ಗಝಲ್

ಗಝಲ್

ಅನ್ನಪೂರ್ಣಾ ಬೆಜಪ್ಪೆ

ಇದ್ದರೂ ನೋವುಗಳು ಹಲವಾರು ನಗುತಿರು ಸಖೀ
ಬಿದ್ದರೂ ಧೃತಿಗೆಡದೆ ಪುಟಿದೆದ್ದು ಸಾಗುತಿರು ಸಖೀ

ವಿಶಾಲ ಜಗವಿದು ಅವಕಾಶಗಳಿಗಹುದೇನು ಕೊರತೆ
ವಿಷಮ ಭಾವಗಳಳಿಸಿ ಹೊಸತನಕೆ ತೆರೆಯುತಿರು ಸಖೀ

ಮುಂದೆ ಸರಿದಂತೆಲ್ಲ ಜಗ್ಗಲೆತ್ನಿಸುವ ಮನವೆ ಬಹುವಿಲ್ಲಿ
ಹಿಂದೆ ಜಾರದಂತೆ ಸಮಸ್ಥಿತಿಯ ಕಾಯುತಿರು ಸಖೀ

ಸೋಲು ಬಂತೆನಲು ಕೊರಗಿ ಹತಾಶೆ ತೋರುವುದೇಕೆ
ಗೆಲುವು ಪಡೆಯುವ ತನಕವೂ ಬಿಡದೆ ಓಡುತಿರು ಸಖೀ

ಕ್ಲೇಶ ಕಳೆಯಲು ಅನುವಿಗೆ ವಿಶ್ವಾಸವೇ ಬಲವಲ್ಲವೇನು
ತೋಷಕಾಗಿ ಕರ್ಮ ಸಾಧನೆಯ ಕಡೆ ನಡೆಯುತಿರು ಸಖೀ

********

Leave a Reply

Back To Top