ಧಾರಾವಾಹಿ ಸಂಗಾತಿ-25
ಅರ್ಜುನ ಉವಾಚ
ವಿಸ್ವನಾಥ ಎನ್ ನೇರಳೆಕಟ್ಟೆ
ಸಮರಥ ಮಹಾರಥರಿಗೆ ಸೋಲುಣಿಸಿದ
ಹಂಸಧ್ವಜಸುತ ಸುರಥ

ರಥವೇರಿ ಕುಳಿತಾಗಲೇ ಸುರಥನಲ್ಲಿದ್ದದ್ದು ಅತಿರೇಕದ ರೋಷ. ಸಹೋದರ ಸುಧನ್ವನ ರಣಮರಣಕ್ಕೆ ಕಾರಣರಾದವರ ಮರಣವನ್ನು ಕಾಣದೆ ತೆರಳಲಾರೆ ಈ ರಣರಂಗದಿಂದ ಎಂದು ನಿಶ್ಚಯಿಸಿಕೊಂಡೇ ಬಂದಂತಿತ್ತು ಅವನ ನಿಲುವು. “ಇನ್ನು ಆಯುಷ್ಯ ನಿನಗಿಲ್ಲವೋ ಅರ್ಜುನ. ಮೇಧಿನಿಯನ್ನಾಳ್ವ ಋಣವದು ನಿನ್ನಿಂದ ದೂರವಾಯಿತು” ಎಂದು ಆರ್ಭಟಿಸಿದ ನನ್ನೆದುರು ನಿಂತು.
ಅವನ ರಣೋತ್ಸಾಹವನ್ನು ಕಂಡ ಕೃಷ್ಣ ನನ್ನಲ್ಲಿ “ಭೂಮಿಯಲ್ಲಿರುವ ಸಕಲ ಪುಣ್ಯಕಾರ್ಯಗಳನ್ನು ಕೈಗೊಂಡವನಿವನು. ಒಂದೂ ಪಾಪಕಾರ್ಯಗಳನ್ನು ಎಸಗಿದವನಲ್ಲ. ಇವನನ್ನು ಗೆಲ್ಲುವುದು ಅತಿಕಠಿಣ ಕಾರ್ಯ. ಈಗಲೇ ನಾವು ಇವನ ಜೊತೆ ಯುದ್ಧಕ್ಕಿಳಿದರೆ ಸೋಲಾಗುವುದು ಖಚಿತ. ಮೊದಲು ಪ್ರದ್ಯುಮ್ನ, ಸಾತ್ಯಕಿ, ಸಾಂಬ, ಅನುಸಾಲ್ವ, ಕೃತವರ್ಮ, ಯೌವನಾಶ್ವ, ವೃಷಕೇತು, ನೀಲಧ್ವಜರನ್ನು ಇವನೆದುರು ಕಳಿಸು. ಅವರು ಯುದ್ಧ ಮಾಡಲಿ” ಎಂದು ರಣೋಪಾಯವನ್ನು ಅರುಹಿದ.
ಹಾಗೆಯೇ ಮಾಡಿದೆ. ಸಹೋದರನ ಮರಣದಿಂದ ಕೆರಳಿ ಕೆಂಡವಾಗಿದ್ದ ಸುರಥನ ಮುಂದೆ ನಮ್ಮವರ ಶೌರ್ಯ ಸಾಹಸಗಳು ಸಾಗಲಿಲ್ಲ.
ಪ್ರದ್ಯುಮ್ನನನ್ನು ಪುರುಸೊತ್ತಿನಿಂದ ಪತನಗೊಳಿಸಿದ. ಸಾತ್ಯಕಿಗೆ ಸುಲಭವಾಗಿಯೇ ಸೋಲುಣಿಸಿದ. ಕೃತವರ್ಮ ಕ್ರೋಧವದು ಕದನರಂಗದಲ್ಲಿ ಕರಹಿಡಿಯಲಿಲ್ಲ. ಸಾಂಬ ಸರಳವಾಗಿಯೇ ಸೋತುಹೋದ. ಅನುಸಾಲ್ವ ಅನುಕ್ರಮದಿ ಅದಃಪತನವಾದ. ಯೌವನಾಶ್ವ ಯುದ್ಧದಲ್ಲಿ ಯಶಗಾಣಲಿಲ್ಲ. ನೀಲಧ್ವಜ ನೀತಿಯದು ನೆರವೀಯಲಿಲ್ಲ. ಕರ್ಣಸುತ ಕಡುಗೋಪವದು ಕಾರ್ಯವೆಸಗಲಿಲ್ಲ.
ಸಂಪೂರ್ಣ ಯಾದವ ಸೇನೆ ಸುರಥನೆದುರು ಸೋಲುಕಂಡಿತು. ಚತುರಂಗ ಸೈನ್ಯವನ್ನು ಸರಳವಾಗಿ ಸವರಿಬಿಟ್ಟ ಸುರಥ. ತನ್ನ ಒಂದೇ ರಥವನ್ನು ಮುಂದಿಟ್ಟುಕೊಂಡು ಸಮರಥ ಮಹಾರಥರನ್ನು ಹೊಡೆದುರುಳಿಸಿದ.
ಕಾಲವುರುಳಿದಂತೆ ಅವನ ಶಕ್ತಿಯದು ಹೆಚ್ಚುತ್ತಲೇ ಹೋಯಿತು. ಸರೋವರದ ನೀರನ್ನು ಕಲಕಿ ಮೆರೆಯುವ ಮದ್ದಾನೆಯಂತಿತ್ತು ಅವನ ವರ್ತನೆ. ಅವನ ಬಾಣದ ಹೊಡೆತಕ್ಕೆ ಸಕಲ ಸೇನೆ ನೊಂದಿತು. ಸರ್ವ ಸೈನಿಕರ ಶರೀರದಲ್ಲಿ ಗಾಯದ ಗುರುತುಗಳೆದ್ದವು. ಯುದ್ಧರಂಗವನ್ನು ಬಿಟ್ಟು ಬೀದಿ ಬೀದಿಗಳಲ್ಲಿ ಸೈನಿಕರು ಓಡಿಹೋಗುವಂತೆ ಅವರನ್ನು ಬೆದರಿಸಿದ ಸುರಥ. ಅದೆಂತೋ ಕಷ್ಟಪಟ್ಟು ಸೈನಿಕರನ್ನು ಕರೆತಂದು ಮತ್ತೆ ಯುದ್ಧರಂಗದಲ್ಲಿ ನಿಲ್ಲಿಸಿದರೆ ತನ್ನ ಬಾಣದಿಂದ ಅವರ ಪ್ರಾಣವನ್ನು ತಿಂದುಮುಗಿಸಿದ.
ಆ ಬಳಿಕ ಅವನ ನಯನಗಳು ಹುಡುಕಿದ್ದು ನನ್ನನ್ನು; ನನ್ನ ಜೊತೆಗೆ ಘನಶಕ್ತಿಯಾಗಿದ್ದ ಕಮಲನಯನನನ್ನು. ಅವನು ನಮ್ಮ ಸೈನಿಕರನ್ನು ಕೊಂದದ್ದಷ್ಟೇ ಅಲ್ಲ, ಉಳಿದಿದ್ದ ಸೈನಿಕರ ಎದೆಯೊಳಗೆ ಭೀತಿಛಾಯೆಯನ್ನು ಮೂಡಿಸಿದ್ದ. ನಮ್ಮ ಸೈನ್ಯವನ್ನು ಸರ್ವನಾಶ ಮಾಡುವುದಕ್ಕೆ ಸನ್ನದ್ಧನಾದ ಅವನ ಬಗೆಗೆ ನನಗೆ ಕ್ರೋಧ ಉಕ್ಕಿಬಂತು. ನನ್ನನ್ನು ಹುಡುಕುತ್ತಿದ್ದ ಅವನೆದುರು ನಾನೇ ಹೋಗಿನಿಂತೆ. ರೋಷಾವೇಶದಿಂದ ನನ್ನ ಕೈಯ್ಯಲ್ಲಿದ್ದ ಬಿಲ್ಲು ಅದುರಿತು.
ನಾನು ಇದುವರೆಗೂ ಅವನೆದುರು ಹೋಗಿನಿಂತು ಶೌರ್ಯ ತೋರದೇ ಇದ್ದುದಕ್ಕೆ ಕೃಷ್ಣನಿತ್ತಿದ್ದ ಸಲಹೆ ಒಂದು ಕಾರಣವಾದರೆ, ಇನ್ನೊಂದು ಕಾರಣವೂ ಇತ್ತು. ಅದನ್ನೇ ಅವನಲ್ಲಿ ಹೇಳಿದೆ. “ನಿನ್ನ ಸೋದರನಾದ ಆ ಸುಧನ್ವ ಅಳಿದ ದುಃಖವದು ನಿನ್ನಲ್ಲಿದೆ ಎನ್ನುವುದರ ಅರಿವು ನನಗಿದೆ. ಅದಕ್ಕಾಗಿಯೇ ನಾನು ನಿನ್ನ ಮೇಲೆ ದಯೆದೋರಿ ಯುದ್ಧರಂಗಕ್ಕಿಳಿಯುವ ಮನಸ್ಸು ಮಾಡಲಿಲ್ಲ. ಆದರೆ ನೀನು ನನ್ನ ಕರುಣಾಭರಿತ ಚಿತ್ತವನ್ನು ಭಯಪೂರಿತ ಮನಸ್ಸಾಗಿ ಪರಿಭಾವಿಸಿರುವಂತಿದೆ ನಿನ್ನ ವರ್ತನೆ. ಗಟ್ಟಿಯಿದೆಯೆಂದು ತಲೆಯನ್ನು ಬಂಡೆಗೆ ಹೊಡೆದುಕೊಳ್ಳುವ ಮನಸ್ಸು ಮಾಡಿರುವೆ. ನನ್ನೆದುರು ಹೋರಾಡಿದ ಮಾತ್ರಕ್ಕೆ ಗೆಲುವು ನಿನ್ನದಾಗುತ್ತದೆಂಬ ಭ್ರಮೆಯಲ್ಲಿರುವೆ. ಅದು ಸಾಧ್ಯವಿಲ್ಲ. ಕುದುರೆಯನ್ನು ಬಿಟ್ಟುಬಿಡು. ಧರ್ಮರಾಯನ ಸಾರ್ವಭೌಮತ್ವವನ್ನು ಒಪ್ಪು. ಅದುವೇ ನಿನಗೆ ಒಳ್ಳೆಯದು” ಎಂದೆ.
ಕರುಣೆಯ ಕಣ್ಣೋಟವದು ಅವನಿಗೆ ಬೇಕಿರಲಿಲ್ಲ. ಅದು ನಿಜವೀರನ ನಿಲುವು. ಸ್ವಾಭಿಮಾನ ಇರುವ ವ್ಯಕ್ತಿ ದೈನ್ಯಾವಸ್ಥೆಯಲ್ಲಿ ಇನ್ನೊಬ್ಬರೆದುರು ಕಾಣಿಸಲಾರ. ಇನ್ನೊಬ್ಬರ ದೈನ್ಯತೆ ಬೆರೆತ ದೃಷ್ಟಿಯನ್ನು ಸಹಿಸಲಾರ. ಸಹೋದರ ಸುಧನ್ವನ ಸಾವನ್ನು ಅಸಾಮಾನ್ಯ ಬಗೆಯಲ್ಲಿ ವರ್ಣಿಸುವ ಮಾತುಗಳನ್ನಾಡಿದ. “ನಿನ್ನಂತಹ ವೀರರು, ಕೃಷ್ಣನಂತಹ ದೇವತೆಗಳೂ ಸಹ ನನ್ನ ಸಹೋದರನ ಸಾಮರ್ಥ್ಯಕ್ಕೆ ಸರಿಹೊಂದುವವರಲ್ಲ. ನಿನ್ನ ಕ್ರೋಧದ ಫಲವಾಗಿ ಮಡಿದವನು ಅವನಲ್ಲ. ಆ ಶ್ರೀಕೃಷ್ಣ ದಯಪಾಲಿಸಿದ ಪುಣ್ಯವದು ನಿನ್ನ ಬಾಣವನ್ನು ಸೇರಲು ಹರಿಪಾದ ಸೇರಿದವನು ಆ ಸುಧನ್ವ. ಇದರಲ್ಲಿ ನಿನ್ನ ಶಕ್ತಿಯಾದರೂ ಏನಿದೆ! ಸುಧನ್ವನ ಸೋಲಾದರೂ ಎಲ್ಲಿದೆ! ಮುಕ್ತಿ ಪಡೆದಿದ್ದಾನೆ ನನ್ನ ಪ್ರಿಯ ಸಹೋದರ” ಎಂದು ಸೋದರ ಸುಧನ್ವನ ಬಗೆಗೆ ಅತಿಮೆಚ್ಚುಗೆಯ ಮಾತನ್ನಾಡಿ ನನ್ನ ಗೆಲುವನ್ನು ಹೀಗಳೆದ ಸುರಥ. “ಕುದುರೆಯನ್ನು ಬಿಟ್ಟು ಕಳುಹಿಸುವುದಕ್ಕೆ ನಾವೇನೂ ಅರಣ್ಯವಾಸಿಗಳಲ್ಲ” ಎಂದು ಗೂಢಾರ್ಥದ ಮಾತನ್ನು ನುಡಿದು ನನ್ನನ್ನು ಚುಚ್ಚಿದ.
ಘನಘೋರವಾದ ಕದನವೇ ಪ್ರಾರಂಭವಾಯಿತು. ಶ್ರೀಕೃಷ್ಣನನ್ನೂ ಗಾಯಕ್ಕೀಡುಮಾಡುವ ಘನಗಂಭೀರತೆ ತೋರಿದ ಸುರಥ. ನನ್ನನ್ನೂ ಘಾಸಿಗೊಳಿಸಿದ. ಇನ್ನಿವನನ್ನು ಉಳಿಸಬಾರದು ಎಂಬ ಛಲ ಮೂಡಿತು ನನ್ನಲ್ಲಿ. ಕೃಷ್ಣವಾಣಿಯೂ ಅದೇ ತೆರದಲ್ಲಿತ್ತು. ಬಲವಾದ ಬಾಣದಿಂದ ಅವನ ತೋಳನ್ನು ಕತ್ತರಿಸಿದೆ. ಒಂದು ಕೈಯ್ಯನ್ನು ಕಳೆದುಕೊಂಡವನು ನನ್ನ ರಥದೆಡೆಗೇ ಓಡಿಬರತೊಡಗಿದ. ಇನ್ನೊಂದು ತೋಳನ್ನೂ ಕತ್ತರಿಸುವಂತೆ ಕೃಷ್ಣ ಹುರಿದುಂಬಿಸಿದ. ಹಾಗೆಯೇ ಮಾಡಿದೆ. ಎರಡೂ ಕರಗಳಿಲ್ಲದವನಾದ ಕರಕೌಶಲಿ ಸುರಥ. ಅದೇ ಸ್ಥಿತಿಯಲ್ಲಿ ನನ್ನನ್ನು ಕಾಲಿನಿಂದ ಒದೆಯುವುದಾಗಿ ಬೊಬ್ಬೆ ಹೊಡೆಯುತ್ತಾ ಓಡಿ ಬರತೊಡಗಿದ. ಬಾಣ ಪ್ರಯೋಗಿಸಿದೆ. ಅವನ ಎರಡೂ ತೊಡೆಗಳು ಮುರಿದವು. ನೆಲದೆಡೆಗೆ ಮುಖಮಾಡಿ ಸಂಪೂರ್ಣವಾಗಿ ಕುಸಿದುಬಿದ್ದ. ಆಗಲೂ ಅವನ ಛಲ ತಣಿಯಲಿಲ್ಲ. ಹಾಗೆ ತೆವಳುತ್ತಲೇ ನನ್ನೆಡೆಗೆ ಬರತೊಡಗಿದ. ಆಗ ಅವನ ಶಿರದ ಕಡೆಗೆ ಬಾಣಬಿಟ್ಟೆ. ಶಿರವದು ದೇಹದಿಂದ ಬೇರೆಯಾಗಿ ಬಂದು ಕೃಷ್ಣಪಾದವನ್ನು ಸೇರಿತು.
ಅದನ್ನು ಎತ್ತಿಕೊಂಡ ಕೃಷ್ಣ ಕರುಣೆ ನೋಟವನ್ನು ಹರಿಸಿದ. ಆಕಾಶಮಾರ್ಗದಲ್ಲಿ ಸಂಚರಿಸುತ್ತಿದ್ದ ಗರುಡನನ್ನು ಕರೆದ. “ಇದನ್ನು ಪ್ರಯಾಗಕ್ಕೆ ತಲುಪಿಸುವ ಹೊಣೆ ನಿನ್ನದು” ಎಂದು ಹೇಳಿ ಆ ಶಿರವನ್ನಿತ್ತ.
ಹರಿಯಾಜ್ಞೆಗೆ ಅನುಸಾರವಾಗಿ ಅದನ್ನು ಕೊಂಡೊಯ್ಯುತ್ತಿದ್ದ ಗರುಡ ನಡೆಯನ್ನು ಕಂಡವನು ಆ ಶಿವ. ತನಗೆ ಸಲ್ಲಬೇಕಾದ ಶಿರವಿದು ಎನಿಸಿತು ಅವನಿಗೆ. ಗರುಡನಿಂದ ಶಿರವನ್ನು ಪಡೆದುಕೊಂಡು ಬರುವಂತೆ ತಿಳಿಸಿ ನಂದಿಯನ್ನು ಕಳುಹಿಸಿಕೊಟ್ಟ…
ಡಾ. ವಿಶ್ವನಾಥ ಎನ್ ನೇರಳಕಟ್ಟೆ




