ಕಾವ್ಯಸಂಗಾತಿ
ಎ. ಹೇಮಗಂಗಾ
ಗಜಲ್

ಎಷ್ಟೇ ತೇಯ್ದರೂ ಸುಗಂಧ ಸೂಸುವ ಶ್ರೀಗಂಧದಂತೆ ನನ್ನಪ್ಪ
ತಾನೇ ದಹಿಸಿದರೂ ಬೆಳಕು ನೀಡುವ ದೀಪದಂತೆ ನನ್ನಪ್ಪ
ಬದುಕಿನಲಿ ಕಂಡ ಕಷ್ಟ ಕೋಟಲೆ ಬೇಗುದಿಗಳು ಅಗಣಿತ
ಬೆಂಕಿಯಲಿ ಬೆಂದು ಗಟ್ಟಿಗೊಂಡ ಮಡಕೆಯಂತೆ ನನ್ನಪ್ಪ
ಅವಮಾನದ ನಂಜು ನುಂಗುತಲೇ ಕಂಬನಿ ಮರೆಸಿದವರು
ವಿಷವುಂಡರೂ ಜಗ್ಗದ ಕುಗ್ಗದ ನೀಲಕಂಠನಂತೆ ನನ್ನಪ್ಪ
ಸರಳ ಸಜ್ಜನ ವಾತ್ಸಲ್ಯಮೂರ್ತಿಯ ನಾ ಹೇಗೆ ಮರೆಯಲಿ
ಮೊಗದಿ ಮಂದಹಾಸ ರೂಪದಲಿ ಶ್ರೀರಾಮನಂತೆ ನನ್ನಪ್ಪ
ಗಳಿಸಿದ ಸಂಪತ್ತಿಗೆ ಹಿಗ್ಗದೇ ಪರರ ಆಪತ್ತಿಗೆ ಹೆಗಲಾದವರು
ಔದಾರ್ಯಕೆ ಮಿತಿಯೇ ಇಲ್ಲ ಮಹಾದಾನಿ ಕರ್ಣನಂತೆ ನನ್ನಪ್ಪ
ನಂಬಿಕೆಯ ಬೆನ್ನಿಗಿರಿದು ನೋಯಿಸಿದವರೆಷ್ಟೋ ತಿಳಿಯದು
ಹೆಂಗರುಳ ಪುರುಷ ಕ್ಷಮಾ ಗುಣದಲಿ ಧರಿತ್ರಿಯಂತೆ ನನ್ನಪ್ಪ
ಅಸಾಮಾನ್ಯ ಸಾಧಕ ಸಾಮಾನ್ಯನಂತೆ ಬಾಳಿದರು *ಹೇಮ*
ಪ್ರೀತಿಯಲಿ ಸದಾ ನೆರಳು ನೀಡುವ ಅಶ್ವತ್ಥ ವೃಕ್ಷದಂತೆ ನನ್ನಪ್ಪ
ಎ. ಹೇಮಗಂಗಾ

ಅಂತರಾಳದ ಭಾವಬಿಂಬ
ವಾವ್ ಅತಿಸುಂದರ ಗಜಲ್…
ಹೃನ್ಮನಪೂರ್ವಕ ವಂದನೆಗಳು ಅಕ್ಕಾ..!
ಆತ್ಮಪೂರ್ವಕ ಅಭಿನಂದನೆಗಳು ಮತ್ತು ಅಭಿವಂದನೆಗಳು..!
ರಾಗಾನುರಾಗಗಳ ಮಧುರಾತಿಮಧುರ ಸುಖಸ್ವಪ್ನಗಳ ಶುಭರಾತ್ರಿ..!