ಬಿಟ್ಟು ಬಿಡಿ ಹೋಲಿಕೆ ಬೆಳೆಸಿಕೊಳ್ಳಿ ಸ್ವಂತಿಕೆ

ಅಂಕಣ

‘ಪಕ್ಕದ ಮನೆ ಪದ್ಮ ಕೋಗಿಲೆ ತರ ಹಾಡುತ್ತಾಳೆ. ನೀನೂ ಇದ್ದಿಯಾ. ನಿನ್ನ ಗೆಳೆಯ ರವಿ ನೋಡು ಭಾಷಣ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದವರೆಗೂ ಬಹುಮಾನ ಪಡೆದಿದ್ದಾನೆ. ಹಾಡು ಭಾಷಣ ಇರದಿದ್ದರೆ ಅಷ್ಟೇ ಹೋಯ್ತು ರಜನಿ ತರಹ ಕ್ಲಾಸಿಗೆ ರ‍್ಯಾಂಕ್ ಬರೋಕೆ ಆಗಲ್ಲ ಯಾವಾಗ ನೋಡಿದರೂ ಮನೆ ಮುಂದೆ, ಮೈದಾನದಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಆಡ್ತಿಯಾ ನಾಯಿ ಬಾಲ ಯಾವಾಗಲೂ ಡೊಂಕು ಅದನ್ನು ನೇರ ಮಾಡಲು ಸಾಧ್ಯವಿಲ್ಲ. ನಾ ಹೇಳಿದಾಗ ಮಾತ್ರ ಅಭ್ಯಾಸ ಮಾಡುತ್ತಿಯಾ.’ ಇದು ರಾಜುವಿನ ಅಪ್ಪ ಅವ್ವನ ಮಾತುಗಳು. ರಾಜುನಿಗೂ ಹೆತ್ತವರ ಮಾತುಗಳನ್ನು ಕೇಳಿ ಕೇಳಿ ರೋಸಿ ಹೋಗುತ್ತದೆ. ನಾನು ಆಟದಲ್ಲಿ ಮುಂದಿರೋದು ಇವರಿಗೆ ಕಾಣುವುದೇ ಇಲ್ಲ ಎಂದು ಗೊಣಗಿಕೊಳ್ಳುತ್ತಾನೆ. ಮನಃಸ್ಥಿತಿ ಸರಿ ಇರದಿದ್ದಾಗ ಹೌದಲ್ಲ ನನಗೆ ಚೆನ್ನಾಗಿ ಹಾಡೋಕೆ ಬರಲ್ಲ. ಭಾಷಣ ಮಾಡೋಕೆ ಬರಲ್ಲ. ಅಂಕ ಜಾಸ್ತಿ ಗಳಿಸಲು ಆಗಿಲ್ಲ. ನಾನು ಕೆಲಸಕ್ಕೆ ಬಾರದವನು ಎಂದೆನಿಸುತ್ತದೆ. ಇದು ಕೇವಲ ರಾಜುವಿನ ಆತಂಕದ ಸ್ಥಿತಿಯಲ್ಲ. ನಮ್ಮಲ್ಲಿ ಬಹುತೇಕ ಜನ ಪಾಲಕರ ಮತ್ತು ಮಕ್ಕಳ ಸಮಸ್ಯೆ. ಇತರರೊಂದಿಗಿನ ಹೋಲಿಕೆ ಬಹುತೇಕ ಸಲ ನೋವನ್ನೇ ತರುವುದು. ಹೋಲಿಕೆಯಿಂದ ಹೊರ ಬರುವುದು ಹೇಗೆ ಎಂಬುದು ಹಲವಾರು ಯುವಕ/ತಿಯರ ಸಮಸ್ಯೆ. ಹೋಲಿಕೆಯ ಕುಣಿಕೆಯಿಂದ ಬಚಾವಾಗಲು ಕೆಲವು ಸುಳಿವುಗಳು

ಒಬ್ಬರಂತೆ ಒಬ್ಬರಿಲ್ಲ

ನಮಗೆಲ್ಲ ಗೊತ್ತಿರುವ ಹಾಗೆ ಶಕ್ತಿಯಲ್ಲಿ ಅಶ್ವ ಶಕ್ತಿ ಪ್ರಸಿದ್ಧವಾದುದು.ಅದಕ್ಕೆ ಮರ ಹತ್ತುವ ಸ್ಪರ್ಧೆಯಲ್ಲಿ ಅದು ನಪಾಸಾಗುತ್ತದೆ. ಮೀನು  ಸಲೀಸಾಗಿ ಈಜುವುದು ಅದಕ್ಕೆ ಭೂಮಿಯ ಮೇಲೆ ಓಡುವ ಸ್ಪರ್ಧೆ  ಇಟ್ಟರೆ ಸತ್ತೇ ಹೋಗುತ್ತದೆ. ಪಶು ಪ್ರಾಣಿಗಳ ಹಾಗೆಯೇ ನಮ್ಮಲ್ಲಿಯೂ ಪ್ರತಿಯೊಬ್ಬರೂ ಒಂದೊಂದರಲ್ಲಿ ವಿಶೇಷ ಪ್ರತಿಭೆಯನ್ನು ಹೊಂದಿರುತ್ತೇವೆ. ಈಗಾಗಲೇ ಗೆಲುವು ಸಾಧಿಸಿದವರನ್ನು ಕಂಡು ಅವರಂತಾಗಲು ಹೋದರೆ ಅವರಿಗೆ ಹೋಲಿಸಿಕೊಂಡು ಕೀಳರಿಮೆಯಿಂದ ಬಳಲುತ್ತೇವೆ. ನಿಮ್ಮಲ್ಲಿರುವ ಶಕ್ತಿಯನ್ನು ಕಡೆಗಣಿಸುವುದು ದೊಡ್ಡ ತಪ್ಪು.ಜೀವನದ ಕೊನೆಯಲ್ಲಿ ಶಕ್ತಿಯ ಅರಿವಾದರೆ ನಿಷ್ಪ್ರಯೋಜಕ. ಹಾಗೇ ಯಾರನ್ನೂ ಕಡೆಗಣಿಸಬೇಡ.  ಕಬೀರರು ಹೇಳಿದಂತೆ,’ ಕಾಲ ಕೆಳಗಿರುವ ಕಡ್ಡಿಯನ್ನು ಕಡೆಗಣಿಸಬೇಡ. ಅದೇ ಹಾರಿ ಬಂದು ನಿನ್ನ ಕಣ್ಣಲ್ಲಿ ನೆಟ್ಟು ನೋವನ್ನುಂಟು ಮಾಡಬಹದು.’ ಮತ್ತೊಬ್ಬರ ನಕಲು ಮಾಡುವುದು ತರವಲ್ಲ. ಪ್ರತಿಯೊಬ್ಬರಿಗೂ ಪಂಚೇಂದ್ರಿಯಗಳಿವೆ. ಆದರೆ ಅವು ನೋಡಲು ಬೇರೆ ಬೇರೆಯೇ ಆಗಿವೆ. ಅಂದರೆ ಒಬ್ಬರಂತೆ ಒಬ್ಬರಿಲ್ಲ. ಹೀಗಾಗಿ ಪ್ರತಿಯೊಬ್ಬರಲ್ಲಿ ಹುದುಗಿರುವ ಪ್ರತಿಭೆಗಳು ಭಿನ್ನ ಭಿನ್ನ. ಎಂಬ ವಿಷಯವನ್ನು ಮನದಟ್ಟು ಮಾಡಿಕೊಂಡರೆ ಹೋಲಿಕೆಯಾಚೆ ಬರುವುದು ಸುಲಭ

ಕೊರತೆಯ ಭಯ ಬೇಡ

ಬೇರೆಯವರಲ್ಲಿರುವ ಪ್ರತಿಭೆ ನನ್ನಲ್ಲಿಲ್ಲ. ನನ್ನಲ್ಲಿ ಕೊರತೆಗಳ ಆಗರವೇ ಇದೆ. ಈ ಕೊರತೆಗಳ ಕಾರಣದಿಂದ ನನಗೇನೂ ಸಾಧಿಸಲಾಗುವುದಿಲ್ಲ ಎನ್ನುವ ಭ್ರಮೆಯಿಂದ ಹೊರ ಬನ್ನಿ. ಇತರರ ಜಾಣ್ಮೆ, ಸೌಂದರ್ಯ, ಸಿರಿವಂತಿಕೆಗೆ ಹೋಲಿಸಿಕೊಂಡು ಕೊರಗುವುದನ್ನು ನಿಲ್ಲಿಸಿ. ಇತರರಲ್ಲಿರುವುದು ಶ್ರೇಷ್ಟ. ನನ್ನಲ್ಲಿರುವುದು ಕನಿಷ್ಟ. ಎಂಬ ನಿರ‍್ಧಾರಕ್ಕೆ ಬರಬೇಡಿ. ನಮ್ಮ ನಮ್ಮ ಮನೋವೃತ್ತಿಯಂತೆ ನಮ್ಮ ಇಚ್ಛೆಗಳಿರುತ್ತವೆ.ಎನ್ನುತ್ತಾರೆ ಬಲ್ಲವರು.ಸುತ್ತ ಮುತ್ತ ಇರುವವರ ಅಭಿಪ್ರಾಯವನ್ನು ಮನ್ನಿಸಿ ಅದರಂತೆ ನಡೆಯದೇ ಹೋದರೆ ನನ್ನಲ್ಲಿರುವ ಕೊರತೆಯ ಕಂದಕ ಮುಚ್ಚಲಾಗುವುದಿಲ್ಲ. ಬೇರೆಯವರ ಮಾತಿನಂತೆ ನಡೆದುಕೊಂಡರೆ ಅದು ನಿಸ್ವಾರ‍್ಥ.ಕೊರತೆಯ ನೀಗಿಸಿಕೊಳ್ಳುವುದರಲ್ಲಿ ತೊಡಗಿಕೊಂಡರೆ ಅದು ಸ್ವಾರ್ಥ ಎಂಬ ತಪ್ಪು ಕಲ್ಪನೆಯಲ್ಲಿ ಕಾಲ ಕಳೆಯಬೇಡಿ. ‘ತನ್ನ ಹಿತವನ್ನು ನೋಡಿಕೊಳ್ಳುವುದು ಸ್ವಾರ‍್ಥವಲ್ಲ. ಇತರರ ಹಿತಕ್ಕೆ ದಕ್ಕೆ ತರುವುದೇ ಸ್ರ‍ಾರ್ಥ.’ ಎಂಬುದನ್ನು ಅರಿತು ಮುನ್ನಡೆಯಿರಿ.

ಆಸಕ್ತಿ ಗುರುತಿಸಿಕೊಳ್ಳಿ

ವಾತ್ಸಾಯನ ಮುನಿಯ ನುಡಿಯಂತೆ ‘ಒಂದೇ ಒಂದು ದೋಷವು ಎಲ್ಲ ಗುಣಗಳನ್ನು ಕೆಡಿಸಿಬಿಡುತ್ತದೆ.’ ಹೋಲಿಕೆಯಲ್ಲಿ ಬಿದ್ದು ಬಿಟ್ಟರೆ ನಮ್ಮೆಲ್ಲ ಸಾರ್ಥಕ್ಯ ಶಕ್ತಿ ವಿನಾಶವಾದಂತೆಯೇ ಸರಿ. ನಿಮಗೆ ಯಾವ ರಂಗದಲ್ಲಿ ಆಸಕ್ತಿ  ಇದೆ ಎಂಬುದನ್ನು ಗುರುತಿಸಿ. ಬಡತನದ ಕಾರಣದಿಂದ ಶಾಲಾ ಶಿಕ್ಷಣ ಪಡೆಯದ ಬಾಲಕನೊಬ್ಬ ಹೊಟ್ಟೆ ಪಾಡಿಗಾಗಿ ಬುಕ್ ಬೈಂಡಿಂಗ್ ಕೆಲಸ ಮಾಡುತ್ತಿದ್ದ. ಬೈಂಡಿಂಗಿಗೆ ಬಂದ ಪುಸ್ತಕಗಳನ್ನು ಓದುವ ಗೀಳು ಬೆಳೆಸಿಕೊಂಡ. ಬರ ಬರುತ್ತ ವಿಜ್ಞಾನದಲ್ಲಿ ತನಗಿರುವ ಆಸಕ್ತಿಯನ್ನು ಗುರುತಿಸಿಕೊಂಡು ಸರ್ ಹಂಪ್ರೆ ಡೇವಿಯ ಸಹಾಯಕನಾಗಿ ಕಾರ‍್ಯ ನಿರ‍್ವಹಿಸಿ ಕೊನೆಗೆ  ಜಗತ್ತಿನ  ಸುಪ್ರಸಿದ್ಧ ವಿಜ್ಞಾನಿಯಾದ ಆತನೇ ಮೈಕೆಲ್ ಫ್ಯಾರಡೆ. ಆಸಕ್ತಿಯನ್ನು ಗುರುತಿಸಿಕೊಳ್ಳಬೇಕೆಂದರೆ ನಿಮ್ಮನ್ನು ನೀವು ಅರ್ಥೈಸಿಕೊಳ್ಳಿ. ಅಂದರೆ  ನಿಮ್ಮಲ್ಲಿರುವ ಬಲ ಮತ್ತು ಬಲಹೀನತೆಗಳನ್ನು ತಿಳಿದುಕೊಳ್ಳಿ. ಈ ಕೆಲಸ ನನಗೆ ತುಂಬಾ ಖುಷಿ ನೀಡುತ್ತದೆ. ಇದನ್ನು ನಾನು ಇತರರಿಗಿಂತ ಬಹಳಷ್ಟು ಚೆನ್ನಾಗಿ ಮಾಡಬಲ್ಲೆ. ವಿವಿಧ ವಿಷಯಗಳಲ್ಲಿ ಆಸಕ್ತಿ ಇದೆ ಎಂದೆನಿಸಿದಾಗ ಇದನ್ನು ಮಾಡದಿದ್ದರೆ ಏನೋ ಕಳೆದುಕೊಂಡಂತೆ ಅನಿಸುತ್ತದೆ. ಈ ಕೆಲಸ ನನಗೆ ಪಂಚ ಪ್ರಾಣ. ಇದನ್ನು ಮಾಡದೇ ನಾನಿರಲಾರೆ.ಅಂತ ಹೇಳುತ್ತಿರೋ ಅದೇ ನಿಜವಾಗಲೂ ನಿಮ್ಮ ಆಸಕ್ತಿ ಎಂದು ಪರಿಗಣಿಸಿ ನಿಮ್ಮ ಗುರಿಯನ್ನು ನಿರ‍್ಣಯಿಸಿ.

ನೀವು ನೀವಾಗಿರಿ

ಬೇರೆಯವರು ನಿಮ್ಮನ್ನು ಇಷ್ಟಪಡಬೇಕೆಂದು ನಿಮಗೆ ಇಷ್ಟವಿಲ್ಲದ, ನಿಮ್ಮ ವ್ಯಕ್ತಿತ್ವಕ್ಕೆ ಹೊಂದದ ಬದಲಾವಣೆಗಳಿಗೆ ಮುಂದಾಗವೇಡಿ. ಭೌತಿಕವಾಗಿ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಲು ಪ್ರಯತ್ನಿಸಬೇಡಿ. ನಿಮ್ಮ ಕುಟುಂಬದ ಆಚರಣೆಗಳು, ಪದ್ದತಿಗಳು, ಸತ್ಸಂಪ್ರದಾಯಗಳು, ಹಬ್ಬ ಹರಿದಿನಗಳು, ವ್ರತಾಚರಣೆಗಳು ಮೌಢ್ಯತೆಯಿಂದ ಮುಕ್ತವಾಗಿರುವಾಗ ಅವುಗಳನ್ನು ಬದಲಾಯಿಸುವುದರಿಂದ ಅರ‍್ಥವಿಲ್ಲ. ಸಣಕಲು ದೇಹದವನು ದಪ್ಪದಾಗಿ ಕಾಣಲು ಸ್ವೆಟರ್ ಧರಿಸಿದರೆ ನೀವು ಅದನ್ನು ಫ್ಯಾಷನ್ ಎಂದು ತಿಳಿದು ತಡೆದುಕೊಳ್ಳಲಾರದ ಬೇಸಿಗೆಯ ಧಗೆಯಲ್ಲಿ ಒದ್ದಾಡಬೇಕಾಗುತ್ತದೆ.  ಅಂಧರಾಗಿ ಅನುಕರಿಸಲು ಹೋದರೆ ನಗೆಪಾಟಲಿಗೆ ಈಡಾಗುತ್ತೀರಿ. ನಿಮ್ಮ ದೇಹಕ್ಕೆ ಕಾಲಮಾನಕ್ಕೆ ಏನು ಸೂಕ್ತವೋ ಅದನ್ನೇ ಧರಿಸಿ. ನಟ ಪುನೀತ್ ರಾಜ್ ಕುಮಾರ ಎಂದರೆ ಅಚ್ಚು ಮೆಚ್ಚು ಆತನ ಬಿಗ್ ಫ್ಯಾನ್ ನಾನು ಎನ್ನುತ್ತ ಆತನ ನಡೆ ನುಡಿಯನ್ನು ಅನುಸರಿಸಿದರೆ ನಿಮ್ಮನ್ನು ಜ್ಯೂನಿಯರ್ ಪುನಿತ್ ಎಂದು ಕರೆಯುತ್ತಾರೆ ಹೊರತು ನಿಮ್ಮನ್ನು ನಿಮ್ಮ ಹೆಸರಿನಲ್ಲಿ ಗುರುತಿಸುವುದಿಲ್ಲ. ಹೀಗಾಗಿ ಎಲ್ಲೆಲ್ಲಿ ಯಾವುದು ಒಳ್ಳೆಯದಿದೆಯೋ ಅದನ್ನು ನಿಮ್ಮದಾಗಿಸಿಕೊಳ್ಳಿ ಆದರೆ ಸಂಪೂರ‍್ಣವಾಗಿ ನಿಮ್ಮತನವನ್ನು ಬಿಟ್ಟುಕೊಡಬೇಡಿ. ಹಾಗೆ ಮಾಡಲು ಹೋದರೆ ನವಿಲು ಕುಣಿಯುತ್ತೆ ಅಂತ ಕೆಂಬೂತ ಕುಣಿಯಲು ಹೋದಂತೆ ಆಗುತ್ತದೆ. ‘ನಮಗೆ ಜೀವನವನ್ನು ಕೊಟ್ಟ ದೇವರು ಅದರ ಜೊತೆಯಲ್ಲಿಯೇ ಸ್ವಾತಂತ್ರ್ಯವನ್ನೂ ದಯಪಾಲಿಸಿದ್ದಾನೆ.’ ಎಂಬುದು ಜೆರ‍್ಸನ್ ಮಾತು. ಸ್ವತಂತ್ರವಾಗಿ ನೆಮ್ಮದಿಯಿಂದಿರಿ. ಸ್ವಸ್ವಾರ್ಥದಿಂದ ಪಡೆಯುವ ಗೌರವವೇ ನಿಜವಾದ ಗೌರವ.

ಅವಮಾನಗಳಿಗೆ ಹೆದರದಿರಿ

ಬಹು ಅಂಗವೈಕಲ್ಯವನ್ನು ಹೊರೆ ಎಂದುಕೊಳ್ಳದೇ ಸಾಧನೆಯ ಪರ‍್ವತವನ್ನೇರಿದ ಹೆಲೆನ್ ಕೆಲ್ಲರ್, ಕುರುಡನಾದರೂ ಡಾಕ್ಟರ್ ಆದ ಡೇವಿಡ್ ಹರ‍್ಟ್ಮನ್,ಬಡತನವನ್ನು ಬೆನ್ನಿಗಂಟಿಸಿಕೊಂಡು ಹುಟ್ಟಿದ ಅಬ್ರಹಾಂ ಲಿಂಕನ್ ಅಧ್ಯಕ್ಷನಾಗಲು ಪಟ್ಟ ಅವಮಾನಗಳು ಅಷ್ಟಿಷ್ಟಲ್ಲ. ಹೆಜ್ಜೆ ಹೆಜ್ಜೆಗೂ ಅವಮಾನದ ರುಚಿಯನ್ನು ಕಂಡವರೆ ಅವರೆಲ್ಲ. ಆದರೂ ತನ್ನಂತೆ ಇರುವವರ ಜೊತೆ ತಮ್ಮನ್ನು ಹೋಲಿಸಿಕೊಂಡು ಅಮೂಲ್ಯ ಜೀವನ ವ್ಯರ್ಥವಾಗಿಸಿಕೊಳ್ಳಲಿಲ್ಲ. ಬದಲಾಗಿ ಅವಮಾನಗಳಿಗೆ ಕೆಚ್ಚೆದೆಯಿಂದ ಸೆಡ್ಡು ಹೊಡೆದು ಗೆದ್ದರು. ಖ್ಯಾತ ಫೋರ‍್ಢ್   ಮೋಟಾರು ಕಂಪನಿಯ ಮುಖ್ಯಸ್ಥ ಹೆನ್ರಿ ಫೋರ‍್ಢ್ ಕಾರು ಕಂಡು ಹಿಡಿಯುವ ಕಠಿಣ ಪರಿಶ್ರಮದಲ್ಲಿದ್ದ ಕಾಲದಲ್ಲಿ ಒಬ್ಬ ಹಳ್ಳಿಗ ಆತನನ್ನು ಉದ್ದೇಶಿಸಿ,’ಕುದುರೆಗಳೇ ಇಲ್ಲದ ಚಕ್ರದ ರಥವನ್ನು ಎಳೆಯಬೇಕು ಅಂದುಕೊಂಡಿದ್ದಿಯಾ? ಶ್ರೀಮಂತ ಆಗೋ ಹುಚ್ಚು ಕನಸು ಕಾಣ್ತಿದಿಯಾ?’ ಎಂದು ವ್ಯಂಗ್ಯವಾಗಿ ಕೇಳಿದನಂತೆ. ಅದಕ್ಕೆ ಫೋರ‍್ಡ್ ‘ನಾನಷ್ಟೇ ಅಲ್ಲ ಸಾವಿರಾರು ಜನರನ್ನು ಶ್ರೀಮಂತರನ್ನಾಗಿ ಮಾಡಬೇಕು ಅಂತ ಕನಸು ಕಾಣ್ತಿದಿನಿ.’ ಅಂತ ಗಟ್ಟಿಯಾದ ಧ್ವನಿಯಲ್ಲಿ ಉತ್ತರಿಸಿದನಲ್ಲದೇ ತಾನು ಅಂದಂತೆ ಸಾಧಿಸಿದ. ಹೋಲಿಕೆಯ ಗೋರಿಯಲ್ಲಿ ಹೂತುಕೊಳ್ಳದೇ ನೈಜತೆಯನ್ನು ಅರ‍್ಥೈಸಿಕೊಂಡು ನಡೆದರೆ  ಚೆಂದದ ಜೀವನವೊಂದು ನಾವು ನಡೆಯುವ ದಾರಿಯಲ್ಲಿ ಮುಗಳ್ನಗುತ್ತದೆ.

*************

ಲೇಖಕರ ಬಗ್ಗೆ

ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

6 thoughts on “ಬಿಟ್ಟು ಬಿಡಿ ಹೋಲಿಕೆ ಬೆಳೆಸಿಕೊಳ್ಳಿ ಸ್ವಂತಿಕೆ

  1. ಚಿಂತನೀಯ ಬರಹ…ಹೋಲಿಸಿದರೆ ಅಪಾಯವೇ….
    ಫೈಜ್ನಟ್ರಾಜ್

    1. ಧನ್ಯವಾದಗಳು ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ

  2. “ನೀವು ನೀವಾಗಿರಿ”
    ಸ್ಪರ್ಧಾಜಗತ್ತಿಗೆ ಕನ್ನಡಿ ಹಿಡಿಯುತ್ತಾ, ನಾನು ನಾವಾಗುವತ್ತ, ನಮ್ಮೊಳಗಿನ ಬೆಳಕನ್ನು ಡಿಸ್ಕವರ್ ಮಾಡುವತ್ತ ಪ್ರೋತ್ಸಾಹ ಕೊಡುವ ಉತ್ತಮ ಲೇಖನ, ಜಯಶ್ರೀ ಅವರೇ.

    1. ಧನ್ಯೋಸ್ಮಿ ಸಹೃದಯ ಪ್ರತಿಕ್ರಿಯೆಗೆ

Leave a Reply

Back To Top