ಧಾರಾವಾಹಿ ಸಂಗಾತಿ-13
ಜಯದೇವಿತಾಯಿ ಲಿಗಾಡೆ
ಜೀವನಗಾಥೆ
ಲೇ: ಸವಿತಾ ದೇಶಮುಖ

ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ

*ಭಯವನು ಗೆದ್ದವರು ಇತಿಹಾಸವನ್ನು ರಚಿಸುವರು* ಅನ್ನುವ ಮಾತು ಸುಳ್ಳಾಗಲಿಲ್ಲ……!!!
ಜಯದೇವಿ ತಾಯಿಯವರ ನಿಜಾಮನಂಥ ಶಿಷ್ಟ ಆಳರಸನ ಆಜ್ಞೆಯನ್ನು ಉಲ್ಲಂಘಿಸಿ ಜಹೀರಾಬಾದಿನ ಕಾಂಗ್ರೆಸ್ ಪ್ರಾಂತೀಯ ಪರಿಷತ್ತಿನಲ್ಲಿ ಭಾಗವಹಿಸಿ ಜನಸ್ತೋಮದ ಸ್ಪೂರ್ತಿ ಉತ್ಸಾಹವನ್ನು ಉಲ್ಬಣಿಸಿದ್ದರು. ಇತಿಹಾಸವನ್ನು ರಚಿಸಿದರು.
* ಶರಣರ ಭೂಮ್ಯಾಗ ಮರಣವೆ ಲೇಸಂದು ಹರಣದ ಹಂಗ ತೊರೆದೇನ, ಕಲ್ಯಾಣದ
ಶರಣರಿಗೆ ನೆನೆದೇನ ಮನದಾಗ *
ಅಂತ ಹೇಳುತ್ತಾ ಹೈದರಾಬಾದಿನ ಜಹೇರಾಬಾದಿನಲ್ಲಿ ಗರ್ಜಿಸಿದ ಜಯದೇವಿ ತಾಯಿಯವರು ಕಲ್ಯಾಣ ಶರಣರ ಗಣಾಚಾರ ನೆನೆಯುತ ಕೆಚ್ಚದೆಯ ಧೈರ್ಯ ಸಾಹಸ ಮೇರೆದರು.
ನಿಜಾಮನ ಫರ್ಮಾನ್ನ್ನು ಧಿಕ್ಕರಿಸಿ ಹೈದರಾಬಾದ್ ಮಣ್ಣಿಗೆ ಕಾಲಿಟ್ಟ ಜಯದೇವಿ ತಾಯಿಯವರ ಧೈರ್ಯ….. ಬ್ರಿಟಿಷರ ಗಮನ ಸೆಳೆದಿತ್ತು. ಆ ಸಮಯದಲ್ಲಿ ಎರಡನೇ ಮಹಾಯುದ್ಧ ಉಗ್ರವಾಗಿ ನಡೆಯುತ್ತಿತ್ತು.
ಯುದ್ಧದ ಹೊತ್ತಿನಲ್ಲಿ ತಮ್ಮ ಸೇನೆಗೆ ಹೆಚ್ಚಿನ ಜನರನ್ನು ಸೇರಿಸಿಕೊಳ್ಳಲು ಬ್ರಿಟಿಷರು ವಿವಿಧ ಸಮಾಜಗಳ ನಾಯಕರನ್ನು ಸಂಪರ್ಕಿಸುತ್ತಿದ್ದರು.
ಜಯದೇವಿ ತಾಯಿಯವರನ್ನು ಭೇಟಿ ಮಾಡಿ ವಿನಂತಿಯ ರೂಪದಲ್ಲಿ ಒಂದು ಮಾತು ಹೇಳಿದರು….
“ನೀವು ಲಿಂಗಾಯತ ಸಮಾಜದಲ್ಲಿ ಪ್ರಭಾವ ಹೊಂದಿದ್ದೀರಿ. ನಮ್ಮ ಸೈನ್ಯಕ್ಕಾಗಿ ಲಿಂಗಾಯತ ಯುವಕರನ್ನು ಕೂಡಿಸಿ, ಅವರನ್ನು ಸೇನೆಗೆ ಸೇರಲು ಪ್ರೇರೇಪಿಸಿ. ದೇಶ ಸೇವೆಯ ಹೆಸರಿನಲ್ಲಿ ಇದು ದೊಡ್ಡ ಕಾರ್ಯವಾಗುತ್ತದೆ. ನಿಮ್ಮ ಸೇವೆಗೆ ನಾವು ಗೌರವ ಮತ್ತು ಪ್ರಶಸ್ತಿಯನ್ನು ನೀಡುತ್ತೇವೆ.”ಎಂದರು
ಆ ಮಾತು ಕೇಳಿದ ತಾಯಿಯವರು ಕ್ಷಣಕಾಲ ನಿಶ್ಶಬ್ದವಾಗಿ ನಿಂತರು.ಅವರು ನಿಧಾನವಾಗಿ ತಲೆಯನ್ನು ಎತ್ತಿ, ಕಣ್ಣಲ್ಲಿ ಸ್ಪಷ್ಟತೆ ಮತ್ತು ಧೈರ್ಯ ತುಂಬಿಸಿಕೊಂಡು ಹೇಳಿದರು….
“ಇದು…. ದೇಶ ಸೇವೆಯೇ…..?? ನಮ್ಮ ಜನರನ್ನು ಪರರ ಯುದ್ಧಕ್ಕೆ ಒಪ್ಪಿಸುವ ದಾರಿ…..?”
“ನನ್ನ ಜನರನ್ನು ನಿಮ್ಮ ಯುದ್ಧಕ್ಕಾಗಿ ಹುರಿದುಂಬಿಸಲಾದಿತ್ತೇ????……. ನಾವೇಲ್ಲ ಈ ಮಣ್ಣಿನ ಮಕ್ಕಳು… ನಮ್ಮ ಶಕ್ತಿ, ನಮ್ಮ ಜೀವ…. ದೇಶದ ಸ್ವಾತಂತ್ರ್ಯಕ್ಕಾಗಿ ಹೊರತು ವಿದೇಶಿಯರ ಯುದ್ಧಕ್ಕಾಗಿ ಅಲ್ಲ.” ಎಂದು ಸ್ಪಷ್ಟಪಡಿಸಿದರು.
ಬ್ರಿಟಿಷರು ಮತ್ತೆ ಆಮಿಷಗಳನ್ನು ಮುಂದಿಟ್ಟರು
ಪ್ರಶಸ್ತಿ, ಕೀರ್ತಿ, ಸನ್ಮಾನ ಅಂತ……!!!
ಆದರೆ ತಾಯಿಯವರ ಹೃದಯದಲ್ಲಿ ಅವುಗಳಿಗೆ ಯಾವುದೇ ಸ್ಥಳ ಇರಲಿಲ್ಲ.
“ನನ್ನ ಜನರ ಭವಿಷ್ಯವನ್ನು ನಾನು ಮಾರುವುದಿಲ್ಲ,” ಎಂದು ಅವರು ದೃಢವಾಗಿ ಉತ್ತರಿಸಿದರು.
ಜಯದೇವಿ ತಾಯಿಯವರು ಪ್ರಶಸ್ತಿಗಳನ್ನು ಕೇವಲ ನಿರಾಕರಿಸಿದವರಲ್ಲ….
*ಅವರು ತಮ್ಮ ಸಮುದಾಯದ ಗೌರವವನ್ನು, ದೇಶದ ಆತ್ಮಸಮ್ಮಾನವನ್ನು ಕಾಪಾಡಿದ ಮಹಾನ್ ನಾಯಕಿ ಆಗಿದ್ದರು.*
ಅವರು ಹೇಳುವಂತೆ …. ಮಹಾತ್ಮ ಗಾಂಧಿಯ ಅನುಯಾಯಿಯಾಗಿ ಸ್ವದೇಶಿ ವಸ್ತ್ರವನ್ನು ಧರಿಸಿ ವಿದೇಶರಿಗೆ ಸಹಾಯ ಮಾಡುವುದೆಂದರೆ ದೇಶದ್ರೋಹವೇ ಸರಿ ಎಂದರು.ಪೂರ್ಣ ಪ್ರಮಾಣದಲ್ಲಿ ರಾಷ್ಟ್ರಪಿತಮಹಾನೊಂದಿಗೆ ದೇಶ ಸೇವೆಗೆ ಕಂಕಣ ಬದ್ಧರಾಗಿ ನಿಂತರು.
ಆದರೆ ಮನೆಯಲ್ಲಿಯ ವಿರೋಧವನ್ನು ಎದುರಿಸಬೇಕಾಯಿತು ಏಕೆಂದರೆ ಬ್ರಿಟಿಷರು ಅವರ ಆಸ್ತಿಯ ಮೇಲೆ ತೆರಿಗೆಯ ಭಾರವನ್ನು ಹೇರಿದರು. ಹೆಚ್ಚಿನ ಮೊತ್ತದ “ವಾರ್ ಫಂಡ್” ಜಯದೇವಿ ತಾಯಿಯವರು ಮನೆಯವರು ಕಟ್ಟಬೇಕಾಗಿ ಬಂತು.
ತಾಯಿಯವರು ಸ್ವದೇಶಿ ಅರಿವೇ ಉಡಲು ಪ್ರಾರಂಭಿಸಿದರು.
ಇದೇ ಸಮಯದಲ್ಲಿ. ಹರಡೇಕರ್ ಮಂಜಪ್ಪನವರ ನೇತೃತ್ವದಲ್ಲಿ* ಹಿಂದೂಸ್ತಾನಿ ಸೇವಾದಳ *ಸ್ಥಾಪನೆಯ ಸಂಕಲ್ಪವು ಎಲ್ಲೇಲ್ಲೂ ನಡೆದಿತ್ತು.
ಆಗಿನ ಕಾರಾಗ್ರಹ ವಾಸವು ನರಕ ಸದೃಶವಾಗಿತ್ತು. ಕೆಲವು ಹಸಿಬಿಸಿ ತರುಣರು ಕಾರಾಗೃಹದಲ್ಲಿ ಇದ್ದಾಗ ಬ್ರಿಟಿಷರು ಕೊಡುತ್ತಿದ್ದ ಹಿಂಸೆಯ ತಾಳಲಾರದೆ ಕ್ಷಮಾಪಣೆ ಪತ್ರ ಬರೆದು ಕೊಟ್ಟು ಸೆರೆಮನೆಯಿಂದ ಹೊರ ಬಂದರೆಂಬ ವಿಷಯ ಕಿವಿಗೆ ಬಿದ್ದು ಹರಡೇಕರ ಮಂಜಪ್ಪನವರು ಹಾಗೂ ಇನ್ನು ಕೆಲವು ಮುಖಂಡರು ಬಲು ನೊಂದುರು ….
ವಿವೇಚನೆಯಿಂದ ದೇಶದಲ್ಲಿ ತರುಣ ಸಂಘಟನೆ ಮಾಡಿ ಅವರಿಗೆ ದೇಶ ಪ್ರೇಮದ ಕೆಚ್ಚು, ದೇಶಾಭಿಮಾನ , ಸ್ವಾಭಿಮಾನ,ಶಿಸ್ತು, ಸಂಯಮ, ಕಷ್ಟ ಸಹಿಷ್ಣತೆ, ಶರೀರ ಬಲ ವರ್ಧನೆ, ಇವುಗಳೆಲ್ಲವನ್ನು ಮೇಳ್ಯಸಿ ವೀರ ಯುವಕರನ್ನು ನಿರ್ಮಾಣ ಮಾಡುವ ಸಂಘಟನೆಯನ್ನು ಕಟ್ಟಬೇಕೆಂದು ದೃಢ ನಿರ್ಧಾರವನ್ನು ಮಾಡಿ ಸೇವಾದಳ ಸ್ಥಾಪನೆಯನ್ನು ಅಲ್ಲಲ್ಲಿ ಮಾಡಲು ಪ್ರಾರಂಭಿಸಿದರು.
ಈ ಹಿನ್ನೆಲೆಯಿಂದಲೇ ಕರ್ನಾಟಕದಲಿ ಅತ್ಯಂತ ಭರದಲಿ ರಾಷ್ಟ್ರೀಯ ಸೇವಾದಳ ಸ್ಥಾಪನೆಗೆ ಚಾಲನೆ ದೊರಕಿತು.. ಇಂಥ ಸಂಘಟನೆ ಪ್ರಾರಂಭವಾದಾಗ ಇದು ಪುರುಷರಷ್ಟೇ ಪಾಲುಕೊಳ್ಳುತ್ತಿದ್ದರು. ರಾಷ್ಟ್ರ ಹಿತಕ್ಕೆ ಹೋರಾಡಲು ಮಹಿಳೆಯರು ಪುರುಷರಿಗೆ ಹೆಗಲುಕೊಟ್ಟು ನಿಲ್ಲುವ ಸಂದರ್ಭಗಳು ಬಂದೊದಗಿತ್ತು. ಅದಕ್ಕಾಗಿ ಮಹಿಳೆಯರಿಗಾಗಿ ನಿರ್ದಿಷ್ಟವಾದಂಥ ಸಂಘಟನೆ ಯಾವುದು ಇರಲಿಲ್ಲ ….ಹೀಗಾಗಿ ಈ ಸಂಘಟನೆಯಲ್ಲಿ ಸೇರಿ ಕೊಳ್ಳುವ ಮೂಲಕ ರಾಷ್ಟ್ರೀಯ ಚಳುವಳಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿತ್ತು…. ಹಾಗೆ ಮಹಿಳೆಯರು ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳಲು ಅವರಿಗೆ ಪ್ರೇರೆಪಿಸುತ ರಾಷ್ಟ್ರದ ಆಗೂ ಹೋಗುಗಳ ಅರಿವು ಮೂಡಿಸಿ… ರಾಷ್ಟ್ರೀಯತೆಯನ್ನು ಉತ್ತೇಜಿಸುವ ಅನೇಕ ಸಂಘ-ಸಂಸ್ಥೆಗಳು ಹುಟ್ಟಿಕೊಂಡವು.
೧೯೪೭ರಲ್ಲಿ ಮಹಿಳೆಯರ ಹೋರಾಟಕ್ಕೆ ಬೆಂಬಲಿಸಿ *ಜಯದೇವಿ ತಾಯಿಯವರು ತಮ್ಮ ಮನೆಯಾದ *ಜಯನಿಕೇತನದಲ್ಲಿ *ರಾಷ್ಟ್ರೀಯ ಸೇವಾದಳ,
*ಪ್ರೌಢ ಸ್ತ್ರೀ ಶಾಖೆ*ಯನ್ನು ಆರಂಭಿಸಿದರು.
ಸೊಲ್ಲಾಪುರದಲ್ಲಿ ಪ್ರಾಂತೀಯ ಸಂಘಟಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು.
ಈ ಸಂಘವು ಅನುತಾಲಿಮಯೋ ಅವರಿಂದ ಉದ್ಘಾಟಿಸಲಾಯಿತು.
ಇಲ್ಲಿ ಪ್ರತಿ ವಾರ ಸಭೆ ಸೇರಿ ರಾಷ್ಟ್ರೀಯ ಹಿತ ಚಿಂತನೆಗಾಗಿ ರಾಜಕೀಯ ಸಾಮಾಜಿಕ ವಿಚಾರಗಳನ್ನು ಚರ್ಚಿಸುತ್ತಿದ್ದರು. ಮಹಿಳೆಯರ ಭೌಧಿಕ-ಭೌತಿಕ ಆರೊಗ್ಯಕರ ವಿಕಾಸದೊಂದಿಗೆ ದೇಶಪ್ರೇಮ ಹಾಗೂ ಮಹಾನ್ ಆದರ್ಶ ಪುರುಷರು-ಸ್ತ್ರೀಯರ ಬಗ್ಗೆ ಅನೇಕ ಭಾಷಣವನ್ನು ಏರ್ಪಡಿಸಲಾಗುತ್ತಿತ್ತು.
ಜಯದೇವಿ ತಾಯಿ ಮತ್ತು *ರಾಮಕೃಷ್ಣ ಜಾಜುಜಿ* ಅಂಥವರ ಭಾಷಣದಿಂದ ಹೆಣ್ಣು ಮಕ್ಕಳು ಪ್ರೇರಿತರಾಗುತ್ತಿದ್ದರು. ಇವರೊಂದಿಗೆ ಮಹಿಳಾ ಜ್ಞಾನ ಮಂದಿರದಿಂದಲೂ ಜಯದೇವಿ ತಾಯಿಯವರು ಹೆಣ್ಣು ಮಕ್ಕಳನ್ನು ಸಂಘಟಿಸುತ್ತಿದ್ದರು. ಮಹಿಳೆಯರಲ್ಲಿ ದೇಶ ಪ್ರೇಮ ಮೂಡಿಸಿ ಸಹಕರಿಸುತ್ತಿದ್ದರು. ಸ್ವಾತಂತ್ರದ ಹೋರಾಟದಲ್ಲಿ ಪಾಲ್ಗೊಳ್ಳುವ ಮಹಿಳೆಯರಲ್ಲಿ ರಾಷ್ಟ್ರೀಯ ನಾಡ ನುಡಿಯ ಜಾಗೃತಿಯನ್ನು ಮೂಡಿಸುತ್ತಿದ್ದರು.
೧೯೪೭ ಅಷ್ಟರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಸೂಚನೆ ಸಿಗಲಾರಂಬಿಸಿತ್ತು. ಜಯದೇವಿ ತಾಯಿಯವರು ಅಕ್ಕನ ಬಳಗ ಹಾಗೂ ಸರಸ್ವತಿ ವಿದ್ಯಾ ಮಂದಿರ, ಶ್ರಾವಿಕಾಶ್ರಮ ,ಸ್ತ್ರೀ ಶಕ್ತಿ ಹೋರಾಟಗಳು ಜೋರಾಗಿ ನಡೆಯಿತು .
ಸ್ವಾತಂತ್ರ್ಯ ದೇಶದಲ್ಲಿ ಸ್ತ್ರೀಯರ ಕರ್ತವ್ಯಗಳು,
ಸ್ತ್ರೀ ಸ್ವಾವಲಂಬನೆ, ಸ್ತ್ರೀ ಆರ್ಥಿಕ ಸ್ಥಿರತೆ,ವರ್ತಮಾನ ಕಾಲದ ವೆಚ್ಚರಹಿತ ಸರಳ ವಿವಾಹಗಳ ಪದ್ಧತಿ, ಸಾಮಾಜಿಕವಾಗಿ ನಾರಿಯರು ಗೌರವದಿಂದ ಬದುಕುವ ವಿಧಾನವನ್ನು ಮುಂತಾದ ವಿಷಯಗಳ ಮೇಲೆ ವಿವಿಧ ಬಡಾವಣೆಗಳಲ್ಲಿ ಭಾಷಣ ವ್ಯಾಖ್ಯಾನ ಮಾಲೆಯನ್ನು ಏರ್ಪಡಿಸುತ್ತಿದ್ದರು .
ಸಂಸ್ಕೃತಿಕ ವಿದ್ಯಾವಂತ ಮಹಿಳೆಯರಿಂದ ಸುವ್ಯವಸ್ಥಿತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ತಾಯಿಯವರ ನಿಲುವಾಗಿತ್ತು. ಸುಖ ಶಾಂತಿ ನೆಲೆಸುವಂತೆ ಮಾಡುವುದು ಧರ್ಮದ ಗುರಿ ,ದುಃಖಕ್ಕೆ ಕಾರಣವಾಗುವ ಅಜ್ಞಾನ..ಬಡತನ ಮತ್ತು ವರ್ಗ ಕಲಹಗಳು ಕಾರಣವಾಗುತ್ತವೆಂದು…… ಈ ಅಜ್ಞಾನವನ್ನು ದೂರ ಮಾಡಬೇಕು ಕುಟುಂಬದ ಅನ್ಯಾಯವನ್ನು ದೂರ ಮಾಡಬೇಕಾದರೆ ಮುಖ್ಯವಾಗಿ ಮನೆಯ ಸ್ತ್ರೀ ತಾಯಿಯೂ ವಿದ್ಯಾವಂತಳು ಆಗಿರಲೇಬೇಕು ಸ್ತ್ರೀ ಶಿಕ್ಷಣ ಅದರೊಂದರಿಂದಲೇ ಶಾಂತಿಭರಿತವಾದ ಬದುಕು ಹಾಗೂ ಸಾಮಾಜಿಕೆ ಸಮಾನತೆಯ ಬೆಳವಣಿಗೆಗೆ ಮುಖ್ಯ ಎಂದು ಅವರು ಪ್ರತಿಪಾದಿಸುತ್ತಿದ್ದರು.
*ಅಸ್ಪೃಶ್ಯ ನಿವಾರಣೆ*
ಅದೇ ಸಮಯದಲ್ಲಿ ಅಸ್ಪೃಶ್ಯರು ಎಂದು ಕರೆದ ಒಂದು ಜನ ಸಮುಹವನು ಕಡೆಗಣಿಸುವ ಅತ್ಯಂತ ಹೀನ ರೀತಿಯಲ್ಲಿ ಅವರನ್ನು ನೋಡಿಕೊಳ್ಳುವ ಪದ್ಧತಿ ಸರಿ ಅಲ್ಲವೆಂದು ವಿರೋಧಿಸಿದ ಗಾಂಧೀಜಿಯವರ ಕರೆಕೊಟ್ಟಂತೆ ಅಸ್ಪೃಶ್ಯರನ್ನು ಹರೀಜನರು ಎಂದು ಕರೆಯಲು ಜಯದೇವಿತಾಯಿಯವರು ಮುಂದಾದರು.
ಅದೇ ರೀತಿ 12ನೇ ಶತಮಾನದ ಶರಣರು ಎಲ್ಲರಲ್ಲಿ ಸಮಾನತೆಯ ಮನಸ್ಸನ್ನು ಹುಟ್ಟು ಹಾಕಿದ್ದರು ಕಾಯಕದಿಂದ ಹುಟ್ಟಿದ ಜಾತಿಯನ್ನು ವ್ಯಯಕ್ತಿಕವಾಗಿ ಸಂಭಧ ಆರಂಭಿಸುವುದು, ಅವಮಾನ ಗೊಳಿಸುವುದು ಅಪಚಾರವೆದುಂದು ಹೇಳುತ್ತಿದ್ದರು.
ಶರಣ ಅಂಬಿಗರ ಚೌಡಯ್ಯ ಮಾದರ ಚೆನ್ನಯ್ಯರಂತೆ ಬದುಕನ್ನು ಅರಿತುಕೊಂಡ ಜಯದೇವಿ ತಾಯಿಯವರು ಶರಣರ ಆದರ್ಶವನ್ನು ಮನದಲ್ಲಿ ತುಂಬಿಕೊಂಡು ಗಾಂಧೀಜಿಯವರ ಹರೀಜನರ ಆಂದೋಲನಕೆ ಕೈಜೋಡಿಸಿದ್ದರು.
ಪೂಜೆ ತೀರ್ಥ ಪ್ರಸಾದಗಳನ್ನು ಹರಿಜನರಿಗೆ ನಿರಾಕರಿಸಿದ್ದನ್ನು ಜಯದೇವಿ ತಾಯಿಯವರು ಗಾಢವಾಗಿ ವಿರೋಧಿಸುತ ಅನೇಕ ಕಡೆ
ಭಾಷಣ ಮಾಡುತ್ತಿದ್ದರು.
ಹಾಗೆ ಸ್ತ್ರೀಯರ ಆಧ್ಯ ಕರ್ತವ್ಯ ಅವರ ನಿಶ್ಚಲವಾದ ನಿರ್ಭಯತೆ ನಿರ್ಮಲತೆಯ…… ವಿಷಯಗಳ ಕುರಿತು ಕೇರಿಯ ಜನರಿಗೆ ತಿಳಿಹೇತ್ತಿದ್ದರು.
ಸೊಲ್ಲಾಪುರ ಮತ್ತು ಬಾರ್ಷಿಗಳ ರಿಮೈಂಡ್ ಹೋಂ ಮತ್ತು ಹರಿಜನ ಸಂಘಗಳಿಗೆ, ಗಾಂಧಿ ಛತ್ರಾಲಯಗಳಿಗೆ ಜಯದೇವಿ ತಾಯಿಯವರು ಬೆಂಬಲ ಪ್ರೇರಣೆ ನೀಡಿದವರು. ಆಡಳಿತಗಾರರಿಗೆ ಭೇಟಿಯಾಗಿ ಅವರ ಸಮಸ್ಯೆಗಳನ್ನು ತಿಳಿದುಕೊಂಡು ಧನ ಸಹಾಯವನ್ನು ತಕ್ಷಣವಾಗಿ ಒದಗಿಸುತ್ತಿದ್ದರು.
ಸ್ವಾತಂತ್ರ್ಯ ಹೋರಾಟ ಹಾಗೂ ಮಹಾಪುರುಷರ ವಿಷಯಗಳು ಹಾಗೂ ಧೀರ ಮಹಿಳೆಯರು ಹೋರಾಟಗಾರರ ಬಗ್ಗೆ ವಿಸ್ತೃತಗೊಳಿಸಿ ಅವರ ಜೀವನ ಚರಿತ್ರೆಯ ಬಗ್ಗೆ ಹರಿ ಜನರಿಗೆ ತಿಳಿ ಹೇಳುತ್ತಿದ್ದರು .
ಹೆಣ್ಣು ಮಕ್ಕಳಿಗೆ ಸ್ವಚ್ಛತೆಯ ಪ್ರಾಮುಖ್ಯತೆಯನ್ನು ತಿಳಿ ಹೇಳುತ್ತಿದ್ದರು.ಇವರು ಆಗಾಗ ಹರಿಜನ ಕೇರಿಗೆ ಬರುವರೆಂದು ತಿಳಿದ ಕೇರಿಯವರು ಎಲ್ಲವನ್ನು ಸ್ವಚ್ಛ ಮಾಡಿ ಚಳಿ ಹೊಡೆದು ತರಿಳು ತೋರಣವನ್ನು ಕಟ್ಟಿ, ಆರತಿ ತುಂಬಿಕೊಂಡು ಜನರು ಸ್ವಾಗತಿಸುತ್ತಿದ್ದರು. ಅಸ್ಪೃಶ್ಯ ಕೇರಿಗೆ ಇನ್ನಿತರ ಕಾರ್ಯಕ್ರಮದಲ್ಲಿ ಓಡಾಡುವ ಕಾರ್ಯಕರ್ತರು ಜಯದೇವಿ ತಾಯಿಯವರನ್ನು ಪರೀಕ್ಷಿಸಲು ಜಯದೇವಿ ತಾಯಿಯವರನ್ನು ಅಲ್ಲಿ ಬೋಜನೆ ಮಾಡಲು ಕೇಳಿಕೊಂಡರು …..ಅದಕ್ಕೆ ತಾಯಿಯವರು ಎಂದಿನಂತೆ ಅವರ ಪೂಜೆ ನಂತರವೇ ಪ್ರಸಾದ ತೆದುಕೊಳ್ಳುತ್ತಿದ್ದರು ಹೀಗಾಗಿ ಅವರು ತಮ್ಮ ಪೂಜೆಯನ್ನು ಮುಗಿಸಿ ಅಲ್ಲಿಗೆ ಬಂದು ಎಲ್ಲರೊಂದಿಗೆ ಪ್ರಸಾದವನ್ನು ತೆಗೆದುಕೊಂಡದ್ದು ಒಂದು ಇತಿಹಾಸವೇವಾಯಿತು.
ಹಾಗೆ ತಮ್ಮ ಭಾಷಣ ಒಂದರಲ್ಲಿ ಹೀಗೆ ಹೇಳಿದ್ದರು ಇಂದು ನಮ್ಮಲ್ಲಿ ಬಹಳ ಜನರು ಸಾಮಾಜಿಕ ಕಾರ್ಯಗಳಲ್ಲಿ ಸಮಾಜದ ದುಡ್ಡು ದುಡಿಮೆಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ರೂಡಿ ಮಾಡಿಕೊಂಡಿದ್ದಾರೆ ನಮಗೆ ನಮ್ಮ ಅನ್ನವನ್ನು ತಿಂದು ಸಮಾಜ ಕಾರ್ಯ ಮಾಡುವ ಅಭ್ಯಾಸವಾಗಿದೆ ಅಂತ ಅಲ್ಲಿ ತಾಯಿಯವರನ್ನು ಸಂಘಟಿಕರಿಗೆ ಉತ್ತರ ನೀಡಿದ್ದರು.
ಹೀಗೆ ತಾಯಿಯವರು ದೀನ,ದಲಿತ, ಶೋಷಿತ ಅಸ್ಪೃಶ್ಯರ ಸಲುವಾಗಿ ಅವರ ಜೀರ್ಣೋದ್ಧಾರದ ಸಲುವಾಗಿ ಶ್ರಮಿಸಿದರು. ಶರಣರು ತೋರಿದ ಸಮಾಜದ ಧಾರ್ಮಿಕ ಹಿನ್ನೆಲೆ ಅವರದಗಿತ್ತು. ಸೊಲ್ಲಾಪುರ ಬಾರ್ಸಿಗಳಲ್ಲಿದ್ದ ಹರಿಜನ ಕೇರಿಗಳಿಗೆ ಹರಿಜನ ಬೋರ್ಡಗಳಿಗೆ ಹೋಗಿ ಸಹಾಯ ಸಹಕಾರ ನೀಡುತ್ತಿದ್ದರು.
ಹರಿಜನರಲ್ಲಿ ಸಾಕ್ಷರತೆ -ಸ್ವಾವಲಂಬನೆ- ಸ್ವಾಭಿಮಾನ ಮೂಡಿಬರುವಂತೆ ಜಯದೇವಿ ತಾಯಿಯವರು ಸತತವಾಗಿ ಹೋರಾಡಿದ ಘಟನೆಗಳನ್ನು ಜನರು ಇನ್ನೂ ಆದರೂ ನೆನೆಯುವಧನ್ನು ನೋಡಬಹುದು.
ಜಯದೇವಿ ತಾಯಿಯವರಿಗೆ ಹರಿಜನರ ಬಗ್ಗೆ ಇದ್ದ ಕಳಕಳಿ ಅಪಾರವಾದದ್ದು ಎಂದು ಭಾಲ್ಕೀ ಹಿರೇಮಠ್ ಪೂಜ್ಯ.ಚನ್ನಬಸವ ಪಟ್ಟದೇವರು, ಇಳಕಲ ಚಿತ್ತಗರಿ ಸಂಸ್ಥಾನ ಮಠದ ಪೂಜ್ಯ ಮಹಾಂತ ಸ್ವಾಮಿಗಳು ಮೆಚ್ಚಿಕೊಂಡು ಹರ್ಷವನ್ನು ವ್ಯಕ್ತಪಡಿಸುತಿದ್ದರು.
ಅದೇರೀತಿ ಬೆಲ್ಲದಾಳ ಸಿದ್ದರಾಮ ಶರಣರನ್ನು (ಹರಿಜನ ಬಾಲಕ ವಿಠಲರು )ಶರಣನಾದದ್ದನ್ನು ಕಂಡು ಗೌರವಿಸುತ್ತಿದ್ದರು.. ಜಯದೇವಿ ತಾಯಿಯವರು ದಲಿತೋದ್ಧಾರ ಅಸ್ಪೃಶ್ಯೋದ್ಧಾರ ಬಗ್ಗೆ ಕಳಕಳಿಯಿಂದ ಕೇವಲ ಭಾಷಣ ಮಾಡಿದರೆ ಸಾಲದು ಶತಶತಮಾನಗಳಿಂದ ತುಳಿತಕ್ಕೆ ಒಳಗಾಗಿ ಅವರ ಅನುಭವಿಸಿದ ನೋವನ್ನು ಕಡಿಮೆಗೊಳಿಸುವ ಪ್ರಯತ್ನದಲಿದ್ದ ತಾಯಿಯವರು ಬರಿತಾರೆ….
*ಕೀಳು ಮೇಲುಗಳೆಂಬ ಕುಲಾಚಾರವಳಿದು
ಕೊಳೆ ತೊಳೆಯಲು ಕೂಡಿದರು ಸಾರುವದಕೆ ಇಳೆಯೊಳು ಮಾನವ -ಕುಲ ಒಂದೇ *
*ಜಗವು ಒಂದಾಗಲಿ ನಗುತ ಕೈಗೂಡಿಸಿರಿ
ಬಗೆಯಲಿ ಅಣ್ಣ ತಮ್ಮಂದಿರಂತೆ, ಲೋಕದಿ
ಹಗೆಯಂಬ ಭಾವ ಅಳಿಯಲಿ*
ವಿಶ್ವವೇ ಒಂದುಗೂಡಿಸುವ ..ಸಾರ್ವತ್ರಿಕ ಸರ್ವಕಾಲಿಕ ವಿಶ್ವಮಾನವೀಯ ಮೌಲ್ಯಗಳ ಒಡ್ಡೋಲಗ ಎಲ್ಲೆಡೆಯೂ ಸ್ಥಾಪಿತವಾಗಲಿ ಎನ್ನುವ ಆಸೆಯ ಹೊತ್ತವರು.
*ನಾನು ನೀನೆಂಬ ಭೇದ ನಮ್ಮವರಿಗಿಲ್ಲ
ತನ್ನಂತೆ ಜಗವ ಕಂಡಾರ -ಶರಣರು
ಭಿನ್ನಲ್ಲ ಉನ್ನತಿ ಪಡೆದಾರ!!* ಎಂದರು ಜಯದೇವಿತಾಯಿಅವರು.

ಸವಿತಾ ದೇಶಮುಖ
