ಪುಸ್ತಕ ಸಂಗಾತಿ

ಬಾಗಿಲು ತೆರೆಯೇ ಸೇಸಮ್ಮ

ಬಾಗಿಲು ತೆರೆಯೇ ಸೇಸಮ್ಮ
ವೈಚಾರಿಕ ಲಲಿತ ಪ್ರಬಂಧಗಳು
ಲೇಖಕರು- ಶರತ್ ಭಟ್ ಸೇರಾಜೆ
ಅಂಕಿತ ಪುಸ್ತಕ

ಅಂಕಿತ ಪ್ರತಿಭೆ ಮಾಲಿಕೆ-5 ಅಡಿಯಲ್ಲಿ ಅದರ ಸಂಪಾದಕರಾದ ಜೋಗಿಯವರು ಶರತ್ ಭಟ್ಟರನ್ನು ಗುರುತಿಸಿ ಈ ಕೃತಿಯನ್ನು ಪ್ರಕಟಿಸಲು ಅನುವು ಮಾಡಿಕೊಟ್ಟಿದ್ದಾರೆ.ಶರತರ ಈ ಎಲ್ಲಾ ಹದಿನೈದು ಪ್ರಬಂಧಗಳು ಈ ಗೌರವಕ್ಕೆ ಅರ್ಹವಾಗಿವೆ.

ಈ ಲೇಖನಗಳನ್ನು ಓದಿದಾಗ ಅವರು ಅಪಾರವಾಗಿ ಓದಿಕೊಂಡವರು ಎಂಬುದೂ ಗೊತ್ತಾಗುತ್ತದೆ.ಬಳಸಿದ ಭಾಷೆ ಬಹಳ ಚೆನ್ನಾಗಿದೆ.ಅವರ ತರ್ಕ, ತಮಾಷೆ ಮತ್ತು ವಿಷಯವನ್ನು ವಿವರಿಸಲು ಕೊಡುವ ಉದಾಹರಣೆಗಳು ವಿಶಿಷ್ಟವಾಗಿವೆ.

ಗುರುತ್ವದ ಅಲೆ ಕುರಿತು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳವಾಗಿ ವಿವರಿಸಬಹುದು ಎಂದು ಸೇರಾಜೆ ತೋರಿಸಿಕೊಟ್ಟಿದ್ದಾರೆ. ಜೊತೆಗೆ ಪಂಚಿಂಗ್ ಡೈಲಾಗ್ಸ್ ಇವೆ. ಇವು ನಮ್ಮಲ್ಲಿ ನಗುವನ್ನು ಉಕ್ಕಿಸುತ್ತವೆ.

ಅವರು ಗೋಪಾಲಕೃಷ್ಣ ಅಡಿಗರ ಯಾವ ಮೋಹನ ಮುರಲಿ ಕರೆಯಿತು ಕವಿತೆಯ ಬಗ್ಗೆ ಸಾಹಿತ್ಯದ ವಿದ್ಯಾರ್ಥಿಯಂತೆ ಚೆಂದವಾಗಿ ವರ್ಣಿಸಿದ್ದಾರೆ.ಬಿಎಂಶ್ರೀಯಿಂದ ಬರ್ನ್ಸ್ ಎಂಬ ಕವಿಯವರೆಗೆ ಉಲ್ಲೇಖ ಮಾಡಿದ್ದಾರೆ.

ಥಟ್ ಅಂತ ರಾಷ್ಟ್ರಗಳ ಸಂಖ್ಯೆ ಬಗ್ಗೆ ಶರತ್ ಹೇಳಿಬಿಡುತ್ತಾರೆ.ದೇಶಗಳನ್ನೂ, ಅವುಗಳ ಗುಟ್ಟುಗಳನ್ನು, ಜೋಕುಗಳನ್ನು ಕ್ರ್ಯಾಕ್ ಮಾಡುತ್ತಾ ಬೆಡ್ ರೂಂವರೆಗೂ ಬರುತ್ತಾರೆ.

ಅರ್ಥವೆಂಬ ಊಸರವಳ್ಳಿಯಲ್ಲಿ ಶಬ್ದದ ಅನುಕರಣೆ ಮಾಡಿ ಬದಲಾದ ಅರ್ಥಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ರೀಸಸ್ ( ಬಿಡುವು ) ಶಬ್ದ ಮೂತ್ರ ವಿಸರ್ಜನೆಗೆ ಬಳಕೆಯಾಗಿದ್ದು. ಆಯಿಲ್, ಸಕತ್, ಪ್ರವೀಣ ಮುಂತಾದ ಶಬ್ದಗಳ ಬಗ್ಗೆ ಇಲ್ಲಿ ಭಟ್ಟರು ಹೇಳಿದ್ದಾರೆ.

ಬಾಗಿಲು ತೆರೆಯೇ ಸೇಸಮ್ಮ – ನಾವು ಇಂದು ಸೋಷಿಯಲ್ ಮೀಡಿಯಾಗಳಲ್ಲಿ ಬಳಸುವ ಪಾಸ್ವರ್ಡ್ ಕುರಿತು ಮಾಹಿತಿ ನೀಡುವ ಮತ್ತು ಹ್ಯಾಕರ್ ಗಳ ವಿವರ ನೀಡುವ ಪ್ರಬಂಧ.
ಇದು ನಿಮಗೆ ಗೂಗಲ್ ಮಾಡಿದರೂ ಸಿಗಬಹುದು ಆದರೆ ಇಲ್ಲಿ ಅವರು ವಿವರಿಸಿದರ ಶೈಲಿ ಇದೆಯಲ್ಲ ಇದು ವಿಭಿನ್ನ ಮತ್ತು ಸರಳವಾಗಿದೆ.

ಮರ್ಯಾದೆ ತೆಗೆಯುವ ಕಲೆಯನ್ನು ಓದುತ್ತಾ ನೋಡಬಹುದು ಮತ್ತು ಬೆಚ್ಚಿಬೀಳಬಹುದು.
ಇಂಗ್ಲಿಷ್ ಮಾಧ್ಯಮದ ಕುರಿತು ಅವರ ನಿಲುವನ್ನು ಒಪ್ಪದಿರುವುದು ಕಷ್ಟ. ಇಂಗ್ಲೀಷ್ ಭಾಷೆ ದೋಸೆಯಾದರೆ ಮಾತೃಭಾಷೆ ಕನ್ನಡ ಊಟ ಎಂಬ ಸೋದಾಹರಣೆ ಚೆನ್ನಾಗಿದೆ.

ಲೆಕ್ಕ ಹಾಕಿ ಸುಳ್ಳು ಹೇಳಿ – ಈ ಕ್ಷಣದ ಕಟು ವಾಸ್ತವವನ್ನು ಅನಾವರಣ ಮಾಡುವ ಲೇಖನ.
ಸಿನೆಮಾ ಮತ್ತು ಕಳ್ಳತನ ಕುರಿತು ಅವರ ವಿಚಾರ, ನಮ್ಮ ತಲೆಗೆ ಕೈ ಹಾಕಿ ಹೂಂಗುಟ್ಟುವಂತೆ ಮಾಡುತ್ತದೆ.ವಿಮರ್ಶಕರಿಗೆ ಶಾಲಿನಲ್ಲಿ ಕಲ್ಲು ಹಾಕಿ ತಟ್ಟಿದ್ದಾರೆ.

ಕಾರಂತಜ್ಜನ ಕಥೆಗಳು – ಇದರಲ್ಲಿ ಕಾರಂತರ ಕುರಿತು ಅಪರೂಪದ ವಿಷಯಗಳಿವೆ.ಬಲಿ ಚಕ್ರವರ್ತಿಯ ತ್ರಿವಿಕ್ರಮ ದಲ್ಲಿ ಮಿಖಾಯಿಲ್ ತಾಲ್ ಎಂಬ ಚೆಸ್ ಆಟಗಾರ ಬರುತ್ತಾನೆ.ಅದನ್ನು ಓದುವುದೇ ಒಂದು ಪುಳಕ.

ನಮ್ಮ ತಲೆಯೂ ನಮ್ಮ ಹರೆಟೆಯೂ; ವೈಚಾರಿಕ ಲಲಿತ ಪ್ರಬಂಧ ಬರೆಯಲು ಆಸಕ್ತಿ ಇರುವವರು ಅಧ್ಯಯನ ಮಾಡುವಂತಹ ಒಂದು ಲೇಖನ.

ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಒಮ್ಮೆ ಓದಲೇಬೇಕಾದ ಲೇಖನಗಳ ಗುಚ್ಛ ಶರತರ ಈ ಕೃತಿ ಎಂದು ಬೇಷರತ್ತಾಗಿ ಹೇಳುವೆ.
*******

ಡಾ.ಅಜಿತ್ ಹರೀಶಿ

Leave a Reply

Back To Top