ಬೆಳಗಾಗ ನಾನೆದ್ದು ಯಾರ್‍ಯಾರ ನೆನೆಯಲಿ
ಅಂಕಣ ಬರಹ
ಬೆಳಗು ಎನ್ನುವುದೊಂದು ಸುಂದರ ಅನುಭೂತಿ. ಮನೆಯ ಮಾಳಿಗೆಯ ಗಾಜಿನ ಹಂಚಿನಿಂದಲೋ, ಅಪಾರ್ಟ್ಮೆಂಟಿನ ಬಾಲ್ಕನಿಯ ಬಾಗಿಲಿನಿಂದಲೋ, ರಾತ್ರಿಪಾಳಿ ಮುಗಿಸಿ ಮರಳುತ್ತಿರುವ ಕ್ಯಾಬ್ ನ ಕಿಟಕಿಯಿಂದಲೋ ಸಿಕ್ಕಿದ ಅವಕಾಶಗಳನ್ನೆಲ್ಲ ಬಳಸಿಕೊಂಡು ಹುಟ್ಟುವ ಬೆಳಗು ಹೊಸದಿನವೆನ್ನುವ ಹೊಸ ಚೈತನ್ಯವನ್ನು ದೊರಕಿಸಿಕೊಡುತ್ತದೆ. ತುಳಸಿಕಟ್ಟೆಯ ಹೊಸಮಣ್ಣಿನಲ್ಲಿ ಉರಿಯುತ್ತಿರುವ ಅಗರಬತ್ತಿಯ ಪರಿಮಳ ರಸ್ತೆ ದಾಟಿದರೆ, ರಸ್ತೆಯ ತುದಿಯಲ್ಲಿರುವ ಟೀ ಅಂಗಡಿಯ ಘಮ ಮೇನ್ ರೋಡನ್ನು ತಲುಪುತ್ತದೆ; ಬಸ್ ಸ್ಟ್ಯಾಂಡ್ ನಿಂದ ಹೊರಡಲು ರೆಡಿಯಾದ ಬಸ್ಸಿನೊಳಗೆ ಮಲ್ಲಿಗೆಮಾಲೆ ಬಳುಕುವಾಗ, ತಳ್ಳುಗಾಡಿಯ ಮೇಲೆ ಕೆಂಪು-ಹಳದಿ ಸೇವಂತಿಗೆಗಳು ತೂಕಕ್ಕೆ ದೊರಕುತ್ತವೆ; ಪುಟ್ಟ ಮಗುವೊಂದು ಶೂಲೇಸ್ ಕಟ್ಟಿಕೊಳ್ಳಲು ಕಲಿಯುವ ಹೊತ್ತು, ಜಿಮ್ ನಲ್ಲೊಬ್ಬ ಹುಡುಗ ಮ್ಯೂಸಿಕ್ ಗೆ ತಕ್ಕಂತೆ ಹೆಜ್ಜೆ ಹಾಕುತ್ತಾನೆ; ರಾತ್ರಿ ಟ್ರೇನ್ ನಲ್ಲಿ ಅರೆಬರೆ ನಿದ್ರೆಯಲ್ಲಿಯೇ ಊರು ತಲುಪಿದ ಜೀನ್ಸ್ ತೊಟ್ಟ ಹುಡುಗಿ ತಾಮ್ರದ ಹಂಡೆಯ ಹದವಾದ ಬಿಸಿನೀರಿನಲ್ಲಿ ಫೇಷಿಯಲ್ ಮಾಡಿದ ಮುಖವನ್ನು ತೊಳೆದು, ಅಮ್ಮ ಹೊಲಿದ ಕೌದಿಯ ಮೇಲೆ ಮಲಗಿ ಸುಖವಾಗಿ ನಿದ್ರಿಸುತ್ತಾಳೆ; ಅಂಗಳದಲ್ಲೊಂದು ದಾಸವಾಳ ಸದ್ದಿಲ್ಲದೆ ಅರಳಿ, ಹುಟ್ಟಿದ ಪ್ರತಿ ಬೆಳಗಿಗೂ ಇನ್ನಷ್ಟು ಸೌಂದರ್ಯವನ್ನು ಒದಗಿಸುತ್ತದೆ.
ಈ ಸೌಂದರ್ಯದ ಪರಿಕಲ್ಪನೆಯೇ ವಿಶಿಷ್ಟವಾದದ್ದು. ಕಥೆ-ಕಾದಂಬರಿಗಳ ನಾಯಕಿಯ ಹೆರಳು, ಕವಿಯ ಕಲ್ಪನೆಯಲ್ಲಿ ತೂಗುವ ಮರ-ಗಿಡಗಳು, ಸಿನೆಮಾವೊಂದರ ಸುಖಾಂತ್ಯವಾಗುವ ಪ್ರೇಮ, ಪಾತ್ರೆ ತೊಳೆಯುತ್ತ ಅಮ್ಮ ಹಾಡುವ ಮಂಗಳಗೌರಿ ವ್ರತದ ಹಾಡು, ತೋಟದ ಅಂಚಿನಲ್ಲಿ ಹೂವರಳಿಸಿ ನಿಲ್ಲುವ ಸಂಪಿಗೆಮರ, ಶಾಪಿಂಗ್ ಮಾಲ್ ನ ಮೂಲೆಯ ಪುಟ್ಟ ಅಂಗಡಿಯ ಬಣ್ಣಬಣ್ಣದ ಐಸ್ ಕ್ರೀಮು ಎಲ್ಲವೂ ಸೇರಿ ಸೃಷ್ಟಿಯಾಗುವ ಸೌಂದರ್ಯದ ಪರಿಕಲ್ಪನೆ ಕಾಲಕ್ಕೆ ತಕ್ಕಂತೆ ಪೋಷಾಕು ಧರಿಸುತ್ತದೆ. ಕಪ್ಪು-ಬಿಳುಪು ಭಾವಚಿತ್ರದ ಉದ್ದ ಜಡೆಯೊಂದು ಸೆಲ್ಫಿಯ ಫ್ರೆಂಚ್ ಪ್ಲೇಟ್ ಆಗಿ ಬದಲಾದರೆ, ಹೆರಳಿನ ಸೌಂದರ್ಯವನ್ನು ಪರಿಪೂರ್ಣಗೊಳಿಸುತ್ತಿದ್ದ ಕೆಂಪುಗುಲಾಬಿಯ ಜಾಗವನ್ನು ರೆಡ್ ಸ್ಟ್ರೀಕ್ಸ್ ತನ್ನದಾಗಿಸಿಕೊಳ್ಳುತ್ತದೆ; ಜೋಕಾಲಿಯಾಗಿ ತೂಗುತ್ತಿದ್ದ ಮರ-ಗಿಡಗಳನ್ನು ಅಮ್ಯೂಸ್ಮೆಂಟ್ ಪಾರ್ಕಿನ ರೋಲರ್ ಕೋಸ್ಟರ್ ಗಳು ರಿಪ್ಲೇಸ್ ಮಾಡುತ್ತವೆ; ಪ್ರೇಮಕ್ಕೊಂದು ಹೊಸ ವ್ಯಾಖ್ಯಾನ ಬರೆಯುವಂತೆ ಲಿವಿನ್ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಆದರೂ ಪಾತ್ರೆಯೊಂದಿಗೆ ಸದ್ದುಮಾಡುವ ಹಸಿರು ಚಿಕ್ಕಿಬಳೆಯ ಅಂದವಾಗಲೀ, ಗಾಳಿಯೊಂದಿಗೆ ಮನೆಯಂಗಳವನ್ನು ತಲುಪುವ ಸಂಪಿಗೆಯ ಪರಿಮಳವಾಗಲೀ, ಎರಡೂ ಕೈಗಳಿಂದ ಕೋನ್ ಐಸ್ ಕ್ರೀಮ್ ಹಿಡಿದು ಪುಟ್ಟ ಅಂಗಡಿಯಿಂದ ಹೊರಬರುವ ಪುಟ್ಟ ಮಗುವಿನ ಮುಗ್ಧತೆಯಾಗಲೀ ಎಂದಿಗೂ ಮಾಸುವುದಿಲ್ಲ.
ಹೀಗೆ ಸೌಂದರ್ಯ ಎನ್ನುವುದು ಮುಗ್ಧತೆಯಾಗಿ, ಹೆಣ್ಣಾಗಿ, ಪ್ರೇಮವಾಗಿ, ಭಕ್ತಿಯಾಗಿ, ಪ್ರಕೃತಿಯಾಗಿ ಬೆಳಗು ಎನ್ನುವ ಬೆರಗಿನೊಂದಿಗೆ ನಮ್ಮೆದುರು ತೆರೆದುಕೊಳ್ಳುತ್ತದೆ. ಸಾಮಾನ್ಯವಾಗಿ ಮುಂಜಾವಿನ ಕ್ರಿಯೆ-ಪ್ರಕ್ರಿಯೆಗಳೆಲ್ಲ ಒಂದು ಅವಸರದ ದಿನಚರಿಯೊಂದಿಗೆ ಹಾಜರಾಗುತ್ತವೆ. ಶಾಲೆಗೆ ಹೋಗುವ ದಿನಗಳಲ್ಲಿ ತಿಂಡಿ ಮಾಡುವ ತರಾತುರಿಯಲ್ಲಿರುತ್ತಿದ್ದ ಅಮ್ಮ ಅಡುಗೆಮನೆಯಿಂದಲೇ ಶಾಲೆಯನ್ನು ನೆನಪಿಸಿದರೆ, ಬೆಚ್ಚಗೆ ಕಂಬಳಿ ಹೊದ್ದು ಮಲಗಿರುತ್ತಿದ್ದ ನಾನು ಶಾಲೆಯನ್ನೂ ಬೆಳಗನ್ನೂ ಬೈದುಕೊಳ್ಳುತ್ತಲೇ ಎದ್ದೇಳುತ್ತಿದ್ದೆ. ವರ್ಷದ ಏಳೆಂಟು ತಿಂಗಳುಗಳು ಚಳಿಯ ವಾತಾವರಣವಿರುತ್ತಿದ್ದ ಮಲೆನಾಡಿನ ಮುಂಜಾವಿಗೆ ಬಚ್ಚಲೊಲೆಯ ಬೆಂಕಿ ಒಂದು ಸಂಭ್ರಮದ ಸಂಗತಿಯಾಗಿತ್ತು. ಒಣಗಿದ ಅಡಕೆಯ ಹಾಳೆ, ತೆಂಗಿನಕಾಯಿಯ ಸಿಪ್ಪೆ, ಕರಟಗಳೆಲ್ಲ ಬೇಸರವಿಲ್ಲದೆ ಉರಿಯುತ್ತ ಬೆಳಗುಗಳನ್ನು ಬೆಚ್ಚಗಿಡುತ್ತಿದ್ದವು. ಜಗಲಿಯ ಮಂಚ, ಕಪಾಟು, ಆರಾಮಕುರ್ಚಿಗಳ ನಡುವೆ ಅಡಗಿರುತ್ತಿದ್ದ ಧೂಳನ್ನು ಗುಡಿಸಿ ತೆಗೆದು, ಬಕೆಟಿನ ಬಿಸಿನೀರಿನಲ್ಲಿ ಅದ್ದಿತೆಗೆದ ಬಟ್ಟೆಯಿಂದ ಅಳಿದುಳಿದ ಧೂಳನ್ನೂ ಒರೆಸಿದ ಮೇಲೆ ಬೆಳಗನ್ನು ಸ್ವಾಗತಿಸಲಿಕ್ಕೆ ಜಗಲಿ ರೆಡಿಯಾಗುತ್ತಿತ್ತು. ಸುಂದರವಾದ ಕೆತ್ತನೆಯ ಮರದ ಬಾಗಿಲು-ಕಂಬಗಳ ಸುತ್ತ ಪುಟ್ಟಪುಟ್ಟ ಹೂಗಳ ರಂಗೋಲಿಯನ್ನು ಬಿಡಿಸಿ, ಅದಕ್ಕೊಪ್ಪುವ ಕೆಂಪು ಹಳದಿ ಗುಲಾಬಿ ಬಣ್ಣಗಳನ್ನು ತುಂಬಿ, ನಡುನಡುವೆ ಆಗತಾನೇ ಅರಳಿದ ಮೋತಿಮಲ್ಲಿಗೆ ಶಂಖಪುಷ್ಪ ದಾಸವಾಳಗಳನ್ನಿಟ್ಟರೆ ಜಗಲಿಗೊಂದು ತನ್ನದೇ ಆದ ಸೌಂದರ್ಯ ಪ್ರಾಪ್ತಿಯಾಗುತ್ತಿತ್ತು. ಪಕ್ಕದಮನೆಯ ಮಗುವೊಂದು ಅಂಬೆಗಾಲಿಡುತ್ತ ಬಂದು ಹೂವಿನ ಎಸಳುಗಳನ್ನೆಲ್ಲ ಕೀಳುತ್ತ, ತನ್ನ ಪುಟ್ಟಪುಟ್ಟ ಬೆರಳುಗಳಿಂದ ರಂಗೋಲಿಯ ಹೂವುಗಳ ಆಕಾರಗಳನ್ನು ಬದಲಾಯಿಸುವ ಸುಂದರ ನೋಟಕ್ಕೆ ಬೆಳಗು ಸಾಕ್ಷಿಯಾಗುತ್ತಿತ್ತು.
ಹೀಗೆ ಬಚ್ಚಲೊಲೆಯ ಹದವಾದ ಬಿಸಿಯಂತೆ ಹರಡಿಕೊಳ್ಳುವ ಬೆಳಗು ಬಾಳೆಎಲೆಯ ಹಸಿರಾಗಿ, ತುಪ್ಪದ ತಿಳಿಹಳದಿಯಾಗಿ, ಜೋನಿಬೆಲ್ಲ-ಮಿಡಿಉಪ್ಪಿನಕಾಯಿಗಳ ಕೆಂಪು ಬಣ್ಣವಾಗಿ ಮುದ ನೀಡುತ್ತ ಯುನಿಫಾರ್ಮಿನ ನೀಲಿಯಾಗಿ ಶಾಲೆಯನ್ನು ತಲುಪುತ್ತಿತ್ತು. ಕಾಲ್ನಡಿಗೆಯ ಕಷ್ಟವನ್ನು ದೂರಗೊಳಿಸಲೆಂದೇ ಹುಟ್ಟಿದಂತೆ ಗೋಚರಿಸುತ್ತಿದ್ದ ಮಾವಿನಮರಗಳು ದಾರಿಯುದ್ದಕ್ಕೂ ಹಣ್ಣುಗಳನ್ನು ಉದುರಿಸುತ್ತಿದ್ದವು; ಬೆಟ್ಟದ ಮೇಲೊಂದಿಷ್ಟು ನೆಲ್ಲಿಕಾಯಿಗಳು ನಮಗಾಗಿಯೇ ಕಾದಿರುತ್ತಿದ್ದವು; ಕಾಸು ಕೊಟ್ಟು ಕೊಂಡುಕೊಳ್ಳಲಾಗದ ಅದೆಷ್ಟೋ ಬಗೆಯ ಹಣ್ಣು-ಕಾಯಿಗಳೆಲ್ಲ ವರ್ಷದುದ್ದಕ್ಕೂ ಪಾಟಿಚೀಲ ಸೇರುತ್ತಿದ್ದವು; ಮಳೆಗಾಲದಲ್ಲಿ ಹುಟ್ಟಿದ ಒರತೆಯೊಂದು ಮಳೆ ನಿಂತಮೇಲೂ ಚಿಮ್ಮುತ್ತ ಬೆಳಗಿನ ಪಯಣವನ್ನು ಸುಂದರವಾಗಿಸುತ್ತಿತ್ತು. ಈ ಎಲ್ಲ ದಿವ್ಯತೆಯ ಅನುಭೂತಿಗಳಿಗೆ ಎದುರಾಗುತ್ತಿದ್ದ ದಿನಗಳಲ್ಲಿ ಮಳೆಯ ನೀರು ಸ್ಕರ್ಟನ್ನು ಒದ್ದೆಯಾಗಿಸುವ ಕಷ್ಟವಾಗಲೀ, ಚಳಿಗಾಲದಲ್ಲಿ ಕೈ-ಕಾಲುಗಳು ಬಿರುಕುಬಿಡುವ ನೋವಾಗಲೀ, ಬಿಸಿಲುಗಾಲದ ಬಾಯಾರಿಕೆ ಸನ್ ಬರ್ನ್ ಗಳಾಗಲೀ, ಪಾಟಿಚೀಲದ ಭಾರವಾಗಲೀ ಯಾವುದೂ ಬಾಧಿಸಲೇ ಇಲ್ಲ. ಸೂರ್ಯ ಹುಟ್ಟುತ್ತಿದ್ದಂತೆಯೇ ತನ್ನ ಬಳಗವನ್ನೆಲ್ಲ ಕರೆದು ಪಾತ್ರೆ ತೊಳೆಯುವ ಜಾಗದಲ್ಲಿ ಅನ್ನದ ಕಾಳನ್ನು ಹೆಕ್ಕುತ್ತಿದ್ದ ಕಾಗೆ ಸಹಬಾಳ್ವೆಯ ಸೊಗಸನ್ನು ತೋರಿಸಿಕೊಟ್ಟರೆ, ಪಾತ್ರೆ ತುಂಬುವಷ್ಟು ಹಾಲು ಕೊಡುತ್ತಿದ್ದ ಹಸು ಪರೋಪಕಾರದ ಪಾಠವನ್ನು ಕಲಿಸಿತು; ದಿನ ಬೆಳಗಾದರೆ ಒಲೆಯಲ್ಲಿ ಉರಿಯುತ್ತಿದ್ದ ಕರಟದಲ್ಲಿ ತ್ಯಾಗದ ಭಾವನೆ ಕಾಣಿಸಿದರೆ, ಅಂಗಳದ ಕಂಬಕ್ಕೆ ಹಬ್ಬಿ ಹೂವರಳಿಸುತ್ತಿದ್ದ ಶಂಖಪುಷ್ಪದ ಬಳ್ಳಿ ಎಲ್ಲ ತೊಡಕುಗಳನ್ನು ಮೀರಿ ಬೆಳಕಿನೆಡೆಗೆ ಸಾಗುವ ದಾರಿಯನ್ನು ತೋರಿಸಿತು.
ಹೀಗೆ ಬದುಕಿನ ತೊಡಕುಗಳೆಲ್ಲವನ್ನೂ ಎದುರಿಸುವ ಶಕ್ತಿಯೊಂದನ್ನು ಬೆಳಗು ತನ್ನೆಲ್ಲ ಚಟುವಟಿಕೆಗಳಿಂದಲೇ ಕಲಿಸಿಕೊಟ್ಟಿತು. ಅಮ್ಮ ಅಡುಗೆಮನೆಯಿಂದಲೇ ವಿಶಿಷ್ಟವಾಗಿ ಗುಡ್ ಮಾರ್ನಿಂಗ್ ಹೇಳುತ್ತಿದ್ದ ರೀತಿ ಮೊಬೈಲ್ ನಲ್ಲಿರುವ ಅಲಾರ್ಮ್ ಗೆ ಶಿಫ್ಟ್ ಆಯಿತು; ಹದವಾದ ಬಿಸಿನೀರಿನೊಂದಿಗೆ ಬೆಳಗನ್ನು ಸ್ವಾಗತಿಸುತ್ತಿದ್ದ ತಾಮ್ರದ ಹಂಡೆಯನ್ನು ಗೀಸರ್ ರಿಪ್ಲೇಸ್ ಮಾಡಿತು; ಕಂಬವನ್ನು ತಬ್ಬಿ ಬೆಳೆಯುತ್ತಿದ್ದ ಶಂಖಪುಷ್ಪದ ಬಳ್ಳಿ ಬಾಲ್ಕನಿಯ ಸರಳುಗಳನ್ನು ಆಶ್ರಯಿಸಿತು. ಬೆಳಗಾದರೆ ತುಂಬುತ್ತಿದ್ದ ಹಾಲಿನ ಚೊಂಬಿನ ಜಾಗವನ್ನು ವಿವಿಧ ಬಣ್ಣ-ಸೈಜುಗಳ ಪ್ಯಾಕೆಟ್ಟುಗಳು ಆಕ್ರಮಿಸಿಕೊಂಡವು. ದಾರಿಯಂಚಿನ ಒರತೆ, ಬಚ್ಚಲೊಲೆಯ ಬೆಂಕಿ, ಪಾಟಿಚೀಲದ ಸಾಂಗತ್ಯ ಎಲ್ಲವೂ ಸಲೀಸಾಗಿ ರೂಪಾಂತರಗೊಂಡು ನೆನಪಿನ ಅಂಗಳಕ್ಕೂ ಬೆಳಗಿನ ಸೌಂದರ್ಯವನ್ನು ಒದಗಿಸಿಕೊಟ್ಟವು. ಕಾಲಕಾಲಕ್ಕೆ ಅಗತ್ಯಕ್ಕೆ ಅನುಗುಣವಾಗಿ ಸ್ವರೂಪ ಬದಲಾಯಿಸಿಕೊಂಡ ಬೆಳಗು ನೆನಪಾಗಿ, ಜೀವನಪಾಠವಾಗಿ, ಜೀವಂತಿಕೆಯ ಚಲನೆಯಾಗಿ, ಸುಂದರ ಅನುಭೂತಿಯಾಗಿ ಬದುಕುಗಳನ್ನು ಸಲಹುತ್ತಲೇ ಇರುತ್ತದೆ. ಬೆಟ್ಟದಲ್ಲಿ ಹುಟ್ಟಿದ ಒರತೆಯೊಂದು ಬಾಲ್ಕನಿಯ ಶಂಖಪುಷ್ಪದ ಬಳ್ಳಿಯೆಡೆಗೆ ಹರಿದು ಸುಂದರವಾದ ಹೂವುಗಳನ್ನು ಅರಳಿಸುತ್ತದೆ.
****************************
ಲೇಖಕರ ಬಗ್ಗೆ ಎರಡು ಮಾತು:
ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ
Aruna rao
Nnice
ಇದು ಬರಿಯೆ ಬೆಳಗಲ್ಲೋ ಅಣ್ಣಾ ಅಂತ ಬೇಂದ್ರೆ ಉದ್ಗಾರ ಎತ್ತಿದ್ದರು. ಹಾಗೆ ಗುಲಾಬಿ ಮುಡಿದ ಬೆಳಗು ಈಗ ಅಂಜನಾರ ಕೈಯಲ್ಲಿ ಸ್ಟ್ರೀಕ್ ಪಡೆದಿದೆ!
So true… People can relate it to their day to day life… Simple but so true… All the best Anjana….
Anjana wonderful writing good going.
Thank u Prajna !
ಅಂಜನಾ ಅವರೇ
ಬರೆದ ಗದ್ಯದ ಕಂಭದ ಸುತ್ತ, ಕಾವ್ಯ ಶಂಖ ಪುಷ್ಪದ ಬಳ್ಳಿ ಸುತ್ತಿ,ಹಬ್ಬಿ ಅರಳಿದೆ.
ಚಂದದ ಪರಿಕಲ್ಪನೆಗಳ ಮೂಲಕ ಬದಲಾವಣೆಗಳನ್ನು ಚಿತ್ರಿಸುವಾಗಲೂ, ಡಿಸ್ಕ್ರಿಮಿನೇಟಿವ್ ಆಗದೆ ಸಮಭಾವವೇ ಸದ್ಭಾವವಾದ ಪ್ರತಿಪಾದನೆ.
ತುಂಬಾ ಧನ್ಯವಾದಗಳು.
ಧನ್ಯವಾದಗಳು !
ಚೆನ್ನಾಗಿದೆ. ಯಾವ್ಯಾವುದೋ ವಸ್ತುಗಳನ್ನು ಮತ್ತೊಂದು ವಸ್ತು ರಿಪ್ಲೇಸ್ ಮಾಡಿಬಿಡಬಹುದು ಆದರೆ ಹಳೆಯ ನೆನಪುಗಳನ್ನು ರಿಪ್ಲೇಸ್ ಮಾಡಲಾಗದು.
ಥ್ಯಾಂಕ್ಯೂ !
Sundar Belagu.
ಥ್ಯಾಂಕ್ಯೂ !