ಆಚರಣೆಗಳಲ್ಲಿನ ತಾರತಮ್ಯ

ವಿಚಾರ

ಜ್ಯೋತಿ ಡಿ.ಬೊಮ್ಮಾ

ದೇವರನ್ನು ನಂಬಿ ಕೆಟ್ಟವರಿಲ್ಲ ಎಂಬ ವಾದವನ್ನು ಒಪ್ಪಬಹುದು.ಆದರೆ ದೈವದ ಹೆಸರಲ್ಲಿ ಆಚರಿಸುವ ಆಚರಣೆಗಳಲ್ಲಿನ ತಾರತಮ್ಯ ಒಪ್ಪಲಾಗದು.

ಪೂಜೆಯ ಆಚರಣೆಗಳು ನಮ್ಮ ಮನಸ್ಸಿಗೆ ಸಮಾಧಾನವಾಗಿದ್ದರಷ್ಷೆ ಸಾಲದು ,ಆ ಆಚರಣೆಗಳು ಮತ್ತೊಬ್ಬರ ಮನಸ್ಸಿಗೆ ನೊವನ್ನುಂಟು ಮಾಡಬಾರದು.

ನಿರಾಕಾರನನ್ನು ಒಂದೊಂದು ರೂಪ ಕೊಟ್ಟು ಬಟ್ಟೆ ತೊಡಿಸಿ ಅಲಂಕರಿಸಿ ಒಂದೊಂದು ಹೆಸರು ಕೊಟ್ಟು ಪೂಜಿಸುವರಿಗೆ , ದೇವರನ್ನು ತಾವೆ ಸೃಷ್ಟಿಸುತ್ತಿದ್ದೆವೆ ಎಂಬ ಅರಿವಾಗದೆ..!

ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತಿಕ  ,ಈಗ ಬರುತ್ತಿರುವ ವರಮಹಾಲಕ್ಷಿ ಹಬ್ಬವೂ ಅದಕ್ಕೊಂದು ಉದಾಹರಣೆ.ಲಕ್ಷ್ಮಿ ಎಂದರೆ ಅಡಂಬರದ ಪ್ರತಿಕ , ಭಾರಿ ಸೀರೆ ಉಡಿಸಿ ಒಡವೆ ವಸ್ತ್ರ ಗಳ ಧಾರಣೆ ಮಾಡಿ , ಹೂವಿನ ಮಂಟಪದಲ್ಲಿವಿರಾಜಮಾನಳಾಗಿಸಿ ,ಸುತ್ತಲೂ ದೀಪಗಳ ಅಲಂಕಾರ  ,ತಹರೆವಾರಿ ಅಡುಗೆಗಳ ನೈವೇದ್ಯ ,ವೆರೈಟಿ ತಿಂಡಿಗಳನ್ನು ಮೂರ್ತಿಯ ಮುಂದಿಟ್ಟು ತೃಪ್ತಿ ಪಡಿಸಿ (ಬೇರೆಯವರಿಗೂ ಕರೆದು ತೋರಿಸಿ ) ಅಥವಾ ಪಟ್ಟುಕೊಂಡು ಪೂಜೆಯ ಕಾರ್ಯ ಕೈಗೊಳ್ಳುತ್ತಾರೆ.

ಆದರೆ ಅರಸಿನ ಕುಂಕುಮಕ್ಕೆ ಕೇವಲ ಮುತೈದೆಯರನ್ನೂ ಮಾತ್ರ ಕರೆಯಬೇಕು ಎನ್ನುವ ನಿಯಮ ಎಷ್ಟು ಸಮಂಜಸ..,!

ಕೇವಲ ಗಂಡನ ಇರುವಿಕೆಯಿಂದಲೆ ಅವಳ ಮೌಲ್ಯ ಅರಿಯುವ ಈ ಸಮಾಜದಲ್ಲಿ  ಹೆಣ್ಣಿಗೆ ತನ್ನದೆಯಾದ ಸ್ವಂತ ಅಸ್ತಿತ್ವ ವೆ ಇಲ್ಲವೆ. ಮದುವೆಯಾದ ಮೇಲೆ ಅವಳು ಗಂಡನಿಂದ ಮುತೈದೆ ಪಟ್ಟ ಪಡೆದುಕೊಳ್ಳುತ್ತಾಳೆ .ಅವನು ಅಳಿದ ಮೇಲೆ ಆ ಪಟ್ಟ ಅವಳಿಂದ ಕಿತ್ತುಕೊಳ್ಳಲ್ಪಡುತ್ತದೆ.ಸಮಾಜವು ಕೂಡ ಅವಳು ಮುತೈದೆಯಾಗಿದ್ದರೆ ಮಾತ್ರ ಅವಳಿಗೆ ಶುಭ ಕಾರ್ಯ ಗಳಲ್ಲಿ ಪ್ರಾಮುಖ್ಯತೆ. ಎಷ್ಟೋ ಮಠಗಳಲ್ಲಿ ಮುತೈದೆಯರ ಕುಂಭಮೇಳ ಮತ್ತು ಮುತೈದೆಯರ ಉಡಿತುಂಬುವ ಕಾರ್ಯ ಕ್ರಮ ಆಯೋಜಿಸುತ್ತವೆ ,ಇಂತಹ ಆಚರಣೆಗಳ ಉದ್ದೇಶ ವೇನು..? ಸಮಾಜದಲ್ಲಿನ ಮೌಡ್ಯಗಳನ್ನು ತೊಲಗಿಸುವ ಪ್ರಯತ್ನ ಮಾಡಬೇಕಾದ ಮಠಗಳೆ ಇಂತಹ ಮೌಡ್ಯಕ್ಕೆ ಒತ್ತು ಕೊಟ್ಟರೆ ,ಬೇಲಿಯೆ ಎದ್ದು ಹೋಲ ಮೈದಂತೆ ಅಲ್ಲವೆ..!

ಪೂಜೆಯ ಹೆಸರಿನಲ್ಲಿ ಮುತೈದೆಯರನ್ನು ಮಾತ್ರ ಕರೆದು ಅವರಿಗೆ ಉಡಿ ತುಂಬಿ ಭಾರಿ ಭೋಜನ ಉಣಬಡಿಸಿ (ಮುತೈದೆಯರ ಉಟದ ತಯ್ಯಾರಿ ವಿಧವೆಯರು ಮಾಡಬಹುದು ಆದರೆ  ಅವರು ಬಡಿಸುವದು ಮಾತ್ರ ನಿಷಿದ್ದ ) ತಮ್ಮ ಮುತೈದೆತನ ಧೀರ್ಘ ವಾಗಲೆಂದು ಬೇಡಿಕೊಳ್ಳುತ್ತಾರೆ ,ಇದೊಂದು ಆಶಾದಾಯಕ ಆಚರಣೆ ಆಗಿರಬಹುದು ಅವರವರ ಭಾವದಲ್ಲಿ.ಆದರೆ ಗಂಡನನ್ನು ಕಳೆದುಕೊಂಡ ಸ್ತ್ರೀಯು ತನ್ನನ್ನು ಇಂತಹ ಆಚರಣೆಗಳಿಂದ ದೂರವಿಟ್ಟಿರುವದನ್ನು ಹೇಗೆ ಸಹಿಸಿಯಾಳು.

ಒಂದು ಮೂರ್ತಿಗೆ ಅಲಂಕಾರಮಾಡಿ ನೋಡಿ ಸಂತೋಷ ಪಡುವ ನಾವು , ಜೀವಂತವಾಗಿರುವ ಒಂದು ಜೀವ ಈ ಪೂಜೆಯ ಒಂದು ಭಾಗವಾಗಲಾರದೆ ದೂರದಲ್ಲಿ ನಿಂತು ಮೂಕವಾಗಿ ರೋಧಿಸುವ ತಲ್ಲಣದ ಅರಿವು ನಮಗಾಗದೆ..!

ಮುತೈದೆಯರಿಗೆ ಮಾತ್ರ ಪ್ರಾಶಸ್ತ್ಯ ಕೊಟ್ಟು ತನ್ನನ್ನು ಕಡೆಗಾಣಿಸುವದರಿಂದ ಅವಳು ಮಾನಸಿಕವಾಗಿ ಕುಗ್ಗತ್ತಾಳೆ ,ಖಿನ್ನಳಾಗುತ್ತಾಳೆ ,ಅವಳ ಇಂತಹ ಸ್ಥಿತಿಗೆ ಈ ರೀತಿಯ ತಾರತಮ್ಯ ದ ಆಚರಣೆಗಳು ಪರೋಕ್ಷವಾಗಿ ಕಾರಣವಾಗುತ್ತವೆ.

ಗಂಡನನ್ನು ಕಳೆದುಕೊಂಡ ಹೆಣ್ಣಿಗೆ ಸ್ಥೈರ್ಯ ತುಂಬಿ ಅವಳಲ್ಲಿ ಜೀವನ್ಮುಖಿ ಹುಮ್ಮಸ್ಸು ತುಂಬುವತ್ತ ನಮ್ಮ ಪ್ರಯತ್ನ ವಾಗಬೇಕು.ಅದು ಬಿಟ್ಟು ವಿಧವೆಯರನ್ನೂ ಕಡೆಗಾಣಿಸಿ ಮುತೈದೆಯರನ್ನೂ ವೈಭವಿಕರಿಸುವದು ಯಾವ ನ್ಯಾಯ..! ಯಾವ ದೇವರು ಈ ತಾರತಮ್ಯ ಸೃಷ್ಟಿಸಿದ್ದು..!

ದೇವರೆನಾದರೂ ಮಾತಾಡುವಂತಿದ್ದರೆ ಇಂತಹ ಆಚರಣೆಗಳನ್ನು ಅವನು ಖಂಡಿತ ಖಂಡಿಸುತಿದ್ದನೆನೋ..

ನಡೆಸಿಕೊಂಡು ಬಂದ ಪೂಜೆ ಆಚರಣೆಗಳು ಕೆಲವರ ಬದುಕಿನ ಭಾಗವೆ ಆಗಿರುತ್ತವೆ. ಅವನ್ನು ಅಲ್ಲಗಳೆಯಲು ಅವರ ಮನಸ್ಥಿತಿ ಒಪ್ಪದು.ಆದರೆ ಈಗ ಎಲ್ಲರೂ ವಿದ್ಯಾವಂತರು ,ಹಿಂದಿನಿಂದ ಆಚರಿಸಿಕೊಂಡು ಬಂದ ಸ್ಂಪ್ರದಾಯ ಮುಂದುವರೆಸಿಕೊಂಡು ಹೋಗಬೇಕು ಎಂಬ ನಿಯಮವೇನಾದರು ಇದೆಯೆ…! ಆಚರಣೆಗಳಲ್ಲಿನ ಒಳಿತು ಕೆಡಕುಗಳನ್ನರಿತು ಮತ್ತೊಬ್ಬರ ಮನಸ್ಸಿಗೆ ನೋವಾಗದಂತೆ ,ಅಡಂಬರವಿಲ್ಲದೆ ತೋರಿಕೆಯಿಲ್ಲದೆ ,ಪೂಜೆಮಾಡಬಹುದಲ್ಲವೆ.

ನಮ್ಮೊಳಗಿನ ನಿರಾಕಾರನು ಅದೆ ಬಯಸುವನು.

***********************************

  .

2 thoughts on “ಆಚರಣೆಗಳಲ್ಲಿನ ತಾರತಮ್ಯ

  1. ದೇವರ ಮೇಲಿನ ಭಕ್ತಿಯಿಂದ ಮಾಡುವ ಆಚರಣೆಯ ಬಗ್ಗೆ ಒಂದು ಒಳ್ಳೆಯ ಸಂದೇಶ ನೀಡುವ ಬರಹ

Leave a Reply

Back To Top