ಮಾನವೀಯತೆ ಮಾತನಾಡಲಿ

ಕವಿತೆ

ಪ್ಯಾರಿ ಸುತ

ಮುಂದೊಂದು ದಿನ ನಾವಿಬ್ಬರು ಹೀಗೆ ಸತ್ತುಬಿಡೋಣ
ಅಲ್ಲಿಗೆ ಬರುವವರು ಹೂವಿನ ಹಾರ,
ಕನಿಕರದ ಮಾತುಗಳು,ಕೆಲವಂದಿಷ್ಟು ಬಿಡಿಬಿಡಿ ಹೊಗಳಿಕೆಗಳು,ಅಲ್ಲೊಂದಿಲ್ಲೊಂದು ತೆಗಳಿಕೆಗಳು,
ತಂದು ಅಳುವ ಮುನ್ನ
ಇಲ್ಲವೇ ;
ಸಪ್ಪಳ ಮಾಡುವ ಕಣ್ಣೀರು ಅಳುವೆಂಬ
ಪದವಾಗಿ ಸತ್ತ ಕಿವಿಯನ್ನು
ಸೇರೋ ಮುನ್ನ
ಹಾಗೆ ಮಣ್ಣು ಸೇರಿಬಿಡೋಣ
ಅಲ್ಲಿ ನಾವಿಬ್ಬರು ತಬ್ಬಿಕೊಂಡು ಒಬ್ಬರ ಮುಖವ
ಇನ್ನೊಬ್ಬರು
ಹೊಂದಿಸಿಕೊಂಡು ಬೆತ್ತಲಾಗಿ ಮಲಗೋಣ

ಅಲ್ಲಿ ಉಸಿರಾಡುವ,ಹೆಸರು ಮಾಡುವ ,ಸಮಸ್ಯೆಗಳೇ ಸವಾಲಾಗುವ ಯಾವ ಪ್ರಮೇಯವೇ ಇಲ್ಲವಂತೆ
ಹೆಚ್ಚುಕಡಿಮೆ,ಬಡವ ಧನಿಕ,ಮುಟ್ಟಿಸಿಕೊಳ್ಳದವ
ಎಲ್ಲರೂ ಹೀಗೆ ಸಮಾನವಾಗಿ ಮಲಗಿ ಸುಖಿಸುತ್ತಿದ್ದಾರೆ.
ಲಾಭ-ನಷ್ಟ ,ದುಃಖ-ದುಮ್ಮಾನ ಎಲ್ಲವೂ ಕೆಲಸಕ್ಕೆ ಬಾರದವುಗಳಲ್ಲಿ
ತೇವಳುವ,ತೇಲುವ ದುಡಿಯುವ,ಹೊಡೆಯುವ
ಅದೆಷ್ಟು ಜೀವಗಳು ಸುಮ್ಮನೆ ಮಲಗಿಕೊಂಡಿವೆ

ಅಂತರ, ಜನ್ಮಾಂತರ ಎಲ್ಲವೂ ಇಲ್ಲಿಗೆ ಸಾಕು ಮಾಡಿಬಿಡೋಣ
ಮಾತುಗಳಿಗೆ ಬಿಗಿಯಾದ ಕೊಂಡೆಯೊಂದನ್ನು ಬಿಗಿದು
ಅಲ್ಲಿಯೇ ನಿಲ್ಲಿಸಿಬಿಡೋಣ
ಪ್ರೀತಿಯು ಮಾತನಾಡಲಿ,ಅದಕ್ಕೆ ಯಾವ ಸಣ್ಣ ಬಿಂದುಗಳನ್ನು ಕೊಟ್ಟು ನಿಲ್ಲಸದಿರೋಣ
ಬೆನ್ನು ಹಿಂದೆ ಅವಿತು ಕುಳಿತ, ತನ್ನತಾನು ಮರೆತ
ಮಾನವೀಯತೆಯೂ ಮೊದಲು ಬಂದು ನಿಲ್ಲಲಿ
ಅದಕ್ಕೊಂದಿಷ್ಟು ಪದಗಳಾದರೂ ದಕ್ಕಲಿ

ಮುಂದೊಂದು ದಿನ ನಾವಿಬ್ಬರು ಹೀಗೆ ಸಾಯುವ ಕಲ್ಪನೆ
ತಟ್ಟನೆ ಕಣ್ಣುಮುಂದೆ ತಂದು ನಿಲ್ಲಿಸಿದೊಡನೆ
ಮತ್ತಷ್ಟು ಪ್ರೀತಿ ನಮ್ಮಿಬ್ಬರಲ್ಲಿ ಗಟ್ಟಿಗೊಳ್ಳಬಹುದು

***************

Leave a Reply

Back To Top