ಕಸಾಪಗೆ ಮಹಿಳಾ ಅಧ್ಯಕ್ಷರು???

ಹತ್ತಿರ ಬರುತ್ತಿರುವ ಕ.ಸಾ.ಪ. ಚುನಾವಣೆಗಳು

Kannada Sahitya Parishad Will Decide On 'Time Period And Lines' Of ...

ಆಕಾಶಕ್ಕೆ ಸಣ್ಣ, ಸಣ್ಣ ತೂತುಗಳು ಬಿದ್ದು, ಅವುಗಳಿಂದ ಸಣ್ಣ ಸಣ್ಣದಾಗಿ ತೊಟ್ಟಿಕ್ಕುವ ಸೋರುಮಳೆ. ಸೂರ್ಯನ ನಿಚ್ಚಳ ಬಿಸಿಲ ಬೆಳಕಿಲ್ಲದೇ ಸುಂಯ್ಯಂತ ಸಣ್ಣಗೆ ಸೂಸಿ ಬರುವ ತಂಗಾಳಿ ತುಂಬಿದ ಮಳೆ ಮೋಡಗಳು. ಉಣ್ಣೆಕಂಬಳಿ ಹೊದ್ದು ಮನೆಯೊಳಗೆ ಬೆಚ್ಚಗೆ ಮಲಗಬೇಕೆನ್ನುವ ಆಶ್ಲೇಷ ಮಳೆಯ ಸುಡುರುಗಾಳಿ. ಮುಗಿಲು ತುಂಬಾ ತುಂಬಿ ತುಳುಕುವ ಹೊಗೆಮಂಜು ಭರಿತ ಶೀತದ ವಾತಾವರಣ‌. ಇಂತಹ ಬರ್ಫಿನ ಶೀತಗಾಳಿಗಳ ನಡುವೆ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಳ ಸಿದ್ದತೆಯ ಸುದ್ಧಿಗಳು ಸಣ್ಣಗೆ ಕೇಳಿ ಬರುತ್ತಿವೆ. ಒಂದಿಬ್ಬರು ಅಭ್ಯರ್ಥಿಗಳು ಫೀಲ್ಡಿಗಿಳಿದು  ಮತಬೇಟೆಗೆ ತೊಡಗಿರುವ ವಿದ್ಯಮಾನಗಳು ಬೇರೆ,ಬೇರೆ ರೂಪ ಮತ್ತು ಮೂಲಗಳಲ್ಲಿ ಗೋಚರವಾಗುತ್ತಿವೆ.

ಕನ್ನಡ ಸಂಸ್ಕೃತಿಗೆ ಘೋರ ಅಪಚಾರದಂತೆ ಮತ್ತೆ ಯಥಾಪ್ರಕಾರ, ಹೊಲಬುಗೆಟ್ಟ ರಾಜಕಾರಣ ಮಾದರಿಯ ಜಾತಿ, ಮತ, ಪ್ರಾದೇಶಿಕತೆಯ ಪ್ರಲೋಭನೆಗಳು ಸಹಜವಾಗಿ ಮುಂಚೂಣಿಗೆ ಬರುತ್ತಿವೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನೂರೈದು ವರುಷಗಳ ಇತಿಹಾಸದಲ್ಲಿ ಮಹಿಳೆಯೊಬ್ಬಳು ಪರಿಷತ್ತಿನ ಅಧ್ಯಕ್ಷರಾದ ನಿದರ್ಶನವಿಲ್ಲ. ಅಷ್ಟೇಯಾಕೆ ಮಹಿಳೆಯರು ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ನಿದರ್ಶನಗಳೂ ಅಪರೂಪವೇ.

ನಮ್ಮನಡುವೆ ಐ.ಟಿ. ಬಿ.ಟಿ.ಯಂತಹ ಉನ್ನತ ವಿದ್ಯುನ್ಮಾನ ಉದ್ಯಮಗಳನ್ನೇ ಸ್ಥಾಪಿಸಿ ಹೆಸರು ಮಾಡಿದ ಮಹಿಳೆಯರಿದ್ದಾರೆ. ರಾಜಕೀಯವಾಗಿ ಮಹಿಳೆಯರು ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ರಾಜ್ಯಗಳನ್ನು, ದೇಶವನ್ನು ಆಳಿದ ಯಶಸ್ವಿ ನಿದರ್ಶನಗಳಿರುವಾಗ ಸಾಂಸ್ಕೃತಿಕ ಸಂಸ್ಥೆಯೊಂದರ ಚುಕ್ಕಾಣಿ ಹಿಡಿದು ಮುನ್ನಡೆಸುವುದು ಮಹಿಳೆಯಿಂದ ಸಾಧ್ಯವಿಲ್ಲವೇ.? ಹಾಗಿದ್ದಲ್ಲಿ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಮಹಿಳೆಯರ ಹೆಸರು ಚಲಾವಣೆಗೆ ಬರುತ್ತಿಲ್ಲವೇಕೆ.? ಮಹಿಳೆಯ ಹೆಸರು ಚಾಲನೆಗೆ, ಚರ್ಚೆಗೆ ಬಾರದಂತೆ ಪುರುಷ ಪ್ರಧಾನ ಪುರುಷಾಹಂಕಾರಗಳ ಸೂಕ್ಷ್ಮ ಶ್ಯಾಣೇತನಗಳು ವರ್ಕೌಟ್ ಆಗುತ್ತಲೇ ಇವೆ. ಈಗ್ಗೆ ಆರೇಳು ತಿಂಗಳುಗಳ ಹಿಂದೆ ” ಮಹಿಳೆಗೆ ಈ ಬಾರಿ ಪರಿಷತ್ತಿನ ಅಧ್ಯಕ್ಷಗಿರಿ ಮೀಸಲು ” ಎಂಬಂತೆ ಸಣ್ಣದಾಗಿ ಚರ್ಚೆಗೆ ಬರುತ್ತಿದ್ದಂತೆ ಅದು ತಮಣಿಯಾಯ್ತು. ಹಾಗೆ ಚರ್ಚೆ ಮಾಡಿದವರೇ ಪುರುಷಪರ ವಾಲಿಕೊಂಡರು. ಮತ್ತೊಂದು ಪ್ರಮುಖ ಸಂಗತಿಯೆಂದರೆ ಪ್ರಾದೇಶಿಕ ನ್ಯಾಯ ಸಮಾನತೆಯ ಅವಕಾಶಗಳದ್ದು.

ನಿಸ್ಸಂದೇಹವಾಗಿ ಪ್ರಾದೇಶಿಕತೆಗೆ ಅವಕಾಶ ದಕ್ಕಬೇಕೆಂಬುದು ಗಂಭೀರ ವಿಷಯ. ಸಾಂಸ್ಕೃತಿಕವಾಗಿ ಹಲವು ವಂಚನೆಗಳಿಗೆ ಈಡಾಗಿರುವ ಕಲ್ಯಾಣ ಕರ್ನಾಟಕಕ್ಕೂ ಒಂದು “ಅವಕಾಶ ನೀಡೋಣ” ಎಂಬ ಬೆಂಗಳೂರು ಕೇಂದ್ರಿತ ಸಾಂಸ್ಕೃತಿಕ ಹಿಡಿತಗಳ ಅಮೂರ್ತಧ್ವನಿ ಅನುಕಂಪ ಲೇಪಿತ ಉದಾರ ಸ್ವರವಾಗಿ ಕೇಳಿಬರುತ್ತದೆ. ಬೆಂಗಳೂರೇತರ ಕಲ್ಯಾಣ ಕರ್ನಾಟಕಕ್ಕೆ ಬೆಂಗಳೂರಿನ ಮರ್ಜಿ, ಮುಲಾಜು, ಹಂಗಿನ ದೇಹಿಭಾವಗಳಿಂದ ಬಿಡುಗಡೆಯ ಅಗತ್ಯವಿದೆ.

ಪ್ರಾದೇಶಿಕ ಪ್ರಜ್ಞೆಯು ಪರದೇಶಿ ಪ್ರಜ್ಞೆಯನ್ನುಂಟು ಮಾಡುವಂತಾಗುತ್ತಿದೆ. ಮತ್ತೆ ಮತ್ತೆ ಬೆಂಗಳೂರು, ಮೈಸೂರು ಪ್ರಾಂತ್ಯಗಳೆಂಬ ದಕ್ಷಿಣದ ದಾಕ್ಷಿಣ್ಯದಲ್ಲಿ ಬದುಕುತ್ತಿರುವ ಭಾವಗಳು ಬಂಧುರಗೊಂಡು, ಕಲ್ಯಾಣ ಕರ್ನಾಟಕವು ಸಾಂಸ್ಕೃತಿಕ ಅವಕಾಶಗಳ  ಅಪೌಷ್ಟಿಕತೆಯಿಂದ ನರಳುವಂತಾಗಿದೆ. ಕಲ್ಯಾಣ ಕರ್ನಾಟಕಕ್ಕೆ ಸಾಂಸ್ಕೃತಿಕ ಹಕ್ಕಿನೊಡೆತನ ಸಿಗುವುದು ಬೇಡವೇ.?  ಅಲ್ಲಿನವರು ಹಕ್ಕಿನ ಒಡೆಯರಾಗುವುದು ಯಾವಾಗ.? ಇದು ಸಾಹಿತ್ಯ ಪರಿಷತ್ತಿಗೆ ಮಾತ್ರ ಅನ್ವಯವಾಗದೇ ಅಕಾಡೆಮಿಗಳು ಸೇರಿದಂತೆ ಪ್ರಾಧಿಕಾರ, ಪ್ರತಿಷ್ಠಾನ ಇತರೆ ಎಲ್ಲ ಸಾಂಸ್ಕೃತಿಕ ಸಂದರ್ಭಗಳಿಗೂ ಲಾಗೂ ಆಗುತ್ತದೆ. ಮತ್ತೊಂದು ಅಪಾಯದ ಬೆಳವಣಿಗೆ ಇಲ್ಲಿದೆ.

ಅದೇನೆಂದರೆ : ಬಲಾಢ್ಯ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗ ಜನಾಂಗದವರು ” ನಮ್ಮ ಜನಾಂಗದ ಓಟುಗಳು ಇಷ್ಟಿಷ್ಟಿವೆ. ನಮ್ಮ ಜಾತಿ ಮಠಗಳು ನಮ್ಮ ಬೆಂಬಲಕ್ಕಿವೆ ” ಎಂಬ ಮತಪೆಟ್ಟಿಗೆ ಲೆಕ್ಕಾಚಾರಗಳು ರಾಜಾ ರೋಷವಾಗಿಯೇ ಚರ್ಚೆಯಾಗುವುದು ಅಚ್ಚರಿಯೇನಲ್ಲ!. ಮತಪ್ರಜ್ಞೆಗಳ ಲೆಕ್ಕಾಚಾರದಲ್ಲಿ ಬ್ರಾಹ್ಮಣ ಸಮುದಾಯ ಹಿಂದೆ ಬಿದ್ದಿಲ್ಲ. ಸೂಕ್ಷ್ಮಾತೀಸೂಕ್ಷ್ಮ ಹವಣಿಕೆಯ ಮುಂಚೂಣಿಯಲ್ಲಿದೆ ಎನ್ನುವುದನ್ನು ಮರೆಯಲಾಗದು. ಸಾಹಿತ್ಯ ಪರಿಷತ್ತು ಜಾತಿ, ಮತ, ಧರ್ಮ, ಲಿಂಗ ತಾರತಮ್ಯಗಳನ್ನು ಮೀರಿ ನಿಲ್ಲುವ ” ಮನುಷ್ಯ ಜಾತಿ ತಾನೊಂದೇ ಒಲಂ ” ಎಂಬ ಘೋಷವಾಕ್ಯ ಮೆರೆಯಬೇಕಲ್ಲವೇ.? ಅದೆಲ್ಲ ಹೇಳ ಹೆಸರಿಲ್ಲದೇ ಪರಿಷತ್ತು ಚುನಾವಣೆಗಳು ಕೊಳಕು ರಾಜಕಾರಣವನ್ನು ಮೀರಿಸುತ್ತಿರುವುದು ಕನ್ನಡ ಭಾಷೆ, ಸಂಸ್ಕೃತಿಗಳ ಘೋರ ದುರಂತವೇ ಹೌದು.

ಒಂದು ಮೂಲದ ಪ್ರಕಾರ ಈ ಬಾರಿ ಕ. ಸಾ. ಪ. ಚುನಾವಣೆಗಳು ಜರುಗಿದರೆ ಅಂದಾಜು ನಾಲ್ಕು ಲಕ್ಷದಷ್ಟು ಮತದಾರರು ಮತ ಚಲಾಯಿಸಲಿದ್ದಾರೆ. ಸರಕಾರಿ ಅಂಚೆವೆಚ್ಚದ ಐದು ರುಪಾಯಿ ಖರ್ಚಿನ ಒಂದು ಮನವಿಪತ್ರ ಬರೆದು ಮತ ಯಾಚಿಸಬೇಕೆಂದರೆ ಓರ್ವ ಹುರಿಯಾಳು ಕನಿಷ್ಠ ಇಪ್ಪತ್ತು ಲಕ್ಷದಷ್ಟು ಹಣ ಖರ್ಚು ಮಾಡಲೇಬೇಕು. ಅಷ್ಟಕ್ಕೂ ಒಣ ಮನವಿಪತ್ರಕ್ಕೇ ಮತಗಳು ಖಂಡಿತಾ ಉದುರಲಾರವು. ಮತದಾರನ ವಯಕ್ತಿಕ ಭೇಟಿ ಮಾಡುವುದು ಸೇರಿದಂತೆ ತಾಲೂಕಿಗೊಂದಾದರೂ ಮೀಟಿಂಗ್, ಇನ್ನೂರಿಪ್ಪತ್ತೈದು ಕಡೆ ಮಾಡಬೇಕು. ಮತ್ತು ಜಿಲ್ಲೆಗೊಂದರಂತೆ ಮೂವತ್ತು ಜಿಲ್ಲಾ ಮೀಟಿಂಗ್. ಬೆಂಗಳೂರಿನಲ್ಲಿ ನೂರಾರು ಕಡೆ ಸಭೆ ಮಾಡಬೇಕಾಗತ್ತದೆ. ಹೀಗೆ ಕ.ಸಾ.ಪ. ರಾಜ್ಯಾಧ್ಯಕ್ಷನಾಗಲು ಕೋಟಿ, ಕೋಟಿ ಹಣಖರ್ಚು ಮಾಡಬೇಕಾದ ಒಂದು ಬಗೆಯ ಅನಿವಾರ್ಯಸ್ಥಿತಿ ನಿರ್ಮಾಣಗೊಂಡಿದೆ. ಇದು ಸಾಮಾನ್ಯ  ಸಾಹಿತಿಗಳಿಂದ ಅಕ್ಷರಶಃ ದುಃಸಾಧ್ಯದ ಮತ್ತು ದುಃಖದ ಸಂಗತಿ. ಹೀಗಾಗಿ ಸಾಹಿತ್ಯ ಪರಿಷತ್ತು ಚುನಾವಣೆ ಎಂದರೆ ವಿಧಾನ ಪರಿಷತ್ತಿನ ಚುನಾವಣೆಯನ್ನು ಮೀರಿಸುವಂತಾಗಿದೆ.

ಮತ್ತೊಂದು ಬಹುಮುಖ್ಯ ಸಂಗತಿಯೆಂದರೆ ಐದುವರ್ಷದ ಅವಧಿಗೆ ಬೈಲಾ ಬದಲಾಯಿಸಿದಂತೆ ಕ.ಸಾ.ಪ. ಚುನಾವಣೆ ನಿಯಮ ಬದಲಿಸಿ ಸರಕಾರಿ ನೌಕರ ಸಂಘದ ಮಾದರಿಯಲ್ಲಿ ಚುನಾವಣೆಗಳು ನೆರವೇರುವಂತೆ ಬೈಲಾ ತಿದ್ದುಪಡಿ ಆಗಬೇಕು. ಅಂದರೆ ತಾಲೂಕು, ಜಿಲ್ಲಾಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ರಾಜ್ಯಾಧ್ಯಕ್ಷರ ಆಯ್ಕೆಯ ಅವಕಾಶಗಳಿರಬೇಕು. ಈಗ ನೇರವಾಗಿ ಸಾಮಾನ್ಯ ಮತದಾರರಿಂದ ರಾಜ್ಯಾಧ್ಯಕ್ಷರ ಆಯ್ಕೆ ನಡೆಯುತ್ತದೆ. ಆ ಮೂಲಕ ಜಿಲ್ಲಾಧ್ಯಕ್ಷರ, ತಾಲ್ಲೂಕು ಅಧ್ಯಕ್ಷರ ಮಹತ್ವ ಕಡಿಮೆ ಮಾಡಿದಂತಾಗುತ್ತದೆ. ಹಾಗೆಯೇ ಜಿಲ್ಲಾಧ್ಯಕ್ಷರಾದವರು ತಾಲ್ಲೂಕು ಪದಾಧಿಕಾರಿಗಳನ್ನು ನೇಮಿಸುವ ಅಧಿಕಾರ ಹೊಂದಿರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ವಿರೋಧಿಯಾಗಿದೆ. ಇಂತಹ ಕೆಲವು ತಿದ್ದುಪಡಿಗಳ ತುರ್ತು ಅಗತ್ಯವಿದೆ.

ಪರಿಷತ್ತಿನ ಸದಸ್ಯತ್ವ ಹಾಗೂ ಮತದಾನದ ಹಕ್ಕು ಬೇರೆ ಬೇರೆಯಾಗಬೇಕು. ಕುರಿತೋದದ ಕಾವ್ಯ ಪ್ರಯೋಗಿಗಳನೇಕರು ಎಂಬಂತೆ ಅಂದರೆ ಇ.ಎ.ಹೆ.ಗುರುತಿನ ಬಹುಪಾಲು ಮತದಾರರಿದ್ದಾರೆ. ಕ.ಸಾ.ಪ. ಸದಸ್ಯತ್ವ ಹುಟ್ಟುಹಾಕುವ ವಿಷಮಜಾಲವೇ ಇಲ್ಲಿದೆ. ಜಾತಿನಿಷ್ಠ ನೀಚ ಮನಸುಗಳ ಕೊಳಕು ಹುನ್ನಾರಗಳು ಅಪಾಯದಮಟ್ಟ ಮೀರಿ ಬೆಳೆದು ಸದಸ್ಯತ್ವದ ಜಾತಿಜಾಲ ಹೆಣೆದಿವೆ. ಬರೀಜಾತಿ ಪಾರಮ್ಯವಲ್ಲದೇ ಒಳಜಾತಿ, ಉಪಜಾತಿ, ನೆಂಟರಿಷ್ಟರನ್ನೇ ಸದಸ್ಯರನ್ನಾಗಿಸಿರುವ ಕೊಚ್ಚೆ ರಾಜಕಾರಣ ಪರಿಷತ್ತಿನೊಳಗೆ ನುಸುಳಿ ಕೆಲವು ವರ್ಷಗಳೇ ಕಳೆದು ಪರಿಷತ್ತಿನ ಪಾವಿತ್ರ್ಯಕ್ಕೆ ಧಕ್ಕೆಯುಂಟಾಗಿದೆ. ಬಲಾಢ್ಯ ಮೇಲ್ಜಾತಿಗಳ ಅಧಿಪತ್ಯದಲ್ಲಿ ಪರಿಷತ್ತಿನ ಅಸ್ಮಿತೆ ಎಂಬಂತಾಗಿದೆ. ಅದೆಲ್ಲ ರಿಪೇರಿ ಮಾಡಲು ಸಾಧ್ಯವೇ.? ಕಡೆಯಪಕ್ಷ ಕನಿಷ್ಠ ಮಟ್ಟದಲ್ಲಾದರೂ ಸಾಹಿತ್ಯದ ಓದು, ಬರಹ, ಸಾಹಿತ್ಯ ಕೃತಿ ರಚನೆಗಳ ಅಗತ್ಯ ಮಾನದಂಡಗಳನ್ನು ಮತದಾರ ಹಾಗೂ ಪದಾಧಿಕಾರಿ ಸ್ಪರ್ಧೆಗಳಿಗೆ ಕಡ್ಡಾಯವಾಗುವ ನಿಯಮಗಳನ್ನು ರೂಪಿಸಬೇಕು. ಆ ಮೂಲಕ ಪರಿಷತ್ತು ಸ್ವಲ್ಪಮಟ್ಟಿಗಾದರೂ ಜಾತಿ, ಮತ, ಧರ್ಮ, ಲಿಂಗ ತಾರತಮ್ಯ ಮುಕ್ತವಾಗಬೇಕು.

*****************************

  ಮಲ್ಲಿಕಾರ್ಜುನ ಕಡಕೋಳ

11 thoughts on “ಕಸಾಪಗೆ ಮಹಿಳಾ ಅಧ್ಯಕ್ಷರು???

  1. Kuvempu avara Nudi Nija Manushyya Jaathi Thanondevalam…Samajadalli Hennighu Prostha Kodbeaku Gurujee… Mahiela Sablikarna annodhu Pusthkagalalli Mele ide…

  2. ನಿಜ ಸ್ನೇಹಿತರೆ ನಿಮ್ಮ ಬರಹಕ್ಕೆ ಜಯವಾಗಲಿ

  3. ಸರ್
    ವಾಸ್ತವಿಕ ಬರಹ —- ಅತ್ಯಂತ ಜ್ವಲಂತ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದೀರಿ. ಕಸಾಪಕ್ಕೆ ಕಲ್ಯಾಣ ಕರ್ನಾಟಕದವರು
    ಅಧ್ಯಕ್ಷರಾಗಬೇಕೆಂಬ ಬೇಡಿಕೆ ಕೇವಲ ಅವಕಾಶದ ಮಾತಲ್ಲ. ಕರುನಾಡಿಗರು ಭಾವನಾತ್ಮಕವಾಗಿ ಒಂದಾಗುವ ಪ್ರಕ್ರಿಯೆ.ಇದಕ್ಕೆ ಮಾನ್ಯತೆ ಸಿಗಬೇಕು.

  4. ಸರ್, ಎಲ್ಲವನ್ನೂ ಲೆಕ್ಕಾಚಾರ ಮಾಡಿ ವಿವರಿಸಿದ್ದೀರಿ. ಸಾಹಿತ್ಯ ಕ್ಷೇತ್ರದ ರಾಜಕೀಯದಲ್ಲಿ ಪರಿಷತ್ತಿನ ಪಾವಿತ್ರ್ಯತೆ ಉಳಿದೀತೆ? ಎಳೆ ಎಳೆಯಾಗಿ ಮೂಡಿ ಬಂದಿದೆ ನಿಮ್ಮ ಬರಹ!!

  5. ಪರಿಷತ್ತಿನ ಒಳಸುಳಿಗಳ ಅನಾವರಣ.. !!!
    ಲೇಖಕನಿಂದ ಹಿಡಿದು ಮತದಾರನವರೆಗೂ; ಬರವಣಿಗೆಯಿಂದ ಹಿಡಿದು ಚುನಾವಣೆಯವರೆಗೂ
    ಸಾಮಾಜಿಕ ಜಾಲತಾಣಗಳಿಂದ ಹಿಡಿದು ಪರಿಷತ್ತಿನ ಮೆಟ್ಟಿಲವರೆಗೂ ಈ ಸಾಹಿತ್ಯ ಲೋಕದಲ್ಲಿ ರಾಜಕೀಯವಡಗಿದೆ. ಇದು ಸಾಹಿತ್ಯ ಲೋಕದ ದುರಂತ!!

  6. ಉತ್ತಮ ಚಿಂತನೆ.. ಈ ಸಾಹಿತ್ಯ ಪರಿಷತ್ತು ನನ್ನ ಪ್ರಕಾರ ಅಗತ್ಯ ಇಲ್ಲ. ಮತದಾರನಿಗೆ ಲಂಚ ಕೊಡಬೇಕು ಮತ ಹಾಕಲು. ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳೇ ಅರ್ಥ ಹೀನ. ಮೌಲ್ಯಯುತ ಕಾಲಘಟ್ಟದಿಂದ ಕೆಳಗೆ ಜರಿದು ಅವಿವೇಕಿಗಳ ಲಾಭಿ ಕೊಚ್ಚೆಯಲ್ಲಿ ಬಿದ್ದು ಸಾಹಿತ್ಯ ಲೋಕ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಭಾಷೆ ಹೆಸರಿನಲ್ಲಿ ಹಣ ಪೀಕುವ ದಂಧೆ ನಡೆಯುತ್ತಿದೆ. ಹೆಸರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತವೆ. ಮೊದಲನೇ ದಿನ ಆಡಳಿತ ಪಕ್ಷದ ಬಾವುಟಗಳು ಹಾರಾಡುತ್ತವೆ. ಆಡಳಿತ ಪಕ್ಷದ ಭಂಡ ಬಂಡಾಯ ಸಾಹಿತಿಗಳೆಂಬ ರಾಜಕೀಯ ಪಟುಗಳ ಮುಖ್ಯ ವೇದಿಕೆ ಭಾಷಣಗಳು.. ಅದೇನೋ ಕವಿಗೋಷ್ಠಿ ಅಂತೆ. ಎರಡನೇ ದಿನ ಸಮ್ಮೇಳನ ನಡೆಯುವ ಸ್ಥಳದ ಲೋಕಲ್ ಜಿಲ್ಲೆಯ ರಾಜಕಾರಣಿಗಳು, ಆಡಳಿತ ಮತ್ತು ವಿರೋಧ ಪಕ್ಷದವರ ಪರ ಬಾವುಟಗಳ ನಡುವೆ ಲೋಕಲ್ ರಾಜಕೀಯ ಪಕ್ಷಗಳ ಕೃಪಾಪೋಷಿತ ಸಾಹಿತಿ? ಗಳ ಒಗ್ಗರಣೆ ಭಾಷಣ ಮತ್ತು ಕಾವ್ಯ, ಮೂರನೇ ದಿನ ರಾಜ್ಯದ ವಿರೋಧ ಪಕ್ಷಗಳ ನಾಯಕರ ಬಾವುಟಗಳ ಹಾರಾಟ. ಈ ಮಧ್ಯೆ ಸಮಾನಾಂತರ ವೇದಿಕೆ ಮೇಲೆ ನೂರು ಜನ ಕುಳಿತು, ಸಭಾಂಗಣದಲ್ಲಿ ವೇದಿಕೆ ಮೇಲೆ ಕುಳಿತವರ ಬಂಧು ಮಿತ್ರರ ಕೂಟ. ಹೆಸರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತವೆ. ಆದರೆ,ಇದಕ್ಕಾಗಿ, ಕೋಟಿಗಟ್ಟಲೆ ಹಣ ದುಂಧು ಮಾಡಲಾಗುತ್ತದೆ. ಕನ್ನಡವೂ ಉದ್ದಾರ ಆಗೋದಿಲ್ಲ. ಭೋಜನ ಮಸ್ತಿ ವ್ಯವಸ್ಥೆ, ಸಮ್ಮೇಳನ ನಡೆಯುವ ಪ್ರದೇಶದಲ್ಲಿ ಶಿಕ್ಷಕರು,ಮಕ್ಕಳ ಓಡಾಟ. ಪತ್ರಿಕೆ ಮಾಧ್ಯಮಗಳಲ್ಲಿ ರಾಜಕಾರಣಿಗಳ ಭಾಷಣದ ಉಗುಳು ರಾಜ್ಯಾದ್ಯಂತ ಭಿತ್ತರ, ಪ್ರಚಾರ. ಸಾಹಿತ್ಯಕ ವಿಷಯದ ತುಣುಕು ಸುದ್ದಿಗಳು ತಿಣುಕಾಟ ಮಾಡುತ್ತಿರುತ್ತವೆ. ಇದೆಲ್ಲಾ ಬೇಕಾ ಕನ್ನಡಿಗರೇ… ಬರೀ ಒಣ ಪ್ರತಿಷ್ಠೆ. ಯಾವುದೋ ಒಂದು ಪತ್ರಿಕೆಯಲ್ಲಿ ಪ್ರಕಟವಾದ ಒಂದೇ ಕವನ ಬರೆದವರೂ ಭಾರೀ ದೊಡ್ಡ ಕವಿಗಳೆಂದು ಮುದ್ರಿತ ಕವನ ವಾಚಿಸುವವರ ಕಾವ್ಯ ಬರೆದವನಿಗೇ ಪ್ರೀತಿ. ಸಾಕಪ್ಪ ಸಾಕು ಈ ಸಾಹಿತ್ಯ ಪರಿಷತ್ತು ಸಹವಾಸ.
    ಜೆ.ಎಮ್ ರಾಜಶೇಖರ
    ಭಾರತ ದೇಶದ ಪೌರ
    ರಾಣೇಬೆನ್ನೂರು

Leave a Reply

Back To Top