ಪ್ರಶ್ನಿಸು ಪ್ರಶ್ನಿಸುತ್ತಲೇ ಇರು

ಕವಿತೆ

ನಾಗರಾಜ ಹರಪನಹಳ್ಳಿ

ಮುಗ್ಧತೆ ಸೌಂದರ್ಯವ
ಹಾಗೆಲ್ಲ ಬೀದಿಗಿಡಲಾಗದು
ಒಲವೇ
ಬೀದಿಯಲ್ಲಿ ಉರಿವ ಕಣ್ಣುಗಳಿವೆ

ಹಾದಿ ಬೀದಿಗಳಲ್ಲಿ ಕರೋನಾ ಭಯ
ಅದನ್ನೂ ಮೀರಿದ ಖದೀಮರ‌ ಸಂಚಿದೆಯಿಲ್ಲಿ ;
ಸಮಾಜ ಇನ್ನೂ ಬದಲಾಗಿಲ್ಲ
ಬದಲಿಸಲು ಯತ್ನಿಸಿದ ಬುದ್ಧ, ಬಸವ ,ಅಕ್ಕ
ಅಲ್ಲಮ ಸೋತಿದ್ದಾರೆ….ಪುರೋಹಿತಶಾಹಿಯ ಕುತಂತ್ರಕೆ ಆನೆಕಾಲಿನ ಸಂಕೋಲೆಗೆ ಸಿಲುಕಿ
ನೆಲಕೆ ಹತ್ತಿದ ರಕ್ತದ ಕಲೆ ಕಲ್ಯಾಣದ ಬೀದಿ ಬೀದಿಗಳಲಿ
ಮತ್ತೆ ಅರಳಲಿ; ಅವೇ ಕಲ್ಯಾಣದ ಕ್ರಾಂತಿಯ ಹೂಚಿತ್ರಗಳಾಗಲಿ :
ಅತ್ತ ಅತ್ತತ್ತ ಒಮ್ಮೆ ಹೊರಳಿ ನೋಡು
ಯಾವ ಹೆಸರುಗಳ ಇತಿಹಾಸದಲ್ಲಿ ಹೂಳಲಾಗಿದೆಯೋ ಅಲ್ಲಿಂದಲೇ ಕಸುವು ಪಡೆದುಕೊ ಗೆಳತಿ, ಆ ಕನಸುಗಳ ಹಂಚು ಕಲ್ಯಾಣದ ಬೀದಿಗಳಲಿ ,ಹಾದಿಗಳಲಿ
ಅವು ಹಾದಿಬೀದಿಗಳ ಹಾಡಾಗಲಿ

ಗೋಮುಖ ವ್ಯಾಘ್ರಗಳು
ಖೆಡ್ಡತೋಡಿ ಸಹೋದರಿಯರ
ಮೆದುಳಿಗೆ ವಿಷ
ಉಣಿಸಲು ಸಜ್ಜಾದರೆ
ಹೆಣ್ಣಿಂದಲೇ ಹೆಣ್ಣ ಹಣಿಯಲು ಬಲೆ ಎಣೆದರೆ ನಾ ಸುಮ್ಮನೇ ಕುಳಿತಿರಲೇ ?

ವಿಷ ಕಂಡು ನಾನು ಮೌನಿಯಾಗಲೇ ??
ನೀ ತಿಳಿದವಳು ; ಮರಳಿ ಬಂದಾಳು …ಹುಸಿ ನಕ್ಕು , ಹೂ ನಗೆ ಚೆಲ್ಲಿಯೆಂದು ಅಂದುಕೊಳ್ಳಲೇ ??

ನೀ ಅಲ್ಲಿನ ಆಸೆ ಅಮಿಷ ಪ್ರಶಸ್ತಿಗಳ ಕಾಲಿಂದ ಒದೆಯುವೆ ಎಂಬುದು ಗೊತ್ತು ನನಗೆ ;
ಆದರೆ ಲೋಕಾಪಾವಾದವ ಪರಿವಾರ ಹುಟ್ಟಿಸದೇ ಬಿಡದು….
ಹೂಮಾಲೆಯ ಹಗ್ಗ ಮಾಡಿ ಉರುಲು ಹಾಕಿಯೇ ಸಿದ್ಧ ಸನಾತನಿಗಳು ,ಅದು ಅವುಗಳ ಜಾಯಮಾನ

ನೀ ಅಲ್ಲಿ ಸೌಜನ್ಯವನ್ನೇ ಬಿತ್ತಿದರೂ ಸಂಕೋಲೆ ತಪ್ಪದು

ಅಲ್ಲಿ ಆ ಸಂಘ ಸಮೂಹದಲ್ಲಿ ಇರದಿದ್ದರೂ ತಪ್ಪದು ಅಪವಾದ ಖಚಿತ :
ಸ್ತ್ರೀ ಕುಲಕೆ ಅವಮಾನಗಳ ಹೊರಿಸಿ‌ ಬಂಧಿಸಿದ ಜಗತ್ತಿದು

ಸೀತೆಯನ್ನೇ ಆಗ್ನಿ ಪ್ರವೇಶ ಮಾಡಿಸಿದ ಪರಿವಾರದ ದಂಡಿದು
ಬೇಡ ಗೆಳತಿ
ಬಂಗಾರದ ಕಿರಣದಿಂದ ನಿನ್ನ ಸುಟ್ಟಾರು
ಧಿಕ್ಕರಿಸು, ಧಿಕ್ಕರಿಸಿ‌ ಬಾ ಪರಿವಾರವ
ಒಂಟಿಯಾಗಿ ನಿಲ್ಲು, ಬಾಳ ಗೆಲ್ಲು

ಪರಿವಾರದ ವಿಷವ ಕಂಡವ ನಾನು
ಗೌರಿ ಕೊಂದವರ ಜೊತೆ ಎಂಥ ಮಾತು ಗೆಳತಿ??
ಬಾ , ಬಂದು ಬಿಡು
ನೀ ಈ ನೆಲದ ಕಾವ್ಯವಾಗು
ಪ್ರಶ್ನಿಸು, ಪ್ರಶ್ನಿಸುತ್ತಲೇ ಇರು

**********************************

2 thoughts on “ಪ್ರಶ್ನಿಸು ಪ್ರಶ್ನಿಸುತ್ತಲೇ ಇರು

  1. ಪ್ರಶ್ನಿಸುವುದು ಒಂದು ತರದ ಬಂಡಾಯದ ಮೂಲವಾಗಿದೆ.ಕವಿ ಮಹಿಳೆಯನ್ನು ಕೇಂದ್ರವಾಗಿಟ್ಟುಕೊಂಡ ಈ ಕವಿತೆ ಅಕ್ರೋಷದ ಮೂಲಕ ಆರಂಭವಾಗಿ ಆಕ್ರಮಣಕಾರಿಯಾಗಿ ನಿಂತು ಸವಾಲು ಹಾಕುತ್ತಲೆ ಮಿಂಚುತ್ತದೆ.‌..
    ನೈಸ್…

Leave a Reply

Back To Top