು ಕನ್ನಡ ಭಾಷೆಗೆ ನೀಡಿದ ಅಪೂರ್ವ ಕೊಡುಗೆ”ಸುಲಭ ಕನ್ನಡದೊಳು” ಎಂದರೆ ಎಲ್ಲ ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಕನ್ನಡದಲ್ಲಿ.ಸುಂದರವಾದ, ಲಲಿತವಾದ ವಚನಗಳು ಹಾಗೂ ಇತರ ಸಾಹಿತ್ಯ ಕೃತಿಗಳನ್ನು ಶರಣರು ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಜನರಿಗೆ ಹಂಚಿದರು. ಅದೇ ಅವರ ಅನುಭವ ದಾಸೋಹ.“ನಮ್ಮವರು ಕಲಿಸಿದರು ಸರಳ ಶೈಲಿಯನು” ನಮ್ಮ ಕನ್ನಡದ ಶರಣರು, ದಾಸರು ಮತ್ತು ಕವಿಗಳು ಅಲಂಕಾರಿಕ, ಕಠಿಣ ಭಾಷೆಯ ಬದಲು ಸರಳ, ಸುಲಭ ಮತ್ತು ಜನಸಾಮಾನ್ಯರಿಗೆ ಅರ್ಥವಾಗುವ ಶೈಲಿಯಲ್ಲಿ ಸಾಹಿತ್ಯ ರಚಿಸುವ ಪರಂಪರೆಯನ್ನು ಬೆಳೆಸಿದರು. ಕನ್ನಡದ ಶರಣರು ಮತ್ತು ದಾಸರು ಸರಳ ಕನ್ನಡದಲ್ಲಿ ವಚನಗಳು ಹಾಗೂ ಭಕ್ತಿಸಾಹಿತ್ಯವನ್ನು ರಚಿಸಿ, ತಮ್ಮ ಜೀವನಾನುಭವಗಳನ್ನು ಜನರೊಂದಿಗೆ ಹಂಚಿಕೊಂಡು, ಕನ್ನಡ ಸಾಹಿತ್ಯವನ್ನು ಜನಸಾಮಾನ್ಯರ ಭಾಷೆಯನ್ನಾಗಿ ರೂಪಿಸಿದ ಮಹತ್ವದ ಸೇವೆಯನ್ನು ಕೊಂಡಾಡುತ…. ಜನಸಾಮಾನ್ಯರಿಗೆ ತಲುಪಬೇಕಾದರೆ ಸರಳ ಕನ್ನಡ ಭಾಷೆಯಲ್ಲಿ ಸಾಹಿತ್ಯವನ್ನು ನಿರ್ಮಿಸಿ ಜನರಿಗೆ ಹಂಚುವ ಕಾರ್ಯಕ್ಕಾಗಿ….. ೧೯೫೦ ರಲ್ಲಿ ಕನ್ನಡ ಕೋಟಿ ಪ್ರಕಾಶನ ಪ್ರಾರಂಭಿಸಿದರು ಅದಕ್ಕೆ ಅಧ್ಯಕ್ಷರಾಗಿ ಡಾ. ಶಂಕರ ಮೂಗಿ ಅವರು ಸುಪ್ರೀಂ ಕೋರ್ಟಿನ ನ್ಯಾಯವಾದಿಗಳು(ನನ್ನ ತಂದೆ) ನಿರ್ವಹಿಸಿದರು. ಭಾಷಾ ಜಾಗೃತಿಯ ಕ್ರಾಂತಿಕಾರಿ ಹೆಜ್ಜೆ೧೯೫೦ನೇ ವರ್ಷ ಗಡಿಭಾಗದ ಕನ್ನಡಿಗರ ಪಾಲಿಗೆ ಅತ್ಯಂತ ಮಹತ್ವದ ತಿರುವಿನ ವರ್ಷವಾಗಿತ್ತು. ಭಾಷಾವಾರು ರಾಜ್ಯಗಳ ರಚನೆಯ ಚರ್ಚೆ ದೇಶಾದ್ಯಂತ ನಡೆಯುತ್ತಿದ್ದ ಸಂದರ್ಭದಲ್ಲಿ ಗಡಿಭಾಗಗಳಲ್ಲಿ ಕನ್ನಡ ಭಾಷೆಯ ಅಸ್ತಿತ್ವವೇ ಪ್ರಶ್ನಾರ್ಥಕವಾಗಿತ್ತು.ಇಂತಹ ಸಂಕಷ್ಟದ ಸಂದರ್ಭದಲ್ಲಿ ನಾಡು, ನುಡಿ ಮತ್ತು ಕನ್ನಡಿಗರ ಸ್ವಾಭಿಮಾನವನ್ನು ಉಳಿಸುವ ದೃಢ ಸಂಕಲ್ಪದೊಂದಿಗೆ ಡಾ. ಜಯದೇವಿ ತಾಯಿಯವರು ಮುಂಚೂಣಿಗೆ ಬಂದರು. ಜಯದೇವಿ ತಾಯಿಯವರಿಗೆ ಕನ್ನಡವೆಂದರೆ ಸಂಸ್ಕೃತಿ ಮತ್ತು ಆತ್ಮಗೌರವದ ಪ್ರತೀಕವಾಗಿತ್ತು. ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ, ಸಂಸ್ಕೃತಿ ಉಳಿದರೆ ಜನಾಂಗ ಉಳಿಯುತ್ತದೆ ಎಂಬ ದೃಢ ನಂಬಿಕೆಯನ್ನು ಅವರು ಹೊಂದಿದ್ದರು. ಗಡಿಭಾಗದ ಕನ್ನಡಿಗರಲ್ಲಿ ಭಾಷಾಭಿಮಾನ ಬೆಳೆಸುವ ಉದ್ದೇಶದಿಂದ ಸೊಲ್ಲಾಪುರದಲ್ಲಿ ತಮ್ಮ ಸ್ವಂತ ಹಣದಿಂದ “ಕನ್ನಡ ಕೋಟಿ” ಪ್ರಕಾಶನ ಸ್ಥಾಪಿಸಿದರು. ಆ ಕಾಲದಲ್ಲಿ ಯಾವುದೇ ದೊಡ್ಡ ಆರ್ಥಿಕ ನೆರವು ಅಥವಾ ಸರ್ಕಾರಿ ಬೆಂಬಲವಿಲ್ಲದೆ ಇಂತಹ ಸಂಘಟನೆಯನ್ನು ಕಟ್ಟುವುದು ಅತ್ಯಂತ ಸಾಹಸದ ಕೆಲಸವಾಗಿತ್ತು. ಆದರೆ ಜಯದೇವಿ ತಾಯಿಯವರ ಅಚಲ ಸಂಕಲ್ಪದ ಮುಂದೆ ಆರ್ಥಿಕ ಅಡೆತಡೆಗಳು ಅಡ್ಡಿಯಾಗಲಿಲ್ಲ.ಕನ್ನಡ ಕೋಟಿಯ ಮುಖ್ಯ ಉದ್ದೇಶ ಕನ್ನಡ ಭಾಷೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಕನ್ನಡಿಗರನ್ನು ಸಂಘಟಿಸುವುದು ಹಾಗೂ ಗಡಿಭಾಗದಲ್ಲಿ ಕನ್ನಡದ ಅಸ್ತಿತ್ವವನ್ನು ದೃಢಪಡಿಸುವುದಾಗಿತ್ತು. ಗ್ರಾಮದಿಂದ ಗ್ರಾಮಕ್ಕೆ ತೆರಳಿ ಕನ್ನಡದ ಮಹತ್ವವನ್ನು ವಿವರಿಸುವುದು, ಸಭೆ-ಸಮಾರಂಭಗಳನ್ನು ಆಯೋಜಿಸುವುದು, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಜನರಲ್ಲಿ ಅಭಿಮಾನ ಬೆಳೆಸುವುದು, ಯುವಕರನ್ನು ಕನ್ನಡ ಚಳವಳಿಯಲ್ಲಿ ತೊಡಗಿಸಿಕೊಳ್ಳುವುದು ಈ ಸಂಸ್ಥೆಯ ಪ್ರಮುಖ ಕಾರ್ಯಗಳಾಗಿದ್ದವು. ಜನಗಣತಿ ಸಂದರ್ಭದಲ್ಲಿ ಜನರು ತಮ್ಮ ಮಾತೃಭಾಷೆಯಾಗಿ ಕನ್ನಡವನ್ನೇ ದಾಖಲಿಸಿಕೊಳ್ಳುವಂತೆ ವ್ಯಾಪಕ ಜಾಗೃತಿ ಮೂಡಿಸಲಾಯಿತು. ಕನ್ನಡವನ್ನು ಮರೆತು ಬೇರೆ ಭಾಷೆಯನ್ನು ದಾಖಲಿಸಿಕೊಳ್ಳುವುದು ತಮ್ಮ ಸ್ವಂತ ಗುರುತನ್ನು ಕಳೆದುಕೊಳ್ಳುವುದಕ್ಕೆ ಸಮಾನ ಎಂಬ ಅರಿವನ್ನು ಜನರಲ್ಲಿ ಮೂಡಿಸುವಲ್ಲಿ ಕನ್ನಡ ಕೋಟಿ ಪ್ರಮುಖ ಪಾತ್ರವಹಿಸಿತು.ಜಯದೇವಿ ತಾಯಿಯವರು ನಡೆಸಿದ ಈ ಭಾಷಾ ಉತ್ತೇಜಕ ಪ್ರಯೋಗವು ಗಡಿನಾಡಿನ ಕನ್ನಡಿಗರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳವಳಿಯಾಗಿತ್ತು. ಕನ್ನಡದ ಮೇಲಿನ ಅಭಿಮಾನವನ್ನು ಜನಮನಗಳಲ್ಲಿ ಪುನರುಜ್ಜೀವನಗೊಳಿಸಿದ ಈ ಪ್ರಯತ್ನ ಮುಂದಿನ ಕನ್ನಡ ಹೋರಾಟಗಳಿಗೆ ಭದ್ರ ಬುನಾದಿಯಾಯಿತು. ಹೀಗೆ, ಸೊಲ್ಲಾಪುರದಲ್ಲಿ ಸ್ಥಾಪನೆಯಾದ ಕನ್ನಡ ಕೋಟಿ ಪ್ರಕಾಶನ ಸಂಸ್ಥೆ ಜಯದೇವಿ ತಾಯಿಯವರ ದೂರದೃಷ್ಟಿ, ಧೈರ್ಯ ಮತ್ತು ಕನ್ನಡಪ್ರೇಮದ ಜೀವಂತ ಸಂಕೇತವಾಗಿ ತಮ್ಮ ವೈಯಕ್ತಿಕ ಸಂಪತ್ತನ್ನು ಸಮಾಜದ ಹಿತಕ್ಕಾಗಿ ಮೀಸಲಿಟ್ಟು ಕನ್ನಡ ಭಾಷೆಯ ಉಳಿವಿಗಾಗಿ ಅವರು ಮಾಡಿದ ಈ ಕಾರ್ಯ ಕನ್ನಡ ಇತಿಹಾಸದಲ್ಲಿ ಅಕ್ಷರಶಃ ಚಿರಸ್ಥಾಯಿಯಾಗಿ ಉಳಿದಿದೆ. “ನನ್ನಿಯಿದು ಕಂಡದ್ದು ನುಡಿ | ತಾನಾಗಿ ಬಂದದ್ದು |ಜೇನು ಸವಿದಂತೆ ತುಂಬಿದ – ಪದಗಳದನಿ ದನಿಗೂಡಿಸಿ ಹಾಡುವೆನು || ಎನ್ನುತ ಜಯದೇವಿ ತಾಯಿಯವರುಈ ತ್ರಿಪದಿಯಲ್ಲಿ ತನ್ನ ಮನಸ್ಸಿನಲ್ಲಿ ಸಹಜವಾಗಿ ಮೂಡಿದ ಭಾವನೆಗಳು ಕನ್ನಡದಲ್ಲಿಯೇ…. ಅವು ಯಾರ ಒತ್ತಾಯದಿಂದಲೂ ಬಂದದ್ದಲ್ಲ.. ಸ್ವಯಂಸ್ಫೂರ್ತಿಯಿಂದ ಉದಿಸಿದವು. ಆ ಭಾವನೆಗಳು ಜೇನಿನ ಸವಿಯಂತೆ ಮಧುರವಾಗಿದ್ದು, ಪದಗಳ ರೂಪದಲ್ಲಿ ಹೊರಹೊಮ್ಮಿವೆ. ಆ ಮಧುರ ಪದಗಳಿಗೆ ಧ್ವನಿಯನ್ನು ಸೇರಿಸಿ ಹಾಡುವ ಮೂಲಕ ತಮ್ಮ ಸಂತೋಷ, ಕೃತಜ್ಞತೆ ಹಾಗೂ ಭಾವನೆಗಳನ್ನು ಲೋಕಕ್ಕೆ ಹಂಚಿಕೊಳ್ಳುವ ಸಂಕಲ್ಪವನ್ನು ತಾಯಿಯ ವರು ವ್ಯಕ್ತಪಡಿಸುತ್ತಾರೆ.(ಮುಂದುವರೆಯುವುದು) ಸವಿತಾ ದೇಶಮುಖ






