ಪುಸ್ತಕ ಸಂಗಾತಿ

ಕಾನನದ ಸುಮ

ಶ್ರೀ ಉಮೇಶ ಮುನವಳ್ಳಿಯವರ
‘ಕಾನನದ ಸುಮ’ ಕವನ ಸಂಕಲನ.

ಸಾಹಿತ್ಯ ನಿರ್ಮಾಣದ ಪರಮ ಉದ್ದೇಶ ಒಳ್ಳೆಯದನ್ನು ಹೇಳುವುದು, ಒಳ್ಳೆಯದನ್ನು ಮಾಡಲು ಪ್ರೇರೇಪಿಸುವುದು ಮತ್ತು ಮುಂದಿನವರಿಗೆ ಸಾಗಿಸಿ ಸಾಗುವುದು. ಸಾಹಿತ್ಯ ವಸ್ತು ಯಾವುದೇ ಇರಲಿ, ಅದರ ಹಿಂದೆ ನಿಸರ್ಗವಿರುತ್ತದೆ ಮತ್ತು ಜಗತ್ತು ಇರುತ್ತದೆಯೆಂಬುದನ್ನು ಮರೆತು ಬರೆದರೆ ಅಂಥ ಸಾಹಿತ್ಯಕ್ಕೆ ಭವಿಷ್ಯವಿರುವುದಿಲ್ಲ. ಕವಿತೆಯಲ್ಲಿ ಉತ್ತಮ ಕವಿತೆ, ಕೆಟ್ಟ ಕವಿತೆ ಎಂಬುದಿರುವುದಿಲ್ಲ, ಅದು ಕವಿತೆ ಹೌದೋ ಅಲ್ಲವೋ? ಎಂಬುದಷ್ಟೇ ಗಣನೆಗೆ ಬರುತ್ತದೆ. ಅದು ಹೌದಾದರೆ ಉತ್ತಮವಾಗಿಯೇ ಇರುತ್ತದೆ. ಯಾವುದಕ್ಕೂ ಕಮಿಟೆಡ್ ಆಗಿರದೆ ಸ್ವತಂತ್ರವಾಗಿರುವುದು ಉತ್ತಮ ಕವಿತೆಯ ಲಕ್ಷಣ.

ಕವಿಯಾದವನು ಲೌಕಿಕ ಆಕರ್ಷಣೆಯಿಂದ ತನ್ನನ್ನು ಬಿಡಿಸಿಕೊಂಡು, ಸಹೃದಯ(ಓದುಗ)ನನ್ನೂ ಬಿಡಿಸಿ, ತನ್ನ ರಚನೆಯ ಕಡೆಗೆ ಸೆಳೆಯುತ್ತಾನಲ್ಲ ಅದೇ ಅವನ ಹೆಗ್ಗಳಿಕೆ. ಈ ಹಿನ್ನೆಲೆಯಲ್ಲಿ ಶ್ರೀ ಉಮೇಶ ಮುನವಳ್ಳಿ ಅವರ ‘ಕಾನನದ ಸುಮ’ ಕವನ ಸಂಕಲನವನ್ನು ಅವಲೋಕಿಸಿದಾಗ ಬಹಳ ಸಂತೋಷವಾಯ್ತು.

ಪ್ರಾಥಃಸ್ಮರಣೀಯರಾದ ಹೊಸಗನ್ನಡ ಸಾಹಿತ್ಯ ಸಂಭೂತರೆನಿಸಿದ ಶ್ರೀ ಬಿ. ಎಂ. ಶ್ರೀ ಅವರು ಇಂಗ್ಲೀಷ ಪ್ರಾಧ್ಯಾಪಕರಾಗಿದ್ದು, ಕನ್ನಡ ಸಾಹಿತಿಗಳಾಗಿದ್ದರು. ಎರಡೂ ಭಾಷೆಗಳೂ ಅವರಿಗೆ ಇಷ್ಟ. “ಇವಳ ಸೊಬಗನವಳು ತೊಟ್ಟು ನೋಡಬಯಸಿದೆ; ಅವಳ ತೊಡಿಗೆ ಇವಳಿಗಿಟ್ಟು ಹಾಡಬಯಸಿದೆ” ಎಂದು ಎದೆದುಂಬಿ ಹಾಡಿದವರು. ಅವರು ಒಂದೆಡೆ “ನಾನು ಇಂಗ್ಲೀಷನ್ನೇನು ಕಡಿಮೆ ಪ್ರೀತಿಸುವುದಿಲ್ಲ; ಆದರೆ ಕನ್ನಡವನ್ನು ಹೆಚ್ಚು ಪ್ರೀತಿಸುತ್ತೇನೆ” ಎಂದು ಉದ್ಗಾರ ತೆಗೆದವರು. ಇದನ್ನು ಯಾಕೆ ಹೇಳಿದೆನೆಂದರೆ ಶ್ರೀ ಮುನವಳ್ಳಿಯವರ ಮಾತೃಭಾಷೆ ಕನ್ನಡ ಮತ್ತು ಅಧ್ಯಯನದ ಭಾಷೆ ಇಂಗ್ಲಿಷ. ಇವರಿಗೂ ಆ ತಾಕಲಾಟ ಅನುಭವಕ್ಕೆ ಬಂದಿರಲು ಸಾಕು. ಶ್ರೀ ಮುನವಳ್ಳಿಯವರು ‘ಬಿ. ಎಂ. ಶ್ರೀ’ ಯವರು ಬಳಸಿದ ‘ಸೊಬಗು’ ಮತ್ತು ‘ತೊಡಿಗೆ’ ಪದಗಳನ್ನು ಪ್ರತಿಮೆಯಾಗಿ ಅರಿತು ಬರೆಯಲೆಂದು ಮನವಿ.
[2:20 pm, 19/06/2020] UMESH MUNAVALLY: ‘ಕಾನನದ ಸುಮ’ ಕವನ ಸಂಕಲನಕ್ಕೆ ಕವಿಯ ಮಡದಿಯೇ ಮುನ್ನುಡಿ ಬರೆದುದು ಸಾಹಿತ್ಯ ಕ್ಷೇತ್ರಕ್ಕೆ ಹೊಸತು. ಅವರು ಮುನ್ನುಡಿಗೆ ಕೊಟ್ಟ ಶೀರ್ಷಿಕೆ ; “ನಿನ್ನ ಕವಿತೆಗೆ ನಾನೇ ಮುನ್ನುಡಿ” ಎಂಬುದು ಒಂದು ಅಧ್ಭುತ ಪ್ರತಿಮೆಯಾಗಿದೆ! ಶ್ರೀ ಮುನವಳ್ಳಿಯವರು ರಚಿಸಿರುವ, ರಚಿಸಲಿರುವ ಎಲ್ಲ ಸಾಹಿತ್ಯಕ್ಕೂ ಅವರೇ ಪ್ರತಿಮೆ ಮತ್ತು ಮತ್ತು ಪ್ರತೀಕವೆಂದರೆ ತಪ್ಪಾಗಲಾರದು.

ಈ ಸಂಕಲನದ ‘ಋತು’ ಕವನ ಪ್ರತಿಮೆಗಳ ಸರಮಾಲೆ! ‘ನಿನ್ನ ಹಾರೈಕೆ’ ಯಲ್ಲಿ ಬಳಸಿದ ‘ಇತಿಹಾಸದ ಮಸಣ’ ಸುಂದರ ಪ್ರತೀಕ. ಮನುಷ್ಯನ ಬಾಳಿಗೆ ನಂಬಿಕೆ ಬಹಳ ಮುಖ್ಯ, ಇತರರನ್ನು ನಂಬುವ ಮೊದಲು ತನ್ನನ್ನು ನಂಬಬೇಕು, ನಂಬಿಕೆಯು ಬಾಳಿಗೊಂದು ಭರವಸೆ. ಈ ಮಾತಿಗೆ ಪ್ರತೀಕದಂತಿವೆ “ನನಗೂ ಒಬ್ಬ ಗೆಳೆಯ ಬೇಕು”, “ಬಾಳ ಕವಿತೆ”, ಮತ್ತು “ಸ್ಪಟಿಕದಂತೆ ಸ್ಪಷ್ಟ” ಕವಿತೆಗಳು. ಶ್ರಂಗಾರಭರಿತ ರಸಭರಿತ ಕಾವ್ಯದಂತಿದೆ “ಹೆಣ್ಣು” ಕವಿತೆ.

ಕವಿತೆ, ಪ್ರಾಮಾಣಿಕ ಸಂವೇದನೆಯನ್ನು ಹೊರಹಾಕುವ ಒಂದು ಸೃಜನಶೀಲ ಕ್ರಿಯೆ. ಮೊಗ್ಗೊಂದು ಅರಳಿ ಹೂವಾಗಿ ಚಲುವನ್ನೂ ಸುಗಂಧವನ್ನೂ ಹೊರಸೂಸುವಂತೆ.

ಸಿಂಪಿಗ ಬಟ್ಟೆಯನ್ನು ಕತ್ತರಿಸುವ ಪೂರ್ವದಲ್ಲಿ ತನಗೆ ಸಮಾಧಾನ ಆಗುವವರೆಗೆ ಅಳತೆ ತೆಗೆದುಕೊಳ್ಳುತ್ತಾನೆ. ಹಾಗೆಯೇ ಕವನ ರಚನೆಯ ಪೂರ್ವದಲ್ಲಿ ಕವಿ ಹಲವು ದಿಸೆಯಲ್ಲಿ ಯೋಚಿಸಬೇಕು. ಈ ಸಂಕಲನದ ಕೆಲವು ವಾಚ್ಯಾರ್ಥದ ಮತ್ತು ಉಪದೇಶಾತ್ಮಕ ಕವನಗಳನ್ನು ಬಿಟ್ಟರೆ ಉಳಿದೆಲ್ಲ ಕವನಗಳು ಉತ್ತಮವಾಗಿವೆ. ಓದುಗನನ್ನು ಚಿಂತನೆಗೆ ತೊಡಿಸುತ್ತವೆ.

ಪ್ರಕೃತಿಯ ಒಮ್ಮೆ ಬನಶಂಕರಿಯಾದರೆ ಪ್ರಸಂಗ ಬಂದರೆ ರಣಭಯಂಕರೀಯೂ ಆಗುತ್ತಾಳೆ. ಹೊಲದಲ್ಲಿ ಬೆಳೆಯ ಜೊತೆ ಕಳೆಯೂ ಬೆಳೆಯುತ್ತದೆ. ರೈತ ಕಳೆ ತೆಗೆದು ಬೆಳೆ ನಳನಳಿಸುವಂತೆ ಮಾಡುತ್ತಾನೆ. ಹಾಗೆಯೇ ಸಮಾಜದಲ್ಲಿ ಒಳ್ಳೆಯದರ ನಡುವೆ ಕೆಟ್ಟದ್ದೂ ಇರುತ್ತದೆ, ಕವಿಯಾದವನು ಅದನ್ನು ಎದುರಿಸಬೇಕು. ಮನ ಮಿಡಿದಾಗ ಧ್ವನಿಯ ಅಲೆಗಳೇ ಕವನಗಳಾಗಿ ಮೂಡಿಬರುತ್ತವೆ.

           ***********
ಪ್ರೊ. ರಾಮಚಂದ್ರ ಪಾಟೀಲ

Leave a Reply

Back To Top