ಮನದೊಳಗಣ ತಾಕಲಾಟವೇ ಅಭಿವ್ಯಕ್ತಿ

ಅಂಕಣ ಬರಹ

ಕವಿಯಿತ್ರಿ ನೂತನ ಎಂ.ದೋಶೆಟ್ಟಿ ಉತ್ತರ ಕನ್ನಡದ ಸಿದ್ದಾಪುರದವರು. ಮೃತ್ಯುಂಜಯ ದೋಶೆಟ್ಟಿ , ಪ್ರೇಮಾ ದೋಶೆಟ್ಟಿ ಅವರ ಮಗಳು.‌ಅವರ ಪತಿ ಶಾಮ ಸುಂದರ ಕದಂ ಕಾರವಾರ ಬಳಿಯ ಸದಾಶಿವಗಡದವರು. ಆಕಾಶವಾಣಿಯಲ್ಲಿ ಎಂಜಿನಿಯರ್. ಕವಯಿತ್ರಿ ಕತೆಗಾರ್ತಿ ನೂತನ ದೋಶೆಟ್ಟಿ ಸಮೂಹ ಸಂವಹನ , ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕ ಹುದ್ದೆ ನಿಭಾಯಿಸುತ್ತಿದ್ದಾರೆ. ಕಾರವಾರ ಆಕಾಶವಾಣಿ, ಬೆಂಗಳೂರು ಆಕಾಶವಾಣಿಯಲ್ಲಿ ಸೇವೆ ಮಾಡಿ, ಇದೀಗ ಹಾಸನ ಜಿಲ್ಲಾ ಆಕಾಶವಾಣಿಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ೨೦೦೯ರಲ್ಲಿ ಕಾಲವೆಂಬ ಮಹಾಮನೆ ಕಾವ್ಯ ಸಂಕಲನ ಪ್ರಕಟಿಸಿದರು. ಭಾಗೀರತಿ ಉಳಿಸಿದ ಪ್ರಶ್ನೆಗಳು ,ಮಾನವೀಯತೆ ಬಿಕ್ಕಳಿಸಿದೆ(೨೦೧೬) ಅವರ ಕವಿತಾ ಸಂಕಲನಗಳು. ಯಾವ “ವೆಬ್ ಸೈಟ್ ನಲ್ಲೂ ಉತ್ತರವಿಲ್ಲ ” ಕಥಾ ಸಂಕಲನ. ಅಂತಃಸ್ಪುರಣ, ಮರೆಯಾಯಿತೆ ಪ್ರಜಾಸತ್ತೆ ಅವರ ಲೇಖನಗಳ ಸಂಗ್ರಹ. ಆಕಾಶವಾಣಿ ಅಂತರಾಳ‌ ಅವರು ಆಕಾಶವಾಣಿ ಕುರಿತು ಬರೆದ ಪುಸ್ತಕ. ‌ಬಾ ಬಾಪು , ಆನ್ ಗಾಂಧಿಯನ್ ಪಾಥ್ ಆಕಾಶವಾಣಿಗಾಗಿ ರೂಪಿಸಿದ ರೂಪಕಗಳು. ವಚನಸಾಹಿತ್ಯ, ಬಸವಣ್ಣ, ಗಾಂಧಿಜೀ ವಿಚಾರಧಾರೆಯಿಂದ ಪ್ರಭಾವಿತರಾದ ಲೇಖಕಿ. ಜೀವಪರ ಕಾಳಜಿಯ ಕವಯಿತ್ರಿ. ‌ ಈ ಸಲ  ಸಾಹಿತ್ಯ ಸಂಗಾತಿ ಕನ್ನಡ  ವೆಬ್ ಜೊತೆ ಮಾತಿನಲ್ಲಿ ಮುಖಾಮುಖಿಯಾಗಿದ್ದಾರೆ…

…….

ಲೇಖಕಿ ನೂತನ ದೋಶೆಟ್ಟಿ ಅವರೊಡನೆ ಮುಖಾಮುಖಿಯಾಗಿದ್ದಾರೆ

ಕವಿ ನಾಗರಾಜ ಹರಪನಹಳ್ಳಿ

 ಪ್ರಶ್ನೆ : ಕತೆ, ಕವಿತೆ ಗಳನ್ನು ಬರೆಯುವುದರ ಕುರಿತು ಹೇಳಿ, ಇದೆಲ್ಲಾ ಹೇಗೆ ಆರಂಭವಾಯಿತು?

ಉತ್ತರ : ನಾನು ಮೊದಲು ಬರವಣಿಗೆ ಶುರು ಮಾಡಿದ್ದು ನಾನು ಓದಿದ ಪುಸ್ತಕದ ಕುರಿತು ನನಗೆ ಅನ್ನಿಸಿದ ನಾಲ್ಕು ಸಾಲುಗಳನ್ನು ನೋಟ್ ಪುಸ್ತಕದಲ್ಲಿ ಬರೆಯುವುದರ ಮೂಲಕ. ಅದೊಂಥರ ವಿಮರ್ಶೆ ಅಂತ ಆಗ ಅಂದ್ಕೊಂಡಿದ್ದೆ. ಕಾಲೇಜಿನ ಆರಂಭದ ದಿನಗಳಲ್ಲಿ. ಆ ಪುಸ್ತಕ ಈಗಲೂ ನನ್ನ ಹತ್ತಿರ ಇದೆ.

ಆನಂತರ ಸಣ್ಣ ಕವಿತೆ ಬರೀತಿದ್ದೆ.  ಅದೇ ಪುಸ್ತಕದಲ್ಲಿ. ನಾನು ಬಹುತೇಕ ಮೌನಿ. ಬಹಳ ಕಡಿಮೆ ಮಾತು. ಹಾಗಂತ ಮನದೊಳಗಿನ ದೊಂಬರಾಟ ಇರ್ತಿತ್ತಲ್ಲ. ಅದಕ್ಕೆ ಒಂದು ಅಭಿವ್ಯಕ್ತಿ ಬೇಕಾಗುತ್ತಿತ್ತು. ಅದು ಕವಿತೆಯ ಸಾಲುಗಳಲ್ಲಿ ಹೊರಬರಲು ಹವಣಿಸಿತ್ತು. ಕತೆಯೂ ಹಾಗೇ. ಸುತ್ತಲಿನ ಪರಿಸರದಲ್ಲಿ ಗಮನಿಸಿದ, ತಟ್ಟಿದ ವಿಷಯದ ಎಳೆ ಮನಸ್ಸಿನಲ್ಲಿ ಕೊರೆಯಲು ಶುರುವಾಗುತ್ತಿತ್ತು. ಕತೆಯಾಗಲಿ,  ಕವಿತೆಯಾಗಲಿ ಅದು ಒಂದು ರೂಪಕ್ಕೆ ಬರುವ ತನಕದ ತಹತಹವನ್ನ ಅನುಭವಿಸಿಯೇ ತೀರಬೇಕು. ಅದು ಅಕ್ಷರದ ರೂಪದಲ್ಲಿ ಇಳಿದಾದ ಮೇಲಿನ ನಿರುಮ್ಮಳತೆ ಕೂಡ ಅತ್ಯಂತ ಸುಖದ ಅನುಭವಗಳಲ್ಲಿ ಒಂದು.

ಬರವಣಿಗೆ ನನ್ನ ನಿಲುವು, ಸಮಾಜದ ಆಶಯ, ನನ್ನ ಆಶಯದ ಕಾಣ್ಕೆ. ಇದರ ಹೊರತಾಗಿಯೂ ಇದಕ್ಕೇ ಬರೀತೇನೆ ಅಂತ ಹೇಳೋದಕ್ಕೆ ಆಗೋದಿಲ್ಲ. ನನಗೆ ಬರವಣಿಗೆ ತೀರಾ ಖಾಸಗಿ, ತೀರ ಸ್ವಂತದ್ದು..

ಹೀಗಂದಾಗ ಕೆಲವರು ಕೇಳ್ತಾರೆ. ಅದು ಬೇರೆಯವರು ಓದೋದಕ್ಕೆ ಅಂತ. ಅದಕ್ಕೆ ಆ ಶಕ್ತಿ ಇದ್ದರೆ ತುಂಬ ಸಂತೋಷ. ತಾನಾಗೇ ಅದನ್ನು ಆದರೆ ಕತೆ, ಕವಿತೆ ಗಳಿಸಿಕೊಳ್ಳಬೇಕು.

ಕವಿತೆ ಹುಟ್ಟುವ ಕ್ಷಣ...

ತಡೆಹಿಡಿದ ದುಃಖ ತಮ್ಮವರು ಕಂಡಾಗ ಕಟ್ಟೆಯೊಡೆದು ಹೊರ ಬರುತ್ತದಲ್ಲಾ ಅಂಥ ಒತ್ತಡ ಒಳಗೆ ಇರುತ್ತದೆ ಅಂತ ಕಾಣುತ್ತೆ. ಅದಕ್ಕೆ ಚುರುಕು ಮುಟ್ಟಿಸಿದ ತಕ್ಷಣ ತಾನಾಗಿ ಬರುತ್ತದೆ. ದುಃಖ, ನೋವು,ಸಂಕಟ, ವಿಷಾದ, ಕಳೆದುಕೊಳ್ಳುವುದು, ಒಂಟಿತನ , ಸಂಬಂಧ ಮೊದಲಾದವು ತೀವೃವಾಗಿ ಬರೆಸುವಂತೆ ಸಂತೋಷ , ಸುಖ ಬರೆಸಲಾರದು. ಬರೆದಾದ ಮೇಲೆ ಅದೊಂದು ಬಂಧಮುಕ್ತತೆ…

ಕತೆ ಹಾಗಲ್ಲ. ಕೆಲವು ಕತೆಗಳು ಒಂದೇ ಓಟದಲ್ಲಿ ಸಾಗಿಬಿಡುತ್ತವೆ. ಕೆಲವಕ್ಕೆ ಹೈರಾಣಾಗಿ ಹೋಗಿಬಿಡುತ್ತೇವೆ. ಬಂದಿರುವುದು ನನ್ನ ಒಂದು ಕಥಾ ಸಂಕಲನ. ಯಾವ ವೆಬ್ ಸೈಟಿನಲ್ಲೂ ಉತ್ತರವಿಲ್ಲ ಅಂತ. ಅದೇ ಶೀರ್ಷಿಕೆಯ ಕತೆ ನನ್ನ ಮನಸ್ಸಿನಲ್ಲಿ ಮೂಡಿದ್ದು ಬಸ್ಸಿನಲ್ಲಿ ಹೋಗುತ್ತಿರುವಾಗ. ಅಲ್ಲೇ ಗುರುತು ಹಾಕ್ಕೊಂಡಿದ್ದೆ. ಇನ್ನು ಕಾರವಾರದಲ್ಲಿ ಇದ್ದಾಗ ಕಡಲು ಬಹಳ ಕಾಡಿಸಿತ್ತು. ಬೀಚಿನಲ್ಲಿ ಶೇಂಗಾ ಮಾರಲು ಬರುವ ಹುಡುಗನನ್ನು ಕಂಡಾಗ ಮನೆಗೆ ಬಂದು ಬರೆದಿದ್ದಿದೆ. ಒಂದೊಂದು ಕತೆಗೂ ಅದರದ್ದೇ ಆದ ಇತಿಹಾಸ ಇರುತ್ತೆ.

ಕಾವ್ಯ,ಕತೆಯ ವಸ್ತು, ವಿಷಯ….

ಮನುಷ್ಯ ಸಂಬಂಧಗಳು ಬಹುತೇಕ ವಸ್ತು ಕತೆಗಳಲ್ಲಿ. ಸಾಮಾಜಿಕ ಚಿತ್ರಣ, ಶೋಷಣೆಗಳೂ ಇವೆ.

ಪ್ರಸ್ತುತ ರಾಜಕೀಯ….

ನಾನು ರಾಜಕೀಯವನ್ನು ಹತ್ತಿರದಿಂದ ಗಮನಿಸುತ್ತೇನೆ. ಅದರ ನಡೆಗಳು ನಮ್ಮ ಸಾಮಾಜಿಕ ಹಾಗೂ ವೈಯುಕ್ತಿಕ ಜೀವನದ ಮೇಲೆ ಬಹಳ ಪ್ರಭಾವ ಬೀರುತ್ತವೆ. ಆದರೆ ಬಹುತೇಕರು ತಮಗೆ ಸಂಬಂಧವಿಲ್ಲ ಎಂಬಂತೆ ಇರುತ್ತಾರೆ. ಹಾಗಾಗಬಾರದು. ನಮ್ಮಲ್ಲಿ ರಾಜಕೀಯ ಪ್ರಜ್ಞೆ ಬಹಳ ಕಡಿಮೆ ಅನ್ನಿಸುತ್ತದೆ.

ಬಾಲ್ಯ, ಹರೆಯ….ಕುರಿತು ಒಂದಿಷ್ಟು

ಬಾಲ್ಯ  ಧಾರಾಳವಾಗಿ ಇಣುಕಿದೆ ಕವಿತೆಗಳಲ್ಲಿ . ಏಕೆಂದರೆ ನಮ್ಮದು ಸಮೃದ್ಧ ಬಾಲ್ಯ. ಮಲೆನಾಡಿನ ಬೆಚ್ಚನೆಯ,  ನಚ್ಚಗಿನ ಬಾಲ್ಯ. ನನ್ನ  ಊರು ಸಿದ್ದಾಪುರ. ಊರಿಗೆ ಊರೇ ನಮ್ಮ ಆಟದ ಅಂಗಳವಾಗಿತ್ತು. ಎದುರು-ಬದುರು, ಅಕ್ಕ-ಪಕ್ಕ ಎಲ್ಲರೂ ನಮ್ಮವರೇ ಎಂದು ಬೆಳೆದವರು. ಈಗಲೂ ಅದನ್ನು ಎಲ್ಲರಲ್ಲೂ ಕಾಣಲು ಹೋಗಿ   ಮೋಸ ಹೋಗುತ್ತೇನೆ.

ಸಾಂಸ್ಕೃತಿಕ  ವಾತಾವರಣ ಏನನಿಸುತ್ತದೆ?

ಬಸವ ತತ್ತಗಳಲ್ಲಿ ಬೆಳೆದ ನಮಗೆ   ಯಾವುದೇ ಜಾತಿ- ಮತಗಳ ಬೇಧ ಕಾಣಿಸದೇ ನಮ್ಮ ಹಿರಿಯರು ಬೆಳೆಸಿದ್ದು ನಮ್ಮ ಭಾಗ್ಯ. ಆದರೆ ಇವುಗಳು ಇಂದು  ಮುನ್ನೆಲೆಗೆ ಬಂದು ನಿಂತಿವೆ. ಇವುಗಳ ಮಾಯೆಯ ಮುಸುಕಿಂದ ಒಂದು ಅಂತರ ಕಾಪಾಡಿಕೊಳ್ಳುವುದು ಕಷ್ಟವೇನಲ್ಲ.

ಧರ್ಮ, ದೇವರ ಕುರಿತು ಹೇಳಿ...

ನಾವು ಚಿಕ್ಕಂದಿನಿಂದ ನಮ್ಮ ಮನೆಯಲ್ಲಿ ಮಕ್ಕಳೆಲ್ಲ ಎರಡು ಹೊತ್ತು … ದೇವರೆದುರು ನಿಂತು ಬಸವಣ್ಣನವರ    ಕಳಬೇಡ, ಕೊಲಬೇಡ …ವಚನ  ಹೇಳಿಕೊಳ್ಳುತ್ತಿದ್ದೆವು. ಉಳಿದ ಇನ್ನೂ ಏನೇನೋ ಹೇಳಿಕೊಳ್ಳುತ್ತಿದ್ದೆವು. ಆದರೆ ಆ ವಚನ ನನ್ನ ಮನದಲ್ಲಿ ಮಾಡಿರುವ ಪ್ರಭಾವ ಅಪಾರ. ನಾನು ಇಂದಿಗೂ ಅದನ್ನು ಅಕ್ಷರ ಷಹ ಪಾಲಿಸುತ್ತೇನೆ. ಇದರಿಂದ ಎಷ್ಟು ಸಂಕಟಗಳನ್ನು ಅನುಭವಿಸಬೇಕಾಗುತ್ತದೆ. ಆದರೂ ಅದೇ ನನ್ನ ಧರ್ಮ. ಆಗೆಲ್ಲ ನಾನು ಸಮಾಧಾನ ಮಾಡಿಕೊಳ್ಳುವುದು ಬಸವಣ್ಣನನ್ನೇ ಬಿಡದವರು ನಮ್ಮನ್ನು ಬಿಟ್ಟಾರೇ ? ಅಂತ. ಅವರೆಂದಂತೆ ಕಾಯಕವೇ ನನ್ನ ಧರ್ಮ. ಈ ಧರ್ಮದಲ್ಲಿ ಎಷ್ಟು ಕಷ್ಟವಿದೆಯೇ ಅಷ್ಟೇ ಸುಖವಿದೆ. ನನಗೆ ಆಗ ಕಷ್ಟದಿಂದ ಸಿಗುವ ಸುಖವೇ ಇಷ್ಟ. ಅದು ಬಹಳ ಚೇತೋಹಾರಿ.

ಇನ್ನು ದೇವರು …ನನಗೆ ಒಬ್ಬ ಮಿತ್ರನಂತೆ. ಯಾರ ಬಳಿಯೂ ಹೇಳಲಾಗದ ವಿಷಯ, ಚರ್ಚೆಗೆ ಆ ನಿರಾಕಾರ ಬೇಕು. ದೇವರು ಎಂಬುದು ಒಂದು ಅನುಭೂತಿ. ನಿಮ್ಮನ್ನೆ ನೀವು ಆಂತರ್ಯದಲ್ಲಿ ಕಾಣುವ ಬಗೆ.

ಸಾಹಿತ್ಯ ವಲಯದ ರಾಜಕೀಯದ ಬಗ್ಗೆ

ನಾನು  ಸಿದ್ದಾಪುರದವಳು. ಅಲ್ಲಿಂದ ದೂರ ಇದ್ದೇನೆ. ಉತ್ತರ ಕನ್ನಡ ಜಿಲ್ಲೆಯಲ್ಲೇ ನಾನು ಅಪರಿಚಿತಳು. ನನ್ನ ಮೂರು ಕವನ ಸಂಕಲನಗಳಿವೆ. ಒಂದು ಕವಿತೆ ಬೆಂಗಳೂರು ವಿಶ್ವವಿದ್ಯಾಲಯದ  ಪದವಿಗೆ ಪಠ್ಯವಾಗಿ ತುತ್ತು 2013ರಲ್ಲಿ. ಸುಧಾದಲ್ಲಿ ಬಂದಿದ್ದ ಕತೆಯನ್ನು ಕುವೆಂಪು ವಿಶ್ವವಿದ್ಯಾಲಯದ  ಪದವಿಗೆ ಪಠ್ಯ ಮಾಡಿದ್ದರು 2010ರಲ್ಲಿ. ನಾನು ಅವುಗಳನ್ನು ನೋಡಲೂ ಇಲ್ಲ. ಯಾರೋ ಹೇಳಿದರು ಇದೆ ಎಂದು. ಸಂತೋಷವಾಯಿತು. ಸಾವಿರಾರು, ಮಕ್ಕಳು ಓದಿದರಲ್ಲ ಎಂದು.  ನನ್ನಷ್ಟಕ್ಕೆ ನಾನು ಬರೆದುಕೊಂಡು ಇರುತ್ತೇನೆ. ಯಾವ ಹಪಹಪಿಯೂ ಇಲ್ಲ. ಇದು ನನ್ನ  ನಿಲುವು.ಉಳಿದವರ ನಿಲುವಿನಲ್ಲಿ ನನಗೆ ಆಸ್ಥೆ ಇಲ್ಲ.

ದೇಶದ ಚಲನೆ ಬಗ್ಗೆ ಏನನಿಸುತ್ತದೆ?

ಅಂದರೆ ರಾಜಕೀಯವಾಗಿ ಮಾತ್ರ ಅಲ್ಲ. ಸಾಮಾಜಿಕ, ಆರ್ಥಿಕ,  ಶೈಕ್ಷಣಿಕ ..ಹೀಗೆ.

ಸಾಕಷ್ಟು ಅಭಿವೃದ್ಧಿ ಆಗಿದೆ. ರಾಜಕೀಯ ಹಿನ್ನೆಲೆಯಲ್ಲಿ ಸ್ಥಿತ್ಯಂತರಗಳು ಸಹಜ. ಆದರೆ ನಮ್ಮಲ್ಲಿ ಅದಕ್ಕೆ ಹಾಹಾಕಾರ ಎಬ್ಬಿಸುವ ಚಾಳಿ ಇದೆ. ಬದಲಾಗಿ ಅದನ್ನು ಕೌಂಟರ್ ಮಾಡುವ ಜಾಣ್ಮೆ ಬೇಕು. ಈಗ ನೀವು ಗಮನಿಸಿದರೆ ಯಾವುದೇ ಮುಖ್ಯ ಚಳುವಳಿಗಳಿಲ್ಲ. ಇದೂ ಒಂದು ಫೇಸ್. ತನಗೆ ಬೇಕಾದ್ದನ್ನು ಪಡೆಯುವುದು ಸಮಾಜಕ್ಕೆ ಗೊತ್ತಿದೆ. ಆ ಮಟ್ಟಿಗೆ ನನ್ನದು ಆಶಾವಾದ.ಆದರೆ ಸಾಹಿತ್ಯ ಕ್ಷೇತ್ರ ಒಡೆಯದೇ ಒಂದಾಗಿ, ಗುಂಪುಗಾರಿಕೆ ಇರದೇ ಮಾದರಿಯಾಗಿರಬೇಕು ಎಂಬ ಆಸೆಯಿದೆ. ಸಾಹಿತ್ಯವನ್ನು ಅದರ ಮೌಲಿಕತೆಯೊಂದಿಗೆ ಮಾತ್ರ ನೋಡುವ ವಾತಾವರಣ  ಒಡಮೂಡಲಿ.

ನಿಮ್ಮ  ಕನಸು...

ಓದಬೇಕಾದ್ದು ಬಹಳ ಇದೆ. ನನಗೆ ಮಿತಿಗಳಿವೆ. ಹಾಗಾಗಿ ನನ್ನ ಕನಸುಗಳು ಬಹಳ ಎತ್ತರ ಹಾರಲಾರವು.

ಇಷ್ಟದ ಲೇಖಕರು

ಕನ್ನಡದಲ್ಲಿ ತೇಜಸ್ವಿ, ಬೇಂದ್ರೆ

ಇಂಗ್ಲೀಷ್ ಹೆಚ್ಚು ಓದಿಲ್ಲ.

ವರ್ಡ್ಸ್ವರ್ತ್ ನೆಚ್ಚಿನ ಕವಿ.

ಈಚೆಗೆ ಓದಿದ ಕೃತಿ...

ಲಕ್ಷ್ಮೀ ಪತಿ ಕೋಲಾರ ಅವರ ಹರಪ್ಪ ಡಿಎನ್ ಎ ನುಡಿದ ಸತ್ಯ, ರವಿ ಹಂಜ್ ಅವರು  ಹ್ಯೂಎನ್ ತ್ಸಾಂಗನ ಮಹಾಪಯಣ, ನೇಮಿಚಂದ್ರರ ಯಾದ್ ವಶೀಮ್.

 ಇಷ್ಟದ ಕೆಲಸ:

 ಗಾರ್ಡನಿಂಗ್

ಇಷ್ಟದ ಸ್ಥಳ:

 ಕೈಲಾಸ ಮಾನಸ ಸರೋವರ

 ಮರೆಯಲಾರದ ಘಟನೆ :

 ಬಹಳಷ್ಟಿವೆ. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ …ಊಟಿಗೆ ಹೋಗಿದ್ದಾಗ ಬೆಟ್ಟದ ಮೇಲೆ ಜಿ ಎಸ್ ಶಿವರುದ್ರಪ್ಪ ನವರು ಸಿಕ್ಕಿದ್ದು. ನನ್ನ ಅತೀವ ಸಂಕೋಚ,   ಮುಜುಗರದಿಂದ ನಾನು ಬರೆದದ್ದನ್ನು ಯಾರಿಗು ಹೇಳುತ್ತಿರಲಿಲ್ಲ. ತೋರಿಸುತ್ತಲೂ ಇರಲಿಲ್ಲ. ಈಗಲೂ ಅದೇನು ಹೆಚ್ಚು ಬದಲಾಗಿಲ್ಲ.

**************************************


ಲೇಖಕರ ಬಗ್ಗೆ:

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

5 thoughts on “ಮನದೊಳಗಣ ತಾಕಲಾಟವೇ ಅಭಿವ್ಯಕ್ತಿ

  1. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೇಡಂ.. ಹೆಚ್ಚು ಕಡಿಮೆ ನನ್ನದೇ ತುಡಿತ ಮಿಡಿತಗಳನ್ನು ನಾನಿಲ್ಲಿ ಕಂಡೆ.. ಧನ್ಯವಾದಗಳು..

  2. ಧನ್ಯವಾದಗಳು..
    ಜೀವಪರರಾಗಿರುವ ಎಲ್ಲರೂ ಹೀಗೇ..

  3. ಹಲವಾರು ವಿಷಯಗಳ ಬಗ್ಗೆ ಮನಬಿಚ್ಚಿ ತಮ್ಮ ವಿಚಾರವನ್ನು ಹಂಚಿಕೊಂಡಿದ್ದೀರಿ..ತುಂಬಾ ಆಪ್ತವೆನಿಸೂವ ಮಾತುಕತೆ ಇದು..

Leave a Reply

Back To Top