ಕಾವ್ಯಯಾನ

ಜೋಗಿಗಳು

चम्मच की बजाय हाथों से खाने पर बढ़ ...

ನಟರಾಜು ಎಸ್. ಎಂ.

ಪಿತೃಪಕ್ಷದಿ ತಾತನ ಎಡೆಗೆಂದು
ಬಾಳೆ ಎಲೆಯ ಮೇಲೆ ಇಟ್ಟಿದ್ದ
ಮುದ್ದೆ ಗೊಜ್ಜು ಅನ್ನ ಪಾಯಸದ
ಪಕ್ಕ ಬಿಳಿ ಪಂಚೆ ಬಣ್ಣದ ಚೌಕ
ಹುಳಿ ಹುಳಿಯಾದ ಬಿಳಿಯ ಯೆಂಡ ಬಾಡು
ಗ್ಲಾಸಿನ ಮೇಲೆ ಹಚ್ಚಿಟ್ಟ ಬೀಡಿ ಸಿಗರೇಟು
ತಟ್ಟೆಯಲಿ ದ್ರಾಕ್ಷಿ ಬಾಳೆಯ ಜೊತೆ
ಒಂದೆರಡು ಕಿತ್ತಳೆ ಸೇಬು
ಇವೆಲ್ಲದರ ಮಧ್ಯೆ ಅವಿತು ಕುಳಿತಿರುವ
ಅರಿಸಿನ ಕುಂಕುಮ ವಿಭೂತಿ ಬಳಿದ
ಕಂಚಿನ ದೇವರ ಜೊತೆ ಪುಟ್ಟ ತ್ರಿಶೂಲ
ಗೋಡೆಯ ಹಲಗೆಯ ಮೇಲೆ
ಜೋಡಿಸಿಟ್ಟ ಚಾಮುಂಡಿ ಶಿವ ಪಾರ್ವತಿ
ಡೊಳ್ಳು ಹೊಟ್ಟೆ ಗಣೇಶನ ಚಿತ್ರಪಟ
ಎಲ್ಲವೂ ಅಲಂಕೃತ ಕಟ್ಟಿದ ಕಾಕಡ
ಕನಕಾಂಬರ ಚೆಂಡೂವುಗಳಿಂದ

ನಾಟಿ ಹೆಂಚಿನ ಒಳಗೆ ಕೆಂಡದಲಿ
ಘಮ ಘಮಿಸೋ ಸಾಂಬ್ರಾಣಿ
ಅಕ್ಕಿ ತುಂಬಿದ ಲೋಟದಲ್ಲಿ ಉರಿಯುತ್ತಿರೋ
ಸೈಕಲ್ ಗುರುತಿನ ಅಗರಬತ್ತಿ
ಬಾಯಿಗೆ ಟವೆಲ್ ಕಟ್ಟಿ ನಿಂತ ಜೋಗಯ್ಯನ
ಸುತ್ತ ಮುತ್ತ ನೆರೆದ ಮನೆ ಮಂದಿ
ನೀರ್ ಚಿಮುಕಿಸಿ ಗಂಧದ ಕಡ್ಡಿಯ ಘಮ ಸೋಕಿಸಿ
ವೀಳ್ಯದೆಲೆಯ ತುದಿ ತೊಟ್ಟು ಕಿತ್ತು
ಬಾಳೆಹಣ್ಣಿನ ತುದಿ ಮುರಿದು
ಒಡೆದ ತೆಂಗಿನ ಕಾಯಿಯ ಎಳನೀರು
ತೀರ್ಥಕ್ಕೆಂದು ಲೋಟದಿ ಭರ್ತಿ
ಉರಿಯುವ ಕಡ್ಡಿ ಕರ್ಪೂರದ ಬೆಳಕಿಗೆ
ಹೊಳೆಯುತ್ತಿರುವ ದೇವರ ವಿಗ್ರಹ
ಜೋಗಯ್ಯನ ಗಂಟೆಯ ಸದ್ದಿನ ಜೊತೆ
ಅವನ ಮಗನ ಜಿಂಕೆ ಕೊಂಬಿನ ನಾದಕೆ
ಮನಸೋತು ಕಣ್ಮುಚ್ಚಿ ಕೈ ಮುಗಿದ ಭಕ್ತ ವೃಂದ

ಮಂಗಳಾರತಿ ತಟ್ಟೆಗೆ ಟಣ್ ಎಂದು
ಬೀಳುತ್ತಿದ್ದ ನಾಲ್ಕಾಣೆ ಎಂಟಾಣೆ ಜಾಗದಲ್ಲೀಗ
ರೂಪಾಯಿ ಒಂದು ಎರಡು ಐದರ ಸದ್ದು
ಮುಖಕ್ಕೆ ಬಿದ್ದ ತೀರ್ಥಕ್ಕೆ ಬೆಚ್ಚಿ
ಅಳುವ ಕಂದನ ದನಿಗೆ ಮನೆಯವರ ನಗು
ಜೋಗಯ್ಯ ಹಾಕುವ ತೀರ್ಥಕ್ಕೆ ಕೈ ಒಡ್ಡಿ
ನಿಂತವರ ಬಲಗೈಗೆ ಬಿದ್ದ ತೀರ್ಥ
ಅರ್ಧ ಹೊಟ್ಟೆಗೆ ಉಳಿದರ್ಧ ತಲೆಗೆ
ದೇವರಿಗೆ ಕಡ್ಡಿ ಹಚ್ಚಿ ಕೈ ಮುಗಿದು
ಉರಿವ ಕರ್ಪೂರದ ತಟ್ಟೆ ಬೆಳಗಿ
ಅಡ್ಡ ಬಿದ್ದ ಭಕ್ತರ ಹಣೆಗೆ ಜೋಗಯ್ಯನ
ಬೆರಳುಗಳಿಂದ ವಿಭೂತಿಯ ಮೂರು ಪಟ್ಟು
ಹಿರಿಯರು ಬಂದು ಎಡೆ ಮುಟ್ಟಲಿ ಎಂದಾಗ
ಮನೆಯವರೆಲ್ಲಾ ಮನೆಯಿಂದ ಹೊರ ಬಂದು
ಬಾಗಿಲು ಮುಚ್ಚಿ ಒಂದೈದು ನಿಮಿಷ ಮೌನ
ನಂತರ ಮನೆ ಹೊಕ್ಕು ನೆಂಟರಿಷ್ಟರ ಜೊತೆ
ಮನೆ ಮಂದಿಗೆ ಪಿತೃಪಕ್ಷದ ಮೃಷ್ಟಾನ್ನ

******


Leave a Reply

Back To Top