ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಬದುಕಿನ ಸೂಕ್ಷ್ಮ ಸಂವೇದನೆಗಳ ಕಥಾಲೋಕ
‘ಅನಾರ್ಕಲಿಯ ಸೇಫ್ಟಿಪಿನ್’
ಕಥೆಗಾರರು: ಜಯಂತ ಕಾಯ್ಕಿಣಿ

ಕನ್ನಡದ ಸಮಕಾಲೀನ ಕಥಾಸಾಹಿತ್ಯದಲ್ಲಿ ತಮ್ಮದೇ ಆದ ವಿಶಿಷ್ಟ ಕಥನಶೈಲಿ, ಭಾಷೆಯ ಲಾಲಿತ್ಯ, ಜೀವನಾನುಭವಗಳ ಸೂಕ್ಷ್ಮ ಅಭಿವ್ಯಕ್ತಿ ಹಾಗೂ ಮಾನವೀಯ ಸಂವೇದನೆಗಳ ಮೂಲಕ ವಿಶಿಷ್ಟ ಸ್ಥಾನ ಪಡೆದಿರುವ ಕಥೆಗಾರರು ಶ್ರೀ ಜಯಂತ ಕಾಯ್ಕಿಣಿ. ಅವರ ಕಥೆಗಳು ಬದುಕಿನ ದೊಡ್ಡ ಘಟನೆಗಳಿಗಿಂತಲೂ ಸಾಮಾನ್ಯವೆಂದು ಭಾವಿಸುವ ಸಣ್ಣಪುಟ್ಟ ಸಂಗತಿಗಳೊಳಗೆ ಅಡಗಿರುವ ಅಸಾಮಾನ್ಯ ಅನುಭವಗಳನ್ನು ಅನಾವರಣಗೊಳಿಸುತ್ತವೆ. ಮನುಷ್ಯನ ಅಂತರಂಗದ ತಲ್ಲಣಗಳು, ಸಂಬಂಧಗಳ ಸಂಕೀರ್ಣತೆ, ನೆನಪುಗಳ ಮಧುರತೆ, ಒಂಟಿತನದ ನೋವು ಹಾಗೂ ಬದುಕಿನ ಅನಿರೀಕ್ಷಿತ ತಿರುವುಗಳು ಅವರ ಕಥೆಗಳ ಜೀವಾಳ.

ಹೆಮ್ಮೆಯ ಸರಳ ಸದ್ಗುಣಿ ಮತ್ತು ಮೃದುಭಾಷಿ ಜಯಂತ ಕಾಯ್ಕಿಣಿ ರವರು ಸಾಹಿತ್ಯ ಪ್ರಪಂಚಕ್ಕೆ ನಾನು ಬರೆಯಲು ಪ್ರಾರಂಭಿಸಿದಾಗ,ನಮ್ಮ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ರಾಜರಾಜೇಶ್ವರಿ ಪ್ರೌಢಶಾಲೆಯಲ್ಲಿ ಕಾವ್ಯ ಕಮ್ಮಟ ಕಾರ್ಯಕ್ರಮ…ಕವನ,ಕಥೆ ಬರೆಯುವ ಬಗ್ಗೆ ಶಿಬಿರ ಆಯೋಜನೆ…ನಮಗೆ ಮಾರ್ಗದರ್ಶನ ನೀಡಲು ಜಯಂತ ಕಾಯ್ಕಿಣಿ ಸರ್ ಮತ್ತು ಎಚ್ ಎಸ್ ರಾಘವೇಂದ್ರ ರಾವ್..ಮತ್ತೆ ಹಿರಿಯರ ನೆನಪಾಗುತ್ತಿಲ್ಲ‌..ಕಲಿಯಬೇಕೆಂಬ ಆಸೆ…ಬಡತನ ಆ ಶಿಬಿರಕ್ಕೆ ಹಣ ತುಂಬಲು ನನ್ನಿಂದ ಆಗಿರಲಿಲ್ಲ..ಬಿಸಗೋಡ ಹೈಸ್ಕೂಲ್ ನ ಮುಖ್ಯಾಧ್ಯಾಪಕರು ದಿ.ಟಿ.ರಾಜಶೇಖರ ಸರ್ ನನ್ನಲ್ಲಿಯ ಸಾಹಿತ್ಯ ಆಸಕ್ತಿ ಗಮನಿಸಿ ಅವರೇ ಹಣ ತುಂಬಿ ಬೇರೆಯವರ ಮನೆಯಲ್ಲಿ ವಸತಿ ವ್ಯವಸ್ಥೆ ಮಾಡಿ ಕಳಿಸಿದ್ದು ಮತ್ತು ಇಂತಹ ಮಹಾನ್ ವ್ಯಕ್ತಿಗಳ ಬಳಿ ಒಂದಿಷ್ಟು ಒಳ್ಳೆಯ ಅಂಶ ಕಲಿಯಲು ಕಳಿಸಿದ್ದು ನನ್ನ ಸೌಭಾಗ್ಯ.

ಜಯಂತ ಕಾಯ್ಕಿಣಿಯವರ ‘ಅನಾರ್ಕಲಿಯ ಸೇಫ್ಟಿಪಿನ್’ ಕಥಾಸಂಕಲನವು ಒಂಬತ್ತು ವಿಭಿನ್ನ ಕಥೆಗಳನ್ನು ಒಳಗೊಂಡಿದೆ. ‘ಕುತನಿ ಕುಲಾಯಿ’, ‘ಭಾಮೆ ಕೇಳೊಂದು ದಿನ’, ‘ಬೆಳಕಿನ ಬಿಡಾರ’, ‘ವಾಯಾ ಚಿನ್ನದ ಕೇರಿ’, ‘ಎವರ್ ಗ್ರೀನ್’, ‘ಕಾಗದದ ಚೂರು’, ‘ಹಲೋ ಮೈಕ್ ಟೆಸ್ಟಿಂಗ್’, ‘ಅನಾರ್ಕಲಿಯ ಸೇಫ್ಟಿಪಿನ್’ ಮತ್ತು ‘ಮೃಗನಯನಾ’ ಕಥೆಗಳು ಬದುಕಿನ ವಿವಿಧ ಆಯಾಮಗಳನ್ನು ತೆರೆದಿಡುತ್ತವೆ. ಪ್ರತಿಯೊಂದು ಕಥೆಯೂ ತನ್ನದೇ ಆದ ವಸ್ತು, ಪಾತ್ರ ಮತ್ತು ಭಾವನಾತ್ಮಕ ನೆಲೆಯನ್ನು ಹೊಂದಿದ್ದು, ಓದುಗರನ್ನು ಮಾನವ ಸಂಬಂಧಗಳ ಆಳವಾದ ಲೋಕಕ್ಕೆ ಕರೆದೊಯ್ಯುತ್ತದೆ.

ಕಥಾ ಕೃತಿಯ ಮೊದಲ ಆಕರ್ಷಣೆಯ ಕೇಂದ್ರ ಬಿಂದು
“ಅನಾರ್ಕಲಿಯ ಸೇಫ್ಟಿಪಿನ್”   ನೆನಪುಗಳ ಸಂಕೀರ್ಣತೆ
ಸಂಕಲನದ ಶೀರ್ಷಿಕೆಯ ಕಥೆಯಾದ ‘ಅನಾರ್ಕಲಿಯ ಸೇಫ್ಟಿಪಿನ್’ ಕಡಲತೀರದ ಸುಂದರ ಪರಿಸರದಲ್ಲಿ ತೆರೆದುಕೊಳ್ಳುತ್ತದೆ. ಸಮುದ್ರದ ಅಲೆಗಳು, ದೀಪಸ್ತಂಭದ ಸುತ್ತಲಿನ ವಾತಾವರಣ, ಸಂಜೆಯ ಮಂಕುಬೆಳಕು ಮತ್ತು ಕಡಲತೀರದ ಜನಜೀವನ ಕಥೆಗೆ ಜೀವಂತಿಕೆಯನ್ನು ನೀಡುತ್ತವೆ.ಅನಿ ಮತ್ತು ಚಮೇಲಿ ಪಾತ್ರಗಳ ಮೂಲಕ ಬಾಲ್ಯದ ನೆನಪುಗಳು, ಕುಟುಂಬದೊಳಗಿನ ಸಂಘರ್ಷಗಳು, ತಾಯಿಯ ನೋವುಗಳು ಹಾಗೂ ಬದುಕಿನ ಅನಿವಾರ್ಯತೆಗಳು ಅನಾವರಣಗೊಳ್ಳುತ್ತವೆ. ಕಥೆಯಲ್ಲಿ ಬರುವ ಅನಾರ್ಕಲಿ ಮತ್ತು ನೂರಾರು ಸೇಫ್ಟಿಪಿನ್‌ಗಳ ಕಲ್ಪನೆ ಕೇವಲ ವಸ್ತುವಿನ ವರ್ಣನೆಯಾಗಿ ಉಳಿಯದೆ ಸಾಂಕೇತಿಕ ಅರ್ಥವನ್ನು ಪಡೆದುಕೊಳ್ಳುತ್ತದೆ. ದೊಡ್ಡಮ್ಮನ ನೆನಪುಗಳು, ಸಿನಿಮಾ ಪ್ರಸಂಗಗಳು ಹಾಗೂ ದ್ರೌಪದಿಯ ವಸ್ತ್ರಾಪಹರಣದ ಪ್ರಸಂಗಗಳೊಂದಿಗೆ ಸೇಫ್ಟಿಪಿನ್‌ಗಳನ್ನು ಬೆಸೆಯುವ ಲೇಖಕರ ಕಲ್ಪನಾಶಕ್ತಿ ಗಮನಾರ್ಹವಾಗಿದೆ.ಸಮುದ್ರದ ಅಲೆಗಳ ನಡುವೆ ಎದುರಾಗುವ ಅನಿರೀಕ್ಷಿತ ಅಪಾಯ ಮತ್ತು ಅನಿಯನ್ನು ರಕ್ಷಿಸುವ ಸನ್ನಿವೇಶ ಬದುಕಿನ ಅನಿಶ್ಚಿತತೆಯನ್ನು ಪ್ರತಿಬಿಂಬಿಸುತ್ತದೆ. ಇಲ್ಲಿ ಸಮುದ್ರ ಪ್ರಕೃತಿಯ ಸೌಂದರ್ಯದ ಸಂಕೇತ ಮಾತ್ರವಲ್ಲ; ಮನುಷ್ಯನ ಮನಸ್ಸಿನ ತಲ್ಲಣ, ಭಯ ಮತ್ತು ಬದುಕಿನ ಅನಿಶ್ಚಿತತೆಯ ರೂಪಕವೂ ಆಗುತ್ತದೆ. ನೆನಪು ಮತ್ತು ವರ್ತಮಾನಗಳ ನಡುವಿನ ಸಂಬಂಧವನ್ನು ಕಥೆ ಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ.

ಎವರ್ ಗ್ರೀನ್ ಕತೆಯು ಬಣ್ಣದ ಲೋಕದ ಹಿಂದಿನ ಬವಣೆ.

‘ಎವರ್ ಗ್ರೀನ್’ ಕಥೆಯು ಚಲನಚಿತ್ರ ಮತ್ತು ಧಾರಾವಾಹಿಗಳ ಆಕರ್ಷಕ ಬಣ್ಣದ ಲೋಕದ ಹಿಂದಿರುವ ನೈಜ ಬದುಕನ್ನು ಪರಿಚಯಿಸುತ್ತದೆ. ಚಿತ್ರೀಕರಣದ ಸ್ಥಳ, ತಾಂತ್ರಿಕ ಸಿಬ್ಬಂದಿ, ಲೈಟ್‌ಬಾಯ್‌ಗಳು, ನೃತ್ಯ ಕಲಾವಿದರು ಹಾಗೂ ನಟ-ನಟಿಯರ ಒಡನಾಟದ ಮೂಲಕ ಸಿನಿಮಾ ಜಗತ್ತಿನ ಒಳಮಗ್ಗುಲುಗಳು ತೆರೆದುಕೊಳ್ಳುತ್ತವೆ.ಹಿರಿಯ ನಟ ಶರತ್‌ಚಂದ್ರ ಮತ್ತು ಅವರ ಮಗ ವಿಲೋಮ ಪಾತ್ರಗಳ ಮೂಲಕ ತಂದೆ-ಮಕ್ಕಳ ನಡುವಿನ ಭಾವನಾತ್ಮಕ ಅಂತರ, ತಲೆಮಾರುಗಳ ಆಲೋಚನಾ ವ್ಯತ್ಯಾಸ ಹಾಗೂ ವೃದ್ಧಾಪ್ಯದ ಒಂಟಿತನವನ್ನು ಲೇಖಕರು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ತಂದೆಯ ಜನ್ಮದಿನದಂದು ಮಗ ನೀಡಲು ಬಯಸುವ ಅಚ್ಚರಿಯ ಉಡುಗೊರೆಯ ಸನ್ನಿವೇಶವು ಸಂಬಂಧಗಳಲ್ಲಿನ ಪ್ರೀತಿ, ನಿರೀಕ್ಷೆ ಮತ್ತು ಆತ್ಮೀಯತೆಯ ಮಹತ್ವವನ್ನು ಮನದಟ್ಟು ಮಾಡುತ್ತದೆ.ತೆರೆಯ ಮೇಲೆ ನಗುವಿನೊಂದಿಗೆ ಕಾಣಿಸಿಕೊಳ್ಳುವ ಕಲಾವಿದರ ಬದುಕಿನಲ್ಲಿಯೂ ನೋವು, ನಿರಾಸೆ ಮತ್ತು ಒಂಟಿತನಗಳಿರುತ್ತವೆ ಎಂಬ ಸತ್ಯವನ್ನು ಈ ಕಥೆ ಮನಮುಟ್ಟುವಂತೆ ನಿರೂಪಿಸುತ್ತದೆ.ಖ್ಯಾತಿ ಮತ್ತುಜನಪ್ರಿಯತೆಗಿಂತಲೂ ಮನುಷ್ಯನಿಗೆ ಅಗತ್ಯವಾಗಿರುವುದು ಪ್ರೀತಿ, ಕಾಳಜಿ ಮತ್ತು ಆತ್ಮೀಯತೆ ಎಂಬ ಜೀವನಸತ್ಯ ಇಲ್ಲಿ ಅಭಿವ್ಯಕ್ತವಾಗುತ್ತದೆ.

ಕುತನಿ ಕುಲಾಯಿ : ಶ್ರಮದ ಬೆವರಿನ ಬದುಕು

‘ಕುತನಿ ಕುಲಾಯಿ’ ಕಥೆಯಲ್ಲಿ ನಗರಜೀವನದ ಗದ್ದಲ, ಬೀದಿಗಳ ಓಡಾಟ, ದುಡಿಮೆಯ ಅನಿವಾರ್ಯತೆ ಮತ್ತು ಸಾಮಾನ್ಯ ಜನರ ಬದುಕಿನ ಸಂಘರ್ಷಗಳು ಚಿತ್ರಿತವಾಗುತ್ತವೆ. ಬಟ್ಟೆ ತೊಳೆಯುವ ಮಹಿಳೆಯರ ಶ್ರಮ, ಬದುಕಿನ ಹೊಣೆಗಾರಿಕೆಗಳು ಹಾಗೂ ದಿನನಿತ್ಯದ ಜಂಜಾಟಗಳ ಮೂಲಕ ಶ್ರಮಜೀವಿಗಳ ಬದುಕಿನ ವಾಸ್ತವವನ್ನು ಲೇಖಕರು ಪರಿಚಯಿಸುತ್ತಾರೆ.
ನಗರದ ಅಭಿವೃದ್ಧಿಯ ಹಿಂದೆ ಅನೇಕ ಸಾಮಾನ್ಯ ಜನರ ಬೆವರಿದೆ. ಆದರೆ ಅವರ ಬದುಕಿನ ನೋವು, ಅನಿವಾರ್ಯತೆ ಮತ್ತು ಅಸಹಾಯಕತೆಗಳು ಸಮಾಜದ ಕಣ್ಣಿಗೆ ಬೀಳದೆ ಉಳಿಯುತ್ತವೆ. ಇಂತಹ ಮೌನ ಬದುಕುಗಳನ್ನು ಕಥೆಯ ವಸ್ತುವಾಗಿಸಿಕೊಳ್ಳುವ ಕಾಯ್ಕಿಣಿಯವರ ದೃಷ್ಟಿಕೋನ ಮಾನವೀಯ ಕಾಳಜಿಯಿಂದ ಕೂಡಿದೆ. ಶ್ರಮದ ಘನತೆಯನ್ನು ಗುರುತಿಸುವಂತೆ ಮಾಡುವುದೇ ಈ ಕಥೆಯ ಪ್ರಮುಖ ಆಶಯವಾಗಿದೆ.

ಇತರ ಕಥೆಗಳ ಕಥನಲೋಕ
‘ಭಾಮೆ ಕೇಳೊಂದು ದಿನ’, ‘ಬೆಳಕಿನ ಬಿಡಾರ’, ‘ವಾಯಾ ಚಿನ್ನದ ಕೇರಿ’, ‘ಕಾಗದದ ಚೂರು’, ‘ಹಲೋ ಮೈಕ್ ಟೆಸ್ಟಿಂಗ್’ ಮತ್ತು ‘ಮೃಗನಯನಾ’ ಕಥೆಗಳು ಸಂಕಲನದ ವೈವಿಧ್ಯತೆಯನ್ನು ಹೆಚ್ಚಿಸುತ್ತವೆ. ಕಥೆಗಳ ಶೀರ್ಷಿಕೆಗಳಲ್ಲಿಯೇ ಒಂದು ಕುತೂಹಲ ಮತ್ತು ವಿಶಿಷ್ಟ ಆಕರ್ಷಣೆ ಅಡಗಿದೆ.ಈ ಕಥೆಗಳ ಮೂಲಕ ಪ್ರೀತಿ, ಸ್ನೇಹ, ನೆನಪು, ಬದುಕಿನ ಹೋರಾಟ, ಸಂಬಂಧಗಳ ಏರಿಳಿತ, ನಗರಜೀವನದ ಸಂಕೀರ್ಣತೆ ಮತ್ತು ಮನುಷ್ಯನ ಅಂತರಂಗದ ಸೂಕ್ಷ್ಮ ಭಾವನೆಗಳ ವಿವಿಧ ಮುಖಗಳನ್ನು ಕಾಣಬಹುದು. ಪ್ರತಿಯೊಂದು ಕಥೆಯೂ ಓದುಗರನ್ನು ವಿಭಿನ್ನ ಅನುಭವದ ನೆಲೆಗೆ ಕರೆದೊಯ್ಯುತ್ತದೆ. ಕಥಾವಸ್ತುವಿನ ವೈವಿಧ್ಯಕ್ಕಿಂತಲೂ ಅವುಗಳೊಳಗಿನ ಮಾನವೀಯ ಸಂವೇದನೆಗಳು ಸಂಕಲನದ ಪ್ರಮುಖ ಆಕರ್ಷಣೆಯಾಗಿವೆ.

ಜಯಂತ ಕಾಯ್ಕಿಣಿಯವರ ಕಥೆಗಳ ಬಹುದೊಡ್ಡ ಶಕ್ತಿ ಅವರ ಭಾಷೆ ಮತ್ತು ನಿರೂಪಣಾ ಕೌಶಲ. ಸರಳವಾದ ಮಾತುಗಳಲ್ಲಿಯೇ ಗಾಢವಾದ ಅರ್ಥವನ್ನು ಹೊಮ್ಮಿಸುವ ಅವರ ಸಾಮರ್ಥ್ಯ ಅನನ್ಯ. ಕರಾವಳಿಯ ಬದುಕಿನ ಸೊಗಡು, ಆಡುಮಾತಿನ ಸಹಜತೆ, ಸಂಭಾಷಣೆಗಳ ಲವಲವಿಕೆ ಮತ್ತು ದೃಶ್ಯಗಳನ್ನು ಕಟ್ಟಿಕೊಡುವ ವರ್ಣನಾತ್ಮಕ ಶೈಲಿ ಕಥೆಗಳಿಗೆ ಕಲಾತ್ಮಕ ಮೆರುಗನ್ನು ನೀಡುತ್ತದೆ.ಅವರ ಕಥೆಗಳನ್ನು ಓದುವಾಗ ಓದುಗ ಕೇವಲ ಅಕ್ಷರಗಳನ್ನು ಓದುತ್ತಿರುವುದಿಲ್ಲ; ಪಾತ್ರಗಳೊಂದಿಗೆ ಮಾತನಾಡುತ್ತಾನೆ, ಅವರ ನೋವುಗಳಿಗೆ ಸ್ಪಂದಿಸುತ್ತಾನೆ, ಅವರ ಪರಿಸರದಲ್ಲಿ ತಾನೂ ಒಬ್ಬನಾಗುತ್ತಾನೆ. ಕೆಲವೊಮ್ಮೆ ಪಾತ್ರಗಳ ಮೌನವೇ ಮಾತಿಗಿಂತ ಹೆಚ್ಚು ಅರ್ಥವನ್ನು ಧ್ವನಿಸುತ್ತದೆ. ಸಣ್ಣ ಘಟನೆಗಳ ಮೂಲಕ ದೊಡ್ಡ ಬದುಕಿನ ಸತ್ಯಗಳನ್ನು ತೆರೆದಿಡುವ ಅವರ ಕಥನತಂತ್ರ ವಿಶೇಷವಾಗಿ ಗಮನ ಸೆಳೆಯುತ್ತದೆ.

ಸಮುದ್ರ, ಮನೆ, ಬೀದಿ, ಚಿತ್ರೀಕರಣದ ತಾಣ ಮತ್ತು ಸಾಮಾನ್ಯ ಜನರ ಬದುಕು ಇವೆಲ್ಲವೂ ಕಥೆಗಳಲ್ಲಿ ಕೇವಲ ಹಿನ್ನೆಲೆಯಾಗಿ ಉಳಿಯದೆ ಪಾತ್ರಗಳ ಭಾವಲೋಕದ ಭಾಗವಾಗುತ್ತವೆ. ರೂಪಕ, ಸಂಕೇತ ಮತ್ತು ನೆನಪುಗಳ ಹಂದರ ಕಥೆಗಳಿಗೆ ಮತ್ತಷ್ಟು ಆಳವನ್ನು ನೀಡುತ್ತದೆ. ಓದುಗರ ಕಲ್ಪನಾಶಕ್ತಿಯನ್ನು ಪ್ರಚೋದಿಸುವ ಈ ನಿರೂಪಣಾ ಕ್ರಮವೇ ಕಾಯ್ಕಿಣಿಯವರ ಕಥೆಗಳಿಗೆ ವಿಶಿಷ್ಟ ಗುರುತನ್ನು ತಂದುಕೊಟ್ಟಿದೆ.
ಕೃತಿಯ ಆಶಯ ಮತ್ತು ವಿಮರ್ಶಾತ್ಮಕ ನೋಟ,ಈ ಕಥಾಸಂಕಲನದ ಕಥೆಗಳನ್ನು ಒಟ್ಟಾಗಿ ಗಮನಿಸಿದಾಗ ಮನುಷ್ಯನ ಬದುಕಿನ ಬಾಹ್ಯ ಆಕರ್ಷಣೆಗಳಿಗಿಂತಲೂ ಆಂತರಿಕ ಭಾವನೆಗಳಿಗೆ ಲೇಖಕರು ಹೆಚ್ಚಿನ ಮಹತ್ವ ನೀಡಿರುವುದು ಸ್ಪಷ್ಟವಾಗುತ್ತದೆ. ಬಣ್ಣದ ಲೋಕದ ಹಿಂದೆ ಅಡಗಿರುವ ಒಂಟಿತನವಾಗಲಿ, ಸಮುದ್ರದ ಅಲೆಗಳ ನಡುವೆ ಮೂಡುವ ಭಯವಾಗಲಿ, ದುಡಿಮೆಯ ನಡುವೆ ಮೌನವಾಗಿ ಕಳೆಯುವ ಸಾಮಾನ್ಯ ಜನರ ಬದುಕಾಗಲಿ,ಎಲ್ಲದರಲ್ಲಿಯೂ ಮಾನವೀಯ ಸಂವೇದನೆಗಳನ್ನು ಹುಡುಕುವ ಪ್ರಯತ್ನ ಕಾಣುತ್ತದೆ.ಕಥೆಗಳ ನಿರೂಪಣೆಯಲ್ಲಿ ಘಟನೆಗಳಿಗಿಂತ ಭಾವನೆಗಳಿಗೆ ಹೆಚ್ಚಿನ ಪ್ರಾಧಾನ್ಯವಿದೆ.  ಓದುಗ ಕಥೆಯನ್ನು ಮುಗಿಸಿದ ಮೇಲೂ ಅದರೊಳಗಿನ ಭಾವನೆಗಳನ್ನು ತನ್ನ ಬದುಕಿನ ಅನುಭವಗಳೊಂದಿಗೆ ಹೋಲಿಸಿಕೊಳ್ಳುವಂತೆ ಮಾಡುವುದು ಲೇಖಕರ ಯಶಸ್ಸು ಅಡಗಿದೆ.

ಒಟ್ಟಿನಲ್ಲಿ ಹೇಳುವುದಾದರೆ, ‘ಅನಾರ್ಕಲಿಯ ಸೇಫ್ಟಿಪಿನ್’ ಕೇವಲ ಒಂಬತ್ತು ಕಥೆಗಳ ಸಂಕಲನವಲ್ಲ; ಅದು ಮನುಷ್ಯನ ಬದುಕಿನ ವಿವಿಧ ಭಾವನೆಗಳು, ಸಂಬಂಧಗಳ ಸೂಕ್ಷ್ಮತೆಗಳು ಮತ್ತು ಅನುಭವಗಳ ಅನಾವರಣದ ಕಥಾಲೋಕ. ಬದುಕಿನ ಸಣ್ಣಪುಟ್ಟ ಸಂಗತಿಗಳಲ್ಲಿಯೇ ಅಡಗಿರುವ ದೊಡ್ಡ ಸತ್ಯಗಳನ್ನು ಗುರುತಿಸುವಂತೆ ಮಾಡುವ ಕೃತಿ.
ಜಯಂತ ಕಾಯ್ಕಿಣಿಯವರು ತಮ್ಮ ಕಥೆಗಳಲ್ಲಿ ಪಾತ್ರಗಳನ್ನು ಕೇವಲ ಚಿತ್ರಿಸುವುದಿಲ್ಲ; ಅವರ ಬದುಕಿನೊಳಗೆ ಪ್ರವೇಶಿಸಿ ಅವರ ಭಾವನೆಗಳಿಗೆ ಧ್ವನಿಯಾಗುತ್ತಾರೆ. ಅದಕ್ಕಾಗಿಯೇ ಅವರ ಪಾತ್ರಗಳು ಕಾಲ್ಪನಿಕ ವ್ಯಕ್ತಿಗಳಾಗಿ ಉಳಿಯದೆ ನಮ್ಮ ಸುತ್ತಮುತ್ತಲಿನ ಪರಿಚಿತ ಮುಖಗಳಂತೆ ಕಾಣಿಸುತ್ತವೆ.

ಬದುಕು ಎಂದರೆ ಬರೀ ಘಟನೆಗಳ ಸರಮಾಲೆಯಲ್ಲ; ಅದು ನೆನಪುಗಳ ನವಿರು, ಸಂಬಂಧಗಳ ಬೆಸುಗೆ, ನೋವಿನ ಮೌನ, ಪ್ರೀತಿಯ ಸ್ಪರ್ಶ ಮತ್ತು ನಿರಂತರ ಬದುಕಿನ ಹುಡುಕಾಟ. ಈ ಎಲ್ಲ ಅನುಭವಗಳನ್ನು ಕಥೆಗಳ ಮೂಲಕ ಓದುಗರ ಹೃದಯಕ್ಕೆ ತಲುಪಿಸುವ ‘ಅನಾರ್ಕಲಿಯ ಸೇಫ್ಟಿಪಿನ್’ ಜಯಂತ ಕಾಯ್ಕಿಣಿಯವರ ಸಂವೇದನಾಶೀಲ ಕಥನಪ್ರತಿಭೆಗೆ ಸಾಕ್ಷಿಯಾಗಿರುವ ಗಮನಾರ್ಹ ಕೃತಿಯಾಗಿದೆ.
ಕೆಲವು ಕಥೆಗಳು ಮುಗಿಯುತ್ತವೆ; ಆದರೆ ಅವು ಹುಟ್ಟಿಸುವ ಭಾವನೆಗಳು ಮುಗಿಯುವುದಿಲ್ಲ. ಅಂತಹ ಭಾವನೆಗಳೇ ಈ ಕಥಾಸಂಕಲನದ ನಿಜವಾದ ಸೌಂದರ್ಯ. ಕೃತಿಯ ಒಟ್ಟಾರೆ ಆಶಯವನ್ನು ಪರಿಣಾಮಕಾರಿಯಾಗಿ ಸಾರುತ್ತದೆ.ಕವಿಯ ಒಳತುಡಿತಗಳು ಮಾನವನ ಜೀವಸೆಲೆಯನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ..

ನಾವುಗಳು ಕಥೆಯ ಹಂದರ ಹೆಣೆಯುವಾಗ ಗಮನಿಸಬೇಕಾದ ಚಿಕ್ಕಚಿಕ್ಕ ಸಂಗತಿಗಳು ಬದುಕಿನ ಪ್ರಮುಖ ಭಾಗವಾಗಲು ಪ್ರೇರಣೆಯೆಂಬುವುದು ಅಷ್ಟೇ ಸತ್ಯ.ಹೆಚ್ಚೆಚ್ಚು ಓದುವ ಬಳಗ ಬೆಳೆಯುತ್ತಿರುವುದು ಸ್ವಾಗತಾರ್ಹ!.. ನನ್ನ ಪುಟ್ಟ ಓದು ಅವಲೋಕನವಷ್ಟೇ…ಹೆಚ್ಚು ತಿಳಿದವಳು ನಾನನಲ್ಲ..ಓದುವ ಪ್ರಾಮಾಣಿಕ ಪ್ರಯತ್ನ ಓದು,ಅರ್ಥೈಸುವಿಕೆ ಅವರವರ ಭಾವಕ್ಕೆ ಬಿಟ್ಟಿದ್ದು…


About The Author

Leave a Reply

You cannot copy content of this page

Scroll to Top