ಕಥಾಗುಚ್ಛ

ಜಿ.ಹರೀಶ್ ಬೇದ್ರೆ

ಯಾಣ

ಬಿಸಿಲು ಬೆವರಿಗೆ ಹೊಂದಿಕೊಂಡು ಬೆಳೆದಿದ್ದ ಮೈಮನಗಳಿಗೆ ಮೊದಲ ಬಾರಿಗೆ ಥರಗುಟ್ಟುವ ಚಳಿಯಲ್ಲಿ ಹೊದೆಯಲು ಏನೂ ಇಲ್ಲದೆ ರಾತ್ರಿಯೆಲ್ಲಾ ಮುದುಡಿಕೊಂಡೇ ಮಲಗಿ, ಪುಣ್ಯಾತ್ಮರ ಮನೆಯೊಂದರಲ್ಲಿ ತಾಮ್ರದ ಹಂಡೆಯಲ್ಲಿ ಹದವಾಗಿ ಕಾಯಿಸಿದ ನೀರನ್ನು  ಸ್ನಾನ ಮಾಡುವ ಅವಕಾಶ ಸಿಕ್ಕಿತು.  ಒಮ್ಮೆ ಹಬೆಯಾಡುವ ಬಿಸಿನೀರು ಮೈಮೇಲೆ ಬಿದ್ದೊಡನೆ ಹಿಂದಿನ ದಿನ ನಡೆದೂ ನಡೆದು ಸುಸ್ತಾಗಿದ್ದ ನೋವೆಲ್ಲಾ ಅರ್ಧ ಮಾಯವಾದಂತಾಗಿತ್ತು. ಬಚ್ಚಲು ಮನೆಯೂ ಹಿಂಭಾಗದಲ್ಲಿ ಇದದ್ದರಿಂದ ಎಲ್ಲರೂ ಸ್ನಾನ ಆಗುವ ತನಕ ಅಲ್ಲೇ ಹಿಂದೆ ಗಿಡಮರಗಳನ್ನು ನೋಡುತ್ತಾ, ಮಾತನಾಡುತ್ತಾ ನಿಂತಿದ್ದೆವು. ನಮ್ಮೆಲ್ಲರ ಸ್ನಾನ ಆದದ್ದನ್ನು ಗಮನಿಸಿ ಒಳಗಿನಿಂದ ತಿಂಡಿ ತಿನ್ನಲು ಕರೆ ಬಂತು. ನಾವು ಮನೆಯ ಒಳ ಹೋಗಿ ಹಾಲಿನಲ್ಲಿ ಕೂರುವ ಮೊದಲೇ ಬಾಳೆ ಎಲೆಯಲ್ಲಿ ಬಿಸಿಬಿಸಿ ಉಪ್ಪಿಟ್ಟು, ಅದರ ಮೇಲೆ ಗಟ್ಟಿಯಾದ ತುಪ್ಪ, ಜೊತೆಗೆ ಮಜ್ಜಿಗೆ ಮೆಣಸು ಮತ್ತು ಒಂದೆರಡು ಬಗೆಯ ಸಂಡಿಗೆಗಳು  ಅಲಂಕರಿಸಿದ್ದರು.  ಅದನ್ನು ನೋಡಿದೊಡನೆ ಹೆಚ್ಚುಕಮ್ಮಿ ನಿನ್ನೆ ಮಧ್ಯಾಹ್ನದಿಂದಲೇ ಖಾಲಿ ಇದ್ದ ಹೊಟ್ಟೆಗಳು ಬೇಗ ಬೇಗ ಎಂದು ಅವಸರಿಸತೊಡಗಿದವು. ಆಶ್ಚರ್ಯ ಎಂದರೆ ಇಲ್ಲಿಯವರೆಗೆ ಉಪ್ಪಿಟ್ಟು ಬೇಡವೇ ಬೇಡ ಎನ್ನುತ್ತಿದ್ದ ಇಬ್ಬರೂ ಎಲ್ಲರಿಗಿಂತ ಮೊದಲು ಎಲೆಯ ಮುಂದೆ ಕುಳಿತಿದ್ದರು. ಹಸಿದವನಿಗೆ ಹಳಸಿದ ಅನ್ನವೇ ಮೃಷ್ಟಾನ್ನ ಆಗುವಾಗ ಬಿಸಿಬಿಸಿ ಉಪ್ಪಿಟ್ಟು ಗಂಟಲಲ್ಲಿ ಇಳಿಯದೆ ಇರಲು ಸಾಧ್ಯವೇ.  ಎಲ್ಲರೂ ಗಂಟಲು ಬಿರಿಯುವಂತೆ ತಿಂದೆವು. ತಿಂಡಿ ತಿಂದು ಸ್ವಲ್ಪ ಹೊತ್ತಿನ ನಂತರ ಹೊರಡುತ್ತೇವೆ ಎಂದು ಎದ್ದಾಗ ಮನೆಯವರು ಕಾಫಿ ಕುಡಿದು ಹೊರಡುವಂತೆ ಹೇಳಿದರು. ನಮಗೂ ಇದು ಬೇಕೆನಿಸಿದ್ದರಿಂದ ದೂಸ್ರಾ ಮಾತನಾಡದೆ ಮತ್ತೆ ಕುಳಿತೆವು. ಅಡುಗೆಮನೆಯಿಂದ ನಾವು ಕುಳಿತಿದ್ದ ಹಾಲಿಗೆ ಕಾಫಿ ಬರುವ ಮುನ್ನವೇ ಅದರ ಘಮ ನಮ್ಮನ್ನು ಸುತ್ತುವರೆದಿತ್ತು.   ನಾವು ದಿನಕ್ಕೆ ನಾಲ್ಕೈದು ಬಾರಿ ಕುಡಿಯಬಹುದಾದಷ್ಟು ಕಾಫಿಯನ್ನು ಒಂದೇ ಲೋಟದಲ್ಲಿ ಕೊಟ್ಟಿದ್ದರು. ಈಗಾಗಲೇ ಅದರ ಪರಿಮಳಕ್ಕೆ ಸೋತು ಶರಣಾಗಿದ್ದರಿಂದ ಯಾರೊಬ್ಬರೂ ಬೇಡವೆನ್ನದೆ ಖುಷಿಯಿಂದ ಗುಟುಕರಿಸುವಾಗ ರಾಘು ತೋರು ಬೆರಳಿಂದ ಎದುರಿಗೆ ತೋರಿಸುತ್ತಾ ಏಯ್… ಏಯ್… ಎಂದು ವಿಚಿತ್ರವಾಗಿ ಧ್ವನಿ  ಮಾಡುತ್ತಾ ಜೋರಾಗಿ ನಡುಗತೊಡಗಿದ. ನಾವು ಇವನಿಗೆ ಏನಾಯ್ತು ಎಂದು ನೋಡುವಾಗಲೇ ಕೈಯಲ್ಲಿದ್ದ ಕಾಫಿಯನ್ನು ಮೈಮೇಲೆ ಚೆಲ್ಲಿಕೊಂಡ. ನಾವೆಲ್ಲ ತಕ್ಷಣ ಎದ್ದು ಅವನ ಬಳಿಬಂದು ಏನೂ ಎಂದು ಕೇಳಿದರೆ, ಏನೊಂದೂ ಮಾತನಾಡದೆ ಎದುರಿನ ಗೋಡೆಯನ್ನೇ ನೋಡುತ್ತಿದ್ದ. ನಾವುಗಳು ಅವನು ನೋಡುತ್ತಿದ್ದ ಕಡೆ ನೋಡಿದಾಗ ನಮ್ಮೆಲ್ಲರ ಹೃದಯಗಳ ಬಡಿತವೂ ಬುಲೆಟ್ ಟ್ರೈನ್  ವೇಗಕ್ಕಿಂತ ಜೋರಾಗಿ ಬಡಿದುಕೊಳ್ಳಲಾರಂಭಿಸಿದವು.
ಸುರೇಶ್ ಹೆಬ್ಳೀಕರ್, ದೇವರಾಜ್ ಮುಂತಾದವರು ನಟಿಸಿದ್ದ ಚಿತ್ರವೊಂದು ಬಿಡುಗಡೆಯಾಗಿತ್ತು. ಅದರಲ್ಲಿ ಯಾಣವನ್ನು ಬಹಳ ಚೆನ್ನಾಗಿ ತೋರಿಸಿದ್ದರು. ಆ ಸಿನಿಮಾ ನೋಡಿದ ಮೇಲೆ ನಾವು ಒಮ್ಮೆ ಅಲ್ಲಿಗೆ ಹೋಗಿ ಬರಬೇಕು ಎಂದುಕೊಂಡಿದ್ದೆವು. ಅದೇ ಸಂದರ್ಭದಲ್ಲಿ  ನಮ್ಮ ಪರಿಚಯದ ಪದ್ಮಕುಮಾರಿಯವರು ತಮ್ಮವರೊಂದಿಗೆ ಅದೇ ತಾಣಕ್ಕೆ ಹೋಗಿ ಬಂದು ವಾರಪತ್ರಿಕೆಯೊಂದರಲ್ಲಿ ಸಚಿತ್ರ ಚಾರಣ ಬರಹವನ್ನು ಬರೆದಿದ್ದರು. ಅದನ್ನು ಓದಿದ ಮೇಲಂತೂ ಹೋಗಿಬರಲೇ ಬೇಕೆಂದು ಸಮಾನ ಮನಸ್ಕರಾದ ಎಂಟು ಜನ ಗೆಳೆಯರು ಆಗಿನ ಮೆಟಡೋರನ್ನು ಎರಡು ದಿನದ ಬಾಡಿಗೆಗೆ ಗೊತ್ತುಮಾಡಿಕೊಂಡು ಹೊರಟೆವು. ಹೊರಡುವ ಮೊದಲು ಈಗಾಗಲೇ ಅಲ್ಲಿಗೆ ಹೋಗಿಬಂದಿದ್ದ ಪರಿಚಯದ ಲೇಖಕಿಯನ್ನು ಭೇಟಿಮಾಡಿ ನಾವೂ ಹೋಗಿಬರಲು ಬೇಕಾದ ಮಾಹಿತಿಯನ್ನು ಪಡೆದಿದ್ದೆವು.
ಅವರ ಮಾರ್ಗದರ್ಶನದಂತೆ ಮೊದಲ ದಿನ ಹರಿಹರದಲ್ಲಿ ಹರಿ ಮತ್ತು ಹರನನ್ನು ಒಂದೇ ಶಿಲೆಯಲ್ಲಿ ಕೆತ್ತಿರುವ ಹರಿಹರೇಶ್ವರ ದೇವಾಲಯವನ್ನು ನೋಡಿ, ಬನವಾಸಿಯಲ್ಲಿ ಮಧುಕೇಶ್ವರ ಮತ್ತು  ಮಂಜುಗುಣಿಯಲ್ಲಿ ವೆಂಕಟರಮಣನ ದರ್ಶನ ಮಾಡಿಕೊಂಡು ಶಿರಸಿ ಬಂದಾಗ ಸಂಜೆಯಾಗಿತ್ತು. ಅಲ್ಲೇ  ದೇವಸ್ಥಾನದ ಛತ್ರದಲ್ಲಿ ಉಳಿದುಕೊಂಡು, ಆ ದಿನ ಸಂಜೆಯೇ ಶಿರಸಿ ಮಾರಿಕಾಂಬೆಯ ದರ್ಶನ ಮಾಡಿ, ಪೂಜೆಯನ್ನು ಮಾಡಿಸಿದೆವು.  ಮಾರನೇ ದಿನ ಬೆಳಿಗ್ಗೆ ಬೇಗನೇ ಹೊರಟು ಯಾಣ ನೋಡಬೇಕಾದ್ದರಿಂದ ಮತ್ತು ಮುಂಜಾನೆಯಿಂದ ಚೆನ್ನಾಗಿ ಸುತ್ತಿದ್ದರಿಂದ ರಾತ್ರಿ ಬೇಗನೆ ಮಲಗಿದೆವು.ಮುಂಜಾನೆ ಆರುವರೆಗೆಲ್ಲಾ ಎಲ್ಲರೂ ಸಿದ್ದರಾಗಿ  ಹೋಟೆಲಿಗೆ ಬಂದು ಕಾಫಿ ಕುಡಿದು ಎಲ್ಲರಿಗೂ ಸಾಕಾಗುವಷ್ಟು ಇಡ್ಲಿಯನ್ನು ಕಟ್ಟಿಸಿಕೊಂಡು ಕುಮಟಾ ಮಾರ್ಗವಾಗಿ ಯಾಣದತ್ತ ಪಯಣ ಬೆಳೆಸಿದೆವು. ಸುಮಾರು ನಲವತ್ತು ಕಿ.ಮೀ. ದೂರ ಬಂದ ಮೇಲೆ ಪದ್ಮಕುಮಾರಿಯವರು ಹೇಳಿದಂತೆ ಬಲಭಾಗದಲ್ಲಿ ಯಾಣಕ್ಕೆ ದಾರಿ ಎಂಬ ಫಲಕ ಕಾಣಿಸಿತು.  ಅದು ರಸ್ತೆಯಿಂದ ಅಷ್ಟು ದೂರಕ್ಕೆ ಮಾತ್ರ ವಿಶಾಲವಾದ ದಾರಿಯಿದ್ದು, ಅಲ್ಲೇ ಎಣಿಸಿದಂತೆ ನಾಲ್ಕು ಚಿಕ್ಕಚಿಕ್ಕ ಮನೆಗಳಿದ್ದವು.  ಅಲ್ಲಿಂದ ಮುಂದೆ ಕಾಲು ದಾರಿ ಮಾತ್ರವಿದ್ದು ನಡೆದುಕೊಂಡೇ ಮುಂದೆ ಸಾಗಬೇಕಿತ್ತು.  ಲೇಖಕಿ ಇದನ್ನು ಮೊದಲೇ ತಿಳಿಸಿದ್ದರೂ, ನಾವು ಮತ್ತೊಮ್ಮೆ ಅಲ್ಲೇ ಮನೆಯ ಬಳಿಯಿದ್ದ ವಯಸ್ಕರೊಬ್ಬರನ್ನು ಯಾಣಕ್ಕೆ ಹೋಗುವ ದಾರಿ ಇದೇನಾ ಎಂದು ಕೇಳಿ ಖಾತ್ರಿ ಪಡಿಸಿಕೊಂಡು ಮುಂದಕ್ಕೆ ಹೆಜ್ಜೆ ಹಾಕಿದ್ದೇವು.  ಅವರ ಅನುಮತಿಯೊಂದಿಗೆ ನಮ್ಮ ಮೆಟಡೋರನ್ನು ಅಲ್ಲೇ ನಿಲ್ಲಿಸಿ, ಕಟ್ಟಿಸಿಕೊಂಡಿದ್ದ ತಿಂಡಿ ಪೊಟ್ಟಣಗಳೊಂದಿಗೆ ಹೊರಟೆವು.
ನಮ್ಮಲ್ಲಿ ಸುತ್ತಮುತ್ತ ಎತ್ತಾ ನೋಡಿದರೂ, ಬೆಟ್ಟ ಗುಡ್ಡಗಳ ಸಾಲು, ಅಲ್ಲಿ ಚಿತ್ರವಿಚಿತ್ರವಾದ  ಕಲ್ಲು, ಬಂಡೆಗಳನ್ನು ನೋಡಿದ್ದ ನಮಗೆ, ಇಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಹಚ್ಚಹಸಿರಿನ ಗಿಡ ಮರಗಳು. ಜೊತೆಗೆ ಅದರಲ್ಲಿ ಕುಳಿತೋ ಅಥವಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ವಚ್ಛಂದವಾಗಿ ಹಾರುತ್ತಾ ಉಲಿವ ಹಕ್ಕಿಗಳ ಇಂಚರ.  ಇದರೊಂದಿಗೆ ನಾನೇನೂ ಕಮ್ಮಿ ಎನ್ನುವಂತೆ ಎಲ್ಲೆಲ್ಲಿಂದಲೋ ಜುಳುಜುಳು ಹರಿಯುವ ನೀರಿನ ನಿನಾದ.  ಇದನ್ನೆಲ್ಲ ನೋಡುತ್ತ, ಕೇಳುತ್ತಾ ಸಾಗುತ್ತಿದ್ದರೆ, ಸ್ವರ್ಗವೇ ಭೂಮಿಗಿಳಿದು ಬಂದಂತೆ ಭಾಸವಾಗುತ್ತಿತ್ತು. ಹಾಗೇ ಖುಷಿಯಿಂದ ಕೂಗುತ್ತ, ಕುಣಿಯುತ್ತಾ ಐದಾರು  ಕಿ.ಮೀ. ನಡೆದು ಸಾಗಬೇಕಾದ  ದಾರಿಯಲ್ಲಿ  ಮೂರು ಕಿ.ಮಿ. ಬಂದಾಗ ಅಡ್ಡವಾಗಿ ನದಿಯೊಂದು ಸಿಕ್ಕಿತು. ಆಗಲೇ ಸಮಯ ಹತ್ತು ಗಂಟೆಯಾಗಿತ್ತು ಜೊತೆಗೆ ಹೊಟ್ಟೆ ಚುರುಗುಡಲಾರಂಭಿಸಿತ್ತು. ಹಾಗಾಗಿ ಅಲ್ಲೇ ಕುಳಿತು ಕಟ್ಟಿಸಿಕೊಂಡು ಬಂದಿದ್ದ ತಿಂಡಿಯನ್ನು ತಿಂದು ನದಿಯ ನೀರನ್ನೇ ಕುಡಿದೆವು. ನಡೆದು ಉರಿ ಎದಿದ್ದ ಕಾಲುಗಳನ್ನು ನದಿಯ ತಣ್ಣನೇ ನೀರಲ್ಲಿ ಬಿಟ್ಟುಕೊಂಡು ಕುಳಿತ್ತಿದ್ದರಿಂದ ಮನಸಿಗೆ ಹಿತ ನೀಡುತ್ತಿತ್ತು.  ನಾವು ನೋಡಲು ಬಂದಿದ್ದ ಜಾಗ ತಲುಪಲು ಇನ್ನೂ ಎರಡರಿಂದ ಮೂರು ಕಿ.ಮಿ. ನಡೆಯಬೇಕಿತ್ತು.  ಹಾಗಾಗಿ ಅಲ್ಲಿ ತಡಮಾಡದೆ ಹೊರಟೆವು. ನದಿ ದಾಟಿ ಸ್ವಲ್ಪ ಮುಂದೆ ಬಂದನಂತರ ಕಾಲುದಾರಿಯಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದು ದಾರಿ ಕಾಣದಂತಾಗಿತ್ತು. ನಾವು ಹೋಗುತ್ತಿರುವ ದಾರಿ ಸರಿಯಿದೆಯೇ ಎಂದು ಕೇಳಲು ಅಲ್ಲಿ ಯಾರೆಂದರೇ ಯಾರು ಇರಲಿಲ್ಲ. ಲೇಖಕಿಯವರು ಕಾಲುದಾರಿಯಲ್ಲಿ ಸೀದಾ ನಡೆಯುತ್ತಾ ಹೋದರೆ ಆಯಿತು ಎಲ್ಲಿಯೂ ತಿರುವುಗಳು ಬರುವುದಿಲ್ಲ ಎಂದು ಹೇಳಿದ್ದರಿಂದ ಅದೇ ದಾರಿಯಲ್ಲಿ ನಡೆಯತೊಡಗಿದೆವು. ನಡೆಯುತ್ತಾ ಮೂರು ಕಿ.ಮಿ.ಗಿಂತ ಮುಂದೆ ಬಂದರು ಅಘೋರೇಶ್ವರ ದೇವಾಲಯವಾಗಲಿ, ಅದರ ಬಳಿ ಇರುವ ಶಿಖರಗಳಾಗಲ್ಲಿ ಕಾಣಲೇ ಇಲ್ಲ. ಏನು ಮಾಡುವುದೆಂದು ಯೋಚಿಸುತ್ತಾ ಹೆಜ್ಜೆ ಹಾಕುವಾಗಲೇ ಇದ್ದಕ್ಕಿದ್ದಂತೆ ಬಿಂದು ಮತ್ತು ಲೋಕು ಜೋರಾಗಿ, ವೆಂಕಣ್ಣ ಹಿಂದೆ ನಿನ್ನ ಪ್ಯಾಂಟ್ ನೋಡಿಕೋ ಎಂದರು. ನೋಡಿದರೆ, ಮಂಡಿಯಿಂದ ಕೆಳಭಾಗದಲ್ಲಿ ರಕ್ತ ಮಾಯವಾಗಿತ್ತು. ನಾವು ಏನಪ್ಪಾ ಎಂದುಕೊಳ್ಳುವಾಗಲೇ ವಾಹಿದ್, ಹೆದರಬೇಡ ವೆಂಕಣ್ಣ ಪ್ಯಾಂಟನ್ನು ಸ್ವಲ್ಪ ಮಾಡಿಸು ಎಂದವನು, ತಾನೇ ಹತ್ತಿರ ಬಂದು ಆ ಕೆಲಸಮಾಡಿ ಯಾವಾಗಲೋ ಅವನ ಮಂಡಿಯವರೆಗೆ ಹತ್ತಿ ರಕ್ತ ಹೀರುತ್ತಿದ್ದ ಜಿಗಣೆಯನ್ನು ತೋರಿಸಿ, ಅದನ್ನು ಬೆರಳಿನಿಂದ ಕೀಳಲು ನೋಡಿದ. ಅದು ಸಾಧ್ಯವಾಗದಾಗ, ತನ್ನ ಜೇಬಿನಿಂದ ಲೈಟರ್ ತೆಗೆದು ಅದರ ಬುಡಕ್ಕೆ ಉರಿ ಹಿಡಿದ.  ಆಗ ತಕ್ಷಣವೇ ಜಿಗಣೆ ಕೆಳಗೆ ಬಿತ್ತು. ಆದರೆ ವೆಂಕಟೇಶ್ ಕಾಲಿನಿಂದ ರಕ್ತ ಜಿನುಗುತ್ತಿತ್ತು. ಅದಕ್ಕೆ ಅರವಿಂದ್ ಅಲ್ಲೇ ಬೆಳೆದ ಗಿಡಗಳಲ್ಲಿ ಹುಡುಕಾಡಿ ಯಾವುದೋ ಸೋಪನ್ನು ತಂದು ಜಜ್ಜಿ ಗಾಯವಾದ ಜಾಗಕ್ಕೆ ಸವರಿದ. ಏನಾಶ್ಚರ್ಯ, ಸುರಿಯುತ್ತಿದ್ದ ರಕ್ತ ಎರಡೇ ನಿಮಿಷದಲ್ಲಿ ನಿಂತಿತು. ಆಗ ಅವನು ಮುಖದಲ್ಲಿ ಕಾಣುತ್ತಿದ್ದ ಹೆಮ್ಮೆ ನಿಜಕ್ಕೂ ನೋಡುವಂತ್ತಿತ್ತು. ಇದೆಲ್ಲಾ ಆದ ನಂತರ ಮತ್ತೆ ಮುಂದಕ್ಕೆ ಹೆಜ್ಜೆ ಹಾಕಿದೆವು. ಹೀಗೇ ನಡೆಯುತ್ತಾ ಮತ್ತೆ ಎರಡು ಕಿ.ಮಿ. ಬಂದರು, ಅಂದುಕೊಂಡ ಸ್ಥಳದ ಸುಳಿವೇ ಕಾಣಲಿಲ್ಲ. ಆಗ ಸಮಯ ಮೂರು ಗಂಟೆ. ಹೊಟ್ಟೆ ಹಸಿಯಲಾರಂಭಿಸಿತ್ತು. ಜೊತೆಗೆ ನಾವು ದಾರಿ ತಪ್ಪಿದ್ದು ಖಚಿತವಾಗಿತ್ತು. ಏಕೆಂದರೆ ಲೇಖಕಿ ಹೇಳಿದಂತೆ ಮತ್ತು ಸ್ಥಳೀಯ ಮನೆಯಾತ ಹೇಳಿದಂತೆ ನಾವು ಸರಿಯಾದ ದಾರಿಯಲ್ಲಿ ಬಂದಿದ್ದಾರೆ ಹನ್ನೊಂದುವರೆಗೆಲ್ಲಾ ಯಾಣ ತಲುಪಿ ಸಾಕೆನಿಸುವಷ್ಟು ನೋಡಿ ಊಟದ ಸಮಯಕ್ಕೆ ಶಿರಸಿಯಲ್ಲಿ ಇರಬೇಕಾಗಿತ್ತು. ಆದರೆ ಈಗ ಗಂಟೆ  ಮೂರದರೂ ನಮಗೆ ತಿಳಿಯದ ಜಾಗದಲ್ಲಿ ನಿಂತಿದ್ದೆವು.  ಮುಂದೆ ಹೋಗಬೇಕೋ, ಹಿಂದೆ ಹೋಗಬೇಕೋ ತಿಳಿಯದಂತ ಪರಿಸ್ಥಿತಿ.  ಎಲ್ಲರಿಗೂ ಇದೇ ಚಿಂತೆಯಾಗಿ ಪರಸ್ಪರ ಮಾತುಕತೆ ನಿಂತುಹೋಗಿತ್ತು. ಯಾಂತ್ರಿಕವಾಗಿ ನಿಧಾನವಾಗಿ ನಡೆಯುತ್ತಿದ್ದೆವೆ  ಹೊರತು ಯಾಣ ತಲುಪುವ ಭರವಸೆ ಇರಲಿಲ್ಲ. ಯಾವುದೋ ಚಿಂತೆಯಲ್ಲಿ ನಡೆಯುತ್ತಿದ್ದ ಜ್ಯೋತಿ ಮರದ ಬುಡವನ್ನು ಗಮನಿಸದೆ ಎಡವಿಬಿದ್ದ. ಬಿದ್ದವರನ್ನು ಎತ್ತಲು ವೆಂಕಟೇಶ್ ಮತ್ತು ಮೂಸಮಿಲ್ ಮುಂದಾದರು. ಆದರೆ ಅವರ ಸಹಾಯ ಪಡೆಯದೆ ಮೇಲೆದ್ದ ಜ್ಯೋತಿ, ಬೋಳಿ ಮಕ್ಕಳ ಯಾರ ಪ್ರಾಣ ತೆಗಿಬೇಕಂತ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೀರಿ. ದಾರಿ ಗೊತ್ತಿಲ್ಲ ಅಂದ್ರು ಮುಂದೆ ಹೋಗ್ತಾನೆ ಇದೀರಾ. ಇನ್ನೂ ನನಾಂತೂ ಬರೋಲ್ಲ. ಬೇಕಿದ್ದರೆ ನೀವೇ ಹೋಗಿ ಎಂದು ಬಾಯಿಗೆ ಬಂದಂತೆ ನಮಗೆಲ್ಲಾ ಬೈಯತೊಡಗಿದ. ಸಾಮಾನ್ಯವಾಗಿ ಜ್ಯೋತಿ ಎಂದಿಗೂ ಈ ರೀತಿ ಆಡಿದವನಲ್ಲ. ಆದರೆ ಮುಂದೇನು ಎಂಬ ಚಿಂತೆ, ಜೊತೆಗೆ ಹೊಟ್ಟೆ ಹಸಿವು ಅವನನ್ನು ಕೆರಳುವಂತೆ ಮಾಡಿತ್ತು. ಅವನು ಹಾಗೆ ಮಾತನಾಡಿದೊಡನೇ ಲೋಕು ಸಿಟ್ಟಿನಿಂದ, ನಾವೇನೂ ನಿನ್ನ ಮನೆಗೆ ಬಂದು, ನೀನು ಬರಲೇ ಬೇಕೆಂದು ಆಮಂತ್ರಣ ಕೊಟ್ಟು ಕರೆದಿಲ್ಲ. ನಿಜ ಹೇಳಬೇಕೆಂದರೆ ನೀನೇ ನಮ್ಮನ್ನು ಹೊರಡಿಸಿದ್ದು ಎಂದು ಜೋರು ಮಾಡಿದ. ಇದು ಜಗಳ ಆಡುವ ಸಮಯವಲ್ಲವೆಂದು, ನಾನು, ರಾಘು, ವಾಹಿದ್, ಬಿಂದು ಎಲ್ಲಾ ಸೇರಿ ಇಬ್ಬರಿಗೂ ಸಮಾಧಾನ ಮಾಡಿದೆವು. ಅವರಿಬ್ಬರೂ ಸಮಾಧಾನವಾಗಿ, ನಾವು ಮುಂದೆ ಹೋಗುವುದೋ ಅಥವಾ ಬಂದು ದಾರಿಯಲ್ಲಿ ಹಿಂದಿರುಗುವುದೋ ಎಂದು ತೀರ್ಮಾನಿಸುವ ವೇಳೆಗೆ ಗಂಟೆ ನಾಲ್ಕಾಗಿತ್ತು. ಆಗಲೇ ಸೂರ್ಯನೂ ತನ್ನ ಅಂದಿನ ಕೆಲಸ ಮುಗಿಸಿ ಮುಳುಗುವ ಆತುರದಲ್ಲಿದ್ದಂತೆ ಕಂಡಿತು. ಏಕೆಂದರೆ ಇದು ಡಿಸೆಂಬರ್ ತಿಂಗಳಾಗಿತ್ತು ಹಾಗಾಗಿ ಬೆಳಕು ಕಮ್ಮಿಯಾಗುತ್ತಾ ಬಂದಿತ್ತು.  ಇದರಿಂದ ಎಲ್ಲರೂ ಬಂದ ದಾರಿಯಲ್ಲಿ ಹಿಂದಿರುಗುವ ನಿರ್ಧಾರಕ್ಕೆ ಬಂದೆವು. ಹಿಂದಿರುಗುವ ನಿರ್ಧಾರವಾದೊಡನೇ, ಅರವಿಂದ್ ಮತ್ತು ವೆಂಕಟೇಶ್ ಬೇಗ ಹೆಜ್ಜೆ ಹಾಕಿ ಇಲ್ಲ ಕತ್ತಲಾಗಿ ಬಿಡುತ್ತದೆ ಎಂದು ವೇಗವಾಗಿ ನಡೆಯತೊಡಗಿದರು. ಉಳಿದವರು ಅವರ ವೇಗಕ್ಕೆ ಹೆಜ್ಜೆ ಹಾಕಲು ಕಷ್ಟವಾಗುತ್ತಿತ್ತು. ಅರ್ಧ ದಾರಿಯೂ ಬಂದಿರಲಿಲ್ಲ, ರಾಘು ಬುಡಕಡಿದ ಬಾಳೆಗಿಡದಂತೆ ದಬ್ಬನೇ ಬಿದ್ದ. ಮತ್ತೆ ಎಲ್ಲರೂ ಅಲ್ಲಿ ನಿಲ್ಲಬೇಕಾಯಿತು. ಏನೆಂದು ಕೇಳಿದರೆ ತಲೆ ಸುತ್ತುತ್ತಿದೆ ಎಂದು. ಬಹುಶಃ ಹಸಿವಿನಿಂದ ಇದಾಗಿತ್ತು. ಅವನು ಸುಧಾರಿಸಿಕೊಳ್ಳುವರೆಗೂ ಉಳಿದವರು ಏನು ಮಾಡುವಂತಿರಲಿಲ್ಲ. ಹಾಗಾಗಿ ಅವನ ಸುತ್ತಲೇ ಕುಳಿತೆವು. ಪಾಪ ಬಿಂದು, ಅವನ ಕರವಸ್ತ್ರದಿಂದ  ರಾಘು ಮುಖಕ್ಕೆ ಗಾಳಿ ಹಾಕುತ್ತಿದ್ದ.  ಅಲ್ಲೇ ಹತ್ತಿರದಲ್ಲಿ ನೀರು ಹರಿವ ಸದ್ದು ಕೇಳಿ ನಾನು, ಮುಜಾ ಬಾಟಲಿ ತೆಗೆದುಕೊಂಡು ಹೋಗಿ ನೀರು ತಂದು, ರಾಘುಗೆ ಕುಡಿಸಿ ಅವನ ಮುಖವನ್ನು ತೊಳೆದೆವು. ಒಂದರ್ಧ ಗಂಟೆಯಾದಮೇಲೆ ಸ್ವಲ್ಪ ಸುಧಾರಿಸಿಕೊಂಡು ಎದ್ದುನಿಂತು ಹೋಗುವ ಎಂದ.  ಆಗಲೇ ಸೂರ್ಯ ಮರೆಯಾಗಿ ಮಸುಕು ಬೆಳಕು ಮಾತ್ರ ಉಳಿದಿತ್ತು. ಆದರೆ ಈಗ ವೇಗವಾಗಿ ನಡೆಯುವಂತಿರಲಿಲ್ಲ.ಯಾರೊಬ್ಬರ ಮುಖದಲ್ಲೂ ನಗೆ ಇರಲಿಲ್ಲ, ಮಾತುಕತೆಯೂ ನಿಂತುಹೋಗಿ, ಸುಮ್ಮನೆ ಮುಂದೆ ನಡೆಯುತ್ತಿದ್ದ ವಾಹಿದನನ್ನೇ ಎಲ್ಲರೂ ಹಿಂಬಾಲಿಸುತ್ತಿದೆವು. 
ಬೆಳಕು ಮಾಯವಾಗಿ ದಟ್ಟ ಕತ್ತಲಾವರಿಸಿ  ಮುಂದೆ ಹೆಜ್ಜೆ ಇಡಲು ದಾರಿ ಕಾಣದಾಯಿತು. ನೂರಕ್ಕೆ ನೂರು ಕಾಡಿನ ಕತ್ತಲಲ್ಲಿ ಬಂಧಿಯಾದದ್ದು ಖಾತ್ರಿಯಾಯಿತು.  ಎಲ್ಲಿದ್ದೇವೆ, ಅಕ್ಕಪಕ್ಕ ಏನಿದೆ, ಮೆಟಡೋರ್ ಬಳಿ ಸಾಗಲು ಎಷ್ಟು ಸಮಯ ಬೇಕು ಏನೊಂದೂ ತಿಳಿಯದೆ ನಿಂತ ಜಾಗದಲ್ಲೇ ನಿಂತುಬಿಟ್ಟೆವು. ಆಗ ಅರವಿಂದ್ ಎಲ್ಲರನ್ನೂ ಹತ್ತಿರ ಬರುವಂತೆ ಕರೆದು, ಒಬ್ಬರಿಗೊಬ್ಬರು ಅಂಟಿಕೊಂಡು ಕೂರುವ ಎಂದ. ನಾವೆಲ್ಲರೂ ಹಾಗೆ ಕುಳಿತೆವು. ನಡೆದೂ ನಡೆದೂ ಸುಸ್ತಾಗಿದ್ದು ಅಲ್ಲದೆ ಹೊಟ್ಟೆಯ ಹಸಿವು ಜೋರಾಗಿ ಇನ್ನಿಲ್ಲದ ಸಂಕಟವಾಗತೊಡಗಿತು. ಆದರೆ ಯಾರೂ, ಏನೂ ಮಾಡುವಂತಿರಲಿಲ್ಲ.  ಹಾಗಾಗಿ ಸುಮ್ಮನೇ ಕುಳಿತ್ತಿದ್ದೇವು.  ಹಾಗೇ ಎಷ್ಟು ಸಮಯ ಕಳಿಯಿತೋ ಗೊತ್ತಿಲ್ಲ. ರಾಘು ಮತ್ತು ಜ್ಯೋತಿ ಕುಳಿತಲ್ಲಿಯೇ ಮಲಗಿದ್ದರು. ಹೆಚ್ಚುಕಮ್ಮಿ  ಎಲ್ಲರೂ ತೂಕಾಡಿಸುವಾಗಲೇ  ಬಿಂದು ಜೋರಾಗಿ ಅಲ್ಲಿ ನೋಡಿ ಎಂದು ಕೂಗಿದ. ತಕ್ಷಣ ಎಲ್ಲರೂ ಎಚ್ಚರಗೊಂಡು ಅವನು ಹೇಳಿದತ್ತ ನೋಡಿದಾಗ, ಯಾರೋ ಕೈಯಲ್ಲಿ ಸಣ್ಣದಾದ ಲಾಂದ್ರ ಹಿಡಿದು ಅದರ ಬೆಳಕಿನಲ್ಲಿ ನಡೆದು ಬರುವುದು ತಿಳಿಯುತ್ತಿತ್ತು. ಇದನ್ನು ನೋಡಿ ಎಲ್ಲರಿಗೂ ಹೋದ ಜೀವ ಬಂದಂತಾಯಿತು.   ಲೋಕು ಜೋರಾಗಿ ಯಜಮಾನರೇ ಎಂದು ಮೂರ್ನಾಲ್ಕು ಬಾರಿ ಕೂಗಿದ. ಅವರಿಗೂ ಇವನು ಕೂಗು ಕೇಳಿರಬೇಕು ಹಾಗಾಗಿ ಅವರೂ ಹೊಯ್ ಎಂದು ಕೂಗಿದರು. ಹಾಗೇ ಕೂಗುತ್ತ ನಮ್ಮ ಬಳಿಯೇ ಬಂದರು. ಬೆಳಿಗ್ಗೆ ಹೊರಟಾಗಿನಿಂದ ಇಲ್ಲಿಯವರೆಗೆ ನಮ್ಮಗಳ ಹೊರತಾಗಿ ಅನ್ಯರ ಮುಖ ಕಾಣದ ನಮಗೆ ಅವರನ್ನು ನೋಡಿದೊಡನೆ ಆದ ಸಂತೋಷಕ್ಕೆ ಮಿತಿ ಇರಲಿಲ್ಲ.ಅವರಿಗೆ ನಮ್ಮ ಕತೆ ಹೇಳಿ, ದಾರಿ ತೋರಿಸುವಂತೆ ಬೇಡಿಕೊಂಡೆವು. ಅದಕ್ಕವರು ನಗುನಗುತ್ತಾ, ಈಗ ನೀವು ಮೆಟಡೋರ್ ಬಳಿ ಹೋಗಲು ಸಾಧ್ಯವಿಲ್ಲ. ಹತ್ತಿರದಲ್ಲೇ ಯಾಣದ ಅಘೋರೇಶ್ವರ ದೇವಾಲಯದೆ. ಅಲ್ಲಿಗೆ ನಿಮಗೆ ಕರೆದುಕೊಂಡು ಹೋಗುತ್ತೇನೆ. ಈ ರಾತ್ರಿ ದೇವಾಲಯದಲ್ಲೇ ಇರಿ. ಬೆಳಿಗ್ಗೆ ನಾನೇ ಬಂದು ನಿಮಗೆ ದಾರಿ ತೋರಿಸುವೆ ಎಂದರು. ಅವರ ಮಾತು ಕೇಳದೇ ಬೇರೆ ದಾರಿ ನಮಗಿರಲಿಲ್ಲ. ಹಾಗಾಗಿ ಅವರು ಹೇಳಿದಂತೆ ಅವರ ಹಿಂದೆ ನಡೆದೆವು. ಸಾಕಷ್ಟು ದೂರ ನಡೆದ ನಂತರ ದೀಪದ ಬೆಳಕು ಕಂಡಿತು. ಆಗ ನಮಗೆ ಸಿಕ್ಕ ಮನುಷ್ಯ, ನೋಡಿ ಅದೇ ಅಘೋರೇಶ್ವರ ದೇವಾಲಯ. ನೀವು ಅಲ್ಲೇ ಹೋಗಿ ಒಳಗೆ ಮಲಗಿ, ಗರ್ಭಗುಡಿಯಲ್ಲಿ ಪೂಜೆಗಿಟ್ಟ ಹಣ್ಣುಕಾಯಿ ಇರುತ್ತದೆ. ಅದನ್ನೇ ತೆಗೆದುಕೊಂಡು ತಿನ್ನಿ ಎಂದರು.  ನೀವೂ ಎಂದು ಕೇಳಿದಾಗ, ನನ್ನ ಮನೆ ಇಲ್ಲೇ ಇದೆ, ಅಲ್ಲಿಗೆ ಹೋಗುವೆ. ನೀವು ಮುಂದೆ ನಡೆಯಿರಿ ಎಂದರು. ನಾವು ಆಗಲೆಂದು ಮುಂದೆ ಹೆಜ್ಜೆ ಇಡುವಾಗ, ಅರವಿಂದ್ ಸರ್ ಸ್ವಲ್ಪ ಬೆಳಕು ಹಿಡಿಯಿರಿ, ಗಂಟೆ ಎಷ್ಟಾಯಿತು ನೋಡುವೆ ಎಂದು ಕೈಚಾಚಿದ. ಅದರ ಮೇಲೆ ಸರಿಯಾಗಿ ಬೆಳಕು ಬೀಳದ ಕಾರಣ ತನ್ನ ಕೈ ಮೇಲೆ ಮಾಡಿದ. ಆಗ ಅವರು ತಮ್ಮ ಲಾಂದ್ರವನ್ನು ಮೇಲೆತ್ತಿದರು. ಆ ಬೆಳಕಿನಲ್ಲಿ ಅವರು ಮುಖ ಸ್ಪಷ್ಟವಾಗಿ ನೋಡುವಂತಾಯಿತು. ಅವರ ಮುಖದಲ್ಲಿ ತೇಜಸ್ಸು ಎದ್ದು ಕಾಣುತ್ತಿತ್ತು.  ಅವರು ನಮಗೆ ದಾರಿ ಕಾಣಲೆಂದು ಲಾಂದ್ರವನ್ನು ಹಾಗೆಯೇ ಎತ್ತಿ ಹಿಡಿದಿದ್ದರು. ಎಲ್ಲರೂ ದೇವಾಲಯದ ಬಳಿ ಬಂದು ನಂತರ ಅವರು ಹೊರಟರು. ಆಗ ನಮಗೆಲ್ಲಾ ನೆನಪಾಗಿ, ನಿಮ್ಮ ಹೆಸರು ಎಂದು ಕೇಳಿದೆವು. ಅದಕ್ಕವರು,  ನಾರಾಯಣ ಹೆಗ್ಡೆ ಎಂದು ಹೇಳುತ್ತಾ ಕತ್ತಲಲ್ಲಿ ಮರೆಯಾದರು.ಅವರು ಹೇಳಿದಂತೆ ಗರ್ಭಗುಡಿಯಲ್ಲಿ ಪೂಜೆಗಿಟ್ಟ ಹಣ್ಣುಕಾಯಿ ಸಾಕಷ್ಟಿತ್ತು. ನಾವು ಅದನ್ನೇ ತಿಂದು, ಅಲ್ಲಿದ್ದ ನೀರನ್ನು ಕುಡಿದು ಮಲಗಿದ್ದಷ್ಟೇ ನೆನಪು. ಮುಂಜಾನೆ ದೇವಾಲಯದ ಅರ್ಚಕರು ಬಂದು ಎಚ್ಚರಿಸೀದಾಗಲೇ ನಾವು ಎದಿದ್ದು. ಅವರಿಗೆ ನಿನ್ನೆ ಆದ ವಿಚಾರ ತಿಳಿಸಿ, ಇಲ್ಲಿಗೆ ಹೇಗೆ ಬಂದೆವೆಂದೂ ಹೇಳಿದೆವು. ಅವರಿಗೆ ನಮ್ಮ ಮೇಲೆ ಕನಿಕರ ಬಂದು, ಬೇಗಬೇಗನೆ ಪೂಜೆಯ ಶಾಸ್ತ್ರ ಮುಗಿಸಿ, ನಮ್ಮನ್ನು ಅವರ ಮನೆಗೆ ಕರೆದುಕೊಂಡು ಬಂದರು. ಬರುವ ಮೊದಲೇ ಅಲ್ಲಿನ ವ್ಯಕ್ತಿಯೊಬ್ಬರಿಂದ ಮನೆಗೆ ವಿಷಯವನ್ನು ಮುಟ್ಟಿಸಿದ್ದರು. ನಾವು ಅರ್ಚಕರೊಂದಿಗೆ ಅವರ ಮನೆಗೆ ಬರುವ ವೇಳೆಗೆ ಹಂಡೆಯಲ್ಲಿ ನೀರು ಕಾದಿತ್ತು. ಸ್ನಾನ ಆದೊಡನೆ ರುಚಿಕರವಾದ ಬಿಸಿ ಉಪ್ಪಿಟ್ಟು ಸಿದ್ಧವಾಗಿತ್ತು. ಅದನ್ನು ತಿಂದು, ಕಾಫಿ ಕುಡಿಯುವಾಗ ರಾಘು ದೃಷ್ಟಿ ಎದುರಿಗೆ ಹಾಕಿದ್ದ ಪೋಟೋ ಮೇಲೆ ಬಿದ್ದು ಹೆದರುವಂತಾಯಿತು. ಏಕೆಂದರೆ ಆ ಪೋಟೋಗೆ ಅರಿಷಿಣ ಕುಂಕುಮ ಹಚ್ಚಿ, ಹಾರ ಹಾಕಿ ಪೂಜೆ ಮಾಡಲಾಗಿತ್ತು. ಅದರಲ್ಲಿ ಹಾರ ಹಾಕಿಸಿಕೊಂಡು, ಪೂಜೆ ಮಾಡಿಸಿಕೊಂಡ ವ್ಯಕ್ತಿಯೇ ನಮ್ಮನ್ನು ತೊಂದರೆಯಾಗದಂತೆ ದೇವಾಲಯದ ಬಳಿಗೆ ಕರೆತಂದಿದ್ದು.  ಅದನ್ನು ನೋಡಿಯೇ ರಾಘು ಮತ್ತು ನಾವು ಹೆದರುವಂತಾಗಿದ್ದು. ಸ್ವಲ್ಪ ಸುಧಾರಿಸಿಕೊಂಡ ಮೇಲೆ ಅರ್ಚಕರಿಗೆ ವಿಷಯ ತಿಳಿಸಿದಾಗ, ಅವರೂ ನಗುತ್ತಾ ಹೌದಾ, ತೊಂದರೆ ಇಲ್ಲ ಬಿಡಿ. ಅವರು ಇಲ್ಲಿನ ಸಿದ್ದಿ ಪುರುಷರು. ಅವರು ಹೋಗಿ ಹೆಚ್ಚುಕಮ್ಮಿ ಇಪ್ಪತ್ತು ವರ್ಷವಾಗಿದೆ. ಅಂದಿನಿಂದ ಇಂದಿನವರೆಗೂ ನಿಮ್ಮ ಹಾಗೆ ಇಲ್ಲಿ ಬಂದು ತೊಂದರೆಯಾದವರಿಗೆ ಕಾಪಾಡುತ್ತಿದ್ದಾರೆ. ಅವರು ದರ್ಶನ ನಿಮಗಾಗಿದೆ ಎಂದರೆ, ನೀವು ಪುಣ್ಯವಂತರೇ ಸರಿ ಎಂದರು. ನಮಗೋ ಏನು ಹೇಳಬೇಕು ತಿಳಿಯಲಿಲ್ಲ. ನಂತರ ಅವರೇ, ನಮ್ಮ ಮಧ್ಯಾಹ್ನದ ಊಟಕ್ಕೂ ಕಟ್ಟಿಕೊಟ್ಟರಲ್ಲದೆ ಸಂಪೂರ್ಣ ಯಾಣವನ್ನು ತೋರಿಸಿ ಅವರ ಮನೆಯ ಆಳನ್ನು ಕರೆದು ನಮ್ಮನ್ನು ಮೆಟಡೋರ್ ತನಕ ಬಿಡಲು ಹೇಳಿದರು. 

=====================================================

ಪರಿಚಯ:

ಜೀವ ವಿಮಾ ನಿಗಮದ ಶಿವಮೊಗ್ಗ ವಿಭಾಗೀಯ ಕಛೇರಿಯಲ್ಲಿ ಸಹಾಯಕ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಣೆ. ಕನ್ನಡ ಸಾಹಿತ್ಯ ಓದುವುದು ಬರೆಯುವುದು ಹವ್ಯಾಸ.

4 thoughts on “ಕಥಾಗುಚ್ಛ

  1. ಹರೀಶ್ ಬೇದ್ರೆ ನಿಜವಾಗಿಯೂ ನಿಮ್ಮ ಕಥೆಯನ್ನು ಒದಿ ಮೈ ರೋಮಾಂಚನವಾಗುತ್ತದೆ, ನಾವು ಸಹ ಸುಮಾರು ೨೭ ವರ್ಷ ಗಳ ಹಿಂದೆ ಯಾಣ ಪ್ರಕೃತಿಯನ್ನು ಸವಿಯಲು, ನಮ್ಮ ನಿಮ್ಮ ಗುರುಗಳಾದ ಬಸವರಾಜ್(ಲೆಕ್ಕ ಶಾಸ್ತ್ರ) ಉಪನ್ಯಾಸಕರು ಜೊತೆಯಲ್ಲಿ ಸುಮಾರು ೧೫ ವಿದ್ಯಾರ್ಥಿಗಳು ಹೋಗಿದ್ದೆವು, ಆ ಘಟನೆಗಳು ಅವಿಸ್ಮರಣೀಯ, ನಾವು ಮರೆಯುವಂತಿಲ್ಲ, ನಿಮ್ಮ ಕಥೆಯನ್ನು ಓದಿ ಮತ್ತೆ ಯಾಣದ ಪ್ರಯಾಣದ ಅನುಭವವನ್ನು ಮತ್ತೊಮ್ಮೆ ಕಣ್ಣಮುಂದೆ ಹರಿಯಿತು, ಧನ್ಯವಾದಗಳು,
    ಇನ್ನೂ ಹೆಚ್ಚು ಕಥೆಗಳು ಬರೆಯಿರಿ.
    ನಿಮ್ಮ ಮಿತ್ರ,
    ಅಮರನಾಥ್ ಬೇದ್ರೆ.

    1. ಧನ್ಯವಾದಗಳು ಮೇಡಂ, ಇಲ್ಲಿ ನನ್ನ ಬರಹ ಕಳಿಸಲು ನೀವೆ ಕಾರಣ.

Leave a Reply

Back To Top